ಮನೆಯಲ್ಲಿರುವ ಚಿಕ್ಕ ಮಕ್ಕಳು ಮನೆಯಲ್ಲಿರುವ ಅಜ್ಜಿ ತಾತ, ಅಪ್ಪಾ ಅಮ್ಮಾ ಅಣ್ಣ ಅಕ್ಕಾ ಅವರನ್ನು ನೋಡಿಯೇ ಕಲಿತುಕೊಳ್ಳುತ್ತಾರೆ. ಹಾಗಾಗಿಯೇ ಚಿಕ್ಕ ಮಕ್ಕಳ ಮುಂದೆ ಸದಾ ಕಾಲವೂ ಸಾಧ್ಯವಾದಷ್ಟೂ ಒಳ್ಳೆಯ ಸಂಸ್ಕಾರವಂತರಾಗಿಯೇ ವ್ಯವಹರಿಸುವುದನ್ನು ಎಲ್ಲೆಡೆಯಲ್ಲಿಯೂ ನೋಡಬಹುದಾಗಿದೆ. ಚಿಕ್ಕ ಮಕ್ಕಳೂ ತಮಗೇ ಅರಿವಿಲ್ಲದಂತೆಯೇ ಮನೆಯಲ್ಲಿರುವ ದೊಡ್ಡವರ ಸ್ವಭಾವವನ್ನು ಯಥವತ್ತಾಗಿ ಅಳವಡಿಸಿಕೊಂಡಿರುತ್ತಾರೆ. ಅಂತಹದೇ ಒಂದು ಸುಂದರ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಮನಸ್ಸಾಗುತ್ತಿದೆ.
ಹೇಳಿ ಕೇಳಿ ನಮ್ಮದು ಸಂಪ್ರದಾಯಸ್ಥ ಕುಟುಂಬ. ಕಲೆ, ಸಂಗೀತ ಮತ್ತು ಸಾಹಿತ್ಯ ಎನ್ನುವುದು ನಮ್ಮ ಕುಟುಂಬದಲ್ಲಿ ಹಾಸು ಹೊಕ್ಕಾಗಿದೆ. ಇವೆಲ್ಲವೂ ನಮ್ಮ ಹಿರಿಯರಿಂದ ಬಂದ ಬಳುವಳಿ ಎಂದರೂ ತಪ್ಪಾಗಲಾರದು. ತಾತನಿಂದ ಅಪ್ಪಾ ಸಂಗೀತ, ಸಾಹಿತ್ಯ ಮತ್ತು ಗಮಕ ಕಲೆಯನ್ನು ಕಲಿತರೇ, ನನಗೆ ಭಗವದ್ಗೀತೆಯ ಧ್ಯಾನ ಶ್ಲೋಕ ಕಲಿಸಿದ್ದೇ ನಮ್ಮ ತಾತನವರು. ಇನ್ನು ತಾತ ಮತ್ತು ತಂದೆಯವಂತೆ ಗಮಕ ಕಲೆಯ ಪದ್ಯ ಒಲಿಯದಿದ್ದರೂ ಗದ್ಯದ ಬರವಣಿಗೆ ಬಂದಿರುವುದು ತಾತ ಮತ್ತು ಅಪ್ಪನಿಂದಲೇ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಿದೆ. ನಾವು ಚಿಕ್ಕವರಿದ್ದಾಗ ಈಗಿನಂತೆ ಟಿವಿ ಇರಲಿಲ್ಲ. ವಿಡೀಯೋ ಗೇಮ್ ಮತ್ತು ಮೊಬೈಲ್ ಗೇಮ್ಗಳ ಕಲ್ಪನೆಯೇ ಇರಲಿಲ್ಲ.
ಸಂಜೆ 6:30 ಕ್ಕೆ ಸರಿಯಾಗಿ ಕೈ ಕಾಲು ಮುಖ ತೊಳೆದುಕೊಂಡು ಹಣೆಗೆ ಕುಂಕುಮ ಇಟ್ಟುಕೊಂಡು ದೇವರ ಮುಂದೆ ಕುಳಿತುಕೊಂಡು ಮಕ್ಕಳೆಲ್ಲರೂ ಬಾಯಿ ಪಾಠ ಒಪ್ಪಿಸಲೇ ಬೇಕಿತ್ತು. ಸಣ್ಣ ಸಣ್ಣ ಶ್ಲೋಕಗಳಿಂದ ಹಿಡಿದು, 1-20ರ ವರೆಗಿನ ಮಗ್ಗಿ, ಎಲ್ಲಾ ವಾರಗಳು, ಮಾಸಗಳು, ನಕ್ಷತ್ರಗಳು, ತಿಥಿ ಹೀಗೆ ಎಲ್ಲವನ್ನೂ ಕಂಠಸ್ಥ ಮಾಡಿಸಿದ್ದರು. ನನಗೆ ಇನ್ನೂ ಚೆನ್ನಾಗಿ ನೆನಪಿರುವಂತೆ ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ ಹೇಳಿದ ನಂತರ ಶುಕ್ರವಾರ, ಶನಿವಾರ ಮತ್ತು ಭಾನುವಾರ ಎಂದು ಹೇಳಿ ಗುರುವಾರವನ್ನೇ ಅದೇಕೋ ಏನೋ ಮರೆತು ಬಿಡುತ್ತಿದ್ದೆ. ನನಗೆ ಗುರುವಾರವನ್ನು ನೆನಪಿಸಲು ಪಕ್ಕದ ಮನೆಯ ಗುರುವನ್ನು ನೆನಪಿಸಿಕೊಳ್ಳೋ, ನಿಮ್ಮ ಶಿಶುವಿಹಾರ ಟೀಚರ್ ನೆನಪಿಸಿಕೊಳ್ಳೋ ಎಂದು ಅದೆಷ್ಟು ಸಾರಿ ತಿದ್ದಿ ತೀಡಿ ಕಡೆಗೂ ಗುರುವಾರವನ್ನು ನನ್ನ ಸ್ಮೃತಿ ಪಟಲದಲ್ಲಿ ಅಚ್ಚಳಿಯದೇ ಇರುವಂತೆ ಮಾಡುವುದಕ್ಕೆ ನನ್ನ ಅಪ್ಪಾ ಅಮ್ಮಾ ಪಟ್ಟ ಪರಿಶ್ರಮ ಇನ್ನೂ ಹಚ್ಚಹಸಿರಾಗಿಯೇ ಇದೆ.
ನಂತರ ಅಂದಿನ ದಿನದ ಮನೆಪಾಠವನ್ನೆಲ್ಲಾ ಮುಗಿಸಿದ ನಂತರ ರಾತ್ರಿ 9ಕ್ಕೆ ಸರಿಯಾಗಿ ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡಿದ ನಂತರ 9.30ಕ್ಕೆ ಹಾಸಿಗೆ ಹಾಸಿ, ಪ್ರತಿದಿನವೂ ತಪ್ಪದೇ ರಾಮಾಯಣ, ಮಹಾಭಾರತ, ಮತ್ತು ದೇಶಭಕ್ತರ ಕಥೆಗಳನ್ನು ತಂದೆಯವರಿಂದ ಕೇಳಿದ ನನೆಪು ಇನ್ನು ಅಚ್ಚಳಿಯದೇ ಉಳಿದಿದೆ. ಮನುವಿನಿಂದ ರಾಮಾಯಣ ಆರಂಭವಾಗಿ ಲವಕುಶವರೆಗೂ ಮುಗಿಸುವಷ್ಟರಲ್ಲಿ ಐದಾರು ತಿಂಗಳುಗಳಾಗುತ್ತಿತ್ತು ನಂತರ ಶಂತನುವಿನಿಂದ ಆರಂಭವಾಗುವ ಮಹಾಭಾರತ ನಾನಾ ಕಥೆ ಉಪಕಥೆಗಳಿಂದ ಎಂಟು ಹತ್ತು ತಿಂಗಳವರೆಗೂ ಸಾಗುತ್ತಿತ್ತು. ಇದಾದ ನಂತರ ಮತ್ತೆ ರಾಮಾಯಣ ಆರಂಭ ಹೀಗೆ ಅದೆಷ್ಟು ಬಾರಿ ಹೇಳಿದ್ದಾರೋ ಲೆಕ್ಕವೇ ಇಟ್ಟಿರಲಿಲ್ಲ. ಅವರು ಪ್ರತೀ ಬಾರೀ ಹೇಳುವಾಗಲೂ ವಿಭಿನ್ನ ರೀತಿಯಾಗಿ ಕುತೂಹಲಕಾರಿಯಾಗಿ ಹೇಳುತ್ತಿದ್ದದ್ದಲ್ಲದೇ ಅಂದು ಕೇಳಿದ ಕಥೆಯ ಸಾರಾಂಶವನ್ನು ನಾವು ಪುಸ್ತಕವೊಂದರಲ್ಲಿ ಬರೆದಿಡಬೇಕಿತ್ತು. ಮಾರನೇಯ ದಿನ ಹಿಂದಿನ ದಿನದ ಸಾರಾಂಶ ಓದಿಸಿದ ನಂತರವೇ ಕಥೆಯನ್ನು ಮುಂದುವರೆಸುವ ಮೂಲಕ ಆ ಎಲ್ಲಾ ಕಥೆಗಳು ಪುಸ್ತಕದಿಂದ ನಮ್ಮ ಮಸ್ತಕಕ್ಕೆ ಅಚ್ಚಾಗುವಂತೆ ಮಾಡಿದ್ದರು ನಮ್ಮ ತಂದೆಯವರು.
ಇಷ್ಟೆಲ್ಲಾ ಪೀಠಿಕೆ ಏಕೆ ಹೇಳ ಬೇಕಾಯಿತೆಂದರೆ ಮೊನ್ನೆ ನಡೆದ ಸಂಕ್ರಾಂತಿಯಂದು ನಮ್ಮಕಿ ಅವರೇಕಾಯಿ, ಸಿಹಿಗೆಣಸು ಮತ್ತು ಹಸೀ ಕಡಲೇ ಕಾಯಿಯನ್ನು ಬೇಯಿಸಿಟ್ಟಿದ್ದರು. ಬೇಯಿಸಿದ ಗೆಣಸು ಮತ್ತು ಅವರೇ ಕಾಯಿಯನ್ನು ಹಬ್ಬದ ದಿನದಂದೇ ತಿಂದಿದ್ದೆನಾದರೂ ಕಡಲೇಕಾಯಿ ಬಿಡಿಸಿಕೊಂಡು ತಿನ್ನುವ ಪುರುಸೊತ್ತಿರದೇ ಹಾಗೆಯೇ ಸುಮ್ಮನಾಗಿದ್ದೆ. ಪುರುಸೊತ್ತು ಇಲ್ಲಾ ಎನ್ನುವುದಕ್ಕಿಂತಲೂ ಕಡಲೇಕಾಯಿ ಸುಲಿದು ತಿನ್ನಲು ಸೋಮಾರಿತನ ಎಂದರೂ ತಪ್ಪಾಗದು. ಜನವರಿ 15 ರಂದು ಸಂಜೆ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಬೈಠಕ್ ಮುಗಿಸಿ ಮನೆಗೆ ಬಂದು ಕೈಕಾಲು ತೊಳೆದುಕೊಂಡು ಊಟಕ್ಕೆ ಕುಳಿತುಕೊಂಡಾಗ ಒಂದು ಬಟ್ಟಲು ಬೇಯಿಸಿದ ಬಿಡಿಸಿದ ಕಡಲೇ ಕಾಯಿ ಬೀಜಗಳನ್ನು ನನ್ನ ಮುಂದಿಟ್ಟಾಗಾ ನನಗೆ ಸಂತೋಷ ಮತ್ತು ಆಶ್ಚರ್ಯವಾಯಿತು. ಅರೇ!! ನೀನಾ ಇಷ್ಟೋಂದು ಕಡಲೇ ಕಾಯಿಬೀಜವನ್ನು ಸುಲಿದಿದ್ದು? ಎಂದು ಮಡದಿಯನ್ನು ಕೇಳಿದರೇ ಇಲ್ಲಾ, ನಿಮ್ಮಪ್ಪ ಬಿಡಿಸಿಟ್ರೂ ಎಂದಾಗ, ಅರೇ ಇದೇನಿದು ಹೀಗೆ ಬಯ್ತಾ ಇದ್ದಾಳಪ್ಪಾ ಎಂದು ಕೊಂಡೆ. ಕೂಡಲೇ ನನ್ನ ಭಾವನೆಗಳನ್ನು ಅರ್ಧ ಮಾಡಿಕೊಂಡ ನನ್ನಾಕಿ ಅವರ ತಾತನ ತದ್ರೂಪು ನಿಮ್ಮ ಮಗ ನಿಮಗೇ ಅಂತ ಬಿಡಿಸಿ ಇಟ್ಟಿದ್ದಾನೇ ನೋಡಿ ಎಂದಾಗ, ನನಗೇ ಅರಿವಿಲ್ಲದಂತೆಯೇ ಗಂಟಲು ಬಿಗಿಯಾಗಿ ಹೃದಯ ತುಂಬಿ ಹೋಗಿ ಮಾತೇ ಬಾರದಂತಾಯಿತು. ಕೂಡಲೇ ಮಗನಿಗೆ ಧನ್ಯವಾದಗಳನ್ನು ಹೇಳಿದಾಗ ಅವನಿಗೂ ಆಶ್ವರ್ಯ.
ನಿಜ ಹೇಳಬೇಕೆಂದರೆ, ನಮ್ಮನೆಯಲ್ಲಿ ಕಡಲೇಕಾಯಿ ತಂದಾಗ ಅಥವಾ ದೂರ ಪ್ರಯಾಣದ ಸಮಯದ ಮಧ್ಯದಲ್ಲಿ ಕಡಲೇ ಕಾಯಿಯನ್ನು ಕೊಂಡಾಗಲೆಲ್ಲಾ ನಮ್ಮ ತಂದೆಯವರು, ಅತ್ಯಂತ ಜತನದಿಂದ ಕಡಲೇಕಾಯಿಗಳನ್ನು ಬಿಡಿಸಿ, ವಾಹನ ಚಲಾಯಿಸುತ್ತಿದ್ದ ನನಗೇ ಮಗೂ ತಗೊಳ್ಳೋ ಎಂದು ಕೊಡುತ್ತಿದ್ದರು. ಬಹುಶಃ ತಾತನನ್ನೂ ನೋಡಿಯೋ ಇಲ್ಲವೇ ವಂಶವಾಹಿಯಾಗಿಯೋ ಅವರ ಗುಣಗಳು ನನ್ನ ಮಗನಲ್ಲೂ ಹಾಗೆಯೇ ಹರಿದು ಬಂದಿರುವುದಕ್ಕೆ ಹೃದಯಸ್ಪರ್ಶಿ ಪ್ರಸಂಗ ಸಾಕ್ಷಿಯಾಯಿತು.
ಸುಮಾರು ಹದಿನಾಲ್ಕು- ಹದಿನೈದು ವರ್ಷಗಳ ಕಾಲ ತಾತನ ಆರೈಕೆ ಪಡೆಯುವ ಅಪೂರ್ವ ಅವಕಾಶ ನಮ್ಮ ಮಕ್ಕಳಿಗೆ ಒದಗಿ ಬಂದಿದ್ದು ಅವರ ಸುಕೃತವೇ ಸರಿ. ನಮಗೆ ಪುರಾಣ ಕಥೆಗಳನ್ನು ಹೇಳಿದಂತೆಯೇ ಮೂಮ್ಮಕ್ಕಳಿಗೂ ಇಡೀ ರಾಮಾಯಣ ಮತ್ತು ಮಹಾಭಾರತ, ಭಗವದ್ಗೀತೆ ಶ್ಲೋಕಗಳಲ್ಲದೇ ಇನ್ನೂ ಹತ್ತು ಹಲವಾರು ಶ್ಲೋಕಗಳನ್ನು ಧಾರೆ ಎರೆದಿದ್ದಾರೆ. ನಮ್ಮ ಇಬ್ಬರು ಮಕ್ಕಳು ಎಂದಿಗೂ ಸಹಾ ರಾಮಾಯಣ ಮತ್ತು ಮಹಾಭಾರತದ ಯಾವುದೇ ಕಥೆ ಅಥವಾ ಅಲ್ಲಿರುವ ಪಾತ್ರಗಳನ್ನು ಥಟ್ಟನೇ ಹೇಳುತ್ತಾರೆ ಎನ್ನುವ ಹೆಮ್ಮೆ ನಮಗಿದೆ ಮತ್ತು ಅದರ ಸಂಪೂರ್ಣ ಶ್ರೇಯ ಅವರ ಅಜ್ಜಿ ಮತ್ತು ತಾತನವರಿಗೇ ಸಲ್ಲುತ್ತದೆ
ಮಗಳು ಭಾಗಶಃ ಅಜ್ಜಿಯ ಗುಣಗಳನ್ನೇ ಹೋಲುವಂತಿದ್ದರೆ, ಮಗ ಮಾತ್ರಾ ಗುಣ, ನಡವಳಿಕೆ, ಆಲೋಚನೆ ಎಲ್ಲದ್ದರಲ್ಲೂ ತಾತನದ್ದೇ ತದ್ರೂಪು. ಅವರಂತೆಯೇ, ಯಾವುದೇ ವಿಷಯವನ್ನು ಒಮ್ಮೆ ಕೇಳಿದರೆ ಸಾಕು ನೆನಪಿನಲ್ಲಿ ಇಟ್ಟು ಕೊಳ್ಳುವ, ತಂದೆಯವರ ಜೊತೆ ಮೈಸೂರಿನ ಅರಮನೆಯ ಸಂಗೀತ ಕಛೇರಿಯಲ್ಲಿ ಮೋರ್ಚಿಂಗ್ (ಅತ್ಯಂತ ಕ್ಲಿಷ್ಟಕರವಾದ ತಾಳವಾದ್ಯ) ನುಡಿಸುವುದನ್ನು ನೋಡಿ, ಆಕರ್ಷಿತರಾಗಿ ತಾವೇ ಸ್ವತಃ ಮೋರ್ಚಿಂಗ್ ನುಡಿಸುವುದನ್ನು ಕಲಿತಂತೆ ಅವರ ಮೊಮ್ಮಗ ಇಷ್ಟ ಪಟ್ಟು ಕಷ್ಟ ಪಟ್ಟು ಕೀಬೋರ್ಡ್ ನುಡಿಸುವುದನ್ನು ಕರಗತ ಮಾಡಿಕೊಂಡಿದ್ದಾನೆ. ಅವನ ಆಲೋಚನಾ ಲಹರಿಗಳು, ಅವನು ಬೆನ್ನಹಿಂದೆ ಕೈ ಕಟ್ಟಿ ನಡೆಯುವುದು, ಟಿವಿ ನೋಡುವಾಗ. ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುವ ಭಂಗಿ, ಸದಾ ಯಾವುದೋ ಹಾಡನ್ನು ಗುನುಗುತ್ತಿರುವುದು ಇಲ್ಲವೇ ತನ್ನಷ್ಟಕ್ಕೆ ತಾನೇ ಸಣ್ಣದಾಗಿ ವಿಸಿಲ್ ಹಾಕುವುದು ಹೀಗೆ ಎಲ್ಲದರಲ್ಲೂ ತಾತನದ್ದೇ ಅನುಕರಣೆ.
ಈ ಎಲ್ಲಾ ಕಾರಣಗಳಿಂದಾಗಿ ನಮ್ಮ ತಂದೆ ತಾಯಿಯರು ಇಂದು ನಮ್ಮನ್ನಗಲಿದ್ದರೂ ಅವರನ್ನು ಅವರ ಪ್ರತಿರೂಪಗಳಾದ ಅವರ ಮೊಮ್ಮಗಳು ಮತ್ತು ಮೊಮ್ಮಗನ ರೂಪದಲ್ಲಿ ಕಾಣುತ್ತಿದ್ದೇವೆ. ಮಗಳು ಯಾವುದೋ ಸಣ್ಣ ಕಾರಣಕ್ಕೆ ಸರ್ ಎಂದು ಕೋಪ ಮಾಡಿಕೊಂಡು ಅಷ್ಟೇ ವೇಗದಲ್ಲಿ ಜರ್ ಎಂದು ಕೋಪ ತಣ್ಣಗಾದಾಗ ನಾವು ಅವಳಿಗೆ ಏನನ್ನೂ ಹೇಳದೇ, ಹಾಂ ಗೊತ್ತಾಯ್ತು, ಉಮಾಜ್ಜಿ ಮೈ ಮೇಲೆ ಬಂದು ಹೊದ್ರೂ ಅಂತಾ ರೇಗಿಸುತ್ತೇವೆ. ಅದೇ ರೀತಿ ನಮ್ಮ ಕೋಣೆಯಲ್ಲಿ ನಾನೂ ಮತ್ತು ನಮ್ಮಾಕಿ ಯಾವುದೋ ಗಹನವಾದ ವಿಷಯದ ಬಗ್ಗೆ ಮಾತನಾಡುತ್ತಿದ್ದರೆ, ದೂರದ ತಾತನ ಕೋಣೆಯಲ್ಲಿಯೇ ಕುಳಿತುಕೊಂಡು ಅಲ್ಲಿಂದಲೇ ಇದ್ದಕ್ಕಿದ್ದಂತೆಯೇ ನಾವು ಮಾತನಾಡುತ್ತಿರುವ ವಿಷಯಕ್ಕೆ ತನ್ನ ಅಭಿಪ್ರಾಯವನ್ನು ಅಲ್ಲಿಂದಲೇ ತಿಳಿಸಿದಾಗ ಸಾಕು ಸಾಕು ಶಿವಮೂರ್ತಿಗಳೇ, ನೀವು ನಿಮ್ಮ ಪಾಡಿಗೆ ಓದಿಕೊಳ್ಳಿ ಎಂದು ಪ್ರೀತಿಯಿಂದ ಕಿಚಾಯಿಸುವುದೂ ಉಂಟು.
ಅದಕ್ಕೇ ಹೇಳೋದು ಒಂದು ಕುಟುಂಬ ಎಂದರೆ ಅದರಲ್ಲಿ ಕೇವಲ ಗಂಡ ಹೆಂಡತಿ ಮತ್ತು ಮಕ್ಕಳಲ್ಲದೇ, ಆ ಕುಟುಂಬದಲ್ಲಿ ಹಿರಿಯರೂ ಇದ್ದಲ್ಲಿ ನಿಜ ರೂಪದಲ್ಲಿ ಮನೆಯೇ ಮೊದಲ ಪಾಠ ಶಾಲೆಯಾಗಿ ಮಕ್ಕಳಿಗೆ ನಮ್ಮ ಸಂಪ್ರದಾಯ ಮತ್ತು ಸಂಸ್ಕಾರಗಳು ರೂಢಿಯಾಗುತ್ತದೆ. ತಂದೆ ತಾಯಿಯರಿಬ್ಬರೂ ಕೆಲಸಕ್ಕೆ ಹೋಗುವವರಾದರೆ ದಯವಿಟ್ಟು ಮಕ್ಕಳನ್ನು Day care or Play homeಗಳಿಗೆ ಸೇರಿಸಿ ಆಯಾಗಳ ಕೈಯ್ಯಲ್ಲಿ ನಮ್ಮ ಮಕ್ಕಳನ್ನು ಬೆಳಸದೇ, ನಮ್ಮದೇ ಕುಟುಂಬದ ಹಿರಿಯರ ಅಕ್ಕರೆಯಲ್ಲಿ ಬೆಳೆಯುವಂತಾದಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಪರೋಕ್ಷವಾಗಿ ಹೇಳಿಕೊಟ್ಟಂತಾಗುತ್ತದೆ. ಅದಕ್ಕೇ ಅಲ್ಲವೇ ನಮ್ಮ ಪೂರ್ವಜರು ಹೇಳುತ್ತಿದ್ದದ್ದು ವಂಶ ನೋಡಿ ಸಂಬಂಧ ಬೆಳೆಸು ಎಂದು.
ಏನಂತೀರೀ?
ನಿಮ್ಮವನೇ ಉಮಾಸುತ
ಎಷ್ಟು ಸುಂದರವಾಗಿ ನಿಮ್ಮ ಬಾಲ್ಯವನ್ನು
ನಮ್ಮ ಜೊತೆಗೆ ಹಂಚಿಕೊಂಡಿದ್ದೀರಿ
LikeLiked by 1 person
ಎಷ್ಟು ಸುಂದರವಾಗಿ ನಿಮ್ಮ ಬಾಲ್ಯವನ್ನು ಹಂಚಿಕೊಂಡಿದ್ದೀರಿ
LikeLiked by 1 person