ಬೆಂಗಳೂರು ಉದ್ಯಾನ ನಗರಿ ಎಂದು ಹೇಗೆ ಪ್ರಖ್ಯಾತವಾಗಿದೆಯೇ, ಅದೇ ರೀತಿ ಧಾರ್ಮಿಕವಾಗಿ ದೇವಲಯಗಳ ನಗರೀ ಎಂದರೂ ಅತಿಶಯೋಕ್ತಿಯೇನಲ್ಲ. ಬೆಂಗಳೂರಿನ ಪ್ರತೀ ಬಡಾವಣೆಗಳ್ಲಿಯೂ ಕನಿಷ್ಠಪಕ್ಷ ಎರಡು ದೇವಾಲಯಗಳನ್ನು ಕಾಣ ಬಹುದಾಗಿದೆ. ಬೆಂಗಳೂರು ಮಾಹಿತಿ ತಂತ್ರಜ್ಞಾನದಲ್ಲಿ ಜಗತ್ವಿಖ್ಯಾತವಾಗಿ ಎಷ್ಟೇ ಮುಂದುವರೆದಿದೆಯೋ, ಈ ದೇವಾಲಯಗಳಲ್ಲಿನ ಧಾರ್ಮಿಕ ಚಟುವಟಿಗೆಗಳ ಮೂಲಕ ಅಷ್ಟೇ ಲೋಕಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ. ಬೆಂಗಳೂರಿನ ಹೃದಯಭಾಗದಲ್ಲಿರುವ ಬಸವನಗುಡಿಯ ಪಕ್ಕದ ಕೆಂಪೇಗೌಡನಗರ ಅರ್ಥಾಥ್ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಶ್ರೀಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಭಾರತದಲ್ಲಿರುವ ಅತ್ಯಂತ ಪ್ರಾಚೀನ ಗುಹಾಂತರ ದೇವಾಲಯಗಳಲ್ಲೊಂದಾಗಿದೆ.
ಸಾವಿರಾರು ವರ್ಷಗಳ ಐತಿಹ್ಯವಿರುವ ಈ ಗುಹಾಂತರ ದೇವಾಲಯ ಹಲವು ವೈಶಿಷ್ಟ್ಯಗಳಿಂದ ಕೂಡಿದ ಮತ್ತು ನಮ್ಮ ಪೂರ್ವಜರ ವಾಸ್ತು ವಿನ್ಯಾಸದ ಕಲಾನೈಪುಣ್ಯಕ್ಕೆ ಸಾಕ್ಷಿಯಾಗಿದೆ. ಸ್ವಯಂಭು ಎಂದೇ ಪ್ರಸಿದ್ಧವಾಗಿರುವ ಈ ಕ್ಷೇತ್ರದಲ್ಲಿ ಸಪ್ತ ಋಷಿಗಳಲ್ಲಿ ಒಬ್ಬರಾದ ಗೌತಮ ಮಹರ್ಷಿಗಳು ಈ ಗುಹಾಂತರ ದೇವಾಲಯದಲ್ಲಿ ತಪಸ್ಸು ಮಾಡುತ್ತಾ ಇಲ್ಲಿನ ಶಿವಲಿಂಗಕ್ಕೆ ತ್ರಿಕಾಲ ಪೂಜೆ ಸಲ್ಲಿಸುತ್ತಿದ್ದರೆಂಬ ಕಾರಣದಿಂದ ಇದಕ್ಕೆ ಗೌತಮ ಕ್ಷೇತ್ರ ಎಂದೂ ಕರೆಯಲಾಗುತ್ತದೆ. ಈ ದೇವಾಲಯ ಗರ್ಭಗುಡಿಯ ಸುತ್ತ ಇರುವ ಗುಹಾ ಮಾರ್ಗದಲ್ಲಿ ಗೌತಮ ಮಹರ್ಷಿಗಳು ಮತ್ತು ಭಾರದ್ವಾಜ ಮುನಿಗಳ ಮೂರ್ತಿಗಳನ್ನು ಕಾಣಬಹುದಾಗಿದೆ. ಇದೇ ಮಾರ್ಗದಲ್ಲಿ ಮುಂದುವರೆಯುತ್ತಾ ಹೊದಲ್ಲಿ, ಸಪ್ತ ಮಾತೃಕೆಯರಾದ ಬ್ರಾಹ್ಮೀ, ಮಾಹೇಶ್ವರಿ, ವಾರಾಹಿ, ಚಾಮುಂಡಿ, ವೈಷ್ಣವಿ, ಶ್ರೀದೇವಿ, ಮತ್ತು ಭೂದೇವಿಯರ ವಿಗ್ರಹಗಳನ್ನೂ ಕಾಣಬಹುದಾಗಿದೆ.
ಸಾಮಾನ್ಯವಾಗಿ ಬಹುತೇಕ ದೇವಲಯಗಳಲ್ಲಿನ ದೇವರುಗಳು ಪೂರ್ವಾಭಿಕವಾಗಿಯೋ ಇಲ್ಲವೇ ಉತ್ತರಾಭಿಮುಖವಾಗಿದ್ದರೆ ಇಲ್ಲಿನ ಶಿವಲಿಂಗ ಮಾತ್ರ ದಕ್ಷಿಣಾಭಿಮುಖದಲ್ಲಿ ಇರುವುದು ಇಲ್ಲಿನ ವೈಶಿಷ್ಟ್ಯವಾಗಿದೆ. ಪಾರ್ವತಿದೇವಿಯು ಶಿವನ ಬಲಭಾಗದಲ್ಲಿ ಆಸೀನಳಾಗಿರುವುದು ಸಹಾ ಮತ್ತೊಂದು ವಿಶೇಷವಾಗಿದೆ. ದೇವಾಲಯದ ಮುಂಭಾಗದಲ್ಲಿ ವಿಜಯನಗರ ಶೈಲಿಯ 14 ಕಂಬಗಳಿರುವ ಮಂಟಪವಿದ್ದು, ಎರಡು ಸೂರ್ಯಪಾನ, ಚಂದ್ರಪಾನ, ಪೀನಪಾನ, ಡಮರುಗ ಹಾಗೂ ತ್ರಿಶೂಲದ ಎತ್ತರದ ಸ್ತಂಭಗಳುಗಳಿವೆ. ಈ ದೇವಾಲಯದ ವಿಶಾಲ ಪ್ರಾಂಗಣವು ಅಪರೂಪವಾದ ಮತ್ತು ಅತ್ಯಂತ ಸುಂದರವಾದ ಶಿಲಾರಚನೆಗಳಿಂದ ಕೂಡಿದ್ದು ಭಕ್ತಾದಿಗಳ ಹೃನ್ಮನಗಳನ್ನು ತಣಿಸುತ್ತಿದೆ.
ಈ ಗುಹಾಂತರ ದೇವಾಲಯದಲ್ಲಿ ಎರಡು ಸುರಂಗ ಮಾರ್ಗಗಳಿದ್ದು, ಒಂದು ಸುರಂಗವು ಕಾಶಿ ವಿಶ್ವನಾಥನ ಸನ್ನಿಧಿಗೂ ಮತ್ತೊಂದು ಗುಹೆಯ ಮೂಲಕ ಕೆಲ ದಿನಗಳ ಹಿಂದೆ ಶಿವಗಂಗೆಯ ಕುರಿತಾದ ಲೇಖನದಲ್ಲಿ ತಿಳಿಸಿರುವಂತೆ ತುಮಕೂರು ರಸ್ತೆಯ ದಾಬಸ್ ಪೇಟೆಯ ಬಳಿ ಇರುವ ಶಿವಗಂಗೆಗೆ ತಲುಪುತ್ತದೆ ಎಂಬುದು ನಂಬಿಕೆಯಾಗಿದೆ. ಬಹಳ ಕತ್ತಲೆ ಮತ್ತು ವಿಷಜಂತುಗಳು ಇರುವ ಸಾಧ್ಯತೆ ಇರುವ ಕಾರಣ ಈ ಎರಡೂ ಗುಹೆಗಳಿಗೆ ಭಕ್ತಾದಿಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಕಾರ್ತೀಕ ಮಾಸದ ಸೋಮವಾರಗಳು ಮತ್ತು ಶಿವರಾತ್ರಿಯಂದು ಇಲ್ಲಿ ವಿಶೇಷ ಪೂಜೆಗಳು ನಡೆಯಲ್ಪಟ್ಟು ಸಾವಿರಾರು ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಇತಿಹಾಸದ ಪ್ರಕಾರ 16ನೇ ಶತಮಾನದಲ್ಲಿ ಮಾಗಡಿ ಕೆಂಪೇಗೌಡರು ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳನ್ನು ಮಾಡಿಸಿದರೆಂದು ತಿಳಿದುಬರುತ್ತದೆ. ದೇವಾಲಯದ ಸಮೀಪದಲ್ಲೇ ಗೋಸಾಯಿ ಮಠವಿದ್ದು ಅಲ್ಲಿ ಅವನಿಪೀಠವೂ ಇದೆ.
ಕೇವಲ ಇವಿಷ್ಟೇ ಆಗಿದ್ದಲ್ಲಿ ಈ ದೇವಸ್ಥಾನವೂ ಸಹಾ ಇತರೇ ದೇವಸ್ಥಾನಗಳಲ್ಲಿ ಮತ್ತೊಂದು ದೇವಸ್ಥಾನವಾಗಿರುತ್ತಿತ್ತು. ಮಕರ ಸಂಕ್ರಾಂತಿಯಂದು ಗವಿಗಂಗಾಧರೇಶ್ವರನಿಗೆ ಸೂರ್ಯನ ಅಭಿಷೇಕವಾಗುವ ಕಾರಣದಿಂದಾಗಿ ಈ ದೇವಸ್ಥಾನ ಬಹಳ ವೈಶಿಷ್ಟ್ಯವಾಗಿದೆ. ಪ್ರತೀ ವರ್ಷ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಮಕರ ಸಂಕ್ರಾತಿಯ ದಿನದಂದು ಸೂರ್ಯ ತನ್ನ ಪಥವನ್ನು ಬದಲಿಸುವ ಸಮಯದಲ್ಲಿ ಸೂರ್ಯಾಸ್ತಮಾನದ ಸಮಯದಲ್ಲಿ ಸೂರ್ಯನ ಕಿರಣಗಳು ದೇವಾಲಯದ ಪಶ್ಚಿಮ ಭಾಗದ ಒಂದು ಕಮಾನಿನ ಮೂಲಕ ಬಳಬಂದು ಲಿಂಗದ ಮುಂದಿರುವ ನಂದಿಯ ಕೊಂಬುಗಳ ಮಧ್ಯಭಾಗದಿಂದ ನುಸುಳಿ, ಶಿವಲಿಂಗದ ಮೇಲೆ ಕೆಲವು ಕಾಲ ಬೀಳುವ ಮೂಲಕ ಶಿವನಿಗೆ ನೈಸರ್ಗಿಕವಾಗಿ ಸೂರ್ಯಾಭಿಷೇಕವನ್ನು ಮಾಡುವ ಈ ಅಧ್ಭುತ ರಸಕ್ಷಣಗಳನ್ನು ವರ್ಣಿಸುವುದಕ್ಕಿಂತ ಪ್ರತ್ಯಕ್ಷ ನೋಡಿಯೇ ತೀರಬೇಕು. ಈ ಅಧ್ಭುತ ಪ್ರಕ್ರಿಯೆ ಹವಾಮಾನ ವೈಪರೀತ್ಯದ ಅನುಗುಣವಾಗಿ ಇದ್ದು ಕೆಲವು ಸಮಯ ಹಲವು ನಿಮಿಷಗಳ ಕಾಲವಿದ್ದರೆ, ಇನ್ನೂ ಕೆಲ ಸಮಯ ಕೆಲವೇ ಕೆಲವು ಸೆಕೆಂಡುಗಳ ಕಾಲ ಶಿವಲಿಂಗವನ್ನು ಸ್ಪರ್ಷಿಸಿ ಹಾದು ಹೋಗುತ್ತದೆ. ಸೂರ್ಯನ ಕಿರಣಗಳು ಶಿವ ಲಿಂಗದ ಮೇಲೆ ಬಿದ್ದಾಗ, ನುಣುಪಾದ ಶಿವಲಿಂಗ ಮೇಲಿನ ಪ್ರತಿಫಲನದ ಮೂಲಕ ಅದ್ಭುತವಾಗಿ ಪ್ರಕಾಶಿಸುವ ಕ್ರಿಯೆ ನಿಜಕ್ಕೂ ವಣಿಸಲದಳ. ಇಂತಹ ರೋಚಕ ಕ್ಷಣಗಳನ್ನು ನೋಡಿದಾಗ ನಮ್ಮ ಪ್ರಾಚೀನ ಶಿಲ್ಪಿಗಳ ಕಲಾತ್ಮಕ ರಚನೆ, ಅವರಿಗಿದ್ದ ಖಗೋಳ ಹಾಗು ವಿಜ್ಞಾನ ಕ್ಷೇತ್ರದಲ್ಲಿನ ಉನ್ನತ ಜ್ಞಾನಕ್ಕೆ ತೋರಿದ ಕೈಗನ್ನಡಿಯಾಗಿದೆ. ಈ ಸುಂದರ ದೃಶ್ಯವನ್ನು ಕಣ್ತುಂಬಿಸಿಕೊಳ್ಳುವ ಸಲುವಾಗಿ ಸಾವಿರಾರು ಭಕ್ತಾದಿಗಳು ಮಧ್ಯಾನದಿಂದಲೇ ದೇವಸ್ಥಾನದಲ್ಲಿ ಸರದಿಯ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪರಮ ಪಾವನರಾಗುವುದು ಇಲ್ಲಿ ಸಹಸ್ರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ
ದೇಗುಲದ ಬಲಭಾಗದ ಕಿಂಡಿಯಿಂದ ಸೂರ್ಯರಶ್ಮಿ ಪ್ರವೇಶಿಸಿ, ಗವಿಗಂಗಾಧರೇಶ್ವರ ದೇವರ ಪಾದ ಸ್ಪರ್ಷಿಸಿದ ಬಳಿಕ ನಂದಿ ವಿಗ್ರಹದ ಮೂಲಕ ಹಾದುಹೋಗಿ ಇಡೀ ಶಿವಲಿಂಗವನ್ನು ಆವರಿಸುವ ಸಂದರ್ಭದಲ್ಲಿ ದೇವರಿಗೆ ನಿರಂತರವಾಗಿ ಅಭಿಷೇಕ ನಡೆಸಲಾಗುತ್ತದೆ. ಈ ದೃಶ್ಯಗಳನ್ನು ಏಕ ಕಾಲದಲ್ಲಿ ಎಲ್ಲರೂ ನೋಡಲು ಹೋಗುವಾಗ ನೂಕು ನುಗ್ಗುಲಾಗುವುದನ್ನು ತಡೆಗಟ್ಟುವುದಕ್ಕಾಗಿ ಕೇವಲ ಕೆಲವು ಗಣ್ಯ ವ್ಯಕ್ತಿಗಳನ್ನು ಮಾತ್ರವೇ ದೇವಾಲಯದ ಒಳಗೆ ಪ್ರವೇಶಿಸುವ ಅವಕಾಶ ಕೊಟ್ಟು ಭಕ್ತರಿಗೆ ದೇವಾಲಯದ ಹೊರಗಡೆ ವಿಶೇಷವಾದ ಬೃಹದಾಕಾರದ ಎಲ್‌ಇಡಿ ಪರದೆಗಳಲ್ಲಿ ಈ ಸುಂದರ ಕ್ಷಣಗಳ ವೀಕ್ಷಣೆಗೆ ಅವಕಾಶ ಮಾಡಿಕೊಡುವ ರೂಢಿಯನ್ನು ಇತ್ತೀಚಿನ ದಿನಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಸೂರ್ಯನ ರಶ್ಮಿ ಶಿವಲಿಂಗ ಸ್ಪರ್ಶಿಸಿ ಮರೆಯಾದ ಬಳಿಕ ಶಿವಲಿಂಗಕ್ಕೆ ಹಾಲು, ಎಳನೀರಿನ ಗಂಗಾಜಲಗಳ ಅಭಿಷೇಕ ಮಾಡಿ, ನಂತರ ವಿಶೇಷ ಅಲಂಕಾರಗಳನ್ನು ಮಾಡಿ ವಿಧಿವತ್ತಾದ ಪೂಜಾ ಕೈಂಕರ್ಯಗಳನ್ನು ಮಾಡಿದ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿ ತೀರ್ಧ ಪ್ರಸಾದದ ವಿನಿಯೋಗದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ದೇವಾಲಯದ ಸಿಬ್ಬಂಧಿವರ್ಗದವರು ನಡೆಸಿಕೊಂಡು ಹೋಗುತ್ತಿರುವುದು ಗಮನಾರ್ಹವಾಗಿದೆ.
ಈ ಬಾರಿಯೂ ಈ ಸುಂದರ ದೃಶ್ಯವನ್ನು ಕಣ್ತುಂಬಿಸಿಕೊಳ್ಳಲು ಕರೋನಾ ಮಹಾಮಾರಿಯ ನಡುವೆಯೂ ಸಾವಿರಾರು ಭಕ್ತಾದಿಗಳು ಬಹಳ ದೂರ ದೂರ ಪ್ರದೇಶಗಳಿಂದ ಬಂದು ಕಾಯುತ್ತಿದ್ದರು. ಸಂಜೆ ಮೋಡ ಕವಿದ ವಾತಾವರಣದಿಣದಿಂದಾಗಿ ಸೂರ್ಯ ಕಿರಣ ಬೆಳಕಿನ ಕಿಂಡಿಯನ್ನಷ್ಟೇ ಪ್ರವೇಶಿಸಿ ಅಲ್ಲಿಂದ ಮುಂದೆ ಶಿವಲಿಂಗದ ಮೇಲೆ ಬೀಳದ ಕಾರಣ ಎಲ್ಲಾ ಆಸ್ತಿಕ ಭಕ್ತಾದಿಗಳಿಗೂ ನಿರಾಸೆ ಮೂಡಿಸಿ ಆತಂಕಕ್ಕೆಡೆ ಮಾಡಿದೆ. ಕಳೆದ ಬಾರಿ ಕೇವಲ ಎರಡು ನಿಮಿಷವಷ್ಟೇ ಸೂರ್ಯನ ರಶ್ಮಿ ದೇವಾಲಯ ಪ್ರವೇಶಿಸಿ ಕೇವಲ ಮೂರ್ನಾಲ್ಕು ಸೆಕೆಂಡುಗಳ ಕಾಲ ಭಗವಂತನನ್ನು ಸ್ಪರ್ಶಿದ ಕಾರಣದಂದಾಗಿ ಕರೋನಾದಂತಹ ಮಹಾಮಾರಿ ಬಂದಿದೆ ಈ ಬಾರಿ ಸೂರ್ಯನ ರಶ್ಮಿ ದೇವರನ್ನೇ ಸ್ಪರ್ಶಿಸರಿರುವ ಕಾರಣ ಇನ್ನೆಂತಹ ವಿಪರೀತ ಪರಿಸ್ಥಿತಿ ಬರಬಹುದು? ಎಂಬ ಚಿಂತೆ ಭಕ್ತಾದಿಗಳಲ್ಲಿ ಕಾಡುತ್ತಿರುವುದಂತೂ ಸುಳ್ಳಲ್ಲ.
ಈ ಕುರಿತಂತೆ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸೋಮಸುಂದರ ದೀಕ್ಷಿತ್ ಅವರು ಮಾತನಾಡಿ, ಪ್ರಕೃತಿಯ ಆಟದ ಮುಂದೆ ನಮ್ಮದೇನೂ ನಡೆಯುವುದಿಲ್ಲ, ಕೆಲವೊಂದು ಬಾರಿ ಹವಾಮಾನ ವೈಪರೀತ್ಯಗಳಿಂದ ಸೂರ್ಯನ ರಶ್ಮಿ ದೇವರ ಮೇಲೆ ಬೀಳುವುದು ಬದಲಾಗುತ್ತಲೇ ಹೋಗುತ್ತದೆ. ತಮ್ಮ 50ಕ್ಕೂ ಹೆಚ್ಚು ವರ್ಷಗಳ ಕಾಲದ ಅನುಭವದಲ್ಲಿ ಇದೇ ಮೊದಲ ಬಾರಿಗೆ ಸೂರ್ಯನ ಕಿರಣ ಸ್ವಾಮಿಯ ಮೇಲೆ ಬೀಳದಿರುವುದು ಭಕ್ತಾದಿಗಳಲ್ಲಿ ಆತಂಕ ಮೂಡಿಸಿರುವುದು ಸಹಜವಾದರೂ ಇದರಿಂದ ವಿಚಲಿತರಾಗಬಾರದೆಂದು ಕೋರಿಕೊಂಡಿದ್ದಲ್ಲದೇ ಬಹುಶಃ ಆಗೋಚರವಾಗಿ ಸೂರ್ಯನ ರಶ್ಮಿ ಭಗವಂತನ ಮೇಲೆಿ ಬಿದ್ದಿರಬಹುದೆಂದು ತಿಳಿಸಿದ್ದಾರೆ. ಇದಕ್ಕೆ ಪರಿಹಾರವಾಗಿ ಮತ್ತು ಸಮಸ್ತ ಲೋಕ ಕಲ್ಯಾಣಕ್ಕಾಗಿ ಅತಿ ಶೀಘ್ರದಲ್ಲಿಯೇ ಯಾಗವನ್ನು ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಧಾನ ಅರ್ಚಕರ ಆಶಯದಂತೆ ಅಗೋಚರವಾಗಿ ಸೂರ್ಯನ ರಶ್ಮಿ ಭಗವಂತನ ಪಾದಕ್ಕೆ ತಲುಪಿದ್ದು ಈಗ ಕವಿದಿರುವ ಕರೋನ ಮಾಹಾಮಾರಿ ಅತೀ ಶೀಘ್ರದಲ್ಲಿಯೇ ಮಾಯವಾಗಿ ಲೋಕಕ್ಕೆಲ್ಲಾ ಕಲ್ಯಾಣವಾಗಲಿ ಎಂದು ಪ್ರಾರ್ಥಿಸುವದಷ್ಟೇ ನಮ್ಮ ನಿಮ್ಮೆಲ್ಲರ ಕಾಯಕವಾಗಿದೆ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ ಅಲ್ಲವೇ?
ಏನಂತೀರೀ?
ನಿಮ್ಮವನೇ ಉಮಾಸುತ
ನಾನು ಆರ್. ವಿ. ಸ್ಕೂಲ್ ಗೆ ಹೋಗುತ್ತಿದ್ದಾಗ ಬಸವನಗುಡಿಯಲ್ಲಿ ಇದ್ದೆವು.. ಆಗ ನೋಡಿದ ನೆನಪು
LikeLiked by 1 person