ಸ್ವಾಮಿ ಹರ್ಷಾನಂದರು

ಹತ್ತನೇ ತರಗತಿಯಲ್ಲಿ ರಾಜ್ಯಕ್ಕೆ 3 ನೇ ರ‌್ಯಾಂಕ್ ಮತ್ತು ಹನ್ನೆರಡನೇ ತರಗತಿಯಲ್ಲಿ ರಾಜ್ಯಕ್ಕೆ 5 ನೇ ರ‌್ಯಾಂಕ್ ಪಡೆದ ನಂತರ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗಿನಲ್ಲಿ ಚಿನ್ನದ ಪದಕದೊಂದಿಗೆ ಮೊದಲನೇ ರ‌್ಯಾಂಕ್ ಗಳಿಸಿ ಕೈತುಂಬ ಸಂಬಳ ತರುವ ಹೆಚ್.ಎ.ಎಲ್ ಕಾರ್ಖಾನೆಯನ್ನು ಸೇರಿದ ಎರಡೇ ವಾರಗಳಲ್ಲಿ ಎಲ್ಲವನ್ನೂ ತ್ಯಜಿಸಿ, ಉಟ್ಟ ಬಟ್ಟೆಯಲ್ಲಿಯೇ ರಾಮಕೃಷ್ಣ ಆಶ್ರಮ ಸೇರಿ, ಕಾವಿ ನಿಲುವಂಗಿಯನ್ನು ಧರಿಸಿ ಧೀರ ಸನ್ಯಾಸಿಗಳಾಗಿ ನಂತರ ಸ್ವಾಮಿ ಹರ್ಷಾನಂದರಾಗಿ ದೇಶಾದ್ಯಂತ ರಾಮಕೃಷ್ಣ ಆಶ್ರಮದ ವಿವಿಧ ಶಾಖೆಗಳಲ್ಲಿ ವಿವಿಧ ಜವಾಬ್ಧಾರಿಗಳನ್ನು ನಿಭಾಯಿಸಿ ಬೆಂಗಳೂರಿನ ಮುಖ್ಯಸ್ಥರಾಗಿ ನೂರಾರು ಆಧ್ಯತ್ಮಿಕ ಪುಸ್ತಕಗಳನ್ನು ಬರೆದದ್ದಲ್ಲದ್ದೇ ಲೆಕ್ಕವಿಲ್ಲದಷ್ಟು ಪ್ರವಚನಗಳ ಮೂಲಕ ಲಕ್ಷಾಂತರ ಶಿಷ್ಯಕೋಟಿಯರ ಜಿಜ್ಞಾಸೆಗಳಿಗೆ ಉತ್ತರ ನೀಡಿದ್ದ ಸ್ವಾಮೀ ಹರ್ಷಾನಂದರು ಇಂದು ಮಧ್ಯಾಹ್ನ ವಯೋಸಹಜ ಖಾಯಿಲೆಯಿಂದಾಗಿ ತಮ್ಮ 91 ವರ್ಷದಲ್ಲಿ ತೀವ್ರವಾದ ಹೃದಯ ಸ್ತಂಭನದಿಂದ ನಿಧನರಾಗಿರುವುದು ನಿಜಕ್ಕೂ ದುಃಖಕರವಾದ ವಿಷಯ. ಸ್ವಾಮೀ ಹರ್ಷಾನಂದರ ಸಾಧನೆ ಮತ್ತು ಸಮಾಜಕ್ಕೆ ಅವರ ಕೊಡುಗೆಗಳನ್ನು ಎಲ್ಲರೂ ತಿಳಿದಿದ್ದಾರೆ. ಅವರ ಪೂರ್ವಶ್ರಮ ಮತ್ತು ಅವರು ಸನ್ಯಾಸಿಗಳಾಗಲು ಪಟ್ಟ ಪರಿಶ್ರಮದ ವಿಷಯ ಹಲವರಿಗೆ ಪ್ರೇರಣಾದಾಯಕ ಎಂದೆಣಿಸಿ ಅದರ ಬಗ್ಗೆ ತಿಳಿಸುವ ಪ್ರಯತ್ನವೇ ಈ ಲೇಖನ.

ಮೂಲತಃ ತುಮಕೂರು ಜಿಲ್ಲೆಯ ಪಾವಗಡದವರಾದರೂ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವಾಸವಾಗಿದ್ದ ಶ್ರೀ ವೆಂಬಾರ್ ವೆಂಕಟ ಚಾರ್ ಅವರ ಪತ್ನಿ ಶ್ರೀಮತಿ ವೆಂಕಟಲಕ್ಷ್ಮಿ ಅವರು ತಮ್ಮ ತವರೂರಾದ ಆಂಧ್ರಾದ ಕಡಪ ಜಿಲ್ಲೆಯ ಪ್ರುದಟ್ಟೂರ್ ಎಂಬ ಊರಿನಲ್ಲಿ 25 ನೇ ಮಾರ್ಚ್ 1931ರಂದು ಗಂಡು ಮಗುವಿಗೆ ಜನ್ಮ ನೀಡುತ್ತಾರೆ.

ನೋಡಲು ಅತ್ಯಂತ ಸುಂದರವಾಗಿದ್ದ ಆ ಪುಟ್ಟ ಕಂದನಿಗೆ ರೂಪಕ್ಕೆ ಅನ್ವರ್ಥದಂತೆ ಸುಂದರ ಕೃಷ್ಣ ಎಂದು ನಾಮಕರಣ ಮಾಡಿದರೂ ಆ ಹೆಸರಿನ ಹಿಂದೆ ಒಂದು ಸ್ವಾರಸ್ಯಕರವಾದ ಚಿಂತನೆಯಿತ್ತು. ಆ ಪುಟ್ಟ ಕಂದನ ಅಜ್ಜನ ಹೆಸರು ಕೃಷ್ಣಮಾಚಾರುಲು ಎಂದಾಗಿದ್ದರೆ, ಖ್ಯಾತ ವಕೀಲರಾಗಿದ್ದ ಅವರ ಮುತ್ತಜ್ಜನ ಹೆಸರು ಸುಂದರಾ ಚಾರ್ ಎಂದಾಗಿತ್ತು. ಹಾಗಾಗಿ ಅವರಿಬ್ಬರ ಹೆಸರನ್ನೂ ಸೇರಿಸಿ ಸುಂದರ ಕೃಷ್ಣ ಎಂದು ಹೆಸರಿಸಿದ್ದರೂ ಮನೆಯಲ್ಲಿ ಎಲ್ಲರೂ ಆ ಪುಟ್ಟ ಕಂದನನ್ನು ಪ್ರೀತಿಯಿಂದ ಕಿಟ್ಟು ಎಂದೇ ಕರೆಯುತ್ತಿದ್ದರು. ಕಿಟ್ಟುವಿನೊಂದಿಗೆ ಒಡಹುಟ್ಟಿದವರು, ಮೂವರು ಸಹೋದರರು ಮತ್ತು ಮೂವರು ಸಹೋದರಿಯರಿದ್ದು ಅವರ ತಂದೆ ಅಂದಿನ ಮೈಸೂರು ರಾಜ್ಯದ ಸರ್ಕಾರಿ ಸೇವೆಯಲ್ಲಿ ಅತ್ಯಂತ ಹಿರಿಯ ಹುದ್ದೆಯಲ್ಲಿದ್ದು ನಿವೃತ್ತರಾಗಿದ್ದರು.

ಬಾಲ್ಯದಿಂದಲೂ ಕಿಟ್ಟು ಅತ್ಯಂತ ಚುರುಕಿನ ಆದರೇ ಅಷ್ಟೇ ತುಂಟ ಹುಡುಗನಾಗಿದ್ದಲ್ಲದೇ ಮಹಾನ್ ಕೋಪಿಷ್ಠ ನಾಗಿದ್ದ ಕಾರಣ ಅವರೊಂದಿಗೆ ವ್ಯವಹರಿಸಲು ಅವರ ಒಡಹುಟ್ಟಿದವರೂ ಹೆದರುತ್ತಿದ್ದರು. ಆದರೆ ಓದಿನಲ್ಲಿ ಮಾತ್ರಾ ಬಹಳ ಅದ್ಭುತ ವಿದ್ಯಾರ್ಥಿಯಾಗಿದ್ದರು. ಪ್ರತೀ ತರಗತಿಯಲ್ಲಿಯೂ ಪ್ರಥಮ ರ‌್ಯಾಂಕ್ ಕಿಟ್ಟುವಿಗೇ ಕಟ್ಟಿಟ್ಟ ಬುತ್ತಿಯಾಗಿರುತ್ತಿತ್ತು. ಹಾಗಾಗಿಯೇ, ಅವರು ತಮ್ಮ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಡೀ ಮೈಸೂರು ರಾಜ್ಯಕ್ಕೆ 3 ನೇ ರ‌್ಯಾಂಕ್ ಪಡೆಯುತ್ತಾರೆ.

ಕೇವಲ ಓದಿನಲ್ಲಷ್ಟೇ ಅಲ್ಲದೇ, ಅವರು ಬಾಲ್ಯದಲ್ಲಿ ಕೆಲಕಾಲ ಕರ್ನಾಟಕ ಸಂಗೀತಾಭ್ಯಾಸವನ್ನು ಮಾಡುವ ಮೂಲಕ ಉತ್ತಮ ಗಾಯಕರಾಗಿದ್ದಲ್ಲದೇ, ಅವರು ಉತ್ತಮ ಚಿತ್ರ ಕಲಾವಿದರೂ ಆಗಿದ್ದರು. ಅತ್ಯುತ್ತಮ ಸ್ಮರಣ ಶಕ್ತಿಯನ್ನು ಹೊಂದಿದ್ದಲ್ಲದೇ, ಛಾಯಾಗ್ರಹಣದಲ್ಲಿ ಆಸಕ್ತಿಯನ್ನು ಹೊಂದಿದರು. ಇತರೇ ಸಹಪಾಠಿಗಳಂತೆ ಅವರೆಂದೂ ಪುಸ್ತಕದ ಹುಳವಾಗಿರದೇ, ಕೇವಲ ತರಗತಿಯ ಸಮಯದಲ್ಲಿ ಏಕಾಗ್ರತೆಯಿಂದ ಪಾಠ ಪ್ರವಚನಗಳನ್ನು ಕೇಳಿಸಿಕೊಂಡು, ಕೇವಲ ನೆನಪಿನ ಶಕ್ತಿಯಿಂದಲೇ ಎಲ್ಲಾ ಪರೀಕ್ಷೆಗಳಲ್ಲಿ ಚೆನ್ನಾಗಿ ಉತ್ತರಿಸಿವುದನ್ನು ರಡಿಸಿಕೊಂಡಿದ್ದರು. ಅವರ ಕೈಬರಹವಂತೂ ಮುತ್ತು ಪೋಣಿಸಿದ ರೀತಿಯಲ್ಲಿ ಇರುತ್ತಿತ್ತು ಎಂದು ನೋಡಿದವರು ಹೇಳುತ್ತಾರೆ. ಕೇವಲ ಪಾಠವಲ್ಲದೇ ಆಟದಲ್ಲಿಯೂ ಮುಂದಿದ್ದರು. ಅದರಲ್ಲೂ ಕ್ರಿಕೆಟ್ ಎಂದರೆ ಅವರಿಗೆ ಪಂಚಪ್ರಾಣ. ತಮ್ಮ ಶಾಲಾ ಕಾಲೇಜು ದಿನಗಳಲ್ಲಿ ಉತ್ತಮ ಕ್ರಿಕೆಟಿಗರಾಗಿ ಆಲ್ರೌಂಡರ್ ಪ್ರದರ್ಶನ ನೀಡಿದ್ದಲ್ಲದೇ ತಮ್ಮ ತಂಡದ ನಾಯಕರಾಗಿದ್ದರು. ಹೀಗೆ ವಿದ್ಯಾರ್ಥಿ ದಿನಗಳಿಂದಳು ಅವರು ಉತ್ತಮ ನಾಯಕ ಮತ್ತು ಸಂಘಟಕರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು.

ಅವರು ಪಿಯೂಸಿ ಓದುತ್ತಿರುವಾಗ ಅವರ ಬದುಕಿನಲ್ಲಿ ಆದ ಒಂದು ರೋಚಕ ಘಟನೆಯನ್ನು ನೆನಪಿಸಿಕೊಳ್ಳಲೇ ಬೇಕು. ತಮ್ಮ ಕಾಲೇಜು ದಿನಗಳಲ್ಲಿ ಅವರ ಕೆಲವು ಸ್ನೇಹಿತರ ನೆರವಿನಿಂದಾಗಿ ಬೆಂಗಳೂರಿನ ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮದ ಸಂಪರ್ಕಕ್ಕೆ ಬಂದ್ದಿದ್ದಲ್ಲದೇ, ಆಗ್ಗಿಂದ್ದಾಗ್ಗೆ ಅವರ ಸ್ನೇಹಿತರ ಜೊತೆಯಲ್ಲಿ ಅಲ್ಲಿನ ಸಂಜೆಯ ಪ್ರಾರ್ಥನೆಗಳಿಗೆ ಹಾಜರಾಗುವ ಮೂಲಕ ಧಾರ್ಮಿಕ ವಿಷಯಗಳನ್ನು ಕಲಿಯುವುದರಲ್ಲಿ ಆಸಕ್ತಿಯನ್ನು ತೋರಿಸುತ್ತಿದ್ದರು. ಅವರ ಬುದ್ಧಿವಂತಿಕೆ ಮತ್ತು ಪ್ರಾಮಾಣಿಕತೆ ಮೂಲಕ ಆಶ್ರಮದ ಮುಖ್ಯಸ್ಥರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಅಲ್ಲಿನ ಸ್ವಾಮೀಜಿಗಳು ಹಿಂದೂ ತತ್ತ್ವಶಾಸ್ತ್ರ, ಶ್ರೀ ರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ಕುರಿತಾಗಿ ನೀಡುತ್ತಿದ್ದ ಪ್ರವಚನಗಳಿಗೆ ಕಿಟ್ಟು ಮನಸೋತಿದ್ದಲ್ಲದೇ, ಕ್ರಮೇಣ ಕಿಟ್ಟು ಸ್ವಾಮೀಜಿಗಳ ಪ್ರಭಾವಕ್ಕೆ ಒಳಗಾದಿದ್ದಲ್ಲದೇ, ರಾಮಕೃಷ್ಣ ಮಠದ ಕಾರ್ಯಾಚರಣೆಯ ಭಾಗವಾಗಬೇಕೆಂದು ನಿರ್ಧರಿಸಿದರು. ಈ ಲೌಕಿಕ ಜೀವನದ ಬದಲು ರಾಮಕೃಷ್ಣ ಮಠದಕ್ಕೆ ಸೇರಿ ಆಧ್ಯಾತ್ಮಿಕ ಚಿಂತನೆಗಳೊಂದಿಗೆ ತಮ್ಮ ಮುಂದಿನ ಜೀವನವನ್ನು ಕಳೆಯ ಬೇಕೆಂದು ನಿರ್ಧರಿಸಿ, ತಂದೆತಾಯಿ ಮತ್ತು ಶಿಕ್ಷಣವನ್ನೆಲ್ಲವನ್ನೂ ತ್ಯಜಿಸಿ, ರಾಮಕೃಷ್ಣ ಮಠ ಸೇರುವ ಉದ್ದೇಶದಿಂದ ಕಲ್ಕತ್ತಾದ ರಾಮಕೃಷ್ಣ ಮಿಷನ್‌ನ ಪ್ರಧಾನ ಕಚೇರಿಯಾದ ಬೇಲೂರ್ ಮಠಕ್ಕೆ ಹೋಗಬೇಕೆಂದು ಒಂದು ದಿನ ನಿರ್ಧರಿಸಿದರು.

1949 ರಲ್ಲಿ ತಮ್ಮ ಪಿಯೂಸಿ ಪರೀಕ್ಷೆಗೆ ಕೆಲ ತಿಂಗಳುಗಳ ಮುನ್ನಾ, ಅದೊಂದು ದಿನ ತನ್ನ ಹೆತ್ತವರಿಗೆ, ಆಪ್ತ ಸ್ನೇಹಿತರು ಮತ್ತು ನೆರೆಹೊರೆಯವರಿಗೂ ತಿಳಿಸದೆ ರೈಲಿನಲ್ಲಿ ಕಲ್ಕತ್ತಾಗೆ ಹೊರಟೇ ಬಿಟ್ಟರು. ಹೊರಡುವ ಮುನ್ನ ತಮ್ಮ ಉದ್ದೇಶದ ಕುರಿತಂತೆ ಒಂದು ಕಾಗದವನ್ನು ತಮ್ಮ ತಂದೆಯವರಿಗೆ ಬರೆದಿಟ್ಟು ಹೋಗಿದ್ದರು. ಅತ್ಯಂತ ಬುದ್ಧಿವಂತ ಮಗ, ಚೆನ್ನಾಗಿ ಓದಿ ದೊಡ್ಡ ಮನುಷ್ಯನಾಗುತ್ತಾನೆ ಎಂದು ಕನಸು ಕಂಡಿದ್ದ ಅವರ ಹೆತ್ತವರಿಗೆ ಅದರಲ್ಲೂ ವಿಶೇಷವಾಗಿ ಅವರ ತಂದೆಗೆ ದೊಡ್ಡ ಆಘಾತವಾಗಿತ್ತು. ಕಲ್ಕತ್ತಾದ ಬೇಲೂರು ಮಠದಲ್ಲಿ ಹಿರಿಯ ಸ್ವಾಮೀಜಿಯಾಗಿದ್ದವರು ಕಿಟ್ಟುವಿನ ಆಶಯಕ್ಕೆ ತಣ್ಣೀರೆರಚಿ, ಮೊದಲು ನಿನ್ನ ಊರಿಗೆ ಹಿಂದಿರುಗಿ ವಿದ್ಯಾಭ್ಯಾಸವನ್ನು ಮುಗಿಸಿದ ನಂತರವೂ ಸನ್ಯಾಸತ್ವ ಸ್ವೀಕರಿಸುವ ಬಯಕೆಯಿದ್ದರೆ ನೋಡೋಣ ಎಂದಿದ್ದರು. ಇದಕ್ಕೆ ಮುಂಚೆ ಕಿಟ್ಟುವಿನ ಸ್ನೇಹಿತನೊಬ್ಬ ಇದೇ ರೀತಿ ರಾಮಕೃಷ್ಣ ಮಠಕ್ಕೆ ಸೇರಿ ಕೆಲವು ದಿನಗಳ ನಂತರ . ಸನ್ಯಾಸಿಗಳ ಜೀವನಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಕಾರಣ ಪುನಃ ಮನೆಗೆ ಹಿಂದಿರುಗಿದ್ದ ಪ್ರಸಂಗ ನೆನಪಾಗಿ ಸ್ವಾಮಿಗಳ ಸಲಹೆಯ ಮೇರೆಗೆ ಕಿಟ್ಟು ಬೆಂಗಳೂರಿಗೆ ಮರಳಿದ್ದರು. ಮಗ ಮನೆಗೆ ಹಿಂದಿರುಗಿದ್ದರಿಂದ ಸಂತಸಗೊಂಡ ಪೋಷಕರು ಆರಂಭದಲ್ಲಿ ಸ್ವಲ್ಪ ಗದುರಿದರಾದರೂ ನಂತರ ಶಿಕ್ಷಣವನ್ನು ಪೂರ್ಣಗೊಳಿಸಲು ಸಲಹೆ ನೀಡಿದರು.

ತಮ್ಮ ತಂದೆಯವರ ಆಶಯದಂತೆಯೇ ಓದು ಮುಂದುವರೆಸಿದ ಕಿಟ್ಟು, 1949 ರಲ್ಲಿ ರಾಜ್ಯಕ್ಕೇ 5 ನೇ ರ‌್ಯಾಂಕ್ ಮೂಲಕ ಯಶಸ್ವಿಯಾಗಿ ಪಿಯೂಸಿ ಮುಗಿಸಿದ ನಂತರ ಮೆರಿಟ್ ಕೋಟಾದಲ್ಲಿ ಅಂದಿನ ಪ್ರತಿಷ್ಠಿತ ಇಂಜಿನೀಯರಿಂಗ್ ಕಾಲೇಜಿನಲ್ಲಿ ಒಂದಾಗಿದ್ದ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಓದಲು ಸೇರಿಕೊಳ್ಳುತ್ತಾರೆ. ಆದರೆ ಮನೆಯಲ್ಲಿ ಅಧ್ಯಯನಕ್ಕಾಗಿ ಹೆಚ್ಚು ಸಮಯ ವ್ಯಯಿಸುತ್ತಿರಲಿಲ್ಲವಾದ್ದರಿಂದ ಕಿಟ್ಟು ಇಂಜಿನೀಯರಿಂಗ್ ಪದವಿಯನ್ನು ಪೂರೈಸುವುದು ಕಷ್ಟ ಎಂದೇ ಅವರ ತಂದೆ ಚಿಂತಿತರಾಗಿದ್ದರು. ಕಿಟ್ಟು ಪ್ರತಿದಿನ ಬೆಳಿಗ್ಗೆ 4 ಗಂಟೆಗೆಲ್ಲಾ ಎದ್ದು ಒಂದು ಗಂಟೆಗಳ ಕಾಲ ಧ್ಯಾನ ಮಾಡುತ್ತಿದ್ದ ಕಾರಣ ಅವರ ಏಕಾಗ್ರತೆ ಮತ್ತು ಸ್ಮರಣೆಯನ್ನು ಸುಧಾರಿಸುವಂತೆ ಮಾಡಿತ್ತು. ಕಾಲೇಜಿನಲ್ಲಿ ಉಪನ್ಯಾಸಗಳ ಸಮಯದಲ್ಲಿ ತದೇಕ ಚಿತ್ತದಿಂದ ಪಾಠದ ಕಡೆ ಗಮನ ಹರಿಸುತ್ತಿದ್ದ ಕಾರಣ,ಕೇವಲ ಅಧ್ಯಯನಗಳಿಲ್ಲದೇ ಎಲ್ಲಾ ವರ್ಷದ ಪರೀಕ್ಷೆಗಳಲ್ಲಿಯೂ ಉನ್ನತ ಪ್ರಥಮ ದರ್ಜೆಯಲ್ಲಿಯೇ ಮುಗಿಸಿ, 1953 ರಲ್ಲಿ ಮೊದಲನೇ ರ‌್ಯಾಂಕ್ ನೊಂದಿಗೆ ಚಿನ್ನದ ಪದಕ ಪಡೆದು ತಮ್ಮ ಪದವಿಯನ್ನು ಮುಗಿಸಲು ಸಹಕಾರಿ ಆಯಿತು.

ತನ್ನ ಬಿಇ ಪದವಿಯನ್ನು ಮುಗಿಸಿದ ಕೂಡಲೇ, ಕೆಲವು ತಿಂಗಳುಗಳ ನಂತರ ತೀವ್ರತರನಾದ ಹೊಟ್ಟೆಯ ಹುಣ್ಣಿಗೆ ತುತ್ತಾಗಿದ್ದಲ್ಲದೇ, ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೂ ಭರವಸೆಯನ್ನು ಕಳೆದುಕೊಂಡಿದ್ದರು. ನಂತರದ ದಿನಗಳಲ್ಲಿ ಚಿಕಿತ್ಸೆಗಳು ಫಲಕಾರಿಯಾಗಿ ನಿಧಾನವಾಗಿ ಚೇತರಿಸಿಕೊಂಡ ನಂತರ ಕಿಟ್ಟು ಎಚ್‌ಎಎಲ್‌ನಲ್ಲಿ ತರಬೇತಿಗಾಗಿ ಸೇರಿಕೊಂಡಿದ್ದರು. ಮೊದಲ ಆರು ತಿಂಗಳ ಕಾಲದ ತರಭೇತಿಯ ನಂತರ ಕೆಲಸ ಖಾಯಂ ಅಗುತ್ತಿತ್ತು.

ಮಗ ಬಿಇ ಪದವಿ ಪಡೆದದ್ದಲ್ಲದೇ ಅನಾರೋಗ್ಯದಿಂದಲೂ ಚೇತರಿಸಿಕೊಂಡು ನೌಕರಿಗೆ ಸೇರಿಕೊಂಡಿದ್ದರಿಂದ ಕಿಟ್ಟುವಿನ ತಂದೆಗೆ ಬಹಳ ಸಂತೋಷವಾಗಿತ್ತು. ತಾನೊಂದು ಬಗೆದರೆ ದೈವವೊಂದು ಬಗೆದೀತು ಎಂಬಂತೆ, ಗುಣಮುಖರಾದ ಕೂಡಲೇ ಕಿಟ್ಟು ಮತ್ತೆ ರಾಮಕೃಷ್ಣ ಮಠವನ್ನು ಸೇರಲು ನಿರ್ಧರಿಸಿ, ಅಂದಿನ ಉಸ್ತುವಾರಿ ಸ್ವಾಮಿಗಳಗಿದ್ದ ಶ್ರೀ ತ್ಯಾಗೀಶಾನಂದ ಅವರನ್ನು ಸಂಪರ್ಕಿಸುತ್ತಾರೆ. ಕಿಟ್ಟುವಿನ ಅರೋಗ್ಯದ ಬಗ್ಗೆ ತಿಳಿಸಿದ್ದ ಮಹನೀಯರು. ಮಠಕ್ಕೆ ಸೇರುವ ಮೊದಲು ವೈದ್ಯಕೀಯ ಧೃಢೀಕರಣ ಪತ್ರವನ್ನು ತರಲು ಹೇಳಿದ ಕಾರಣ, ಕಿಟ್ಟು ವೈದ್ಯಕೀಯ ಪರೀಕ್ಷೆಗೆ ಒಳಪಟ್ಟು ಸಂಪೂರ್ಣವಾಗಿ ಗುಣಮುಖರಾಗಿರುವ ಪ್ರಮಾಣ ಪತ್ರವನ್ನು ಪಡೆದು ಅದನ್ನು ಸ್ವಾಮಿಗಳ ಕೈಗೆ ತಲುಪಿಸುವುದರಲ್ಲಿ ಯಶಸ್ವಿಯಾದರು. ಸ್ವಾಮಿಯವರು ಕಿಟ್ಟುವಿನ ವೈದ್ಯಕೀಯ ವರದಿಯನ್ನು ಆರ್.ಕೆ. ಮಠದ ಪ್ರಧಾನ ಕಚೇರಿಗೆ ಕಳುಹಿಸಿದ್ದನ್ನು ಕೇಳಿ ಕಿಟ್ಟುವಿಗೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಾಗಿತ್ತು. ಅದಾಗಿ ಕೆಲವು ದಿನಗಳಲ್ಲಿಯೇ ಮನೆಯವರಿಗೆ ಯಾರಿಗೂ ಅನುಮಾನ ಬಾರದಂತೆ ಕಿಟ್ಟು ಎಂದಿನಂತೆಯೇ ಎಚ್‌ಎಎಲ್‌ಗೆ ಕಾರ್ಖಾನೆಗೆ ಹೋಗುವುದಾಗಿ ಮನೆಯಿಂದ ಹೊರಟು ಸಂಜೆ ಕಾರ್ಖಾನೆಯಿಂದ ಮನೆಗೆ ಹಿಂದಿರುಗುವ ಬದಲು, ಕಿಟ್ಟು ನೇರವಾಗಿ ಬುಲ್ ಟೆಂಪಲ್ ರಸ್ತೆಯಲ್ಲಿರುವ ಆಶ್ರಮಕ್ಕೆ ಹೋಗಿದ್ದಲ್ಲದೇ, ಲೌಕಿಕ ಜೀವನವನ್ನು ತ್ಯಜಿಸಿ ಸನ್ಯಾಸತ್ವವನ್ನು ಸ್ವೀಕರಿಸುವ ನಿರ್ಧಾರದ ಕುರಿತಂತೆ ಪತ್ರವೊಂದನ್ನು ತಂದೆಗೆ ಕಳುಹಿಸುತ್ತಾರೆ.

ಗಂಭೀರ ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ಮಗ ರಾಮಕೃಷ್ಣ ಮಠಕ್ಕೆ ಸೇರುವ ಆಲೋಚನೆಯನ್ನು ಕೈಬಿಟ್ಟನೆಂದೇ ತಿಳಿದಿದ್ದ ಅವರ ತಂದೆಯವರಿಗೆ ಮಗನ ಈ ನಿರ್ಧಾರದಿಂದ ಅವರ ಆಸೆಗಳೆಲ್ಲಾ ಚೂರು ಚೂರಾಗಿದ್ದು ಬೇಸರ ತರಿಸಿತ್ತು. ಆದರೆ ಇದರ ಪರಿವೆಯೇ ಇಲ್ಲದೇ ಕಿಟ್ಟು ನಿಧಾನವಾಗಿ ಮಠದ ವಾತಾವರಣಕ್ಕೆ ಮತ್ತು ರೀತಿ ರಿವಾಜುಗಳಿಗೆ ಹೊಂದಿಕೊಳ್ಳತೊಡಗಿದನು, ಈ ನಡುವೆ ಸ್ವಾಮಿ ಜೋಗೇಶ್ವರಾನಂದರು ಕಿಟ್ಟುವಿನನ್ನು ಮಠಕ್ಕೆ ಸೇರಿಸಿಕೊಳ್ಳುವ ಮೊದಲು ಅವರ ತಂದೆಯಿಂದ ಅನುಮತಿ ಪಡೆಯುವ ಸಲುವಾಗಿ ಉತ್ತರಪ್ರದೇಶದ ಅಲ್ಮೋರ ಪದೇಶದ ಮಾಯವತಿಯಲ್ಲಿನ ಹಿರಿಯ ಸನ್ಯಾಸಿಗಳನ್ನು ಕಳುಹಿಸಿ, ಕಿಟ್ಟುವಿನ ತಂದೆಯೊಂದಿಗೆ ವಿವೇಚನೆಯಿಂದ ಚರ್ಚಿಸಿಸಲು ಕಳುಹಿಸುತ್ತಾರೆ. ಮಗನ ಧೃಡ ನಿರ್ಧಾರದಿಂದ ಬೇಸರಗೊಂಡಿದ್ದ ಅವರ ತಂದೆ ಹೇಗಾದರೂ ಮಾಡಿ ತನ್ನ ಮಗನ ನಿರ್ಧಾರವನ್ನು ಬದಲಾಯಿಸಲು ಮನವೊಲಿಸುವಂತೆ ವಿನಂತಿಸಿಕೊಂಡರು. ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಎಂದು ವಾಗ್ಧಾನ ಮಾಡಿ ಹಿಂದಿರುಗಿದ ಸ್ವಾಮಿಗಳು ಕಿಟ್ಟುವಿನ ಬಳಿಯಲ್ಲಿ ತಂದೆಯವರ ಮನವಿಯನ್ನು ಹೇಳಿದರಾದರೂ, ಅದರಿಂದ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಆಗದ ಕಾರಣ, ಸುಂದರ ಕೃಷ್ಣ ಅವರನ್ನು ಅಂತಿಮವಾಗಿ 1 ನೇ ಮಾರ್ಚ್ 1954 ರಂದು ರಾಮಕೃಷ್ಣ ಮಠಕ್ಕೆ ಅಧಿಕೃತವಾಗಿ ಸೇರಿಸಿಕೊಳ್ಳಗಾಗುತ್ತದೆ.

ಮಗನ ನಿರ್ಧಾರದಿಂದ ಆರಂಭದಲ್ಲಿ ವಿಚಲಿತರಾದ ತಂದೆ ಕ್ರಮೇಣವಾಗಿ ಪರಿಸ್ಥಿತಿಗೆ ಒಗ್ಗಿಕೊಂಡಿದ್ದಲ್ಲದೇ, ತಮ್ಮ ವೃದ್ಧಾಪ್ಯದಲ್ಲಿ ನೋಡಿಕೊಳ್ಳಲು ಉಳಿದ ಮೂವರು ಗಂಡು ಮಕ್ಕಳು ಇದ್ದ ಕಾರಣ ತಮ್ಮ ಹಿರಿಯ ಮಗನ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದಿರುವ ಉತ್ತಮ‌ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.

ಬೆಂಗಳೂರಿನ ರಾಮಕೃಷ್ಣ ಆಶ್ರಮದಲ್ಲಿ ಸುಮಾರು 4 ವರ್ಷಗಳ ಕಾಲ ಕಳೆದ ನಂತರ ಸುಂದರ ಕೃಷ್ಣ ಅವರಿಗೆ, ಬ್ರಹ್ಮಚಾರಿ ಸೂರ್ಯ ಚೈತನ್ಯ ಎಂದು ಮರುನಾಮಕರಣ ಮಾಡಲಾಯಿತು. ಆಶ್ರಮದ ಅಧ್ಯಕ್ಷರಾಗಿದ್ದ ತ್ಯಾಗೀಶಾನಂದರಿಗೂ ಮತ್ತು ಅವರ ಉತ್ತರಾಧಿಕಾರಿಗಳಾಗಿದ್ದ ಸ್ವಾಮಿ ಯತೀಶ್ವರಾನಂದರಿಗೂ ಅವರು ಸೂರ್ಯ ಚೈತ್ಯನರು ಆಶ್ರಮದ ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ ತೋರಿದ್ದರಿಂದ ಅವರ ಬುದ್ಧಿಶಕ್ತಿ ಮತ್ತು ಕಠಿಣ ಪರಿಶ್ರಮದಿಂದ ತುಂಬಾ ಪ್ರಭಾವಿತರಾಗಿ ಸೂರ್ಯ ಚೈತನ್ಯ ಅವರನ್ನು ಮಂಗಳೂರಿನ ಆಶ್ರಮಕ್ಕೆ ವರ್ಗಾವಣೆ ಮಾಡಿದರು. ಅಲ್ಲಿ ಅವರು 6 ವರ್ಷಗಳ ಕಾಲ (1954-1960) ಇದ್ದರು. ಬ್ರಹ್ಮಚಾರಿಯಾಗಿ ಸುಮಾರು 4 ವರ್ಷಗಳ ನಂತರ, ಮಠದ ಆದೇಶದಂತೆ ಅವರಿಗೆ ಸ್ವಾಮಿ ಹರ್ಷಾನಂದ ಎಂದು ಹೆಸರಿಸಲಾಯಿತು.

ಮಂಗಳೂರಿನಲ್ಲಿದ್ದಾಗ ಮತ್ತೆ ಅವರು ಗಂಭೀರವಾದ ಹೊಟ್ಟೆಯ ಹುಣ್ಣಿನಿಂದ ಖಾಯಿಲೆಗೆ ತುತ್ತಾದರು. ಈ ಬಾರಿ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಲ್ಲದೇ ಅವರ ಹೊಟ್ಟೆಯ ಅರ್ಧ ಭಾಗವನ್ನು ತೆಗೆದುಹಾಕಲಾಯಿತು. ಅವರು ತಿಂದ ಆಹಾರ ಸುಲಭವಾಗಿ ಜೀರ್ಣಿಸಲು ಸಹಕಾರಿಯಾಗುವ ಸಲುವಾಗಿ ಪ್ರತೀ ಬಾರಿಯೂ ಅವರಿಗೆ ಕಡಿಮೆ ಆಹಾರವನ್ನು ಸೇವಿಸಲು ವೈದ್ಯರು ಸಲಹೆ ನೀಡಿದ್ದನ್ನು ಗಂಭೀರವಾಗಿ ಸ್ವೀಕರಿಸಿ ಅದನ್ನು ಜೀವನ ಪರ್ಯಂತ ಅನುಸರಿಸಿದರು.

ಆನಾರೋಗ್ಯದಿಂದ ಚೇತರಿಸಿಕೊಂಡ ನಂತರ, ಅವರನ್ನು ಮೈಸೂರಿಗೆ ವರ್ಗಾಯಿಸಲಾಗಿ ಅಲ್ಲಿ 1969 ರವರೆಗೆ ಇದ್ದರು. ನಂತರ ಅವರು ಚಂಡಮಾರುತದ ಸಂತ್ರಸ್ತರಿಗೆ 3 ತಿಂಗಳ ಕಾಲ ಪರಿಹಾರ ಕಾರ್ಯಗಳನ್ನು ಆಯೋಜಿಸಲು ಆಂಧ್ರ ಪದೇಶದ ಕರಾವಳಿ ಪ್ರದೇಶಕ್ಕೆ ಕಳುಹಿಸಿದರು. ಅದರ ನಂತರ, ಅವರನ್ನು ಕಲ್ಕತ್ತಾದ ಪ್ರಧಾನ ಕಚೇರಿಯಾದ ಬೇಲೂರು ಮಠಕ್ಕೆ ವರ್ಗಾಯಿಸಲಾಗಿ ಅವರು ಅಲ್ಲಿ 3 ವರ್ಷಗಳ ಕಾಲ ಇದ್ದರು. . 1973ರಲ್ಲಿ ಪುನಃ ಅವರನ್ನು ಮೈಸೂರಿಗೆ ವರ್ಗಾಯಿಸಲಾಯಿತು. ಇದೇ ಸಮಯದಲ್ಲಿ ಮೈಸೂರಿನಲ್ಲಿ ಎರಡು ಪ್ರಮುಖ ಕಟ್ಟಡಗಳ ನಿರ್ಮಾಣವನ್ನು RIMSE (Ramakrishna Institute of Moral & Spiritual Education) ಮತ್ತು ಇನ್ನೊಂದನ್ನು BEd ಕಾಲೇಜ್ ಪ್ರಾರಂಭಿಸಿದರು. ಈ ಕೆಲಸಕ್ಕಾಗಿ ಅವರು ಖುದ್ದಾಗಿ ಎಂಜಿನಿಯರ್ ಪಾತ್ರ ವಹಿಸಿದ್ದಲ್ಲದೇ ಯಾವುದೇ ಪ್ರಮುಖ ಗುತ್ತಿಗೆದಾರರಿಲ್ಲದೆ ಹೆಚ್ಚಾಗಿ ಆಶ್ರಮದ ಕಾರ್ಮಿಕರನ್ನೇ ಬಳಸಿಕೊಂಡು ಇಬ್ಬರು ಮೇಲ್ವಿಚಾರಕರ ಸಹಾಯದಿಂದ ದಾಖಲೆಯ ಸಮಯದಲ್ಲಿ ಎರಡೂ ಕಟ್ಟಡಗಳನ್ನು ಕಟ್ಟಿ ಮುಗಿಸಿದ್ದರು. ಅವರ ಈ ಕೆಲಸ ಮಠದ ಉನ್ನತ ಸ್ವಾಮಿಗಿಯರಷ್ಟೇ ಅಲ್ಲದೇ, ಅನೇಕ ಎಂಜಿನಿಯರ್‌ಗಳೂ ಸಹಾ ಅವರ ಈ ಕೆಲಸವನ್ನು ಶ್ಲಾಘಿಸಿದ್ದರು. ಅಂದು ನಿರ್ಮಾಣಗೊಂಡ ಕಟ್ಟಡ ಇಂದಿಗೂ ಸಹ ಬಹಳ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕೆಲಸದಿಂದ ಪ್ರಭಾವಿತರಾದ ಹೈದರಾಬಾದಿನ ಮಠದ ಅಧ್ಯಕ್ಷರಾಗಿದ್ದ ಸ್ವಾಮಿ ರಂಗನಾಥಾನಂದರು ಅವರನ್ನು ಹೈದರಾಬಾದಿಗೆ ಕರೆದೊಯ್ದಿದ್ದಲ್ಲದೇ, 1982-83ರ ಅವಧಿಯಲ್ಲಿ ಹೈದರಾಬಾದಿನ ಮಠದಲ್ಲಿನ ಹೊಸ ಕಟ್ಟಡಗಳ ನಿರ್ಮಾಣದ ಸಮಯದಲ್ಲಿ ತಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡುವ ಮೂಲಕ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಕಟ್ಟಡಗಳು ಪೂರ್ಣಗೊಳಿಸುವ ಮೂಲಕ ಇಂದಿಗೂ ಹೈದರಾಬಾದ್ ನಗರದ ಒಂದು ಹೆಗ್ಗುರುತಾಗುವಂತೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮೈಸೂರಿನಿಂದ ಹರ್ಷಾನಂದನನ್ನು ಡೆಹ್ರಾಡೂನ್‌ನ ಕಿಶನ್ ಪುರಕ್ಕೆ ಒಂದು ವರ್ಷಗಳ ಕಾಲ ವರ್ಗಾಯಿಸಿದ ನಂತರ ಅವರನ್ನು ಅಲಹಾಬಾದ್ ಮಠದ ಮುಖ್ಯಸ್ಥರಾಗಿ ನೇಮಿಸಲಾಯಿತು. ಅಲ್ಲಿ 4 ವರ್ಷಗಳ ಕಾಲ ಅಲ್ಲಿಯೇ ಇದ್ದಂತಹ ಸಮಯದಲ್ಲಿ ಜರುಗಿದ ಮಹಾ ಕುಂಭ ಮೇಳಕ್ಕಾಗಿ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ತಾತ್ಕಾಲಿಕ ತಂಗುದಾಣಗಳು ಮತ್ತು ಡೇರೆಗಳ ನಿರ್ಮಾಣವನ್ನು ಮಾಡಿದ್ದನ್ನು ಗಮನಿಸಿ ಅಂದಿನ ಕೇಂದ್ರ ಸರ್ಕಾರದ ಪ್ರಶಂಸೆಗೂ ಪಾತ್ರರಾಗಿದ್ದರು.

ಅಂತಿಮವಾಗಿ 1989 ರಲ್ಲಿ ಅವರ ತವರೂರಾದ ಬೆಂಗಳೂರಿನ ಆಶ್ರಮ ಮುಖ್ಯಸ್ಥರನ್ನಾಗಿ ವರ್ಗಾಯಿಸಲಾಯಿತು. ಕನ್ನಡ, ತೆಲುಗು, ಹಿಂದಿ, ಬೆಂಗಾಲಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ನಿರರ್ಗಳವಾಗಿ ಅದ್ಭುತವಾದ ಭಾಷಣಕಾರರಾಗಿದ್ದರು. ಪ್ರತೀ ವಾರಾಂತ್ಯದಲ್ಲಿ ಆಶ್ರಮದಲ್ಲಿ ನಡೆಯುತ್ತಿದ್ದ ಅವರ ಉಪನ್ಯಾಸಗಳು ಅತ್ಯಂತ ಪ್ರಖ್ಯಾತಿಯನ್ನು ಪಡೆಯುವ ಮೂಲಕ ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿದ್ದರು. ಸರ್ಕಾರ ಮತ್ತು ನ್ಯಾಯಾಂಗದಲ್ಲಿ ಉನ್ನತ ಹುದ್ದೆಯಲ್ಲಿರುವ ಅನೇಕ ಅಧಿಕಾರಿಗಳು, ಶೈಕ್ಷಣಿಕ ಕ್ಷೇತ್ರದ ದಿಗ್ಗಜರು, ಸಮಾಜದ ಧುರೀಣರು, ಜನಸಾಮಾನ್ಯರುಗಳು ಧಾರ್ಮಿಕ ಕ್ಷೇತ್ರಗಳ ಕುರಿತಾದ ಸಲಹೆಗಾಗಿ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳು ಮತ್ತು ಜಿಜ್ಞಾಸೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಿದ್ದರು. ಬೆಂಗಳೂರು ಮತ್ತು ಕರ್ನಾಟಕ ರಾಜ್ಯಾದ್ಯಂತ ಅನೇಕ ಸ್ಥಳಗಳಲ್ಲಿ ಉಪನ್ಯಾಸ ನೀಡಲು ಅವರನ್ನು ಆಹ್ವಾನಿಸಲಾಗುತ್ತಿತ್ತು. ಸಿಂಗಾಪುರ ಮತ್ತು ಮಲೇಷಿಯಾಕ್ಕೂ ಭೇಟಿ ನೀಡಿ ತಮ್ಮ ಉಪನ್ಯಾಸಗಳನ್ನು ನೀಡಿದ್ದರು. ಅದೊಮ್ಮೆ ಬೇಲೂರ್ ಮಠದ ಅಧ್ಯಕ್ಷರು ಹರ್ಷಾನಂದ ಅವರನ್ನು ಅಮೇರಿಕಾದಲ್ಲಿನ ಒಂದು ಪ್ರಮುಖ ಕೇಂದ್ರವನ್ನು ವಹಿಸಿಕೊಳ್ಳಲು ಕೇಳಿಕೊಂಡಾಗ ಅನಾರೋಗ್ಯದ ಕಾರಣ ಅದನ್ನು ಒಪ್ಪಿಕೊಳ್ಳದೇ ಬೆಂಗಳೂರಿನ ಆಶ್ರಮದ ಮುಖ್ಯಸ್ಥರಾಗಿಯೇ ಮುಂದುವರೆದರು. ರಾಮಕೃಷ್ಣ ಮಠದಲ್ಲಿ ಸ್ವಾಮಿ ರಂಗನಾಥನಂದರ ನಂತರ ಅತ್ಯುತ್ತಮ ಭಾಷಣಕಾರರೆಂದೇ ಹರ್ಷಾನಂದರು ಪ್ರಸಿದ್ಧರಾಗಿದ್ದರು.

ಅವರು ಹಿಂದೂ ಧರ್ಮ ಮತ್ತು ತತ್ತ್ವಶಾಸ್ತ್ರದ ಬಗ್ಗೆ ಸುಮಾರು 200 ಕ್ಕೂ ಹೆಚ್ಚು ಪುಸ್ತಕಗಳನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಬರೆದಿದ್ದಾರೆ. ಅವರು ಹಿಂದೂ ಧರ್ಮದ ಬಗ್ಗೆ ವಿಶ್ವಕೋಶವನ್ನು ಬರೆದಿದ್ದಾರೆ. ಬೆಂಗಳೂರಿನ ರಾಮಕೃಷ್ಣ ಆಶ್ರಮದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಹಿಂದುಳಿದ ಹಳ್ಳಿಯಾದ ಶಿವನಹಳ್ಳಿಯನ್ನು ದತ್ತು ತೆಗೆದುಕೊಂಡು ಆ ಹಳ್ಳಿಯ ಸರ್ವಾಂಗೀಣ ಅಭಿವೃದ್ಧಿಗಾಗಿ ಬಹಳಷ್ಟು ಶ್ರಮಿಸಿದರು. ಮಠದ ವತಿಯಿಂದ ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯವನ್ನು ಅಭಿವೃದ್ಧಿಪಡಿಸುವತ್ತ ತನ್ನ ಚಿತ್ತ ಹರಿಸಿ, ಉತ್ತಮ ತರಬೇತಿ ಹೊಂದಿದ್ದ ಶಿಕ್ಷಕರನ್ನೊಳಗೊಂಡ ಉಚಿತ ಶಾಲೆಗಳನ್ನು ಆರಂಭಿಸುವುದರ ಜೊತೆಗೆ ಉಚಿತ ವೈದ್ಯಕೀಯ ನೆರವು ನೀಡುವ ಆಧುನಿಕ ಆಸ್ಪತ್ರೆಯನ್ನು ಆರಂಭಿಸಿ ಇಂದಿಗೂ ನಡೆಸಿಕೊಂಡು ಬರುತ್ತಿರುವುದು ಗಮನಾರ್ಹವಾಗಿದೆ.

ಕೆಲವು ವರ್ಷಗಳ ಹಿಂದೆ, ಅವರು ಹೃದಯ ಸಂಬಂಧಿತ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಅವರು ಹೊರಗೆ ಹೋಗುವ ಕಾರ್ಯಕ್ರಮಗಳಿಗೆ ವಿದಾಯವನ್ನು ಹೇಳಿ ಆಶ್ರಮದಲ್ಲಿಯೇ ಭಕ್ತಾದಿಗಳಿಗೆ ಮಾರ್ಗದರ್ಶನ ಮಾಡತೊಡಗಿದರು. ಅವರ ಪ್ರೇರಣೆಯಿಂದಾಗಿ ಅವರ ಶಿಷ್ಯವೃಂದದಲ್ಲಿ ಅನೇಕರು ಸಮಾಜದಲ್ಲಿ ಉನ್ನತ ಸ್ಥಾನ ಮಾನಗಲನ್ನು ಗಳಿಸಿದ್ದಲ್ಲದೇ ಸ್ವಾಮೀಜಿಗಳು ಕಲಿಸಿಕೊಟ್ಟ ಮೌಲ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅವರುಗಳಲ್ಲಿ ಪ್ರಮುಖವಾದವರೆಂದರೆ, ಪ್ರಖರ ವಾಗ್ಮಿ ಮತ್ತು ಯುವಾ ಬ್ರಿಗೇಡ್ ಮೂಲಕ ಅನೇಕ ಸಮಾಜಮುಖೀ ಕಾರ್ಯ ಚಟುವಟಿಗಳನ್ನು ಮಾಡುತ್ತಿರುವ ಶ್ರೀ ಚಕ್ರವರ್ತಿ ಸೂಲೆಬೆಲೆ, ಸಮಾಜದ ಅತ್ಯಂತ ಕೆಲವರ್ಗದಿಂದ ಸ್ವಸಾಮರ್ಧ್ಯ ಮತ್ತು ಸ್ವಾಮೀ ಹರ್ಷಾನಂದರ ಪ್ರೇರಣೆಯಿಂದ ಪೋಲೀಸ್ ಉನ್ನತಾಧಿಕಾರಿಯಾಗಿರುವ ಡಿ.ಸಿ. ಚೆನ್ನಣ್ಣನವರ್ ಪ್ರಮುಖರಾಗಿದ್ದಾರೆ.

ಕೇವಲ ಧಾರ್ಮಿಕ ಗುರುವಲ್ಲದೆ ಅನೇಕ ಪ್ರತಿಭೆಗಳ ಖನಿಜವಾಗಿದ್ದ, ಸ್ವಾಮೀ ಹರ್ಷಾನಂದರು, ಅತ್ಯಂತ ಬುದ್ಧಿವಂತರು, ಅದ್ಭುತ ಭಾಷಣಕಾರರು ಮತ್ತು ಬರಹಗಾರರಾಗಿದ್ದಲ್ಲದೇ. ಕರ್ನಾಟಕ ಮತ್ತು ಹಿಂದೂಸ್ತಾನಿ ಎರಡರಲ್ಲೂ ಉತ್ತಮ ಗಾಯಕಗಿದ್ದ ಕಾರಣ ಅವರು ನಿಜವಾದ ರೂಪದಲ್ಲಿ ಪ್ರತಿಭಾವಂತರೇ ಸರಿ. ಇದೇ ಕಾರಣಕ್ಕಾಗಿಯೇ ಸ್ವಾಮಿ ರಂಗನಾಥಾನಂದರು, ಹರ್ಷಾನಂದರು ರಾಮಕೃಷ್ಣ ಮಠದ ಅಪರೂಪದ ಆಸ್ತಿ ಎಂದು ಒಮ್ಮೆ ಉಲ್ಲೇಖಿಸಿದ್ದರು.

ತಮ್ಮ ಮಾತನ್ನು ಧಿಕ್ಕರಿಸಿ 1954 ರಲ್ಲಿ ರಾಮಕೃಷ್ಣ ಮಠಕ್ಕೆ ಸೇರಿ ಸನ್ಯಾಸತ್ವ ಸ್ವೀಕರಿಸಿದ್ದಕ್ಕಾಗಿ ಬೇಸರ ಗೊಂಡಿದ್ದ ಸುಂದರ ಕೃಷ್ಣ ಅವರ ತಂದೆ ಮುಂದೆ ತಮ್ಮ ಮಗ ಹರ್ಷಾನಂದನಾಗಿ ಮಾಡಿದ ಸಾಧನೆಗಳಿಂದಾಗಿ ಅಪಾರವಾಗಿ ಮೆಚ್ಚಿಕೊಂಡಿದ್ದಲ್ಲದೇ, ಅವನೊಬ್ಬ ಅತ್ಯುತ್ತಮ ಮಗ ಎಂದೇ ಹೇಳುತ್ತಿದ್ದರು. ಅವರು ಸನ್ಯಾಸತ್ವ ಸ್ವೀಕರಿಸಿದ್ದರಿಂದ ನಮ್ಮ ಕುಟುಂಬದ ನಷ್ಟವಾಗಿರಬಹುದು ಆದರೆ ಅದರಿಂದ ದೇಶಕ್ಕೆ ದೊಡ್ಡ ಲಾಭವಾಗಿದೆ ಎಂದು ಹೆಮ್ಮೆ ಪಡುತ್ತಿದ್ದರು.

ಇಂದು ಜನವರಿ 12 ಸ್ವಾಮೀ ವಿವೇಕಾನಂದರ ಜನ್ಮ ದಿನ. ಬಹುಶಃ ಇಂತಹ ಸುದಿನಕ್ಕಾಗಿಯೇ ಹರ್ಷಾನಂದರು ತಮ್ಮ ಜೀವವನ್ನು ಹಿಡಿದಿಟ್ಟು ಕೊಂಡಿದ್ದರೋ ಏನೋ? ದೀರ್ಘಕಾಲದಿಂದಲೂ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರೂ, ಗಾಲಿಕುರ್ಚಿಯಲ್ಲಿಯೇ ಕುಳಿತು ಕೊಂಡು ಬೆಂಗಳೂರು ಆಶ್ರಮದ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ ಸ್ವಾಮೀ ಹರ್ಷಾನಂದರು ಇಂದು ಮಧ್ಯಾಹ್ನ ಊಟ ಮುಗಿಸಿ ತಮ್ಮ ಕೋಣೆಗೆ ಹೋದ ಸ್ವಲ್ಪ ಹೊತ್ತಿನಲ್ಲಿಯೇ ತೀವ್ರವಾದ ಹೃದಯಸ್ಥಂಭನದಿಂಡಾಗಿ ಸುಮಾರು 1 ಗಂಟೆಯ ಹೊತ್ತಿಗೆ ಕೊನೆಯುಸಿರೆಳೆಯುವ ಮೂಲಕ ಆಧ್ಯಾತ್ಮಲೋಕದ ಹಿರಿಯ ನಕ್ಷತ್ರವೊಂದು ಕಳಚಿಬಿದ್ದಿದೆ ಎಂದರೂ ತಪ್ಪಾಗಲಾರದು.

ಇಷ್ಟೆಲ್ಲಾ ಸಾಧನೆ ಮಾಡಿದ್ದ ಸ್ವಾಮೀ ಹರ್ಷಾನಂದರ ಕುರಿತು ಕಳೆದ ನವೆಂಬರ್ ತಿಂಗಳಿನಲ್ಲಿಯೇ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿಯೇ ಪರಿಚಯಿಸಬೇಕೆಂದು ಪ್ರಯತ್ನಿಸಿದ್ದೆನಾದರೂ ಅದೇಕೋ ಅದು ಸಾಧ್ಯವಾಗಿರಲಿಲ್ಲ. ಭಗವಂತನ ಅನುಗ್ರಹವಿಲ್ಲದೇ ಒಂದು ಹುಲ್ಲು ಕಡ್ದಿಯೂ ಅಲುಗಾಡುವುದಿಲ್ಲ ಎನ್ನುವಂತೆ ಅವರ ಕುರಿತಂತೆ ಶ್ರದ್ಧಾಂಜಲಿ ರೂಪದಲ್ಲಿ ಈ ಲೇಖನ ಬರೆಯಬೇಕೆಂದು ಭಗವಂತನ ಪ್ರೇರಣೆ ಇತ್ತೇನೋ? ಬೊಂಬೇ ಆಡ್ಸೋನೂ ಮೇಲೇ ಕುಂತವ್ನೆ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಸ್ವಾಮೀ ಹರ್ಷಾನಂದರ ಪೂರ್ವಾಶ್ರಮದ ತಮ್ಮ ದಿ. ವೆಂಬಾರ್ ರಮಾಕಾಂತನ್ ಅವರು ತಮ್ಮ ಅಣ್ಣನ ಬಗ್ಗೆ ಬರೆದಿದ್ದ ಕೈಬರದ ಬರಹವನ್ನು ನೀಡಿದ್ದಲ್ಲದೇ ಈ ಲೇಖನ ಬರೆಯಲು ಪ್ರೋತ್ಸಾಹಿಸಿದ ಆತ್ಮೀಯರಾದ ಶ್ರೀ ಭರತ್ ಅವರಿಗೆ ತುಂಬು ಹೃದಯದ ಧನ್ಯವಾದಗಳು.

13 thoughts on “ಸ್ವಾಮಿ ಹರ್ಷಾನಂದರು

 1. ಶ್ರೀರಾಮಕೃಷ್ಣ ಆಶ್ರಮದ ಭಕ್ತೆಯಾಗಿ ಅವರನ್ನು ತುಂಬಾ ಹತ್ತಿರದಿಂದ ನೋಡಿದಳು ನಾನು. ಅವರ ಕಂಚಿನ ಕಂಠದಿಂದ ಹೊರಹೊಮ್ಮುತ್ತಿದ್ದ ಶ್ರೀ ಗುರುದೇವರ ಕೀರ್ತನೆಗಳು, ಮ8
  ಮೈ ನವಿರೇಳುವಂತೆ ಮಾಡುತ್ತಿದ್ದ ಅವರ ಭಾಷಣಗಳನ್ನು, ತಲೆದೂಗುವಂತೆ ಮಾಡುತ್ತಿದ್ದ ಅವರ ವಿಚಾರಧಾರೆಗಳನ್ನು ಕೇಳುತ್ತಾ ಬೆಳೆದವಳು ನಾನು ಅವರ ಮರಣದ ವಾರ್ತೆಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಅಂದು ಶ್ರೀಮತ್ ಸ್ವಾಮಿ ಪುರುಷೋತ್ತಮಾನಂದಜಿಯವರನ್ನು ಕಳೆದುಕೊಂಡಾಗ ಆದ ಅನಾಥ ಭಾವ ಇಂದೂ ಮೂಡುತ್ತಿದೆ. ಹೆಮ್ಮೆಯ ಗುರುಗಳನ್ನು ಕಳೆದುಕೊಂಡು ನಿಜಕ್ಕೂ ಅನಾಥವಾಗಿದ್ದೇನೆ. ಆಧ್ಯಾತ್ಮಿಕ ಕ್ಷೇತ್ರಕ್ಕೆ ದೊಡ್ಡ ಆಘಾತ ಹಾಗೂ ನಷ್ಟ ಸ್ವಾಮೀಜಿಗಳ ನಿಧಾನದಿಂದಾಗಿದೆ. ಭಗವದ್ಗೀತೆ ಯ ಬಗ್ಗೆ ಅವರು ನೀಡುತ್ತಿದ್ದ ಉಪನ್ಯಾಸ… ಕಣ್ಣಿಗೆ ಕಟ್ಟಿದಂತಿದೆ..
  ಓಂ ಶಾಂತಿ🙏🙏
  ಉತ್ತಮ ಲೇಖನ ಸರ್,
  ಮೆಚ್ಚಿನ ಗುರುಗಳ ಬಗ್ಗೆ ಒಳ್ಳೆಯ ಮಾಹಿತಿ
  ಧನ್ಯವಾದಗಳು ತಮಗೆ🙏🙏

  Liked by 1 person

 2. Many thanks for a comprehensive coverage of the brief life sketch, achievements and contributions of Revered Swami Harshanandaji Maharaj. Swamiji’s departure has created a big vacuum in Sri Ramakrishna Order in general and particularly in the hearts of devotees of Sri Ramakrishna Ashrama, Bengaluru.

  Liked by 1 person

  1. I had the privilege of having known Swamiji from his mysore days in 1964.He founded the taruna sangha in mysore ashrama and conducted its activities in a thorough manner.I still remember the day in 1969 when he proceeded to andhra and all of us went to railway station to see him off.
   To see his industriousness and organized life from close quarters was a great joy.
   His planning of the gopuram to RIMSE,raising resources and having swami veereswaranandaji,swami abhayananda,swami tapasyananda swami ranganathanand nd other senior monks participate in its consecration ceremony was a golden period for mysore centre.My humble tribute to a great monk who led a exemplary life

   His industriousness and organized life

   Liked by 1 person

 3. ಶ್ರೀ ರಾಮಕೃಷ್ಣ ಮಠದ ಸಂಪರ್ಕಕ್ಕೆ ೧೯೮೯ / ೯೦ ರಲ್ಲಿ ನನ್ನ ಸ್ನೇಹಿತ ಆಶ್ರಮ ಕ್ಕೆ ಕರೆದುಕೊಂಡು ಹೋಗಿ, ನನ್ನ ಜೀವನದ ಬಹು ಮುಖ್ಯ ವಾದ ಘಟ್ಟ, ಆಗ ತಾನೆ S.S.L.C ಓದ್ದುತ್ತಿದ ನಾನು, ಪ್ರತಿ ವಾರ ಮನೆಯಿಂದ ಆಶ್ರಮಕ್ಕೆ ೬/೭ಕಿ.ಮಿ ನಡೆದುಕೊಂಡು ಹೋಗುತ್ತಿದ್ದೆವು, ಆಶ್ರಮದಲ್ಲಿ ಪ್ರತಿ ಭಾನವಾರ ಬಾಲಕ ಸಂಘದಲ್ಲಿ ಬೆಳ್ಳಿಗೆ ೭.೩೦ ಪ್ರಾರ್ಥನೆ, ನಂತರ ಯೋಗಸನ, ವ್ಯಕ್ತಿ ವಿಕಸನ ಕಾರ್ಯ ಕ್ರಮ, ಹೀಗೆ ಹತ್ತು ಹಲವಾರು ಚಟುವಟಿಕೆ ಗಳಲ್ಲಿ ಭಾಗವಹಿಸಿತಿದ್ದೆವು, ಆಗ ಸ್ವಾಮಿ ಹರ್ಷನಂದರು, ಸ್ವಾಮಿ ಪುರುಷೊತ್ತಮನಂದ ಸಂಪರ್ಕ ಕ್ಕೆ ಬಂದ ನಾವು , ಹಲವು ಉಪನ್ಯಾಸ , ಭಜನೆ ವಾರ್ಯಂತದಲ್ಲಿ ನಡೆಯುತ್ತಿತ್ತು, ಪ್ರತಿ ಶನಿವಾರ, ಭಾನವಾರ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದೆವು, ಅಶ್ರಮಕ್ಕೆ ಬಂದ ನನ್ನಂತೆ ಬಾಲಕ ಸಂಘ ವಿದ್ಯಾರ್ಥಿ ಗಳು ಇದೇ ರೀತಿಯಲ್ಲಿ ಕಾಯುತ್ತಿದ್ದ ರು.
  ಸ್ವಾಮಿ ಹರ್ಷನಂದರ ಬಗ್ಗೆ ಹೇಳ ಬೇಕಾದರೆ ಎಷ್ಟು ಹೇಳಿದರು ಸಾಲದು, ಅವರ ಉಪನ್ಯಾಸ ಕೇಳಿದರೆ ಎಂತವರನ್ನು ಮಂತ್ರ ಮುಗ್ಧ ರಂತೆ ಮಾಡುತ್ತಿದ್ದರು.
  ಅಗಾಧವಾದ ಜ್ಞಾನ ವುಳ್ಳ ವರು, ಮಾತು ಕೇಳುತ್ತಿದ್ದರೆ ಅಹುದಹುದೆನ್ನಬೇಕು, ಹಲವಾರು ಪುಸ್ತಕಗಳು ಬರೆದಿದ್ದಾರೆ. ಹಿಂದು ಧರ್ಮದ Encyclopaedia ತರ ಅಪಾರ ಪ್ರಮಾಣದ ಜ್ಞಾನವನ್ನು ವುಳ್ಳ ವರು.
  ಉಪನ್ಯಾಸದ ಸಂದರ್ಭದಲ್ಲಿ ದೃ ಷ್ಟಂತ ಮೂಲಕ ಜನ ಸಾಮಾನ್ಯರಿಗೆ ತಲುಪುತ್ತಿತು. ತುಂಬ ಸರಳವಾಗಿ ಉಪನಿಷತ್, ಶೀರಾಮಕೃಷ್ಣ, ಶ್ರೀ ಶಂ ಕರಚಾರ್ಯ, ಹೀಗೆ ಹಲವಾರು ದಾರ್ಶನಿಕರ ಮೇಲೆ ಉಪನ್ಯಾಸ ನೀಡಿದರು. ಕನ್ನಡವಲ್ಲದೆ, ಇಂಗ್ಲಿಷ್ ಪ್ರಭುತ್ವವನ್ನು ಹೊಂದಿದವರು. ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ರಾಗಿ ದಶಕಗಳ ಸೇವೆ ಸಲ್ಲಿಸಿದ್ದಾರೆ, ಅಲ್ಲದೆ ನೆರೆ ಹೊರೆ ಸಂದರ್ಭದಲ್ಲಿ ಬಡವರಿಗೆ ಆಹಾರ ಪದಾರ್ಥಗಳನ್ನು, ಔಷಧಿ ಉಪಚಾರ ತಲುಪಲು ಮೂಲಕ ಸಂಪೂರ್ಣ ಸಹಾಯ ಹಸ್ತ ನೀಡಿದರು.
  ಹಲವಾರು ಭಕ್ತರ ಸಮೂಹದ ಸತ್ಸಂಗ, ಭಜನೆ , ಜಯಂತಿ ಉತ್ಸವ ದಲ್ಲಿ ಮುಂತಾದ ಅನೇಕ ಧಾರ್ಮಿಕ ಕಾರ್ಯಗಳಲ್ಲಿ ಮೂಂಚೂನಿಯಲ್ಲಿ ನಿಂತು ನಡೆಸಿದ ರು.
  ಮೊನ್ನೆ ೧೨ ಸ್ವಾಮಿ ವಿವೇಕಾನಂದರ ಜಯಂತಿ ಯಂದು ಮಧ್ಯಾಹ್ನ ಸ್ವಾಮಿ ಹರ್ಷನಂದರು ಸ್ವರ್ಗಸ್ತರಂದು ಕೇಳಿ ದುಃಖ ವಾಯಿತು, ಶ್ರೀ ರಾಮಕೃಷ್ಣ, ಶ್ರೀ ಶಾರದಾ ದೇವಿ, ಶ್ರೀಸ್ವಾಮಿ ವಿವೇಕಾನಂದರ, ಹಲವು ಸ್ವಾಮಿ ಜಿಯ ಲೀಲಾ ಬಲಗಕ್ಕೆ‌ ಲೀನರಾದರ
  ತ್ಯಾಗ, ಆದರ್ಶ ಮತ್ತು ಸೇವೆ, ಈ ರೀತಿಯಲ್ಲಿ ತುಂಬು ಜೀವನ ನಡೆಸಿದವರು, ಅವರ ಅಶಿರ್ವಾದ ಎಂದೆಂದೂ ಎಲ್ಲರ ಮೇಲೆ ಇರಲಿ ಎಂದು ಬೇಡುವೆ.
  ಶ್ರೀ ರಾಮಕೃಷ್ಣಾಪರ್ಣ ಮಸ್ತು.🙏🙏
  ( ಬಾ.ರಾ.ಸುದರ್ಶನ)

  Liked by 1 person

 4. One of the most revered Swamiji’s I have come across in my life. I first saw him in1982 and continued to get inspired. I always saw him as Swami Ranganaathanadaji maharaj of Karnataka. Unparalleled knowledge base,epitome of descipline & Dedication in every aspect of life. I consider fulfilled if I have imbibed an iota of what he was. He was a personification of selfless seva.

  Liked by 1 person

 5. Yes. Obviously the biggest joint has collapsed.. I too had the opportunity… no.. not an opportunity, it’s the blessings .. of having spent my time with Maharaj.. The holistic approach of leading a useful life is taught at Ashrama by these talented monks. It’s not about going and listing..but it’s about inculcating in our real life.

  The only I thing I can say now is.. that, Maharaj is now invisible, but reflection is found at faces of all..
  I can write an Encyclopaedia of Maharaj,…like The concise encyclopedia of Swami… Haha. Just a word.
  None can match him.

  — Abhi.

  Liked by 1 person

 6. ಅದ್ಭುತ ಲೇಖನ 🙏 ಗುರುಗಳ ಬಗ್ಗೆ ಓದಿ ಅವರ ಮೇಲಿನ ಅಭಿಮಾನ ನೂರ್ಮಡಿಯಾಯಿತು 🙏

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s