ಇತರರಿಗೆ ಗಾಡಿ ಕೊಡುವ ಮುನ್ನಾ ಜೋಕೆ

ಸುರೇಶ್ ಮಧ್ಯಮ ವರ್ಗದ ಉತ್ಸಾಹೀ ತರುಣ. ಬಹಳ ಕಷ್ಟ ಪಟ್ಟು ಓದಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನೂ ಪಡೆದು ಪೀಣ್ಯಾದ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಮನೆಯಿಂದ ಕಛೇರಿಗೆ ಹೋಗಿ ಬರಲು ಒಂದು ಮುದ್ದಾದ ಬೈಕ್ ಒಂದನ್ನು ಕಂತಿನಲ್ಲಿ ಖರೀದಿಸಿ ಬಹಳ ಜತನದಿಂದ ಬೈಕನ್ನು ನೋಡಿಕೊಳ್ಳುತ್ತಿದ್ದ. ಅದೊಂದು ದಿನ ಬೆಳ್ಳಂಬೆಳಿಗ್ಗೆ ಕಛೇರಿ ತಲುಪಲು ಇನ್ನೇನು ಸ್ವಲ್ಪ ದೂರವಿದೆ ಎನ್ನುವಷ್ಟರಲ್ಲಿ ಆತನ ಬೈಕ್ ಪಂಚರ್ ಆಗಿತ್ತು. ಸುತ್ತ ಮುತ್ತಲೆಲ್ಲಾ ಕಣ್ಣಾಡಿಸಿದರೂ ಎಲ್ಲೂ ಪಂಚರ್ ಹಾಕುವ ಅಂಗಡಿ ಕಾಣಿಸದಿದ್ದ ಪರಿಣಾಮ ಕಷ್ಟು ಪಡುತ್ತಲೇ ಗಾಡಿಯನ್ನು ತಳ್ಳಿಕೊಂಡು ಹೋಗುತ್ತಿದ್ದಾಗಲೇ, ಇದೇನ್ ಸಾರ್, ಗಾಡಿ ತಳ್ಳುತ್ತಿದ್ದೀರಾ ಎನಾಯ್ತು? ಎಂದು ಕೇಳಿಕೊಂಡು ಬಂದವನೇ ಅವರ ಆಫೀಸಿನಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ರಮೇಶ. ಓ ಪಂಚರ್ ಆಗಿದ್ಯಾ? ಪಂಚರ್ ಆಗಿರೋ ಗಾಡಿ ತಳ್ಳೊದು ತುಂಬ ಕಷ್ಟಾ ಅಲ್ವಾ ಸಾರ್ ಎಂದು ಹೇಳುತ್ತಲೇ, ಸಾರ್ ಟೈಯರಿನಲ್ಲಿ ಮಳೆ ಗೀಳೆ ಇತ್ತಾ ನೋಡಿ ತೆಗೆದ್ರಾ? ಇಲ್ಲಾ ಅಂದ್ರೇ ತಳ್ಳುವಾಗ ಇನ್ನೂ ಮೂರ್ನಾಲ್ಕು ಪಂಚರ್ ಆಗಿ ಬಿಡುತ್ತದೆ ಎಂದಾಗ ಕೂಡಲೇ ಗಾಡಿಯನ್ನು ನಿಲ್ಲಿಸಿ ಚಕ್ರವನ್ನು ಕೂಲಂಕುಶವಾಗಿ ಪರೀಕ್ಷಿಸಿದಾಗ ಉದ್ದನೆಯ ಹೊಸಾ ಮಳೆ ಚಕ್ರಕ್ಕೆ ಚುಚ್ಚಿದ್ದನ್ನು ಕಷ್ಟು ಪಟ್ಟು ತೆಗೆಯುವಷ್ಟರಲ್ಲಿ ಬೆವರು ಕಿತ್ತಿತ್ತು.

ಅದನ್ನು ಗಮನಿಸಿದ ರಮೇಶ, ಸಾರ್ ಮೊದ್ಲು ಬೆವರು ಒರ್ಸಿ ಕೊಳ್ಳಿ. ಬಿಡೀ ಸಾರ್ ನಾನೇ ಗಾಡೀ ತಳ್ಕೊಂಡ್ ಬರ್ತೀನಿ ಎಂದು ಸುರೇಶನ ಕೈಯಿಂದ ಗಾಡಿಯನ್ನು ತೆಗೆದುಕೊಂಡ. ಸುರೇಶನೂ ಒಂದು ಕೈಯಿಂದ ಗಾಡಿಯನ್ನು ತಳ್ಳುತ್ತಾ ಹಾಗೂ ಹೀಗೂ ಕಛೇರಿ ತಲುಪುವಷ್ಟರಲ್ಲಿ ಸಾಕು ಸಾಕಾಗಿತ್ತು. ಹೆಂಡತಿ ಮತ್ತು ಗಾಡಿ ಎರಡೂ ಸಹಾ ನಗು ನಗುತ್ತಾ ಚೆನ್ನಾಗಿದ್ದಾಗ ಮಾತ್ರವೇ ಅನುಭವಿಸಲು ಆನಂದ. ಒಮ್ಮೆ ಹೆಂಡತಿ ಕೋಪ ಮಾಡಿಕೊಂಡಳೋ ಇಲ್ಲವೇ ಗಾಡಿ ಕೈ ಕೊಟ್ಟಿತೂ ಅಂದರೆ, ನರಕಯಾತನೇ ಅನುಭವಿಸುವುದು ಕಷ್ಟ ಎಂದು ಓದಿದ ನನಪು ಸುರೇಶನ ಮನದಲ್ಲಿ ಸುಳಿದು ಸಣ್ಣಗೆ ನಕ್ಕ.

ರಮೇಶ, ಸಹಾಯ ಮಾಡಿದ್ದಕ್ಕೆ ತುಂಬಾ ಧ್ಯಾಂಕ್ಸ್. ನಿನ್ನಿಂದ ತುಂಬಾನೇ ಉಪಕಾರವಾಯ್ತು ಎಂದಿದ್ದಕ್ಕೆ, ಇದೇನ್ ಸಾರ್ ಇಷ್ಟಕ್ಕೆಲ್ಲಾ ಥ್ಯಾಂಕ್ಸ್ ಎಲ್ಲಾ ಏಕೆ ಬಿಡಿ ಎಂದು ಹೇಳುತ್ತಲೇ, ಸಾರ್, ಕೀ ಕೊಡಿ ನಾನೇ ಮಧ್ಯಾಹ್ನ ಊಟ ಆದ್ಮೇಲೆ ಗಾಡಿ ಪಂಚರ್ ಹಾಕಿಸ್ತೀನಿ ಎಂದವನೇ ಸೀದಾ ಸುರೇಶನ ಕೈಯ್ಯಿಂದ ಗಾಡಿ ಕೀ ಕಸಿದೇ ಕೊಂಡು ಬಿಟ್ಟ. ಹೇ.. ನಿನಗೇಕೆ ಸುಮ್ಮನೇ ತೊಂದರೆ ಸಂಜೆ ನಾನೇ ಹಾಕಿಸ್ಕೋತೀನಿ ಎಂದು ಸುರೇಶ ಹೇಳಿದಾಗ, ಸಾರ್ ನನಗೆ ಗೊತ್ತಿಲ್ವಾ ನಿಮ್ಮ ಬುದ್ದಿ. ಒಂದು ಸಲಾ ಕೆಲ್ಸ ಮೀಟಿಂಗ್ ಅದೂ ಇದೂ ಅಂತಾ ಶುರು ಹಚ್ಕೊಂಡ್ರೇ ಹೊತ್ತೂ ಗೊತ್ತೂ ಇಲ್ಲದೇ ಊಟ ತಿಂಡೀನೂ ಮಾಡ್ದೇ ಕೆಲ್ಸಾ ಮಾಡ್ತಾ ಇರ್ತೀರಿ. ಸಂಜೆ ಮನೆಗೆ ಹೋಗ್ಬೇಕಾದ್ರೇ ತೊಂದ್ರೇ ಆಗುತ್ತೇ ಎಂದ. ಅವನು ಹೇಳ್ತಾ ಇರೋದು ಸರಿ ಎನಿಸಿ ಪರ್ಸಿನಿಂದ ನೂರರ ನೋಟೊಂಡನ್ನು ರಮೇಶನ ಕೈಗಿತ್ತು ತನ್ನ ಕೆಲಸದಲ್ಲಿ ಮಗ್ನನಾದ.

ಸಂಜೆ ಮೀಟಿಂಗ್ ಮುಗಿಸಿ ಕಛೇರಿಯಿಂದ ಮನೆಗೆ ಹೊರಡುವಷ್ಟರಲ್ಲಿ ಗಂಟೆ ಎಂಟಾಗಿತ್ತು. ಅಯ್ಯೋ ರಾಮ ಸಮಯ ಹೋದದ್ದೇ ಗೊತ್ತಾಗಲಿಲ್ಲಲ್ಲಾ ಎಂದು ಕೊಂಡು ತನ್ನ ಕೆಲಸದ ಟೇಬಲ್ ಬಳಿ ಬಂದಾಗ ಒಂದಷ್ಟು ಚಿಲ್ಲರೆ ಮತ್ತು ಗಾಡಿ ಕೀ ಅವರ ಟೇಬಲ್ ಮೇಲೆ ನೋಡಿದಾಗಲೇ ಬೆಳಿಗ್ಗೆ ಗಾಡಿ ಪಂಚರ್ ಆಗಿದ್ದದ್ದು ನೆನಪಾಗಿ ಸದ್ಯಾ, ರಮೇಶ ದೇವರು ಬಂದ ಹಾಗೆ ಬಂದ. ಇಲ್ದೇ ಹೋಗಿದ್ರೇ ಇಷ್ಟು ಹೊತ್ತಿಗೆ ಯಾವ ಪಂಚರ್ ಅಂಗಡಿಯೂ ತೆಗೆದಿರದೇ ಪರದಾಡಬೇಕಿತ್ತು ಎಂದು ಮನಸ್ಸಿನಲ್ಲಿಯೇ ಮತ್ತೊಮ್ಮೆ ರಮೇಶನಿಗೆ ಧನ್ಯವಾದಗಳನ್ನು ಹೇಳುತ್ತಾ ಗಾಡಿ ಹತ್ತಿ ಆರಾಮವಾಗಿ ಮನೆ ಬಂದು ತಲುಪಿದ.

ಮಾರನೆಯ ದಿನ ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸಲು ರಮೇಶನನ್ನು ಹುಡುಕಿದಾಗ ಅದೇನೋ ತುರ್ತಾದ ಕಾರಣದಿಂದ ಎರಡ್ಮೂರು ದಿನ ರಜೆ ಹಾಕಿದ್ದು ತಿಳಿಯಿತು. ಅದಾದ ನಂತರ ವಾರಾಂತ್ಯ ಬಂದ ಕಾರಣ ಆ ವಿಷಯ ಮರತೇ ಹೋಗಿತ್ತು. ಗಾಡಿ ಪಂಚರ್ ಆಗಿ ಸುಮಾರು ಒಂದು ವಾರಗಳಾದ ನಂತರ, ಕಛೇರಿಗೆ ಬೆಳಗ್ಗೆ ಹೋಗುವಾಗ, ಪೀಣ್ಯಾ ಸರ್ಕಲ್ಲಿನ ಬಳಿ ಗಾಡಿ ಪೋಲಿಸ್ ಪೇದೆಯೊಬ್ಬರು ಗಾಡಿಗೆ ಅಡ್ಡಾ ಹಾಕಿದರು. ಅರೇ ಏನಾಯ್ತಪ್ಪಾ? ಹೆಲ್ಮೆಟ್ ಹಾಕಿದ್ದೀನಿ, ಸಿಗ್ನಲ್ ಏನೂ ದಾಟಿಲ್ಲ. ಪರ್ಸಿನಲ್ಲಿ ಲೈಸೆನ್ಸ್ ಗಾಡಿಯಲ್ಲಿ ಇನ್ಷೂರೆನ್ಸ್ ಎಲ್ಲವೂ ಸರಿ ಇದೆ. ಇನ್ನೇಕೆ ಭಯ? ಎಂದು ರಸ್ತೆಯ ಬದಿಯಲ್ಲಿ ಗಾಡಿ ನಿಲ್ಲಿಸಿ ಎನ್ಸಾರ್ ಎಂದ. ಏನ್ರೀ ನೀವು? ಹೊಟ್ಟೆಗೆ ಅನ್ನಾ ತಿಂತೀರಾ, ಇಲ್ಲಾ ಇನ್ನೇನಾದ್ರೂ ತಿಂತೀರಾ? ಒಂದು ಚೂರೂ ಮಾನವೀಯತೆಯೇ ಇಲ್ವಾ ನಿಮಗೇ ? ಎಂದು ಏಕಾ ಏಕಿ ಪೋಲೀಸ್ ಪೇದೇ ವಾಚಾಮಗೋಚರಚಾಗಿ ತನಗೆ ಗೊತ್ತಿದ್ದ ಎಲ್ಲಾ ಬೈಯ್ಗುಳದ ಅರ್ಚನೆ ಮಾಡುತ್ತಿದ್ದರೆ, ಅವರೇಕೆ ಹೀಗೆ ಮಾಡುತ್ತಿದ್ದಾರೆ ಎಂದು ಅರಿಯದ ಸುರೇಶ ಬೆಪ್ಪಾಗಿದ್ದ. ಸಾರ್ ನೀವ್ಯಾಕೆ ಬಯ್ತಾ ಇದ್ದೀರಾ? ಅಂತಹ ತಪ್ಪು ನಾನೇನು ಮಾಡಿದ್ದೇನೆ? ನಿಮ್ಮನ್ನು ಇದೇ ಮೊದಲ ಸಲಾ ನೋಡ್ತಾ ಇರೋದು ಎಂದು ಒಂದೇ ಉಸಿರಿನಲ್ಲಿ ಸುರೇಶ ಒದರಿದ. ಹಾಂ!! ಏನು ಮಾಡಿದ್ದೀಯಾ ಅಂತಾ ನಿನ್ಗೆ ಗೊತ್ತಿಲ್ವಾ? ನಡೀ ಸಾಹೇಬರ ಹತ್ತಿರ ಎಲ್ಲವನ್ನೂ ನೆನಪಿಸ್ತಾರೆ ಎಂದು ದಬಾಯಿಸಿ ಅಲ್ಲೇ ಗಾಡಿ ಸ್ಟಾಂಡ್ ಹಾಕಿ ಗಾಡಿ ಮೇಲೆ ಕುಳಿತಿದ್ದ ಇನ್ಸ್ಪೆಕ್ಟರ್ ಅವರ ಬಳಿ ಕರೆದುಕೊಂಡು ಹೋಗಿ, ಸಾರ್ ಬಡ್ಡೀ ಮಗ ಒಂದು ವಾರದ ನಂತರ ಸಿಕ್ಕಿ ಹಾಕ್ಕೊಂಡಿದ್ದಾನೆ. ಅವನಿಗೆ ಏನು ತಪ್ಪು ಮಾಡಿದೆ ಅಂತಾ ಗೊತ್ತಿಲ್ವಂತೇ ಸ್ವಲ್ಪ ಜ್ಞಾಪಿಸಿ ಸಾರ್ ! ಎಂದು ಕುಹಕವಾಡಿದ.

ಏನ್ರೀ ನಿಮ್ಮ ಹೆಸರು? ಎಲ್ಲಿ ಕೆಲ್ಸಾ ಮಾಡ್ತಾ ಇದ್ದೀರೀ? ಎಂದು ಹೆಸರು, ಕೆಲಸ, ಕುಲ ಗೋತ್ರಾ ಎಲ್ಲವನ್ನೂ ವಿಚಾರಿಸಿದ ನಂತರ ಅಲ್ರೀ ಹೋದವಾರ ಮಧ್ಯಾಹ್ನ ಅಪಘಾತ ಮಾಡಿಬಿಟ್ಟು ಮಾನವೀಯತೆ ದೃಷ್ಟಿಯಿಂದ ಆ ಮನುಷ್ಯನಿಗೆ ಏನಾಯ್ತು ಅಂತನೂ ನೋಡ್ತೇ ಜರ್ ಅಂತಾ ಗಾಡಿ ಓಡಿಸ್ಕೊಂಡು ಹೋಗ್ಬಿಟ್ರಲ್ಲಾ ನೀವೆಂತಹ ವಿದ್ಯಾವಂತರು ರೀ? ಎಂದಾಗ, ಸುರೇಶನ ಎದೆ ಧಸಕ್ ಎಂದಿತಲ್ಲದೇ, ಬಾಯಿ ಎಲ್ಲಾ ಒಣಗಿ ಹೊಯಿತು. ಸರ್ ನೀವೇನು ಹೇಳ್ತಾ ಇದ್ದೀರಿ ಅಂತ ನನಗೆ ಗೊತ್ತಿಲ್ಲಾ. ನಾನು ಯಾವುದೇ ಅಪಘಾತ ಮಾಡಿಲ್ಲಾ ಎಂದ. ಇನ್ಸೆಪೆಕ್ಟರ್ ಅಲ್ಲೇ ಇದ್ದ ಮತ್ತೊಬ್ಬ ಪೋಲಿಸರನ್ನು ಕರೆದು ಇವರನ್ನು ಮೊನ್ನೆ ಅಕ್ಸಿಡೆಂಟ್ ಆಗಿತ್ತಲ್ಲಾ ಅವರ ಮನೆಗೆ ಕರೆದುಕೊಂಡು ಹೋಗಿ ತೋರಿಸು ಎಂದರು.

ಆತ ಕೂಡಲೇ ಸುರೇಶನ ಗಾಡಿಯಲ್ಲಿ ಹಿಂದೇ ಕುಳಿತುಕೊಂಡು ನಡೀರೀ ಸಾರ್ ಎಂದಾಗ ಮೂಕ ಪ್ರಾಣಿಯಂತೆ ಸುರೇಶ ಅವರು ಹೇಳಿದ ಸಂದು ಗೊಂದಿನಲ್ಲಿಯೇ ಗಾಡಿ ಓಡಿಸುತ್ತಾ ಸಣ್ಣದೊಂದು ಓಣಿಯಲ್ಲಿನ ಮನೆಯ ಮುಂದೆ ನಿಂತರು. ಇಬ್ಬರೂ ಗಾಡಿಯಿಂದ ಇಳಿದು ಆ ಸಣ್ಣ ಶೀಟ್ ಮನೆಗೆ ಹೊಕ್ಕರೇ ಅಲ್ಲೊಬ್ಬ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಕಾಲಿಗೆ ಪ್ಲಾಸ್ಟರ್ ಹಾಕಿಸಿಕೊಂಡು ಮೈ ಕೈಗೆಲ್ಲಾ ಬ್ಯಾಂಡೇಜ್ ಹಾಕಿಸಿಕೊಂಡು ಮಂಚದ ಮೇಲೆ ಮಲಗಿದ್ದರು.. ಸಣ್ಣದಾದ ಮನೆ. ಅದರಲ್ಲೇ ಚಿಕ್ಕದಾದ ಅಡುಗೆ ಮನೆ ಅದರಲ್ಲೇ ಒಂದು ಬಚ್ಚಲು, ಹೀಗೆ ಆ ವ್ಯಕ್ತಿ ಬಡತನದ ಬೇಸಗೆಯಲ್ಲಿ ಬಳಲುತ್ತಿರುವುದೆಲ್ಲವೂ ಒಂದೇ ನೋಟದಲ್ಲಿ ಸುರೇಶನ ಕಣ್ಣಿಗೆ ರಾಚಿತು. ಅಪಘಾತವಾದವರು ನಿದ್ದೆ ಮಾಡುತ್ತಿದ್ದನ್ನು ಗಮನಿಸಿ ಅವರನ್ನೇಕೆ ಎಬ್ಬಿಸುವುದು ಬೇಡ ಎಂದು ನಿರ್ಧರಿಸಿ ಇಬ್ಬರೂ ಪುನಃ ಗಾಡಿ ಹತ್ತಿ ಇನ್ಸ್ಪೆಕ್ಟರ್ ಇದ್ದ ಸ್ಥಳಕ್ಕೇ ಬಂದರು.

ಏನ್ರೀ ನೋಡಿದ್ರೇರೇನ್ರೀ ಅವರನ್ನಾ? ಕಾಲು ಮುರಿದಿದೆ. ಮೈ ಕೈಯೆಲ್ಲಾ ಪೆಟ್ಟಾಗಿದೆ. ಅಷ್ಟು ಜೋರಾಗೇನ್ರೀ ಗಾಡಿ ಓಡ್ಸೋದು? ಎಂದಾಗ, ಮತ್ತೆ ಇಲ್ಲಾ ಸಾರ್ ನಾನು ಮಾಡಿಲ್ಲಾ ಅಂತ ಹೇಳಬೇಕು ಎನ್ನಿಸಿದರೂ ವೃಥಾ ವಿತಂಡವೇಕೆ ಎಂದು ಭಾವಿಸಿ, ಸಾರ್ ಈ ಅಪಘಾತ ಯಾವಾಗ ಎಷ್ಟು ಹೊತ್ತಿಗೆ ಆಯ್ತು ಅಂತಾ ತಿಳಿಸ್ತೀರಾ ಎಂದು ಕೇಳಿದ. ಒಂದು ವಾರದ ಹಿಂದೆ ಮಧ್ಯಾಹ್ನ ಸರಿ ಸುಮಾರು ಒಂದೂವರೆ ಯಿಂದ ಎರಡು ಗಂಟೆಯ ಸಮಯದಲ್ಲಿ ಅಪಘಾತ ಆಯ್ತು. ರಸ್ತೆ ದಾಟುತ್ತಿದ್ದ ಆ ವ್ಯಕ್ತಿಗೆ ನಿಮ್ಮ ಗಾಡಿಯಿಂದ ಗುದ್ದಿ ಜನಾ ಕೂಗಿ ಕೊಳ್ಳುತ್ತಿದ್ದರೂ ಯಾರನ್ನೂ ಗಮನಿಸದೇ ಜೋರಾಗಿ ಗಾಡಿ ಓಡಿಸ್ಕೊಂಡ್ ಹೋಗಿದ್ದಕ್ಕೆ ನಾಚ್ಕೆ ಆಗಬೇಕು ನಿಮ್ಮಂತಹವರಿಗೆ. ಯಾರೋ ನಿಮ್ಮ ಗಾಡಿ ನಂಬರ್ ನೋಟ್ ಮಾಡ್ಕೊಂಡು ನನಗೆ ತಿಳಿಸಿದ್ದಲ್ಲದೇ ಆ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ.. ನಾವು ಒಂದು ವಾರದಿಂದ ನಿಮ್ಮನ್ನ ಹುಡುತ್ಕಾ ಇದ್ವೀ. ಇವತ್ತು ಸಿಕ್ಕಿ ಬಿದ್ರೀ ಎಂದಾಗ, ಸುರೇಶನಿಗೆ ನಡೆದಿರಬಹುದಾದ ಎಲ್ಲಾ ಘಟನೆ ಮತ್ತು ರಮೇಶ ಏಕೆ ರಜಾ ಹಾಕಿದ್ದ ಎನ್ನುವುದೆಲ್ಲವೂ ಅರ್ಥವಾಯಿತು.

ಸರ್ ನಮ್ಮ ಕಂಪನಿ ಇಲ್ಲೇ ಹತ್ತಿರದಲ್ಲಿದೆ. ಬನ್ನಿ ಸಾರ್ ಅಲ್ಲೇ ಕುಳಿತು ಮಾತನಾಡೋಣ ರಸ್ತೆಯಲ್ಲೇಕೆ ಎಂದು ಇಬ್ಬರೂ ಕಛೇರಿಗೆ ಬಂದು ಅವರನ್ನು ಒಂದು ಕೊಠಡಿಯಲ್ಲಿ ಪೋಲಿಸರನ್ನು ಕುಳ್ಳರಿಸಿ ಕುಡಿಯಲು ಕಾಫಿ ಕೊಡಲು ಮತ್ತೊಬ್ಬ ಆಫೀಸ್ ಬಾಯ್ ಗೆ ಹೇಳಿ ರಮೇಶನನ್ನು ಕರೆದುಕೊಂಡು ಬರಲು ಹೇಳಿದ. ಇದಾವುದನ್ನೂ ಅರಿಯದ ರಮೇಶ ಮೀಟಿಂಗ್ ರೂಮಿಗೆ ಬಂದು ಸುರೇಶ್ ಮತ್ತು ಪೋಲೀಸರನ್ನು ಕಂಡ ಕೂಡಲೇ ತಬ್ಬಿಬ್ಬಾಗಿ ಹೋದ. ಮುಖವೆಲ್ಲಾ ಕಪ್ಪಿಟ್ಟಿತ್ತು. ಅವನ ಕಪ್ಪಿಟ್ಟ ಮುಖ, ತಕ್ಷಣದ ಪ್ರತಿಕ್ರಿಯನ್ನೇ ಗಮನಿಸುತ್ತಿದ್ದ ಸುರೇಶನಿಗೆ ತನ್ನ ಅನುಮಾನವೆಲ್ಲಾ ಪರಿಹಾರವಾಗಿ ಹೋಗಿತ್ತು.

ರಮೇಶಾ.. ಅವತ್ತು ನನ್ನ ಗಾಡಿ ಪಂಚರ್ ಹಾಕಿಸಿಕೊಂಡು ಬರಲು ಹೊದಾಗ ಏನಾಯ್ತು ಅಂತ ನಿಜ ಹೇಳು ಎಂದ. ಇಲ್ಲಾ ಸಾರ್ ಏನು ಆಗ್ಲಿಲ್ವಲ್ಲಾ. ಅವತ್ತು ಇಲ್ಲೇ ಊಟ ಮುಗಿಸಿಕೊಂಡು ನಿಮ್ಮ ಗಾಡಿ ತೆಗೆದುಕೊಂಡು ಪಂಚರ್ ಹಾಕ್ಸಿಕೊಂಡು ಬಂದೇ ಅಷ್ಟೇ ಎಂದ ರಮೇಶ. ಇವರಿಬ್ಬರ ಸಂಭಾಷಣೆಯಿಂದ ಪರಿಸ್ಥಿತಿಯನ್ನು ಅರ್ಥೈಸಿಕೊಂಡ ಇನ್ಸ್ಪೆಕ್ಟರ್, ಏಯ್ ನಿಜಾ ಹೇಳು, ಸುಮ್ಮನೇ ಸುಳ್ಳು ಹೇಳಿದ್ರೇ ಒದ್ದು ಲಾಕಪ್ಪಿಗೆ ಹಾಕ್ಬೀಡ್ತೀವಿ ಅಂತ ತಮ್ಮ ಪೋಲಿಸರ ಗತ್ತಿನಲ್ಲಿ ಬೆದರಿಸಿದಾಗ ನಡೆದದ್ದೆಲ್ಲವನ್ನೂ ಒಪ್ಪಿಕೊಂಡ.

ದುರಾದೃಷ್ಟವಷಾತ್ ರಮೇಶನ ಬಳಿ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ. ರಮೇಶನೇ ಅಪಘಾತ ಮಾಡಿದ್ದಾನೆ ಎಂದು ದೂರು ದಾಖಲಾದಲ್ಲಿ ಇನ್ಶ್ಯೂರೆನ್ಸ್ ಕೂಡಾ ಬರುವುದಿಲ್ಲ ಮತ್ತು ರಮೇಶನಿಗೆ ದಂಡ ಹಾಕುತ್ತಾರೆ ಎಂದು ತಿಳಿದು ಅವನಿಗೆ ಗಾಡಿ ಕೊಟ್ಟ ಕಾರಣ ತಪ್ಪೆಲ್ಲವನ್ನೂ ಸುರೇಶನೇ ಒಪ್ಪಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿತ್ತು. ತನ್ನ ಕೈಯ್ಯಿಂದಲೇ ಅಪಘಾತ ಆದವರಿಗೆ ಚಿಕಿತ್ಸಾ ಹಣ ಕೊಟ್ಟಿದ್ದಲ್ಲದೇ, ಕೋರ್ಟಿನ ಮುಂದೆ ಹೋಗಿ ಹೌದು ಸ್ವಾಮೀ ತಿಳಿಯದೇ ನಾನೇ ಅಪಘಾತ ಮಾಡಿ ಬಿಟ್ಟೇ ಎಂದು ತಪ್ಪು ಕಾಣಿಕೆ ಕೊಟ್ಟಿದ್ದಲ್ಲದೇ, ಈ ಪ್ರಕರಣವನ್ನು ಸುಗಮವಾಗಿ ಸುಖಾಂತ್ಯ ಮಾಡಿದ ಪೋಲೀಸರಿಗೂ ಕಪ್ಪ ಕಾಣಿಕೆ ಕೊಟ್ಟು ಬರುವಷ್ಟರಲ್ಲಿ ಮೂವತ್ತು ನಲವತ್ತು ಸಾವಿರ ಹಣ ಕೈ ಬಿಟ್ಟಿದ್ದಲ್ಲದೇ, ಅನಾವಶ್ಯಕವಾದ ಇಂತಹ ಪರಿಸ್ಥಿತಿಯಿಂದಾಗಿ ನಲುಗಿ ಹೈರಾಣಾಗಿ ಹೋಗಿದ್ದ. ಈ ಕುರಿತಂತೆ ಕೋರ್ಟಿನಲ್ಲಿ ಅನೇಕ ವರ್ಷಗಳ ಕಾಲ ವಿಚಾರಣೆ ನಡೆದು ಅಪಘಾತ ಆಗಿದ್ದವರಿಗೆ ಮೂಗಿಗೆ ತುಪ್ಪಾ ಸವರಿದಂತೆ ಅಲ್ಪ ಸ್ವಲ್ಪ ಪರಿಹಾರ ಕೊಟ್ಟರಂತೆ ಎಂದು ಯಾರಿಂದಲೂ ತಿಳಿದು ಬಂದಿತ್ತು.

ಇತ್ತೀಚಿನ ದಿನಗಳಲ್ಲಂತೂ ರಸ್ತೆ ಅಪಘಾತದ ನಿಯಮಗಳು ಬಹಳ ಕಠಿಣವಾಗಿದ್ದು ಲೈಸೆನ್ಸ್ ಇಲ್ಲದೇ ಗಾಡಿ ಓಡಿಸಿ ಅಪಘಾತ ಮಾಡಿದಲ್ಲಿ ಗಾಡಿಯ ಮಾಲಿಕರಿಗೇ ಕಠಿಣಾತೀ ಕಠಿಣ ಶಿಕ್ಷೆ ಕೊಡುವ ಕಾನೂನು ಜಾರಿಯಲ್ಲಿದೆ. ಹಾಗಾಗಿ ಎಷ್ಟೇ ತಿಳಿದವರಾಗಿದ್ದರೂ ಮತ್ತೊಬ್ಬರಿಗೆ ನಿಮ್ಮ ಗಾಡಿಯನ್ನು ಕೊಡುವ ಮುಂಚೆ ಸ್ವಲ್ಪ ಜಾಗೃತಿ ವಹಿಸುವ ಮೂಲಕ ಈ ರೀತಿಯ ಅಭಾಸಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ

ಏನಂತೀರೀ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s