ಅದು ಎಂಭತ್ತರ ದಶಕ. ಗಮಕ ಕಲೆ ನಮ್ಮ ತಂದೆಯವರಿಗೆ ನಮ್ಮ ತಾತ ಗಮಕಿ ನಂಜುಂಡಯ್ಯನವರಿಂದಲೇ ಬಂದಿತ್ತಾದರೂ, ಶೈಕ್ಷಣಿಕವಾಗಿ ಅಧಿಕೃತವಾದ ಪದವಿಯೊಂದು ಇರಲಿ ಎಂದು ಮಲ್ಲೇಶ್ವರದ ಗಾಂಧೀ ಸಾಹಿತ್ಯ ಸಂಘದಲ್ಲಿ ಗುರುಗಳಾದ ಶ್ರೀ ನಾರಾಯಣ್ ಅವರು ನಡೆಯುತ್ತಿದ್ದ ಗಮಕ ಪಾಠ ಶಾಲೆ ಮೂಲಕ ಗಮಕ ವಿದ್ವತ್ ಪರೀಕ್ಷೆಯನ್ನು ಕಟ್ಟಿದ್ದರು. ಪರೀಕ್ಷೆ ಎಲ್ಲವೂ ಸುಲಲಿತವಾಗಿ ಮುಗಿದು ಎಲ್ಲರೂ ಅತ್ಯುತ್ತಮವಾದ ಫಲಿತಾಂಶ ಪಡೆದಿದ್ದ ಕಾರಣ ಅದರ ಸಂಭ್ರಮಾಚರಣೆಗೆಂದು ಕುಟುಂಬ ಸಮೇತವಾಗಿ ಎಲ್ಲಾದರೂ ಪ್ರವಾಸಕ್ಕೆ ಹೋಗಬೇಕೆಂದು ನಿರ್ಧರಿಸಿ, ಅದೊಂದು ಭಾನುವಾರ ಬೆಳಿಗ್ಗೆ 9.00ಘಂಟೆಯ ಹೊತ್ತಿಗೆ ಎಲ್ಲರೂ ಬನ್ನೆರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಕುಟುಂಬ ಸಮೇತರಾಗಿ ತಿಂಡಿ ಮತ್ತು ಊಟದ ಸಮೇತ ಹಾಜರಾಗಿರಬೇಕೆಂದು ನಿರ್ಧರಿಸಲಾಯಿತು.
ನಾವು ಇದ್ದದ್ದು ಬಿ.ಇ.ಎಲ್ ಬಳಿ. ಇಂದಿನಂತೆ ಅಂದೆಲ್ಲಾ ಬಸ್ಸಿನ ವ್ಯವಸ್ಥೆ ಇಲ್ಲದಿದ್ದ ಕಾರಣ ನಾವೆಲ್ಲಾ ಹಿಂದಿನ ದಿನ ಸಾಯಂಕಾಲವೇ ಮಲ್ಲೇಶ್ವರಂನಲ್ಲಿದ್ದ ನಮ್ಮ ಚಿಕ್ಕಪ್ಪನ ಮನೆಗೆ ಹೋಗಿ ಅಲ್ಲಿಂದ ಬೆಳಗ್ಗೆ ಎಲ್ಲರೂ ಒಟ್ಟಿಗೆ ಹೋಗುವುದೆಂದು ತೀರ್ಮಾನಿಸಲಾಗಿತ್ತು. ಅಂತೆಯೇ ಶನಿವಾರ ಸಂಜೆಯೇ ಚಿಕ್ಕಪ್ಪನ ಮನೆಗೆ ಹೋಗಿದ್ದೆವು. ಅಂದೆಲ್ಲಾ ಮನೆ ಚಿಕ್ಕದಾಗಿದ್ದರೂ ಮನಸ್ಸು ದೊಡ್ಡದಾಗಿರುತ್ತಿದ್ದ ಕಾರಣ ಅಷ್ಟು ಸಣ್ಣ ಮನೆಯಲ್ಲಿ ಏಳೆಂಟು ಜನ ಸಹಜವಾಗಿದ್ದೆವು. ಭಾನುವಾರ ಬೆಳಗ್ಗೆ ನಾಲ್ಕು ಗಂಟೆಗೆಲ್ಲಾ ಅಮ್ಮಾ, ಚಿಕ್ಕಮ್ಮ ಮತ್ತು ಚಿಕ್ಕಪ್ಪ ಎದ್ದು ತಿಂಡಿ ಮತ್ತು ಅಡುಗೆ ಕಾರ್ಯದಲ್ಲಿ ನಿರತರಾಗಿದ್ದರು. ಬೆಳಿಗ್ಗೆ ಐದಕ್ಕೆಲ್ಲಾ ನಮ್ಮನ್ನೆಲ್ಲಾ ಎಬ್ಬಿಸಿ ಒಬ್ಬರಾಗಿ ಸ್ನಾನಕ್ಕೆ ಕಳುಹಿಸಲಾಯಿತು. ಒಂದೇ ಬಚ್ಚಲು ಮನೆಯಾಗಿದ್ದರಿಂದ ಮತ್ತು ನಮ್ಮ ಚಿಕ್ಕಪ್ಪನ ಮನೆಯ ಮಾಲಿಕರು ಊರಿಗೆ ಹೋಗಿದ್ದು ಅವರ ಮನೆಯನ್ನು ನೋಡಿ ಕೊಳ್ಳಲು ನಮ್ಮ ಚಿಕ್ಕ ಚಿಕ್ಕಪ್ಪನವರಿಗೆ ತಿಳಿಸಿದ್ದ ಕಾರಣ ಗಂಡಸರೆಲ್ಲಾ ನಮ್ಮ ಚಿಕ್ಕಪ್ಪನ ಮನೆಯ ಮಾಲಿಕರ ಮನೆಯಲ್ಲಿಯೇ ಸ್ನಾನ ಸಂಧ್ಯಾವಂಧನೆಯನ್ನು ಮುಗಿಸಿಕೊಂಡು ಸುಮಾರು 6 ಗಂಟೆಗೆಲ್ಲಾ ಸಿದ್ಧರಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಬಸ್ ನಂಬರ್ 365 ಹತ್ತಿ ಸೀಟ್ ಮೇಲೆ ಕುಳಿತಿದ್ದೇ ನೆನಪು. ಬೆಳಿಗ್ಗೆ ಬೇಗನೆ ಎದ್ದಿದ್ದ ಕಾರಣ ಮಕ್ಕಳೆಲ್ಲರೂ ನಿದ್ದೆಗೆ ಜಾರಿದ್ದೆವು. ಬನ್ನೇರುಘಟ್ಟ ಬಂದಾಗ ಅಪ್ಪಾ ಎಬ್ಬಿಸಿದಾಗ ಅಯ್ಯೋ ಇಷ್ಟು ಬೇಗ ಬಂದ್ವಿಟ್ಬಾ? ಎಂದೆಣಿಸಿದರೂ ಗಂಟೆ 9:30 ಆಗಿತ್ತು.
ಅದಾಗಲೇ ಬಹುತೇಕರು ನಮ್ಮೆಲ್ಲರ ಆಗಮನಕ್ಕಾಗಿ ಕಾಯುತ್ತಿದ್ದರು. ಅಲ್ಲಿಂದ ಸುಮಾರು ಅರ್ಧ ಗಂಟೆಯೊಳಗೆ ಬರೆಬೇಕಾದವರೆಲ್ಲರೂ ಬರುವಷ್ಟರಲ್ಲಿ ಹೊಟ್ಟೆ ಹಸಿಯುತ್ತಿತ್ತು. ಎಲ್ಲರೂ ಮರದ ನೆರಳಲ್ಲಿ ಕುಳಿತುಕೊಂಡು ಮನೆಯಿಂದ ಮಾಡಿಕೊಂಡು ತಂದಿದ್ದ ತಿಂಡಿಯನ್ನು ಎಲ್ಲರೂ ಹಂಚಿಕೊಂಡು ತಿಂದು ಡರ್ ಎಂದು ತೇಗಿ ಬನ್ನೇರುಘಟ್ಟ ಪಾರ್ಕ್ ನೋಡಲು ದಾಂಗುಡಿ ಇಟ್ಟೆವು. ಈಗಿನಂತೆ ಸಫಾರಿ, ಚಿಟ್ಟೆ ಪಾರ್ಕ್ ಗಳು ಇಲ್ಲದಿದ್ದರೂ ನಮ್ಮ ಮನಸ್ಸನ್ನು ತಣಿಸಲು ಹತ್ತಾರು ಪ್ರಾಣಿಗಳು ಇದ್ದದ್ದು ನಮಗೆ ಮುದವನ್ನು ನೀಡಿತ್ತು. ಅದರಲ್ಲೂ ದೈತ್ಯಾಕಾರದ ಆನೆ, ಬಗೆ ಬಗೆಯ ಪಕ್ಷಿಗಳು ಮತ್ತು ವಿವಿಧ ಬಗೆಯ ಮೊಸಳೆಗಳೇ ನಮಗೆ ಆಕರ್ಷಣೀಯವಾಗಿದ್ದವು.
ಬನ್ನೇರುಘಟ್ಟ ಎಂದ ತಕ್ಷಣ ಬಹುತೇಕರಿಗೆ ರಾಷ್ಟ್ರೀಯ ಉದ್ಯಾನವನದ ಹೂರತಾಗಿ ಅಲ್ಲೊಂದು ಸುಂದರವಾದ ಬೆಟ್ಟವಿದೆ. ಆ ಬೆಟ್ಟದ ಮೇಲೊಂದು ಚಂಪಕಧಾಮಸ್ವಾಮಿ (ಸಂಪಗಿರಾಮನ) ದೇವಸ್ಥಾನವಿದೆ ಆ ಬೆಟ್ಟದ ಆಚೆಯ ತಪ್ಪಲಲ್ಲಿರುವ ಸುಂದರವಾದ ಕಲ್ಯಾಣಿ ಇದೆ. ಆ ಕಲ್ಯಾಣಿಯೇ ಸುವರ್ಣಮುಖಿ ನದಿಯ ಉಗಮಸ್ಥಾನ ಎಂಬುದರ ಅರಿವೇ ಇಲ್ಲವಾಗಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ.
ಬನ್ನೇರುಘಟ್ಟ ಎಂಬ ಹೆಸರು ಬಂದ ಕುರಿತೂ ಒಂದು ಸುಂದರವಾದ ಕತೆಯಿದೆ. ಬನ್ನೇರುಘಟ್ಟದಿಂದ ಆರಂಭವಾಗುವ ದಟ್ಟವಾದ ಕಾಡು ಇಲ್ಲಿಂದ ಕೇವಲ 30-35 ಕಿ.ಮೀ ದೂರದಲ್ಲಿರುವ ತಮಿಳುನಾಡಿನವರೆಗೂ ಹಬ್ಬಿರುವ ಕಾರಣ ಈ ಭಾಗದಲ್ಲಿ ನೂರಾರು ವರ್ಷಗಳಿಂದಲೂ ತಮಿಳ ಭಾಷೆಯ ಪ್ರಭಾವ ಇದ್ದು ಈ ಪ್ರದೇಶವನ್ನು ವನ್ನಿಯಾರ್ ಘಟ್ಟಂ ಎಂದು ಆಗ ಕರೆಯುತ್ತಿದ್ದರಂತೆ ನಂತರ ಅದು ಜನರ ಆಡು ಭಾಷೆಯಲ್ಲಿ ಅಪಭ್ರಂಶವಾಗಿ ಬನ್ನೇರುಘಟ್ಟವಾಯಿತು ಎಂದೂ ಹೇಳಲಾಗುತ್ತದೆ.
ಇನ್ನು ಈ ಚಂಪಕಧಾಮದ ಬಗ್ಗೆಯೂ ಒಂದು ಪುರಾಣ ಕತೆಯಿದ್ದು ಮಹಾಭಾರತದಲ್ಲಿ ಪಾಂಡವರ ನಂತರ ಅವರ ಮುಂದಿನ ಪೀಳಿಗೆಯವನಾದ ಪರೀಕ್ಷಿತ ಮಹಾರಾಜನನ್ನು ತಕ್ಷಕನೆಂಬ ಹಾವು ಕಚ್ಚಿ ಸಾಯಿಸಿದ್ದರ ವಿರುದ್ಧ ಅವನ ಮಗ ಜನಮೇ ಜಯ ರಾಜ ಸರ್ಪಯಾಗವನ್ನು ಮಾಡಿ ಮಂತ್ರ ಮುಖೇನ ಲಕ್ಷಾಂತರ ಹಾವುಗಳನ್ನು ಆ ಯಜ್ಞಕುಂಡಕ್ಕೆ ಆಹುತಿ ನೀಡಿದ ಪರಿಣಾಮ ಅತನಿಗೆ ಸರ್ಪದೋಷದಿಂದಾಗಿ ಕುಷ್ಠ ರೋಗ ಬಂದಿತ್ತಂತೆ. ಅದರ ಪಾಪ ಪರಿಹಾರಕ್ಕಾಗಿ ಆತ ಎಲ್ಲಾ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುತ್ತಾ, ಹಾಗೆಯೇ ಈ ಬನ್ನೇರುಘಟ್ಟ ಪ್ರದೇಶಕ್ಕೆ ಬಂದಾಗ ಅವನ ಜೊತೆಯಲ್ಲಿಯೇ ಬಂದಿದ್ದ ನಾಯಿಯೊಂದು ಬೆಸಿಲಿನ ಬೇಗೆ ತಾಳಾಲಾರದೆ ಅಲ್ಲಿಯೇ ಇದ್ದ ನೀರಿನ ಗುಂಡಿಗೆ ಹಾರಿ ನೆಗೆದು ಮೈತಣಿಸಿಕೊಂಡು ಹೊರಬಂದು ಮೈ ಕೊಡವಿ ಕೊಂಡಾಗ ಅದರ ಮೈಯಿಂದ ಹಾರಿದ ನೀರಿನ ಹನಿ ಜನಮೇಜಯ ರಾಜನ ಮೈ ಮೇಲೆ ಬಿದ್ದು, ಅವನ ಚರ್ಮರೋಗ ವಾಸಿಯಾಯಿತಂತೆ. ಅದರ ನೆನಪಿನಲ್ಲಿಯೇ ರಾಜ ಜನಮೇಜಯ ಅಲ್ಲೊಂದು ಸುಂದರವಾದ ಕೊಳವನ್ನು ನಿರ್ಮಿಸಿದನಂತೆ ಅದೇ ಕೊಳವೇ ಮುಂದೆ ಸುವರ್ಣಮುಖಿ ನದಿಯಾಗಿ ಹರಿಯುತ್ತದೆ ಎನ್ನುವ ಪ್ರತೀತಿಯೂ ಇದೆ.
ನಾವೂ ಸಹಾ ಬೆಟ್ಟ ಹತ್ತಿ ಆ ಪ್ರದೇಶಕ್ಕೆ ತಲುಪುವ ಹೊತ್ತಿಗೆ ಮಟ ಮಟ ಮಧ್ಯಾಹ್ನವಾಗಿದ್ದ ಕಾರಣ ದೇವಸ್ಥಾನದ ಬಾಗಿಲು ಹಾಕಿತ್ತು ಮತ್ತು ನಮಗೆಲ್ಲರಿಗೂ ಆಯಾಸವೂ ಆಗಿತ್ತು. ಆಯಾಸ ಪರಿಹಾರಾರ್ಥವಾಗಿಯೂ ಮತ್ತು ಬಂದಿದ್ದ ಮಕ್ಕಳೆಲ್ಲರಿಗೂ ಮುದ ನೀಡುವ ಸಲುವಾಗಿ ಹೆಂಗಸರ ಹೊರತಾಗಿ ಮಕ್ಕಳಾದಿಯಾಗಿ ಬಂದಿದ್ದವೆಲ್ಲರೂ ಸುವರ್ಣಮುಖೀ ಕೊಳಕ್ಕಿಳಿದು ಮನಸೋ ಇಚ್ಚೆ ಆಟವಾಡಿದೆವು. ನಮ್ಮ ತಂದೆಯವರಂತೂ ನೀರಿನ ಮೇಲೆ ಗಂಟೆಗಟ್ಟಲೆ ಪದ್ಮಾಸನ ಹಾಕಿ ಮಲಗಬಲ್ಲರಾಗಿದ್ದಂತಹ ಅದ್ಭುತವಾದ ಈಜುಗಾರರಾಗಿದ್ದರು. ಅದೂ ಅಲ್ಲದೇ ನೀರಿನ ಮೇಲೆ ಅನೇಕ ಯೋಗಸನಗಳನ್ನೂ ಮಾಡುತ್ತಿದ್ದರು. ಅಂತಹ ಪ್ರಶಾಂತ ವಾತಾವರಣ ಮತ್ತು ಅತ್ಯಂತ ನಿರ್ಮಲವಾದ ನೀರು ಸಿಕ್ಕಿದ್ದು ಮರುಭೂಮಿಯಲ್ಲಿ ಓಯಸ್ಸಿಸ್ ದೊರೆತಂತಾಗಿ ಸುಮಾರು ಹೊತ್ತು ಅವರು ಮನಸೋಇಚ್ಚೆ ಈಜಾಡಿದರು.
ಗಂಡಸರು ಮತ್ತು ಮಕ್ಕಳು ಈಜಾಡುವಷ್ಟರಲ್ಲಿ ಹೆಂಗಳೆಯರೆಲ್ಲರೂ, ಮರದ ನೆರಳಿನಲ್ಲಿ ಊಟದ ಸಿದ್ದತೆ ಮಾಡಿದ್ದರು. ನಾವೆಲ್ಲರೂ ನೀರಿನಿಂದ ಹೊರಬಂದು ಒದ್ದೇ ಬಟ್ಟೆಗಳನ್ನು ಹಿಂಡಿ ಅಲ್ಲಿಯೇ ಬಿಸಿಲಿನಲ್ಲಿ ಒಣಗಲು ಹಾಕಿ ಎಲ್ಲರೂ ಊಟಕ್ಕೆ ಕುಳಿತೆವು. ನೀರಿನಲ್ಲಿ ಚೆನ್ನಾಗಿ ಆಡಿದ್ದರಿಂದಲೋ ಅಥವ ಅಲ್ಲಿಯ ಪ್ರಶಾಂತವಾದ ವಾತಾವರಣವೋ ಅಥವಾ ಊಟದ ಮಧ್ಯೆ ಒಬ್ಬರಾದ ನಂತರ ಒಬ್ಬರು ಅತ್ಯಂತ ಸುಶ್ರಾವ್ಯವಾಗಿ ಸಂಗೀತವನ್ನು ಹಾಡುತ್ತಿದ್ದ ಪರಿಣಾಮವೋ ಏನು ಎಂದಿಗಿಂತಲೂ ತುಸು ಹೆಚ್ಚೇ ಊಟವನ್ನು ಸಂತೋಷದಿಂದ ಮಾಡಿ ಮುಗಿಸಿ ಕೈತೊಳೆದುಕೊಳ್ಳುತ್ತಿರುವಾಗಲೇ ನಮ್ಮ ತಂದೆಯವರು ಇದ್ದಕ್ಕಿದ್ದಂತೆಯೇ ಅರೇ ನನ್ನ ಉಂಗುರ ಕಾಣಿಸುತ್ತಿಲ್ಲವಲ್ಲಾ! ಎಂಬ ಉಧ್ಗಾರವನ್ನು ತೆಗೆಯುತ್ತಿದ್ದಂತೆಯೇ ಅಲ್ಲಿಯವರೆಗಿನ ಎಲ್ಲರ ಪ್ರವಾಸದ ಸಂತೋಷದ ಬಲೂನು ಇದ್ದಕ್ಕಿದ್ದಂತೆಯೇ ಡಬ್ ಎಂದು ಒಡೆದು ಹೋಯಿತು.
ಎಲ್ಲರೂ ಉಂಗುರವನ್ನು ಹುಡುಕಾಡ ತೊಡಗಿದರು. ನೀವು ಖಂಡಿತವಾಗಿಯೂ ಉಂಗುರವನ್ನು ಹಾಕಿಕೊಂಡು ಬಂದಿದ್ರಾ? ನಿಮ್ಮ ಬೆರಳಿಗೆ ಉಂಗುರ ಸರಿಯಾಗಿತ್ತಾ ಇಲ್ಲವೇ ಸಡಿಲವಾಗಿತ್ತಾ? ಎಂಬ ಪ್ರಶ್ನೆ ಒಬ್ಬರದ್ದಾಗಿದ್ದರೆ, ನೀರಿಗೆ ಇಳಿಯುವಾಗ ನಾನೇ ನೋಡಿದ್ದೇ ಎಂದು ಮತ್ತೊಬ್ಬರ ಉತ್ತರ. ಅಯ್ಯೋ ಬೆಳಗಿನಿಂದ ಎಷ್ಟೆಲ್ಲಾ ಕಡೆ ಸುತ್ತಾಡಿದ್ದೇವೆ, ಈಗ ಎಲ್ಲೀ ಅಂತ ಹುಡುಕುವುದು ಎಂಬ ಜಿಜ್ಞಾಸೆ ಮತ್ತೊಬ್ಬರದ್ದು. ಬಹುಶಃ ನೀರಿನಲ್ಲಿ ಮಕ್ಕಳನ್ನು ಹಿಡಿದು ಆಡಿಸುತ್ತಿರುವಾಗ ಇಲ್ಲವೇ ರಭಸವಾಗಿ ಕೈ ಬಡಿಯುತ್ತಿದ್ದಾಗ ಉಂಗುರ ಕಳಚಿ ನೀರಿನಲ್ಲಿ ಬಿದ್ದು ಹೋಗಿರಬಹುದು ಎಂಬುದು ಮತ್ತೊಬ್ಬರ ವಾದ ಒಟ್ಟಿನಲ್ಲಿ ಅವರವರಿಗೆ ತೋಚಿದಂತೆ ತಲಾ ತಟ್ಟಿ ಮಾತನಾಡುತ್ತಿದ್ದರು, ನಮ್ಮ ಜೊತೆಯಲ್ಲಿ ಬಂದಿದ್ದ ವಯಸ್ಸಾದವರೊಬ್ಬರು, ಅಯ್ಯೋ ಚಿಂತೆಯಾಕ್ ಮಾಡ್ತೀರಿ? ಚಿನ್ನ ಕಳೆದುಕೊಂಡ್ರೇ ಒಳ್ಳೆಯದಾಗತ್ತಂತೇ ಎಂದು ಹೇಳಿದಾಗಲಂತೂ, ಮದುವೆಯಲ್ಲಿ ತಮ್ಮ ತಂದೆಯವರು ಮಾಡಿಸಿ ಕೊಟ್ಟಿದ್ದಂತಹ ಉಂಗುರವನ್ನು ಅನ್ಯಾಯವಾಗಿ ಕಳೆದುಕೊಂಡು ಬಿಟ್ಟರಲ್ಲಾ! ಎಂಬ ಚಿಂತೆಯಲ್ಲಿ ಅಮ್ಮಾ ಕೂಡಾ ಸರಿಯಾಗಿ ಊಟಾನೇ ಮಾಡ್ಲಿಲ್ಲ.
ಒಟ್ನಲ್ಲಿ ಬೆಳಗ್ಗಿನಿಂದಲೂ ಎಲ್ಲರೂ ಪಟ್ಟಿದ್ದ ಖುಷಿ ನಿಜಕ್ಕೂ ಈ ಉಂಗುರ ಕಳೆದುಕೊಂಡ ಕೊಂಡ ವಿಷಯ ಬಯಲಿಗೆ ಬರುತ್ತಿದ್ದಂತೆಯೇ ಠುಸ್ ಎಂದು ಕಳೆದುಹೋಗಿತ್ತು. ಸ್ವಲ್ಪ ಹೊತ್ತು ಎಲ್ಲರೂ ಉಂಗುರ ಹುಡುಕಿದ ನಂತರ ಕತ್ತಲಾಗುವುದರೊಳಗೆ ಮನೆ ಸೇರಿಕೊಳ್ಳಬೇಕೆಂದು ಭಾರವಾದ ಹೃದಯದಿಂದ ಹುಡುಕುವುದನ್ನು ಕೈ ಬಿಟ್ಟು ಎಲ್ಲರೂ ಬಸ್ ನಿಲ್ದಾಣದ ಕಡೆ ಮುಖ ಮಾಡಿದೆವು. ದಿನವಿಡೀ ಗಲ ಗಲ ಎನ್ನುತ್ತಿದ್ದವರೆಲ್ಲರೂ ಮೌನಕ್ಕೆ ಶರಣಾಗಿ ಅವರವರ ನಿಲ್ದಾಣ ಬರುತ್ತಿದ್ದಂತೆಯೇ ಕೈ ಬೀಸಿ ಹೋರಟು ಹೋದರು. ನಾವೂ ಕೂಡಾ ಮೆಜೆಸ್ಟಿಕ್ಕಿನಿಂದ ಪುನಃ ಚಿಕ್ಕಪ್ಪನ ಮನೆಗೆ ಹೋಗದೇ ಸೀದಾ ನಮ್ಮ ಮನೆಗೆ ಬರುವಷ್ಟರಲ್ಲಿ ಗಂಟೆ ಎಂಟಾಗಿತ್ತು. ಮನೆಗೆ ಬಂದ ತಕ್ಷಣ ಅಪ್ಪಾ ಮತ್ತು ಅಮ್ಮ ಮತ್ತೊಮ್ಮೆ ಉಂಗುರವನ್ನೇನಾದರೂ ಮನೆಯಲ್ಲಿಯೇ ಬಿಚ್ಚಿಟ್ಟು ಹೋಗಿದ್ದೆವಾ ಎಂದು ಮನೆಯಲ್ಲಾ ಹುಡುಕಾಡಿ ಎಲ್ಲಿಯೂ ಸಿಗದಿದ್ದಾಗ ತಮ್ಮ ಅದೃಷ್ಟಕ್ಕೆ ತಾವೇ ಹಳಿದುಕೊಂಡರು. ಉಂಗುರ ಕಳೆದು ಹೋದ ದುಃಖದಲ್ಲಿ ಅಂದಿನ ರಾತ್ರಿ ಯಾರಿಗೂ ಊಟ ಮಾಡುವ ಮನಸ್ಸಿರದೇ, ಎಲ್ಲರೂ ಹಾಗೆಯೇ ನಿದ್ದೆ ಮಾಡಿ ಮಾರನೆಯ ದಿನದಂದು ಯಥಾ ಪ್ರಕಾರ ಸ್ಕೂಲು ಆಫೀಸ್ ಕಡೆ ಗಮನ ಹರಿಸುತ್ತಾ ಉಂಗುರ ಕಳೆದುಕೊಂಡದ್ದನ್ನು ಮರೆಯುತೊಡಗಿದೆವು. ಅಮ್ಮಾ ಮಾತ್ರಾ, ಈ ಸತೀ ಬೋನಸ್ ಬಂದಾಗ ಒಂದು ಉಂಗುರವನ್ನು ಮಾಡಿಸೋಣ ಎಂದು ಅಪ್ಪನ ಬಳಿ ಹೇಳುತ್ತಿದ್ದದ್ದು ಕಿವಿಗೆ ಬಿತ್ತು.
ಸಾಧಾರಣವಾಗಿ ತಿಂಗಳಿಗೊಮ್ಮೆ ನಮ್ಮ ಮನೆಗೆ ಬರುತ್ತಿದ್ದ ನಮ್ಮ ಕೊನೆಯ ಚಿಕ್ಕಪ್ಪ ಇದಾದ ಮೂರ್ನಾಲ್ಕು ದಿನಗಳಲ್ಲಿಯೇ ಒಂದು ಸಂಜೆ ಇದ್ದಕ್ಕಿದ್ದಂತೆಯೇ ನಮ್ಮ ಮನೆಗೆ ಬಂದ್ದದ್ದು ನಮಗೆಲ್ಲರಿಗೂ ಆಶ್ವರ್ಯವಾಗಿತ್ತು. ಅರೇ ಮೊನ್ನೇ ತಾನೇ ಎಲ್ಲರೂ ಸಿಕ್ಕಿದ್ದೆವೆ ಮತ್ತೆ ಬಂದಿದ್ದಾರಲ್ಲಾ ಎಂದು ಯೋಚಿಸುತ್ತಿದ್ದಂತೆಯೇ, ಅತ್ಕೆಮ್ಮಾ ಉಂಗುರ ಏನಾದ್ರೂ ಸಿಕ್ತಾ? ಎಂದು ಮಾತಿಗೆ ಎಳೆದಾಗಾ, ಅಯ್ಯೋ ಆ ವಿಷಯ ತಿರುಗಿ ಯಾಕಪ್ಪಾ ಎತ್ತುತ್ತೀಯಾ? ನಾವಾಗಲೇ ಅದನ್ನು ಮರೆತು ಮೂರು ದಿನಗಳಾಯ್ತು ಎಂದು ದುಃಖದಲ್ಲಿ ಹೇಳಿದರು. ಕೂಡಲೇ ನಮ್ಮ ಚಿಕ್ಕಪ್ಪ ತಮ್ಮ ಪ್ಯಾಂಟಿನ ಜೋಬಿಗೆ ಕೈ ಹಾಕಿ, ಕಳೆದು ಹೋದ ಉಂಗುರಾ ಇದೆನಾ ನೋಡಿ ಎಂದು ಅಮ್ಮನ ಕೈಗೆ ಉಂಗರವನ್ನು ಕೊಟ್ಟಾಗ ಅಮ್ಮನ ಮುಖ ಇಷ್ಟಗಲವಾಗಿ ಹೋಗಿತ್ತು. ಚಿನ್ನದ ನಾಡು ಕೆ.ಜಿ.ಎಫ್ ನಲ್ಲಿಯೇ ಹುಟ್ಟಿ ಚಿನ್ನದ ನೀರನ್ನೇ ಕುಡಿದು ಬೆಳೆದವರು ಇಂದು ಚಿನ್ನದ ಉಂಗುರವನ್ನು ನೋಡಿ ಆ ಪರಿಯಾಗಿ ಸಂಭ್ರಮ ಪಟ್ಟಿದ್ದನ್ನು ನಾವೆಂದು ನೋಡೇ ಇರಲಿಲ್ಲ.
ಅರೇ ಉಂಗುರ ನಿನಗೆಲ್ಲಿ ಸಿಕ್ತು? ಹೇಗೆ ಸಿಕ್ತು? ಎಂದು ಒಂದೇ ಸಮನೇ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಅಮ್ಮಾ ಹಾಕಿದ್ದಲ್ಲದೇ, ನಮ್ಮ ಮದುವೆಯ ಸಮಯದಲ್ಲಿ ಈ ಉಂಗುರ ಮಾಡಿಸಲು ಎಷ್ಟು ಕಷ್ಟ ಪಟ್ಟಿದ್ದರು ನಮ್ಮ ಅಪ್ಪಾ ಗೊತ್ತಾ? ಕಷ್ಟ ಪಟ್ಟು ಸಂಪಾದಿಸಿದ ಹಣ ಮತ್ತು ಆಸ್ತಿ ಎಂದೂ ಕಳೆದು ಹೋಗುವುದಿಲ್ಲವಂತೆ ಎಂಬ ವೇದಾಂತದ ಮಾತು ಬೇರೆ.
ನಿಜವಾಗಿಯೂ ನಡೆದ ಸಂಗತಿ ಏನೆಂದರೆ, ಉಂಗುರ ಕಳೆದು ಹೋದ ಎರಡು ದಿನಗಳ ನಂತರ ನಮ್ಮ ಚಿಕ್ಕಪ್ಪನ ಮನೆಯ ಮಾಲಿಕರು ಊರಿನಿಂದ ಪುನಃ ಮನೆಗೆ ಹಿಂದಿರುಗಿ ಸ್ನಾನಕ್ಕೆ ಬಚ್ಚಲು ಮನೆಗೆ ಹೋಗಿದ್ದಾಗ ಬಚ್ಚಲಿನ ಮೂಲೆಯಲ್ಲಿ ಈ ಉಂಗುರ ಬಿದಿದ್ದನ್ನು ನೋಡಿ ಅದು ತಮ್ಮ ಮನೆಯದ್ದಲ್ಲಾ ಬಹುಶಃ ನಮ್ಮ ಚಿಕ್ಕಪ್ಪನದ್ದೇ ಇರಬೇಕು ಎಂದು ಅಂದು ಸಂಜೆ ನಮ್ಮ ಚಿಕ್ಕಪ್ಪ ಮನೆಗೆ ಬಂದಾಗ ಕರೆದು ಅವರ ಕೈಗೆ ಉಂಗುರವನ್ನು ಕೊಟ್ಟಿದ್ದಾರ ಅದಾಗಲೇ ಕತ್ತಲಾಗಿದ್ದರಿಂದ ಮತ್ತು ಈಗಿನಂತೆ ಫೋನ್ ಎಲ್ಲವೂ ಇಲ್ಲದಿದ್ದ ಕಾರಣ, ಮಾರನೇಯ ದಿನ ತಮ್ಮ ಆಫೀಸಿನಿಂದ ಸ್ವಲ್ಪ ಬೇಗನೆ ಕೇಳಿಕೊಂಡು ಸಂಜೆ ನೇರವಾಗಿ ನಮ್ಮ ಮನೆಗೆ ಬಂದು ಉಂಗುರವನ್ನು ಕೊಟ್ಟಿದ್ದರು.
ಉಂಗುರ ಸಿಕ್ಕ ಖುಷಿಯಲ್ಲಿ ಕೂಡಲೇ ಅಮ್ಮಾ ನಮ್ಮೆಲ್ಲರಿಗೂ ಪ್ರಿಯವಾದ ಗಸಗಸೆ ಪಾಯಸ ಮಾಡಿದರು. ಎಲ್ಲರೂ ಚಿಕ್ಕಪ್ಪನೊಂದಿಗೆ ಎರಡು ಮೂರು ಲೋಟ ಗಸಗಸೆ ಪಾಯಸ ಕುಡಿದು ಚಿಕ್ಕಪ್ಪನೊಂದಿಗೆ ಆಟವಾಡಿ ಮಲಗಿ ಮಾರನೇ ದಿನ ಬೆಳಗ್ಗೆ ಏಳುವಷ್ಟರಲ್ಲಾಗಲೇ ನಮ್ಮ ಚಿಕ್ಕಪ್ಪನವರು ಹೊರಟು ಹೋಗಿದ್ದರು. ಒಂದು ಕಡೆ ಚಿಕ್ಕಪ್ಪ ನಮಗೆ ಹೇಳದೇ ಹೋಗಿದ್ದು ಬೇಜಾರಾದರೂ ಕಳೆದು ಹೋದ ಉಂಗುರ ಪುನಃ ಸಿಕ್ಕಿತಲ್ಲಾ ಎಂಬ ಖುಷಿ ಇತ್ತು. ತಾನೊಂದು ಬಗೆದರೆ, ದೈವವೊಂದು ಬಗೆದೀತು ಎನ್ನುವಂತೆ ಅಂದು ಸಿಕ್ಕಿದ ಉಂಗುರ ಮುಂದೊಂದು ದಿನ ಮತ್ತೊಂದು ರೀತಿಯಲ್ಲಿ ಶಾಶ್ವತವಾಗಿ ಕಳೆದು ಹೋದ ಪ್ರಸಂಗವನ್ನು ಮುಂದೊಂದು ದಿನ ತಿಳಿಸುತ್ತೇನೆ. ಅಲ್ಲಿಯವರೆಗೂ ನೀವು ಕಷ್ಟ ಪಟ್ಟು ಸಂಪಾದಿಸಿದ ಇಲ್ಲವೇ ನಿಮ್ಮ ಇಷ್ಟಪಟ್ಟವರು ಕೊಟ್ಟ ಆಭರಣಗಳ ಕಡೆ ಸ್ವಲ್ಪ ನಿಗಾ ವಹಿಸಿ ಆಯ್ತಾ?
ಏನಂತೀರೀ?
ನಿಮ್ಮವನೇ ಉಮಾಸುತ