ನಾವೆಲ್ಲಾ ಇನ್ನೂ ಶಾಲೆಯಲ್ಲಿ ಓದುತ್ತಿದ್ದಾಗ ಏಪ್ರಿಲ್- 10 ಬಂತೆಂದರೆ ಒಂದು ರೀತಿಯ ಭಯ ಮತ್ತು ಆತಂಕ. ಹಿಂದಿನ ದಿನ ರಾತ್ರಿಯೆಲ್ಲಾ ನಿದ್ದೆಯೇ ಬಾರದೇ ಅಲ್ಲೇ ಹಾಸಿಗೆಯಲ್ಲಿ ಒದ್ದಾಡಿ ಬಿದ್ದಾಡಿ ಅರೇ ಬರೇ ನಿದ್ದೇ ಮಾಡಿ ಬೆಳಗ್ಗೆ ಸೂರ್ಯ ಉದಯಿಸುತ್ತಿದ್ದಂತೆಯೇ, ಬೇಗ ಬೇಗ ಎದ್ದು ಸ್ನಾನ ಸಂಧ್ಯಾವಂದನೆ ಮುಗಿಸಿ ದೇವರ ಸಮಸ್ಕಾರ ಮಾಡುವಾಗ ಎಂದಿನದ್ದಕ್ಕಿಂತಲೂ ಒಂದು ಚೂರು ವಿಶೇಷ ಅಸ್ಥೆಯಿಂದ ಮತ್ತು ಒಂದು ಹೆಚ್ಚಿನ ನಮಸ್ಕಾರ ಮಾಡುತ್ತಾ ದೇವರೇ, ಒಳ್ಳೆದು ಮಾಡಪ್ಪಾ, ಇವತ್ತು ಒಳ್ಳೆಯ ಮಾರ್ಕ್ಸ್ ಬಂದಿರಲಪ್ಪಾ ಅಂತ ಕೇಳ್ಕೊಳ್ಳೊ ದಿವಸ. ಹಾಂ!! ಇಷ್ಟೆಲ್ಲಾ ಪೀಠಿಕೆ ಹಾಕಿದ್ಮೇಲೆ ನೀವೂ ಸಹಾ ನಿಮ್ಮ ಬಾಲ್ಯದ ದಿನಗಳ ಪರೀಕ್ಷೆಯ ಫಲಿತಾಂಶದ ದಿನದ ನೆನಪಿನ ಅಂಗಳಕ್ಕೆ ಜಾರಿ ಹೋಗ್ತಾ ಇದ್ದೀರಿ ಅಲ್ವಾ?
ನಾನು ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಓದುವಾಗ ಓಹೋ ಎಂದು ಹೇಳಿಕೊಳ್ಳುವಷ್ಟಿಲ್ಲದಿದ್ದರೂ ತರಗತಿಯಲ್ಲಿ ಮೊದಲ ಮೂರನೇ ರ್ಯಾಂಕಿನಲ್ಲಿ ಇರುತ್ತಿದ್ದನಾದರೂ ಪರೀಕ್ಷೆಯ ಫಲಿತಾಂಶದ ದಿನ ಒಂದು ರೀತಿಯ ಆತಂಕಕ್ಕೆ ಈಡು ಮಾಡುತ್ತಿತ್ತು. ಮನೆಯಲ್ಲಿ ತಂದೆ ತಾಯಿಯರು ಇಷ್ಟೇ ಅಂಕಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯ ನೇರವಾಗಿ ಮಾಡದೇ ಹೋದರೂ, ಪರೋಕ್ಷವಾಗಿ ಗಣಿತ ಮತ್ತು ವಿಜ್ಣಾನ ವಿಷಯದ ಅಂಕಗಳತ್ತಲೇ ಹರಿಯುತ್ತಿತ್ತು ಅವರ ಚಿತ್ತ. .
ಏಪ್ರಿಲ್ -9ನೇ ತಾರೀಖೇ ಅಮ್ಮಾ ಕೊಬ್ಬರಿ ಮಿಠಾಯಿ ಇಲ್ವೇ 7ಕಪ್ ಸ್ವೀಟ್, ಬಾದುಷಾ ಅಥವಾ ಗಟ್ಟಿಯಾದ ಮೈಸೂರ್ ಪಾಕ್ ತಯಾರಿಸಿ ಡಬ್ಬಿಯಲ್ಲಿ ಹಾಕಿ ಪರೀಕ್ಷೆ ಫಲಿತಾಂಶ ಬರಲಿ ಎಲ್ಲರಿಗೂ ಹಂಚೋಣ ಎಂದು ಸ್ಟೀಲ್ ಡಬ್ಬಿಯಲ್ಲಿ ಹಾಕಿ ಮೇಲೆ ಎತ್ತಿಟ್ಟಿರುತ್ತಿದ್ದರು. ಬಿಇಎಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಅಪ್ಪಾನೂ ಸಹಾ ಅಂದು ದೈಹಿಕವಾಗಿ ಕೆಲಸದ ಜಾಗದಲ್ಲಿದ್ದರೂ ಮಾನಸಿಕವಾಗಿ ನನ್ನ ಫಲಿತಾಂಶದ ಕರೆಗಾಗಿಯೇ ಕಾಯುತ್ತಿದ್ದದ್ದು ನನಗೆ ಗೊತ್ತಿಲ್ಲದ ವಿಷವೇನಾಗಿರಲಿಲ್ಲ. ಅಕಸ್ಮಾತ್ ಗಣಿತದಲ್ಲಿ ಕಡಿಮೆ ಅಂಕ ಬಂದ್ರೇ ಅಪ್ಪ ಅಮ್ಮನಿಗೆ ಹೇಗಪ್ಪಾ ಮುಖ ತೋರಿಸುವುದು ಎನ್ನುವ ಭಯ ಬೇರೆ ಕಾಡುತ್ತಿತ್ತು.
ಸರಿ ಆದದ್ದಾಗಲಿ ಗೋವಿಂದನ ದಯೆ ನಮಗಿರಲಿ ಎಂದು ಬೆಳಿಗ್ಗೆ ದೇವರಿಗೆ ಕೈ ಮುಗಿದು ಎಂದಿನಂತೆ ಅಪ್ಪ ಅಮ್ಮನ ಕಾಲಿಗೆ ನಮಸ್ಕಾರ ಮಾಡಿ ಅವರ ಆಶೀರ್ವಾದ ಪಡೆದುಕೊಂಡು ( ಅಪ್ಪಾ ಅಮ್ಮ ಜೀವಂತ ಇರುವವರೆಗೂ ಪಾಲಿಸಿಕೊಂಡು ಬಂದಿದ್ದ ಪದ್ದತಿ) ಅಮ್ಮಾ ಮಾಡಿದ್ದ ತಿಂಡಿಯನ್ನು ಒಲ್ಲದ ಮನಸ್ಸಿನಿಂದಲೇ ತಿಂದು ಶಾಲೆಗೆ ಹೋರಡುತ್ತಿದ್ದೆ. ದಾರಿಯಲ್ಲಿ ಸಿಗುವ ಸ್ನೇಹಿತರು ನೀನು ಬಿಡು ಮಗಾ ಪಾಸ್ ಆಗಿರ್ತೀಯಾ, ನಮ್ಮ ಕಥೆ ಹೇಳು ಎಂದಾಗ, ಸುಮ್ಮನೆ ದೇಶಾವರಿ ನಗೆ ಬೀರುತ್ತಿದ್ದನಾದರೂ, ಮನಸ್ಸಿನೊಳಗೆ ಎದೆ ಆಗಾಗಾ ಝಲ್ ಎನ್ನುತ್ತಿದ್ದಂದ್ದಂತೂ ಸುಳ್ಳಲ್ಲ.
ಅದೇ ಗುಂಗಿನಲ್ಲಿ ಶಾಲೆಗೆ ಹೋಗಿ ನಮ್ಮ ತರಗತಿಯಲ್ಲಿ ಕುಳಿತುಕೊಂಡ ಸ್ವಲ್ಪ ಹೊತ್ತಿನಲ್ಲಿಯೇ ನಮ್ಮ ವಿಮಲ ಮಿಸ್ ಅಂಕಪಟ್ಟಿಗಳನ್ನು ಹಿಡಿದುಕೊಂಡು ಬರುತ್ತಿರುವುದನ್ನು ನೋಡುತ್ತಿದ್ದರೇ ಎದೆಯ ಬಡಿತ ಇನ್ನೂ ಜೋರಾಗಿಯೇ ಬಡಿಯುತ್ತಿತ್ತು. ಅವರು ತರಗತಿಗೆ ಬಂದ ಕೂಡಲೇ ಎಲ್ಲರೂ ಎದ್ದು ನಿಂತು ಒಟ್ಟಾಗಿ ನಮಸ್ತೇ ಟೀಚರ್.. ಎಂದು ಹೇಳಿದರೆ, ಅದಕ್ಕೆ ಪ್ರತಿಯಾಗಿ ನಮಸ್ತೇ ಮಕ್ಕಳಾ ಎಂದು ಪ್ರತಿವಂದಿಸಿ ಹೂಂ.. ಕೂತ್ಕೊಳ್ಳಿ ಎಂದು ಹೇಳಿ ಅಂಕ ಪಟ್ಟಿಗಳನ್ನು ಹಿಡಿದು, ವಿಮಲ ಫಸ್ಟ್ ರ್ಯಾಂಕ್, ಕೃಷ್ಣಮೂರ್ತಿ ಸೆಕೆಂಡ್ ರ್ಯಾಂಕ್, ಶ್ರೀಕಂಠ ಮೂರನೇ ರ್ಯಾಂಕ್, ಜಯಶ್ರೀ ನಾಲ್ಕನೇ ರ್ಯಾಂಕ್, ಕನಕಮ್ಮಾ ಐದನೇ ರ್ಯಾಂಕ್ ಎಂದು ಮೊದಲ ಹತ್ತು ರ್ಯಾಂಕುಗಳನ್ನು ಪಡೆದ ಹೆಸರುಗಳನ್ನು ಜೋರಾಗಿ ಹೇಳಿ ಎಲ್ಲರಿಗೂ ಅಂಕಪಟ್ಟಿಗಳನ್ನು ಕೊಟ್ಟು ಜೂನ್ ಒಂದನೇ ತಾರೀಖು ಶಾಲೆ ಆರಂಭವಾಗುತ್ತದೆ ಆಗ ಮತ್ತೆ ಭೇಟಿಯಾಗೋಣ ಎಂದು ಹೇಳಿ ಎಲ್ಲರಿಗೂ ಶುಭವಾಗಲಿ ಎಂದು ಹರಸಿ ಹೋಗುತ್ತಿದ್ದರು.
ಅಂಕ ಪಟ್ಟಿ ತೆಗೆದುಕೊಂದು ನೋಡಿದರೆ, ಮೊದಲ ಹತ್ತು ರ್ಯಾಂಕ್ಗಳಲ್ಲಿ ಹೆಚ್ಚಿನ ಅಂಕಗಳ ವೆತ್ಯಾಸವಿರುತ್ತಿರಲಿಲ್ಲ ಒಂದೋ ಎರಡೋ ಅಂಕಗಳ ಅಂತರದಲ್ಲಿ ರ್ಯಾಂಕುಗಳ ಹಂಚಿಕೆಯಾಗಿರುತ್ತಿತ್ತು. ನನಗಿಂತ ಒಂದು ಅಂಕ ಜಾಸ್ತಿ ತೆಗೊಂಡಿದ್ದ ಕಿಟ್ಟನ ಅರ್ಭಟ ತಡೆಯೋಕೆ ಆಗಿರ್ಲಿಲ್ಲ. ಸರಿ ಅಗಿದ್ದಾಗಿ ಹೋಯ್ತು ಮುಂದಿನ ವರ್ಷ ಅವನಿಗಿಂತ ಜಾಸ್ತಿ ಮಾರ್ಕ್ಸ್ ತೆಗೊಂಡೇ ಬಿಡ್ತೀನಿ ಎಂಬ ಶಪತವನ್ನು ಮನಸ್ಸಿನಲ್ಲಿಯೇ ಮಾಡುತ್ತಾ ನಿಧಾನವಾಗಿ ಹೆಜ್ಜೆಗಳನ್ನು ಹಾಕುತ್ತಾ ಬಿಇಎಲ್ ಫ್ಯಾಕ್ಟರಿ ಮೇನ್ ಗೇಟಿಗೆ ಬಂದು ಅಲ್ಲಿದ್ದ ಸೆಕ್ಯೂರಿಟಿಯವರ ಹತ್ತಿರ intercom phone 8436 ನಂ ಡಯಲ್ ಮಾಡಿ ಆ ಕಡೇ ಹಲೋ ಎಂದು ಕೇಳಿದ ತಕ್ಷಣ, ಸ್ವಲ್ಪ ಶಿವಮೂರ್ತಿಗಳನ್ನು ಕರೀತೀರಾ ಎಂದು ಕೇಳಿದ್ದೇ ತಡಾ, ಏ..ಏ.. ಸ್ರೀಕಂಠಾನೇನೋ.. ನಾನು ಕಣೋ.. ಸೇ..ಸ್ ಗಿರಿ ರಿಸಲ್ಟ್ ಬಂತೇನೋ? ಪಾಸಾ? ಎಷ್ಟನೇ ರ್ಯಾಂಕು? ಎಂದು ಒಂದೇ ಉಸಿರಿನಲ್ಲಿ ಅಪ್ಪನ ಸೂಪರವೈಸರ್ ಶೇಷಗಿರಿ ರಾವ್ ಕೇಳುತ್ತಿದ್ದರೆ, ಹೂಂ.. ಮಾವಾ. 3ನೇ ರ್ಯಾಂಕ್ ಬಂದಿದ್ದೀನಿ ಎಂದರೆ, ಭೇಷ್ ಭೇಷ್.. ಮುಂದಿನ ಸಲಾ ಫಸ್ಟ್ ರ್ಯಾಂಕ್ ಬರ್ಬೇಕು ಆಯ್ತಾ? ಎಂದು ಆಶೀರ್ವದಿಸಿ, ಸಿವಾ.. ಸಿವಾ.. ನಿನ್ಮಗ ಮೂರ್ನೇ ರ್ಯಾಂಕ್ ಬಂದಿದ್ದಾನಂತೊ ಎಂದು ಇಡೀ ಸೆಕ್ಷನ್ನಿಗೆ ಕೇಳೋಹಾಗೆ ಹೇಳುತ್ತಿದ್ದನ್ನು ಕೇಳಿ ಒಂದು ರೀತಿಯ ಭಯ ಆಗುತ್ತಿತ್ತು. ಅಪ್ಪಾ ಬಂದು ಹರಿ ಓಂ.. ಎಂದು ಹೇಳುತ್ತಿದ್ದರೆ ಬಾಯಿಂದ ಮಾತೇ ಹೋರಡುತ್ತಿರಲಿಲ್ಲ. ಮಗೂ ಮಗೂ.. ಶ್ರೀಕಂಠ.. ಶ್ರೀಕಂಠಾ.. ಎಂದು ಎರಡ್ಮೂರು ಸಲಾ ಹೇಳಿದ್ಮೇಲೆ ಹಾಂ.. ಅಣ್ಣಾ.. ಮೂರ್ನೇ ರ್ಯಾಂಕ್ ಬಂದಿದೆ. ಗಣಿತ, 92 ವಿಜ್ಞಾನ 96, ಕನ್ನಡ 95 ಎಂದು ಒಂದೇ ಉಸಿರಿನಲ್ಲಿ ಅಂಕಗಳನ್ನು ಹೇಳಿದ್ದನ್ನು ಕೇಳಿಸಿಕೊಂಡು ಸರಿ ಸರಿ. ಮುಂದಿನ ಸಲಾ ಇನ್ನೂ ಕಷ್ಟ ಪಡ್ಬೇಕು. ಮಧ್ಯಾಹ್ನ ಊಟಕ್ಕೆ ಬಂದಾಗ ಎಲ್ಲಾ ಮಾತಾನಾಡೋಣ ಎಂದು ಹೇಳಿ ಫೋನ್ ಕಟ್ ಮಾಡಿದ್ರೇ ಒಂದು ರೀತಿಯ ನಿರಾಳ.
ಅಲ್ಲಿಂದ ಸುಮಾರು ಒಂದೂವರೆ ಕಿ.ಮೀ ದೂರ ಇದ್ದ ನಮ್ಮ ಮನೆಗೆ ನಿಧಾನವಾಗಿ ಹೋಗ್ತಾ, ಇನ್ನೇನು ಮನೆಯ ಹತ್ತತ್ರಾ ತಲುಪಿದ್ದೇನೆ ಎನ್ನುವಾಗ ಎದುರುಗಡೆಯಿಂದ ಧುತ್ತನೆ ಸಣ್ಣ ಸೈಕಲ್ಲಿನಲ್ಲಿ ಕಿಟ್ಟ ಎದುರಿಗೆ ಸಿಗ್ಬೇಕೇ? ಅರೇ ಇವ್ನೇಕ್ಯಾಕೆ ನಮ್ಮನೆ ಹತ್ರಾ ಅದೂ ಈ ಸಮಯದಲ್ಲಿ ಬಂದಿದ್ದಾನೇ? ಅವನ ಮನೆ ಇರೋದೋ ಸ್ಕೂಲಿನ ಹಿಂಭಾಗದ ಕಾಲೋನಿಯಲ್ಲಿ ಅಲ್ವಾ ಎಂದು ಯೋಚಿಸುತ್ತಿರುವಾಗಲೇ? ಹಾಂ ಹೋಗೂ ಹೋಗೂ ಮನೆಗೆ ಹೋಗು ನಿಂಗೆ ಇದೆ ಇವತ್ತು ಎಂದು ಹೇಳಿ ಕೈ ಬೀಸಿ ತನ್ನ ಚಿಕ್ಕ ಸೈಕಲ್ಲಿನಲ್ಲಿ ಹೋದಾಗ ಇದೊಳ್ಳೇ ಗ್ರಹಚಾರ ಬಂತಲ್ಲಪ್ಪಾ!! ಅಮ್ಮನ ಹತ್ರಾ ಅದೇನ್ ಬೆಂಕಿ ಹಚ್ಚಿದ್ದಾನೋ? ಎಂದು ಯೋಚಿಸಿಕೊಂಡು ಮನೆಗೆ ಹೋಗಿ ಅಮ್ಮನ ಕೈಯ್ಯಲಿ ಮಾರ್ಕ್ಸ್ ಕಾರ್ಡ್ ಕೊಟ್ಟೆ.
ಒಂದು ಸಲಾ ಮಾರ್ಕ್ಸ್ ಮೇಲೆ ಕಣ್ಣಾಡಿಸಿದ ಅಮ್ಮಾ, ಯಾರ್ಯಾರಿಗೆ ಎಷ್ಟೆಷ್ಟು ಬಂತು? ವಿಮಲಳಿಗೆ ಎಷ್ಟು? ಕಿಟ್ಟ ಜಯಶ್ರೀಗೆ ಎಷ್ಟು ಬಂದಿದೆ? ಎಂದು ಒಂದೇ ಸಮನೇ ಕೇಳ್ತಾ ಇದ್ರೇ, ದಾರಿಯಲ್ಲಿ ಕಿಟ್ಟ ಸಿಕ್ಕಿದ್ದನ್ನು ಅಮ್ಮನಿಗೆ ಹೇಳದೇ, ಅವ್ರದೆಲ್ಲಾ ಗೊತ್ತಿಲ್ಲ. ನಾನು ಹೋಗೋ ಅಷ್ಟರಲ್ಲಿ ಅವರೆಲ್ಲಾ ಮಾರ್ಕ್ಸ್ ಕಾರ್ಡ್ ಇಸ್ಕೊಂಡ್ ಹೋಗಿಬಿಟ್ಟ್ರಿದ್ರೂ ಅಂತ ಹಸೀ ಸುಳ್ಳು ಹೇಳ್ದೇ. ಹೌದೌದು. ನಿನಗಿಂತ ಜಾಸ್ತಿ ಬಂದಿರುವವರ ಮಾರ್ಕ್ಸ್ ಮಾತ್ರಾ ನಿನಗೆ ಗೊತ್ತಿರಲ್ಲಾ ಅಲ್ವಾ? ಈಗ್ ತಾನೇ ಕಿಟ್ಟ ಬಂದಿದ್ದ. ಎಲ್ಲಾ ಹೇಳಿದ್ದಾನೆ. ವಿಮಲ ಮೊದ್ಲು ಕಿಟ್ಟ ಎರಡ್ನೇದು ನೀನು ಮೂರ್ನೇದು, ಜಯಶ್ರೀ ನಾಲ್ಕನೇದಂತೇ ಅಂದಾಗ ಹೌದಾ? ನನಗೇ ಗೊತ್ತೇ ಇಲ್ಲಾ ಎಂಬ ಮತ್ತೊಂದು ಹಸೀ ಸುಳ್ಳು.
ಅಷ್ಟೇ ಅಲ್ಲಾ ಮುಂದಿನ ವರ್ಷಾ ಆರನೇ ಕ್ಲಾಸಿನಲ್ಲಿ ಇರೋದು ಜಾಸ್ತಿ ರಾಮಾಯಣ ಮಹಾಭಾರತ ಕಥೇನೇ ಅಂತೆ ಹಾಗಾಗಿ ಮುಂದಿನ ವರ್ಷಾನೂ ಅವನೇ ನಿನಗಿಂತಲೂ ಜಾಸ್ತಿ ಮಾರ್ಕ್ಸ್ ತೆಗೆದುಕೊಳ್ತಾನಂತೆ ಅಂತ ಚಾಲೆಂಜ್ ಬೇರೆ ಮಾಡಿ ಹೋದ. ಬಾಲ ಬ್ರಹ್ಮಚಾರಿ ಬಂದಿದ್ದ ಅಂತ ಕಾಫಿ ಮತ್ತು ನೆನ್ನೆ ಮಾಡಿದ್ದ ಸ್ವೀಟ್ಸ್ ಕೊಟ್ಟು ಕಳಿಸ್ದೇ ಅಂತ ಹೇಳಿದ್ರು. ಛೇ.. ಎಂಥಾ ಪಟಿಂಗ ಅವ್ನು? ಕೇವಲ ಒಂದು ಮಾರ್ಕ್ಸ್ ಜಾಸ್ತಿ ತಗೊಂಡಿದ್ದಕ್ಕೇ ಮನೆಗೆ ಬಂದು ಫಿಟಿಂಗ್ ಇಟ್ಟಿದ್ದಾನಲ್ವಾ!! ಇರ್ಲೀ ನಾನು ಏನು ಅಂತ ಮುಂದಿನ ವರ್ಷ ತೋರಿಸ್ತೀನಿ ಅಂತ ಅವಾಗಲೇ ಮನಸ್ಸಿನಲ್ಲಿ ಭೀಷ್ಮ ಪ್ರತಿಜ್ಞೆಮಾಡಿ. ಸುಮ್ಮನೆ ಅಳುವ ಹಾಗೆ ನಾಟಕ ಮಾಡಿ ಇಲ್ಲಮ್ಮಾ ಮುಂದಿನ ಸಲಾ ಚೆನ್ನಾಗಿ ಓದಿ ಜಾಸ್ತಿ ಮಾರ್ಕ್ಸ್ ತಗೋತೀನಮ್ಮಾ ಎಂದೇ.. ಅದೇನು ತಗೋತಿಯೋ? ಪ್ರತೀ ಸಲಾನೂ ಇದೇ ಮಾತು.. ನನ್ನ ಹತ್ರಾ ಏನೂ ಹೇಳ್ಬೇಡಾ.. ಮಧ್ಯಾಹ್ನ ಊಟಕ್ಕೆ ನಿಮ್ಮಪ್ಪ ಬರ್ತಾರಲ್ಲಾ ಅವರ ಹತ್ರಾನೇ ಅದೇನು ಹೇಳ್ಕೋತೀಯೋ ಹೇಳ್ಕೋ ಎಂದು ಅಡುಗೆ ಮನೆಯೊಳಗೆ ಹೊದ್ರೂ ಅಮ್ಮಾ.
ಅಪ್ಪನಿಗೆ ಊಟಕ್ಕೆ ಬಿಡ್ತಾ ಇದ್ದದ್ದು ಅರ್ಧಗಂಟೆ ಅದರಲ್ಲಿ ಹೋಗಿ ಬರೋದಿಕ್ಕೇ ಹತ್ತು ನಿಮಿಷಗಳಾಗಿ ಬಿಡ್ತಾ ಇತ್ತು. ಮನೆಗೆ ಬಂದ ತಕ್ಷಣ ಕೈಕಾಲು ಮುಖ ತೊಳೆದುಕೊಂಡು ಗಬ ಗಬಾ ಅಂತ ಊಟ ಮಾಡುವಾಗಲೇ ಒಂದು ಸಲಾ ಮಾರ್ಕ್ಸ್ ಕಾರ್ಡಿನ ಮೇಲೆ ಕಣ್ಣಾಡಿಸುತ್ತಿರುವಾಗಲೇ, ಅಮ್ಮಾ ಅಡುಗೆ ಬಡಿಸುತ್ತಲೇ ಕಿಟ್ಟನ ಪುರಾಣವನ್ನೆಲ್ಲಾ ಬಡಬಡಿಸಿದ್ದರು. ಸರಿ ಸರಿ ಮುಂದಿನ ಸಲಾ ಚೆನ್ನಾಗಿ ಓದು ಎಂದು ಹೇಳಿ ನನ್ನ ತಂಗಿಯರ ಮಾರ್ಕ್ಸ್ ಕಾರ್ಡ್ ನೋಡಿ ಅವರಿಗೆ ಏನು ಹೇಳ್ತಾ ಇದ್ರೂ ಅನ್ನೋದೂ ಸಹಾ ಕಿವಿಗೆ ಹಾಕಿ ಕೊಳ್ಳದೇ, ಅಬ್ಬಾ ಬದುಕಿತು ಬಡ ಜೀವಾ ಎಂದು ನಿರಾಳನಾಗಿ ಅಪ್ಪಾ ಆಫೀಸಿಗೆ ಹೋದ ನಂತರ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿ ಸಂಜೆ ಅಮ್ಮಾ ಮಾಡಿದ ಸ್ವೀಟ್ಸ್ ಅಕ್ಕ ಪಕ್ಕದ ಮನೆಯವರಿಗೆ ಕೊಟ್ಟರೆ ನಮ್ಮ ಏಪ್ರಿಲ್-೧೦ ಸಂಪನ್ನವಾಗುತ್ತಿತ್ತು.
1981ರ ಏಪ್ರಿಲ್-10 ರಂದು ಕಿಟ್ಟನನ್ನು ಸೆದೆಬಡಿಯುವ ಫಣವನ್ನು ತೊಟ್ಟ ನಾನು 6ನೇ ತರಗತಿಯ ಮೊದಲ ಪರೀಕ್ಷೆಯಲ್ಲಿ ನನ್ನ ಬಾಲ್ಯದ ಆತ್ಮೀಯ ಗೆಳೆಯರಾದ ಗುರುಪ್ರಸನ್ನ ಮತ್ತು ಮಹೇಶನನ್ನು ಅಕ್ಕ ಪಕ್ಕದಲ್ಲಿ ಕುಳ್ಳರಿಸಿಕೊಂಡು ಮದ್ಯದಲ್ಲಿ ನಾನು ಕುಳಿತು ನಾನು ಬರೆದದ್ದೆಲ್ಲವನ್ನೂ ಆವರಿಬ್ಬರಿಗೂ ಚೆನ್ನಾಗಿ ತೋರಿಸಿ ಬಿಟ್ಟಿದ್ದೆ. (ಅಂದು ಮಾಡಿದ್ದು ತಪ್ಪು ಎಂದು ನಂತರದ ದಿನಗಳಲ್ಲಿ ಅರಿವಿಗೆ ಬಂದಿತ್ತು) ಮೊದಲ ಟೆಸ್ಟಿನ ಫಲಿತಾಂಶದ ದಿನ ವಿಮಲ ಮೊದಲನೇ ರ್ಯಾಂಕ್ ನಾನು ಎರಡನೇ ರ್ಯಾಂಕ್, ಜಯಶ್ರೀ ಮೂರನೇ ರ್ಯಾಂಕ್, ಗೆಳೆಯ ಗುರುಪ್ರಸನ್ನ ನಾಲ್ಕನೇ ರ್ಯಾಂಕ್, ಕಿಟ್ಟ ಐದನೇ ರ್ಯಾಂಕ್ ಮತ್ತು ಮಹೇಶ ಆರನೇ ರ್ಯಾಂಕ್ ಗಳಿಸಿದ್ದ. ತನಗಿಂತ ಗುರುಪ್ರಸನ್ನ ಜಾಸ್ತಿ ಅಂಕ ಗಳಿಸಿದ್ದು ಮತ್ತು ಅಚ್ಚರಿ ಎಂಬಂತೆ ಮಹೇಶ 6ನೇ ರ್ಯಾಂಕ್ ಗಳಿಸಿದ್ದು ಕಿಟ್ಟನ ಪಿತ್ತ ನೆತ್ತಿಗೇರಿಸಿತ್ತು. ಇದರಲ್ಲಿ ಏನೋ ಕುಮ್ಮಕ್ಕಿದೆ ಎಂದು ಅವರಿಬ್ಬರನ್ನೂ ನಿಜ ಹೇಳ್ರೋ.. ನೀವು ಶ್ರೀಕಂಠನ ಹತ್ರಾ ಕಾಪೀ ಮಾಡಿದ್ದೀರಲ್ವಾ? ಎಂದು ವಾದ ಮಾಡಿದರೂ, ಅದು ನದೀ ನೀರಿನಲ್ಲಿ ಹುಣಸೇಹಣ್ಣು ಹಿಂಡಿದಂತಿತ್ತು. ಅದೇ ಕೊನೇ ಮುಂದೆಂದೂ ಕಿಟ್ಟ ನನಗಿಂತ ಹೆಚ್ಚಿನ ಅಂಕಗಳಿಸಲು ನಾನು ಅನುವು ಮಾಡಿಕೊಡಲೇ ಇಲ್ಲ. ಮುಂದೆ ಎಂಟನೇ ತರಗತಿಗೆ ವಿಮಲ ಬೇರೇ ಶಾಲೆಗೆ ಸೇರಿಕೊಂಡಳು. ಕಿಟ್ಟ ಆಂಗ್ಲ ಮಾಧ್ಯಮಕ್ಕೆ ಸೇರಿಕೊಂಡ. ನಾನು ಜಯಶ್ರೀ, ಗುರು, ಮಹೇಶ ಯಥಾ ಪ್ರಕಾರ ಕನ್ನಡ ಮಾಧ್ಯಮದಲ್ಲೇ ಮುಂದುವರೆಸಿದೆವು. ವಿಮಲಳ ಜಾಗಕ್ಕೆ ನಮ್ಮ ಪಕ್ಕದ ತರಗತಿಯಲ್ಲಿದ್ದ ರಾಧಾ ಬಂದಿದ್ದಳು. ಯಥಾ ಪ್ರಕಾರ ರಾಧಾ, ನಾನು, ಜಯಶ್ರೀ ಮೊದಲ ಮೂರನೇ ರ್ಯಾಂಕಿಗಾಗಿ ಪರದಾಡುತ್ತಿದ್ದೆವು. ಮಹೇಶ ದೊಡ್ಡವನಾಗಿ ಬೆಳೆದ ಕಾರಣ ಹಿಂದಿನ ಬೆಂಚಿಗೆ ಹೋಗಿದ್ದ. ಅವನ ಜಾಗಕ್ಕೆ ಭಾಸ್ಕರ್ ನಮ್ಮೊಂದಿಗೆ ಸೇರಿಕೊಂಡಿದ್ದ.
ದುರಾದೃಷ್ಟವಷಾತ್ ಕಿಟ್ಟ ಇಂದು ನಮ್ಮೊಂದಿಗಿಲ್ಲ. ಜಯಶ್ರೀ ನಮ್ಮ ಸಂಪರ್ಕದಲ್ಲಿ ಇಲ್ಲ. ವಿಮಲ ಹೋಮಿಯೋಪತಿ ಡಾಕ್ಟರ್ ಆಗಿ ಮುಂಬೈನಲ್ಲಿ ಇದ್ದರೆ, ರಾಧಾ ಕೂಡಾ ಸರ್ಕಾರೀ ವೈದ್ಯಾಧಿಕಾರಿ. ಭಾಸ್ಕರ್ ಬಿಇಎಲ್ ಆಸ್ಪತ್ರೆಯಲ್ಲಿ ಹಿರಿಯ ಅಧಿಕಾರಿ, ಗುರು ಪೆಪ್ಸಿಕೋಲಾ ಕಂಪನಿಯಲ್ಲಿ ಹಿರಿಯ ಹುದ್ದೆಯಲ್ಲಿದ್ದಾನೆ. ಎಲ್ಲರೊಂದಿಗೂ ಇಂದಿಗೂ ಸಂಪರ್ಕದಲ್ಲಿದ್ದು ಕಷ್ಟ ಸುಖಃ ಹಂಚಿಕೊಳ್ಳುತ್ತಿರುತ್ತೇವೆ.
ಇಂದು ಏಪ್ರಿಲ್ 10, 39 ವರ್ಷಗಳ ಹಿಂದಿನ ನಮ್ಮೆಲ್ಲರ ಬಾಲ್ಯದ ಸುಂದರ ನೆನಪನ್ನು ಮೆಲುಕು ಹಾಕುವಂತಾಯಿತು. ಈಗಿನ ಕಾಲದ ಮಕ್ಕಳಿಗೆ ಎಲ್ಲವೂ Online ಆಗಿರುವ ಕಾರಣ ಪಾಠ, ಗೆಳೆತನ, ಫಲಿತಾಂಶ ಎಲ್ಲವೂ Online ಆಗಿ ಹೋಗಿ ಈ ರೀತಿಯ ಸುಂದರ ಆರೋಗ್ಯಕರ ಪೈಪೋಟಿಯ ಅನುಭವ ಇಲ್ಲದಾಗಿ ಹೋಗಿರುವುದು ವಿಪರ್ಯಾಸವೇ ಸರಿ. ಅಂಕಗಳು ಎನ್ನುವುದು ಕೇವಲ ಸಂಖ್ಯೆಗಳಷ್ಟೇ. ಆ ಸಂಖ್ಯೆಗಳಿಗೆ ಅಷ್ಟೊಂದು ತಲೆ ಕೆಡೆಸಿಕೊಳ್ಳದೇ, ನಿಜವಾಗಿಯೂ ವಿಷಯಗಳ ಬಗ್ಗೆ ಆಳವಾದ ಅಧ್ಯಯನ ಮಾಡಿ ವಿದ್ಯಾವಂತರಾಗಿ, ಜ್ಞಾನವಂತರಾಗಿ ಎಂದು ಪೋಷಕರಾಗಿ ಇಂದಿನ ಮಕ್ಕಳಿಗೆ ನಾವು ತಿಳಿ ಹೇಳಬೇಕಿದೆ.
ನಾಲ್ಕಾರು ಪದವಿ ಪಡೆದಿದ್ದರೇನು? ವಿದೇಶದಲ್ಲಿ ಓದಿದ್ದರೇನು?
ವಿನಯ ಮತ್ತು ವಿವೇಚನೆ ಇಲ್ಲದಿದ್ದರೆ, ಪಡೆದ ವಿದ್ಯೆಯೆಲ್ಲವೂ ತೃಣಕ್ಕೆ ಸಮಾನ
ವಿದ್ಯೆಯ ಜೊತೆಗೆ ವಿನಯ ಮತ್ತು ವಿವೇಚನೆ ಹೆಚ್ಚಿಸುವತ್ತ ಚಿತ್ತ ಹರಿಸೋಣ
ಏನಂತೀರೀ?
ನಿಮ್ಮವನೇ ಉಮಾಸುತ
ಸುಮಧುರ ನೆನಪುಗಳೇ ಅಮರ
LikeLike
Good write-up
LikeLiked by 1 person
ಆ Rank ಲಿಸ್ಟ್ ಅಲ್ಲಿ ನನ್ನ ಹೆಸರು ನೋಡಿ ಸಂತೋಷವಾಯಿತು. ಬಾಲ್ಯದ ಸವಿ ನೆನಪು ಮರುಕಳಿಸಿದ ಶ್ರೀಕಂಠರನಿಗೆ ಧನ್ಯವಾದಗಳು.
LikeLiked by 1 person
ಅದು ವಾಸ್ರವದ ಚಿತ್ರಣವೇ ಹೌದು. ಹಾಗಾಗಿ, ವಿಮಲ, ಕಿಟ್ಟ, ಜಯಶ್ರೀ, ಗುರು ಪ್ರಸನ್ನ, ರಾಧಾ, ಕನಕಮ್ಮ, ಬಸವರಾಜ ಎಲ್ಲರೂ ಆ ಪಟ್ಟಿಯಲ್ಲಿ ಇರಲೇ ಬೇಕು
LikeLike