ನಮ್ಮೆಲ್ಲರಿಗೂ ತಿಳಿದಿರುವಂತೆ ಶ್ರೀರಾಮ ಅಯೋಧ್ಯೆಯ ಮೂಲದವನು ಮತ್ತು ವನವಾಸದಲ್ಲಿದ್ದಾಗ ಕಳೆದು ಹೋದ ತನ್ನ ಪತ್ನಿಯನ್ನು ಹುಡುಕುತ್ತ ದಕ್ಷಿಣ ಭಾಗದಲ್ಲಿ ಬರುತ್ತಿದ್ದಾಗ ಅವನಿಗೆ ಈಗಿನ ವಿಜಯನಗರ ಸಾಮ್ರಾಜ್ಯದ ಹಂಪೆಯ ಹತ್ತಿರವಿರುವ ಆನೆಗುಂದಿ ಬಳಿಯ ಅಂಜನಾದ್ರಿ ಬೆಟ್ಟ ಪ್ರದೇಶದಲ್ಲಿ ಪರಿಚಯವಾಗಿ ಸೀತಾ ಮಾತೆಯನ್ನು ಹುಡುಕಲು ಸಹಕರಿಸಿ, ಲಂಕಾ ದಹನ ಮಾಡಿ, ರಾಮ ರಾವಣರ ಯುಧ್ಧದಲ್ಲಿ ಪ್ರಮುಖ ಪಾತ್ರವಹಿಸಿ ಕಡೆಗೆ ರಾಮ ಸೀತೆಯರನ್ನು ತನ್ನ ಹೃದಯದಲ್ಲೇ ಪ್ರತಿಷ್ಠಾಪನೆಗೊಳಿಸಿ ಕೊಂಡವನು.
ಇಂದು ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ. ಇದೇ ದಿನ ರಾಮನ ಪರಮ ಭಕ್ತ ಅಂಜನಿಯ ಪುತ್ರ ಆಂಜನೇಯನು ಹುಟ್ಟಿದ ಎಂದು ನಮ್ಮ ಪುರಾಣಗಳಲ್ಲಿ ಹೇಳಲಾಗಿರುವ ಪರಿಣಾಮ ದೇಶಾದ್ಯಂತ ಇಂದು ಬಹಳ ಸಂಭ್ರಮ ಸಡಗರಗಳಿಂದ ಹನುಮ ವರ್ಧಂತಿಯನ್ನು ಆಚರಿಸಲಾಗುತ್ತದೆ. ಅರೇ ಇದೇನು? ಎಲ್ಲರೂ ಹನುಮ ಜಯಂತಿ ಎಂದು ಹೇಳುವಾಗ, ಇದೇನೂ ವರ್ಧಂತಿ? ಎಂದು ಅಚ್ಚರಿ ಪಟ್ಟರೆ, ಮೃತಪಟ್ಟವರ ಹುಟ್ಟಿದ ಹಬ್ಬವನ್ನು ಜಯಂತಿ (ಗಾಂಧಿ ಜಯಂತಿ) ಎಂದು ಆಚರಿಸುತ್ತೇವೆ ಮತ್ತು ಬದುಕಿದ್ದವರ ಆಯಸ್ಸು ವೃದ್ಧಿಯಾಗುವ ಸಲುವಾಗಿ ವರ್ಧಂತಿ ಎಂದು ಆಚರಿಸುತ್ತೇವೆ. ಹನುಮಂತ ಚಿರಂಜೀವಿ ಆದ ಕಾರಣ ಆತನಿಗೆ ಸಾವಿಲ್ಲ. ಹಾಗಾಗಿ ಇಂದಿನ ದಿನವನ್ನು ಹನುವ ವರ್ಧಂತಿ ಎನ್ನುವುದೇ ಸೂಕ್ತ. ಹನುಮಂತನ ಆರಾಧ್ಯ ದೈವ ಪ್ರಭು ಶೀರಾಮಚಂದ್ರ ಚೈತ್ರ ಮಾಸ ಶುದ್ಧ ನವಮಿಯಂದು ಜನಿಸಿದರೆ ಅವನ ಪರಮ ಭಕ್ತ ಹನುಮಂತ ಅದೇ ಹುಣ್ಣಿಮೆಯಂದು ಜನಿಸಿರುವ ಮೂಲಕ ಇಲ್ಲೂ ಗುರು ಶಿಷ್ಯರ ಅವಿನಾಭಾವ ಸಂಬಂಧಕ್ಕೆ ಜ್ವಲಂತ ಉದಾಹರಣೆಯಾಗಿದ್ದಾರೆ.
ಅದೇಕೋ ಏನು ಹನುಮನ ಕುರಿತು ನಾನಾ ಜಿಜ್ಞಾಸೆಗಳು ನಮ್ಮಲ್ಲಿವೆ. ಕೆಲವೊಬ್ಬರ ಪ್ರಕಾರ ಹನುಮ ಹುಟ್ಟಿದ್ದು ಕಾರ್ತಿಕ ಕೃಷ್ಣ ಚತುರ್ದಶಿ ಎಂದರೆ ಆಂಧ್ರ ಪ್ರದೇಶದ ತೆಲಂಗಾಣದವರು ವೈಶಾಖ ಶುದ್ಧ ಪೌರ್ಣಮಿಯಂದು ಆಚರಿಸಿದರೆ, ತಮಿಳುನಾಡಿನಲ್ಲಿ ಮಾರ್ಗಶಿರ ಅಮಾವಾಸ್ಯೆಯಂದು ಆಚರಿಸುತ್ತಾರಾದರು ಕರ್ನಾಟಕ ಮತ್ತು ದೇಶಾದ್ಯಂತ ಚೈತ್ರ ಶುಕ್ಲ ಹುಣ್ಣಿಮೆಯಂದು ಆಚರಿಸುವ ಸಂಪ್ರದಾಯವಿದೆ.
ಇನ್ನು ಐತಿಹ್ಯದ ಮತ್ತು ಪುರಾಣ ಶಾಸ್ತ್ರಗಳ ಪ್ರಕಾರ ಹನುಮಂತ ಹುಟ್ಟಿದ್ದು ಕರ್ನಾಟಕದ ಐತಿಹಾಸಿಕ ಹಂಪಿ ಬಳಿ ಇರುವ ಕಿಷ್ಕಿಂಧೆಯ ಅಂಜನಾದ್ರಿ ಬೆಟ್ಟದಲ್ಲಿ ಎಂದು ಸಹಸ್ರಾರು ವರ್ಷಗಳಿಂದಲೂ ನಂಬಿಕೊಂಡು ಬರಲಾಗಿದೆ ಅದಕ್ಕೆ ಪುರಾವೆಯಾಗಿ ಪಂಪ ಸರೋವರ, ವಾಲಿ ಸುಗ್ರೀವನು ರಾಜನಾಗಿದ್ದ ಸ್ಥಳ ಕಿಷ್ಮಿಂದೆ ಹನುಮಂತನ ತಂದೆ ಕೇಸರಿಯು ಮತ್ತು ತಾಯಿ ವಾಸವಾಗಿದ್ದ ಅಂಜನಾದ್ರಿ ಬೆಟ್ಟ ಎಲ್ಲವೂ ಪೂರಕವಾಗಿ ಸಾಕ್ಷಿಯಾಗಿದೆ. ಇನ್ನೂ ಕೆಲವರು ಗೋಕರ್ಣದ ಬಳಿ ಆಂಜನೇಯ ಹುಟ್ಟಿದ ಎಂದು ಹೇಳಿದರೆ, ಮತ್ತೆ ಕೆಲವರ ಪ್ರಕಾರ ಗುಜರಾತ್‌ನ ಡಾಂಗ್ ಜಿಲ್ಲೆಯ ಗುಹೆಯಲ್ಲಿ ಅಂಜನಿಗೆ ಪುತ್ರನಾಗಿ ಆಂಜನೇಯನು ಜನಿಸಿದನೆಂದು ಹೇಳಲಾಗುತ್ತದೆ. ಇವೆಲ್ಲದರ ಮಧ್ಯೆ ಹಿಂದೂಗಳ ಶ್ರದ್ಧಾ ಕೇಂದ್ರ ಸಪ್ತಗಿರಿಯ ಬೆಟ್ಟಗಳಲ್ಲಿ ಕ್ರೈಸ್ತರ ಚರ್ಚುಗಳನ್ನು ಮತ್ತು ಮುಸಲ್ಮಾನರ ಶ್ರದ್ಧಾಕೇಂದ್ರವನ್ನು ಬೆಳೆಯಲು ಅನುವು ಮಾಡಿಕೊಟ್ಟಿರುವ ಟಿಟಿಡಿ ತಿರುಪತಿಯೇ ಆಂಜನೇಯಮ ಜನ್ಮಸ್ಥಾನ ಎಂಬಾ ವರಾತೆ ತೆಗೆದಿರುವುದು ನಿಜಕ್ಕೂ ಆಶ್ಚರ್ಯವಾಗಿದೆ. ಅವರವರ ಭಾವಕ್ಕೆ ಅವರವರ ಭಕುತಿ ಎನ್ನುವಂತೆ ಎಲ್ಲರಿಗೂ ಹನುಮ ನಮ್ಮವನೇ ಎಂಬ ಪ್ರೀತಿ ಈ ಮೂಲಕ ವ್ಯಕ್ತವಾಗುತ್ತಿದೆ.
ಒಟ್ಟಿನಲ್ಲಿ ಪ್ರಭು ಶ್ರೀರಾಮನನ್ನು ಒಲಿಸಿಕೊಳ್ಳಲು ಅವನ ಪರಮ ಭಕ್ತನಾದ ಆಂಜನೇಯನನ್ನು ಆರಾಧನೆ ಮಾಡುವುದೇ ಉತ್ತಮ ಎಂದು ಭಾವಿಸಿದಂತಿದೆ. ಎಲ್ಲಿ ಹನುನೋ ಅಲ್ಲಿ ರಾಮನು. ರಾಮನ ಉಸಿರೇ ಹನುಮ. ಹನುಮನ ಪ್ರಾಣವೇ ರಾಮಾ.. ಎನ್ನುವಂತೆ ಹನುಮ ಜಯಂತಿಯ ದಿನ ಶ್ರೀ ರಾಮನ ಆರಾಧನೆಯನ್ನೂ ಅತ್ಯಂತ ವೈಭವೋಪೇತವಾಗಿ ಮಾಡಲಾಗುತ್ತದೆ.
ಹನುಮ ವರ್ಧಂತಿಯಂದು ಪವಿತ್ರ ನದಿ ಮತ್ತು ಕಲ್ಯಾಣಿಗಳಲ್ಲಿ ಸ್ನಾನ ಮಾಡಿ ಅಲ್ಲಿನ ಪವಿತ್ರ ನೀರಿನಿಂದ ಆಂಜನೇಯ ಮತ್ತು ಶ್ರೀರಾಮ ಚಂದ್ರರಿಗೆ ಅಭಿಷೇಕ ಮಾಡಿ ಹನುಮನಿಗೆ ಸಿಂಧೂರ ತಿಲಕವನ್ನಿಟ್ಟು, ಬಗೆ ಬಗೆಯ ಹೂವುಗಳಿಂದ ಅಲಂಕರಿಸಿ, ಶೋಡಶೋಪಚಾರ ಪೂಜೆ ಮಾಡಿ ಹನುಮನಿಗೆ ಪ್ರಿಯವಾದ ಲಾಡು ಮತ್ತು ಬಾಳೆಹಣ್ಣುಗಳನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಇನ್ನು ಭಕ್ತಾದಿಗಳು ಹನುಮಾನ್ ಚಾಲೀಸ್, ಸುಂದರ ಕಾಂಡ, ಭಜರಂಗ ಬಾನ್ ಮತ್ತು ರಾಮಾಯಣವನ್ನು ಪಠಿಸುವ ಮೂಲಕ ಆಂಜನೇಯನಿಗೆ ತಮ್ಮ ಭಕ್ತಿಯನ್ನು ಅರ್ಪಿಸುತ್ತಾರೆ.
ಕೆಲ ವರ್ಷಗಳ ಹಿಂದೆ ನಮ್ಮ ವಿದ್ಯಾರಣ್ಯಪುರದ ಮುಖ್ಯರಸ್ತೆಯಲ್ಲಿ ಹೋಗುತ್ತಿರುವಾಗ ಇದ್ದಕ್ಕಿದ್ದಂತೆಯೇ ಕನ್ನಡದಲ್ಲಿ ಪೂಜೆ ಮಾಡುತ್ತಿರುವುದನ್ನು ಕೇಳಿ ಅರೇ, ಹಿರೇಮಗಳೂರು ಕಣ್ಣನ್ ಅವರು ನಮ್ಮ ವಿದ್ಯಾರಣ್ಯಪುರಕ್ಕೆ ಬಂದಿದ್ದಾರೆಯೇ ? ಎಂದು ಕುತೂಹಲದಿಂದ ಆ ಮಂತ್ರ ಪಠಣವಾಗುತ್ತಿರುವನ್ನೆ ಆಲಿಸುತ್ತಲೇ ಹೋದಾಗ ಕಣ್ಣಿಗೆ ಬಿದ್ದದ್ದೇ ವಿದ್ಯಾರಣ್ಯಪುರದ ಬಸ್ ನಿಲ್ದಾಣದ ಎರುರುಗಡೆ ಇರುವ ಸೀತಾರಾಮಾಂಜನೇಯ ದೇವಸ್ಥಾನ.
ಸುಮಾರು ಎಪ್ಪತ್ತರ ದಶಕದಲ್ಲಿ ಬಿಇಎಲ್ ಮತ್ತು ಹೆಚ್ಎಂಟಿ ಕಾರ್ಖಾನೆಯಲ್ಲಿ ಕೆಲಸಮಾಡುತ್ತಿದ್ದ ಮಧ್ಯಮ ವರ್ಗದ ನೌಕರರು ತಮ್ಮ ಕಾರ್ಖಾನೆಗೆ ಸಮೀಪದಲ್ಲೇ ತಮ್ಮದೇ ಆದ ಸ್ವಂತ ಮನೆಗಳನ್ನು ನಿರ್ಮಿಸಿಕೊಳ್ಳುವ ಸಲುವಾಗಿ ತಮ್ಮ ಗೃಹನಿರ್ಮಾಣ ಸಂಘಗಳನ್ನು ರಚಿಸಿಕೊಂಡು ರಾಮಚಂದ್ರಪುರ, ತಿಂಡ್ಲು ಮತ್ತು ನರಸೀಪುರ ಗ್ರಾಮಗಳಲ್ಲಿ ತಮ್ಮ ಬಡಾವಣೆಗಳನ್ನು ರಚಿಸಿಕೊಂಡು ಅದಕ್ಕೆ ಬಹುಮನಿ ಸುಲ್ತಾನರ ದಾಳಿಯಿಂದ ತತ್ತರಿಸಲ್ಪಟ್ಟು ದಕ್ಷಿಣ ಭಾರತದಲ್ಲಿ ಹಿಂದೂಗಳೆಲ್ಲರೂ ತತ್ತರಿಸುತ್ತಾ ಇನ್ನೇನು ಹಿಂದೂಗಳೆಲ್ಲರೂ ಅನ್ಯಮತಕ್ಕೆ ಬಲವಂತವಾಗಿ ಮತಾಂತರವಾಗಲೇ ಬೇಕೆಂಬ ಅನಿವಾರ್ಯ ಸಂಧಿಗ್ಧ ಸಂದರ್ಭ ಒದಗಿ ಬಂದಿದ್ದಂತಹ ಪರಿಸ್ಥಿತಿಯಲ್ಲಿ ಹಕ್ಕ ಬುಕ್ಕರೆಂಬ ಸಾಮಾನ್ಯರಿಗೆ ಶಕ್ತಿ ತುಂಬಿ ಅವರಿಂದ ಪ್ರಭಲ ಹಿಂದೂ ಮಹಾಸಾಮ್ರಾಜ್ಯವನ್ನು ವಿಜಯನಗರದಲ್ಲಿ ಸ್ಥಾಪಿಸಿದ ಹೆಗ್ಗಳಿಕೆಯ ಹೆಮ್ಮೆಯ ಗುರು ಶ್ರೀ ವಿದ್ಯಾರಣ್ಯರ ನೆನಪಿನಲ್ಲಿ ವಿದ್ಯಾರಣ್ಯಪುರ ಎಂದು ನಾಮಕರಣ ಮಾಡಿದರು.
ನಿಧಾನವಾಗಿ ಎಂಬತ್ತರ ದಶಕದಲ್ಲಿ ಒಬ್ಬೊಬ್ಬರೇ ಅವರವರ ಅನುಕೂಲಕ್ಕೆ ತಕ್ಕಂತೆ ಮನೆಗಳನ್ನು ಕಟ್ಟಿ ಕೊಳ್ಳಲಾರಂಭಿಸಿ, ಮನೆಗಳು ಹೆಚ್ಚಾದಂತೆಲ್ಲಾ ತಮ್ಮ ಧಾರ್ಮಿಕ ಚಟುವಟಿಕೆಗಳಿಗೆ ಶ್ರಧ್ಧಾ ಕೇಂದ್ರದ ಆವಶ್ಯಕತೆಯನ್ನು ಮನಗೊಂಡು ವಿದ್ಯಾರಣ್ಯಪುರದ ಕೊನೆಯ ಬಸ್ ನಿಲ್ದಾಣದ ಬಳಿ ಸ್ಥಳಿಯರ ಸಹಕಾರದಿಂದ ಸಣ್ಣದಾಗಿ ಅದಾಗಲೇ ಇದ್ದ ಹನುಂತನ ಗುಡಿಯನ್ನೇ ಸಣ್ಣ ಪ್ರಮಾಣದಲ್ಲಿ ಜೀರ್ಣೋದ್ಧಾರ ಮಾಡಿ ನಿತ್ಯ ಪೂಜೆ ಮಾಡಲಾರಂಭಿಸಿದರು.
ನೋಡ ನೋಡುತ್ತಿದ್ದಂತೆಯೇ ವಿದ್ಯಾರಣ್ಯ ಪುರ ಬೆಂಗಳೂರಿನಲ್ಲಿ ಅತೀ ವೇಗವಾಗಿ ಬೆಳೆದ ಬಡಾವಣೆಯಾಯಿತು. ಬಿಇಎಲ್ ಮತ್ತು ಹೆಚ್ಎಂಟಿ ಜೊತೆ ಎನ್.ಟಿ. ಐ, ರಕ್ಷಣಾ ಇಲಾಖೆಗಳ ಬಡಾವಣೆಯ ಜೊತೆಗೆ ಸಾಕಷ್ಟು ಖಾಸಗೀ ಬಡಾವಣೆಗಳು ತಲೆ ಎತ್ತಿ ಪ್ರತೀ ಬಡಾವಣೆಯ ಎರೆಡೆರಡು ಹಂತಗಳ ಮಧ್ಯದಲ್ಲೂ ವಿವಿಧ ದೇವಾಲಯಗಳು ಪ್ರತಿಷ್ಟಾಪಿಸಲ್ಪಟ್ಟವು. ಹಂಪೆಯಲ್ಲಿರುವ ತಾಯಿ ಭುವನೇಶ್ವರಿ ದೇವಿಯಂತೆ ನಮ್ಮ ವಿದ್ಯಾರಣ್ಯ ಪುರದಲ್ಲಿ ಶ್ರೀ ಕಾಳಿಕಾ ದುರ್ಗ ಪರಮೇಶ್ವರಿ ದೇವಸ್ಥಾನ ತಲೆಯೆತ್ತಿದರೆ ಉಳಿದಂತೆ ಗಣೇಶನ ಗುಡಿ, ಮತ್ತೊಂದು ಆಂಜನೇಯ, ಲಕ್ಷ್ಮೀವೆಂಕಟೇಶ್ವರ, ಶ್ರೀ ರಾಘವೇಂದ್ರ ಸ್ವಾಮಿ ಮಠ, ಶ್ರೀ ಶಿರಡಿ ಸಾಯಿ ಮಂದಿರ ಮಂಜುನಾಥೇಶ್ವರನ ಗುಡಿ ಹೀಗೆ ಅನೇಕ ದೇವಿಯರ ಗುಡಿಗಳೂ ವಿದ್ಯಾರಣ್ಯಪುರದಲ್ಲಿ ಕಟ್ಟಲ್ಪಟ್ಟು ಅಸ್ತಿಕರ ಪಾಲಿನ ಸ್ವರ್ಗವೆನೆಸಿರುವುದ್ದಂತೂ ಸುಳ್ಳಲ್ಲ.
ಇದೇ ಸಮಯದಲ್ಲಿ ಕೆಲ ಉತ್ಸಾಹಿ ತರುಣರೆಲ್ಲರೂ ಕೂಡಿ ಸಣ್ಣದಾಗಿದ್ದ ಆಂಜನೇಯನ ಗುಡಿಯನ್ನು ಭವ್ಯವಾಗಿ ಪುನರ್ನಿರ್ಮಾಣ ಮಾಡಲು ನಿರ್ಧರಿಸಿದಾಗ, ಕೆಲ ಹಿರಿಯರ ಸಲಹೆಯಂತೆ ಕೇವಲ ಆಂಜನೀಪುತ್ರನಲ್ಲದೆ ಅವನ ಆರಾಧ್ಯ ದೈವ ಸೀತಾ, ಲಕ್ಷ್ಮಣರ ಆದಿಯಾಗಿ ಪ್ರಭು ಶ್ರೀರಾಮಚಂದ್ರನ ದೇವಾಲಯವನ್ನು ಇದ್ದ ಸ್ಥಳದಲ್ಲಿಯೇ ಚೊಕ್ಕವಾಗಿ ಸುಮಾರು ಹತ್ತು ವರ್ಷಗಳ ಹಿಂದೆ ವಿದ್ಯಾರಣ್ಯಪುರಕ್ಕೆ ಕಳಸಪ್ರಾಯವಾಗಿ ನಿರ್ಮಿಸಿ ಅದಕ್ಕೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ ಎಂದು ಮರುನಾಮಕರಣ ಮಾಡಿದರು.
ಆರಂಭದ ದಿನಗಳಲ್ಲಿ ಶ್ರೀ ದುರ್ಗಾ ದೇವಸ್ಥಾನದ ಆಡಳಿತ ಮಂಡಳಿಯ ಸಹಕಾರದಿಂದ ಪೂಜೆ ಪುನಸ್ಕಾರಗಳು ಮತ್ತು ಪ್ರಸಾದ ವಿನಿಯೋಗಗಳು ನಡೆದುಕೊಂಡು ಬಂದು ಇತ್ತೀಚಿನ ಕೆಲ ವರ್ಷಗಳಲ್ಲಿ ಭಕ್ತಾದಿಗಳ ತನು ಮನ ಸಹಾಯ ಮತ್ತು ಚುರುಕಾದ, ಸದಾ ಹಸನ್ಮುಖಿ ಮತ್ತು ಜನಾನುರಾಗಿ ಅದಲ್ಲೂ ಸ್ವಚ್ಚವಾಗಿ ಅಚ್ಚ ಕನ್ನಡದಲ್ಲಿಯೂ ಪೂಜೆ ಮಾಡಬಲ್ಲ ಆರ್ಚಕರು ಇರುವ ಕಾರಣ ಪ್ರತಿ ನಿತ್ಯವೂ ಚಾಚೂ ತಪ್ಪದೆ ಭಗವಂತನ ಕೈಂಕರ್ಯ ನಿರ್ವಿಘ್ನವಾಗಿ ನಡೆದುಕೊಂಡು ಬರುತ್ತಿದೆ. ಇಲ್ಲಿನ ಸೇವಾಕಾರ್ಯಗಳು ಹೀಗೆಯೇ ನಿರಂತರವಾಗಿ ನೆಡೆದುಕೊಂಡು ಹೋಗಲು ಕೆಲ ಸಹೃದಯೀ ಭಕ್ತರ ಆರ್ಥಿಕ ನೆರವು ಸಿಕ್ಕಿದಲ್ಲಿ ಇನ್ನೂ ಅಳಿದುಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಿ, ದೇವಸ್ಥಾನದ ಪೂರ್ಣವಾಗಿ ಉತ್ತಮ ನೆಲಹಾಸುಗಳನ್ನು ಹಾಕಿಸಿ ಹಬ್ಬ ಹರಿದಿನಗಳು, ವಿಶೇಷ ದಿನಗಳು ಮತ್ತು ಭಜನಾ ದಿನಗಳಂದು ಇನ್ನೂ ಹೆಚ್ಚಿನ ಭಕ್ತರಿಗೆ ಅನುವು ಮಾಡಿ ಕೊಡಬಹುದು ಎಂಬುದು ಎಲ್ಲರ ಅಭಿಲಾಶೆಯಾಗಿದೆ.
ಕರೋನಾ ಪರಿಸ್ಥಿತಿಯಲ್ಲಿಯೂ ಸಾಂಕೇತಿಕವಾಗಿ ಸರಳವಾಗಿ ಹನುಮ ವರ್ಧಂತಿಯನ್ನು ಆಚರಿಸಲಾಗಿತ್ತು. ಕೆಲ ವರ್ಷಗಳ ಹಿಂದೆ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ತ್ರಯೋದಶಿಯಂದೂ ವಿಶೇಷವಾಗಿ ಹನುಮ ವರ್ಧಂತಿಯನ್ನು ಆಚರಿಸಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಅಂದು ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕರು, ಆಡಳಿತ ಮಂಡಳಿ ಮತ್ತು ಭಕ್ತರು ವೇದ ವಿದ್ವಾನ್ ಆಗಮ ಪಂಡಿತ ಶ್ರೀ ನರಸಿಂಹರಂಗನ್ ಮತ್ತು ತಂಡದವರ ನೇತೃತ್ವದಲ್ಲಿ ದೇವಸ್ಥಾನದಲ್ಲಿ ಶ್ರೀ ಸುದರ್ಶನ ಹೋಮವನ್ನು ಆಚರಿಸಿದ್ದರು. ಬೆಳಗಿನಿಂದಲೇ ಆರಂಭವಾಗಿದ್ದ ಸಂಭ್ರಮ ದೇವಸ್ಥಾನದಲ್ಲಿರುವ ಎಲ್ಲಾ ದೇವಾನು ದೇವತೆಗಳಿಗೂ ಸಾಂಗೋಪಾಂಗವಾಗಿ ಅಭಿಷೇಕ ಮತ್ತು ವಿಶೇಷ ಪೂಜೆಗಳು ನಡೆದು ನೋಡಲು ಎರಡು ಕಣ್ಣುಗಳು ಸಾಲದೇನೂ ಎನ್ನುವಂತೆ ಹೂವು ಮತ್ತು ಆಭರಣಗಳಿಂದ ಅಲಂಕರಗೊಂಡು ಸುಮಾರು ಹತ್ತು ಗಂಟೆಯ ವೇಳೆಗೆ ಆರಂಭವಾದ ಹೋಮ, ಸಕಲ ಆಸ್ತಿಕ ಭಕ್ತರ ನೆರವಿನಿಂದ ನಿರ್ವಿಘ್ನವಾಗಿ ನಡೆದು ಪೂರ್ಣಾಹುತಿ ಮತ್ತು ಮಹಾಮಂಗಳಾರತಿ ನಡೆಯುವ ವೇಳೆಗೆ ಗಂಟೆ ಎರಡಾಗಿತ್ತು. ನಂತರ ಹೋಮದಲ್ಲಿ ಭಾಗಿಯಾಗಿದ್ದ ಸಕಲ ಭಕ್ತಾದಿಗಳಿಗೂ ತೀರ್ಥ ಪ್ರಸಾದ ವಿತರಣೆಯೊಂದಿಗೆ ಬಾರೀ ವಿಜೃಂಭಣೆಯಿಂದ ಹನುಮಜ್ಜಯಂತಿ ಆಚರಿಸಿದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.
ಭಕ್ತರು ಎಲ್ಲಿಯೇ ಆಗಲಿ, ಹೇಗೆಯೇ ಆಗಲಿ, ಪ್ರೀತಿಯಿಂದ ಭಗವಂತನನ್ನು ನೆನೆದರೆ ಅವರ ಸಕಲ ಇಷ್ಟಾರ್ಥಗಳನ್ನು ನೀಗಿಸುತ್ತಾನಾದರೂ, ಭಗವಂತನನ್ನು ನೆನೆಯಲು, ಆರಾಧಿಸಲು ಅವನ ಸೇವೆಯನ್ನು ಮಾಡಲು ಮತ್ತು ಒಂದು ಧನಾತ್ಮಕ ಚಿಂತನೆಯಿಂದ ಧ್ಯಾನಿಸಲು ಒಳ್ಳೆಯ ಆಲಯವಿರಬೇಕು. ನಮ್ಮ ವಿದ್ಯಾರಣ್ಯಪುರದ ಸೌಭಾಗ್ಯವೆಂದರೆ ಅಂತಹ ಅನೇಕ ದೇವಾಲಯಗಳಿವೆ. ನಾವುಗಳು ಕೇವಲ ಸ್ವಲ್ಪ ಸಮಯ ಮಾಡಿಕೊಂಡು ನಮ್ಮ ಕುಟುಂಬವರ್ಗ ಮತ್ತು ಸ್ನೇಹಿತರೊಂದಿಗೆ ಹೋಗಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕಷ್ಟೇ. ಎಲ್ಲರಿಗೂ ಮತ್ತೊಮ್ಮೆ ಹನುಮ ವರ್ಧಂತಿಯ ಶುಭಾಶಯಗಳು.
ಏನಂತೀರೀ?
ನಿಮ್ಮವನೇ ಉಮಾಸುತ