ಹೇಳಿ ಕೇಳಿ ಇದು ಮಾವಿನ ಕಾಯಿ ಕಾಲ. ಈಗಷ್ಟೇ ಮಾವಿನ ಕಾಯಿಗಳು ಚೆನ್ನಾಗಿ ಬಲಿತು ಇನ್ನೇನು ಕೆಲವೇ ದಿನಗಳಲ್ಲಿ ಬಗೆ ಬಗೆಯ ಮಾವಿನ ಹಣ್ಣುಗಳು ಲಗ್ಗೆ ಇಡಲು ಸಜ್ಜಾಗಿವೆ (ಈಗಾಗಲೇ ಕೆಲವು ಮಾವಿನ ಹಣ್ಣುಗಳು ಲಭ್ಯವಿದೆ) ಈ ಬಲಿತ ಮಾವಿನ ಕಾಯಿಯಲ್ಲಿ ಉಪ್ಪಿನಕಾಯಿ, ಮಾವಿನ ಕಾಯಿ ಚಿತ್ರಾನ್ನ, ಮಾವಿನಕಾಯಿ ಕಾಯಿ ಸಾಸಿವೆ ಮಾಡಿಕೊಂಡು ಚಪ್ಪರಿಸುತ್ತೇವೆ. ಇಂದು ಉತ್ತರ ಕನ್ನಡ ಮತ್ತು ಮಲೆನಾಡಿನ ಕಡೆಯಲ್ಲಿ ಇದೇ ಮಾವಿನ ಕಾಯಿಯನ್ನು ಬಳಸಿಕೊಂಡು ಮಾಡುವ ಧಿಡೀರ್ ಆಗಿ ಅಪ್ಪೆ ಸಾರು ಮಾಡುವ ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.
ಸುಮಾರು 4-5 ಜನರು ಸವಿಯಬಹುದಾದಷ್ಟು ಅಪ್ಪೆ ಸಾರು ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಬಲಿತ ಮಾವಿನಕಾಯಿ – 1
- ಹಸೀ ಮೆಣಸಿನಕಾಯಿ – 3 ರಿಂದ 4
- ಕರೀಬೇವು – 5-6 ಎಲೆಗಳು
- ಬೆಳ್ಳುಳ್ಳಿ – 2-3 ಎಸಳುಗಳು (ಐಚ್ಚಿಕ)
- ಬೆಲ್ಲ – 1 ಚಮಚ
- ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು
- ತುಪ್ಪಾ/ಕೊಬ್ಬರೀ ಎಣ್ಣೆ – 1 ಚಮಚ
- ಜೀರಿಗೆ – 1/2 ಚಮಚ
- ಸಾಸಿವೆ – 1/2 ಚಮಚ
- ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಚಮಚ
- ಚಿಟುಕಿ ಇಂಗು
- ಚಿಟುಕಿ ಅರಿಶಿನ
ಅಪ್ಪೆ ಸಾರು ತಯಾರಿಸುವ ವಿಧಾನ
- ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಒರಸಿಕೊಂಡು ಸಿಪ್ಪೇ ತೆಗೆದು ಸಣ್ಣ ಸಣ್ಣ ಹೋಳುಗಳಾಗಿ ಕತ್ತರಿಸಿಕೊಂಡು ಒಂದು ಪಾತ್ರೆಯಲ್ಲಿ ಒಂದು ಲೋಟ ನೀರು ಹಾಕಿ ಚೆನ್ನಾಗಿ ಬೇಯಿಸಿಟ್ಟು ಕೊಳ್ಳಿ
- ಬೇಯಿಸಿದ ಮಾವಿನ ಕಾಯಿ ಆರಿದ ನಂತರ ಅದರ ಜೊತೆಗೆ ಹಸೀಮೆಣಸಿನಕಾಯಿ, ಕರಿಬೇವು, ಇಷ್ಟವಿದ್ದಲ್ಲಿ ಬೆಳ್ಳುಳ್ಳಿಯನ್ನು ಸೇರಿಸಿ, ರುಚಿಗೆ ತಕ್ಕಷ್ಟು ಕಲ್ಲುಉಪ್ಪನ್ನು ಹಾಕಿಕೊಂಡು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ
- ಬಾಣಲೆಯಲ್ಲಿ ಒಂದು ಚಮಚ ತುಪ್ಪವನ್ನು ಹಾಕಿ (ಕೊಬ್ಬರಿ ಎಣ್ಣೆ ಹಾಕಿದಲ್ಲಿ ಮತ್ತಷ್ಟು ರುಚಿ ಕೊಡುತ್ತದೆ) ಅದಕ್ಕೆ ಸಾಸಿವೆ ಮತ್ತು ಜೀರಿಗೆಯನ್ನು ಹಾಕಿ ಚಟ ಪಟ ಬರುವಷ್ಟು ಸಿಡಿಸಿಕೊಳ್ಳಿ
- ಸಿದ್ಧ ಪಡಿಸಿದ ಒಗ್ಗರಣೆಗೆ ರುಬ್ಬಿಟ್ಟುಕೊಂಡ ಮಾವಿನಕಾಯಿ ಮಿಶ್ರಣವನ್ನು ಹಾಕಿ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಬೆರಸಿ
- ಕುದಿಯುತ್ತಿರುವ ಸಾರಿಗೆ ರುಚಿಗೆ ತಕ್ಕಷ್ಟು ಬೆಲ್ಲ ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಒಂದು ಕುದಿ ಕುದಿಸಿದಲ್ಲಿ ರುಚಿ ರುಚಿಯಾದ ಅಪ್ಪೆ ಸಾರು ಸವಿಯಲು ಸಿದ್ಧ.
ಸ್ವಲ್ಪ ಗಟ್ಟಿಯಾಗಿ ಮಾಡಿದಲ್ಲಿ ಇದನ್ನು ರೊಟ್ಟಿ ದೋಸೆ, ಚಪಾತಿಗಳಲ್ಲದೇ, ಅನ್ನದ ಜೊತೆಯೂ ಕಲಸಿಕೊಂಡು ತಿನ್ನಲು ಮಜವಾಗಿರುತ್ತದೆ. ಇಲ್ಲದಿದ್ದಲ್ಲಿ ಸ್ವಲ್ಪ ಹೆಚ್ಚಾಗಿ ನೀರು ಬೆರೆಸಿ ತಿಳೀ ಸಾರಿನಂತೆಯೂ ಕುಡಿಯಲು ಮಜವಾಗಿರುತ್ತದೆ.
ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.
ಏನಂತೀರೀ?
ನಿಮ್ಮವನೇ ಉಮಾಸುತ
ಮನದಾಳದ ಮಾತು : ಈ ಬೇಸಿಗೆ ಕಾಲದಲ್ಲಂತೂ ಬಿಸಿಲಿನ ಪ್ರಮಾಣ ಜಾಸ್ತಿಯಾಗಿ ಮೈಯಲ್ಲಿರುವ ನೀರಿನ ಪ್ರಮಾಣವೆಲ್ಲಾ ಬೆವರಿನ ಮೂಲಕ ಹೊರ ಹೋಗಿ, ನಿರ್ಜಲೀಕರಣವಾದಾಗ ಪಾನಕ, ನೀರು ಮಜ್ಜಿಗೆ ಕುಡಿಯುವ ಮನಸ್ಸಾಗುತ್ತದೆ. ಅದೇ ರೀತಿಯಲ್ಲಿಯೇ ಈ ಅಪ್ಪೆ ಸಾರನ್ನೂ ಸಹಾ ಸೇವಿಸಬಹುದಾಗಿದೆ.
ಮಾವಿನಕಾಯಿಯ ಹುಳಿಯ ಜೊತೆಗೆ ಇಂಗು, ಜೀರಿಗೆ, ಮಣಸಿನಕಾಯಿ, ಬೆಲ್ಲಾ ಸೇರಿರುವ ಕಾರಣ ಇದು ಪಚನಕಾರಿಗೆ ಸಹಕಾರಿಯಾಗುತ್ತದೆ. ಹುಳೀ ತೇಗನ್ನು ಸಹಾ ಇದರಿಂದ ನಿವಾರಿಸಬಹುದಾಗಿದೆ.