ನಾನು ಚಿಕ್ಕವನಿದ್ದಾಗ ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ |
ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮ್ ಇದಂ ಶರೀರಮ್ || ಎಂಬ ಸುಭಾಷಿತವನ್ನು ಸಂಘದ ಶಾಖೆಯಲ್ಲಿ ಕಲಿಸಿಕೊಟ್ಟಿದ್ದರು. ಪರೋಪಕಾರಕ್ಕಾಗಿ ಮರಗಳು ಹಣ್ಣುಕೊಡುತ್ತವೆ, ನದಿಗಳು ಹರಿಯುತ್ತಾ ನೀರನ್ನು ಕೊಡುವುದೂ ಬೇರೆಯವರ ಉಪಯೋಗಕ್ಕಾಗಿ, ಹಸುಗಳು ಹಾಲನ್ನು ಕೊಡುವುದೂ ಸಹ ಬೇರೆಯವರಿಗಾಗಿಯೇ ಆದೇ ರೀತಿ ನಮ್ಮ ದೇಹ ಇರುವುದೂ ಸಹ ಬೇರೆಯವರಿಗೆ ಉಪಕಾರ ಮಾಡುವುದಕ್ಕಾಗಿಯೇ ಎನ್ನುವ ಅರ್ಥವಿರುವ ಆ ಶ್ಲೋಕಕ್ಕೆ ಅನ್ವರ್ಥವಾಗಿಯೇ ತಮ್ಮ ಇಡೀ ಜೀವಮಾನವನ್ನು ಸವೆಸಿದ ಹಿರಿಯ ಜೀವಿಯೊಬ್ಬರ ಪರಿಚಯ ಇದೋ ನಿಮಗಾಗಿ.
ನನ್ನ ಪ್ರಾಣ ಸ್ನೇಹಿತ ಹರಿಯವರ ದೊಡ್ಡಮ್ಮನ ಯಜಮಾನರು ಅರ್ಥಾತ್ ನನ್ನ ಕುಚಿಕು ಗೆಳೆಯ ಹರಿಯವರ ದೊಡ್ಡಪ್ಪನವರಾಗಿದ್ದ ಶ್ರೀ ಸತ್ಯನಾರಾಯಣ ರಾವ್ ಅತ್ಯಂತ ಅಜಾನುಬಾಹು ಮತ್ತು ಸುರದ್ರೂಪಿಯೂ ಹೌದು. ಸದಾಕಾಲವೂ ನಗುವನ್ನೇ ಹೊತ್ತಿರುತ್ತಿದ್ದ ಅವರ ಮುಖಾರವಿಂದದಲ್ಲಿ ಎದ್ದು ಕಾಣುತ್ತಿದ್ದದ್ದೇ ಅವರ ಒಂದೆಳೆಯ ಕರೀ ನಾಮ. ಅವರನ್ನು ಒಂದು ಕ್ಷಣ ನೋಡಿದ ತಕ್ಷಣವೇ ಮತ್ತೊಮ್ಮೆ ಅವರನ್ನು ನೋಡಬೇಕೆನಿಸುವ ಮತ್ತು ನಮಗೇ ಅರಿವಿಲ್ಲದಂತೆ ಕೈ ಎತ್ತಿ ಮುಗಿಯಬೇಕೆನಿಸುವಂತಹ ಕ್ಷಾತ್ರತೇಜದವರು ಎಂದರೂ ಅತಿಶಯೋಕ್ತಿಯೇನಲ್ಲ. ಮುಖದಲ್ಲಿ ಸದಾಕಾಲವೂ ಮಂದಹಾಸ ಬೀರುತ್ತಾ, ಗಡಿಯಾರ ಕಟ್ಟಿದ ಬಲಗೈ ಎತ್ತಿ ನಮಸ್ಕಾರ ಹೇಳುತ್ತಿದ್ದ ಪರಿ ಸದಾಕಾಲವೂ ಕಣ್ಣ ಮುಂದೆಯೇ ಬರುತ್ತದೆ.. ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ತಾಳ್ಮೆಗೆಡದೆ ಸಮಚಿತ್ತತೆ ಇಂದ ವ್ಯವಹರಿಸುತ್ತಿದ್ದರು. ಅವರು ಕೋಪಗೊಂಡಿದ್ದೇ ನನ್ನ ಅನುಭವಕ್ಕೆ ಬಂದಿರಲಿಲ್ಲ
ಎಂಬತ್ತರ ದಶಕದಲ್ಲಿ ನನ್ನ ಗೆಳೆಯನ ಮೂಲಕ ಪರಿಚಯವಾದ ಸತ್ಯನಾರಾಯಣ ರಾವ್ ನಂತರ ದಿನಗಳಲ್ಲಿ ಅವರೊಂದಿಗೆ ಅತ್ಮೀಯತನ ಹೆಚ್ಚುತ್ತಾ ಹೋಯಿತು. ತಮ್ಮ ನಾದಿನಿ ಮಗನನ್ನು ಪ್ರೀತಿಸುವಷ್ಟೇ ನನ್ನನ್ನೂ ಇಷ್ಟಪಡುತ್ತಿದ್ದರು.
ಮೂಲತಃ ಗೌರೀಬಿದನೂರಿನ ಕಡೆಯವರಾದ ಶ್ರೀಯುತರು, ತಮ್ಮ ಊರಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಕೆಲಕಾಲ ಪ್ರಾಥಮಿಕ ಶಾಲೆಯ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡು ಕೈವಾರದಲ್ಲಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿ ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ವರ್ಗಾವಣೆಯಾದ ಕಾರಣ ತಮ್ಮ ವಾಸ್ತವ್ಯವನ್ನು ಬೆಂಗಳೂರಿಗೆ ಬದಲಾಯಿಸುಕೊಂಡರು. ಮೂರ್ನಾಲ್ಕು ವರ್ಷ ಬಳ್ಳಾರಿಯಲ್ಲಿ ಸೇವೆ ಸಲ್ಲಿಸಿದ ನಂತರ ಅನೇಕ ವರ್ಷಗಳ ಕಾಲ ವಿಕ್ಟೋರಿಯಾ ಆಸ್ಪತ್ರೆಯ ಕಛೇರಿಯಲ್ಲಿ ಮಾಡುತ್ತಾ, ನಿವೃತ್ತರಾಗುವ ವೇಳೆಗೆ ಅದೇ ಇಲಾಖೆಯಲ್ಲಿ ಗೆಝೆಟೆಡ್ ಆಫೀಸರ್ ಆಗುವಷ್ಟರ ಮಟ್ಟಿಗೆ ಬೆಳೆದಿದ್ದರು. ಗಂಡ ಮತ್ತು ಹೆಂಡತಿ ಆರತಿಗೊಬ್ಬಳು ಮಗಳು ಕೀರ್ತಿಗೊಬ್ಬ ಮಗ, ಹೀಗೆ ನಾವಿಬ್ಬರು ನಮಗಿಬ್ಬರು ಎನ್ನುವ ಸರಳ ಸುಂದರವಾದ ಸಂಸಾರ.
ಸರ್ಕಾರೀ ಕೆಲಸದಲ್ಲಿ ಇದ್ದರೂ, ಯಾವುದೇ ರೀತಿಯ ಎಂಜಿಲು ಕಾಸಿಗೆ ಕೈ ಒಡ್ಡದೇ ಬಹಳ ಕರ್ಮನುಷ್ಠಾನುಸಾರವಾಗಿ ಸದಾ ಕಾಲವೂ ಗೋವಿಂದ, ಶ್ರೀ ಹರಿ ಎಂದು ಭಗವಂತನ ನಾಮ ಸ್ಮರಣೆ ಮಾಡುತ್ತಿದ್ದವರು. . ಅವರ ಸರಳತೆ ಮತ್ತು ಪ್ರಾಮಾಣಿಕತೆಗೆ ಸಾಕ್ಷಿ ಎನ್ನುವಂತಹ ಈ ಉದಾರಣೆಯನ್ನು ಹೇಳಿದಿದ್ದರೆ ಅವರ ವ್ಯಕ್ತಿತ್ವದ ಪರಿಚಯವೇ ಆಗುವುದಿಲ್ಲ. ಕೆಲಸಕ್ಕೆ ಸೇರಿದ ಮೊದಲ ದಿನದಿಂದಲೂ ಗೆಝೆಟೆಡ್ ಆಫೀಸರ್ ಆಗಿ ನಿವೃತ್ತಿ ಹೊಂದುವವರೆಗೂ ಅವರು ಕಛೇರಿಗೆ ಹೋಗುತ್ತಿದ್ದದ್ದು ಸೈಕಲ್ಲಿನಲ್ಲಿಯೇ. ಇದಕ್ಕಿಂತಲೂ ಆಶ್ಚರ್ಯದ ವಿಷವೇನೆಂದರೆ ಅವರ ಕಛೇರಿಯಲ್ಲಿ ಗ್ರೂಪ್-ಡಿ ಆಗಿ ಕೆಲಸಮಾಡುತ್ತಿದ್ದವರು ಕಾರಿನಲ್ಲಿ ಕಛೇರಿಗೆ ಬರುತ್ತಿದ್ದರು. ಅದೆಷ್ಟೋ ಬಾರಿ ಬನ್ನಿ ಸ್ವಾಮೀ ನಾನೇ ಮನೆಗೆ ಬಿಡ್ತೀನಿ ಎಂದರೂ, ಛಳಿ, ಗುಡುಗು. ಮಿಂಚು, ಮಳೆ ಯಾವುದನ್ನೂ ಲೆಕ್ಕಿಸದೇ ಕಛೇರಿಗೆ ಅನುದಿನವೂ ಸೈಕಲ್ಲಿನಲ್ಲಿಯೇ ಹೋಗಿಬರುತ್ತಿದ್ದರು. ಎಂತಹದ್ದೇ ಅತ್ಯಾಧುನಿಕ ಐಶಾರಾಮ್ಯದ ವಾಹನಗಳನ್ನು ಖರೀದಿಸುವ ಶಕ್ತಿಯಿದ್ದರೂ ಕಡೆಯ ವರೆಗೂ ಸಾರ್ವಜನಿಕ ವಾಹನಗಳಲ್ಲಿಯೇ ಪ್ರಯಾಣಿಸುತ್ತಿದ್ದ ಸರಳ ಜೀವಿ.
ಅದೇ ರೀತಿಯಲ್ಲಿ ಎಂತಹ ಸನ್ನಿವೇಶಗಳು ಬಂದರೂ ತಮ್ಮ ತ್ರಿಕಾಲ ಸಂಧ್ಯಾವಂದೆನೆ ಮತ್ತು ಪೂಜೆ ಪುನಸ್ಕಾರಗಳನ್ನು ನಿಲ್ಲಿಸಿದವರಲ್ಲಾ. ಎಂತಹದ್ದೇ ಗಹನವಾದ ವಿಷಯದ ಚರ್ಚೆ ನಡೆಯುತ್ತಿದ್ದರೂ, ಎಂತಹದ್ದೇ ಸಂಭ್ರಮ ವಾತಾವರಣದಲ್ಲಿದ್ದರೂ ಸಮಯ ಬಂದ ಕೂಡಲೇ ಸದ್ದಿಲ್ಲದೇ ಹೋಗಿ ನಿತ್ಯಕರ್ಮಾನುಷ್ಠಾನಗಳನ್ನು ಚಾಚೂ ತಪ್ಪದೇ ಮಾಡುತ್ತಿದ ಕರ್ಮಠರು. ಅವರು ತಮ್ಮಮನೆಯ ಅಗ್ಗಿಷ್ಟಿಕೆಯ ನೈವೇದ್ಯದ ಅಡುಗೆ ಮತ್ತು ಮಠಗಳ ಹೊರತಾಗಿ ಪರಾನ್ನ ಸ್ವೀಕರಿಸಿದ್ದನ್ನು ನೋಡೇ ಇಲ್ಲ. ಬಂಧು ಮಿತ್ರರ ಯಾವುದೇ ಸಭೆ ಸಮಾರಂಭಗಳಿಗೆ ಕರೆದಲ್ಲಿ ಅತ್ಯಂತ ಪ್ರೀತಿಯಿಂದ ಆಗಮಿಸಿ ಪೂಜೆಗಳು ಮತ್ತು ಶಾಸ್ತ್ರಗಳು ಮುಗಿಯುವವರೆಗೂ ಎಲ್ಲರೊಂದಿಗೂ ಅತ್ಯಂತ ಆತ್ಮೀಯವಾಗಿ ಬೆರೆಯುತ್ತಲೇ ಇದ್ದವರು, ಊಟದ ಸಮಯದಲ್ಲಿ ಯಾರ ಕಣ್ಣಿಗೂ ಬೀಳದೇ, ಸದ್ದಿಲ್ಲದೇ ಹತ್ತಿರದ ಮಠಕ್ಕೆ ಹೋಗಿ ಪ್ರಸಾದವನ್ನು ಸ್ವೀಕರಿಸಿ ಸದ್ದಿಲ್ಲದೇ ಮತ್ತೆ ಸಮಾರಂಭಕ್ಕೆ ಬಂದು ಬಿಡುತ್ತಿದ್ದಂತಹ ಸರಳ ಜೀವಿ. ನನ್ನ ಸುಕೃತವೋ ಏನೋ ನನ್ನ ಮದುವೆ ಮತ್ತು ನಮ್ಮ ಮನೆಯ ಗೃಹಪ್ರವೇಶಕ್ಕೆ ಆಗಮಿಸಿ ಆಶೀರ್ವದಿಸಿದ್ದರು.
ಅಲ್ಲಿದೆ ನಮ್ಮನೇ ಇಲ್ಲಿ ಬಂದೆ ಸುಮ್ಮನೇ ಎನ್ನುವ ದಾಸರ ಪದ ಹಾಗೆ ತಮ್ಮ ಜೀವಮಾನಾವಧಿಯಲ್ಲಿ ತಮ್ಮದೇ ಆದ ಸ್ವಂತದ ಗೂಡೊಂದನ್ನು ಕಟ್ಟಿಕೊಳ್ಳುವಷ್ಟು ಆರ್ಥಿಕ ಸಬಲರಾಗಿದ್ದರೂ ಆಸ್ತಿ ಮಾಡುವತ್ತ ಹರಿಸಲೇ ಇಲ್ಲ ತಮ್ಮ ಚಿತ್ತ. ತಮ್ಮ ಬಂಧು-ಮಿತ್ರರು ಮನೆಗಳನ್ನು ಕಟ್ಟುವಾಗ ಮನೆಯವರಿಗೂ ತಿಳಿಯದಂತೆ ಅದಕ್ಕೂ ಹೆಚ್ಚಾಗಿ ಎಂದರೆ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಯ್ಯಿಗೂ ತಿಳಿಯದಂತೆ ಅನೇಕರಿಗೆ ಆರ್ಥಿಕವಾಗಿ ಮತ್ತು ಬಗೆ ಬಗೆಯ ರೂಪದಲ್ಲಿ ಸಹಾಯವನ್ನು ಮಾಡಿದರೂ, ಅವರು ಸ್ವಂತಕ್ಕೊಂದು ಮನೆಯನ್ನು ಕಟ್ಟಿಕೊಳ್ಳುವ ಮನಸ್ಸನ್ನು ಮಾಡಲೇ ಇಲ್ಲ. ತಮ್ಮ ಜೀವಿತಾವಧಿಯ ಬಹಳಷ್ಟು ವರ್ಷ ಬೆಂಗಳೂರಿನ ಚಾಮರಾಜ ಪೇಟೆಯ ಬಾಡಿಗೆ ಮನೆಯೊಂದರಲ್ಲೇ ಕಳೆದು, ನಂತರ ಮಗ ಬೆಳೆದು ದೊಡ್ಡವನಾಗಿ ಸಂಸ್ಕೃತದಲ್ಲಿ ಎಂ.ಎ ಮುಗಿಸಿ ಕೆಲ ಕಾಲ ಶಾಲೆಯೊಂದರಲ್ಲಿ ಸಂಸ್ಕೃತ ಶಿಕ್ಷಕನಾಗಿ ನಂತರ ತನಗೆ ಲೌಕಿಕ ಕೆಲಸ ಮಾಡುವುದರಲ್ಲಿ ಆಸಕ್ತಿ ಇಲ್ಲ. ಅದರ ಬದಲು ಆಧ್ಯಾತ್ಮಿಕವಾಗಿ ಭಗವಂತನ ಸೇವೆಯನ್ನು ಮಾಡಲು ಇಚ್ಚಿಸುತ್ತೇನೆ ಎಂದಾಗ, ಒಂದು ಚೂರು ಪ್ರತಿರೋಧಿಸದೇ ತಮ್ಮ ಮಗನಿಗೆ ಬೆನ್ನುಲುಬಾಗಿ ಆತನ ಬೆಂಬಲಕ್ಕೆ ನಿಂತಿದ್ದು ಈಗಿನ ಕಾಲದಲ್ಲಿ ಸ್ವಲ್ಪ ಅಪರೂಪವೇ ಸರಿ.
ಮಗ, ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೂಜಾ ಕೈಂಕರ್ಯಕ್ಕೆ ಸೇರಿಕೊಂಡಾಗ ಇವರೂ ಸಹಾ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಮಗನ ಜೊತೆಯಲ್ಲಿ ಭಗವಂತನ ಸೇವೆ ಮಾಡತೊಡಗಿದರು. ನೋಡ ನೋಡುತ್ತಿದ್ದಂತೆಯೇ ಮಗ ಪುರಾಣ ಮತ್ತು ಪ್ರವಚನಗಳಲ್ಲಿ ಪ್ರಖ್ಯಾತಿ ಪಡೆದು ದೇಶಾದ್ಯಂತ ವಿವಿಧ ಕಡೆಗಳಲ್ಲಿ ಪ್ರವಚನಕ್ಕೆ ಪಾಠ ಪ್ರವಚನಗಳನ್ನು ಮಾಡುವಷ್ಟು ಆಚಾರ್ಯ ಪಟ್ಟಕ್ಕೆ ಏರಿದ್ದನ್ನು, ಮನಸ್ಸಿನಲ್ಲಿಯೇ ಮಗನ ವಿದ್ಯೆ, ಪಾಂಡಿತ್ಯ ಮತ್ತು ಏಳಿಗೆಗೆ ಸಂತೋಷ ಪಡುತ್ತಾ, ಸದ್ದಿಲ್ಲದೇ ಮಠದಲ್ಲಿ ಭಗವಂತಹ ಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಹೋಗುತ್ತಿದ್ದಂತಹ ಸಾರ್ಥಕ ಜೀವಿ.
ಬಿಡುವಿನ ವೇಳೆಯಲ್ಲಿ ತಮ್ಮ ಮೊಮ್ಮಗಳು ಮತ್ತು ಮೊಮ್ಮಗನ ಆಟ ಪಾಟ, ಲಾಲನೆ ಪೋಷಣೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದದ್ದಲ್ಲೇ ಮನೆಯ ಅಷ್ಟೂ ವ್ಯವಹಾರಗಳನ್ನೂ ಮಗನಿಗೆ ಕಿಂಚಿತ್ತೂ ಗೊತ್ತಾಗದಂತೆ ಸೊಸೆಯೊಂದಿಗೆ ಸದ್ದಿಲ್ಲದೇ ಮಾಡಿ ಮುಗಿಸುತ್ತಿದ್ದರು. ಮನೆಯ ಬಾಡಿಗೆ, ಮಾಸಿಕ ಖರ್ಚುಗಳು, ಮೊಮ್ಮಕ್ಕಳ ವಿದ್ಯಾಭ್ಯಾಸದ ಖರ್ಚು ಎಲ್ಲವನ್ನೂ ತಾವೇ ನಿಭಾಯಿಸುವ ಮೂಲಕ ತಮ್ಮ ಮಗ ಭಗವಂತನ ಸೇವೆಯಲ್ಲಿ ಸದಾಕಾಲವೂ ತಲ್ಲೀನರಾಗಿರುವಂತೆ ಮಾಡಿದ ಹೆಗ್ಗಳಿಗೆ ಶ್ರೀಯುತರದ್ದು ಎನ್ನುವುದು ಗಮನಾರ್ಹವಾಗಿದೆ.
ಪ್ರತೀ ದಿನವೂ ಮಲಗುವ ಮುಂಚೆ ಹೇಳಿಕೊಳ್ಳುವ ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ ! ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ | ದೇಹಿ ಮೇ ಕೃಪಯಾ ಶಂಭೋ ತ್ವಯಿ ಭಕ್ತಿಮಚಂಚಲಾಂ || ಎನ್ನುವ ಶ್ಲೋಕದ ಅರ್ಥದಂತೆ, ಹೇ ಭಗವಂತಾ, ಯಾರಲ್ಲೂ ದೈನೇಸಿಯಾಗಿ ಬೇಡದಂತಹ ಜೀವನ ಮತ್ತು ಆಯಾಸವಿಲ್ಲದಂತಹ ಮರಣವನ್ನು ಕೊಡು ಎಂದು ಪ್ರಾರ್ಥಿಸುವಂತೆ, ಶ್ರೀಯುತರು ತಮ್ಮ ಅಂತಿಮ ಕಾಲದಲ್ಲಿಯೂ ದೈವ ಸ್ಮರಣೆ ಮಾಡುತ್ತಲೇ, 6.4.2021 ಮಂಗಳವಾರ ತಮ್ಮ ಎಲ್ಲಾ ಪೂಜೆ ಪುನಸ್ಕಾರಗಳನ್ನು ಮುಗಿಸಿ ವಿರಮಿಸುತ್ತಿದ್ದಾಗಲೇ, ಹರೇ ಶ್ರೀನಿವಾಸಾ.. ಹರೇ ಶ್ರೀನಿವಾಸಾ.. ಎಂದು ಎರಡು ಬಾರಿ ಹೇಳಿ ಮೂರನೇ ಬಾರಿಗೆ ಶ್ರೀನಿವಾಸನ ಧ್ಯಾನ ಮಾಡುತ್ತಿದ್ದಂತೆಯೇ ಭಗವಂತನಲ್ಲಿ ಲೀನವಾಗಿಹೋದ್ದದ್ದು ನಿಜಕ್ಕೂ ಅಘಾತಕಾರಿಯಾದ ಸಂಗತಿಯೇ ಸರಿ. ಅವರ ಅನನ್ಯ ಸಾಧನೆ, ನಿಷ್ಕಲ್ಮಶ ಪ್ರತಿಫಲಾಪೇಕ್ಷೆಯಿಲ್ಲದೆ ಭಗವಂತನಿಗೆ ಮಾಡಿದ ಸೇವೆ ಮತ್ತು ಭಗವಂತ ಮೇಲಿದ್ದ ಅವರ ಅಪರಿಮಿತ ಭಕ್ತಿ ನಿಜಕ್ಕೂ ಅನುಕರಣೀಯ. ತಮ್ಮ ಜೀವನದುದ್ದಕ್ಕೂ ತಾವು ನಂಬಿದ್ದ ಆಚಾರ ವಿಚಾರಗಳಿಗೆ ಕಿಂಚಿತ್ತೂ ಲೋಪವಾಗದಂತೆ ಅತ್ಯಂತ ಸಂಯಮ ಮತ್ತು ಸರಳತೆಯಿಂದ ಬದುಕನ್ನು ಸಾರ್ಥಕ ಪಡಿಸಿಕೊಂಡ ರೀತಿ ನಿಜಕ್ಕೂ ಹೆಮ್ಮೆ ಮತ್ತು ಗರ್ವ ಪಡುವಂತಹ ವಿಷವಾಗಿದ್ದು ನಮ್ಮಂತಹವರಿಗೆ ದಾರಿ ದೀಪವಾಗಿದೆ ಎಂದರೂ ತಪ್ಪಾಗಲಾರದು.
ಇಂತಹ ಸರಳ, ಸಜ್ಜನ ಸತ್ಯನಾರಾಯಣ ರಾವ್ ಅವರ ಅಕಾಲಿಕ ಮರಣದ ಸುದ್ದಿ ನಿಜಕ್ಕೂ ಆಘಾತಕಾರಿಯಾಗಿದೆ. ಭಗವಂತ ಅವರ ಆತ್ಮಕ್ಕೆ ಸದ್ಗತಿಯನ್ನು ಕೊಡಲಿ ಮತ್ತು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಕೊಡಲಿ ಎಂದು ಪ್ರಾರ್ಥಿಸೋಣ ಮತ್ತು ಇಂತಹ ಸಜ್ಜನರ ಸಂಖ್ಯೆ ಈ ಸಮಾಜದಲ್ಲಿ ಅಗಣಿತವಾಗಲಿ ತಮ್ಮೂಲಕ ಧಾರ್ಮಿಕ ಶ್ರದ್ಧಾ ಭಕ್ತಿಗಳು ನಮ್ಮ ಮುಂದಿನ ಪೀಳಿಗೆಯವರಿಗೂ ಪರಿಚಯವಾಗಲಿ ಎಂದು ಆಶಿಸೋಣ.
ಭಗವಂತಹ ಅನುಗ್ರಹದಿಂದ ಆವರ ಮಕ್ಕಳು ಮತ್ತು ಮೊಮ್ಮಕ್ಕಳ ಕಾಲದಲ್ಲಿಯಾದರೂ ಅವರು ಭಗವಂತನ ಸೇವೆಗೊಂದು ಶಾಶ್ವತವಾದ ಭವನವನ್ನು ಕಟ್ಟಬೇಕೆಂಬ ಬಹುಕಾಲದ ಆಸೆಯ ಎಲ್ಲಾ ಸಮಸ್ಯೆಗಳೂ ಬಗೆ ಹರಿದು, ಈಡೇರುವ ಮೂಲಕ ಅವರಿಗೆ ವೈಕುಂಠದಲ್ಲಿ ಶಾಶ್ವತವಾದ ನೆಲೆಯೊಂದು ಸಿಕ್ಕಿ ಧೃವ ನಕ್ಷತ್ರದಂತೆ ಸದಾಕಾಲವೂ ಕಂಗೊಳಿಸಲಿ.
ಏನಂತೀರೀ?
ನಿಮ್ಮವನೇ ಉಮಾಸುತ
ಶ್ರೀಕಂಠ ಈ ನಿನ್ನ ನುಡಿನಮನಕ್ಕೆ ಅನಂತ ಧನ್ಯವಾದಗಳು. ನಮ್ಮ ದೊಡ್ಡಪ್ಪನವರ ಔದಾರ್ಯ, ಆಧ್ಯಾತ್ಮಿಕ ಸಾಧನೆ ಮತ್ತು ಅವರ ಸಾತ್ವಿಕ ಜೀವನದ ಬಗ್ಗೆ ತಿಳಿಸಿ ನಮ್ಮ ಭಾವನೆಗಳಿಗೆ ಪದರೂಪ ನೀಡಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.
LikeLiked by 1 person
ಅದಾವ ಜನ್ಮದ ಋಣವೋ ಏನೋ ನಮ್ಮ ನಿಮ್ಮ ಕುಟುಂಬದ ಅನಿನಾಭಾವ ಸಂಬಂಧ ಭಗವಂತನ ಅನುಗ್ರಹದಿಂದ ಕೂಡಿ ಬಂದಿದೆ.
ಲೇಖನದಲ್ಲಿಯೇ ತಿಳಿಸಿರುವಂತೆ, ನಿಮ್ಮ ಮನೆಯ ಪ್ರತಿಯೊಬ್ಬರೂ ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸಗಳಿಗೆ ನನ್ನದೊಂದು ಸಣ್ಣ ನುಡಿ ನಮನಗಳು ಅಷ್ಟೇ 🙏🙏
LikeLike
ನಮ್ಮ ಬಾವನವರ ಬಗ್ಗೆ ಬರೆದ ಲೇಖನ ಅತ್ಯದ್ಭುತವಾಗಿದೆ,ಭಗವಂತ ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಆಯುರಾರೊಗ್ಯ ಮತ್ತು ಸಕಲಷ್ಟೈ ಶ್ವರ್ಯಗಳನ್ನು ದಯ ಪಾಲಿಸಬೇಕೆಂದು ನನ್ನ ಪ್ರಾರ್ಥನೆ
ಇತಿ ನಿಮ್ಮ ಹಿತೈಷಿ
LikeLike
ನಮ್ಮ ಬಾವನವರ ಬಗ್ಗೆ ಬರೆದ ಲೇಖನ ಅತ್ಯದ್ಭುತವಾಗಿದೆ,ಭಗವಂತ ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಆಯುರಾರೊಗ್ಯ ಮತ್ತು ಸಕಲಷ್ಟೈ ಶ್ವರ್ಯಗಳನ್ನು ದಯ ಪಾಲಿಸಬೇಕೆಂದು ನನ್ನ ಪ್ರಾರ್ಥನೆ
ಇತಿ ನಿಮ್ಮ ಹಿತೈಷಿ
LikeLiked by 1 person
ಶ್ರೀಮನ್ ನಾರಾಯಣ ಸ್ವಾಮಿಯ ವೈಕುಂತದಲ್ಲಿ ಶಾಶ್ವತ ಶತನಗಳಿಸಿದ ಶ್ರೀಯುತರ ಪಾದಾರವಿಂದ ಗಳಲ್ಲಿ ನನ್ನ ಶಿರಸಾಷ್ಟಾಂಗ ಪ್ರಣಾಮ್ ಗಳು ಹಿರಿಯರ ಆದರ್ಶ ಇಂದಿನ ಪೀಳಿಗೆಗೆ ಅತ್ಯಂತ ಅವಶ್ಯಕ ಅವರಂತೆಯೇ ಬದುಕುತ್ತಿರುವ ನಾನು ಕೂಡ ಯಾವುದೇ ಆಮಿಷಕ್ಕೆ ಒಳಗಾಗದೆ ಇದುವರೆಗೂ ಯಾರಿಗೂ ಯಾವ ಕಕ್ಷಿದಾರರಿಗೂ ಅನ್ಯಾಯ ಎಸಗದೆ ಜೀವಿಸುತ್ತ ಅವರಹಾದಿ ಯಲ್ಲಿ ಮುಂದೆಯೂ ನಡೆಯುತ್ತೇನೆ ಅವರ ಆದರ್ಶ ದಾರಿದೀಪ ವಾಗಲಿ ಅವರಿಗೆ ಖಂಡಿತ ಸದ್ಗತಿ ಪ್ರಾಪ್ತಿಯಾಗಿದೆ ಅವರಿಗಾಗಿ ನನ್ನ ಹೃದಯ ಭಾರವಾಗಿದೆ ಶ್ರೀಗಳ ಪಾದರವಿಂದಾಗಳಿಗೆ ನಮಿಸಿರುತ್ತೇನೆ.
LikeLiked by 1 person
ಅಭಿನಂದನೆಗಳು. ಧರ್ಮೋ ರಕ್ಷತಿ ರಕ್ಷಿತಃ
LikeLike
He is our chikkappa each and every word you have written about his character it true
Smart looking and always smiling .I never saw him raising his voice on any body .
Every summer holiday I use to spend with them for few days . Lovely couple
With lovely children .
Ofcourse we are proud about our brother Purushottam
LikeLike