ಈ ವಾರದ ಅನೇಕ ಸುದ್ದಿಗಳಲ್ಲಿ ಎರಡು ಸುದ್ದಿಗಳು ರಾಜ್ಯ ಮತ್ತು ರಾಷ್ಟ್ರಾದ್ಯಂತ ಒಂದು ರೀತಿಯ ಅಲ್ಲೋಲ ಕಲ್ಲೋಲವನ್ನು ಉಂಟು ಮಾಡುತ್ತಿವೆ. ಮೊದಲನೆಯದು ತನ್ನ ವಯಕ್ತಿಕ ತೆವಲಿಗೋ ಇಲ್ಲವೇ ಮತ್ತಾರದ್ದೋ ರಾಜಕೀಯ ತೆವಲಿಗೆ ದಾಳವಾಗಿ ಪ್ರಪಂಚಾದ್ಯಂತ ಬಟ್ಟ ಬಯಲಾದ ಮಹ್ಲಿಳೆಯೊಬ್ಬಳದ್ದಾದರೇ, ಮತ್ತೊಂದು ಮಹಿಳೆಯರ ಉಡುಪಿನ ಬಗ್ಗೆ ಕಾಳಜಿಯುಕ್ತ ಮಾತನಾಡಿದ ಉತ್ತರಾಖಂಡ ನೂತನ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಅವರನ್ನು ಪ್ರಿಯಾಂಕ ವಾದ್ರಾಳೂ ಸೇರಿದಂತೆ ತಮ್ಮನ್ನು ತಾವು ಪ್ರಗತಿಪರ ಎಂದು ತೋರಿಸಿಕೊಳ್ಳುಲು ಹಪಾಹಪಿ ಪಡುವ ಕೆಲ ಮಹಿಳೆಯರು ಹಿಗ್ಗಾ ಮುಗ್ಗಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನೊಳಗೊಂಡಂತೆ ಅನೇಕ ಸಂಘದ ಹಿರಿಯ ಸ್ವಯಂ ಸೇವಕರ ಅವರ ಫೋಟೋಗಳನ್ನು ಹಾಕಿ ಲೇವಡಿ ಮಾಡುವ ಮುಖಾಂತರ ಲೇವಡಿ ಮಾಡುತ್ತಿರುವುದು ನಿಜಕ್ಕೂ ಆ ಮಹಿಳೆಯರ ಬೌದ್ಧಿಕ ದೀವಾಳಿತನಕ್ಕೆ ದ್ಯೋತಕವಾಗಿದೆ.
ಇಡೀ ಪ್ರಪಂಚಾದ್ಯಂತ ಹೆಣ್ಣುಮಕ್ಕಳನ್ನು ಭೋಗದ ವಸ್ತು ಎಂದು ಭಾವಿಸಿರುವಾಗ ನಮ್ಮ ಸನಾತ ಪರಂಪರೆ ಮಾತ್ರವೇ, ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ: | ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾ ಕ್ರಿಯಾ | ಅಂದರೆ ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ, ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ ಎಂದು ಬೋಧಿಸಿತ್ತು. ದೇವರುಗಳ ನಂತರ ನಮ್ಮಲ್ಲಿ ಮೊತ್ತ ಮೊದಲಿಗೆ ಗೌರವ ಕೊಡುವುದೇ, ತಾಯಿಗೆ ಹಾಗಾಗಿಯೇ ಮಾತೃ ದೇವೋ ಭವ ಎಂದ ನಂತರ ಪಿತೃ ದೇವೋ ಭವ ಎಂದು ಸಂಬೋಧಿಸುತ್ತೇವೆ.
ಅಹಲ್ಯಾ ದ್ರೌಪದಿ ಸೀತಾ ತಾರಾ ಮಂಡೋದರೀ ತಥಾ | ಪಂಚಕಂ ನಾ ಸ್ಮರೇನ್ನಿತ್ಯಂ ಮಹಾಪಾತಕ ನಾಶನಮ್ || ಎಂಬ ಶ್ಲೋಕವನ್ನು ನಮ್ಮ ಹೆಣ್ಣು ಮಕ್ಕಳಿಗೆ ಹೇಳಿಕೊಡುವ ಮೂಲಕ ಅಹಲ್ಯಾ ದ್ರೌಪದಿ ಸೀತಾ ತಾರಾ ಮಂಡೋದರಿಯಂತಹ ಪತಿವ್ರತೆಯರಾಗಿ ನೀವು ಬಾಳಿ ಬೆಳಗಿ ಎಂದು ಹೇಳಿಕೊಡುತ್ತೇವೆ. ಇಂದಿಗೂ ನಮ್ಮ ದೇಶದಲ್ಲಿ ಪರ ಪುರುಷರೊಂದಿಗೆ ಸಂಭಾಷಿಸುವಾಗ ತಲೆ ತಗ್ಗಿಸಿಯೋ ಇಲ್ಲವೇ, ಸೆರೆಗಿನಿಂದ ಇಡೀ ಮುಖವನ್ನೇ ಮುಚ್ಚಿಕೊಂಡು ಮಾತನಾಡಿಸುವ ಸಂಸ್ಕೃತಿ ನಮ್ಮ ದೇಶಾಂದ್ಯಂತ ರೂಢಿಯಲ್ಲಿದೆ. ಸ್ವಂತ ಪತಿಯೇ ತನ್ನ ಮುಂದೆ ನಿಂತಿದ್ದರೂ ಪತಿಯನ್ನು ತಲೆ ಎತ್ತಿನೋಡದೆ ಮಗನ ಅಂತ್ಯಕ್ರಿಯೆಗೆ ಗೋಳಾಡಿದ ಸತ್ಯ ಹರಿಶ್ಚಂದ್ರನ ಪತ್ನಿ ಚಂದ್ರಮತಿಯ ಉಲ್ಲೇಖ ನಮ್ಮ ಪುರಾಣದಲ್ಲಿದೆ. ಅಲ್ಲಾಹುದ್ದೀನ್ ಖಿಲ್ಚಿಯು ಮೋಸದಿಂದ ತನ್ನ ಗಂಡನನ್ನು ಸೋಲಿಸಿ ರಾಣಿ ಪದ್ಮಾವತಿಯನ್ನು ವಶ ಪಡಿಸಿಕೊಳ್ಳಲು ಪ್ರಯತ್ನಿಸಿದಾಗ ಪರ ಪುರುಷನಿಗೆ ಸೆರೆ ಸಿಗಬಾರದೆಂದು ತನ್ನನ್ನೇ ಆತ್ಮಾಹುತಿ ಮಾಡಿಕೊಂಡ ಇತಿಹಾಸ ನಮ್ಮ ನಾಡಿನದ್ದಾಗಿದೆ.
ಯಾವ ಹೆಣ್ಣಿನ ಮಾನವನ್ನು ಕಾಪಾಡಲೆಂದೇ ನಮ್ಮ ರಾಮಾಯಣ ಮತ್ತು ಮಹಾಭಾರತದಲ್ಲಿ ಘನಘೋರ ಯುದ್ದಗಳು ನಡೆದಿದ್ದವೋ ಅಂತಹ ದೇಶದಲ್ಲಿ ಹೆಣ್ಣೇ ತಾನು ಪೂಜ್ಯಳು ಎಂಬ ಭಾವನೆಯಿಂದ ಹೊರಬಂದು ತಾನೊಂದು ಆಕರ್ಷಣೀಯವಾದ ಕೇಂದ್ರ ಬಿಂದುವಾಗ ಬಯಸಿದ್ದಾಳೆ. ಪುರುಷರಿಗಿಂತ ತಾನೂ ಯಾವುದರಲ್ಲೂ ಕಮ್ಮಿ ಇಲ್ಲಾ ಎಂದು ತೋರಿಸುವ ಹಪಾಹಪಿಯಲ್ಲಿ ನಮ್ಮ ಶಾಸ್ತ್ರ ಸಂಪ್ರದಾಯದಲ್ಲಿ ಸ್ತ್ರೀ ಎಂದರೆ ಮೂಡಿಬರುವ ಕಲ್ಪನೆಗಳೆಲ್ಲವೂ ಮಾಯವಾಗಿದೆ. ಮೈತಂಬ ಮುಚ್ಚುವ ವಿವಿಧ ರೀತಿಯ ಸೀರೆ ಮತ್ತು ಕುಪ್ಪಸದ ಉಡಿಗೆ, ಉದ್ದವಾದ ಕೂದಲುಗಳನ್ನು ಒಪ್ಪ ಓರಣವಾಗಿ ಬೈತೆಲೆ ತೆಗೆದು ಬಾಚಿ ಆ ತುರುಬಿಗೊಂದು ಚೆಂದದ ಹೂವನ್ನು ಮುಡಿದು, ಹಣೆಯ ಮಧ್ಯದಲ್ಲಿ ಅಗಲವಾದ ಚೆಂದನೆಯ ಕುಂಕುಮ, ಕೈಗಳಿಗೆ ಘಲ್ ಘಲ್ ಎನ್ನುವ ಬಳೆ ಮತ್ತು ಕಾಲ್ಗಳಿಗೆ ಝಲ್ ಝಲ್ ಎನ್ನುವ ಕಾಲಂದಿಗೆ ಹಾಕಿಕೊಂಡ ಭಾರತೀಯರ ಮಹಿಳೆಯರ ಮುಂದೆ ಪ್ರಪಂಚದ ಯಾವುದೇ ದೇಶದ ಹೆಣ್ಣುಗಳನ್ನು ನೀವಾಳಿಸಿ ಹಾಕ ಬೇಕು.
ಸದಾ ಸರಳವಾದ ಭಾರತೀಯ ಉಡುಗೆಯಲ್ಲಿ ಕಂಗೊಳಿಸುವ ಇನ್ಫೋಸಿಸ್ ಸುಧಾಮೂರ್ತಿ, ಅಗಲವಾದ ಹಣೆಗಳಲ್ಲಿ ಅಷ್ಟೇ ಮುದ್ದಾಗಿ ಚೆಂದನೆಯ ಕುಂಕುಮವನ್ನು ಇಟ್ಟು ಕೊಳ್ಳುತ್ತಿದ್ದ ಪಾರ್ವತಮ್ಮ ರಾಜಕುಮಾರ್, ಭಾರತೀಯ ಉಡುಗೊರೆಯಿಂದಲೇ ದೇಶ ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದ ಸುಷ್ಮಾ ಸ್ವರಾಜ್ ಮತ್ತು ಎತ್ತಿ ಹಿಡಿಯುತ್ತಿರುವ ನಿರ್ಮಲಾ ಸೀತಾರಾಮನ್ ಮತ್ತು ಸ್ಮೃತಿ ಇರಾನಿಯವರ ಉಡುಪುಗಳನ್ನು ನೋಡಿದರೆ ಎಂತಹವರಿಗೂ ಅವರನ್ನೊಮ್ಮೆ ನೋಡಿ ಕೈ ಮುಗಿಯಬೇಕೆನಿಸುತ್ತದೆ.
ಆದರೆ ಹೆಣ್ಣನ್ನು ಪೂಜ್ಯ ಭಾವನೆಯಿಂದ ಪೂಜಿಸುತ್ತಿದ ನಮ್ಮ ನಾಡಿನಲ್ಲಿಯೂ ಅಂಧ ಪಾಶ್ವಾತ್ಯೀಕರಣದಿಂದಾಗಿ ಎಲ್ಲವೂ ಅದಲು ಬದಲಾಗಿ ಹೋಗಿ, ಹೆಣ್ಣು ಪ್ರಚಾರದ ವಸ್ತುವಾಗಿ ಮಾರ್ಪಾಟಾಗಿ ಹೋಗಿದ್ದಾಳೆ. ನನ್ನ ದೇಹ, ನನ್ನ ಉಡುಪು, ನನ್ನಿಚ್ಚೆಯಂತೆ ಧರಿಸುತ್ತೇನೆ, ನನ್ನ ಬದುಕು ತನ್ನಿಚ್ಚೆಯಂತೆ ನಡೆಸುತ್ತೇನೆ ಎನ್ನುವ ಉದ್ಧಟತನದ ಹುಂಬತನದ ಹದಿಹರೆಯದ ಹುಡುಗಿಯರು ತುಂಡು ತುಂಡು ಬಟ್ಟೆಗಳು ಮತ್ತು ಹರಿದ ಬಟ್ಟೆಗಳನ್ನು ಧರಿಸಿಕೊಂಡು ಕೂದಲು ಬಿರಿದುಕೊಂಡು ಹಣೆಯಲ್ಲಿ ಕುಂಕುಮವಿಲ್ಲದೇ, ಕಾಲಂದಿಗೆ ಬಿಡಿ ಕೈಗಳಿಗೂ ಬಳೆಗಳಿಲ್ಲದೇ ಬಿಚ್ಚೋಲೆ ಗೌರಮ್ಮನಂತೆ ಓಡಾಡುವುದೇ ಸಿರಿವಂತರ ಲಕ್ಷಣ ಮತ್ತು ಅದೇ ಸಭ್ಯತೆ ಮತ್ತು ಮಹಿಳಾ ಸಬಲೀಕರಣ ಎಂದು ಭಾವಿಸಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.
ಹೆಣ್ಣುಗಳನ್ನು ಅರೆಬೆತ್ತಲೆಯಾಗಿ ತೋರಿಸುವುದೇ ಮನರಂಜನೆ ಎಂದು ಭಾವಿಸಿ, ಹೆಣ್ಣನ್ನು ಸರಕಾಗಿ ಭಾವಿಸಿರುವ ಚಲನ ಚಿತ್ರೋದ್ಯಮ ಮತ್ತು ಹುಚ್ಚು ಮದುವೆಯಲ್ಲಿ ಉಂಡವನೇ ಜಾಣ ಎನ್ನುವಂತೆ ಟಿ.ಆರ್.ಪಿ ಭರದಲ್ಲಿ ಇಂತಹ ಕುಕೃತ್ಯಗಳನ್ನೇ ದಿನದ 24 ಗಂಟೆಯೂ ಎಗ್ಗಿಲ್ಲದೇ ತೋರಿಸುವ ಮಾಧ್ಯಮಗಳ ಮಧ್ಯೆ ಕಳೆದು ಹೋಗುತ್ತಿರುವುದು ನಮ್ಮ ಶ್ರದ್ದೇಯ ತಾಯಂದಿರ ಮಾನ ಮತ್ತು ನಮ್ಮ ಸಂಸ್ಕೃತಿ ಮಾತ್ರ ಎಂಬುದು ಯಾರ ಗಮನಗಕ್ಕೂ ಬಾರದೇ ಹೋಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಒಂದು ಯಶಸ್ವೀ ಪುರುಷನ ಹಿಂದಿನ ಶಕ್ತಿ ಹೆಣ್ಣು ಎನ್ನುವುದು ಈಗ ಸವಕಲು ನಾಣ್ಯವಾಗಿದ್ದು, ಇಂದಿನ ಬಹುತೇಕ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ಬಹುತೇಕ ಪುರುಷರ ಸೋಲಿನ ಹಿಂದೆಯೂ ಅದೇ ಹೆಣ್ಣಿನ ಜಾದೂ ಕೆಲಸ ಮಾಡುತ್ತಿದೆ. ಹಾಗಾಗಿ ಪುರುಷರ ಶಕ್ತಿ ಮತ್ತು ದೌರ್ಬಲ್ಯ ಎರಡೂ ಸಹಾ ಹೆಣ್ಣೇ ಆಗಿರುವುದು ವಿಪರ್ಯಸವೇ ಸರಿ. ಪುರುಷರ ದೌರ್ಬಲ್ಯಗಳನ್ನು ಚೆನ್ನಾಗಿ ಅರಿತಿರುವ ಹೆಣ್ಣು, ಪುರುಷರನ್ನು ತನ್ನ ಕೈವಶ ಪಡಿಸಿಕೊಂಡು ತನ್ನಿಚ್ಚೆಯಂತೆ ಆಡಿಸುತ್ತಾ ತನಗೆ ಬೇಕಾದದ್ದನ್ನು ಪಡೆಯುವುದಕ್ಕಾಗಿ ಎಂತಹ ನೀಚ ಕೃತ್ಯಗಳಿಗೂ ಇಳಿಯಬಲ್ಲಳು ಎನ್ನುವುದಕ್ಕೆ ಸದ್ಯದಲ್ಲಿ ನಮ್ಮ ರಾಜ್ಯದಲ್ಲಿ ಸುದ್ದಿ ಮಾಡಿರುವ ಸಿಡಿ ಪರಕರಣವೇ ಜ್ವಲಂತ ಉದಾಹರಣೆಯಾಗಿದೆ. ತನ್ಮೂಲಕ ಊರಿಗೆ ಅರಸನಾದರೂ ಮನೆಯಲ್ಲಿ ಹೆಂಡತಿಯ ಗುಲಾಮನೇ ಎನ್ನುವುದು ಜೀವನದ ಕಠು ಎನ್ನುವುದು ಮತ್ತೊಮ್ಮೆ ಜಗಜ್ಜಾಹೀತಾಗಿದೆ.
ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಮೊದಲ ಗುರು. ತಾಯಿ ಹೇಳಿಕೊಟ್ಟಿದ್ದೇ ಮಕ್ಕಳಿಗೆ ವೇದ ವಾಕ್ಯ. ಇದನ್ನೇ ಪ್ರತಿಪಾದಿಸುತ್ತಾ, ಉತ್ತರಾಖಂಡ ಮುಖ್ಯಮಂತ್ರಿ ಶ್ರೀ ರಾವತ್ ಅವರು ಅದೊಮ್ಮೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಪಕ್ಕದಲ್ಲಿ ಕುಳಿತಿದ್ದ ಎನ್.ಜಿ,ಓ ನಡೆಸುತ್ತಾ ಸಮಾಜದ ಮುಖ್ಯವಾಹಿನಿಯಲ್ಲಿ ಪ್ರಖ್ಯಾತಳಾಗಿದ್ದ ಮಹಿಳೆಯೊಬ್ಬರು ಮೊಣಕಾಲಿನ ಬಳಿ ಹರಿದು ಹೋಗಿದ್ದ ಜೀನ್ಸ್ ಧರಿಸಿದ್ದನ್ನು ಗಮನಿಸಿ, ಸಮಾಜದಲ್ಲಿ ಓಡಾಡುತ್ತೀರಿ, ನಿಮ್ಮ ಮಕ್ಕಳು ನಿಮ್ಮ ಜತೆಯಲ್ಲಿದ್ದಾರೆ. ಈ ರೀತಿಯಾಗಿ ಉಡುಗೆ ತೊಡುಗೆಗಳನ್ನು ಧರಿಸುವ ಮೂಲಕ ನೀವು ನಿಮ್ಮ ಮಕ್ಕಳಿಗೆ ಮತ್ತು ಸಮಾಜಕ್ಕೆ ಯಾವ ಮೌಲ್ಯವನ್ನು ಹೇಳಿಕೊಡುತ್ತಿದ್ದೀರಿ? ಎಂದು ರಾವತ್ ಪ್ರಶ್ನಿಸಿದ್ದರಂತೆ. ಅದೇ ರೀತಿ ಮಾತನ್ನು ಮುಂದುವರೆಸಿ, ರಿಪ್ಡ್ ಜೀನ್ಸ್ ಸ್ಟೈಲ್ ಎಂಬುದು ಕತ್ತರಿ ಸಂಸ್ಕೃತಿ ಎಂದು ಕರೆದಿದ್ದಲ್ಲದೇ, ಹರಿದ ಜೀನ್ಸ್ ಧರಿಸಿ, ಮೊಣಕಾಲು ತೋರಿಸಿದರೆ ಶ್ರೀಮಂತರು ಎಂದೆನಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು.
ಈ ರೀತಿಯಾಗಿ ಉಡುಗೆ ತೊಡಿಗೆ ತೊಟ್ಟ ಮಹಿಳೆ ಸಮಾಜದ ಮಧ್ಯದಲ್ಲಿ ಜನರ ಸಮಸ್ಯೆಗಳನ್ನು ಪರಿಹರಿಸಲು ಹೊರಟಾಗ ಸಮಾಜ ಅವರನ್ನು ನೋಡುವ ಪರಿಯೇ ವಿಭಿನ್ನವಾಗಿರುತ್ತದೆ. ಇದರಿಂದ ನಮ್ಮ ಮುಂದಿನ ಪೀಳಿಗೆಗೆ ತಪ್ಪಾದ ಸಂದೇಶವನ್ನು ರವಾನಿಸಿದಂತಾಗುತ್ತದೆ. ನಾವು ಏನು ಮಾಡುತ್ತೇವೆಯೋ ಅದನ್ನೇ ನಮ್ಮ ಮಕ್ಕಳು ಮತ್ತು ಸಮಾಜ ಅನುಸರಿಸುತ್ತದೆ. ಮನೆಯಲ್ಲಿ ಸರಿಯಾದ ಸಂಸ್ಕೃತಿಯನ್ನು ಕಲಿತ ಮಗು, ಮುಂದೆ ಎಷ್ಟೇ ಆಧುನಿಕ ಜಗತ್ತಿನ ಭಾಗವಾದರೂ ತಾನು ಕಲಿತ ಮೌಲ್ಯಗಳನ್ನು ಬಿಟ್ಟುಕೊಡದೇ, ಜೀವನದಲ್ಲಿ ಎಂದಿಗೂ ವಿಫಲವಾಗದೇ ಸಮಾಜದಲ್ಲಿ ಎಲ್ಲರ ಸರಿ ಸಮನಾಗಿ ನಿಲ್ಲುತ್ತಾರೆ ಎಂಬುದನ್ನು ಹೇಳಿರುವುದರಲ್ಲಿ ಯಾವ ತಪ್ಪಿದೆ ಎಂಬುದನ್ನು ಯಾರಾದರೂ ಹೇಳಬಲ್ಲಿರಾ?
ಭಾರತೀಯತೆ ಮತ್ತು ಹಿಂದೂ ಸಂಸ್ಕೃತಿಯ ಬಗ್ಗೆ ಯಾರಾದರೂ ಮಾತನಾಡಿದರೆ, ಜೈ ಶ್ರೀರಾಮ್ ಎಂದಾಗಲೀ ಭಾರತ್ ಮಾತಾಕೀ ಜೈ ಅಥವಾ ವಂದೇ ಮಾತರಂ ಎನ್ನುವುದೇ ಕೋಮುವಾದ ಮತ್ತು ಅಲ್ಪಸಂಖ್ಯಾತರ ಅವಹೇಳನ ಎಂದು ಭಾವಿಸಿ ಅದರ ವಿರುದ್ಧ ಪ್ರತಿ ಹೇಳಿಕೆ ನೀಡುವುದೇ ಜಾತ್ಯಾತೀತೆ ಎಂದು ಭಾವಿಸಿರುವ ಕೆಲ ಪಟ್ಟ ಭಧ್ರ ಹಿತಾಸಕ್ತಿಯ ಜನರು, ಕೆಲ ವಿಶ್ವವಿದ್ಯಾನಿಲಯಗಳು ಮತ್ತು ಎಲ್ಲಕ್ಕಿಂತಲೂ ಮುಖ್ಯಾವಾಗಿ ದೇಶದಲ್ಲಿ ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕೆಲ ರಾಜಕೀಯ ಪಕ್ಷಗಳ ಹುನ್ನಾರ, ಜಾಗೃತನಾಗಿರುವ ಭಾರತೀಯರ ಮುಂದೆ ಇನ್ನು ಹೆಚ್ಚು ದಿನಗಳ ಕಾಲ ನಡೆಯದು. ಇಡೀ ವಿಶ್ವವೇ ಯೋಗ, ಧ್ಯಾನ, ವೇದ ಮಂತ್ರ ಪಠಣಗಳತ್ತ ಆಕರ್ಶಿತವಾಗಿ ಭಾರತವನ್ನು ವಿಶ್ವಗುರುವನ್ನಾಗಿ ಮತ್ತೊಮ್ಮೆ ಸ್ವೀಕರಿಸಲು ಸಿದ್ದವಾಗಿರುವಾಗ ಇಂತಹ ಕೆಲ ಹುಚ್ಚು ನಾಯಿಗಳನ್ನು ಹಚ್ಚಾ ಎಂದು ಓಡಿಸುವ ಕಾಲ ಸನ್ನಿಹಿತವಾಗುತ್ತಿದೆ.
ಮುಚ್ಚಿಟ್ಟಿದ್ದಾಗ ಇರುವ ಕುತೂಹಲ, ಬಿಚ್ಚಿಟ್ಟಾಗ ಇರದು ಎನ್ನುವುದು ನಮ್ಮ ಭಾರತೀಯ ಹೆಣ್ಣು ಮಕ್ಕಳೂ ಅರಿತು, ಬಟ್ಟೆ ಚಿಚ್ಚಿ ಪ್ರಪಂಚದ ಮುಂದೆ ಈ ರೀತಿ ಸಿಡಿ ಮುಖಾಂತರ ಮತ್ತು ಹರಿದ ಜೀನ್ಸ್ ಮುಖಾಂತರ ಬಟಾ ಬಯಲಾಗುವುದೇ ಮಹಿಳಾ ಸಭ್ಯತೆ ಮತ್ತು ಸಬಲೀಕರಣ ಎಂಬ ಭ್ರಮೆ ಕಳಚಿಕೊಂಡು ಸಮಾಜದಲ್ಲಿ ತಮಗೆ ಸಿಗುತ್ತಿರುವ ಗೌರವನ್ನು ದುರ್ಬಳಕೆ ಮಾಡಿಕೊಳ್ಳದೇ, ನಮ್ಮ ಸಂಸ್ಕೃತಿಯ ರಾಯಭಾರಿಗಳಾಗುತ್ತಾರೆ ಎನ್ನುವ ಆಶಾಭಾವನೆ ನಮ್ಮೆಲ್ಲದ್ದಾಗಿದೆ.
ಏನಂತೀರೀ?
ನಿಮ್ಮವನೇ ಉಮಾಸುತ
ಮಹಿಳೆಯರು ಬುರ್ಖಾ ಧರಿಸಬೇಕು ಮತ್ತು ಬುರ್ಖಾದೊಳಗೆ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂಬ ಮುಸಲ್ಮಾನರ ವಾದದಂತಿದೆ ನಿಮ್ಮ ಈ ಬರಹ.
LikeLike
ಅವರವರ ಭಾವಕ್ಕೆ ಅವರವರ ಭಕತಿ.
ಅರೆ ಬೆತ್ತಲೆ ಇಲ್ಲವೇ ಬೆತ್ತಲೆಯಾಗದೇ, ಮೈ ತುಂಬ ಬಟ್ಟೆಗಳನ್ನು ಧರಿಸಿಕೊಂಡು ಹೆಂಗಸರೇ ನಿಮ್ಮ ಮಾನ ಮಾರ್ಯಾದೆ ಉಳಿಸಿಕೊಳ್ಳಿ ಎಂದಿದ್ದೇನೇ ಹೊರತು ಬುರ್ಖಾ ಪ್ರಸ್ತಾವನೆಯೇ ಇಲ್ಲವಲ್ಲಾ?
ಸುಖಾ ಸುಮ್ಮನೆ ಪ್ರಚೋದಿಸುವುದೂ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುತ್ತದೆ
LikeLike