ಸ್ವಾತಂತ್ರ್ಯ ಪೂರ್ವದ 1930ರ ಸಮಯದಲ್ಲಿ ಬೆಂಗಳೂರಿನಲ್ಲಿ ಬಹಳ ಕಾಲ ಮಳೆಯಿಲ್ಲದೇ ಬೀಕರ ಬರಗಾಲ ಉಂಟಾಗಿ ಜನರಿಗೆ ಮತ್ತು ದನಕರುಗಳಿಗೆ ಕುಡಿಯುವ ನೀರಿಗೂ ತೊಂದರೆಯುಂಟಾದಾಗ ನೀರಿನ ಅಗತ್ಯವನ್ನು ಅರಿತ ಅಂದಿನ ಮೈಸೂರು ಸಂಸ್ಥಾನದ ಒಡೆಯರಾಗಿದ್ದ ಶ್ರೀ ನಾಲ್ಮಡಿ ಚಾಮರಾಜ ಒಡೆಯರ್ ಅವರು ಮುಖ್ಯ ಇಂಜೀನಿಯರ್ ಆಗಿದ್ದ ಶ್ರೀ ಸರ್.ಎಂ.ವಿಶ್ವೇಶ್ವರಯ್ಯನವರಿಗೆ ಇದಕ್ಕೊಂದು ಪರಿಹಾರವನ್ನು ನೀಡಲು ಸೂಚಿಸಿದ ಪರಿಣಾಮವೇ, ಬೆಂಗಳೂರಿನಿಂದ ಪಶ್ಚಿಮಕ್ಕೆ 35 ಕಿ.ಮೀ ದೂರದಲ್ಲಿರುವ ಮಾಗಡಿ ಬಳಿಯ ಅರ್ಕಾವತಿ ನದಿ ಮತ್ತು ಕುಮುದಾವತಿ ನದಿಯ ಸಂಗಮದಲ್ಲಿ ಈ ಬೃಹತ್ತಾದ ತಿಪ್ಪಗೊಂಡನಹಳ್ಳಿ ಅಣೆಕಟ್ಟು ಅಥವಾ ಚಾಮರಾಜಸಾಗರ ಎಂದೂ ಕರೆಯಲ್ಪಡುವ ತಿಪ್ಪಗೊಂಡನಹಳ್ಳಿ ಜಲಾಶಯ ಅಥವಾ ಕೆರೆಯ ನಿರ್ಮಾಣ 1933ರಲ್ಲಿ ಪೂರ್ಣಗೊಳ್ಳುತ್ತದೆ.
ಸುಮಾರು 1453 ಚದರ ಕಿ.ಮೀ ವಿಸ್ತೀರ್ಣದ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಮಾಗಡಿ ಮತ್ತು ಬೆಂಗಳೂರು ತಾಲ್ಲೂಕುಗಳ ಕೆಲವು ಭಾಗಗಳನ್ನು ಒಳಗೊಂಡಿರುವ ಈ ಕೆರೆಯಿಂದ ಬೆಂಗಳೂರಿನ ಪಶ್ಚಿಮ ಭಾಗಕ್ಕೆ ಸುಮಾರು 125 ಎಂಎಲ್‌ಡಿ ವರೆಗೆ ಸರಬರಾಜು ಮಾಡುವ ಸಾಮರ್ಥ್ಯವನ್ನು ಹೊಂದಿತ್ತು. ಕೆ ಆರ್ ಎಸ್ ನಿಂದ ಕಾವೇರಿ ನೀರು ಬೆಂಗಳೂರಿಗೆ ವಿವಿಧ ಹಂತಗಳಲ್ಲಿ ಸರಬರಾಜು ಆಗುವವರೆಗೂ ಬೆಂಗಳೂರಿನ ಜನಕ್ಕೆ ತಿಪ್ಪಗೊಂಡನಹಳ್ಳಿ ಜಲಾಶಯ ಮತ್ತು ಹೆಸರಘಟ್ಟ ಕೆರೆಯ ನೀರೇ ಮೂಲವಾಗಿತ್ತು.
ನಂದಿಬೆಟ್ಟದ ತಪ್ಪಲಲ್ಲಿ ಹುಟ್ಟುವ ಅರ್ಕಾವತಿ ನದಿ, ಅಲ್ಲಿಂದ ಮಧುರೆ ಕೆರೆ ಹೆಸರಘಟ್ಟ ಕೆರೆ ಮುಖಾಂತರ ಹರಿದು ನೆಲಮಂಗಲದ ತೊರೆಛತ್ರ ಮುಖಾಂತರ ತಿಪ್ಪಗೊಂಡನಹಳ್ಳಿ ಜಲಾಶಯ ಸೇರುತ್ತದೆ. ಅದೇ ರೀತಿ ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿರುವ ಶಿವಗಂಗೆಯಲ್ಲಿ ಹುಟ್ಟುವ ಕುಮದ್ವತಿ ನದಿಯೂ ಸಹಾ ತಿಪ್ಪಗೊಂಡನಹಳ್ಳಿ ಜಲಾಶಯ ಸೇರುತ್ತದೆ. ಹೀಗೆ ಈ ಎರಡೂ ನದಿಗಳ ಸಂಗದಲ್ಲಿ ಪುರಾಣ ಪ್ರಸಿದ್ಧವಾದ ಮತ್ತು ಪ್ರಾಚೀನ ಸಂಗಮೇಶ್ವರ ದೇವಾಲಯದವಿದ್ದು ಅದು ಕೆ.ಆರ್.ಎಸ್ ಕಟ್ಟುವಾಗ ಮುಳುಗಿ ಹೋಗಿದ್ದ ಗೋಪಾಲಸ್ವಾಮಿ ದೇವಸ್ಥಾನದಂತೆಯೇ ಮುಳುಗಿಹೋಗಿದ್ದು ವರ್ಷದ ಬಹುಪಾಲು, ಈ ದೇವಾಲಯವು ಗೋಚರಿಸದೇ, ಬೇಸಿಗೆಯಲ್ಲಿ ನೀರಿನ ಮಟ್ಟವು ಕಡಿಮೆಯಾದಂತೆಲ್ಲಾ ತನ್ನ ಅಸ್ಥಿತ್ವವನ್ನು ಸಾಭೀತುಪಡಿಸುತ್ತದೆ.
ತಿಪ್ಪಗಂಡನಹಳ್ಳಿ ಜಲಾಶಯವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶವಿದ್ದು, ಇಲ್ಲಿಗೆ ಪ್ರವೇಶಿಸಲು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಕಚೇರಿಯಿಂದ ಪಾಸ್ ಪಡೆಯಬಹುದಾಗಿದೆ. ಸುತ್ತಲೂ ಬೆಟ್ಟಗಳಿಂದ ಆವೃತವಾದ ನೈಸರ್ಗಿಕವಾದ ನೀರಿನ ಸೆಲೆಯಿಂದ ಆವೃತವಾಗಿರುವ ಈ ಜಾಗವು ನೋಡಲು ರಮಣೀಯವಾಗಿರುವ ಕಾರಣ ವಾರಾಂತ್ಯದಲ್ಲಿ ಬೆಂಗಳೂರಿನಿಂದ ಅನೇಕ ಪ್ರವಾಸಿಗರು ಮಾಗಡಿ, ಸಾವನದುರ್ಗ ಮತ್ತು ತಿಪ್ಪಗೊಂಡನಹಳ್ಳಿ ಕೆರೆಯನ್ನು ನೋಡಲು ತಂಡೋಪ ತಂಡವಾಗಿ ಬರುತ್ತಾರೆ.
ಕನ್ನಡದ ಅನೇಕ ಚಲನಚಿತ್ರಗಳೂ ಇಲ್ಲಿ ಚಿತ್ರೀಕರಣವಾಗಿರುವುದಲ್ಲದೇ, ಮೂರ್ನಾಲ್ಕು ವರ್ಷದ ಹಿಂದೆ ನಟ ದುನಿಯಾ ವಿಜಯ್ ಅವರ ಮಾಸ್ತಿ ಗುಡಿ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ದುರ್ಘಟನೆಯಲ್ಲಿ ಉದಯೋನ್ಮುಖ ಕಲಾವಿದರುಗಳಾದ ಉದಯ್ ರಾಘವ್, ಮತ್ತು ಅನಿಲ್ ಕುಮಾರ್ ಹೆಲಿಕ್ಯಾಪ್ಟರ್ ನಿಂದ ನೀರಿಗೆ ಜಿಗಿಯುವ ಸಾಹಸ ಪ್ರದರ್ಶನದ ಸಮಯದಲ್ಲಿ ಈ ಜಲಾನಯನ ಪ್ರದೇಶದಲ್ಲಿಯೇ ಸಾವನ್ನಪಿದ ದುರ್ಘಟನೆಯ ನಂತರ ಚಿತ್ರೀಕರಣಕ್ಕೆ ಅನುಮತಿಯನ್ನು ನಿರಾಕರಿಸುತ್ತಿದ್ದಾರೆ.
ಈ ಜಲಾಶಯ ಸುಮಾರು 74 ಅಡಿಗಳಷ್ಟು ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು ಅಂದರೆ ಸುಮಾರು 3.34 ಟಿಎಂಸಿಗಳವರೆಗೆ ನೀರನ್ನು ಸಂಗ್ರಹಿಸಬಲ್ಲದಾಗಿದೆ. 1974 ರಲ್ಲಿ ಕಾವೇರಿ ಮೊದಲನೇ ಹಂತದ ಯೋಜನೆ ಅನುಷ್ಠಾನವಾಗುವವರೆಗೂ ಈ ಜಲಾಶಯದಿಂದಲೇ ಬೆಂಗಳೂರಿನ ರಾಜಾಜಿನಗರ, ಸುಂಕದಕಟ್ಟೆ ಪಶ್ಚಿಮ ಕಾರ್ಡ್ ರಸ್ತೆ, ವಿಜಯನಗರ, ಮಹಾಲಕ್ಷ್ಮಿ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕುಟುಂಬಗಳಿಗೆ ಇಲ್ಲಿಂದಲೇ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು. ವರ್ಷದಿಂದ ವರ್ಷಕ್ಕೆ ಮಳೆಯ ಪ್ರಭಾವ ಕಡಿಮೆ ಆದ ಪರಿಣಾಮ 1992ರಲ್ಲಿ ಒಮ್ಮೆ ಜಲಾಶಯ ತುಂಬಿತ್ತಾದರೂ ಅದಾದ ನಂತರ ನೀರಿನ ಗರಿಷ್ಠ ಮಟ್ಟ 50 ಅಡಿ ಮೇಲೆ ದಾಟಲಿಲ್ಲವಾದ್ದರಿಂದ ಸ್ಥಳೀಯ ಅಂತರ್ಜಲದ ಮಟ್ಟವನ್ನು ಕಾಪಾಡಿಕೊಂಡು ಹೋಗುವ ದೃಷ್ಟಿಯಿಂದ 2012ರ ನಂತರ ಇಲ್ಲಿಂದ ಇಲ್ಲಿಂದ ಬೆಂಗಳೂರಿಗೆ ನೀರು ಪೂರೈಸುವುದನ್ನು ಸ್ಥಗಿತಗೊಳಿಸಲಾಗಿದ್ದು, ಕಡು ಬೇಸಿಗೆ ಸಮಯದಲ್ಲಿ ಕೆ.ಆರ್.ಎಸ್ ನಿಂದ ನೀರು ತರಲು ಆಗದಿದ್ದ ಸಂದರ್ಭದಲ್ಲಿ ಮಾತ್ರವೇ ಉಪಯೋಗಿಸಿಕೊಳ್ಳುವ ಯೋಜನೆಯನ್ನು ಮಾಡಿಕೊಳ್ಳಲಾಗಿದೆ.
ಒಮ್ಮೆ ಜಲಾಶಯ ಭರ್ತಿಯಾದರೆ ನಗರಕ್ಕೆ ಪ್ರತಿನಿತ್ಯ 13 ಕೋಟಿ ಲೀಟರ್ ನೀರು ಪಂಪ್ ಮಾಡಬಹುದಾಗಿದೆ. ಇಂದಿಗೂ ಸಹಾ ಇಲ್ಲಿನ ನೀರನ್ನು ಶುದ್ಧಗೊಳಿಸಿ ತಾವರೆಕೆರೆಗೆ ಪಂಪ್ ಮಾಡಿ, ಅಲ್ಲಿನ ಪಂಪಿಂಗ್ ಘಟಕದಲ್ಲಿ ಮತ್ತೊಮ್ಮೆ ಶುದ್ದೀಕರಿಸಿ ಸುತ್ತ ಮುತ್ತಲಿನ ಹಳ್ಳಿಗಳಿಗೆ ನೀರನ್ನು ಪೂರೈಕೆ ಮಾಡಲಾಗುತ್ತದೆ.
ದಿನ ಕಳೆದಂತೆ ಅರ್ಕಾವತಿ ಜಲಾನಯನ ಪ್ರದೇಶದಲ್ಲಿ ತಲೆ ಎತ್ತಿದ ಕೈಗಾರಿಕೆಗಳು ಮತ್ತು ಅನಧಿಕೃತ ಲೇಔಟ್ಗಳ ಪರಿಣಾಮದಿಂದಾಗಿ ನದಿಪಾತ್ರದ ಜಮೀನುಗಳು ಒತ್ತುವರಿಯಾದ ಪರಿಣಾಮ ನದಿಯ ನೀರು ಸಂಪೂರ್ಣ ಕಲುಷಿತಗೊಂಡಿತಲ್ಲದೇ ಆ ಕೈಗಾರಿಕೆಗಳ ತ್ರಾಜ್ಯವೂ ಸಹಾ ನದಿಯ ನೀರನ್ನೇ ಸೇರಿದ ಪರಿಣಾಮ, ಬೆಂಗಳೂರಿನ ಜನತೆಗೆ ಶುದ್ಧ ನೀರನ್ನು ಒದಗಿಸುತ್ತಿದ್ದದ್ದು ಇದೇ ಮೂಲವಾ ಎನ್ನುವಷ್ಟರ ಮಟ್ಟಿಗೆ ತಿಪ್ಪಗೊಂಡನ ಹಳ್ಳಿಯ ನೀರಿನ ಗುಣಮಟ್ಟ ಕೆಟ್ಟ ಪರಿಸ್ಥಿತಿಯಲ್ಲಿದೆ. ಸಾರ್ವಜನಿಕರು ಮತ್ತು ಜಲಮಂಡಳಿ ಎಚ್ಚೆತ್ತುಕೊಂಡು ನದಿಗೆ ಸೇರುತ್ತಿರುವ ತ್ಯಾಜ್ಯವನ್ನು ತಡೆಯದಿದ್ದಲ್ಲಿ, ಈ ಅರ್ಕಾವತಿನದಿಯೂ ಕಲವೇ ವರ್ಷಗಳಲ್ಲಿ ಮತ್ತೊಂದು ವೃಷಭಾವತಿಯಾಗುವುದರಲ್ಲಿ ಸಂದೇಹವೇ ಇಲ್ಲವಾಗಿದೆ.
ಸಾರ್ವಜನಿಕರ ಮನವಿಯಿಂದ ಎಚ್ಚೆತ್ತುಕೊಂಡ ಸರ್ಕಾರ, ಅಕ್ರಮ ಮರಳುಗಾರಿಕೆ ದಂಧೆಗೆ ಕಡಿವಾಣ ಹಾಕಿದ್ದಲ್ಲದೇ, ಯುವಾಬ್ರಿಗೇಡ್ ಮತ್ತು ಜಗ್ಗೀ ವಾಸುದೇವ ಅವರ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳು ಅರ್ಕಾವತಿ ನದಿ ಉಳಿಸಲು ನಡೆಸಿದ ಆಂದೋಲನ ಮತ್ತು ಪುನಶ್ಚೇತನಗಳ ಕಾರ್ಯಕ್ರಮಗಳ ಮೂಲಕ ಈ ನದಿ ಇನ್ನೂ ಜೀವಂತವಾಗಿರುವಂತೆ ನೋಡಿಕೊಳ್ಳುವ ಮೂಲಕ ತಿಪ್ಪಗೊಂಡನಹಳ್ಳಿ ಕೆರೆಗೆ ಮರುಜೀವವನ್ನು ಕೊಡುವ ಕಾಯಕಲ್ಪ ಮುಂದುವರೆದಿದೆ.
ನದಿಯ ಪಾತ್ರದ ಸುತ್ತಮುತ್ತಲಿನ 2 ಕಿ.ಮೀ.ದೂರ ಯಾವುದೇ ಕಟ್ಟಡ ನಿರ್ವಣ ಮಾಡುವಂತಿಲ್ಲ ಎಂಬ ಆದೇಶವಿದ್ದರೂ ಪಟ್ಟ ಭದ್ರ ಹಿತಾಸಕ್ತಿಗಳ ಕೈವಾಡದಿಂದಾಗಿ ಮರಳುಗಾರಿಕೆಯ ಬದಲಾಗಿ, ನದಿಪಾತ್ರದ ಜಮೀನಿನಲ್ಲಿ ಕೈಗಾರಿಕೆಳನ್ನು ಆರಂಭಿಸಿ, ಅದರಲ್ಲೂ ಪ್ರಮುಖವಾಗಿ ಔಷಧ ತಯಾರಿಕಾ ಕಂಪನಿಗಳು, ಜವಳಿ ಉದ್ದಿಮೆಗಳ ಜೊತೆ, ಇಟ್ಟಿಗೆ ಕಾರ್ಖಾನೆ, ಜಲ್ಲಿಕಲ್ಲುಗಳ ಕ್ರಷರ್ಗಳು ಆರಂಭವಾಗಿ ಅವುಗಳ ತ್ಯಾಜ್ಯವು ನೇರವಾಗಿ ನದಿ ಸೇರಿ , ದೂರದ ಬೆಟ್ಟ ನುಣ್ಣಗೆ ಎನ್ನುವಂತೆ, ದೂರದಿಂದ ಅತೀ ಸುಂದರವಾಗಿ ಕಾಣುವ ಜಲಾನಯನ ಪ್ರದೇಶ ಹತ್ತಿರ ಹೋಗುತ್ತಿದ್ದಂತೆ ಕೆಟ್ಟ ವಾಸನೆ ಮೂಗಿಗೆ ಬಡಿಯುತ್ತಿದೆ. ಇದರ ಜೊತೆಯಲ್ಲಿಯೇ ಬೆಂಗಳೂರಿನ ಕಸವನ್ನು ಅಕ್ರಮವಾಗಿ ತಂದು ಈ ನದಿ ಪಾತ್ರದಲ್ಲೇ ಸುರಿಯುವ ಮುಖಾಂತರ, ತಿಪ್ಪಗೊಂಡನಹಳ್ಳಿ ಕೆರೆಯನ್ನು ತ್ಯಾಜ್ಯವನ್ನಾಗಿ ಮಾಡುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತಿಪ್ಪಗೊಂಡನಹಳ್ಳಿ ಜಲಾಶಯ ಇಂದು ಈ ಸ್ಥಿತಿ ತಲುಪಿದೆ ಎಂದರೂ ತಪ್ಪಾಗಲಾರದು. ಈ ಎರಡು ಇಲಾಖೆಗಳ ಅಧಿಕಾರಿಗಳು ಕಟ್ಟುನಿಟ್ಟಾಗಿ ಕೆಲಸ ಮಾಡಿದರೆ ಮುಂದಿನ ಪೀಳಿಗೆಯವರಿಗೆ ಜಲಾಶಯವನ್ನು ಶುದ್ಧವಾಗಿಡಬಹುದಾಗಿದೆ.
ಹಲವು ವರ್ಷಗಳ ಕಾಲ ಶುದ್ಧ ನೀರಿನಿಂದ ತುಂಬಿ ತುಳುಕುತ್ತಿದ್ದ ಜಲಾಶಯ ಈಗ ತ್ಯಾಜ್ಯ ನೀರು ತುಂಬಿಕೊಂಡು, ಹೂಳು ತುಂಬಿಕೊಂಡು ಬತ್ತಿ ಹೋಗುವ ದುಸ್ಥಿತಿಯಲ್ಲಿರುವುದು ನಿಜಕ್ಕೂ ಮನಸ್ಸಿಗೆ ಛೇದವನ್ನುಂಟು ಮಾಡುತ್ತಿದೆ. ಇನ್ನಾದರೂ ಸರ್ಕಾರ ಮತ್ತು ಸಂಬಂಧ ಪಟ್ಟ ಇಲಾಖೆಗಳು ಮನಸ್ಸು ಮಾಡಿ, ಸಾರ್ವಜನಿಕರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಈ ಜಲಾಶಯದ ನೀರನ್ನು ಶುದ್ಧೀಕರಿಸಿ ನಮ್ಮ ಜಲಚರಗಳಿಗೆ, ಪಕ್ಷಿ ಸಂಕುಲಗಳಿಗೆ ಎಲ್ಲದ್ದಕ್ಕೂ ಮುಖ್ಯವಾಗಿ ಶುದ್ಧವಾದ ಅಂತರ್ಜಲವನ್ನು ನಮ್ಮ ಮುಂದಿನ ಪೀಳಿಗೆಯವರಿಗೂ ಸಹಾ ಉಳಿಸಿಡಬೇಕಾದಂತಹ ಗುರುತರವಾದ ಜವಾಬ್ಧಾರಿ ನಮ್ಮ ನಿಮ್ಮೆಲ್ಲರ ಮೇಲೆಯೇ ಇದೆ.
ಏನಂತೀರೀ?
ನಿಮ್ಮವನೇ ಉಮಾಸುತ
ಸರ್ಕಾರದ ಗಮನ ಸೆಳೆಯುವುದರೊಂದಿಗೆ ತಪ್ಪಿತಸ್ಥರೆಂದು ನಿರೂಪಿತ ಅಧಿಕಾರಿಗಳಿಗೆ ಶಿಕ್ಷೆಆಗುವಂತೆ ಮಾಡಬೇಕಿದೆ. ಇಲ್ಲದಿದ್ದರೆ ಈ ಜಲಾಶಯ ಇತಿಹಾಸ ಸೇರುವುದರಲ್ಲಿ ಸಂಶಯವಿಲ್ಲ. ಸಮಯೋಚಿತ ಲೇಖನ.
LikeLiked by 1 person
ಸತ್ಯವಾದ ಮಾತು. ಕೇವಲ ಸರ್ಕಾರವಲ್ಲದೇ ಜನರೂ ಎಚ್ಚೆತ್ತು ಕೊಳ್ಳಬೇಕಿದೆ
LikeLike
Really thought provoking!!
LikeLiked by 1 person