ಆಟ ಇನ್ನೂ ಬಾಕೀ ಇದೆ.

ನೆನ್ನೆಯ ದಿನ ವೀಕೆಂಡ್ ಕರ್ಘ್ಯೂ ಇದ್ದ ಕಾರಣ ಸಾವಯವ ಸಂತೆಯನ್ನು ಬಂದ್, Online ಮುಖಾಂತರವೇ ಸಾಂಘೀಕ್ಕಿನಲ್ಲಿ ಭಾಗವಹಿಸಿ, ಆತ್ಮೀಯರ ಮಗನ ಮದುವೆಯಲ್ಲೂ Online ಮುಖಾಂತರ ಆಶೀರ್ವದಿಸಿ, ಮನೆಯ ಗೇಟಿನ ಹೊರಗೂ ಹೋಗದೇ ಪಟ್ಟಾಗಿ ಮನೆಯಲ್ಲಿಯೇ ಇರಲು ನಿರ್ಧರಿಸಿದ್ದೆ. ಸಮಯೋಚಿತವಾಗಿೆ ಚೆನ್ನಾಗಿ ಜೀರಿಗೆ, ಕಾಳುಮೆಣಸು, ಶುಂಠಿ ಮತ್ತು ಮನೆಯಲ್ಲೇ ಕಡೆದು ತೆಗೆದ ಬೆಣ್ಣೆಯ ತುಪ್ಪ ಹಾಕಿ ಮಾಡಿದ್ದ ನವಣೆ ಹುಗ್ಗಿ(ಪೊಂಗಲ್) ಜೊತೆಗೆ ಕಾಯಿ, ಕೊತ್ತಂಬರಿ ಮತ್ತು ಪುದಿನಾ ಹಾಕಿದ ಚೆಟ್ಟಿ ತಿಂದು ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತೆ ಅನಂದಿಸಿ ಹಾಗೂ ಹೀಗೂ ಮಧ್ಯಾಹ್ನ ಮತ್ತೆ ಆರೋಗ್ಯಕರವಾದ ನಿಂಬೇ ಸಾರಿನ ಊಟ ಮುಗಿಸಿ ಇನ್ನೇನು ಭುಕ್ತಾಯಾಸವನ್ನು ಪರಿಹರಿಸ್ಕೊಳ್ಳಬೇಕು ಎನ್ನುವಷ್ಟರಲ್ಲಿ ನನ್ನ ಮತ್ತು ನಮ್ಮಾಕಿಯ ಮೊಬೈಲ್ ಒಟ್ಟೊಟ್ಟಿಗೆ ರಿಂಗಣಿಸಿತು.

ಒಬ್ಬರ ಮಾತು ಮತ್ತೊಬ್ಬರಿಗೆ ತೊಂದರೆ ಆಗದಿರಲೆಂದು ಇಬ್ಬರೂ ಬೇರೆ ಬೇರೆ ಕೋಣೆಯಲ್ಲಿ ಕರೆ ಸ್ವೀಕರಿಸಿದರೂ ಆ ಕಡೆಯಿಂದ ಕೇಳಿ ಬಂದ ವಿಷಯ ಮಾತ್ರಾ ಒಂದೇ ಆಗಿತ್ತು. ನಮ್ಮ ಸಂಬಂಧೀಕರ 40-45ರ ಪ್ರಾಯದ ಸ್ವಂತ ಉದ್ಯೋಗ ಮಾಡಿಕೊಂಡು ಈಗಿನ್ನೂಒಬ್ಬನೇ ಮಗನನ್ನು Engg. collegeಗೆ ಸೇರಿಸಿದ್ದವರೊಬ್ಬರು ಅಚಾನಕ್ಕಾಗಿ ಕೋವಿಡ್ಡಿಗೆ ಬಲಿಯಾಗಿ ಒಂದು ವಾರಗಳಾಯಿತು ಎಂಬ ಸುದ್ದಿ ನನ್ನ ಕಿವಿಗೆ ಬಿದ್ದರೆ, ನನ್ನಾಕಿಯ ಸ್ನೇಹಿತೆಯ ಮೈದುನ ಅದೇ 40-45ರ ಪ್ರಾಯದ ಸ್ವಂತ ಉದ್ಯೋಗ ಮಾಡಿಕೊಂಡಿದ್ದ ಇನ್ನೂ ಸಣ್ಣ ಪ್ರಾಯದ ಎರಡು ಮಕ್ಕಳ ತಂದೆಯೂ ಸಹಾ ಅಗ ತಾನೇ ಕೋವಿಡ್ ನಿಂದಾಗಿ ಮೃತಪಟ್ಟ ವಿಷಯ ತಿಳಿಯಿತು.

hena2ಕಾಕತಾಳೀಯವೆಂದರೆ ಇಬ್ಬರೂ ಸ್ವಂತ ಉದ್ಯೋಗ ಮಾಡಿಕೊಂಡಿದ್ದರು. ಆರಂಭದಲ್ಲಿ ಗಂಟಲು ಬೇನೆ ಮತ್ತು ಜ್ವರ ಕಾಣಿಸಿಕೊಂಡಾಗ ಕೋವಿಡ್ ಪರೀಕ್ಷೇ ಮಾಡಿಸಿಕೊಂಡು ಫಲಿತಾಂಶ -ve ಎಂದು ಬಂದಾಗ ಸ್ವಲ್ಪ ನಿರ್ಲಕ್ಷ ತೋರಿದ್ದ ಕಾರಣ, ಎರಡನೇ ಅಲೆಯ ವೈರಾಣು ದೇಹದೊಳಗೇ ವಿಸ್ಪೋಟಗೊಂಡು ತೀವ್ರವಾಗಿ ಉಲ್ಬಣವಾದಾಗ ಮತ್ತೇ ವೈದ್ಯರ ಬಳಿಗೆ ಹೋದಾಗ ಪರಿಸ್ಥಿತಿ ಕೈ ಮೀರಿತ್ತು. ಶ್ವಾಶಕೋಶದ 75 ರಷ್ಟು ಭಾಗ ಸೋಂಕಿಗೆ ಒಳಗಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ತಮ್ಮ ಕುಟುಂಟದವರನ್ನೂ ಮತ್ತು ಅಪಾರ ಬಂಧು ಮಿತ್ರರನ್ನು ಅಕಾಲಿಕವಾಗಿ ಶಾಶ್ವತವಾಗಿ ಅಗಲಿಬಿಟ್ಟಿದ್ದರು.

csk_RCBಈ ದುಃಖದ ವಿಷಯವನ್ನು ಅರಗಿಸಿಕೊಳ್ಳಲಾಗದೇ ಹಾಗೇ ಟಿವಿಯನ್ನು ಹಾಕಿದರೆ, High voltage, RCB & CSK IPL ಪಂದ್ಯವಳಿಯನ್ನು ನೋಡಲು ಕುಳಿತುಕೊಂಡರೆ ಸತತವಾಗಿ ನಾಲ್ಕು ಪಂದ್ಯಗಳನ್ನು ಗೆದ್ದಿದ್ದ RCB ಅವರಿಗೆ ಅವರ ಅತಿಯಾದ ಆತ್ಮವಿಶ್ವಾಸವೇ ಮುಳುವಾಯಿತು. 19ನೇ ಓವರಿನವರೆಗೂ ಹಾಗೂ ಹೀಗೂ ಸುಸ್ಥಿತಿಯಲಿದ್ದ RCB ಗೆ ಅವರ ಪ್ರಮುಖ ಬೌಲರ್ ಹರ್ಷಲ್ ಪಟೇಲ್ ಅವರು 20ನೇ ಓವರಿನಲ್ಲಿ 37ರನ್ನುಗಳನ್ನು ಬಿಟ್ಟು ಕೊಟ್ಟ ಪರಿಣಾಮ 160-170ರ ಆಸುಪಾಸಿನಲ್ಲಿದ್ದ CSK ಇದ್ದಕ್ಕಿದ್ದಂತೆಯೇ 200 ರನ್ನುಗಳ ಹತ್ತಿರ ಬಂದ ಕೂಡಲೇ RCB ಅವರ ಜಂಘಾಬಲವೇ ಉಡುಗಿ ಹೋಯಿತು. ಪ್ರತೀ ಓವರಿಗೆ 10 ರನ್ನುಗಳನ್ನು ಹೊಡೆಯಲೇ ಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಒತ್ತಡಕ್ಕೆ ಒಳಗಾಗಿ ಪಟಪಟನೇ ವಿಕೆಟ್ ಕಳೆದುಕೊಳ್ಳುವ ಮೂಲಕ 69 ರನ್ನುಗಳ ಅಂತರದಿಂದ ಹೀನಾಯವಾಗಿ ಪಂದ್ಯವನ್ನು ಸೋತು ಹೋಯಿತು.

rajeevಇನ್ನು ಬಿಗ್ ಬಾಸ್ 8ನೇ ಸೀಜನ್ನಿನಲ್ಲಿ ಗೆಲ್ಲುವ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ರಾಜೀವ್ ಕೂಡಾ ಇದೇ ರೀತಿಯ ಅತಿಯಾದ ಆತ್ಮವಿಶ್ವಾಸದಿಂದ ಹೊರಬೀಳುವಂತಾಗಿತ್ತು. ಬಿಗ್ ಮನೆಯಲ್ಲಿ ಅತ್ಯಂತ ನೆಚ್ಚಿನ ಅಭ್ಯರ್ಥಿಯಾಗಿದ್ದ ಮತ್ತು ಹೊರಗಡೆ ತನಗೆ ಇಷ್ಟೊಂದು ಜನ ಸ್ನೇಹಿತರಿದ್ದಾರೆ ಎಂದು ಸದಾಕಾಲವು ಎರಡೂ ತೋಳುಗಳನ್ನೂ ಎತ್ತಿ ಬೀಗುತ್ತಿದ್ದ ರಾಜೀವ್, ತನ್ನ ಸಹಚರರಿಂದಲೇ ನಾಮಿನೇಟ್ ಆಗಿ ಎಷ್ಟೇ ಚೆನ್ನಾಗಿ ಆಟವಾಡಿದರೂ, ಎಷ್ಟೇ ಸದ್ಭಾವನೆಗಳಿಂದ ಮನೆಯಲ್ಲಿ ನಡೆದುಕೊಂಡಿದ್ದರೂ, ಹೊರಗಿನವರು ಹೃದಯ ಗೆಲ್ಲಲು ವಿಫಲರಾದದ್ದು ವಿಷಾಧನೀಯವೇ ಸರಿ. ತನ್ನ ಬಳಿ Immunity Pass ಇದ್ದರೂ ಅತಿಯಾದ ಆತ್ಮವಿಶ್ವಾಸದಿಂದ, ಅದನ್ನು ಸದ್ಭಳಕೆ ಮಾಡಿಕೊಳ್ಳದೇ ಹೋದದ್ದು ವಿಪರ್ಯಾಸವೇ ಸರಿ.

ಹಾಗಾದರೆ ಈ ಮೂರೂ ಪ್ರಕರಣಗಳಲ್ಲಿ ಎಲ್ಲರೂ ಎಡವಿದ್ದು ಎಲ್ಲಿ? ಎಂದು ಸೂಕ್ಷ್ಮವಾಗಿ ಯೋಚಿಸಿದಲ್ಲಿ ಎಲ್ಲರೂ ಆರೋಗ್ಯವನ್ನಾಗಲೀ ಆಟವನ್ನಾಗಲೀ ಗಂಭೀರವಾಗಿ ಪರಿಗಣಿಸದೇ ಲಘುವಾಗಿ ತೆಗೆದುಕೊಂಡಿದ್ದೇ ಸಂಚಕಾರವಾಯಿತು ಎಂದರೂ ತಪ್ಪಾಗಲಾರದು.

  • ಆನಾರೋಗ್ಯವಿದ್ದಾಗ  ಕೇವಲ ಕೋವಿಡ್ ಫಲಿತಾಂಶ  – ve  ಬಂದಿದೆ ಎಂಬ ಅತಿಯಾದ ಆತ್ಮ ವಿಶ್ವಾಸದಿಂದ ಸೂಕ್ತವಾದ ಚಿಕಿತ್ಸೆ ಪಡೆಯದೇ, ಗಂಭೀರವಾಗಿ ಮನೆಯಲ್ಲೇ ಇದ್ದು ಸುಧಾರಿಸಿಕೊಳ್ಳದೇ ಹೋದದ್ದು ಅವರ ಪ್ರಾಣವನ್ನೇ ಕಳೆದುಕೊಳ್ಳುವಂತಾಯಿತು.
  • ಕ್ರಿಕೆಟ್ ಎಂದರೆ ದಾಂಡಿಗರದ್ದೇ ಪ್ರಾಭಲ್ಯ ಎಂದು ಗೊತ್ತಿದ್ದರೂ ಅದೇಕೋ ಏನೂ ಎಂಟು ಎಸೆತಗಾರರು ಮತ್ತು ಕೇವಲ ಮೂವರು ಪ್ರಮುಖ ದಾಂಡಿಗರ ತಂಡವನ್ನು ಆಯ್ಕೆ ಮಾಡಿಕೊಂಡಾಗಲೇ ಎಡವಿದ್ದ ಕೋಹ್ಲಿ ತಂಡ, ಆಷ್ಟು ದೊಡ್ಡದಾದ ಮೊತ್ತವನ್ನು ಎದುರಿಸುವಾಗ ಒಂದು ಕಡೆ ಭರ್ಜರಿಯಾಗಿ ಮತ್ತೊಂದೆಡೆ ನಿಧಾನವಾಗಿ ಆಡಬೇಕಿತ್ತು. ದುರಾದೃಷ್ಟವಷಾತ್ ಕೋಹ್ಲಿ ಮತ್ತು ಪಡಿಕ್ಕಲ್ ಇಬ್ಬರೂ ಭರ್ಜರಿಯಾಗಿ ಹೊಡೆಯುವ ಭರದಲ್ಲಿ ಔಟಾಗಿದ್ದು ಉಳಿದ ಆಟರಾರರು ಒತ್ತಡ ತಾಳಲಾರದೇ ಸಾಲು ಸಾಲಾಗಿ ಅಲ್ಪ ಮೊತ್ತಕ್ಕೆ ಔಟಾಗಿ ಹೋದದ್ದು ವಿಪರ್ಯಾಸವೇ ಸರಿ.
  • ಕಳೆದ ನಾಲ್ಕಾರು ವಾರಗಳಿಂದಲೂ ಹೊರಗಿನ ಜನರು ತನ್ನನ್ನು ಪ್ರಮುಖವಾಗಿ ಆಯ್ಕೆ ಮಾಡದೇ ಕಡೇ ಸಾಲಿನಲ್ಲಿ ಆಯ್ಕೆ ಆಗುತ್ತಿದ್ದದ್ದು ಗೊತ್ತಿದ್ದರೂ ರಾಜೀವ್ ತನ್ನ ಬತ್ತಳಿಕೆಯಲ್ಲಿದ್ದ ಜೀವದಾನದ ಪಾಸ್ ಬಳಸಿಕೊಳ್ಳದೇ  ಹೋಗದೇ. ಹೊರಗಿನ ತನ್ನ ಸ್ನೇಹಿತರ ಕೈ ಹಿಡಿದೇ ಹಿಡಿಯುತ್ತಾರೆ ಎಂಬ ಅತಿಯಾದ ಆತ್ಮವಿಶ್ವಾಸವೇ ಆತನಿಗೆ ಮುಳುವಾಯಿತು.

jadduಇನ್ನು 19ನೇ ಓವರಿನವರೆಗೂ CSK ತಂಡ 160-170 ರನ್ನುಗಳನ್ನು ಗಳಿಸಬಹುದು ಎಂಬ ಅಂದಾಜಿನಲ್ಲಿದ್ದಾಗ ಒಂದೂ ರನ್ನು ಗಳಿಸದೇ ಇದ್ದಾಗ ಲಭಿಸಿದ ಜೀವದಾನವನ್ನು ಅತ್ಯಂತ ಯಶಸ್ವಿಯಾಗಿ ಬಳಸಿಕೊಂಡ ಜಡೇಜ ಭರ್ಜರಿಯಾಗಿ ಸಿಕ್ಸರ್ ಪೋರ್ ಗಳನ್ನು ಬಾರಿಸುತ್ತಾ 69 ರನ್ನುಗಳನ್ನು ಗಳಿಸಿದ್ದು ಆತನ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಲ್ಲದೇ ಬೌಲೀಂಗ್ ಮಾಡುವಾಗಲೂ 3 ವಿಕೆಟ್ ಗಳಿಸಿದ್ದಲ್ಲದೇ ಒಂದು ಅಮೋಘವಾದ ರನ್ ಔಟಿಗೂ ಕಾರಣರಾಗಿ ತಂಡದ ಗೆಲುವಿಗೆ ರೂವಾರಿಯಾದರು.

srh_short_runಅದೇ ರೀತಿ ದೆಹಲಿ ಮತ್ತು ಹೈದರಾಬಾದಿನ ಎರಡನೇ ಪಂದ್ಯದಲ್ಲೂ ಇದೇ ರೀತಿಯ ಆತ್ಮ ವಿಶ್ವಾಸ ಮತ್ತು ಅತಿಯಾದ ಆತ್ಮವಿಶ್ವಾಸಗಳಿಂದಾಗಿ ಸೋಲುವಂತಿದ್ದ ಪಂದ್ಯ ಸಮಸ್ಥಿತಿಗೆ ತಲುಪಿ ನಂತರ ಗೆಲ್ಲಬಹುದಾಗಿದ್ದ ಪಂದ್ಯವನ್ನು ಸೋಲಬೇಕಾದದ್ದು ಸೋಜಿಗವೇ ಸರಿ. ದೆಹಲಿ ನೀಡಿದ ಗೌರವಯುತ ಮೊತ್ತವಾದ 159 ರನ್ನುಗಳನ್ನು ಬೆನ್ನತ್ತಿದ್ದ ಹೈದರಾಬಾದ್ ತಂಡ ಒಂದು ಕಡೆ ನಿರಂತರವಾಗಿ ವಿಕೆಟ್ ಕಳೆದುಕೊಂಡಿದ್ದರೂ ಬಂಡೆ ಕಲ್ಲಿನಂತೆ ಒಂದು ಕಡೆ ಆಡುತ್ತಲೇ ಹೋದ ಕೇನ್ ವಿಲಿಯಮಸನ್ ಅಂತಿಮ ಓವರಿನಲ್ಲಿ ನಮ್ಮ ಕನ್ನಡಿಗ ಸುಚಿತ್ ಅವರ ಭರ್ಜರಿ ನಾಲ್ಕು ಮತ್ತು ಆರು ರನ್ನುಗಳ ಹೊಡೀ ಬಡೀ ಆಟದಿಂದ ಸೋಲುತ್ತಿದ್ದ ಪಂದ್ಯವನ್ನು ಟೈ ಮಾಡಿಕೊಳ್ಳುವುದರಲ್ಲಿ ಸಫಲವಾದರೆ, ಮತ್ತೆ ಆಟಕ್ಕೆ ಅದೇ ಪಂದ್ಯದಲ್ಲಿ ಉತ್ತಮವಾಗಿಯೇ ರನ್ನುಗಳನ್ನು ಗಳಿಸಿದ್ದ ಬರಿಸ್ಟೋವ್ ಮತ್ತು ವಿಲಿಯಮ್ ಸನ್ ಅವರನ್ನು ಕಳುಹಿಸಿದದೇ ಈ ಪಂದ್ಯಾವಳಿಯಲ್ಲಿ ರನ್ನುಗಳಿಗಾಗಿ ಪರದಾಡುತ್ತಿರುವ ನಾಯಕ ವಾರ್ನರ್ ಆಡುವುದಕ್ಕಾಗಿ ಬಂದು ಕಡೆಯಲ್ಲಿ ಓಡಿದ ಎರಡು ರನ್ನುಗಳಲ್ಲಿ ಒಂದು ಶಾರ್ಟ್ ಆದ ಕಾರಣ ಪಂದ್ಯ ಸೋಲುವಂತಾಗಿದ್ದು ಮತ್ತದೇ ನಾಯಕನೆಂಬ ಹಮ್ಮು ಮತ್ತು ಅತೀಯಾದ ವಿಶ್ವಾಸ.

ಈ ಎಲ್ಲಾ ಪ್ರಸಂಗಗಳನ್ನೂ ನೋಡುತ್ತಿದ್ದಾಗ ಧರ್ಮ ಸಂಸ್ಥಾಪನೆಗಾಗಿ ತ್ರೇತಾಯುಗದಲ್ಲಿ ಜನಿಸಿದ ರಾಮ ಮತ್ತು ದ್ವಾಪರಯುಗದಲ್ಲಿ ಆವತರಿಸಿದ ಕೃಷ್ಣ ಅವರ ತಂತ್ರಗಾರಿಗೆ ಯಿಂದ ನಮ್ಮವರು ಇನ್ನೂ ಕಲಿಯಲಿಲ್ಲವಲ್ಲಾ ಎಂಬ ಬೇಸರ ಮೂಡಿಸಿತು. ತ್ರೇತಾಯುಗದಲ್ಲಿ ಸೀತಾನ್ವೇಷಣೆಯ ಸಮಯದಲ್ಲಿ ರಾಮನ ಜೊತೆಗೆ ಇದ್ದದ್ದು ಕೌಶಲ್ಯರಹಿತ(unskilled) ಕಪಿಸೇನೆ. ಹಾಗಾಗಿ ಆ ಸಂದರ್ಭದಲ್ಲಿ ರಾಮನೇ ಪ್ರತಿಯೊಂದು ಕೆಲಸದಲ್ಲಿಯೂ ನೇತೃತ್ವವಹಿಸಿ ಯುದ್ಧದಲ್ಲಿ ಶಸ್ತ್ರಾಸ್ತ್ರವನ್ನು ಹಿಡಿಯಬೇಕಿತ್ತು. ಆದರೆ ದ್ವಾಪರಯುಗದಲ್ಲಿ ಕೃಷ್ಣನ ಜೊತೆಗೆ ಇದ್ದದ್ದು ವಿದ್ಯಾವಂತ ನುರಿತ(skilled) ಪಾಂಡವರು. ಹಾಗಾಗಿ ಕೃಷ್ಣ ಎಲ್ಲೂ ತಾಳ್ಮೆ ಗೆಡದೇ ತನ್ನೊಂದಿಗೆ ಅತಿರಥ ಮಹಾರಥರು ಇದ್ದಾರೆ ಎನ್ನುವ ಅತಿಯಾದ ಆತ್ಮವಿಶ್ವಾಸ ಇಟ್ಟುಕೊಳ್ಳದೇ, ಎಲ್ಲದ್ದಕ್ಕಿಂತಲೂ ಮುಖ್ಯವಾಗಿ ಇಡೀ ಯುದ್ಧದಲ್ಲಿ ತನ್ನ ಅಸ್ತ್ರವನ್ನೇ ಬಳಸದೇ ಕೇವಲ ತನ್ನ ತಂತ್ರಗಾರಿಕೆಯನ್ನು ಪಾಂಡವರ ಮೇಲೆ ಪ್ರಯೋಗಿಸಿ (ಜರಾಸಂಧ ವಧೆಯಲ್ಲಿ ಅರಳಿ ಎಲೆಯನ್ನು ಸೀಳಿ ಅಕ್ಕ ಪಕ್ಕದಲ್ಲಿ ಎಸೆದದ್ದು, ಭೀಮ ದುರ್ಯೋಧನರ ಮಹಾಕಾಳಗಲ್ಲಿ ಭಲೇ ಭೀಮಾ ಭಲೇ ಎಂದು ತೊಡೆ ತಟ್ಟಿ ತೋರಿಸಿದ್ದು, ಕುರುಕ್ಷೇತ್ರದಲ್ಲಿ ಅರ್ಜುನನ ಸಾರಥಿಯಾಗಿ ಕಾಪಾಡಿದ್ದು) ಅಧರ್ಮೀಯರನ್ನು ನಾಶ ಮಾಡಿ ಧರ್ಮವನ್ನು ಕಾಪಾಡಿದನು.

vACಅದೇ ರೀತಿಯಲ್ಲಿ ಮೊದಲ ಬಾರಿ ಕೊರೋನಾ ಬಂದಾಗ ಅಥವಾ ಆರಂಭದ ಪಂದ್ಯಗಳಲ್ಲಿ ವೈರಾಣುವಿನ ತೀವ್ರತೆ ಅಥವಾ ತಂಡದ ಶಕ್ತಿಯ ಪರಿಚಯ ಸರಿಯಾಗಿ ಇರದ ಕಾರಣ ವ್ಯಕ್ತಿಗತವಾಗಿಯೂ ಮತ್ತು ತಂಡದ ನಾಯಕನಾಗಿ ಬಹಳ ಎಚ್ಚರಿಕೆಯಿಂದ ಸ್ವತಃ ಪರಿಸ್ಥಿತಿಯನ್ನು ರಾಮನಂತೆ  ನಿಭಾಯಿಸ ಬೇಕಾಗುತ್ತದೆ. ಅದೇ ಎರಡನೇ ಹಂತದಲ್ಲಿ ಪರಿಸ್ಥಿತಿಯ ತೀವ್ರತೆಯ ಅರಿವು ಇರುತ್ತದೆ. ಅದನ್ನು ಹೇಗೆ ಪರಿಹರಿಸಬಹುದು ತನ್ನ ಜೊತೆಗೆ ತಂಡದ ಶಕ್ತಿ ಮತ್ತು ದೌರ್ಬಲ್ಯಗಳ ಅರಿವು ಇರುವಾಗ ಅದನ್ನು ತಾನು ಒಂದೆಡೆ ಬಂಡೆಯಾಗಿ ನಿಂತು ಕೃಷ್ಣನ ಹಾಗೆ ನಿಭಾಯಿಸಬೇಕಾಗುತ್ತದೆ.

ಆಟ ಆಡುವಾಗಲೀ, ಇಲ್ಲವೇ ವಯಕ್ತಿಕ ಜೀವನದ ಸಮಸ್ಯೆಗಳನ್ನು ನಿಭಾಯಿಸುವಾಗಲೀ ಅಥವಾ ಕೊರೋನಾ ಸಾಂಕ್ರಾಮಿಕ ರೋಗವನ್ನು ಎದುರಿಸುವಾಗಲೀ ಸಮಸ್ಯೆಯನ್ನು ತೀರ ಸರಳವಾಗಲೀ ಇಲ್ಲವೇ ಅತಿಯಾದ ಆತ್ಮವಿಶ್ವಾಸದಿಂದಾಗಲೀ ಎದುರಿಸದೇ ಆಟ ಇನ್ನೂ ಬಾಕೀ ಇದೇ ಎಂದು ಭಾವಿಸುತ್ತಲೇ ನಮ್ಮ ಹಿರಿಯರು ಪುರಾಣ ಪುಣ್ಯಕಥೆಗಳಲ್ಲಿ ತಿಳಿಸಿರುವಂತೆ ತಾಳ್ಮೆಯಿಂದ ತಂತ್ರಗಾರಿಕೆಯಿಂದ ಮತ್ತು ಎಚ್ಚರಿಕೆಯಿಂದ ನಿಭಾಯಿಸುವುದು ಉತ್ತಮ ಬೆಳವಣಿಗೆಯಾಗಿದೆ.

lockdownಹೇಗೂ  ಇನ್ನು ಹದಿನೈದು ದಿನಗಳ ಕಾಲ ಲಾಕ್ಡೌನ್ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಹಾಯಾಗಿ ಮನೆಯಲ್ಲೇ ತೆಪ್ಪಗೆ IPL & BigBoss ನೋಡಿಕೊಂಡು ರಾಮ ಕೃಷ್ಣಾ ಗೋವಿಂದಾ ಎನ್ನುತ್ತಾ ಇದ್ದು ಕೊರೋನಾದಿಂದ ಸುರಕ್ಷಿತವಾಗಿರೋಣ ಅಲ್ವೇ?

ಕಡೇ ಮಾತು ನಮ್ಮ ಶಾಸ್ತ್ರ ಪುರಾಣಗಳಲ್ಲಿ ಹೇಳುತ್ತಿದ್ದದನ್ನು ಆಡಿಕೊಳ್ಳುತ್ತಿದ್ದವರೆಲ್ಲಾ ಈಗ ಅದನ್ನೇ ವೇದವಾಕ್ಯ ಎಂದು ಪಾಲಿಸುತ್ತಿರವುದು ನಿಜಕ್ಕೂ ಹೆಮ್ಮೆ ಎನಿಸುತ್ತಿದೆ.

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ಆಟ ಇನ್ನೂ ಬಾಕೀ ಇದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s