ಇನ್ನೂ ಸ್ವಲ್ಪ ಕುಡಿಯೋದಿಕ್ಕೆ ನೀರು ಕೊಡ್ತೀರಾ?

ಕನ್ನಡಿಗರು ಎಷ್ಟರ ಮಟ್ಟಿಗಿನ ವಿಶಾಲ ಹೃದಯವವರು ಎಂದರೆ, ಕುಡಿಯಲು ನೀರು ಕೇಳಿದರೆ, ನೀರಿನ ಜೊತೆ ಬಾಯಾರಿಕೆಯನ್ನು ಶೀಘ್ರವಾಗಿ ತಣಿಸುವ ಬೆಲ್ಲವನ್ನೂ ನೀಡುತ್ತಾರೆ ಎಂಬ ಮಾತಿದೆ. ಆ ಮಾತಿಗೆ ಅನ್ವಯವಾಗುವಂತಹ ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಅದೊಂದು ದಿನ ಶಂಕರನಿಗೆ ಹುಶಾರಿಲ್ಲದಿದ್ದ ಕಾರಣ ಅವರ ತಾಯಿ ಅವನನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು. ವೈದ್ಯರೂ ಸಹಾ ಭಯ ಪಡುವಂತಹದ್ದೇನೂ ಇಲ್ಲ. ಮನೆಯಲ್ಲಿಯೇ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲಿ. ಈಗ ಕೊಟ್ಟಿರುವ ಆಂಟೀಬಯಾಟಿಕ್ ಸ್ವಲ್ಪ ಸ್ಟ್ರಾಂಗ್ ಆಗಿರುವ ಕಾರಣ ಸ್ವಲ್ಪ ಹಣ್ಣುಗಳು ಮತ್ತು ಎಳನೀರನ್ನು ಕೊಡಿ ಎಂದು ಹೇಳಿದ್ದರು.

ಮಾರನೇಯ ದಿನ ಶಂಕರ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾಗ ಅವನ ಮನೆಯ ಮುಂದಿನ ಚರಂಡಿ ಶುದ್ಧಿ ಮಾಡಲು ಒಂದ ಇಬ್ಬರು ನಗರ ಪಾಲಿಕೆ ಕೆಲಸದವರು ಚರಂಡಿಯನ್ನು ಶುದ್ದಿ ಮಾಡಿದ ನಂತರ, ಅಮ್ಮಾ ಸ್ವಲ್ಪ ಕುಡಿಯಲು ನೀರು ಕೊಡ್ತೀರಾ ಎಂದು ಕೇಳುತ್ತಾರೆ. ಆಗ ಮತ್ತಾವುದೋ ಕೆಲಸದಲ್ಲಿ ಮಗ್ನರಾಗಿದ್ದ ಶಂಕರರ ತಾಯಿ ಅವರ ಮಗಳಿಗೆ ಕುಡಿಯಲು ನೀರು ತಂದು ಕೊಡಲು ಹೇಳುತ್ತಾರೆ. ಆಕೆ ಕೂಡಲೇ ಅಡುಗೆ ಮನೆಗೆ ಹೋಗಿ, ಒಳಗಿನಿಂದ ಕುಡಿಯಲು ಒಂದು ಲೋಟ ಮತ್ತು ನೀರಿನ ತಂಬಿಗೆ ತಂದು ಆತನಿಗೆ ನೀರು ಕೊಡುತ್ತಾಳೆ. ಒಂದು ಲೋಟ ನೀರು ಚಪ್ಪರಿಸಿಕೊಂಡು ಕುಡಿದ ಆತ, ಅಮ್ಮಾ ಇನ್ನೂ ಸ್ವಲ್ಪ ಕುಡಿಯೋದಿಕ್ಕೆ ನೀರು ಕೊಡ್ತೀರಾ? ಅಂದ ಕೂಡಲೇ ಅವಳು ಇನ್ನೂ ಸ್ವಲ್ಪ ನೀರನ್ನು ಲೋಟಕ್ಕೆ ಹಾಕಿ ಇಡೀ ತಂಬಿಗೆಯನ್ನೇ ಖಾಲೀ ಮಾಡ್ತಾಳೆ. ಹೊಟ್ಟೇ ತುಂಬಾ ನೀರನ್ನು ಕುಡಿದ ಮೇಲೆ ಅತ, ಅಮ್ಮಾ ನಿಮ್ಮನೇ ನೀರು ತುಂಬಾನೇ ಸಿಹಿಯಾಗಿ ಚೆನ್ನಾಗಿತ್ತು ಎಂದಾಗ ಶಂಕರನ ತಾಯಿ ಮಗಳ ಕೈಯ್ಯಲ್ಲಿದ್ದ ತಂಬಿಗೆ ನೋಡಿ ಅಯ್ಯೋ ರಾಮಾ ಇದೇನೇ ಮಾಡ್ದೇ? ಎಂದು ಏರು ಧನಿಯಲ್ಲಿ ಹೇಳುತ್ತಾ ಮಗಳನ್ನು ಮನೆಯ ಒಳಗೆ ದರ ದರನೆ ಎಳೆದುಕೊಂಡು ಹೋಗಿ, ಎಂತಹ ಕೆಲ್ಸಾ ಮಾಡಿದ್ಯೇ ನೀನು? ಮನೆ ಹಾಳು ಮಾಡ್ಬಿಡ್ತೀಯಾ ಎಂದು ಗದರುತ್ತಾಳೆ.

ನಿಜಕ್ಕೂ ಅದೇನಪ್ಪಾ ಆಗಿತ್ತು ಅಂದರೆ, ಶಂಕರ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾಗ ಮನೆಯ ಮುಂದೆ ಸೈಕಲ್ಲಿನಲ್ಲಿ ಎಳನೀರು ಮಾರಿಕೊಂಡು ಬಂದಿದ್ದನ್ನು ನೋಡಿದ ಅವರ ತಾಯಿ ಎರಡು ಎಳನೀರನ್ನು ಖರೀದಿಸಿ ಅದನ್ನು ಮನೆಯಲ್ಲಿನ ಕುಡಿಯುವ ನೀರಿನ ತಂಬಿಗೆಯಲ್ಲಿ ಹಾಕಿಸಿಕೊಂಡು ಬಂದು ಶಂಕರ ನಿದ್ದೆ ಮಾಡುತ್ತಿದ್ದರಿಂದ ಅವನು ಎದ್ದ ಮೇಲೇ ಎಳನೀರು ಕೊಟ್ಟರಾಯಿತು ಎಂದು ಅಡುಗೆ ಮನೆಯಲ್ಲಿಯೇ ಆ ಎಳನೀರಿನ ತಂಬಿಗೆಯನ್ನಿಟ್ಟು ಮತ್ತಾವುದೋ ಕೆಲಸದಲ್ಲಿ ಮಗ್ನರಾಗಿರುತ್ತಾರೆ.

ಇದಾವುದರ ಅರಿವಿರದ ಶಂಕರ ತಂಗಿ, ನೀರು ತಂದು ಕೊಡು ಎಂದು ಅವರಮ್ಮ ಹೇಳಿದ ಕೂಡಲೇ ಅಡುಗೆ ಮನೆಯಲ್ಲಿದ್ದ ಆ ನೀರಿನ ತಂಬಿಗೆಯಿಂದ ನೀರು ಕೊಟ್ಟಿದ್ದೇ ಇಷ್ಟೆಲ್ಲಾ ಅವಘಡಕ್ಕೆ ಕಾರಣವಾಯಿತು. ಅದಕ್ಕೇ ನಮ್ಮ ಹಿರಿಯರು ಹೇಳಿರೋದು ಎಲ್ಲದ್ದಕೂ ಋಣ ಇರಲೇಬೇಕು ಎಂದು. ಆ ಎಳನೀರಿನ ಮೇಲೆ ಚರಂಡಿ ಶುದ್ಧಿ ಮಾಡುವವನ ಋಣ ಇದ್ದರೆ, ಅದು ಹೇಗೆ ತಾನೇ ಶಂಕರ ಕುಡಿಯಲು ಸಾಧ್ಯ? ಇದಕ್ಕೇ ಹೇಳೋದು ದಾನೇ ದಾನೇ ಪರ್ ಲೀಖಾ ಹೋತಾ ಹೈ, ಖಾನೇ ವಾಲೋಂಕಾ ನಾಮ್ ಅಂತಾ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ಇನ್ನೂ ಸ್ವಲ್ಪ ಕುಡಿಯೋದಿಕ್ಕೆ ನೀರು ಕೊಡ್ತೀರಾ?

Leave a reply to ಶ್ರೀಕಂಠ ಬಾಳಗಂಚಿ Cancel reply