ಅವರೊಬ್ಬರು ಹಿರಿಯ ರಾಜಕಾರಣಿಗಳು. ಬಹಳ ವರ್ಷಗಳಿಂದ ಹೋರಾಟದ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮ ಛಾಯೆಯನ್ನು ಮೂಡಿಸಿಕೊಂಡಿದ್ದರು. ಮಾತೆತ್ತಿದ್ದರೆ, ನಾನು ಅಂಬೇಡ್ಕರ್ ಅವರ ಅನುಯಾಯಿ, ನನ್ನನ್ನು ಒಂದು ಧರ್ಮಕ್ಕೆ ಮೀಸಲಾಗಿಸ ಬೇಡಿ ನನಗೆ ನನ್ನ ಧರ್ಮ ಗ್ರಂಥಕ್ಕಿಂತಲೂ ಅಂಬೇಡ್ಕರ್ ಅವರ ಸಂವಿಧಾನವೇ ಮುಖ್ಯ ಎಂದು ಓತಪ್ರೋತವಾಗಿ ಮಾತನಾಡುತ್ತಾ, ಜನರುಗಳನ್ನು ಜಾತಿ ಮತ್ತು ಉಪಜಾತಿಗಳ ಮೂಲಕ ಒಡೆಯುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ, ಅಧಿಕಾರದಲ್ಲಿ ಇರಲೀ ಇಲ್ಲದಿರಲೀ ಅತ್ಯುನ್ನತ ಅಧಿಕಾರವನ್ನು ಪಡೆಯುವುದರಲ್ಲಿ ಸಫಲರಾಗಿದ್ದರು.
ಇನ್ನು ವಯಕ್ತಿಕವಾಗಿ ಹೇಳಬೇಕೆಂದರೆ, ತಮ್ಮ ಈ ಎಲ್ಲಾ ಹೋರಾಟಗಳು ತಮ್ಮ ಕಾಲಕ್ಕೇ ಸೀಮಿತವಾಗಿರಲಿ. ನಾವು ಪಟ್ಟ ಕಷ್ಟ (ಐಶಾರಾಮೀತನದಲ್ಲೂ ಕಷ್ಟವನ್ನು ಹುಡುಕಿಕೊಂಡಿದ್ದರು) ತಮ್ಮ ಮಕ್ಕಳಿಗೆ ಬರುವುದು ಬೇಡ. ಅವರು ಒಳ್ಳೆಯ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲಿ ಎನ್ನುವುದು ಅವರ ಭಾವನೆಯಾಗಿತ್ತು. ಅದಕ್ಕೆ ಪೂರಕವಾಗಿಯೇ ಅವರ ಮಕ್ಕಳು ಓದಿನಲ್ಲಿ ಅಷ್ಟೇನೂ ಬುದ್ಧಿವಂತರಲ್ಲದಿದ್ದರೂ, ಸರ್ಕಾರೀ ಮೀಸಾಲಾತಿಯ ಪರಿಣಾಮವಾಗಿ ನೋಡ ನೋಡುತ್ತಿದ್ದಂತೆಯೇ ಪ್ರೌಢಶಾಲೆ, ಕಾಲೇಜು ಮುಗಿಸಿ, ವೈದ್ಯಕೀಯ ಶಿಕ್ಷಣಕ್ಕೂ ಸುಲಭವಾಗಿ ದಾಖಲಾತಿ ಪಡೆದು ಏಳೆಂಟು ಬಾರಿ ದಂಡಯಾತ್ರೆ ಹೊಡೆದು ಅಂತೂ ಇಂತೂ ವೈದ್ಯಕೀಯ ಪಡೆದರೂ, ಮತ್ತೆ ಉನ್ನತ ವೈದ್ಯಕೀಯ ಪದವಿಯನ್ನು ಮುಗಿಸುವಷ್ಟರಲ್ಲಿ ಸರ್ಕಾರೀ ಆಸ್ಪತ್ರೆಯಲ್ಲಿ ಕೆಲಸವು ಸಿಕ್ಕೇ ಬಿಟ್ಟಿತು. ಸರ್ಕಾರೀ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ಮಾಡಿ ಅನುಭವ ಪಡೆಯುವುದಕ್ಕಿಂತಲೂ ಇತರೇ ವಿಷಯಗಳಲ್ಲಿಯೇ ಸಮಯ ಕಳೆಯುವಷ್ಟರಲ್ಲಿ ನೋಡ ನೋಡುತ್ತಿದ್ದಂತೆಯೇ, ಸರ್ಕಾರಿ ಹೃದ್ರೋಗ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಯಾಗಿ ಭಡ್ತಿಯನ್ನೂ ಪಡೆದೇ ಬಿಟ್ಟರು.
ಅದೊಂದು ದಿನ ಆ ರಾಜಕಾರಣಿಗಳ ಧರ್ಮ ಪತ್ನಿಯವರಿಗೆ ಇದ್ದಕ್ಕಿದ್ದಂತೆಯೇ ಹೃದಯ ಸಂಬಂಧಿತ ಖಾಯಿಲೆ ಕಾಣಿಸಿಕೊಂಡಿದ್ದು ಅವರ ಮನೆಯಲ್ಲಿ ಒಂದು ರೀತಿಯ ಆತಂಕ ಮೂಡಿಸಿತ್ತು. ಪ್ರಾಥಮಿಕ ಚಿಕಿತ್ಸೆ ನಡೆಸಿದಾಗ ಅಕೆ ಶಸ್ತ್ರಚಿಕಿತ್ಸೆಗೆ ಒಳಗಾಗ ಬೇಕೆಂದು ತಿಳಿಯಲಾಯಿತು. ಶೈಕ್ಷಣಿಕವಾಗಿ ಅಷ್ಟೇನೂ ಓದಿರದಿದ್ದ ಆಕೆ, ತಾನು ಆಯಿತು ತಮ್ಮ ಮನೆಯಾಯಿತು. ತಮ್ಮ ಪೂಜೆ ಪುನಸ್ಕಾರಗಳಾಯಿತು. ತಮ್ಮ ಪತಿಯವರನ್ನು ಹುಡುಕಿಕ್ಕೊಂಡು ಮನೆಗೆ ಬರುತ್ತಿದ್ದವರ ಅತಿಥಿ ಸತ್ಕಾರಗಳಿಗಷ್ಟೇ ಸೀಮಿತವಾಗಿ ಹೊರಗಿನ ಪ್ರಪಂಚ ಅಷ್ಟೇನೂ ಅರಿತಿರದಂತಹ ಮುಗ್ಧ ತಾಯಿ.
ಅಕೆಯ ಆರೋಗ್ಯ ವಿಚಾರಿಸಲು ಬಂದ ಸಂಬಂಧೀಕರು, ನಿಮ್ಮ ಯಜಮಾನರೇ ರಾಜ್ಯ ರಾಜಕಾರಣದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ನಿಮ್ಮ ಮಗನೇ ಹೆಸರಾಂತ ಸರ್ಕಾರೀ ಹೃದ್ರೋಗ ಆಸ್ಪತೆಯ ಮುಖ್ಯಸ್ಥರಾಗಿದ್ದಾರೆ ಇನ್ನೇಕೆ ಭಯ? ನಿಮ್ಮ ಆರೋಗ್ಯದ ಕಾಳಜಿಯನ್ನು ಅವರು ನೋಡಿಕೊಳ್ಳುತ್ತಾರೆ. ನೀವು ನಿಶ್ಚಿಂತರಾಗಿರಿ ಎಂದು ಸಂತೈಸತೊಡಗಿದರು. ಆಶ್ಚರ್ಯ ಮತ್ತು ಕುತೂಹಲಕಾರಿ ವಿಷಯವೇನೆಂದರೆ ಅವರಿಗೆ ಅವರ ಮಗನ ಸರ್ಕಾರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಇಷ್ಟವಿರಲಿಲ್ಲ. ಅವರು ನನಗೆ ಚಿಕಿತ್ಸೆ ಕೊಡಬೇಕೆನಿಸಿದರೆ, ತನ್ನ ಮಗನ ಸಹಪಾಠಿಯಾಗಿದ್ದ ಮತ್ತೊಬ್ಬ ವೈದ್ಯನ ಖಾಸಗೀ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಕೊಡಿಸಬೇಕೆಂದು ಪಟ್ಟು ಹಿಡಿದುಬಿಟ್ಟರು. ಸಕಲ ಸರ್ಕಾರೀ ಸವಲತ್ತುಗಳೊಡನೆ ಮಗನೇ ಖುದ್ದಾಗಿ ಶಸ್ತ್ರ ಚಿಕಿತ್ಸೆ ಮಾಡುತ್ತೇನೆ ಎಂದರೂ ಆಕೆ ತನ್ನ ಹಠವನ್ನು ಬಿಡದಿದ್ದಾಗ ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಮನಸ್ಥಾಪವೇಕೆ ಎಂದು ಆವರ ಇಚ್ಛೆಯಂತೆಯೇ ಮಗನ ಸ್ನೇಹಿತರೇ ಶಸ್ತ್ರಚಿಕಿತ್ಸೆ ನಡೆಸಿ ಕೆಲವೇ ಕೆಲವು ದಿನಗಳಲ್ಲಿ ಆಕೆ ಸಂಪೂರ್ಣವಾಗಿ ಹಿಂದಿನಂತೆಯೇ ಚೇತರಿಸಿಕೊಳ್ಳುತ್ತಾರೆ.
ತಮ್ಮನ್ನು ಅಷ್ಟು ಚೆನ್ನಾಗಿ ಆರೈಕೆ ಮಾಡಿದ ಮಗನ ಸ್ನೇಹಿತನನ್ನು ಮನೆಗೆ ಕರೆದು ಆದರಿಸುತ್ತಾರೆ. ಹೀಗೆ ಮಾತನಾಡುತ್ತಿದ್ದಾಗ ಆ ವೈದ್ಯರು ಅಲ್ಲಮ್ಮಾ, ನಿಮ್ಮ ಮನೆಯವರು ಎಂತಹ ರಾಜಕಾರಣಿಗಳು ನಿಮ್ಮ ಮಗನೇ ಸರ್ಕಾರೀ ಆಸ್ಪತ್ರೆಯ ಹಿರಿಯ ಮೇಲ್ವಿಚಾರಕರು ಅಂತಹದ್ದನ್ನೆಲ್ಲವನ್ನೂ ಬಿಟ್ಟು ನೀವು ನನ್ನ ಬಳಿಯೇ ಚಿಕಿತ್ಸೆ ತೆಗೆದಿಕೊಳ್ಳಲು ಹಠ ಹಿಡಿದಿದ್ದು ಏಕೆಂದು ಕೇಳಬಹುದೇ? ಎಂದು ವಿನಮ್ರವಾಗಿ ಕೇಳುತ್ತಾರೆ. ಅಯ್ಯೋ ಮಗನೇ ಅದನ್ಯಾಕೇ ಕೇಳ್ತಿಯಾ? ನಮ್ಮ ಮಗನ ಸತ್ಯ ನನಗೆ ಗೊತ್ತಿಲ್ವಾ ಹತ್ತಾರು ಸಲಾ ದಂಡ ಯಾತ್ರೆ ಹೊಡೆದು ಕಷ್ಟ ಪಟ್ಟು ಡಾಕ್ಟರ್ ಪಾಸ್ ಮಾಡಿದ್ದಾನೆ. ಇನ್ನು ನಮ್ಮ ಜಾತೀ ನೋಡಿ ಮತ್ತು ಅವನ ಅಪ್ಪನ ರಾಜಕೀಯ ದೆಸೆಯಿಂದ ಅವನು ಅಷ್ಟು ಮೇಲೆ ಬಂದಿದ್ದಾನೆ ಅಷ್ಟೇ. ನಾನು ಅವನ ಹತ್ರಾ ಚಿಕಿತ್ಸೆ ಪಡದಿದ್ರೇ ಗೋವಿಂದಾ ಗೋವಿಂದ. ನೀವು ಬ್ರಾಹ್ಮಣರು. ಹುಟ್ಟಿನಿಂದಲೇ ಬುದ್ದಿವಂತರು. ಯಾವ ಜಾತಿಯ ಹಂಗಿಲ್ಲದೇ ಸ್ವಂತ ಪರಿಶ್ರಮದಿಂದ ಕಷ್ಟ ಪಟ್ಟು ಮೇಲೆ ಬಂದಿದ್ಯಾ. ನಿನ್ನ ಕೈಗುಣಾನೂ ಚೆನ್ನಾಗಿದೇ ಅಂತಾ ಜನಾ ಮಾತಾಡ್ಕೊತಾ ಇರ್ತಾರೆ ಅದಕ್ಜೇ ನಿನ್ನ ಹತ್ರ ತೋರಿಸ್ಕೊಳ್ಳಕ್ಕೆ ಹಠಾ ಹಿಡಿದಿದ್ದು ಅಂದಾಗ ಆ ವೈದ್ಯರು ಮೂಗಿನ ಮೇಲೆ ಬೆರಳಿಡುತ್ತಾರೆ.
ಆಂಬೇಡ್ಗರ್ ಬಗ್ಗೆಯಾಗಲೀ ಅವರ ಚಿಂತನೆಗಳು ಮತ್ತು ಆವರ ಮುಂದಾಳತ್ವದಲ್ಲಿ ಜಾರಿಗೆ ಬಂದ ಸಂವಿಧಾನದ ಬಗ್ಗೆ ಒಂದು ಚೂರು ತಿಳುವಳಿಕೆ ಇಲ್ಲದಿದ್ದರೂ ಸಹಾ ಮಾತೆತ್ತಿದ್ದರೆ ನನ್ನ ಧರ್ಮಕ್ಕಿಂತಲೂ ನನಗೆ ಅಂಬೇಡ್ಕರ್ ಅವರ ಸಂವಿಧಾನ ಮುಖ್ಯಾ ಎಂದು ಪುಂಖಾನು ಪುಂಖವಾಗಿ ಹೇಳಿಕೆ ನೀಡುತ್ತಾ, ಸಕಲ ಸರ್ಕಾರೀ ಸವಲತ್ತುಗಳನ್ನು ಪಡೆಯುತ್ತಾ ತಮ್ಮ ಹತ್ತಾರು ತಲೆಮಾರುಗಳಿಗೆ ಸಾಕಾಗುವಷ್ಟು ಆಸ್ತಿಗಳನ್ನು ಮಾಡುಕೊಂಡಿದ್ದರೂ, ನಮ್ಮನ್ನು ಬ್ರಾಹ್ಮಣರು ತಲೆ ತಲಾಂತರಗಳಿಂದ ತುಳಿದು ಹಾಕಿದ್ದರು. ನಮ್ಮ ಮೇಲೆ ದೌರ್ಜನ್ಯ ಮಾಡಿ ನಮ್ಮ ಜನಾಂಗಕ್ಕೆ ಶಿಕ್ಷಣದಿಂದ ದೂರವಿಟ್ಟಿದ್ದರು ಎಂಬ ಹೇಳಿಕೆಯನ್ನು ನೀಡುವುದು ಅವರ ಇತ್ತೀಚಿನ ಶೋಕಿಯಾಗಿ ಹೋಗಿದೆ.
ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಬ್ರಾಹ್ಮಣರೆಂದರೆ ತಟ್ಟೇ ಕಾಸಿಗೆ ಆಸೆ ಪಡುವವರು. ದೇವರ ಪೂಜೆ ಮಾಡುವಾಗ ತಟ್ಟೇ ಕಾಸಿನ ಬಗ್ಗೆಯೇ ಯೋಚಿಸುತ್ತಿರುತ್ತಾರೆ ಎಂದು ಓತ ಪ್ರೋತವಾಗಿ ನಾಲಿಗೆ ಹರಿ ಬಿಡುತ್ತಿದ್ದರೆ, ಇನ್ನು ಸಿನಿಮಾ ಮಂದಿಗೆ ಬ್ರಾಹ್ಮಣರನ್ನು ಕೀಳು ಕೀಳಾಗಿ ತೋರಿಸುವುದೇ ಮನರಂಜನೆ ಎಂದು ಕೊಂಡಿರುವುದು ನಿಜಕ್ಕೂ ವಿಷಾಧನೀಯವೇ ಸರಿ.
ಅನಾದಿ ಕಾಲದಿಂದಲೂ ಬ್ರಾಹ್ಮಣರು ಎಂದು ಚಿತ್ರಿಸಬೇಕಾದರೇ, ಬಡ ಬ್ರಾಹ್ಮಣರೆಂದೇ ಹೇಳುತ್ತಿದ್ದರು, ಅದು ಕೃಷ್ಣನ ಸ್ನೇಹಿತ ಕುಚೇಲನಾಗಿರಲೀ, ಪಾಂಡವರ ಗುರುಗಳಾದ ದ್ರೋಣಾಚಾರ್ಯರಾಗಿರಲೀ ಅವರೆಲ್ಲರೂ ಸಕಲ ವಿದ್ಯಾಪಾರಂಗತರಾದರೂ ಬಡವರಾಗಿಯೇ ಇರುತ್ತಿದ್ದರು. ಇನ್ನು ಬ್ರಾಹ್ಮಣರನ್ನು ತಲೆ ತಲಾಂತರಗಳಿಂದಲೂ ಪುರೋಹಿತರು ಎಂದು ಸಂಬೋಂಧಿಸಲಾಗುತ್ತದೆ. ಯಾರು ಪುರದ ಹಿತವನ್ನು ಕಾಪಾಡುತ್ತಾರೋ ಅವರು ಮಾತ್ರವೇ ಪುರೋಹಿತರಾಗುತ್ತಾರೆ. ಅಂದರೆ ಪುರದ ಹಿತವನ್ನು ಕಾಪಾಡುತ್ತಿದ್ದ ಬ್ರಾಹ್ಮಣರು ಅನ್ವರ್ಥವಾಗಿ ಪುರೋಹಿತರಾದರೇ ಹೊರತು ಅ ಪಟ್ಟವನ್ನು ಅವರೆಂದೂ ಬಲವಂತದಿಂದಾಗಲೀ ಅಥವಾ ಯಾವುದೇ ಮೀಸಲಾತಿಯಿಂದಾಗಲೀ ಪಡೆದಿರಲಿಲ್ಲ ಎನ್ನುವುದು ಗಮನಾರ್ಹವಾಗಿದೆ.
ಮದುವೆಗೆ ಲಗ್ನ, ಪ್ರಸ್ತಕ್ಕೆ ಲಗ್ನ, ಸೀಮಂತ ಮಾಡಲು ಲಗ್ನ, ಮಕ್ಕಳ ನಾಮಕರಣಕ್ಕೆ ಲಗ್ನ, ಹೆಣ್ಣು ಮಕ್ಕಳು ಮೈನೆರೆದರೆ ಲಗ್ನ, ಮನೆಯಲ್ಲಿ ಯಾವುದೇ ಶುಭ ಅಥವಾ ಅಶುಭಕ್ಕೆ ಲಗ್ನ ತಿಳಿಸಲೂ ಇದೇ ಬ್ರಾಹ್ಮಣರೇ ಬೇಕು. ಊರ ಗ್ರಾಮ ದೇವತೆ ಪೂಜೆ ಮಾಡಲು ಬ್ರಾಹ್ಮಣರು ಬೇಕು. ಯುಗಾದಿಯಂದು ಊರ ಮುಂದಿನ ಅರಳೀ ಕಟ್ಟೆಯ ಮೇಲೆ ಕುಳಿತುಕೊಂಡು ಆ ವರ್ಷ ಮಳೆ, ಬೆಳೆ ಹೇಗಿದೆ ಎಂದು ಪಂಚಾಗ ನೋಡಿ ಈ ವರ್ಷ ಮಳೆಯ ಆಧಾರಿತವಾಗಿ ಯಾವ ಬೆಳೆಯನ್ನು ಬೆಳೆದರೆ ಊರಿನ ರೈತಾಪಿ ಜನರಿಗೆ ಒಳ್ಳೆಯದಾಗುತ್ತದೆ ಎಂಬುದನ್ನು ಹೇಳಲೂ ಇವರಿಗೆ ಬ್ರಾಹ್ಮಣರೇ ಬೇಕು. ಆದರೆ ಸರ್ಕಾರೀ ಸವಲತ್ತು ಪಡೆಯುವಾಗ ಮಾತ್ರಾ ಬ್ರಾಹ್ಮಣರನ್ನು ವಿನಾಕಾರಣ ದ್ವೇಷಿಸುವುದು ಮಾತ್ರಾ ಏಕೆಂದು ಅರ್ಥವಾಗುತ್ತಿಲ್ಲ.
ಹಿಂದೂ ಧರ್ಮದಲ್ಲಿರುವ ಯಾವುದೇ ದೇವರುಗಳು ಬ್ರಾಹ್ಮಣರಲ್ಲ. ಶ್ರೀ ರಾಮ ಕ್ಷತ್ರಿಯ, ಶ್ರೀ ಕೃಷ್ಣ ಗೊಲ್ಲ. ಇನ್ನು ರಾಮಾಯಣದ ಕರ್ತೃ ವಾಲ್ಮೀಕಿ ಮರ್ಹರ್ಷಿ ಬೇಡರು, ವಿಶ್ವಾಮಿತ್ರರು ಕ್ಷತ್ರೀಯರು. ನಾಟ್ಯಶಾಸ್ತ್ರದ ಭರತ ಮುನಿ, ಅಗಸ್ತ್ಯ, ಜಾಬಾಲಿ, ಮಾರ್ಕಂಡೇಯ, ಇವರೆಲ್ಲರೂ ಅಬ್ರಾಹ್ಮಣರೇ. ಇಡೀ ಪುರಾಣ ಮತ್ತು ಇತಿಹಾಸವನ್ನು ಅವಲೋಕಿಸಿ ನೋಡಿದಲ್ಲಿ ಕೇವಲ ಬೆರಳೆಣಿಯಷ್ಟು ಬ್ರಾಹ್ಮಣರು ರಾಜರಾಗಿ ರಾಜ್ಯವಾಳಿದ್ದಾರೆಯೇ ಹೊರತು ಉಳಿದವರ್ಯಾರೂ ಆಡಳಿತ ನಡೆಸಿಯೇ ಇಲ್ಲ. ಅಂದಿನ ಮತ್ತು ಇಂದಿನ ಜನ ಸಂಖ್ಯೆಯನ್ನು ಗಮನಿಸಿದರೂ ಬ್ರಾಹ್ಮಣರ ಜನಸಂಖ್ಯೆ ಶೇ 2-3% ಕ್ಕಿಂತ ಮೀರಿಯೇ ಇಲ್ಲದಿರುವಾಗ ಅವರು ಅದು ಹೇಗೆ ಸಮಾಜದ ಉಳಿದ ಜನರನ್ನು ತುಳಿಯಲು ಸಾಧ್ಯ ? ಎಂದು ಯಾರಾದರೂ ಹೇಳಲು ಸಾಧ್ಯವೇ?
ಇನ್ನು ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ಹನ್ನೆರಡನೇ ಶತಮಾನದಲ್ಲಿ ರಚಿತವಾದ ಅನೇಕ ವಚನಗಳ ಕಾರಣಿಭೂತರು ಶೂದ್ರರೇ. ಶೂದ್ರರಾದ ಕನಕ , ಶರೀಫಾ , ವೇಮನ , ಯೋಗಿನಾರಾಯಣ , ಇಂತಹ ಮಾಹಾನ್ ವ್ಯಕ್ತಿಗಳಿಂದ ವಿರಚಿತ ಗ್ರಂಥಗಳೇ ಇಂದಿಗೂ ನಮಗೆ ಆಧಾರವಾಗಿದೆ. ಶೂದ್ರ ಪುಲಕೇಶಿ ಸೊಸೆ ಕವಯತ್ರಿ ವಿಜ್ಜಿಕೆ, ಶ್ರೇಷ್ಠ ಸಂಸ್ಕೃತ ವಿದ್ವಾಂಸ ಕಾಳಿದಾಸನೂ ಹುಟ್ಟಿನಿಂದ ಶೂದ್ರರೇ ಅಲ್ಲವೇ?
ರನ್ನ ಜನ್ನ ಪೊನ್ನ, ಪಂಪ, ಕನಕದಾಸ ಇವರ್ಯಾರೂ ಬ್ರಾಹ್ಮಣರೇ ಅಲ್ಲದಿದ್ದರೂ ಅವರಗಳು ಬರೆದ ಗ್ರಂಥಗಳೇ ಇಂದಿಗೂ ಕನ್ನಡ ಸಾರಸ್ವತ ಲೋಕದಲ್ಲಿ ಶ್ರೇಷ್ಠವಾದವು ಎಂದೇ ಗುರುತಿಸಲಾಗುತ್ತದೆ. ಅದೇ ಗ್ರಂಥಗಳನ್ನೇ ಬ್ರಾಹ್ಮಣರು, ಸಂಗೀತ ರೂಪದಲ್ಲಿ, ಗಮಕ ಮತ್ತು ಹರಿಕಥೆ ರೂಪದಲ್ಲಿ ಜನರ ಮುಂದೆ ಅಂದಿಗೂ ಇಂದಿಗೂ ಪ್ರಚರ ಪಡಿಸುತ್ತಿದ್ದಾರೆ. ಬ್ರಾಹ್ಮಣರು ಶೂದ್ರರಿಗೆ ವಿದ್ಯೆ ಕಲಿಸುವುದರಿಂದ ವಂಚಿಸಿದರು ಎಂದರೆ ಇವರೆಲ್ಲಾ ಹೇಗೆ ಕಲಿತರು?
ನಿಜ ಹೇಳಬೇಕೆಂದರೆ ಅಂದಿನ ಗುರುಕುಲಗಳಲ್ಲಿ ಎಲ್ಲರಿಗೂ ವಿದ್ಯೆ ಕಲಿಯುವ ಅವಕಾಶ ಇತ್ತಾದರೂ, ಬ್ರಾಹ್ಮಣರು ಮತ್ತು ವೈಶ್ಯರು ಶ್ರದ್ಧೆಯಿಂದ ಶಾಸ್ತ್ರ ಮತ್ತು ವಿದ್ಯೆಗಳನ್ನು ಕಲಿತು ದೇವರ ಪೂಜೆ ಪುನಸ್ಕಾರಗಳು ಮತ್ತು ವ್ಯಾಪಾರದಲ್ಲಿ ತೊಡಗಿಸಿಕೊಂಡರೆ, ವಿದ್ಯೆ ತಲೆಗೆ ಹತ್ತದ ಅಥವಾ ವಿದ್ಯೆ ಕಲಿಯಲು ಆಸಕ್ತಿಯನ್ನೇ ತೋರದ ಕ್ಷಾತ್ರೀಯರು ಸೈನ್ಯಕ್ಕೆ ಸೇರಿಕೊಂಡು ದೇಶವನ್ನು ರಕ್ಷಿಸುವ ಕ್ಷತ್ರಿಯರಾದರೇ, ಉಳಿದವರು ತಮ್ಮನ್ನು ತಾವು ಇತರೇ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡರೇ ವಿನಾಃ ಯಾರೂ ಯಾರ ವಿದ್ಯೆಯ ಹಕ್ಕನ್ನು ಹತ್ತಿಕ್ಕುವುದಾಗಲೀ ಕಿತ್ತುಕೊಳ್ಳುವುದಾಗಲೀ ಮಾಡಲೇ ಇಲ್ಲ.
ಇನ್ನು ಬ್ರಾಹ್ಮಣರಿಂದ ತುಳಿತಕ್ಕೆ ಒಳಗಾಗಿದ್ದೇವೆ ಎಂದು ಬೊಬ್ಬೆ ಹೊಡೆಯುವ ಮಂದಿ ಕಳೆದ ಇನ್ನೂರು ಮುನ್ನೂರು ವರ್ಷಗಳಲ್ಲಿ ಬ್ರಾಹ್ಮಣರಿಂದ ದಬ್ಬಾಳಿಕೆ ಒಳಗಾದ ಪ್ರಸಂಗವನ್ನು ಸಾಕ್ಷಿಯಾಗಿ ತೋರಿಸಬಲ್ಲರೇ? ಬ್ರಿಟೀಷರು ಭಾರತವನ್ನು ವಶಕ್ಕೆ ತೆಗೆದುಕೊಳ್ಳಬೇಕೆಂದು ನಮ್ಮ ನಮ್ಮಲ್ಲಿಯೇ ಒಳ ಜಗಳ ತಂದು ಒಡಕನ್ನುಂಟು ಮಾಡುತ್ತಿದ್ದದ್ದನ್ನು ಮೊದಲು ಗ್ರಹಿಸಿದವರೇ ಬ್ರಾಹ್ಮಣರು. ಹಾಗಾಗಿಯೇ ಬ್ತಾಹ್ಮಣರೇ ಮೊದಲು ಬ್ರಿಟೀಷರ ವಿರುದ್ಧ ತಿರುಗಿ ಬಿದ್ದಾಗ, ಸಮಾಜದಲ್ಲಿ ಗೌರವಯುತ ಸ್ಥಾನ ಮಾನ ಹೊಂದಿದ್ದ ಮತ್ತು ಸಮಾಜವನ್ನು ಎತ್ತಿ ಕಟ್ಟ ಬಲ್ಲ ಶಕ್ತಿಯನ್ನು ಹೊಂದಿದ್ದ ಇಂತಹ ಬುದ್ಧಿವಂತ ಜನಾಂಗ ತಮ್ಮ ವಿರುದ್ಧ ತಿರುಗಿ ಬಿದ್ದರೆ, ನಮಗೆ ಆಪತ್ತು ಕಟ್ಟಿಟ್ಟ ಬುತ್ತಿ ಎಂಬುದನ್ನು ಅರಿತು, ವಿನಾಕಾರಣ ಬ್ರಾಹ್ಮಣರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಇತರೇ ಸಮಾಜದ ವಿರುದ್ದ ಎತ್ತಿ ಕಟ್ಟಿ ಕಾಗಕ್ಕ ಗುಬ್ಬಕ್ಕ ಕಥೆಗಳನ್ನು ಹೇಳಿದ್ದನೇ ನಂಬಿದವರು ಈಗಲೂ ಅದನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಸಮಾಜದಲ್ಲಿ ಉಳಿದ ವರ್ಗಗಳಿಂದ ತುಳಿತಕ್ಕೆ ಒಳಗಾಗಿದ್ದ ಭೀಮ್ ರಾವ್ ಎಂಬ ದಲಿತ ಹುಡುಗನಿಗೆ ಅವರ ಪ್ರಾಥಮಿಕ ಶಾಲೆಯ ಗುರುಗಳಾಗಿದ್ದ ಶ್ರಿ ಕೃಷ್ಣ ಕೇಶವ್ ಅಂಬೇಡ್ಕರ್ ಎಂಬ ದೇವ್ರುಖೆ ಬ್ರಾಹ್ಮಣ ಪಂಥದವರೇ, ಶಾಲಾ ದಾಖಲೆಗಳಲ್ಲಿ ತಮ್ಮದೇ ಆದ ಉಪನಾಮವಾದ ಅಂಬೇಡ್ಕರ್ ಎಂದು ಬದಲಾಯಿಸಿ ಅವರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಸಿಗುವಂತೆ ಮಾಡಿದ್ದರು. ಅಂಬೇಡ್ಕರ್ ಅವರ ಎರಡನೇ ಪತ್ನಿಯವರಾಗಿದ್ದ ಶ್ರೀಮತಿ ಸವಿತಾ ಅಂಬೇಡ್ಕರ್ ಕೂಡಾ ಜನ್ಮತಃ ಬ್ರಾಹ್ಮಣರೇ,.
ದೀನ ದಲಿತರ ಉದ್ಧಾರಕ್ಕೆಂದೇ ತಮ್ಮ ಸರ್ವಸ್ವವನ್ನೂ ಮೀಸಲಾಗಿಟ್ಟಿದ್ದ ಕುದ್ಮಲ್ ರಂಗರಾಯರು ದಲಿತರಿಗಾಗಿಯೇ ಹತ್ತಾರು ಶಾಲೆಗಳನ್ನು ಆರಂಭಿಸಿ, ಶಾಲೆಯಲ್ಲಿ ಕಲಿತ ದಲಿತ ಜನಾಂಗದ ಮಕ್ಕಳು ವಿದ್ಯಾವಂತರಾಗಿ, ದೊಡ್ಡವರಾಗಿ, ಸರ್ಕಾರಿ ನೌಕರಿಗೆ ಸೇರಿ, ನಮ್ಮೂರ ರಸ್ತೆಗಳಲ್ಲಿ ಕಾರಿನಲ್ಲಿ ಓಡಾಡಬೇಕು, ಆಗ ರಸ್ತೆಯಲ್ಲಿ ಏಳುವ ಧೂಳು ನನ್ನ ತಲೆಗೆ ತಾಗಬೇಕು ಆಗ ನನ್ನ ಜನ್ಮ ಸಾರ್ಥಕವಾಗುತ್ತದೆ ಎಂದು ಸದಾಕಾಲವೂ ಹೇಳುತ್ತಿದ್ದರು. ಇದೇ ಮಾತುಗಳನ್ನು ಅವರ ಸಮಾಧಿಯ ಮೇಲೆ ಕೆತ್ತಲಾಗಿದೆ.
ಹನ್ನೆರಡನೇ ಶತಮಾನದಲ್ಲಿ ಜನ್ಮತಃ ಬ್ರಾಹ್ಮಣರೇ ಆಗಿದ್ದು ನಂತರ ಸರ್ವಧರ್ಮ ಸಮನ್ವಯಕಾರರಾಗಿದ್ದ ಶ್ರೀ ಬಸವಣ್ಣನವರ ಲಿಂಗಾಯತ ಮಠಗಳು ಅನೇಕ ವಿದ್ಯಾಸಂಸ್ಥೆಗಳೊಂದಿಗೆ ಉಚಿತ ದಾಸೋಹವನ್ನೂ ಏರ್ಪಡಿಸಿದರೂ ಶೂದ್ರರೇಕೆ ಅನಕ್ಷರಸ್ಥರಾಗಿ ಉಳಿದರು? ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.
ಇನ್ನು ಸ್ವಾತಂತ್ರ್ಯಾ ನಂತರ ಅಂಬೇಡ್ಕರ್ ಅವರೇ ಹೇಳಿದಂತೆ ಸಮಾಜದಲ್ಲಿ ಸಮಾನತೆ ತರುವ ಸಲುವಾಗಿ ಕೇವಲ 10 ವರ್ಷಗಳು ಮಾತ್ರವೇ ಮೀಸಲಾತಿಯನ್ನು ಜಾರಿಗೆ ತಂದು ನಂತರ ಅದನ್ನು ತೆಗೆದು ಹಾಕಬೇಕೆಂದು ಸ್ಪಷ್ಟವಾಗಿ ಸಂವಿಧಾನದಲ್ಲೇ ತಿಳಿಸಿದ್ದರೂ, ಸ್ವಾತಂತ್ರ್ಯ ಬಂದು 70 ಅಧಿಕ ವರ್ಷಗಳಾದರೂ ಇಂದಿಗೂ ಅದೇ ಮೀಸಲಾತಿಗಳನ್ನು ಮುಂದುವರೆಸಿಕೊಂಡು ಹೋಗಿದ್ದರೂ ಇನ್ನೂ ಶೂದ್ರರು ಅನಕ್ಷರಸ್ಥರಾಗಿ ಉಳಿದಿರುವುದಕ್ಕೆ ಬ್ರಾಹ್ಮಣರು ಅದು ಹೇಗೆ ಕಾರಣರಾಗುತ್ತಾರೆ?.
ಬ್ರಾಹ್ಮಣರು ಜನ್ಮತಃ ಮೃದು ಸ್ವಭಾವದವರು. ಹಿಂದೆ ಬಂದರೆ ಹಾಯ ಬೇಡಿ ಮಂದೆ ಬಂದರೆ ಒದೆಯ ಬೇಡಿ ಎನ್ನುವ ಸಾಧು ಸ್ವಭಾವದವರು ಎಂದು ಹಾದಿ ಬೀದಿಯಲ್ಲಿ ಹೋಗುವವರೆಲ್ಲಾ ತಮ್ಮ ಮನಸೋ ಇಚ್ಚೆ ಬಾಯಿಗೆ ಬಂದಂತೆ ಬೀದಿಯಲ್ಲಿ ನಿಂತೋ ಇಲ್ಲವೇ ದೃಶ್ಯ ಮಾಧ್ಯಮಗಳ ಮೂಲಕ ವಾಚಾಮ ಗೋಚರವಾಗಿ ಬ್ರಾಹ್ಮಣರನ್ನು ಹಳಿಯಲು ಯಾರಿಗೂ ಹಕ್ಕಿಲ್ಲ. ಬ್ರಾಹ್ಮಣರಾಗಿದ್ದ ಪರುಶುರಾಮ ಸೆಟೆದು ನಿಂತಾಗ ಕ್ಷತ್ರೀಯ ವಂಶ ನಾಶವಾಗಿತ್ತು. ಬ್ರಾಹ್ಮಣರಾಗಿದ್ದ ಚಾಣುಕ್ಯರನ್ನು ಎದುರು ಹಾಕಿಕೊಂಡ ನಂದರು ನಾಶವಾಗಿ ಹೋದರು. ಉತ್ತರ ಭಾರತದಿಂದ ದಕ್ಷಿಣದ ಭಾರತದ ಕಡೆ ಮುನ್ನುಗ್ಗುತ್ತಿದ್ದ ಮುಸಲ್ಮಾನರನ್ನು ತಡೆ ಹಿಡಿಯುವ ಸಲುವಾಗಿಯೇ ವಿಜಯ ನಗರ ಸಾಮ್ರಾಜ್ಯವನ್ನು ಹಕ್ಕಬುಕ್ಕರ ನೇತೃತ್ವದಲ್ಲಿ ಕಟ್ಟಿದ್ದೂ ಗುರು ವಿದ್ಯಾರಣ್ಯರೂ ಬ್ರಾಹ್ಮಣರೇ. ಪ್ರಪಂಚಾದ್ಯಂತ ಇರುವ ಬಹುತೇಕ ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರೂ ಬ್ರಾಹ್ಮಣರೇ ಎನ್ನುವುದು ನಂಬಲೇ ಬೇಕಾದ ಸತ್ಯ. ಹಾಗಾಗಿ ವಿನಾ ಕಾರಣ ಬ್ರಾಹ್ಮಣರನ್ನು ಎದುರು ಹಾಕಿಕೊಳ್ಳುವುದು ಒಳ್ಳೆಯ ಲಕ್ಷಣವಲ್ಲ. ಇಂದಿನ ಬ್ರಾಹ್ಮಣರು ಸ್ನೇಹಕ್ಕೂ ಬದ್ಧ. ಸಮರಕ್ಕೂ ಸಿದ್ಧ. ಅವರವರ ಭಾವಕ್ಕೆ ಅವರವರ ಭಕುತಿ ಎನ್ನುವಂತೆ ಇದನ್ನು ಬ್ರಾಹ್ಮಣರ ಕ್ಷಾತ್ರ ತೇಜ ಎಂದಾದರೂ ತಿಳಿಯಲಿ ಇಲ್ಲವೇ ಎಚ್ಚರಿಕೆಯ ಗಂಟೆ ಎಂದಾದರೂ ಭಾವಿಸಲಿ.
ಭಾಷಣಗಳಲ್ಲಿ ಮಾತ್ರವೇ ನಮ್ಮದು ಜಾತ್ಯಾತೀತ ರಾಷ್ಟ್ರ ಎಂದು ಪುಂಖಾನೂ ಪುಂಖವಾಗಿ ಹೇಳುತ್ತಾ ಅನವಶ್ಯಕವಾಗಿ ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಮನಸೋ ಇಚ್ಚೆ ಹಿಂದೂಗಳನ್ನು ಅದರಲ್ಲೂ ಬ್ರಾಹ್ಮಣರನ್ನೂ ಅವಹೇಳನ ಮಾಡುವುದು ನೋಡಿದರೆ ಹೇಳೋದು ಶಾಸ್ತ್ರ ತಿನ್ನೋದು ಮಾತ್ರಾ ಬದನೇ ಕಾಯಿ ಎನ್ನುವ ಗಾದೆ ಮಾತೆ ಇವರಿಗೇ ಹೇಳಿ ಮಾಡಿಸಿದಂತಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ.
ಒಂದು ನಿನಿಮಾದಲ್ಲಿನ ಸನ್ನಿವೇಶಕ್ಕಾಗಿ ಬ್ರಾಹ್ಮಣರು ಇಷ್ಟೊಂದು ಆವೇಶಗೊಳ್ಳುವ ಅವಶ್ಯಕತೆ ಇರಲಿಲ್ಲ. ನಿನಿಮಾ ಒಂದು ಕಲಾಮಾಧ್ಯಮ. ಅದರಲ್ಲಿನ ಸನ್ನಿವೇಶಕ್ಕೆ ಬ್ರಾಹ್ಮಣರ ಮೇಲೆ ಕಾಲಿಟ್ಟಿದ್ದಕ್ಕೆ ಬ್ರಾಹ್ಮಣರು ಇಷ್ಟೊಂದು ಅಸಹನೆ ತೋರಿಸುವುದು ಬ್ರಾಹ್ಮಣರಲ್ಲಿ ಬೆಳೆಯುತ್ತಿರುವ ಮೂಲಭೂತವಾದವನ್ನು ತೋರಿಸುತ್ತದೆ.
LikeLiked by 1 person
ನಿಮ್ಮ ಪ್ರಶ್ನೆಗೆ ನನ್ನ ಮುಂದಿನ ಲೇಖನದಲ್ಲಿ ಉತ್ತರಿಸುತ್ತೇನೆ.
LikeLiked by 1 person
ಉದಾರವಾದಿಗಳಾಗಿದ್ದ ಬ್ರಾಹ್ಮಣರೇ ಮೂಲಭೂತವಾದಿಗಳಾಗುತ್ತಿದ್ದಾರೆಂದರೆ ಅನ್ನುವುದಾದರೆ, ಅವರನ್ನು ಮೂಲಭೂತವಾದದತ್ತ ತಳ್ಳಿದವರು ಯಾರು?ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.
LikeLiked by 2 people
ಸ್ವಾಮಿ ಬ್ರಾಹ್ಮಣರು ಆವೇಶ ಪಡಬಾರದು ಎನ್ನುತ್ತೀರಿ ಆದರೆ ಶಾಂತಿಪ್ರಿಯ ಸಮುದಾಯದ ಜನರು ಒಂದು ಫೇಸ್ ಬುಕ್ ಪೋಸ್ಟ್ ನೆಪದಲ್ಲಿ ನಗರದ ಎರಡು ಬಡಾವಣೆ ಸುಟ್ಟಾಗ ನಿಮ್ಮಂತಹ ಜನರು ಅವರ ಪರ ವಕಾಲತ್ತು ನಡೆಸುತ್ತೀರಿ. ಬ್ರಾಹ್ಮಣರು ಮೂಲಭೂತವಾದಿಗಳು ಎಂದು ಹೀಯಾಳಿಸುವ ಬದಲು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ. ಸಂವಿಧಾನದ ತಿದ್ದುಪಡಿಯನ್ನು ವಿರೋಧಿಸುವ ಮತ್ತು ಸಂವಿಧಾನದ ಮೂಲಕ್ಕೆ ಕಾಲಕ್ಕೆ ಅನುಗುಣವಾಗಿ ಬದಲಾವಣೆ ಬಯಸದ ನಿಮ್ಮನ್ನೂ ಮೂಲಭೂತವಾದಿಗಳು ಎಂದು ಕರೆಯಬಹುದೆ?.
LikeLike