ಕಳೆದ ವರ್ಷದ ಆರಂಭದಲ್ಲಿ ಚೀನಾದ ವುಹಾನ್ ನಗರದಲ್ಲಿ ಕಾಣಿಸಿ ಕೊಂಡ ಸಾಂಕ್ರಾಮಿಕ ಕೊರಾನಾ ವೈರಾಣು ನೋಡ ನೋಡುತ್ತಿದ್ದಂತೆಯೇ ಇಡೀ ಪ್ರಪಂಚಾದ್ಯಂತ ಆವರಿಸಿ ಅಕ್ಷರಶಃ ಜಗತ್ತನ್ನು ನಿಸ್ತೇಜವನ್ನಾಗಿಸಿದ್ದು ಈಗ ಇತಿಹಾಸ.
ಕಡೆಗೂ ಈ ಮಹಾಮಾರಿಗೆ ಲಸಿಕೆಯನ್ನು ನಮ್ಮ ದೇಶದ ವಿಜ್ಞಾನಿಗಳು ಕಂಡು ಹಿಡಿಯಲು ಸಫಲರಾಗಿ ಅದು ವಿಶ್ವದ ಇತರೇ ರಾಷ್ಘ್ರಗಳ ಲಸಿಕೆಗಿಂತಲೂ ಉತ್ತಮ ಫಲಿತಾಂಶ ತೋರಿದ ಕಾರಣ ಇಂದು ನಮ್ಮ ದೇಶದಿಂದ ಅನೇಕ ರಾಷ್ಟ್ರಗಳಿಗೆ Made in India ಲಸಿಕೆಗಳು ರಫ್ತಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.
ಕಳೆದ ಜನವರಿ 16ರಂದು ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಭಾರತದ ದೇಶವಾಗಿಗಳಿಗೆ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ, ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಕೂರೋನಾ ವಾರಿಯರ್ಸ್ ಅವರುಗಳಿಗೆ ನೀಡಿ ನಂತರ ಫೆಬ್ರವರಿ 2ರಿಂದ ಎರಡನೇ ಹಂತದ ಲಸಿಕೆಯನ್ನೂ ಯಶಸ್ವಿ ಗೊಳಿಸಿದರು, ಮಾರ್ಚ್.1 ರಿಂದ ದೇಶದ 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ತುರ್ತುಆನಾರೋಗ್ಯ ಪೀಡಿತರಿಗೆ ಲಸಿಕೆ ನೀಡಲು ಆರಂಭಿಸಿದರು. ಈಗ ಏಪ್ರಿಲ್ 1 ರಿಂದ ದೇಶದ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊವಿಡ್-19 ಲಸಿಕೆಗೆ ಚಾಲನೆ ನೀಡಿದ್ದಾರೆ.
ಎಲ್ಲೂ ಹೊರಗಡೆ ಹೋಗದೇ ಮನೆಯಲ್ಲಿಯೇ ಅಷ್ಟೋಂದು ಎಚ್ಚರಿಕೆ ವಹಿಸಿದ್ದರೂ Home Delivery ರೀತಿಯಲ್ಲಿ ಕಳೆದ ಅಕ್ಟೋಬರಿನಲ್ಲಿ ನನಗೂ ಸಹಾ ಕೊರೋನಾ ವಕ್ಕರಿಸಿಕೊಂಡು ಒಂದು ವಾರಗಳ ಕಾಲ ಮನೆಯಲ್ಲಿಯೇ ಚಿಕಿತ್ಸೆ ತೆಗೆದುಕೊಂಡು ನಂತರ ಹದಿನೈದು ದಿನಗಳ ಕಾಲ ಹೋಮ್ ಕ್ವಾರಂಟೈನ್ ಇದ್ದು ಗುಣಮುಖರಾದವರಲ್ಲಿ ನಾನೂ ಒಬ್ಬ.
ಕೊರೋನಾ ಚಿಕಿತ್ಸೆ ಸಿಗದಯೇ ಅಥವಾ ಸಿಕ್ಕಿಯೂ ಸಹಾ ಇದುವರೆವಿಗೂ ಪ್ರಪಂಚಾದ್ಯಂತ ಅಧಿಕೃತವಾಗಿ 28 ಲಕ್ಷಕ್ಕಿಂತಲೂ ಅಧಿಕ ಮಂದಿ ಸಾವ್ವನ್ನಪ್ಪಿದ್ದರೆ ಇನ್ನು ಅನಧಿಕೃತವಾಗಿ ಸತ್ತವರ ಸಂಖ್ಯೆ ಎಷ್ಟೋ ಬಲ್ಲವರು ಯಾರು?
ಹಾಗಾಗಿ ಇಂತಹ ಮಹಾಮಾರಿಯ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಈ ಲಸಿಕೆಯು ಸಹಾಯ ಮಾಡುತ್ತದೆ ಎನ್ನುವ ಭರವಸೆಯಲ್ಲಿ ನಾನು ಸಹಾ ಲಸಿಕೆ ಹಾಕಿಸಿಕೊಳ್ಳಲು ನಿರ್ಧರಿಸಿದೆ. ಆರಂಭಿಕ ಹಂತಹ ಜನಸಂದಣಿ ಸ್ವಲ್ಪ ಕಡಿಮೆಯಾಗಲಿ ಎಂದು ಒಂದು ವಾರಗಳ ಕಾಯ್ದು 5ನೇ ತಾರೀಖು, ಈ ಲಿಂಕ್ ಮುಖಾಂತರ https://selfregistration.cowin.gov.in/ COVID 19 vaccination self-registration ಮಾಡಿಕೊಂಡೆ. ಆರೋಗ್ಯ ಸೇತು ಆಪ್ ಮುಖಾಂತರವೂ ಸುಲಭವಾಗಿ ನಮ್ಮ ಹೆಸರು, ವಿಳಾಸ, ಮೊಬೈಲ್ ನಂ. ಮತ್ತು ನಮ್ಮ ಬಡಾವಣೆಯ ಪಿನ್ ಕೋಡ್ ನಂಬರ್ ಕೊಡುತ್ತಿದ್ದಂತೆಯೇ, ನಮ್ಮ ಮನೆಯ ಹತ್ತಿರವಿರುವ ಸರ್ಕಾರಿ ಮತ್ತು ಮಹಾನಗರ ಪಾಲಿಕೆ ಆರೋಗ್ಯ ಕೇಂದ್ರಗಳ ವಿವರವನ್ನು ತೋರಿಸುತ್ತದೆ. ನಮ್ಮ ಅನುಕೂಲಕರವಾದ ದಿನಾಂಕ ಮತ್ತು ಸಮಯನ್ನು ಆಯ್ಕೆ ಮಾಡಿಕೊಂಡ ತಕ್ಷಣವೇ ನೋಂದಾಯಿಸಿಕೊಂಡಿದ್ದಕ್ಕಾಗಿ ಒಂದು SMS ಮೂಲಕ ಧೃಢೀಕರಿಸಲ್ಪಡುತ್ತದೆ.
ಮೊನ್ನೆ 7ನೇ ತಾರೀಖು, ಬುಧವಾರ ಬೆಳಿಗ್ಗೆ ಸರಿಯಾಗಿ 10:30ಕ್ಕೆ ಸಹಕಾರ ನಗರದ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಹೋಗಿ ಅಲ್ಲಿದ್ದ ಜನರನ್ನು ನೋಡಿ ಒಂದು ಕ್ಷಣ ಅರೇ ನಾನೇನೂ ಆಸ್ಪತ್ರೆಗೆ ಬಂದಿದ್ದೇನೋ ಇಲ್ಲವೇ ಯಾವುದಾದರೂ ಸಮಾರಂಭಕ್ಕೆ ಬಂದಿದ್ದೇನೋ ಎನಿಸುವಂತಿತ್ತು ಕಾರಣ ಅಲ್ಲೊಂದು ಶಾಮಿಯಾನ ಅದರ ನೆರಳಲ್ಲಿ ಅಚ್ಚುಕಟ್ಟಾಗಿ ಜನರು ಕುಳಿತ್ತಿದ್ದರು.
ನಾನು ಹೋದ ತಕ್ಶಣ ಟೋಕನ್ ಒಂದನ್ನು ಕೊಟ್ಟು ನಮ್ಮ ಸರದಿಯ ಅಂದಾಜು ಸಮಯವನ್ನು ತಿಳಿಸಿದರು. ಅಲ್ಲೇ ಮರದ ನೆರಳಿನ ಕೆಳಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವಲ್ಪ ಹೊತ್ತು ಕಳೆಯುವಷ್ಟರಲ್ಲಿಯೇ ಅವರು ಹೇಳಿದ್ದ ಸಮಯಕ್ಕಿಂತಲೂ ಮುಂಚೆ ನನ್ನ ಟೋಕನ್ ನಂ. ಬಂದಾಗಿತ್ತು.
ಅಲ್ಲಿ ಕುಳಿತಿದ್ದ ಸ್ವಯಂಸೇವರೊಬ್ಬರ ಬಳಿ ನನಗೆ ಬಂದಿದ್ದ SMS ತೋರಿಸಿದ ತಕ್ಷಣವೇ ಅದನ್ನು ಧೃಡೀಕರಿಸಿ ಕೆಲವೇ ನಿಮಿಷಗಳಲ್ಲಿ ಕೊಂಚವೂ ನೋವಾಗದಂತೆ ಕೋವಿಶೀಲ್ಡ್ ಎಂಬ ಲಸಿಕೆಯನ್ನು ಹಾಕಿಯೇ ಬಿಟ್ಟಿದ್ದರು. ಲಸಿಕೆ ಹಾಕಿಸಿಕೊಳ್ಳುತ್ತಿರುವ ಫೋಟೋವೊಂದನ್ನು ತೆಗೆಯಲು ಅಲ್ಲಿಯೇ ಇದ್ದ ಸಿಬ್ಬಂಧಿಯೊಬ್ಬರನ್ನು ಕೇಳಿಕೊಂಡಾಗ ಅವರೂ ಸಹಾ ನಗು ಮುಖದಿಂದಲೇ ಈ ಫೋಟೋವೊಂದನ್ನು ತೆಗೆದುಕೊಟ್ಟರು.
ಲಸಿಕೆ ಹಾಕಿಸಿಕೊಂಡ ನಂತರ ಅರ್ಧ ಗಂಟೆ ಅಲ್ಲಿಯೇ ಕುಳಿತು ಕೊಳ್ಳಲು ಸೂಚಿಸುವುದಲ್ಲದೇ, ಲಸಿಕೆ ಹಾಕಿಸಿಕೊಂಡವರ ಆರೋಗ್ಯದಲ್ಲಿನ ಏರಿಳಿತದ ಬಗ್ಗೆ ನಿಗಾ ವಹಿಸಲು ಸೂಚಿಸುತ್ತಾರೆ. ಕೊವಿಡ್-19 ಲಸಿಕೆ ಹಾಕಿಸಿಕೊಂಡ ವ್ಯಕ್ತಿಯಲ್ಲಿ ಯಾವುದೇ ರೀತಿಯ ಅಲರ್ಜಿ ಮತ್ತು ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ ಎಂಬುದು ಖಾತ್ರಿಯಾದ ನಂತರವೇ ಅವರನ್ನು ಲಸಿಕಾ ಕೇಂದ್ರದಿಂದ ಹೊರಹೋಗಲು ಅನುವು ಮಾಡಿಕೊಡಲಾಗುತ್ತದೆ.
ಲಸಿಕೆ ಹಾಕಿಸಿಕೊಂಡ ಒಂದೆರಡು ದಿನಗಳಲ್ಲಿ ಜ್ವರ, ಶೀತ ಮತ್ತು ಆಯಾಸದಂತಹ ಕೆಲವು ಅಡ್ಡಪರಿಣಾಮಗಳು ಬಂದರೂ ಅದಕ್ಕೆ ಭಯ ಅಥವಾ ಆತಂಕ ಪಡುವ ಅವಶ್ಯಕತೆ ಇಲ್ಲ. ಇದು ಸಹಜ ಪ್ರಕ್ರಿಯೆ ಎಂದು ತಿಳಿ ಹೇಳುವುದಲ್ಲದೇ, ಮುಂದಿನ 28 ದಿನಗಳಲ್ಲಿ ಮತ್ತೊಮ್ಮೆ ಎರಡನೇ ಲಸಿಕೆಯನ್ನು ಹಾಕಿಸಿಕೊಳ್ಳಲು ತಪ್ಪದೇ ಬರಬೇಕೆಂದು ಆತ್ಮೀಯತೆಯಿಂದ ಬೀಳ್ಕೊಡುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ.
ಅಕಸ್ಮಾತ್ Registration ಮಾಡಿಕೊಳ್ಳದೇ ನೇರವಾಗಿ ಹೋದರೂ ಲಸಿಕೆಯನ್ನು ಹಾಕುತ್ತಾರೆ. ಹಾಗೆ ಮುಂಗಡವಾಗಿ Register ಮಾಡಿಕೊಳ್ಳುವುದರಿಂದ ಲಸಿಕಾ ಕೇಂದ್ರದಲ್ಲಿ ನಮ್ಮ ವಿವರಗಳನ್ನು ಮತ್ತೊಮ್ಮೆ ಕೊಡಬೇಕಾದ ಸಮಯವನ್ನು ಉಳಿಸ ಬಹುದಾಗಿದೆ.
ಲಸಿಕೆ ಹಾಕಿಸಿಕೊಂಡು ಸುರಕ್ಷಿತವಾಗಿ ಮನೆಗೆ ಬಂದ ನಾನು ಅನಗತ್ಯವಾದ ತೊಂದರೆ ತೆಗೆದುಕೊಳ್ಳುವುದು ಬೇಡ ಎಂದು 48 ಗಂಟೆಗಳ ಕಾಲ ಯಾವುದೇ ರೀತಿಯ ದೈಹಿಕ ವ್ಯಾಯಾಮ ಮಾಡದೇ ಆರಾಮಾಗಿ ಕಾಲ ಕಳೆದೆ. ಚುಚ್ಚು ಮದ್ದನ್ನು ಚೆನ್ನಾಗಿ ಕೊಟ್ಟಿದ್ದ ಕಾರಣ ನನ್ನ ಎಡತೋಳಿನಲ್ಲಿ ಯಾವುದೇ ರೀತಿಯ ನೋವು ಕಾಣಿಸದಿದ್ದರೂ ಮೊದಲ ದಿನ ಸ್ವಲ್ಪ ಮೈ ಬೆಚ್ಚಗಿದ್ದು ಸುಮಾರು 98-100 ಡಿಗ್ರಿ ಇತ್ತಾದರೂ ಎರಡನೆಯ ದಿನ ಯಾವುದೇ ರೀತಿಯ ಸಮಸ್ಯೆಯು ಕಾಣಿಸಲಿಲ್ಲ.
ಸರ್ಕಾರದ ವತಿಯಿಂದ ಸದ್ಯಕ್ಕೆ 45 ವರ್ಷಕ್ಕೆ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆಯನ್ನು ಹಾಕುವ ಆಭಿಯಾನ ಜಾರಿಯಲ್ಲಿದ್ದು ಇನ್ನು ಕೆಲವೇ ದಿನಗಳಲ್ಲಿ ಎಲ್ಲಾ ವಯೋಮಾನದವರಿಗೂ ಉಚಿತವಾಗಿ ಲಸಿಕೆಯನ್ನು ಹಾಕಲಾಗುತ್ತದೆ.
ಅಕಸ್ಮಾತ್ ಯಾವುದೇ ವಯೋಮಾನದವರು ತುರ್ತಾಗಿ ಲಸಿಕೆ ಹಾಕಿಸಿಕೊಳ್ಳ ಬೇಕೆಂದು ಇಚ್ಚಿಸಿದಲ್ಲಿ ಎಲ್ಲಾ ನಗರದ ಆಯ್ದ ಖಾಸಗೀ ಆಸ್ಪತ್ರೆಗಳಲ್ಲಿ 250/- ರೂಪಾಯಿಗಳಲ್ಲಿ ಹಾಕಿಸಿಕೊಳ್ಳಬಹುದಾದ ಸೌಲಭ್ಯವನ್ನೂ ಕಲ್ಪಿಸಲಾಗಿದೆ.
ನಮ್ಮಲ್ಲಿ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಎಂಬ ಎರಡು ಮಾದರಿಯ ಕೊರೊನಾ ಲಸಿಕೆಗಳನ್ನು ಬಳಸಲಾಗುತ್ತಿದ್ದು ಎರಡೂ ಸಹಾ ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಸುರಕ್ಷಿತವಾಗಿದೆ. ಈ ಲಸಿಕೆಗಳು ವೈರಸ್ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಸಹಾಯ ಮಾಡುವುದಲ್ಲದೇ, ಬಾಹ್ಯ ರೋಗಾಣುಗಳ ವಿರುದ್ಧ ಹೋರಾಡುತ್ತದೆ. ಇದು ಸುಲಲಿತವಾಗಿ ಆಗಬೇಕೆಂದರೆ ಎಲ್ಲರೂ ತಪ್ಪದೇ ಎರಡೂ ಲಸಿಕೆಗಳನ್ನು ಹಾಕಿಸಿಕೊಳ್ಳಲೇ ಬೇಕಾಗಿದೆ.
ಇನ್ನು ಲಸಿಕೆ ಹಾಕಿಸಿಕೊಂಡ ಸ್ವಲ್ಪ ದಿನಗಳ ನಂತರವೇ ರೋಗನಿರೋಧಕ ಶಕ್ತಿ ನಮ್ಮ ದೇಹದಲ್ಲಿ ವೃದ್ದಿಸುವ ಕಾರಣ ಲಸಿಕೆ ಹಾಕಿಸಿಕೊಂಡ ಕೂಡಲೇ ಕೂರೋನಾದಿಂದ ಸುರಕ್ಷಿತ ಎಂದು ಯಾರೂ ಭಾವಿಸದೇ, ಈಗ ವಹಿಸುತ್ತಿರುವ ಮುಂಜಾಗ್ರತಾ ಕ್ರಮಗಳ್ಳನ್ನು ಮುಂದುವರಿಸಲೇ ಬೇಕಾಗಿದೆ. ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು, ಹೊರಗೆ ಓಡಾಡುವಾಗ ಮೂಗು ಮುಚ್ಚುವಂಟೆ ಸದಾಕಾಲವೂ ಮಾಸ್ಕ್ ಧರಿಸುವುದು, ಕೈಗಳನ್ನು ಆಗಾಗ ತೊಳೆಯುವುದು, ಅನತ್ಯವಾಗಿ ಮುಖ ಮತ್ತು ಮೂಗುಗಳನ್ನು ಮುಟ್ಟಿಕೊಳ್ಳುವುದನ್ನು ತಡೆಗಟ್ಟಬೇಕಾಗಿದೆ.
ವಿಶ್ವದ ಎರಡನೇ ಅತೀ ಹೆಚ್ಚಿನ ಜನಸಂಖ್ಯೆ ಹೊಂದಿರುವ ಮತ್ತು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಮಟ್ಟದ ಈ ಲಸಿಕೆಯ ಅಭಿಯಾನವನ್ನು ನಮ್ಮ ದೇಶದಲ್ಲಿ ಸರ್ಕಾರದ ವತಿಯಿಂದ ಅತ್ಯಂತ ಸುರಕ್ಷಿತವಾಗಿ ಆರಂಭಿಸಲಾಗಿದೆ. ಯಾರೋ ಮೂರನೇ ವ್ಯಕ್ತಿಗಳ ಅನಗತ್ಯ ಮಾತುಗಳಿಗೆ ಕಿವಿಗೊಡದೇ, ಎಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ದೇಶವನ್ನು ಕೂರೋನಾದಿಂದ ಅತೀ ಶೀಘ್ರದಲ್ಲಿಯೇ ಮುಕ್ತವನ್ನಾಗಿಸೋಣ.
ಏನಂತೀರೀ?
ನಿಮ್ಮವನೇ ಉಮಾಸುತ
ಬಹಳ ಒಳ್ಳೆಯ ಮತ್ತು ಉಪಯುಕ್ತವಾದ ಲೇಖನ.
ತುಂಬಾ ಚೆನ್ನಾಗಿ ಬರೆದಿದ್ದೀರಿ.ಸಾಮಾಜಿಕ ಕಳಕಳಿ ಬದ್ಧತೆ ಎದ್ದು ಕಾಣಿಸಿತು.
ಆದರೆ ಯಾರು ಬೇಕಾದರೂ ಹಣ ಕೊಟ್ಟು ಪಡೆಯುವಂತಲ್ಲ.ವಯೋಮಾನದ ನಿರ್ಬಂಧ ವಿದೆ.
LikeLiked by 1 person
ಬಹಳ ಒಳ್ಳೆಯ ಮತ್ತು ಉಪಯುಕ್ತವಾದ ಲೇಖನ.
ತುಂಬಾ ಚೆನ್ನಾಗಿ ಬರೆದಿದ್ದೀರಿ.ಸಾಮಾಜಿಕ ಕಳಕಳಿ ಬದ್ಧತೆ ಎದ್ದು ಕಾಣಿಸಿತು.
LikeLiked by 1 person
ಧನ್ಯೋಸ್ಮಿ. ನಮ್ಮ ನಿಮ್ಮ ಅನುಭವವನ್ನೇ ಬರವಣಿಗೆಯ ರೂಪದಲ್ಲಿ ಎಲ್ಲರೂ ಸುರಕ್ಷಿತವಾಗಿ ಲಸಿಕೆಯ ಅಭಿಯಾನದಲ್ಲಿ ಪಾಲ್ಗೊಳ್ಳಲೆಂದೇ ಈ ಲೇಖನ ಬರೆದದ್ದು
LikeLike
ನನ್ನದು ಇದೇ ಅನುಭವ 🙏😍
LikeLiked by 1 person
ಎಲ್ಲರೂ ಲಸಿಕೆ ತೆಗೆದುಕೊಳ್ಳಬೇಕು. ಲಸಿಕೆ ಹಾಕಿಕೊಂಡ ನಂತರವೂ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಮೊದಲಾದ ಸುರಕ್ಷತಾ ಕ್ರಮಗಳನ್ನು ಸ್ವಲ್ಪ ದಿನ ಖಂಡಿತ ಪಾಲಿಸಲೇಬೇಕು. ನಿಮ್ಮ ಅನುಭವ ಲಸಿಕೆ ಹಾಕಿಸಿಕೊಳ್ಳುವವರಿಗೆ ಪ್ರೋತ್ಸಾಹದಾಯಕವಾಗಿದೆ.
LikeLiked by 1 person
ಸತ್ಯವಾದ ಮಾತು ನಮ್ಮ ಜವಾಬ್ದಾರಿಯಲ್ಲಿ ನಾವಿರಬೇಕು.
LikeLiked by 1 person