ಇಕ್ಕೇರಿ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಸುಮಾರು 6 ಕಿಮೀ ದೂರದಲ್ಲಿರುವ ಪಟ್ಟಣವಾಗಿದೆ. 1499-1763ರ ನಡುವೆ ಈ ಪ್ರದೇಶವನ್ನು ಆಳಿದ ಕೆಳದಿಯ ನಾಯಕರ ರಾಜಧಾನಿಯಾಗಿತ್ತು. ಇಲ್ಲಿರುವ ಅಘೋರೇಶ್ವರ ದೇವಸ್ಥಾನ ಬಹಳ ಪ್ರಖ್ಯಾತವಾಗಿದ್ದು, ಇದರ ಕುರಿತಾಗಿ ಅನೇಕ ದಂತ ದಂತಕಥೆಗಳಿವೆ. ಚೌಡೇಗೌಡ ಮತ್ತು ಭಧ್ರೇ ಗೌಡ ಎಂಬ ಇಬ್ಬರು ಸಹೋದರರು ಅದೊಮ್ಮೆ ತಮ್ಮ ಹೊಲದಲ್ಲಿ ಹಸುಗಳನ್ನು ಮೇಯಿಸುತ್ತಿದ್ದಾಗ, ಅವರ ಹಸುವೊಂದು ಅಲ್ಲಿದ್ದ ಹುತ್ತದ ಮೇಲೆ ತಂತಾನೇ ಹಾಲನ್ನು ಸುರಿಸುತ್ತಿದ್ದದ್ದನು ಗಮನಿಸಿ ಆ ಹುತ್ತವನ್ನು ಅಗೆದಾಗ ಅಲ್ಲೊಂದು ಲಿಂಗವನ್ನು ಕಂಡು ಭಕ್ತಿಪೂರ್ವಕವಾಗಿ ಅದಕ್ಕೆ ನಮಿಸಿ ಅಲ್ಲೊಂದು ಸಣ್ಣ ದೇವಾಲಯವನ್ನು ನಿರ್ಮಿಸಿದರು. ಅಲ್ಲೇ ಒಂದು ಖಡ್ಗ ಮತ್ತು ನಿಧಿಯನ್ನು ಕಂಡರು. ನಿಧಿಯನ್ನು ತೆಗೆದುಕೊಳ್ಳುವ ಮೊದಲು ಆ ಜಾಗದಲ್ಲಿ ಯಜ್ಞವೊಂದನ್ನು ಮಾಡುವಂತೆ ಕನಸೊಂದನ್ನು ಕಂಡು ಅದರ ಪ್ರಕಾರವೇ ಅಲ್ಲೊಂದು ಯಾಗವನ್ನು ಮಾಡಿದ ನಂತರ ಆ ಇಬ್ಬರೂ ಸಹೋದರೂ ಶ್ರೀಮಂತರಾಗಿದ್ದಲ್ಲದೇ, ಕಡೆಗೆ ವಿಜಯನಗರದ ಮಾಂಡಲಿಕರಾಗಿದ್ದಲ್ಲದೇ ಇಕ್ಕೇರಿ ಮತ್ತು ಕೆಳದಿ ಎಂಬ ಅವಳಿ ಪಟ್ಟಣಗಳನ್ನು ಕಟ್ಟಿದ್ದಲ್ಲದೇ ಆ ಎರಡೂ ಪಟ್ಟಣಗಳಲ್ಲಿ ಅಘೋರೇಶ್ವರ ಮತ್ತು ರಾಮೇಶ್ವರ ದೇವಾಲಯಗಳನ್ನು ಭವ್ಯವಾಗಿ ಕಟ್ಟಿಸಿದರು. ಈ ಎರಡೂ ದೇವಾಲಯಗಳು ಕದಂಬರು, ವಿಜಯನಗರ ಮತ್ತು ಹೊಯ್ಸಳರ ವಾಸ್ತುಶಿಲ್ಪದ ಸಂಮ್ಮಿಶ್ರಣದಂತಿದೆ.
ಕೆಳದಿ ಅರಸ ಸದಾಶಿವ ನಾಯಕನ ಪುತ್ರ ಸಂಕಪ್ಪ ನಾಯಕನು ಉತ್ತರ ಭಾರತ ಪ್ರವಾಸದಲ್ಲಿದ್ದಾಗ ಅಲ್ಲಿ ಕಂಡಿದ್ದ ಅಘೋರೇಶ್ವರನ ಸುಂದರ ಮೂರ್ತಿಯಿಂದ ಪ್ರಭಾವಿತನಾಗಿ, ತನ್ನ ರಾಜಧಾನಿಯಲ್ಲಿ ಅದೇ ತರಹದ ಮೂರ್ತಿಯನ್ನು ನಿರ್ಮಿಸಬೇಕೆಂದು ಅದರ ಚಿತ್ರವನ್ನು ಬರೆಸಿಕೊಂಡು ಅದೇ ಪ್ರಕಾರ ಇಕ್ಕೇರಿಯಲ್ಲಿ ಬೃಹತ್ತಾದ ಅಘೋರೇಶ್ವರ ಮೂರ್ತಿಯನ್ನು ಕಲ್ಲಿನಲ್ಲಿ ಕೆತ್ತಿಸದನೆಂಬ ಉಲ್ಲೇಖವಿದೆ. ಬಿಜಾಪುರ ಸುಲ್ತಾನರ ನೇತೃತ್ವದಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಆ ಅಘೋರೇಶ್ವರ ಮೂರ್ತಿಯು ನಾಶವಾಗಿ ಅದರ ನಾಲ್ಕು ಅಡಿ ಎತ್ತರದ ಪೀಠ ಮಾತ್ರ ಈಗ ಉಳಿದಿದ್ದು, ಅದರ ಮೇಲೆಯೇ ಒಂದು ಸಣ್ಣ ಲಿಂಗವನ್ನಿರಿಸಿ ಈಗ ಪೂಜೆ ಸಲ್ಲಿಸಲಾಗುತ್ತಿದೆ.
ದಕ್ಷಿಣಾಭಿಮುಖವಾಗಿ ನಿರ್ಮಾಣವಾಗಿರುವ ಈ ದೇವಾಲಯದ ಸುತ್ತಲೂ ಅನೇಕ ಸಣ್ಣ ಮಂಟಪಗಳಿದ್ದು ಕೆತ್ತನೆಯ ಕುಸರೀ ಕಲೆ ಮತ್ತು ವಾಸ್ತುಶಿಲ್ಪ ನಿಜಕ್ಕೂ ನಯನ ಮನೋಹರವಾಗಿದೆ. ಸಾಮಾನ್ಯವಾಗಿ ಈಶ್ವರ ದೇವಾಲಯಗಳಲ್ಲಿ ನಂದಿಯ ವಿಗ್ರಹವು ದೇವಾಲಯದ ಹೊರಗಡೆ ಇರುವುದನ್ನು ನೋಡುವುದಾದರೆ, ಈ ದೇವಾಲಯದ ವೈಶಿಷ್ಟ್ಯವೆಂದರೆ, ಇಲ್ಲಿ ಗರ್ಭಗೃಹದೊಳಗೆಯೇ ಕುಳಿತಿರುವ ಸುಂದರವಾದ ನಂದಿಯನ್ನು ಕಾಣಬಹುದಾಗಿದೆ. ದೇವಾಲಯದ ಹೊರ ಗೋಡೆಗಳಲ್ಲಿ ಅಪ್ಸರ, ನಾಗ ಮತ್ತು ಪ್ರಾಣಿಗಳ ಸಂಕೀರ್ಣವಾದ ಕೆತ್ತನೆಗಳು ಮತ್ತು ಚಿಕಣಿ ಶಿಖರಗಳಿವೆ. ಸಂಕೀರ್ಣದ ಒಳಗೆ ಕೆಲವು ಕಲ್ಲಿನ ಚಪ್ಪಡಿಗಳ ಮೇಲೆ ಹಳೆಗನ್ನಡದ ಶಾಸನಗಳನ್ನು ಕಾಣಬಹುದಾಗಿದೆ.
ಇಂತಹ ಸುಂದರ ವಾದ ಅಘೋರೇಶ್ವರನ ರಥೋತ್ಸವವು ಈ ಶಾರ್ವರೀ ನಾಮ ಸಂವತ್ಸರದ ಫಾಲ್ಗುಣ ಮಾಸದ ಶುಕ್ಲ ಪಕ್ಷದ ದಶಮಿ ಅರ್ಥಾತ್ 22.03.2021 ಸೋಮವಾರ, ಸಾಂಕ್ರಮಿಕ ಮಹಾಮಾರಿ ಕರೋನಾದ ಪ್ರಯುಕ್ತ, ಸರಳವಾಗಿಯಾದರೂ ಯಾವುದೇ ಶಾಸ್ತ್ರ ಸಂಪ್ರದಾಯಗಳಿಗೆ ಕುಂದು ಬಾರದಂತೆ ಅಪಾರವಾದ ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಅಂತಹ ಸುಂದರ ರಸಕ್ಷಣಗಳನ್ನು ಮನೆಯಿಂದಲೇ ಕಣ್ತುಂಬಿಸಿಕೊಳ್ಳೋಣ ಬನ್ನಿ
ನಿಮ್ಮವನೇ ಉಮಾಸುತ