ಮೇಲುಕೋಟೆ ಕರ್ನಾಟಕದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕಲೆ, ಸಂಸ್ಕೃತಿ, ಶಿಲ್ಪಕಲೆಯಿಂದ ಕೂಡಿದ ಸುಂದರವಾದ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದ್ದು ಆಚಾರ್ಯ ತ್ರಯರಲ್ಲಿ ಒಬ್ಬರಾದ ಶ್ರೀ ರಾಮಾನುಜಾಚಾರ್ಯರ ಕರ್ಮ ಭೂಮಿಯೂ ಆಗಿದೆ. ಬೆಟ್ಟ ಗುಡ್ಡಗಳ ನಡುವೆ ಇರುವ ಈ ಊರಿನಲ್ಲಿ ಸರಿ ಸುಮಾರು 101 ದೇಗುಲಗಳು ಹಾಗೂ 101 ಕಲ್ಯಾಣಿಗಳಿರುವ ಸುಂದರ ಬೀಡಾಗಿದ್ದು ಶ್ರೀ ವೈಷ್ಣವರ ಯಾತ್ರಾ ಸ್ಥಳವಾಗಿಯೂ, ಅನೇಕ ಶ್ರದ್ದೇಯ ಆಸ್ತಿಕ ಬಂಧುಗಳ ಪುಣ್ಯಕ್ಷೇತ್ರವಾಗಿಯೂ ಮತ್ತು ಪ್ರವಾಸಿಗರ ಮತ್ತು ಚಿತ್ರರಂಗದ ನೆಚ್ಚಿನ ಚಿತ್ರೀಕರಣದ ತಾಣವೂ ಆಗಿದೆ. ಶ್ರೀ ಚೆಲುವರಾಯಸ್ವಾಮಿ ದೇವಸ್ಥಾನ ಮತ್ತು ಬೆಟ್ಟದ ಮೇಲಿರುವ ಶ್ರೀ ಯೋಗಾನರಸಿಂಹ ಸ್ವಾಮಿಯ ದೇವಸ್ಥಾನಗಳಿಂದಾಗಿ ಈ ಕ್ಷೇತ್ರ ಪುರಾಣ ಪ್ರಸಿದ್ಧವಾಗಿದೆ.
ಶ್ರೀ ರಾಮಾನುಜಾಚಾರ್ಯರ ಅನುಯಾಯಿಗಳಾದ ಶ್ರೀವೈಷ್ಣವರ ಶ್ರದ್ಧೇಯ ನಾಲ್ಕು ಪುಣ್ಯಕ್ಷೇತ್ರಗಳಾದ ಕಂಚಿ, ತಿರುಪತಿ, ಶ್ರೀರಂಗಂ ಜೊತೆ ನಮ್ಮ ಹೆಮ್ಮೆಯ ಮೇಲುಕೋಟೆಯೂ ಸೇರಿದೆ. ಇಂತಹ ಮೇಲುಕೋಟೆ ಯಾದವಾದ್ರಿ, ವೇದಾದ್ರಿ, ನಾರಾಯಣಾದ್ರಿ, ಯತಿಶೈಲ, ಯದುಗಿರಿ ಎಂಬ ಹೆಸರುಗಳಿಂದಲೂ ಪ್ರಖ್ಯಾತವಾಗಿದೆ. ಕೃತಯುಗದಲ್ಲಿ ಸನತ್ಕುಮಾರರು ಇಲ್ಲಿ ತಿರುನಾರಾಯಣ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರಿಂದ ನಾರಾಯಣಾದ್ರಿಯೆಂದೂ, ತ್ರೇತಾಯುಗದಲ್ಲಿ ದತ್ತಾತ್ರೇಯರು ಈ ಪರ್ವತದಲ್ಲಿ ವೇದ ಪಾರಾಯಣ ಮಾಡಿದ್ದರಿಂದ ವೇದಾದ್ರಿಯೆಂದೂ, ದ್ವಾಪರದಲ್ಲಿ ಶ್ರೀಕೃಷ್ಣ ಪರಮಾತ್ಮನೇ ಮೊದಲಾದವರಿಂದ ಪೂಜಿಸಲ್ಪಟ್ಟ ಈ ಸ್ಥಳ ಯಾದವಾದ್ರಿಯೆಂದೂ, ಕಲಿಯುಗದಲ್ಲಿ ಆಚಾರ್ಯ ರಾಮಾನುಜಾಚಾರ್ಯರು 12 ವರ್ಷಗಳ ಕಾಲ ಇಲ್ಲಿ ನೆಲೆಸಿ ಈ ಕ್ಷೇತ್ರವನ್ನು ಜೀರ್ಣೋದ್ಧಾರ ಮಾಡಿದ ಕಾರಣ ಯತಿಶೈಲವೆಂದೂ ಈ ಪುಣ್ಯಕ್ಷೇತ್ರವನ್ನು ಕರೆಯಲಾಗುತ್ತದೆ ಎನ್ನುತ್ತದೆ ಇಲ್ಲಿಯ ಸ್ಥಳ ಪುರಾಣ.
11ನೇ ಶತಮಾನದಲ್ಲಿ ತಮಿಳು ನಾಡಿನ ಕ್ರಿಮಿಕಾಂತ ನೆಂಬ ಕ್ರೂರ ರಾಜ ಅದ್ವೈತ ಪ್ರಚಾರಕರಿಗೆ ಬಹಳವಾಗಿ ತೊಂದರೆ ಕೊಡುತ್ತಿದ್ದರಿಂದ ಮನನೊಂದು ಶಾಂತಿಧಾಮವನ್ನು ಅರಸುತ್ತಿದ್ದಾಗ, ಮತ್ತೊಬ್ಬ ಆಚಾರ್ಯರ ಆಹ್ವಾನದ ಮೇರೆಗೆ ಕರ್ನಾಟಕದ ತೊಂಡನೂರಿಗೆ ಬಂದು ಕೆಲವೇ ದಿನಗಳಲ್ಲಿ ಅಲ್ಲಿನ ಜನರ ಹೃನ್ಮನಗಳನ್ನು ಗೆದ್ದ ರಾಮಾನುಜಾಚಾರ್ಯರು, ಆ ಊರಿನಲ್ಲಿ ಅತ್ಯಂತ ಮಹೋಹರವಾದ ಮತ್ತು ವಿಶಾಲವಾದ ನಂಬಿ ನಾರಾಯಣ, ವೆಂಕಟರಮಣ, ಪಾರ್ಥಸಾರಥಿ, ವೇಣುಗೋಪಾಲ ಸ್ವಾಮಿಯ ದೇವಸ್ಥಾನವನ್ನಲ್ಲದೇ ಐತಿಹಾಸಿಕ ತೊಂಡನೂರು ಕೆರೆಯನ್ನು ಕಟ್ಟಿಸಿದ ನಂತರ ಕಟ್ಟಿಸಿದ ನಂತರ ಮೇಲುಕೋಟೆಯಲ್ಲಿ ಹುತ್ತದಲ್ಲಿ ಹುದುಗಿದ್ದ ನಾರಾಯಣ ದೇವರನ್ನು ಹೊರತೆಗೆದು ಹೊಯ್ಸಳರ ರಾಜನಾದ ವಿಷ್ಣುವರ್ಧನನ ರಾಜಾಶ್ರಯದಲ್ಲಿ ದೇವಸ್ಥಾನವನ್ನು ಕಟ್ಟಿಸುತ್ತಾರೆ. ಈ ದೇವಸ್ಥಾನದ ಉತ್ಸವ ಮೂರ್ತಿ ಶೆಲ್ವಪಿಳ್ಳೆಯನ್ನು ಮುಸಲ್ಮಾನರ ಧಾಳಿಯ ಸಮಯದಲ್ಲಿ ಕದ್ದೊಯ್ದು ದೆಹಲಿಯ ಸುಲ್ತಾನನ ಅರಮನೆಯಲ್ಲಿರುತ್ತದೆ. ಮುಸಲ್ಮಾನ ಸುಲ್ತಾನನ ಮಗಳಾದ ಚಾಂದ್ ಬೀಬಿ ಈ ವಿಗ್ರಹಕ್ಕೆ ಮನಸೋತು ಮದುವೆಯಾದರೆ ಇದೇ ಶೆಲ್ವ ಪಿಳ್ಳೆಯನ್ನೇ ವರಿಸುತ್ತೇನೆ ಎಂದು ಹಠ ಹಿಡಿದಿರುತ್ತಾಳೆ. ಈ ವಿಷಯವನ್ನು ತಿಳಿದ ಶ್ರೀ ರಾಮಾನುಜರು ದೆಹಲಿಗೆ ಹೋಗಿ ಅಲ್ಲಿಯ ಸುಲ್ತಾನರನ್ನೂ ಮತ್ತು ಅವರ ಮಗಳನ್ನೂ ಒಲಿಸಿ, ಅವರ ಬಳಿಯಿದ್ದ ಶೆಲ್ವಪಿಳ್ಳೆ ವಿಗ್ರಹವನ್ನು ಪುನಃ ಮೇಲೆಕೋಟೆಗೆ ತಂದು ಪ್ರತಿಷ್ಠಾಪಿಸುತ್ತಾರೆ. ಶೆಲ್ವನಾರಾಯಣನಿಂದ ಅಗಲಿಕೆ ತಾಳಲಾರದ ಸುಲ್ತಾನನ ಮಗಳು ದೂರದ ದೆಹಲಿಯಿಂದ ಮೇಲುಕೋಟೆಗೆ ಬಂದು ಕಡೆಗೆ ಅದೇ ದೇವರಲ್ಲಿ ಐಕ್ಯಳಾದಳು ಎಂಬುದು ಇಲ್ಲಿನ ಐತಿಹಾಸಿಕ ಪ್ರತೀತಿ. ಇದರ ಕುರುಹಾಗಿ ಇಂದಿಗೂ ನಾರಾಯಣನ ಪಾದದಡಿಯಲ್ಲಿ ಆಕೆಯ ವಿಗ್ರಹವಿದ್ದು ಅದನ್ನು ಬೇಬಿನಾಚ್ಚಿಯಾರ್ ಎಂದೂ ಕರೆಯಲಾಗುತ್ತದೆ.

ಸಹಸ್ರಾರು ವರ್ಷಗಳ ಇತಿಹಾಸವುಳ್ಳ ಈ ಪುಣ್ಯಕ್ಷೇತ್ರ 14ನೇ ಶತಮಾನದಲ್ಲಿ ಮುಸಲ್ಮಾನರ ದಾಳಿಗೆ ಒಳಗಾಗಿ ಬಹಳವಾಗಿ ಹಾಳಾಗಿದ್ದದ್ದನ್ನು ಕಂಡು, 1460ರಲ್ಲಿ ವಿಜಯನಗರದರಸರು ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸುತ್ತಾರೆ. 1771ರಲ್ಲಿ ಮರಾಠರು ಮೇಲುಕೋಟೆಯನ್ನು ಲೂಟಿ ಮಾಡಿದರು. ಮೇಲುಕೋಟೆಯ ಚೆಲುವರಾಯ ಸ್ವಾಮಿ ಮೈಸೂರು ಅರಸರ ಆರಾಧ್ಯದೈವವಾಗಿದ್ದ ಕಾರಣ, ಮತ್ತೆ ಮೇಲುಕೋಟೆಯನ್ನೂ ಮತ್ತು ದೇವಾಲಯಗಳನ್ನೂ ಜೀರ್ಣೋದ್ಧಾರ ಮಾಡಿದ್ದಲ್ಲದೇ, ಆ ದೇವಾಲಯಗಳಿಗೆ ಹೇರಳವಾಗಿ ದಾನಧರ್ಮ ಮಾಡಿ, ಕಲಾತ್ಮಕ ಮಂಟಪಗಳನ್ನು ಕಟ್ಟಿಸಿದ್ದಾರೆ. ಚಿಕ್ಕದೇವರಾಜರು ಯೋಗಾನರಸಿಂಹಸ್ವಾಮಿಯ ಬೆಟ್ಟಕ್ಕೆ ನೂತನ ರಾಜಗೋಪುರವನ್ನೂ , ಮೆಟ್ಟಿಲುಗಳನ್ನು ನಿರ್ಮಿಸಿಕೊಟ್ಟಿದ್ದಲ್ಲದೆ ದೇವರಿಗೆ ಅನೇಕ ಒಡವೆ ಹಾಗೂ ರಾಜಮುಡಿಗಳನ್ನು ನೀಡಿದ್ದಲ್ಲದೇ, ಹಲವಾರು ಎಕರೆ ಭೂಮಿಯನ್ನು ಉಂಬಳಿಯಾಗಿ ನೀಡುವ ಮೂಲಕ ಮೇಲುಕೋಟೆಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಪ್ರತಿವರ್ಷವೂ ಶ್ರೀ ಚೆಲುವ ನಾರಾಯಣಸ್ವಾಮಿ ದೇವಾಲಯದಲ್ಲಿ ಶ್ರೀಕೃಷ್ಣ ರಾಜಮುಡಿ, ರಾಜಮುಡಿ, ವೈರಮುಡಿ, ಬ್ರಹ್ಮೋತ್ಸವಗಳು ವೈಭವದಿಂದ ಹತ್ತು ದಿನಗಳ ಕಾಲ ನಡೆಯುವಂತೆ ರೂಢಿಗೂ ತಂದರು.

ಬೆಟ್ಟದ ಕೆಳಗೆ ಮನಮೋಹಕ ವಿಶಾಲವಾದ ಕೊಳದ ಬಳಿ ಇರುವ ಶ್ರೀ ಚೆಲುವನಾರಾಯಣಸ್ವಾಮಿಗೆ ಪ್ರತಿ ವರ್ಷವೂ ಮಾರ್ಚ್/ ಏಪ್ರಿಲ್ ತಿಂಗಳಲ್ಲಿ ಹತ್ತು ದಿನಗಳ ಕಾಲ ಬಹ್ಳ ವಿಜಂಭಣೆಯಿಂದ ವೈರಮುಡಿ ಬ್ರಹ್ಮೋತ್ಸವ ನಡೆಯುತ್ತದೆ. ದಸರಾದ ನಂತರ ಆ ಪ್ರಾಂತ್ಯದಲ್ಲಿ ನಡೆಯುವ ಅತ್ಯಂತ ಭವ್ಯ ಧಾರ್ಮಿಕ ಆಚರಣೆಯಲ್ಲೊಂದಾಗಿದ್ದು, ದೇವರಿಗೆ ಹಾಕುವ ವೈಢೂರ್ಯ ಖಚಿತ ಅತ್ಯದ್ಭುತ ಆಭರಣಗಳೇ ವೈರಮುಡಿ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ಕಾರಣ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತಾದಿಗಳ ಮನಸ್ಸೆಳೆದು ಅತ್ಯಂತ ವೈಭವೋಪೇತವಾಗಿ ಆಚರಿಸಲ್ಪಡುತ್ತದೆ.
ವೈರಮುಡಿ ಎಂಬ ಹೆಸರೇ ಸೂಚಿಸುವಂತೆ ಅಂದೊದು ವಜ್ರಖಚಿತವಾದ ಒಂದು ಕಿರೀಟವಾಗಿದ್ದು ಈ ಕಿರೀಟಕ್ಕೂ ಒಂದು ಪೌರಾಣಿಕ ಹಿನ್ನಲೆಯಿದೆ. ಒಮ್ಮೆ ವಿಷ್ಣು ಭಕ್ತ ಪ್ರಹ್ಲಾದನ ಮಗ ವಿರೋಚನ ಈ ವೈರಮುಡಿಯನ್ನು ಅಪಹರಿಸಿ ಪಾತಾಳದಲ್ಲಿ ಅಡಗಿಸಿಟ್ಟುಕೊಳ್ಳುತ್ತಾನೆ. ವಿಷಯ ತಿಳಿದ ವಿಷ್ಣುವಿನ ವಾಹನನಾದ ವೈನತೇಯ (ಗರುಡ) ವೀರೋಚನನೊಡನೆ ಹೋರಾಡಿ, ಅವನನ್ನು ಸೋಲಿಸಿ ಅವನಿಂದ ವೈರಮುಡಿಯನ್ನು ತೆಗೆದುಕೊಂಡು ಆಕಾಶ ಮಾರ್ಗವಾಗಿ ಶರವೇಗದಲ್ಲಿ ಬರುತ್ತಿದ್ದಾಗ ಇದ್ದಕ್ಕಿದ್ದಂತೆ ಅವನ ವೇಗ ಕಡಿಮೆಯಾಗುತ್ತದೆ. ಈ ರೀತಿಯಾಗಿ ತನ್ನ ವೇಗಕ್ಕೆ ಕಡಿವಾಣ ಹಾಕಲು ಕಾರಣವೇನು? ಎಂದು ಅವಲೋಕನ ಮಾಡಿದಾದ ಆ ಸ್ಥಳವು ಶ್ರೀ ಕೃಷ್ಣನ ಮಥುರಾ ನಗರವಾಗಿರುತ್ತದೆ. ಹಾಗಾಗಿ ವೈನತೇಯನು ಭಗವಾನ್ ಶ್ರೀ ಕೃಷ್ಣನಿಗೆ ತನ್ನ ಬಳಿಯಿದ್ದ ಆ ವೈರಮುಡಿಯನ್ನು ಅರ್ಪಿಸುತ್ತಾನೆ. ಆದರೆ ಶ್ರೀ ಕೃಷ್ಣನ ಶಿರದಲ್ಲಿ ವೈರಮುಡಿ ಸರಿಯಾಗಿ ಕೂರುವುದಿಲ್ಲ. ಆಗ ಕೃಷ್ಣನೇ ಇದನ್ನು ಮೇಲುಕೋಟೆಯ ಚೆಲುವನಾರಾಯಣಸ್ವಾಮಿಗೆ ಅರ್ಪಿಸಬೇಕೆಂದು ವೈನತೇಯನಿಗೆ ತಿಳಿಸುತ್ತಾನೆ. ಶ್ರೀಕೃಷ್ಣನ ಆಜ್ಞೆಯಂತೆ ವೈನತೇಯನು ಮೇಲುಕೋಟೆಯ ಶ್ರೀ ಚೆಲುವನಾರಾಯಣಸ್ವಾಮಿಯ ಶಿರದಲ್ಲಿ ಆ ವೈರಮುಡಿಯನ್ನು ಇಟ್ಟಾಗ ಅದು ಸರಿಯಾಗಿ ಹೊಂದಿಕೊಂಡಿದ್ದನು ಕಂಡು ಹರ್ಷಚಿತ್ತನಾದ ವೈನತೇಯನು ಚೆಲುವನಾರಾಯಣಸ್ವಾಮಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ದೇವಾಲಯದ ಸುತ್ತಲೂ ಮೆರವಣಿಗೆ ಮಾಡಿ ಸಕಲ ಭಕ್ತಾದಿಗಳಿಗೂ ಪರಮಾತ್ಮನ ದಿವ್ಯ ದರ್ಶನವನ್ನು ಮಾಡಿಸಿದನೆಂಬ ಪ್ರತೀತಿ ಇದೆ.
ಈ ವೈರಮುಡಿ ಬ್ರಹ್ಮೋತ್ಸವದ ಆಚರಣೆಯ ಹಿಂದೆ ಪುರಾಣದ ಕಥೆಯೊಂದು ಪ್ರಚಲಿತದಲ್ಲಿದ್ದು, ಅದರ ಪ್ರಕಾರ, ತ್ರೇತಾಯುಗದಲ್ಲಿ ಅಯೋಧ್ಯೆಯ ರಾಜ ದಶರಥ ತನ್ನ ಹಿರಿಯ ಪುತ್ರ ಶ್ರೀರಾಮಚಂದ್ರನಿಗೆ ಪಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನವನ್ನು ಪಟ್ಟಾಭಿಷೇಕವನ್ನು ಮಾಡಲು ನಿರ್ಧರಿಸಿ ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿದ್ದರು. ಇನ್ನೇನು ರಾಮಚಂದ್ರನ ಪಟ್ಟಾಭಿಷೇಕ ಆಗಬೇಕು ಎನ್ನುವಷ್ಟರಲ್ಲಿ ರಾಮನ ಮಲತಾಯಿ ಕೈಕೇಯಿಯು ತನ್ನ ಪುತ್ರ ಭರತನಿಗೆ ಸಾಮಾಜ್ರವನ್ನು ಕೊಡಿಸಬೇಕು ಎಂಬ ಕುತಂತ್ರದಿಂದಾಗಿ, ದಶರಥನು ಅಂದೆಂದೋ ನೀಡಿದ್ದ ಆಶ್ವಾಸನೆಗೆ ಅನುಗುಣವಾಗಿ ಶ್ರೀರಾಮ 14 ವರ್ಷಗಳ ಕಾಲ ವನವಾಸಕ್ಕೆ ತೆರಳಬೇಕಾಯಿತು. ಆದರೆ ತನ್ನ ಅಣ್ಣನಾದ ಶ್ರೀರಾಮನ ಪಟ್ಟಾಭಿಷೇಕವನ್ನು ಕಣ್ಣಾರೆ ಕಾಣಬೇಕು ಎಂಬ ಹೆಬ್ಬಯಕೆಯಲ್ಲಿದ್ದ ತಮ್ಮ ಲಕ್ಷ್ಮಣನಿಗೆ ನಿರಾಶೆಯಾಗಿ ಆ ವಿಷಯ ಸದಾಕಾಲವೂ ಆತನನ್ನು ಕಾಡುತ್ತಿತ್ತಂತೆ. ಮುಂದೆ ಅದೇ ಲಕ್ಷಣ ಆದಿಶೇಷನ ಅವತಾರ ತಾಳಿ ಆ ನಂತರ ಕಲಿಯುಗದಲ್ಲಿ ಶ್ರೀ ರಾಮಾನುಜಾಚಾರ್ಯರಾಗಿ ಅವತರಿಸಿ, ಶ್ರೀರಾಮನ ಆರಾಧ್ಯದೈವ ಚೆಲುವರಾಯಸ್ವಾಮಿ ನೆಲೆಸಿದ ಮೇಲುಕೋಟೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕಕ್ಕೆ ನಿಗದಿಪಡಿಸಿದ ಫಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನದಂದೇ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಧರಿಸುವ ಮೂಲಕ ತನ್ನ ಮನದ ಇಚ್ಛೆಯನ್ನು ನೆರವೇರಿಸಿಕೊಂಡನಂತೆ. ಹೀಗೆ ಲಕ್ಷ್ಮಣ ತನ್ನ ಬಯಕೆಯನ್ನು ಈಡೇರಿಸಿಕೊಂಡ ಸುದಿನವನ್ನೇ ಪ್ರತಿವರ್ಷವೂ ವೈರಮುಡಿ ಬ್ರಹ್ಮೋತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎನ್ನಲಾಗುತ್ತದೆ.
ಇದೇ ರೀತಿಯಾಗಿ ಮತ್ತೊಂದು ಐತಿಹ್ಯದ ಪ್ರಕಾರ, ದ್ವಾರಕೆಯಿಂದ ಶ್ರೀಕೃಷ್ಣನೇ ತನಗೆ ಅರ್ಪಿತವಾದ ವೈರಮುಡಿಯನ್ನು ಮೇಲುಕೋಟೆಯ ಚೆಲುವರಾಯನಿಗೆ ಬಂದು ಅರ್ಪಿಸಿದ ಸಂಭ್ರಮಾಚರಣೆಗಾಗಿ ವೈನತೇಯನು ವೈರಮುಡಿ ಅಲಂಕೃತ ಚೆಲುವನಾರಾಯಣಸ್ವಾಮಿಯನ್ನು ತನ್ನ ಹೆಗಲ ಮೇಲಿರಿಸಿಕೊಂಡು ಉತ್ಸವ ಮಾಡಿದ ಪಾಲ್ಗುಣ ಮಾಸದ ಪುಷ್ಯ ನಕ್ಷತ್ರದ ದಿನದಂದು ಇಂದಿಗೂ ಮೇಲುಕೋಟೆಯಲ್ಲಿ ಸಕಲ ವೈಭವೋಪೇತವಾಗಿ ಗರುಡ ವಾಹನದ ಮೇಲೆಯೇ ಅಲಂಕರಿಸಿ ವೈರಮುಡಿ ಉತ್ಸವ ಎಂದು ಆಚರಿಸಲಾಗುತ್ತದೆ.
ಮೀನಮಾಸದ ಹಸ್ತ ನಕ್ಷತ್ರದ ಶ್ರೀನಾರಾಯಣಸ್ವಾಮಿಯ ಜಯಂತಿಯಂದು ಅವಭೃತಸ್ನಾನ ನಡೆದು ಅಂದಿನಿಂದ ಒಂಭತ್ತು ದಿನಗಳ ಕಾಲ ಈ ವೈರಮುಡಿ ಉತ್ಸವ ನಡೆಯುತ್ತದೆ. ಈ ಉತ್ಸವದ 4ನೇ ಶುಭದಿನ ( ತಿರುನಾಳ್)ದಂದು ದೇವರಿಗೆ ವೈರಮುಡಿ ಕಿರೀಟ ಧಾರಣ ಮಹೋತ್ಸವ ನಡೆಯುತ್ತದೆ. ಈ ಉತ್ಸವದಲ್ಲಿ ಎರಡು ವೇಳೆಯು ಯಾಗಶಾಲೆಯಲ್ಲಿ ಹೋಮ ಹವನ, ವೇದಾಪಾರಾಯಣ ಮತ್ತು ದಿವ್ಯಪ್ರಬಂಧ ಪಾರಾಯಣ ನಡೆಯುತ್ತದೆ. ಗರುಡ ವಾಹನದಲ್ಲಿ ವೈರಮುಡಿಯಿಂದ ಅಲಂಕೃತವಾದ ಸ್ವಾಮಿಯನ್ನು ಭಕ್ತರನ್ನು ಅನುಗ್ರಹಿಸಲೆಂದು ನಾಲ್ಕು ಕಡೆಗೂ ತಿರುಗಿಸುತ್ತಾ ಸೇವೆ ಮಾಡುವ ವಾಡಿಕೆ ಅಂದಿನಿಂದ ಇಂದಿನವರೆಗೂ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ.
ಉತ್ಸವದ ಆರಂಭ ದಿನದಂದು ಗರುಡನಿಗೆ ಪೂಜೆ ಸಲ್ಲಿಸಿ ಮೇಲುಕೋಟೆ ಗ್ರಾಮದ ಸುತ್ತಲೂ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಮೂರನೆಯ ದಿನ ಕಲ್ಯಾಣೋತ್ಸವ, ನಾಲ್ಕನೆಯ ದಿನ ವಸಂತೋಧ್ಯಾನ ಮತ್ತಿತರ ಮಂಟಪಗಳಿಗೆ ಚೆಲುವನಾರಾಯಣಸ್ವಾಮಿಯ ಮೆರವಣಿಗೆ ಹೋಗುತ್ತದೆ. ಬ್ರಹ್ಮೋತ್ಸವದ ಬಹುಮುಖ್ಯ ದಿನವೇ ವೈರಮುಡಿ ಉತ್ಸವ. ಅಂದು ವೈರಮುಡಿ, ರಾಜ ಒಡೆಯರು ಕೊಟ್ಟಿರುವ ರಾಜಮುಡಿ, ಮುಮ್ಮಡಿ ಕೃಷ್ಣರಾಜ ಒಡೆಯರು ನೀಡಿರುವ ಕೃಷ್ಣಮುಡಿ ಮತ್ತು ರಾಜ ಪರಂಪರೆಯಿಂದ ಬಂದಿರುವ ನವರತ್ನ ಖಚಿತ ಪದ್ಮಪೀಠ, ಅರಳೆಲೆ ಪದಕ, ಮುತ್ತುರತ್ನಗಳ ಕರ್ಣಕುಂಡಲಗಳು, ಮುತ್ತಿನ ಮಣಿಕಟ್ಟು, ಗಂಡಭೇರುಂಡದ ವಜ್ರಾಹಾರ, ಮುತ್ತು ಮತ್ತು ಪಚ್ಚೆ ಕಲ್ಲಿನ ಕೂರಂಬ, ಶಂಖ, ಚಕ್ರ, ಗದೆ ಸೇರಿದಂತೆ ಬೆಲೆ ಕಟ್ಟಲಾಗದ ಅತ್ಯಮೂಲ್ಯ, ಅತ್ಯಪೂರ್ವ ಇಪ್ಪತ್ನಾಲ್ಕು ಆಭರಣಗಳನ್ನು ಸಕಲ ಸರ್ಕಾರೀ ಭದ್ರತೆಯೊಡನೆ ಮಂಡ್ಯ ಜಿಲ್ಲೆಯ ಖಜಾನೆಯಿಂದ ವಿಶೇಷ ಪೆಟ್ಟಿಗೆಯಲ್ಲಿ ತಂದು ಶ್ರೀ ರಾಮಾನುಜರ ಗುಡಿಯಲ್ಲಿ ಇಡುತ್ತಾರೆ.

ಅಂದು ಸಂಜೆಯ ಶುಭ ಮುಹೂರ್ತದಲ್ಲಿ ಪ್ರಧಾನ ಅರ್ಚಕರು ತಮ್ಮ ಕಣ್ಣಿಗೆ ರೇಷ್ಮೆ ವಸ್ತ್ರ ಕಟ್ಟಿಕೊಂಡು ವೈರಮುಡಿಯನ್ನು ಪೆಟ್ಟಿಗೆಯಿಂದ ಹೊರತೆಗೆದು ಶ್ರೀ ಚಲುವನಾರಾಯಣಸ್ವಾಮಿಯ ಶಿರದ ಮೇಲಿಟ್ಟು ಇತರ ಆಭರಣಗಳಿಂದ ಅಲಂಕರಿಸುವ ಹೊತ್ತಿಗೆ ಗಂಟೆ ಸುಮಾರು ಎಂಟರಿಂದ ಒಂಭತ್ತಾಗಿರುತ್ತದೆ. ರಾತ್ರಿ ಒಂಭತ್ತಕ್ಕೆ ಆರಂಭವಾಗುವ ಬ್ರಹ್ಮೋತ್ಸವ ಮುಗಿಯುವ ಹೊತ್ತಿಗೆ ಬೆಳಗಿನ ಜಾವ ಮೂರು ಗಂಟೆಗಳಾಗಿದ್ದರೂ, ಸಕಲ ಅಭರಣಗಳಿಂದ ಕಂಗೊಳಿತನಾದ ಸಾಕ್ಷಾತ್ ವೈಕುಂಠವೇ ಧರೆಗಿಳಿದಂತೆ ಕಾಣುವ ಈ ಅದ್ಭುತ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತಾದಿಗಳು ಅಂದಿನ ಮಧ್ಯಾಹ್ನದಿಂದಲೇ ಮೇಲುಕೋಟೆಯಲ್ಲಿ ಸೇರಿರುತ್ತಾರೆ. ಸಾಕ್ಷಾತ್ ಆದಿಶೇಷನೇ ವೈರಮುಡಿ ಎಂಬ ನಂಬಿಕೆ ಇರುವ ಕಾರಣ, ಕಣ್ಣು ಕೋರೈಸುವ ಈ ವಜ್ರ ಕಿರೀಟವನ್ನು ಕೇವಲ ಕಣ್ಣಿನಿಂದ ನೋಡಿ ಧನ್ಯರಾಗಬಹುದೇ ಹೊರತು ಯಾರೂ ಸಹಾ ಅದನ್ನು ಕೈಯಲ್ಲಿ ಮುಟ್ಟಬಾರದೆಂಬ ನಂಬಿಕೆ ಇಲ್ಲಿಯದ್ದಾಗಿದೆ.

ಮೇಲುಕೋಟೆ ಪ್ರದೇಶವು ಮೈಸೂರು ಮಹಾರಾಜರ ಆಡಳಿತದಲ್ಲಿದ್ದ ಸಂಧರ್ಭದಲ್ಲಿ ವೈರಮುಡಿ ಕಿರೀಟವು ರಾಜಾಶ್ರಯದ್ದು, ಪ್ರತೀ ವರ್ಷ ವೈರಮುಡಿ ಉತ್ಸವ ನಡೆಯುವ ಸಂಧರ್ಭದಲ್ಲಿ ರಾಜರಿಂದ ಅದನ್ನು ಪಡೆದುಕೊಂಡು ಸ್ವಾಮಿಗೆ ಅಲಂಕರಿಸಿ ಉತ್ಸವ ಮುಗಿದ ನಂತರ ಮತ್ತೆ ರಾಜಾಶ್ರಯಕ್ಕೆ ಹಿಂದುರಿಗಿಸುವ ಸಂಪ್ರದಾಯವಿತ್ತು. ಸ್ವಾತ್ರಂತ್ರಾನಂತರ ಮೈಸೂರು ಸಂಸ್ಥಾನ ಭಾರತದ ಒಕ್ಕೂಟ ರಾಷ್ತ್ರದ ಭಾಗವಾದಾಗ, ವೈರಮುಡಿ ಮತ್ತು ಮೈಸೂರು ಅರಸರು ಸ್ವಾಮಿಗೆ ಅರ್ಪಿಸಿದ ರಾಜಮುಡಿ, ಗಂಡಭೇರುಂಡ ಪದಕ, ಶಂಖ, ಚಕ್ರ, ಗಧೆ, ಪದ್ಮಪೀಠ, ಕರ್ಣಕುಂಡಲ ಸೇರಿದಂತೆ ಸುಮಾರು 14 ಆಭರಣಗಳು ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಗಳ ಸರ್ಕಾರಿ ಖಜಾನೆಯಲ್ಲಿದ್ದು, ಉತ್ಸವದ ಸಂದರ್ಭದಲ್ಲಿ ವೈರಮುಡಿ ರಾಜಮುಡಿ ಕಿರೀಟದ ಜೊತೆಗೆ ಉಳಿದೆಲ್ಲಾ ಆಭರಣಗಳನ್ನು ಸಕಲ ಸರ್ಕಾರಿ ಬಿಗಿ ಭದ್ರತೆಯೊಂದಿಗೆ ಮೇಲುಕೋಟೆಗೆ ತರಲಾಗುತ್ತದೆ.
ಹೀಗೆ ಸ್ವಾಮಿಯ ಕಿರೀಟಗಳನ್ನು ತರುವಾಗ ಇಂದಿಗೂ ಸಹಾ ಮಾರ್ಗದ ಮಧ್ಯದಲ್ಲಿ ಬರುವ ಎಲ್ಲಾ ಹಳ್ಳಿಯ ಹೆಂಗಳೆಯರು, ಬಹಳ ಶ್ರದ್ಧಾ ಭಕ್ತಿಗಳಿಂದ ತಮ್ಮ ತಮ್ಮ ಮನೆಯ ಮುಂದೆ ಸಾರಿಸಿ ಗುಡಿಸಿ ರಂಗೋಲಿ ಹಾಕಿ ತಮ್ಮ ಮನೆಯ ಮುಂದೆ ಆಭರಣ ಹೊತ್ತ ವಾಹನ ಹಾದುಹೋಗುವಾಗ ಅದಕ್ಕೆ ಮಂಗಳಾರತಿ ಮಾಡುವ ಸತ್ ಸಂಪ್ರದಾಯವನ್ನು ಇಂದಿಗೂ ಕಾಣಬಹುದಾಗಿದೆ. ಹೀಗೆ ಮಂಡ್ಯದಿಂದ ಮೇಲುಕೋಟೆಗೆ ತಂದ ಕಿರೀಟಗಳು ಮತ್ತು ಆಭರಣಗಳನ್ನು ಮೇಲುಕೋಟೆಯ ದ್ವಾರದ ಹನುಮಂತನ ಗುಡಿಯ ಬಳಿಯಿಂದ ಬೆಳ್ಳಿ ಪಲ್ಲಕಿಯಲ್ಲಿರಿಸಿ ಪೂಜಿಸಿ ಮೆರವಣಿಗೆಯಲ್ಲಿ ಕೊಂಡೊಯ್ದು, ವೈರಮುಡಿ ಬ್ರಹ್ಮೋತ್ಸವ ಸಂದರ್ಭದಲ್ಲಿ ಶ್ರೀ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಧಾರಣೆ ಮಾಡಿ ಮುಂದಿನ ಹತ್ತು ದಿನಗಳ ಉತ್ಸವದಲ್ಲಿ ಪ್ರತಿದಿನವೂ ವಿವಿಧ ಕೈಂಕರ್ಯಗಳೊಂದಿಗೆ ಉತ್ಸವ ನಡೆಸಲಾಗುತ್ತದೆ, ಉತ್ಸವದ ನಾಲ್ಕನೆಯ ದಿನ ಬಹಳ ಪ್ರಮುಖ ದಿನವಾಗಿದ್ದು ಅಂದಿನ ರಾತ್ರಿ ಶ್ರೀದೇವಿ ಭೂದೇವಿಯರೊಂದಿಗೆ ಗರುಡಾರೂಢನಾದ ಶ್ರೀ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಹಾಗೂ ಬ್ರಾಹ್ಮಿ ಮುಹೂರ್ತದಲ್ಲಿ ರಾಜಮುಡಿ ಕಿರೀಟವನ್ನು ಧಾರಣೆ ಮಾಡುವುದನ್ನು ಕಣ್ತುಂಬಿಸಿಕೊಳ್ಳುವ ಸಲುವಾಗಿ ದೇಶವಿದೇಶಗಲಿಂದಲೂ ಲಕ್ಷಾಂತರ ಭಕ್ತದಿಗಳು ಮೇಲುಕೋಟೆಗೆ ಆಗಮಿಸಿ ಸ್ವಾಮಿಯ ದರ್ಶನ ಪಡೆದು ಪರಮ ಪಾವನರಾಗುತ್ತಾರೆ

ಮೇಲುಕೋಟೆಗೆ ತಂದ ನಂತರ ಈ ತಿರುವಾಭರಣಗಳನ್ನು ಮರ್ಯಾದೆಯೊಂದಿಗೆ ಚಿನ್ನದ ಪಲ್ಲಕ್ಕಿಯಲ್ಲಿರಿಸಿ ಊರಿನಲ್ಲಿ ಮೆರವಣಿಗೆ ಮಾಡಿದ ನಂತರ ರಾಮಾನುಜರ ದೇವಸ್ಥಾನದೊಳಗೆ ಇರಿಸಲಾಗುತ್ತದೆ. ಉತ್ಸವದ 4ನೇ ದಿನ ವೈರಮುಡಿ ಉತ್ಸಮ ಮುಗಿದ ನಂತರ ಮುಂದಿನ 7 ದಿನಗಳ ಕಾಲ ಅದು ದೇವರ ಮುಡಿಯಲ್ಲಿಯೇ ವಿರಾಜಮಾನವಾದ ನಂತರ ಪುನಃ ಸರ್ಕಾರೀ ಭಧ್ರತೆಯೊಡನೆ ಮಂಡ್ಯ ಜಿಲ್ಲಾ ಖಜಾನೆಗೆ ಸೇರಿಸುವ ಮುಖಾಂತರ ವೈರಮುಡಿ ಉತ್ಸವಕ್ಕೆ ತೆರೆ ಬೀಳುತ್ತದೆ. ಮೇಲು ಕೋಟೆಯು ಜಿಲ್ಲಾ ಕೇಂದ್ರ ಸ್ಥಳವಾದ ಮಂಡ್ಯದಿಂದ ಸುಮಾರು 35 ಕಿ.ಮೀ, ಮೈಸೂರಿನಿಂದ 51 ಕಿ.ಮೀ, ನಾಗಮಂಗಲದಿಂದ 29 ಕಿ.ಮೀ, ಕೆ.ಆರ್.ಪೇಟೆಯಿಂದ 24 ಕಿ.ಮೀ. ಮತ್ತು ಬೆಂಗಳೂರಿನಿಂದ 120 ಕಿ.ಮೀ ದೂರದಲ್ಲಿದ್ದು ಈ ಉತ್ಸವದ ಸಮಯದಲ್ಲಿ ಈ ಎಲ್ಲಾ ಕಡೆಯಿಂದಲೂ ಮೇಲುಕೋಟೆಗೆ ಬರಲು ಸಾಕಷ್ಟು ಸರ್ಕಾರೀ ಬಸ್ಸುಗಳ ವ್ಯವಸ್ಥೆಯೂ ಇರುತ್ತದೆ. ಅದಲ್ಲದಿದ್ದರೂ ಅತ್ಯುತ್ತಮವಾದ ನಳನಳಿಸುತ್ತಿರುವ ರಸ್ತೆ ಇದ್ದು ತಮ್ಮ ಖಾಸಗೀ ವಾಹನಗಳಲ್ಲಿಯೂ ಬರಬಹುದಾಗಿದೆ.
ಮೇಲುಕೋಟೆಗೆ ಬಂದ ನಂತರ ಇಲ್ಲಿನ ಪ್ರಸಿದ್ಧವಾದ ಅಯ್ಯಂಗಾರ್ ಪುಳಿಯೋಗರೆ, ಮೊಸರನ್ನ ಮತ್ತು ಸಕ್ಕರೆ ಪೊಂಗಲ್ (ಹುಗ್ಗಿ)ಯನ್ನು ಸವಿಯುವುದಲ್ಲದೇ, ಬೆಟ್ಟದ ಮೇಲಿರುವ ಯೋಗಾನರಸಿಂಹ ಸ್ವಾಮೀ ದೇವಸ್ಥಾನ, ಅಲ್ಲಿಯೇ ನಡೆಯುವ ಸಂಸ್ಕೃತ ವೇದ ಪಾಠ ಶಾಲೆ, ಅಕ್ಕ-ತಂಗಿಯರ ಕೊಳ, ಪುಷ್ಕರಣಿ, ಸುಂದರವಾದ ಭುವನೇಶ್ವರಿ ಮಂಟಪ, ಮನಮೋಹಕವಾದ ಕಲ್ಯಾಣಿ, ಯದುಗಿರಿ ಅಮ್ಮನವರ ದೇಗುಲ, ಸಂಗೀತ, ನೃತ್ಯ, ಸಾಹಿತ್ಯೋತ್ಸವಗಳ ವೇದಿಕೆಯಾದ ಮಂಟಪಗಳೇ ಮೊದಲಾದ ಸುಂದರಾತಿಸುಂದರ ತಾಣಗಳು, ಸಭಾ ಮಂಟಪದಲ್ಲಿರುವ 100 ಕಲ್ಲು ಗಂಬಗಳಲ್ಲಿ ರಾಮಾಯಣ ಮತ್ತು ಮಹಾಭಾರತದ ಪ್ರಮುಖ ಸನ್ನಿವೇಶಗಳ ಚಿತ್ರಣವನ್ನು ನೋಡಿ ಕಣ್ತುಂಬಿಸಿಕೊಳ್ಳುವುದಲ್ಲದೇ, ಸೂಪರ್ ಸ್ಟಾರ್ ರಜನೀಕಾಂತ್ ಮತ್ತು ಸ್ಟಾರ್ ಡೈರೆಕ್ಟರ್ ಮಣಿರತ್ನಂ ಅವರ ಬಹುತೇಕ ಚಿತ್ರಗಳಲ್ಲದೇ ನೂರಾರು ಚಿತ್ರಗಳಲ್ಲಿ ಕಾಣಬಹುದಾದ ಬೃಹದಾದ ಅರೆ ನಿರ್ಮಿತ ರಾಯಗೋಪುರದ ಕುರುಹನ್ನೂ ಕಣ್ತುಂಬಿಸಿಕೊಳ್ಳಬಹುದಾಗಿದೆ.
ನೆನ್ನೆ ರಾತ್ರಿಯಷ್ಟೇ ವೈರಮುಡಿ ಉತ್ಸವ ಮುಗಿದಿದೆ. ಈ ಏಳು ದಿನಗಳಲ್ಲಿ ಸಮಯ ಮಾಡಿಕೊಂಡು ಮೇಲುಕೋಟೆಗೆ ಭೇಟಿ ನೀಟಿ ಚಲುವನಾರಾಯಣ ಮತ್ತು ಶ್ರೀ ಯೋಗಾನರಸಿಂಹ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗೋಣ.
ಏನಂತೀರೀ?
ನಿಮ್ಮವನೇ ಉಮಾಸುತ