ಈ ಬಾರಿ ಹುಣ್ಣಿಮೆ ಭಾನುವಾರ ಮತ್ತು ಸೋಮವಾರ ಬಂದಿದ್ದ ಕಾರಣ ಬಹುತೇಕ ಭಾರತೀಯರು ಎರಡೂ ದಿನ ಹೋಳಿ ಹಬ್ಬದ ಆಚರಣೆಯಲ್ಲಿದ್ದ ಕಾರಣವೋ ಅಥವಾ ಇಂಗ್ಲೇಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕಷ್ಟ ಪಟ್ಟು ಗೆದ್ದದ್ದರ ಸಂಭ್ರಮದಲ್ಲಿ ಮಾರ್ಚ್ 29, 2004 ರಂದು ಅಂದರೆ ಸರಿಯಾಗಿ 17 ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡದ ಸ್ಪೋಟಕ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಪಾಕಿಸ್ತಾನದ ಮುಲ್ತಾನಿನಲ್ಲಿ ಸುಲ್ತಾನನಾಗಿ ಮೆರೆದು ಭಾರತದ ಪರ ಚೊಚ್ಚಲು ತ್ರಿಶತಕವನ್ನು ಬಾರಿಸಿ, ಪಾಕೀಸ್ಥಾನಿಗಳಿಗೆ ಅವರ ತವರಿನಲ್ಲಿಯೇ ಸೋಲಿನ ರುಚಿ ತೋರಿಸಿದ ನೆನಪಿಗೆ ಮಾಡಿಕೊಳ್ಳದೇ ಹೋದದ್ದು ನಿಜಕ್ಕೂ ವಿಷಾಧನೀಯವೇ ಸರಿ.
ಹೇಳೀ ಕೇಳೀ ಭಾರತ ಮತ್ತು ಪಾಕೀಸ್ಥಾನದ ಸಾಂಪ್ರದಾಯಿಕ ಎದುರಾಳಿಗಳು. ಈ ಎರಡೂ ತಂಡಗಳ ನಡುವಿನ ಯಾವುದೇ ಆಟದ ಪಂದ್ಯವಿರಲಿ ಅದೊಂದು ರೀತಿ ಯುದ್ಧದ ರೀತಿಯಲ್ಲಿಯೇ ಮಾರ್ಪಾಟಾಗಿರುತ್ತದೆ. ಕೇವಲ ಆ ಆಟದಲ್ಲಿ ಆಡುವವರಷ್ಟೇ ಅಲ್ಲದೇ ನೇರವಾಗಿ ಪಂದ್ಯವನ್ನು ವೀಕ್ಷಿಸುವವರ ಮತ್ತು ಪ್ರಪಂಚಾದ್ಯಂತ ಟಿವಿ ಮುಂದೆ ಕುಳಿತು ವೀಕ್ಷೀಸುವವರನ್ನು ಜಾಗೃತಗೊಳಿಸಿ ಹೃದಯಬಡಿತವನ್ನು ಹೆಚ್ಚು ಮಾಡಿ ಬಿಡುತ್ತದೆ.
2004ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಭಾರತ ತಂಡ ಪಾಕಿಸ್ಥಾನಕ್ಕೆ ಪ್ರವಾಸ ಕೈಗೊಂಡು Mar 28 – Apr 1 ರ ವರಗೆ ಮುಲ್ತಾನಿನಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ಆಕಾಶ್ ಚೋಪ್ರಾ ಮತ್ತು ಸೆಹ್ವಾಗ್ ಆರಂಭಿಕ ಆಟಗಾರಾಗಿ ಮೈದಾನಕ್ಕೆ ಇಳಿಯುತ್ತಾರೆ. ಒಂದು ಕಡೆ ಬಂಡೆಯಂತೆ ಆಕಾಶ್ ಚೋಪ್ರಾ ನಿಧಾನ ಗತಿಯಲ್ಲಿ ಎಚ್ಚರಿಕೆಯಿಂದ ಆಡುತ್ತಿದ್ದರೆ ಮತ್ತೊಂದು ಕಡೆ ಸೆಹ್ವಾಗ್ ಎಂದಿನಂತೆ ಏಕದಿನ ಮಾದರಿಯಲ್ಲಿ ವಿರೋಚಿತವಾಗಿ ತಮ್ಮ ಬ್ಯಾಟ್ ಬೀಸಲಾರಂಭಿಸಿ ಮಧ್ಯಾನ ಊಟದ ವೇಳೆಗಾಗಲೇ ಶತಕದ ಸಮೀಪಕ್ಕೆ ಬಂದಿರುತ್ತಾರೆ. ತಂಡದ ಮೊತ್ತ 160 ಆಗಿದ್ದಾಗ 42 ರನ್ ಗಳಿಸಿದ್ದ ಆಕಾಶ್ ಚೋಪ್ರಾ ಔಟಾಗುತ್ತಾರೆ. ನಂತರ ಬಂದ ನಾಯಕ ರಾಹುಲ್ ದ್ರಾವಿಡ್ ತಂಡದ ಮೊತ್ತ 173 ಅಗಿರುವಾಗ ಕೇವಲ 6 ರನ್ ಗಳಿಸಿ ಔಟಾದಾಗ ಇದ್ದಕ್ಕಿದ್ದಂತೆಯೇ ಭಾರತ ತೀವ್ರ ಒತ್ತಡಕ್ಕೆ ಸಿಲುಕುತ್ತದೆ. ಆಗ ಮೈದಾನಕ್ಕೆ ಇಳಿದ ಸಚಿನ್ ತೆಂಡೂಲ್ಕರ್ ಎಚ್ಚರಿಕೆಯಿಂದ ಒಂದು ತುದಿಯಲ್ಲಿ ಆಡುತ್ತಾ ಹೋದರೆ, ವೀರೇಂದ್ರ ಸೆಹ್ವಾಗ್ ಮಾತ್ರ ತಮ್ಮ ಬಿರುಸಿನ ಆಟ ಮುಂದುವೆರೆಸಿ ನೋಡ ನೋಡುತ್ತಿದ್ದಂತೆಯೇ ದ್ವಿಶತಕ ದಾಟಿ ಮೊದಲ ದಿನದ ಅಂತ್ಯಕ್ಕೆ ಅಜೇಯ 228 ರನ್ ಸಿಡಿಸಿ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಳ್ಳುತ್ತಾರೆ.
ನೆನ್ನೆಗೆ ಸರಿಯಾಗಿ 17 ವರ್ಷಗಳ ಹಿಂದೆ, ಮಾರ್ಚ್ 29, 2004 ರಂದು ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಸೆಹ್ವಾಗ್ ಅಂದು ಆಡುತ್ತಿದ ಪರಿಯನ್ನು ನೋಡಿ ಖಂಡಿತವಾಗಿಯೂ ಈ ಬಾರಿ ಭಾರತದ ಪರ ಒಂದು ತ್ರಿಶತಕ ಗಳಿಸಬಹುದು ಎಂಬ ಆಸೆಯನ್ನು ಮೂಡಿಸಿದ ಕಾರಣ ಆ ದಿನ ಎಲ್ಲರೂ ಕಣ್ಣು ಟಿವಿಯ ಪರದೆಯತ್ತ ಇರುತ್ತದೆ. ಕೋಟ್ಯಾಂತರ ಭಾರತೀಯರ ಆಸೆಯನ್ನು ಹುಸಿಗೊಳಿಸದೇ, ಪಾಕ್ ತಂಡದ ಅಷ್ಟೂ ಬೋಲರ್ಗಳನ್ನು ಲೀಲಾಜಾಲವಾಗಿ ಎದುರಿಸಿ ಅವರ ಪ್ರತಿಯೂಂದು ಚೆಂಡುಗಳನ್ನೂ ಮೈದಾನದ ಮೂಲೆ ಮೂಲೆಗೂ ಅಟ್ಟಿ ತಮ್ಮ ವೈಯಕ್ತಿಕ ಮೊತ್ತ 294 ಆಗಿರುವಾಗ ಮತ್ತೊಂದು ತುದಿಯಲ್ಲಿದ್ದ ಸಚಿನ್ ತೆಂಡೂಲ್ಕರ್ ಸೆಹ್ವಾಗ್ ಬಳಿ ಬಂದು ವೀರೂ, 300ರ ಗಡಿಯಲ್ಲಿ ಇದ್ದೀಯಾ. ಸ್ವಲ್ಪ ನಿಂತು ನೋಡಿ ಕೊಂಡು ಆಡು. ಸುಮ್ಮನೆ ಹುಚ್ಚಾ ಪಟ್ಟೆಯಾಗಿ ಸಿಕ್ಸರ್ ಬಾರಿಸಲು ಹೋಗಬೇಡ ಎಂಬ ಕಿವಿಮಾತನ್ನು ಹೇಳುತ್ತಾರೆ. ತಮ್ಮ ಪಾಡಿಗೆ ಸೀಟಿ ಹೊಡೆದುಕೊಂಡು ಆಟವಾಡುತ್ತಿದ್ದ ಸೆಹ್ವಾಗ್ ಹೂಂ ಪಾಜೀ.. ಎಂದು ತಲೆಯಾಡಿಸಿ ಎಂದಿನಂತ ತನ್ಮ ಬ್ಯಾಟ್ ಅನ್ನು ಒಮ್ಮೆ ತಿರುಗಿಸಿ ಸಕ್ಲೇನ್ ಮುಷ್ತಾಕ್ ಚೆಂಡನ್ನು ಎದುರಿಸಲು ಸಿದ್ಧವಾಗುತ್ತಾರೆ. ಪಾಕ್ ತಂಡದ ಪ್ರಮುಖ ಸ್ಪಿನ್ನರ್ ಸಕ್ಲೇನ್ ಎಸೆತವನ್ನು ಭರ್ಜರಿಯಾಗಿ ಸಿಕ್ಸರ್ ಬಾರಿಸುವ ಮೂಲಕ ಸೆಹ್ವಾಗ್ ತಮ್ಮ ಮತ್ತು ಭಾರತದ ಪರ ಚೊಚ್ಚಲ 300 ರನ್ ಪೂರೈಸುತ್ತಿದ್ದಂತೆಯೇ ಟಿವಿ ಮುಂದೆ ಕುಳಿತು ಆನಂದಿಸುತ್ತಿದ್ದ ಕೋಟ್ಯಾಂತರ ಮಂದಿಯ ಆನಂದ ಅವರ್ಣನೀಯವಾದರೇ, ಯಾರೇ ಕೂಗಾಡಲೀ ಊರೇ ಹೋರಾಡಲಿ ನಿನ್ನ ನೆಮ್ಮದಿಗೆ ಭಂಗವಿಲ್ಲ ಎನ್ನುವ ರಾಜಕುಮಾರರ ಸಂಪತ್ತಿಗೆ ಸವಾಲಿನ ಹಾಡಿನಂತೆ ವೀರೇಂದ್ರ ಸೆಹ್ವಾಗ್ ಆನೆ ನಡೆದದ್ದೇ ದಾರಿ ಎನ್ನುವಂತೆ ತನ್ನ ನೈಜ ಆಟವನ್ನು ಆಡಿಯೇ ತೀರುತ್ತಾನೆ ಎಂದು ತೆಂಡೂಲ್ಕರ್ ಮನಸ್ಸಿನಲ್ಲಿ ಅಂದುಕೊಂಡರಂತೆ.
ಈ ಮೂಲಕ ಕೇವಲ 364 ಎಸೆತಗಳನ್ನು ಎದುರಿಸಿ ಭಾರತದ ಪರ ಮೊದಲ ತ್ರಿಶತಕ ಸಿಡಿಸಿದ ಮೊದಲ ಆಟಗಾರ ಎನಿಸಿಕೊಂಡ ವೀರೂ ಅಂತಿಮವಾಗಿ ಪಾಕ್ ವೇಗಿ ಮಹಮದ್ ಸಮಿ ಬೌಲಿಂಗ್ ನಲ್ಲಿ ಸೆಹ್ವಾಗ್ ತೌಫಿಕ್ ಉಮರ್ ಗೆ ಕ್ಯಾಚ್ ನೀಡಿ ಔಟ್ ಆಗುವ ಮುನ್ನಾ ವೀರೂ 531 ನಿಮಿಷಗಳ ಕಾಲ ಆಟವಾಡಿ, 375 ಎಸೆತಗಳನ್ನು ಎದುರಿಸಿ, 39 ಬೌಂಡರಿ ಮತ್ತು 6 ಸಿಕ್ಸರ್ಗಳ ಮೂಲಕ 309 ರನ್ಗಳನ್ನು ಸಿಡಿಸಿ ಚೊಚ್ಚಲು ಟ್ರಿಪಲ್ ಟೆಸ್ಟ್ ಶತಕವನ್ನು ಗಳಿಸಿದರು.
ಸೆಹ್ವಾಗ್ ಅವರ ನಿರ್ಗಮನದ ನಂತರ, 348 ಎಸೆತಗಳಲ್ಲಿ 21 ಬೌಂಡರಿ ಬಾರಿಸಿದ ಸಚಿನ್ ತೆಂಡೂಲ್ಕರ್ ತಮ್ಮ 194 ರನ್ ಗಳಿಸಿ ನಿಧಾನ ಗತಿಯಲ್ಲಿ ಆಟವಾಡುತ್ತಿದ್ದದ್ದನು ಗಮನಿಸಿದ ನಾಯಕ ಅವರಿಗೆ ದ್ವಿಶತಕ ಬಾರಿಸಲು ಆಸ್ಚದ ನೀಡದೇ, 675/5 ಗಳಿಸಿದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು ಇಂದಿಗೂ ವಿವಾದಾತ್ಮಕವಾಗಿಯೇ ಉಳಿಯಿತು.
ಎರಡನೇ ದಿನಾಂತ್ಯಕ್ಕೆ ಬ್ಯಾಟಿಂಗ್ ಅರಂಭಿಸಿದ ಪಾಕ್ ತಂಡ ಮೊಹಮ್ಮದ್ ಯೂಸುಫ್ ಶತಕದ ಹೊರತಾಗಿಯೂ, ಇರ್ಫಾನ್ ಪಠಾಣ್ ಮಾರಕ ಬೋಲಿಂಗ್ ಮಾಡಿ ನಾಲ್ಕು ವಿಕೆಟ್ ಗಳಿಸಿದ ಪರಿಣಾಮ ಕೇವಲ 407 ರನ್ನುಗಳಿಗ್ ಔಟಾಗಿ ಫಾಲೋ ಆನ್ ಪಡೆದು ಮತ್ತೇ ಎರಡನೇ ಇನ್ನಿಂಗ್ಸಿನಲ್ಲಿ ಅನಿಲ್ ಕುಂಬ್ಲೇ ಆರು ವಿಕೆಟ್ ಗಳಿಸಿದ ಪರಿಣಾಮ ಕೇವಲ 216 ರನ್ ಗಳಿಸಿ, ಭಾರತದ ವಿರುದ್ಧ ಪಾಕಿಸ್ತಾನವನ್ನು ಇನ್ನಿಂಗ್ಸ್ ಮತ್ತು 52 ರನ್ಗಳಿಂದ ಸೋಲನ್ನು ಅನುಭವಿಸಿತು.
ಅದುವರೆಗೂ ಭಾರತದ ಪರ ಟೆಸ್ಟ್ ಕ್ರಿಕೆಟ್ ಎಂದರೆ ಸಚಿನ್, ಸೌರವ್ ಲಕ್ಷ್ಮಣ್, ದ್ರಾವಿಡ್ ಮತ್ತು ಕುಂಬ್ಲೆ ಎನ್ನುತ್ತಿದ್ದವರು ಈ ಪಂದ್ಯದ ನಂತರ ವೀರೇಂದ್ರ ಸೆಹ್ವಾಗ್ ಕೂಡಾ ಭಾರತದ ಟೆಸ್ಟ್ ಪಂದ್ಯಗಳ ಅವಿಭಾಜ್ಯ ಆಟಗಾರ ಎಂದು ಪರಿಗಣಿಸಲಾರಂಭಿಸಿ ಅಲ್ಲಿಯವರೆಗೂ ನಜಾಫ್ ಘಡದ ಸುಲ್ತಾನ ಎಂಬ ಬಿರುದಾಕಿಂತ ವೀರು ಅಂದಿನಿಂದ ಮುಲ್ತಾನ್ ಕಾ ಸುಲ್ತಾನ್ ಎಂಬ ಪದವಿಯನ್ನು ಅಧಿಕಾರಯುತವಾಗಿ ಪಡೆದದ್ದು ಶ್ಲಾಘನೀಯವೇ ಸರಿ.
ಇದಾದ 4 ವರ್ಷದ ಬಳಿಕ ಮತ್ತೆ ಅದೇ ದಿನ ಚೆನ್ನೈನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ನಲ್ಲಿ 278 ಎಸೆತಗಳಲ್ಲಿ ತ್ರಿಶತಕ ಪೂರೈಸಿ ಅಂತಿಮವಾಗಿ 42 ಭರ್ಜರಿ ಬೌಂಡರಿ ಹಾಗೂ 5 ಸಿಕ್ಸರಗಳ ಸಮೇತ 304 ಎಸೆತಗಳಲ್ಲಿ 319 ರನ್ನುಗಳನ್ನು ಗಳಿಸುವ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ತ್ರಿಶತಕ ಎಂಬ ಹೊಸ ದಾಖಲೆಯನ್ನು ಬರೆದರು.
ಮುಲ್ತಾನಿನಲ್ಲಿ ಅಬ್ಬರದ ತಮ್ಮ ಚೊಚ್ಚಲು ತ್ರಿಶತಕ ಸಿಡಿಸುವ ಮೂಲಕ ಭಾರತ ಟೆಸ್ಟ್ ಪಂದ್ಯದ ಅವಿಭಾಜ್ಯ ಅಂಗವಾಗಿ ಹೋದ ವೀರೂ ಯಾರೋ ಯಾರೋ ಗೀಚೀ ಹೋದಾ ಹಾಳೂ ಹಣೆಯ ಬರಹ ಎಂಬ ಸಿನಿಮಾ ಹಾಡಿನಂತೆ, ಪಾಕಿಸ್ತಾನ ತಂಡದ ಪ್ರಮುಖ ಬೌಲರ್ ಒಬ್ಬರ ಕೆರಿಯರ್ ಬಹುತೇಕ ಅಂತ್ಯಕ್ಕೆ ಕಾರಣೀಭೂತರಾಗಿ ಹೋದದ್ದು ವಿಪರ್ಯಾಸವೇ ಸರಿ.
ವೇಗಿಗಳಾದ ಶೋಯೆಬ್ ಅಖ್ತರ್, ಮೊಹಮ್ಮದ್ ಶಮಿ ಅಬ್ದುಲ್ ರಝಾಕ್ ಆಫ್ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಮುಂತಾದ ಬೋಲಿಂಗ್ ದಿಗ್ಗಜರು ಕೂಡಾ ವೀರೂ ಆರ್ಭಟಕ್ಕೆ ಅಕ್ಷರಶಃ ತತ್ತರಿಸಿ ಹೋಗಿದ್ದರು. ಅದರಲ್ಲೂ ಪಾಕಿಸ್ತಾನದ ಪ್ರಮುಖ ಬೋಲರ್ ಸಕ್ಲೇನ್ ಮುಷ್ತಾಕ್ 43 ಓವರ್ ಬೋಲಿಂಗ್ ಮಾಡಿ 204 ರನ್ನುಗಳಿಗೆ ಕೇವಲ 1 ವಿಕೆಟ್ ಪಡೆದಿದ್ದದ್ದು ಆಫ್-ಸ್ಪಿನ್ನರ್ನ ಟೆಸ್ಟ್ ಕೆರಿಯರ್ ಅಂತ್ಯಕ್ಕೆ ಕಾರಣವಾಯಿತು. ಈ ಪಂದ್ಯದ ಬಳಿಕ ಸಕ್ಲೇನ್ ಅವರನ್ನು ತಂಡವನ್ನು ಕೈ ಬಿಟ್ಟು ಮತ್ತೊಬ್ಬ ಉದಯೋನ್ಮುಖ ಹಿಂದೂ ಆಟಗಾರ ದಾನೇಶ್ ಕನೇರಿಯಾ ಅವರರನ್ನು ಪಾಕ್ ತಂಡ ಕಣಕ್ಕಿಳಿಸಿತು. ಆ ನಂತರ ಸಕ್ಲೇನ್ ಮುಷ್ತಾಕ್ ಗೆ ಅವಕಾಶಗಳು ಸಿಗದೇ ಇದೇ ಪಂದ್ಯ ಅವರ ಕೊನೆಯ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವಾಗಿ ಹೋಗಿದ್ದು ನಿಜಕ್ಕೂ ದುಃಖಕರವಾದ ಸಂಗತಿ. ಪಾಕ್ ತಂಡದಿಂದ ಕೈ ಬಿಟ್ಟ ನಂತರ ದೇಶವನ್ನೇ ತೊರೆದು ತನ್ನ ಹೆಂಡತಿಯ ಸಹಾಯದಿಂದ ಬ್ರಿಟಿಷ್ ಪೌರತ್ವವನ್ನು ಪಡೆದು ಇಂಗ್ಲೇಂಡ್ ತಂಡ ಬೋಲಿಂಗ್ ತರಭೇತಿದಾರಾಗಿದ್ದು ಈಗ ಇತಿಹಾಸ.
ಕೈಯ್ಯಲ್ಲಿ ಬ್ಯಾಟ್ ಇರುವುದೇ ಚೆಂಡನ್ನು ಹೊಡೆಯುವುದಕ್ಕಾಗಿ ಎಂದು ಯಾವುದೇ ಬೋಲರ್ಗಳ ಮುಖಾ ಮೂತಿ ನೋಡದೇ ಬೌಂಡರಿ ಮತ್ತು ಸಿಕ್ಸರ್ಗಳಿಗೆ ನಿರ್ಭಯವಾಗಿ ಅಟ್ಟುತ್ತಿದ್ದ ವೀರೇಂದ್ರ ಸೆಹ್ವಾಗ್ ಅವರ ವಿರೋಚಿತ ಆಟ ಆಚಂದ್ರಾರ್ಕವಾಗಿ ಭಾರತೀಯರ ಹೃದಯದಲ್ಲಿ ಶಾಶ್ವತವಾಗಿ ಇರುತ್ತದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ