ನನ್ನನ್ನು ವಯಕ್ತಿಕವಾಗಿ ಬಾಲ್ಯದಿಂದಲೂ ಬಲ್ಲ ಮತ್ತು ನನ್ನ ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸುತ್ತಾ ನಮ್ಮ ಕುಟುಂಬಕ್ಕೆ ಆತ್ಮೀಯರಾಗಿದ್ದ ಶ್ರೀ ರಾಜಶೇಖರ್ ಅರ್ಥಾತ್ ಲಂಬೂರಾಜ, ಬೋರ್ವೆಲ್ ರಾಜಾ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಅಕಾಲಿಕವಾಗಿ ನಮ್ಮೆನ್ನೆಲ್ಲಾ ಅಗಲಿದಾಗ ಅವರ ಕುರಿತಂತೆ ಆಧುನಿಕ ಭಗೀರಥ ರಾಜಶೇಖರ್ (ರಾಜ) https://enantheeri.com/2020/10/28/borewell_raja/ಎಂಬ ಲೇಖನವನ್ನು ಬರೆದಿದ್ದೆ. ಆ ಲೇಖನ ಒಂದು ರೀತಿಯ ವೈರಲ್ ಆಗಿ ಸಾವಿರಾರು ಜನರು ಓದಿದ್ದಲ್ಲದೇ ಖುದ್ದಾಗಿ ನನಗೆ ಕರೆ ಮಾಡಿ ರಾಜನ ಅಕಾಲಿಕ ಮರಣಕ್ಕೆ ದುಖಃವನ್ನು ವ್ಯಕ್ತಪಡಿಸಿ, ರಾಜನ ವ್ಯಕ್ತಿತ್ವದ ಕುರಿತಾಗಿ ಬರೆದ ಲೇಖನಕ್ಕೆ ಅಭಿನಂದನೆಯನ್ನೂ ಸಲ್ಲಿಸಿದ್ದರು.
ರಾಜಾ ಬದುಕಿದ್ದಾಗ ನನ್ನ ಲೇಖನಗಳು ಅವರಿಗೆ ಇಷ್ಟವಾದಲ್ಲಿ ಹಲವಾರು ಬಾರಿ ಕರೆ ಮಾಡಿ, ಶ್ರೀಕಂಠಾ… ಚೆನ್ನಾಗಿ ಬರ್ದಿದ್ಯೋ.. ಅಂತ ಎತ್ತರದ ಧ್ವನಿಯಲ್ಲಿ ಅಭಿನಂದಿಸುತ್ತಿದ್ದದ್ದಲ್ಲದೇ, ಮತ್ತಾವುದೋ ವಿಷಯವನ್ನು ಪ್ರಸ್ತಾಪಿಸಿ ಅದರ ಕುರಿತಂತೆ ಲೇಖನ ಬೆರೆಯಲು ಪ್ರೋತ್ಸಾಹಿಸುತ್ತಿದ್ದರು. ಈಗ ರಾಜ ನಮ್ಮೊಂದಿಗೆ ಇಲ್ಲದಿದ್ದರೂ ರಾಜನ ಗುಣ ಅವರ ಕುಟುಂಬದಲ್ಲಿಯೂ ಮುಂದುವರೆದಿದ್ದು, ಇದೇ ತಿಂಗಳ 26 ನೇ ತಾರೀಖು (ದೇಶದ ಗಣತಂತ್ರ ದಿನದಂದು) ರಾಜನ 62ನೇ ಜಯಂತಿಯ ಪ್ರಯುಕ್ತ ರಾಜನ ಸ್ಮರಣೆಯಲ್ಲಿ ರಾಜನ ಕುರಿತಾಗಿ ಬರೆದಿದ್ದ ನನ್ನ ಲೇಖನವನ್ನು ಕನ್ನಡದ ಪ್ರಬುದ್ಧ ಸಾಪ್ತಾಹಿಕವಾದ ವಿಕ್ರಮಕ್ಕೆ ಕಳುಹಿಸಿದ್ದಾರೆ. ಸಂಪಾದಕರೂ ಅ ಲೇಖನವನ್ನು ಮೆಚ್ಚಿ ಈ ವಾರದ ವಿಕ್ರಮದಲ್ಲಿ (ಸ್ವಾಮಿ ಹರ್ಷಾನಂದಜೀ ಮುಖಪುಟ) 15ನೇ ಪುಟದಲ್ಲಿ ಪ್ರಕಟಿಸಿರುವುದನ್ನು ನೋಡಿ ನಿಜಕ್ಕೂ ಭಾವಪರವಶನಾಗಿ ಹೋದೆ. ವಿಕ್ರಮ ಪತ್ರಿಕೆಯಲ್ಲಿ ತಮ್ಮ ಲೇಖನ ಪ್ರಕಟವಾಗ ಬೇಕೆಂಬುದು ಪ್ರತಿಯೊಬ್ಬ ಲೇಖಕರಿಗೂ ತುಡಿತವಿರುತ್ತದೆ. ವಿಕ್ರಮದಲ್ಲಿ ತಮ್ಮ ಲೇಖನ ಪ್ರಕಟವಾದಲ್ಲಿ ಪ್ರತಿಯೊಬ್ಬ ಲೇಖಕರಿಗೂ ಒಂದು ರೀತಿಯ ಸಾರ್ಥಕ ಭಾವನೆ ಮೂಡುತ್ತದೆ ಎಂದರೂ ಅತಿಶಯೋಕ್ತಿಯೇನಲ್ಲ. ಇಂದು ಅಂತಹ ಸಾರ್ಥಕ ಭಾವನೆ ನನ್ನಲ್ಲಿ ಮೂಡಿದೆ.
ವ್ಯಕ್ತಿ ಬದುಕಿದ್ದಾಗ ಮತ್ತೊಬ್ಬರನ್ನು ಪ್ರೋತ್ಸಾಹಿಸುವುದು ಒಂದು ರೀತಿಯಾದರೇ ಆತ ಅಗಲಿದ ನಂತರವೂ ಯಾವುದೋ ರೀತಿಯಲ್ಲಿ ಮತ್ತೊಬ್ಬರ ಜೀವನದಲ್ಲಿ ಸಾರ್ಥಕತೆ ಮೂಡಿಸುತ್ತಾನೆಂದರೆ ಆ ವ್ಯಕ್ತಿಯ ವ್ಯಕ್ತಿತ್ವದ ಹಿರಿಮೆಯನ್ನು ಎತ್ತಿ ತೋರುತ್ತದೆ. ಲೇಖನದಲ್ಲಿಯೇ ತಿಳಿಸಿರುವಂತೆ, ಕೆಯ ನಂತರವೂ ಬಹುಶಃ ನಮ್ಮ ಮತ್ತು ಅವರ ಕುಟುಂಬದ ನಡುವಿನ ನಂಟು ಬಹಳವೇಿ ಇರಬೇಕು, ರಾಜಾ ಅವರ ತಂದೆ ಜಿ.ಕೆ.ರಾವ್ ಮತ್ತು ನಮ್ಮ ತಂದೆ ಶಿವಮೂರ್ತಿಗಳು ಬಿಇಎಲ್ ಕಾರ್ಖನೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ರಾಜಾ ಅವರ ತಾಯಿ, ಅತ್ತಿಗೆ ಮತ್ತು ನಮ್ಮ ತಾಯಿಯವರು ಹಬ್ಬ ಹರಿದಿನಗಳಲ್ಲಿ ಅರಿಶಿನ ಕುಂಕುಮ, ಗೌರೀ ಬಾಗಿಣವನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು. ನಾನು ರಾಜನ ಅಣ್ಣ ಆಶೋಕ್ ಅವರ ಡ್ರಾಯಿಂಗ್ ಬೋರ್ಡ್ ಬಳಸಿಯೇ ನನ್ನ ಓದನ್ನು ಮುಗಿಸಿದ್ದೆ. ಹಿಂದೂ ಪಂಚಾಗದ ಪ್ರಕಾರ ನಮ್ಮ ತಂದೆ ಮತ್ತು ರಾಜಾ ಇಬ್ಬರೂ ಒಂದೇ ದಿನ (ಮೂರು ವರ್ಷಗಳ ಅಂತರ) ಒಂದೇ ರೀತಿಯಲ್ಲಿ ಅಗಲಿರುವುದೂ ಗಮನಾರ್ಹವಾದ ಸಂಗತಿ ಹೀಗೆ ಅನೇಕ ಅವಿನಾಭಾವ ಸಂಬಂಧ ಅನುಬಂಧ ನಮ್ಮಿಬ್ಬರ ಕುಟುಂಬದ ನಡುವೆ ಇದ್ದು ಅದೇ ಸಂಬಂಧವನ್ನು ಅವರ ಮುಂದಿನ ಪೀಳಿಗೆಯವರೂ ಮುಂದುವರೆಸಿಕೊಂಡು ಹೋಗುತ್ತಾ ರಾಜ ಅವರ ಧರ್ಮ ಪತ್ನಿ ಡಾ. ಗೀತಾ ರಾಜಶೇಖರ್ ಮತ್ತು ರಾಜನ ತಮ್ಮ ಸತ್ಯಾ ಮತ್ತು ಸುಧಾ ಬೆಳವಾಡಿಯವರ ಮಗಳು, ಕನ್ನಡ ಚಲನಚಿತ್ರರಂಗದ ಖ್ಯಾತ ನಾಯಕಿ ಸಂಯುಕ್ತಾ ಹೊರನಾಡು ಮೂಲಕ ನನ್ನ ಲೇಖನ ವಿಕ್ರಮ ಪತ್ರಿಕೆಯಲ್ಲಿ ಪ್ರಥಮಬಾರಿಗೆ ಪ್ರಕಟವಾಗಿದೆ.
ನನ್ನ ಬದುಕಿನಲ್ಲೊಂದು ಸಾರ್ಥಕಥೆಯನ್ನು ಮೂಡಿಸಿದ ರಾಜಾ ಅವರ ಕುಟುಂಬಕ್ಕೂ ಮತ್ತು ಲೇಖನವನ್ನು ಪ್ರಕಟಿಸಿದ ವಿಕ್ರಮದ ಸಂಪಾದಕರಿಗೂ ತುಂಬು ಹೃದಯದ ಧನ್ಯವಾದಗಳು.
ನಿಮ್ಮವನೇ ಉಮಾಸುತ
ಅಭಿನಂದನೆಗಳು ಜೀ
LikeLike