ಮನುಷ್ಯ ಸಂಘಜೀವಿ. ಹಾಗಾಗಿ ಒಬ್ಬಂಟಿಯಾಗಿ ಇರಲು ಮನಸ್ಸಾಗದೇ ಕುಟುಂಬವನ್ನು ಬೆಳಸಿಕೊಂಡ. ಹಾಗೆಯೇ ತನ್ನ ಜೊತೆಯಲ್ಲಿ ಹಸುಗಳು, ಎಮ್ಮೆ, ನಾಯಿ, ಬೆಕ್ಕು, ಕೋಳಿ, ಕುರಿ, ಆಡು, ಗಿಳಿ, ಪಾರಿವಾಳಗಳಂತಹ ಸಾಕು ಪ್ರಾಣಿ ಅಥವಾ ಪಕ್ಷಿಗಳನ್ನು ಸಾಕತೊಡಗಿದ. ಈ ಸಾಕು ಪ್ರಾಣಿಗಳು/ಪಕ್ಷಿಗಳು ನ್ನು ತನ್ನ ಹೆತ್ತ ಮಕ್ಕಳಂತೆಯೇ ಜತನದಿಂದ ನೋಡಿಕೊಳ್ಳುತ್ತಿದ್ದ ಕಾರಣ ಅವುಗಳೂ ಸಹಾ ಮನುಷ್ಯನಿಗೆ ಅತ್ಯಂತ ಪ್ರೀತಿಯನ್ನು ತೋರಿಸುತ್ತಿದ್ದವು. ಅದರಲ್ಲಿಯೂ ನಾಯಿಗಳಂತೂ ಅತ್ಯಂತ ನಂಬಿಕಸ್ತ ಪ್ರಾಣಿಗಳೆನಿಸಿ ಮನುಷ್ಯರಿಗೆ ಅತ್ಯಂತ ಪ್ರೀತಿ ಪಾತ್ರರೆನಿಸಿಕೊಂಡವು. ಮಹಾಭಾರತದಲ್ಲಿ ಜೀವಂತವಾಗಿಯೇ ಸ್ವರ್ಗಲೋಕವನ್ನು ತಲುಪಿದ ಧರ್ಮರಾಯನೊಂದಿಗೆ ನಾಯಿಯು ಸಹಾ ಇತ್ತೆಂಬುದನ್ನು ಪುರಾಣಕಥೆಗಳಲ್ಲಿ ಓದಿದ್ದೇವೆ.
ಹಾಗಾಗಿ ಇಂದು ಬಡವ ಬಲ್ಲಿದ ಹಳ್ಳಿ, ದಿಲ್ಲಿ ಎನ್ನುವ ಬೇಧವಿಲ್ಲದೇ ಅವರವರ ಅನುಕೂಲಕ್ಕೆ ತಕ್ಕಂತೆ ನಾಯಿಗಳನ್ನು ಬಹುತೇಕ ಮನೆಗಳಲ್ಲಿ ಸಾಕುವುದನ್ನು ಕಾಣಬಹುದಾಗಿದೆ. ಅವರು ಮನೆಗಳಲ್ಲಿ ಸಾಕಿರುವ ನಾಯಿಗಳ ತಳಿಯನ್ನು ನೋಡಿ ಅವರ ಅಂತಸ್ತನ್ನು ಅಳೆಯಬಹುದಾಗಿದೆ. ಇನ್ನು ಪಟ್ಟಣ ಪ್ರದೇಶಗಳಲ್ಲಿ ಬಹುತೇಕ ಉದ್ಯಾನವನಗಳ ಸುತ್ತ ಮುತ್ತ ಬೆಳ್ಳಂಬೆಳಗ್ಗೆಯೇ ನಾಯಿಗಳನ್ನು ಹಿಡಿದು ಕೊಂಡು ಉಸ್ಸಪ್ಪಾ ಎಂದು ವಾಕಿಂಗ್ ಮಾಡುವ ಸಹಸ್ರಾರು ಮಂದಿಗಳನ್ನು ನೋಡಬಹುದಾಗಿದೆ. ಕೆಲವೊಮ್ಮೆ ಐಶಾರಾಮೀ ಕಾರುಗಳ ಹಿಂದಿನ ಸೀಟಿನಲ್ಲಿ ಕುಳಿತು ಅರ್ಧ ತೆಗೆದ ಕಿಟಕಿಯಾಚೆ ಬಗ್ಗಿ ನೋಡುವ ವಿವಿಧ ಆಕರ್ಷಕ ತಳಿಯ ನಾಯಿಮರಿಗಳನ್ನು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವವರು ನೋಡಿದಾಗ, ಇಂತಹ ಐಶಾರಾಮ್ಯ ಸುಖಃವನ್ನು ಪಡೆಯಲು ಆ ನಾಯಿಗಳು ಹಿಂದಿನ ಜನ್ಮದಲ್ಲಿ ಎಂತಹ ಪುಣ್ಯಮಾಡಿರಬಹುದು. ದೇವರೇ ಮುಂದಿನ ಜನ್ಮದಲ್ಲಿ ನಮ್ಮನ್ನೂ ಅಂತಹ ನಾಯಿಗಳನ್ನಾಗಿ ಮಾಡಪ್ಪಾ ಎಂದು ಕೇಳುಕೊಳ್ಳುವವರಿಗೇನೂ ಕಡಿಮೆ ಇಲ್ಲ.
ನಾಯಿಗಳ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಏಕಪ್ಪಾ ಎಂದರೆ ನಾನು ಚಿಕ್ಕವನಿದ್ದಾಗ ನಮ್ಮ ಅಜ್ಜಿಯ ಮನೆಯಲ್ಲಿಯೂ ಕರಿಯ ಎಂಬ ನಾಯಿ ಇದ್ದು ಬಹಳ ಮುದ್ದಾಗಿತ್ತು ಅದರ ಕುರಿತಂತೆ ಈಗಾಗಲೇ ಬರೆದಿದ್ದೇನೆ. ಸಮಯ ಮಾಡಿಕೊಂಡು ಕರಿಯನ ಲೇಖನವನ್ನು ಓದಿ ಅಂದಿನ ಮತ್ತು ಇಂದಿನ ಕರಿಯನ ವೃತ್ತಾಂತವನ್ನು ಓದಿ ತಿಳಿಯಿರಿ. ಮದುವೆ ಆದಾಗ ಮಡದಿ, ಈ ನಮ್ಮನೆಗೊಂದು ನಾಯಿ ತನ್ರೀ ಎಂದಾಗ, ಅಯ್ಯೋ ಇಬ್ಬರೂ ಕೆಲಸಕ್ಕೆ ಹೋಗ್ತೀವಿ. ಇನ್ನು ಅಪ್ಪಾ ಅಮ್ಮನಿಗೆ ಅದನ್ನೆಲ್ಲಾ ನೋಡಿಕೊಳ್ಳೊದಿಕ್ಕೆ ಆಗೋದಿಲ್ಲಾ ಅಂದರೂ ಬಲವಂತ ಮಾಡಿದ್ದರಿಂದ ಗೆಳೆಯನೊಬ್ಬನಿಗೆ ಕೊಟ್ಟ ಸಾಲದ ಬದಲಿಗೆ ನಾಯಿಯೊಂದನ್ನು ಮನೆಗೆ ತಂದು ಕೆಲದಿನಗಳು ಸಾಕಿದೆವಾದವೂ ಅದೇಕೋ ಸರಿ ಬಾರದೇ, ನಮ್ಮ ಮನೆಗೆ ಹಾಲು ಹಾಕುತ್ತಿದ್ದ ಲೋಕೇಶನಿಗೆ ಕೊಟ್ಟು ಕಳುಹಿಸಿಬಿಟ್ಟಿದ್ದೆವು.
ಮಕ್ಕಳು ದೊಡ್ಡವರಾದ ಮೇಲೆ ಅಪ್ಪಾ ನಮ್ಮನೆಗೊಂದು ನಾಯಿ ತನ್ನಿಪ್ಪಾ ಎಂದು ಪರಿ ಪರಿಯಾಗಿ ಕೇಳಿ ಕೊಂಡರೂ, ಹಿಂದೆ ನಾಯಿ ಸಾಕಲು ಹೋಗಿ ನಾಯಿ ಪಾಡು ಅನುಭವಿಸಿದ್ದ ಕಾರಣ, ಅಯ್ಯೋ ನಮ್ಮ ಮನೆಗೆ ಯಾಕಪ್ಪಾ ನಾಯಿ ಮರಿ? ಒಂದು ಪಮೋರಿಯನ್ (ಮಗಳು) ಮತ್ತು ಒಂದು ಬುಲ್ ಡಾಗ್ (ಮಗ) ಇದ್ದೀರಲ್ಲಾ. ನಿಮ್ಮನ್ನು ಸಾಕೋದೇ ಕಷ್ಟ ಇನ್ನು ಬೇರೆ ನಾಯಿ ಏಕಪ್ಪಾ ಎಂದು ಸುಮ್ಮನೇ ತಳ್ಳಿ ಹಾಕುತ್ತಿದ್ದೆ. ಮೂರ್ನಾಲ್ಕು ವರ್ಷಗಳ ಹಿಂದೆ ಅದೆಲ್ಲಿಂದಲೋ ನಮ್ಮ ಬೀದಿಗೆ ಬಡಕಲಾದ ಕಪ್ಪನೆಯ ನಾಯಿಯೊಂದು ಬಂದಿತ್ತು. ಅದನ್ನು ನೋಡಿ ಕನಿಕರದಿಂದ ಕರಿಯ ಎಂದು ನಾವು ಕರೆದವು. ನೋಡ ನೋಡುತ್ತಿದ್ದಂತೆಯೇ ನಮ್ಮ ನೆರೆಹೊರೆಯ ಅಚ್ಚು ಮೆಚ್ಚಿನ ನಾಯಿಯಾಗಿ ಹೋಯಿತು. ಬೆಳಿಗ್ಗೆ ಒಬ್ಬರ ಮನೆಯಲ್ಲಿ ತಿಂಡಿ ನಮ್ಮ ಮನೆಯಲ್ಲಿ ಬಿಸ್ಕತ್ತು ಮತ್ತು ಹಾಲು, ಮಧ್ಯಾಹ್ನ ಪಕ್ಕದ ಮನೆಯಲ್ಲಿ ಊಟ ಸಂಜೆ, ಮತ್ತೊಬ್ಬರ ಮನೆಯಲ್ಲಿ ಸ್ನಾಕ್ಸ್, ರಾತ್ರೀ ಇನ್ನೊಬ್ಬರ ಮನೆಯಲ್ಲಿ ಊಟ ಹೀಗೆ ಹೊತ್ತು ಹೊತ್ತಿಗೆ ಗಡದ್ದಾಗಿ ತಿಂದು ನಮ್ಮ ಮನೆಯ ಮೆಟ್ಟಿಲ ಕೆಳಗೆ ಬೆಚ್ಚಗೆ ಮಲಗಿ ಗಡವನಾಗಿ ಬೆಳೆದಿತ್ತು. ನನ್ನ ಮಕ್ಕಳಿಗೂ ಮತ್ತು ಕರಿಯನಿಗೂ ಅವಿನಾಭಾವ ಸಂಬಂಧ ಬೆಳೆದಿತ್ತು. ಅದರಲ್ಲೂ ಮಗ ತಾನು ಹೇಳಿದ್ದನ್ನೆಲ್ಲವನ್ನೂ ಮಾಡುವಂತೆ ತರಭೇತಿಯನ್ನೂ ನೀಡಿದಲ್ಲದೇ ಅದರ ಅಚ್ಚುಮೆಚ್ಚಿನವನಾಗಿ ಹೋಗಿದ್ದ.
ಕರಿಯನೊಂದಿಗೆ ಇಷ್ಟೆಲ್ಲಾ ಬಾಂಧವ್ಯ ಬೆಳೆದಿರುವಾಗ ಎರಡು ವಾರಗಳ ಹಿಂದೆ ಅದೆಲ್ಲಿಂದಲೋ ಬಂದ ತುಂಬು ಗರ್ಭಿಣಿ ನಾಯಿ ನಮ್ಮ ಮನೆಯ ಮುಂದಿನ ಮೋರಿಯಲ್ಲಿ ಏಳೆಂಟು ಮರಿಗಳನ್ನು ಹಾಕಿ ಮೂರ್ನಾಲ್ಕನ್ನು ಇಲ್ಲಿಯೇ ಬಿಟ್ಟು ಉಳಿದ ನಾಲ್ಕೈದು ಮರಿಗಳನ್ನು ಪಕ್ಕದ ರಸ್ತೆಯ ಮತ್ತೊಂದು ಸುರಕ್ಷಿತ ತಾಣದಲ್ಲಿ ಸಾಕತೊಡಗಿತು. ನಾಯಿ ಮರಿಗಳನ್ನು ನೋಡಿದ ತಕ್ಷಣವೇ ನಮ್ಮ ಮಕ್ಕಳಿಗೆ ನಿಧಿ ಸಿಕ್ಕಿದಂತಾಯಿತು. ಮತ್ತೊಮ್ಮೆ ನಮ್ಮ ರಸ್ತೆಯ ಅಷ್ಟೂ ಮಂದಿ ಈ ಮರಿಗಳ ಲಾಲನೆ ಪೋಷಣೆಗೆ ಸಿಧ್ದವಾಗಿ ನಿಂತರು. ಅದರಲ್ಲೂ ಮಕ್ಕಳು ತಮಗೆ ಕೊಡುತ್ತಿದ್ದ ಹಾಲು ಮತ್ತು ಬಿಸ್ಕತ್ತುಗ್ಗಳನ್ನು ಅಮ್ಮನಿಗೆ ಕಾಣದಂತೆ ಈ ಮರಿಗಳಿಗೆ ಕೊಡಲಾರಂಭಿಸಿದರು.
ಈ ಮುದ್ದಾದ ನಾಯಿ ಮರಿಗಳು ನಿಜಕ್ಕೂ ನೋಡಲು ಬಹಳ ಸುಂದರವಾಗಿದ್ದವು. ಅದರಲ್ಲೂ ಒಂದು ಮರಿಯಂತೂ ಉಳಿದವುಗಳಿಗಿಂತಲೂ ಬಹಳ ಚುರುಕಾಗಿದ್ದು ಕೆಲವೇ ಕೆಲವು ದಿನಗಳಲ್ಲಿ ಕಣ್ಣು ಬಿಟ್ಟು ಅಕ್ಕ ಪಕ್ಕ ಓಡಾಡ ತೊಡಗಿದ್ದಲ್ಲದೇ, ಸರಾಗವಾಗಿ ಮೋರಿಯನ್ನು ಹತ್ತಿ ನಮ್ಮ ಮನೆಯ ಕಾಂಪೌಂಡಿನೊಳಗೆಲ್ಲಾ ಓಡಾಡುತ್ತಾ ನಮ್ಮ ಕಾಲುಗಳಿಗೆ ಸಿಕ್ಕಿ ಹಾಕಿಕೊಂಡು ನಮ್ಮನ್ನೆಲ್ಲಾ ನೆಕ್ಕತೊಡಗಿತು. ಈ ಮುದ್ದಾದ ಮರಿಗೆ ಚಿಂಟು ಎಂದು ನಾಮಕರಣವೂ ಮಾಡಿಯಾಗಿತ್ತು. ಈ ಮರಿಗಳು ನಮ್ಮ ರಸ್ತೆಗೆ ಬಂದ ತಕ್ಷಣ ತನ್ನ ಮೇಲಿನ ಗಮನವೆಲ್ಲಾ ಕಡಿಮೆಯಾಗಿ ಹೋಗಿದ್ದನ್ನು ಗಮನಿಸಿದ್ದ ನಮ್ಮ ಕರಿಯ ಸಹಾ ಬಹಳ ತುಂಟತನವನ್ನು ಮಾಡುತ್ತಿದ್ದಲ್ಲದೇ, ಈ ಮರಿಗಳನ್ನು ಎತ್ತಿಕೊಂಡ ನನ್ನ ಮಕ್ಕಳನ್ನೂ, ಮಡದಿಯನ್ನೂ ಗುರಾಯಿಸುತ್ತಿದ್ದಲ್ಲದೇ, ಕೆಲವೊಮ್ಮೆ ಆ ಮರಿಗಳ ಮೇಲೆ ಧಾಳಿ ಮಾಡಿದ್ದೂ ಉಂಟು.
ಮೋರಿಯಲ್ಲಿ ತನ್ನ ಅಕ್ಕ ತಮ್ಮಂದಿರೊಂದಿಗೆ ಬೆಚ್ಚಗೆ ಮಲಗಿರುತ್ತಿದ್ದ ಚಿಂಟು ಬೆಳ್ಳ0ಬೆಳ್ಳಗೆ ನನ್ನ ಮಡದಿ ಗೇಟ್ ತೆರೆದು ಆಕೆಯ ಗೆಜ್ಜೆ ಸಪ್ಪಳ ಕೇಳುಸುತ್ತಿದ್ದ ಹಾಗೇ, ಓಡಿ ಬಂದು ಆಕೆಯ ಕಾಲುಗಳನ್ನು ನೆಕ್ಕುತ್ತಾ ಕುಂಯ್ ಕುಂಯ್ ಎಂದು ಸದ್ದು ಮಾಡುತ್ತಾ ಹಾಲು ಎಲ್ಲಿ ಎಂದು ಹುಡುಕುತ್ತಿತ್ತು. ಹಾಲನ್ನು ಕುಡಿದಾಕ್ಷಣ ಆಕೆಯ ಮಡಿಲಲ್ಲಿ ಆರಾಮವಾಗಿ ಮಲಗುತ್ತಿತ್ತು. ಹೀಗೆ ಕೆಲವೇ ಕೆಲವು ದಿನಗಳಲ್ಲಿ ನಮ್ಮ ಮನೆಯವರಿಗೆಲ್ಲಾ ಅಚ್ಚು ಮೆಚ್ಚಿನದ್ದಾಗಿ ಹೋಗಿತ್ತು. ಉಳಿದ ನಾಯಿ ಮರಿಗಳನ್ನು ಯಾರು ಯಾರೋ ತೆಗೆದುಕೊಂಡು ಹೋದರೂ ಇದನ್ನು ಮಾತ್ರ ಜತನದಿಂದ ಕಾಪಾಡಿಕೊಂಡಿದ್ದರು ನಮ್ಮ ಮಕ್ಕಳು.
ಮೊನ್ನೆ ಸಂಜೆಯಿಂದ ಇದ್ದಕ್ಕಿದ್ದಂತೆಯೇ ನಮ್ಮ ಚಿಂಟುವಿನ ಸದ್ದೇ ಇರಲಿಲ್ಲ. ಮಗ ಅಕ್ಕ ಪಕ್ಕದ ಎಲ್ಲಾ ಮೋರಿಗಳಲ್ಲಿ ಇಳಿದು ನೋಡಿದ್ದಲ್ಲದೇ, ಅದರ ಅಮ್ಮನಿದ್ದ ಪಕ್ಕದ ರಸ್ತೆಯಲ್ಲಿ ಹುಡುಕಾಡಿದರೂ ನಮ್ಮ ಚಿಂಟು ಕಾಣಲೇ ಇಲ್ಲ. ಕತ್ತಲಲ್ಲಿ ಎಲ್ಲೋ ಇರಬೇಕು ಬೆಳಿಗ್ಗೆ ನೋಡೋಣ ಎಂದು ಸುಮ್ಮನಾಗಿ ಬೆಳಿಗ್ಗೆ ಎದ್ದ ತಕ್ಷಣವೇ, ಎಲ್ಲಾ ಕಡೆ ಹುಡುಕಿದರೂ ನಮ್ಮ ಚಿಂಟು ಸಿಗಲೇ ಇಲ್ಲ. ಅಯ್ಯೋ ರಾಮಾ, ಯಾರೋ ನಮ್ಮ ಚಿಂಟುವನ್ನು ನಮಗೆ ಗೊತ್ತಿಲ್ಲದೇ ಹೊತ್ತೊಯ್ದಿದ್ದರು. ಈ ವಿಷಯ ನನ್ನ ಮಗಳಿಗೆ ಗೊತ್ತಾಗುತ್ತಿದ್ದಂತೆಯೇ ಅವಳು ಮಂಕಾಗಿ ಹೋದಳು. ಮಗ ಕೂಡಾ ಕಾಲೇಜಿಗೆ ದುಃಖದಿಂದಲೇ ಹೋದ.
ಮಗಳು ಸರಿಯಾಗಿ ತಿಂಡಿ ತಿನ್ನದಿದ್ದಾಗ, ಅಯ್ಯೋ ಅದೊಂದು ಚೇಷ್ಟೇ ಮುಂಡೇದು. ಇಲ್ಲೇ ಎಲ್ಲೋ ಹೋಗಿ ರಸ್ತೆ ತಪ್ಪಿರಬೇಕು ಸಂಜೆ ಹೊತ್ತಿಗೆ ಬಂದು ಬಿಡತ್ತೆ. ನೀನು ಹೀಗೆ ತಿಂಡಿ ಬಿಟ್ರೇ ಚಿಂಟು ಬಂದು ಬಿಡ್ತಾನಾ ಎಂದು ಮಡದಿಯೂ ಮಗಳನ್ನು ಮುದ್ದು ಮಾಡ ತೊಡಗಿದ್ದದ್ದನ್ನು ಗಮನಿಸಿದ ನಮ್ಮ ಮನೆಯ ಕೆಲಸದ ಹುಡುಗಿ ಅಕ್ಕಾ ನಮ್ಮ ಮಕ್ಕದ ಮನೆಯ ಹುಡುಗ ನೆನ್ನೆ ಸಂಜೆ ಒಂದು ನಾಯಿ ಎಲ್ಲಿಂದನೋ ಎತ್ತಿ ಕೊಂಡು ಬಂದಿದ್ದ. ಎಲ್ಲಿದೋ ನಾಯಿ ಎಂದು ಕೇಳಿದಾಗ ಅದೆಲ್ಲಿಂದನೋ ಸಾಕೋದಿಕ್ಕೆ ಎತ್ತಿಕೊಂಡು ಬಂದಿದ್ದೇನೆ ಎಂದಿದ್ದ. ಬಹುಶಃ ಆ ನಾಯಿ ನಮ್ಮ ಚಿಂಟೂನೇ ಇರ್ಬೇಕು. ಈಗ ಅವನು ಸ್ಕೂಲಿಗೆ ಹೋಗಿರ್ತಾನೆ. ಸಂಜೆ ಬಂದ್ಮೇಲೆ ಕೇಳಿ ಹೇಳ್ತೇನೆ ಎಂದಾಗ ಸ್ವಲ್ಪ ಮನಸ್ಸಿಗೆ ನೆಮ್ಮದಿ ತಂದಿತ್ತು.
ಮೊಮ್ಮಗಳು ಚಿಂಟುವಿನ ನೆನಪಿನಲ್ಲಿಯೇ ಊಟ ತಿಂಡಿ ಬಿಟ್ಟಿರುವುದನ್ನು ಕೇಳಿ ದುಃಖಿತರಾದ ನಮ್ಮ ಅತ್ತೆ ಮಾವನೂ ಕೂಡ ಬಂದು ಮೂಮ್ಮಗಳನ್ನು ರಮಿಸಲು ಪ್ರಯತ್ನಿಸಿದರೂ ಮಗಳು ಜಗ್ಗಿರಲೇ ಇಲ್ಲ. ಅವರು ಕೊಟ್ಟ ಉಡುಗೊರೆಯನ್ನೂ ತೆಗೆದುಕೊಳ್ಳಲೂ ಮನಸ್ಸು ಮಾಡಲಿಲ್ಲ. ಸಂಜೆ ಮಗ ಕಾಲೇಜಿನಿಂದ ಬರುವುದನ್ನೇ ಕಾಯುತ್ತಿದ್ದ ಮಗಳು, ಕೂಡಲೇ ಅವನನ್ನು ನಮ್ಮ ಬೀದಿಯಿಂದ ಮೂರು ಬೀದಿ ಆಚೆ ಇರುವ ನಮ್ಮ ಕೆಲಸದ ಹುಡುಗಿಯ ಮನೆಗೆ ಕಳುಹಿಸಿ ಅಲ್ಲಿರುವುದು ನಮ್ಮ ಚಿಂಟೂನಾ ಅಂತ ನೋಡಿ ಕೊಂಡು ಬರಲು ಹೇಳಿ ಕಳುಹಿಸಿದ್ದಳು. ಮಗ ಅಲ್ಲಿಗೆ ಹೋಗಿ ಅ ಹುಡುಗರನ್ನು ಕೇಳಿದರೆ ಅವರ ಅಮ್ಮಾ ಬಯ್ದರೆಂದು ಆ ನಾಯಿಯನ್ನು ಮತ್ತೆಲ್ಲಿಯೋ ಬಿಟ್ಟು ಬಂದಿದ್ದನ್ನು ಕೇಳಿ ಅವರ ಜೊತೆ ಹೋಗಿ ನೋಡಿದರೆ ಅದು ನಮ್ಮ ಚಿಂಟೂವೇ ಆಗಿತ್ತು. ಕೂಡಲೇ ಎರಡೂ ಕೈಗಳಲ್ಲಿ ಅದನ್ನು ಎತ್ತಿಕೊಂಡು ಸಂತೋಷದಿಂದ ಮನೆಗೆ ಬಂದ. ನನ್ನ ಮಡದಿ ಮತ್ತು ಮಗಳನ್ನು ನೋಡಿದ ಚಿಂಟೂ ಕೂಡಾ ತನ್ನ ಆಪ್ತರು ಸಿಕ್ಕರು ಎನ್ನುವಂತೆ ಕುಂಯ್ ಕುಂಯ್ ಎಂದು ಸದ್ದು ಮಾಡುತ್ತಾ ಅವರಿಬ್ಬರನ್ನೂ ಸುತ್ತಿ ಹಾಕಿದ್ದಲ್ಲದೇ ಅವರನ್ನೆಲ್ಲಾ ಮನಸೋ ಇಚ್ಚೆ ನೆಕ್ಕಿ ಹಾಕಿದ್ದ ಚಿಂಟು. ಮಗಳೂ ಕೂಡಾ ಚಿಂಟೂನನ್ನು ಎತ್ತಿ ಮುದ್ದಾಡಿ ಅಲ್ಲಿಯೇ ಕೆಳಗಿ ಬಿಟ್ಟರೆ ಅಲ್ಲೇ ಮನೆ ಮಂದೆಯೇ ಕುಳಿತಿದ್ದ ಮಡದಿಯ ಮಡಿಲಲ್ಲಿ ಹೋಗಿ ಚೆಂದಗೆ ನಿದ್ದೆಗೆ ಜಾರಿದ್ದ ಚಿಂಟು.
ಚಿಂಟು ಮತ್ತೆಂದೂ ಎಲ್ಲಿಗೂ ಹೋಗಬಾರದೆಂದು ಮನೆಯೊಳಗಿನಿಂದ ಹಳೆಯ ಬೆಡ್ ಶೀಟ್ಗಳನ್ನೆಲ್ಲಾ ತಂದು ಅದನ್ನು ಮನೆಯ ಮುಂದೆ ಹಾಸಿ ಚಿಂಟೂವಿನನ್ನು ಬೆಚ್ಚಗೆ ಸಾಕುತ್ತಿದ್ದಾರೆ ನನ್ನ ಮಕ್ಕಳು. ಅದಕ್ಕೇ ಅಲ್ಲವೇ ಹೇಳೋದು ಪೂಜಿಸಿದರೆ ದೇವರು. ಲಾಲಿಸಿದರೆ ಮಕ್ಕಳು. ಯಾವ ಜನ್ಮದ ಮೈತ್ರಿಯೋ ಏನೋ ಆಗ ಕರಿ ಈಗ ಚಿಂಟು ನಮ್ಮ ಮನೆಗೆ ಆಪ್ತರಾಗಿ ಬಂದಿರುವುದು, ಯಾವುದೋ ಋಣಾನುಬಂಧ ಎನಿಸುತ್ತದೆ ಅಲ್ಲವೇ?
ಏನಂತೀರೀ?
ನಿಮ್ಮವನೇ ಉಮಾಸುತ
Love you all ♥️
LikeLiked by 1 person
Super
LikeLike
[…] ಚಿಂಟು ಕಾಣೆಯಾಗಿದ್ದಾನೆ […]
LikeLike