ಚೆಟ್ನಿ ಅಂದ ತಕ್ಷಣ ನಮಗೆ ಥಟ್ ಅಂತಾ ನೆನಪಾಗೋದೇ ಕಾಯಿ ಚೆಟ್ನಿ, ಹುರಿಗಡಲೆ ಇಲ್ಲವೇ ಕಡಲೇಕಾಯಿ ಬೀಜ ಚಟ್ನಿ. ಅಪರೂಪಕ್ಕೆ ಈರುಳ್ಳಿ ಚೆಟ್ನಿ ಇಲ್ಲವೇ ಟೋಮ್ಯಾಟೋ ಚಟ್ನಿ ಸಹಾ ಮಾಡುತ್ತಾರೆ. ಎಲ್ಲೆಡೆಯಲ್ಲಿಯೂ ಬಹಳ ಸುಲಭವಾಗಿ ಸಿಗುವ ಮತ್ತು ಅರೋಗ್ಯಕರವಾಗಿರುವ ಮೂಲಂಗಿ ಚಟ್ನಿಯನ್ನು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.
ಸುಮಾರು 4-5 ಜನರು ಸವಿಯಬಹುದಾದಷ್ಟು ಮೂಲಂಗಿ ಚೆಟ್ನಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ
- ದೊಡ್ಡ ಗಾತ್ರದ ಮೂಲಂಗಿ- 1
- ಒಣ ಮೆಣಸಿನಕಾಯಿ- 2-3
- ಕೊತ್ತಂಬರಿ ಬೀಜ – 1/4 ಚಮಚ
- ತೆಂಗಿನ ತುರಿ- 1/4 ಬಟ್ಟಲು
- ಹುಣಸೆಹಣ್ಣು- ಸ್ವಲ್ಪ
- ಸಾಸಿವೆ- 1/4 ಚಮಚ
- ಉದ್ದಿನ ಬೇಳೆ – 1/4 ಚಮಚ
- ಇಂಗು – ಸ್ವಲ್ಪ
- ಅರಿಶಿನ- ಚಿಟುಕಿ
- ಕರಿಬೇವು- 3-4 ಎಲೆಗಳು
- ಎಣ್ಣೆ- 1 ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
ಮೂಲಂಗಿ ಚೆಟ್ನಿ ತಯಾರಿಸುವ ವಿಧಾನ
- ಮೂಲಂಗಿಯನ್ನು ಮೊದಲು ಚೆನ್ನಾಗಿ ತೊಳೆದುಕೊಂಡು ಸಿಪ್ಪೆಯನ್ನ್ನು ತೆಗೆದು ಸಣ್ಣದಾಗಿ ತುರಿದುಕೊಳ್ಳಬೇಕು.
- ಒಂದು ಸಣ್ಣ ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ಕೊತ್ತಂಬರಿ ಬೀಜ ಹಾಕಿ ಘಮ್ಮನೆ ವಾಸನೆ ಬರುವವರೆಗೂ ಹುರಿದುಕೊಂಡು ನಂತರ ಅದಕ್ಕೆ ಒಣ ಮೆಣಸಿನಕಾಯಿಯನ್ನು ಹಾಕಿ ಘಾಟು ಬರುವವರೆಗೂ ಹುರಿದುಕೊಳ್ಳಬೇಕು.
- ಮಿಕ್ಸಿ ಜಾರಿಗೆ ತೆಂಗಿನ ತುರಿ, ಸ್ವಲ್ಪ ಹುಣಸೇ ಹಣ್ಣು ಮತ್ತು ಹುರಿದುಕೊಂಡ ದನಿಯ ಮತ್ತು ಮೆಣಸಿನಕಾಯಿಯ ಜೊತೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಗಟ್ಟಿಯಾಗಿ ರುಚ್ಚಿಕೊಳ್ಳಬೇಕು.
- ಉಬ್ಬಿಕೊಂಡ ಮಿಶ್ರಣಕ್ಕೆ ತುರಿದ ಮೂಲಂಗಿಯನ್ನು ಸೇರಿಸಿ ಸ್ವಲ್ಪವೇ ನೀರನ್ನು ಬೆರೆಸಿ ನುಣ್ಣಗಿ ರುಬ್ಬಿಕೊಳ್ಳಬೇಕು.
- ಒಂದು ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಸಾಸಿವೆ ಸಿಡಿಸಿಕೊಂಡು ಅದರೊಂದಿಗೆ ಉದ್ದಿನಬೇಳೆ, ಕತ್ತರಿಸಿದ ಕರಿಬೇವು, ಚಿಟುಕಿ ಇಂಗು ಮತ್ತು ಅರಿಶಿನವನ್ನು ಸೇರಿಸಿ ಒಗ್ಗರಣೆ ಮಾಡಿಕೊಂಡು ರುಬ್ಬಿಕೊಂಡ ಮಿಶ್ರಣಕ್ಕೆ ಸೇರಿಸಿದಲ್ಲಿ ರುಚಿರುಚಿಯಾದ ಘಮ ಘಮವಾದ ಮತ್ತು ಆರೋಗ್ಯಕರವದ ಮೂಲಂಗಿ ಚಟ್ನಿಗೆ ಸವಿಯಲು ಸಿದ್ಧ.
ಈ ಮೂಲಂಗಿ ಚಟ್ನಿಯನ್ನು ದೋಸೆ, ಚಪಾತಿ, ರೊಟ್ಟಿಯೊಂದಿಗೆ ನೆಂಚಿಕೊಂಡು ತಿನ್ನಲೂ ಬಹುದು. ಇಲ್ಲವೇ, ಸ್ವಲ್ಪ ಹಸನಾದ ತುಪ್ಪ ಇಲ್ಲವೇ ಎಳ್ಳೆಣ್ಣೆಯೊಂದಿಗೆ ಬಿಸಿ ಬಿಸಿ ಅನ್ನದೊಂದಿಗೂ ಕಲಸಿಕೊಂಡು ಸವಿಯಲು ಬಲು ಮಜವಾಗಿರುತ್ತದೆ.
ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.
ಏನಂತೀರೀ?
ನಿಮ್ಮವನೇ ಉಮಾಸುತ
ಮನದಾಳದ ಮಾತು : ಸುಲಭ ಬೆಲೆಯಲ್ಲಿ ಎಲ್ಲೆಡೆಯಲ್ಲಿಯೂ ಸಿಗುವ ಮೂಲಂಗಿಯನ್ನು ದಿವ್ಯೌಷಧಿ ಗುಣಗಳ ತರಕಾರಿ ಎಂದೇ ಕರೆಯಲಾಗುತ್ತದೆ. ಮೂಲಂಗಿಯಲ್ಲಿ ಸಸಾರಜನಕ, ಪಿಷ್ಠ, ಮೇದಸ್ಸು, ಖನಿಜಾಂಶ, ನಾರಿನಂಶ, ರಂಜಕ, ಸೋಡಿಯಂ, ಪೊಟ್ಯಾಷಿಯಂ, ಸುಣ್ಣ, ಕಬ್ಬಿಣ, ಥಿಯಾಮಿನ್, ರಿಬೋಫ್ಲಾವಿನ್, ಆಕ್ಸಾಲಿಕ್ ಆಮ್ಲ, ಎ ಮತ್ತು ಸಿ ಯಂತಹ ಜೀವಸತ್ವಗಳು ಇದ್ದು ಅನೇಕ ರೋಗಗಳಿಗೆ ಪರಿಣಾಮಕಾರಿಯಾದ ಔಷಧವಾಗಿದೆ.
ಮೂಲಂಗಿಯು ಜೀರ್ಣಕ್ರಿಯೆಗೆ ಬಹಳ ಉತ್ತಮವಾಗಿರುವ ಕಾರಣ, ಮಲಬದ್ದತೆ, ಮೂಲವ್ಯಾಧಿ ಮತ್ತು ಮೂಲವೃಣ ನಿವಾರಣೆಗೆ ಇದು ಪರಿಣಾಮಕಾರಿಯಾದ ತರಕಾರಿಯಾಗಿದೆ. ಮೂಲಂಗಿಯನ್ನು ತರಕಾರಿಯಾಗಿ ಬೇಯಿಸಿ ಸೇವಿಸುವುದಕ್ಕಿಂತಲೂ ಹಸಿಯಾಗಿ ಸಲಾಡ್ ಕೋಸಂಬರಿ, ಪಚಡಿ, ಚಟ್ನಿ, ಪರೋಟ ಇನ್ನು ಮುಂತಾದ ರೀತಿಯಲ್ಲಿ ಉಪಯೋಗಿಸುವುದು ಬಹಳ ಪರಿಣಾಮಕಾರಿಯಾಗಿದೆ. ಮೂಲಂಗಿ ಸೊಪ್ಪಿನಿಂದ ಪಲ್ಯ ಮತ್ತು ಕೊಸಂಬರಿಯನ್ನೂ ಸಹಾ ತಯಾರಿಸಬಹುದಾಗಿದೆ.