ಸಂಘ ಮತ್ತು ಸಂಘದ ಸ್ವಯಂಸೇವಕರು

modiಸ್ವಾತಂತ್ರ್ಯ ಬಂದಾಗಲಿಂದಲೂ ಒಂದೇ ಕುಟುಂಬದ, ತುಷ್ಟೀಕರಣದ ಸ್ವಾರ್ಥ ಆಡಳಿತಕ್ಕೆ ಒಗ್ಗಿ ಹೋದಿದ್ದವರಿಗೆ 2014ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವವಾದ ಜನ ಬೆಂಬಲದೊಂದಿಗೆ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದು ಮತ್ತೆ 2019 ರಲ್ಲಿ ಮತ್ತೊಮ್ಮೆ ಭಾರಿ ಜನಬೆಂಬಲದೊಂದಿಗೆ ಪುನಃ ಆಡಳಿತಕ್ಕೆ ಬಂದಿರುವುದು ಅನೇಕರಿಗೆ ನುಂಗಲಾರದ ತುತ್ತಾಗಿದೆ. ಮೋದಿಯವರು ಆಡಳಿತಕ್ಕೆ ಬಂದ ಕೂಡಲೇ ಇದ್ದಕ್ಕಿದ್ದಂತೆಯೇ ದೇಶದಲ್ಲಿ ಅಸಹಿಷ್ಣುತೆ ಮತ್ತು ಅಭದ್ರತೆ ಕಾಡತೊಡಗಿತು. ಕೆಲವರು ದೇಶ ಬಿಡುವ ಮಾತನಾಡಿದರೆ ಇನ್ನೂ ಕೆಲವರು ಸರ್ಕಾರ ಕೊಟ್ಟಿದ್ದ ಪ್ರಶಸ್ತಿ ಪುರಸ್ಕಾರಗಳನ್ನು ಹಿಂದಿರುಗಿಸುವ (ಪ್ರಶಸ್ತಿಯೊಂದಿಗೆ ಪಡೆದಿದ್ದ ಹಣವನ್ನು ಮಾತ್ರ ಹಿಂದಿರುಗಿಸಲಿಲ್ಲ) ನಾಟಕವಾಡಿದರೇ ಇನ್ನೂ ಕೆಲವರು ವ್ಯವಸ್ಥಿತವಾಗಿ ದೇಶದನ್ನು ತುಂಡರಿಸುವ ಮಾತುಗಳನ್ನು ಆಡುವ ಮುಖಾಂತರ ದೇಶದಲ್ಲಿ ಅರಾಜಕತೆ ಮತ್ತು ದಂಗೆಗಳು ಏಳುವಂತೆ ಮಾಡಲು ಪ್ರಯತ್ನಿಸಿದರಾದರೂ ಸಫಲರಾಗದೇ ಬೇಕೋ ಬೇಡವೋ ಎಲ್ಲದರಲ್ಲಿಯೂ ಮೋದಿಯವರನ್ನು ಮತ್ತು ಸಂಘ ಪರಿವಾರದವರನ್ನು ಎಳೆದು ತರುವುದು ಮತ್ತು ಸುಖಾಸುಮ್ಮನೆ ಸಂಘ ಪರಿವಾರದ ಮೇಲೆ ಆರೋಪ ಮಾಡುವುದನ್ನು ಚಾಳಿ ಮಾಡಿಕೊಂಡಿದ್ದಾರೆ.

ಮೊನ್ನೆ ಮೊನ್ನೆ ಮನೆ ಮಠ ಬಿಟ್ಟು ಬೀದಿ ಬೀದಿ ಅಲೆಯುತ್ತಿರುವ ನಿರ್ದೇಶಕ ಅಂಡೆಲೆದು ಕೊರೋನಾ ಬರಿಸಿಕೊಂಡು ನನ್ನ ಸಾವಿಗೆ ಬಿಜೆಪಿ ಸರ್ಕಾರವೇ ಕಾರಣ ಎಂದರೆ ಮತ್ತೊಬ್ಬ ಧಾರವಾಹಿ ನಟ ತನ್ನ ಹತ್ತಿರದ ಸಂಬಂಧಿಯೊಬ್ಬರ ಸಾವಿನ ಕುರಿತಾಗಿ ಆಕ್ರೋಶದಿಂದ ಮಾತನಾಡಿರುವ ವೀಡಿಯೋವಿನಲ್ಲಿ ಸರ್ಕಾರ ರಾಮ ಮಂದಿರ ಕಟ್ಟುವ ಬದಲು ಆಸ್ಪತ್ರೆ ಕಟ್ಟಬಾರದಿತ್ತೇ? ಎಂದು ಓತಪ್ರೋತವಾಗಿ ಹೇಳಿದರೆ, ಖರ್ಗೆ ಎಂಬ ಮಹಾಶಯ ಸಂಘ ಎಂಬುದು ವಿಷ ಇದ್ದಂತೆ ಎಂಬ ಆಣಿ ಮುತ್ತು ಉದುರಿಸಿದರೆ, ಸಿದ್ದರಾಮಯ್ಯರಂತೂ ದೇಶಕ್ಕಾಗಿ ಸಂಘದ ಕೊಡುಗೆ ಇಲ್ಲವೇ ಇಲ್ಲಾ ಎಂದು ಬಾರಿ ಬಾರಿ ಸುಳ್ಳನ್ನು ಹೇಳುತ್ತಲೇ ಬಂದಿದ್ದಾರೆ.

drji1925ರಲ್ಲಿ ನಾಗಪುರದ ಮೋಹಿತೇವಾಡದ ಮೈದಾನದಲ್ಲಿ ಡಾ. ಕೇಶವ ಬಲಿರಾಂ ಹೆಡಗೇವಾರ್ ಎಂಬ ಮಹಾನ್ ದೇಶಭಕ್ತರು ಆರಂಬಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಇಂದು ಭಾರತದ ಮೂಲೆ ಮೂಲೆಗೂ ಆಲದ ಮರದಂತೆ ಹಬ್ಬಿರುವುದಲ್ಲದೆ HSS ಸಂಘಟನೆಯ ಹೆಸರಿನಲ್ಲಿ ವಿದೇಶಗಳಲ್ಲಿಯೂ ತನ್ನ ಬಿಳಿಲನ್ನು ಬಿತ್ತಿದೆ.

rss1ಸಂಘದ ಸಂಪರ್ಕಕ್ಕೆ ಬಂದು ಒಮ್ಮೆ ಸ್ವಯಂಸೇವಕನಾದವರು ಸದಾಕಾಲವೂ ಸ್ವಯಂಸೇವಕರೇ (once a swyamsevak is always a swyamsevak) ಎಂಬ ಮಾತು ಪ್ರಚಲಿತದಲ್ಲಿದೆ. ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ರೀತಿಯ ವಿಪತ್ತುಗಳು ಸಂಭವಿಸಿದಲ್ಲಿ ಅಥವಾ ಪ್ರಕೃತಿ ಅವಘಡಗಳು ಸಂಭವಿಸಿದಲ್ಲಿ ಅಲ್ಲಿ ಮೊದಲು ತಲುಪಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವುದೇ ಸಂಘದ ಸ್ವಯಂಸೇವಕರು ಎಂಬುದನ್ನು ಸಂಘದ ವಿರೋಧಿಗಳು ಅಲ್ಲಗಳೆಯಲಾರರು. ಎಂತಹ ವಿಷಮ ಸ್ಥಿತಿಯಲ್ಲಿಯೂ ಸಂಘದ ಸ್ವಯಂ ಸೇವಕರು ಸಮಾಜ ಸೇವೆಗೆ ಸಿದ್ಧರಾಗಿರುತ್ತಾರೆ ಎಂಬುದಕ್ಕೆ ಈ ಪ್ರಸಂಗಗಳೇ ಸಾಕ್ಷಿಯಾಗಿದೆ.

dabdkarಬಹಳಷ್ಟು ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದ 85 ವರ್ಷ ವಯಸ್ಸಿನ ನಾಗ್ಪುರದ ನಾರಾಯಣ್ ದಾಬಡ್ಕರ್ ಅವರಿಗೆ ಸತತವಾಗಿ ಮೂರು ದಿನಗಳ ಕಾಲ ಪರಿಶ್ರಮದ ನಂತರ ಸ್ಥಳೀಯ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಹಾಸಿಗೆಯ ಲಭ್ಯವಾಗುತ್ತದೆ. ಆ ಕೂಡಲೇ ದಾಬಡ್ಕರ್ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸುವ ಔಪಚಾರಿಕತೆಯನ್ನು ಅವರ ಮಗಳು ಪೂರ್ಣಗೊಳಿಸುತ್ತಿದ್ದ ಸಂದರ್ಭದಲ್ಲಿಯೇ ಅಲ್ಲಿಗೆ ಒಬ್ಬ ಮಹಿಳೆ 40ರ ಪ್ರಾಯದ ತನ್ನ ಗಂಡನಿಗೆ ಆ ಆಸ್ಪತ್ರೆಯಲ್ಲಿ ದಾಖಲು ಮಾಡಲು ಪರದಾಡುತ್ತಾ ಕಂಡ ಕಂಡವರ ಬಳೆ ದೈನೇಸಿಯಾಗಿ ಬೇಡಿಕೊಳ್ಳುತ್ತಿರುವುದು ಮತ್ತು ಆಕೆಯ ಮಕ್ಕಳೂ ಅವಳೊಂದಿಗೆ ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ಆ ಹಿರಿಯರು ಗಮನಿಸುತ್ತಾರೆ. ಕೂಡಲೇ ಅವರಲ್ಲಿದ್ದ ಸಂಘದ ಸ್ವಯಂಸೇವಕನ ಮನೋಭಾವನೆ ಜಾಗೃತಗೊಂಡು ಒಂದು ಧೃಢ ನಿರ್ಧಾರಕ್ಕೆ ಬರುತ್ತಾರೆ.

ಅಲ್ಲಿದ್ದ ತಮ್ಮ ಕುಟುಂಬ ಮತ್ತು ವೈದ್ಯಕೀಯ ಸಿಬ್ಬಂಧಿಯನ್ನು ಕರೆದು ಬಹಳ ಶಾಂತಚಿತ್ತದಿಂದ ನನಗೀಗ 85 ವರ್ಷಗಳಾಗಿವೆ. ನನ್ನ ಜೀವನದ ಬಹು ಕಾಲವನ್ನು ಈಗಾಗಲೇ ಅನುಭವಿಸಿದ್ದೇನೆ. ಅಲ್ಲದೇ ನನ್ನ ಜವಾಬ್ಧಾರಿಗಳು ಮುಗಿದಿವೆ. ಇನ್ನು ನಾನು ಹೆಚ್ಚಿನ ದಿನ ಬದುಕಿದ್ದು ಸಾಧಿಸಬೇಕಾದದ್ದು ಏನೂ ಇಲ್ಲ ಎಂಬುದರ ಅರಿವಿದೆ. ಹಾಗಾಗಿ ದಯವಿಟ್ಟು ನನ್ನ ಬದಲಾಗಿ ನೀವು ಈ ಮನುಷ್ಯನನ್ನು ಈ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡು ಚಿಕಿತ್ಸೆ ಕೊಡಿ. ಈ ಸಣ್ಣ ವಯಸ್ಸಿನ ಈಕೆಗೆ ಮತ್ತು ಅವಳ ಮಕ್ಕಳಿಗೆ ತಂದೆಯ ಅವಶ್ಯಕತೆ ಇದೆ ಎಂದು ತಿಳಿಸುತ್ತಾರೆ.

ತಂದೆಯವರ ಈ ಹಠಾತ್ ನಿರ್ಧಾರ ದಾಬಡ್ಕರ್ ಅವರ ಮಗಳು ಮತ್ತು ಅಕೆಯ ಮೊಮ್ಮಗನಿಗೆ ಕಸಿವಿಸಿ ಎನ್ನಿಸಿದರೂ ನಂತರ ತಂದೆಯ ಅಂತಿಮ ನಿರ್ಧಾರಕ್ಕೆ ಭಾರವಾದ ಮನಸ್ಸಿನಿಂದ ಒಪ್ಪಿಗೆ ನೀಡಿ, ಅವರ ಬದಲಿಗೆ ಆ 40ರ ಪ್ರಾಯದವರಿಗೆ ಹಾಸಿಗೆ ಬಿಟ್ಟು ಕೊಡಬೇಕೆಂಬ ಪತ್ರಕ್ಕೆ ಸಹಿ ಮಾಡಿ ತಮ್ಮ ತಂದೆಯವರನ್ನು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪುನಃ ಮನೆಗೆ ಕರೆದುಕೊಂಡು ಹೋಗುತ್ತಾರೆ. ಮನೆಗೆ ಮರಳಿದ 3 ದಿನಗಳ ನಂತರ ದಾಬಡ್ಕರ್ ನಿಧನರಾಗುತ್ತಾರೆ. ಈ ಮೂಲಕ ಪರೋಪಕಾರಾಯ ಮಿದಂ ಶರೀರಂ ಎಂಬ ಡಾ.ಜೀ ಅವರ ಕನಸನ್ನು ನನಸಾಗಿ ಮಾಡಿದ ಕೀರ್ತಿ ಆಚಾಂದ್ರಾರ್ಕವಾಗಿರುವಂತೆ ಅಮರರಾಗುತ್ತಾರೆ.

ಕೆಲ ವರ್ಷಗಳ ಪಲ್ಸ್ ಪೋಲೀಯೋ ಅಭಿಯಾನದ ಮಾರನೇ ದಿನ. ಅನಿವಾರ್ಯ ಕಾರಣಗಳಿಂದ ಈ ಅಭಿಯಾನವನ್ನು ತಪ್ಪಿಸಿಕೊಂಡ ಮಕ್ಕಳಿಗೆ ಅನುಕೂಲವಾಗಲೆಂದು ಸ್ವಯಂ ಸೇವಕರಾಗಿ ನರ್ಸಿಂಗ್ ಓದುತ್ತಿರುವ ಹುಡುಗ ಹುಡುಗಿಯರನ್ನು ಮನೆ ಮನೆಗೂ ಕಳುಹಿಸಿ ಪೋಲಿಯೋ ಅಭಿಯಾನವನ್ನು ತಪ್ಪಿಸಿಕೊಂಡಿದ್ದ ಮಕ್ಕಳಿಗೆ ಪೋಲೀಯೋ ಲಸಿಕೆ ಹಾಕುವ ಜವಾಬ್ಧಾರಿಯನ್ನು ವಹಿಸಿರುತ್ತಾರೆ.

rss2ಇದರ ನಿಮಿತ್ತ ಆ ಕಾರ್ಯಕರ್ತೆಯರು ಒಂದು ಮನೆಗೆ ಹೋದಾಗ ಆ ಮನೆಯ ಹಿರಿಯ ವಯಸ್ಸಿನ ಆಕೆ ಇವರು ಬಂದ ವಿಚಾರ ಕೇಳಿ, ಒಳಗೆ ಬನ್ನಿ ಎಂದು ಕರೆದು ಕೂಡಲೇ ಅವರಿಗೆಲ್ಲಾ ನೀರು ಕೊಟ್ಟು ಬಾಯಿ ತುಂಬಾ ಮಾತನಾಡಿಸಿ ತಮ್ಮ ಮೊಮ್ಮಕ್ಕಳಿಗೆ ಹಿಂದಿನ ದಿನವೇ ಪೋಲಿಯೋ ಲಸಿಕೆ ಹಾಕಿಸಿರುವ ವಿಷಯ ತಿಳಿಸುತ್ತಾರೆ. ಆ ಮನೆಯ ಆತಿಥ್ಯ ಮತ್ತು ಮಾತುಕತೆಯಿಂದ ಕೇಳಿದ ಕೇರಳಾದ ಕ್ರಿಶ್ಚಿಯನ್ ಮೂಲದ ಆ ಹುಡುಗಿ ನಿಮ್ಮ ಮನೆಯಲ್ಲಿ ಯಾರಾದರೂ RSSಗೆ ಹೋಗುತ್ತಾರಾ? ಎಂದು ಕೇಳುತ್ತಾಳೆ. ಆಕೆಯ ಪ್ರಶ್ನೆಯಿಂದ ಆಶ್ಚರ್ಯ ಚಕಿತರಾದ ಮನೆಯಾಕೆ ಹೌದು. ನಮ್ಮ ಮನೆಯವರು ನನ್ನ ಮಗ ಅಷ್ಟೇ ಏಕೆ ಈ ನಮ್ಮ ಪುಟ್ಟ ಮೊಮ್ಮಗನೂ ಶಾಖೆಗೆ ಹೋಗುತ್ತಾನೆ. ನಮ್ಮದು ಸಂಘದ ಮನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಕೂಡಲೇ ತನ್ನ ಎರಡೂ ಕೈಗಳಿಂದ ನಮಸ್ಕರಿಸುವ ಆ ಹುಡುಗಿ, ಇದುವರೆಗೂ ಸುಮಾರು ಮನೆಗಳಿಗೆ ಹೋಗಿದ್ದೇವೆ. ಬಹುತೇಕರು ಬಿಕ್ಷುಕರನ್ನೋ ಇಲ್ಲವೇ ಮಾರ್ಕೆಟಿಂಗ್ ಜನರನ್ನು ಅಟ್ಟಿ ಕಳಿಸುವಂತೆ ಬೈದು ಕಳಿಸಿದವರೇ ಹೆಚ್ಚು. ನಿಮ್ಮ ಮೊಮ್ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿದ್ದರೂ, ನೀವೊಬ್ಬರೇ ಈ ರೀತಿಯಾಗಿ ಒಳಗೆ ಕರೆದು, ಬಿಸಿಲಿನಲ್ಲಿ ಬಂದಿದ್ದೀರಿ ಎಂದು ನೀರು ಕೊಟ್ಟಿರಿ. ನಮ್ಮನ್ನು ಬಾಯಿ ತುಂಬಾ ಹೃದಯವಂತಿಗೆಯಿಂದ ಮಾತನಾಡಿಸಿದ್ದೀರಿ ಇಂತಹ ಸುಂದರ ಸಂಸ್ಕಾರ ಸಂಘದ ಮನೆಯವರಿಂದಲೇ ಸಾಧ್ಯ ಎಂಬುದನ್ನು ನಮ್ಮ ಕೇರಳದಿಂದಲೂ ಗಮನಿಸಿದ್ದೇನೆ ಎನ್ನುತ್ತಾಳೆ. ಸಂಸ್ಕಾರ ಎನ್ನುವುದು ಕೇವಲ ಸಂಘದ ಸ್ವಯಂಸೇವಕರಿಗಲ್ಲದೇ ಪರೋಕ್ಷವಾಗಿ ಅವರ ಇಡೀ ಕುಟುಂಬಕ್ಕೇ ಆಗಿರುತ್ತದೆ ಎನ್ನುವುದಕ್ಕೆ ಇದೊಂದು ಜ್ವಲಂತ ಉದಾಹರಣೆಯಾಗಿದೆ.

ತೊಂಭತ್ತರ ದಶಕದಲ್ಲಿ ಪೂರ್ವಾಂಚಲದ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ಕೊಡಿಸಲೂ ಆಗದೇ ಪರದಾಡುತ್ತಿದ್ದಾಗ ಅಲ್ಲಿಂದ ಸುಮಾರು ಮಕ್ಕಳನ್ನು ಕರ್ನಾಟಕಕ್ಕೆ ಕರೆತಂದು ಆ ಮಕ್ಕಳನ್ನು ಪ್ರತಿಷ್ಟಿತ ಶಾಲೆಗಳಿಗೆ ಸೇರಿಸಿ ಆ ಮಕ್ಕಳಿಗೆ ಅಕ್ಕರೆಯ ತಾಯಂದಿರ ವಾರನ್ನದ ವ್ಯವಸ್ಥೆ ಮಾಡಿ ಉತ್ತಮ ಶಿಕ್ಷಣ ಕೊಡಿಸಿದ ಪರಿಣಾಮ ಆ ರೀತಿಯಾಗಿ ಬಂದ ಅನೇಕ ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಂಡು ಇಂದು ಐದಂಕಿಯ ಸಂಬಳ ಪಡೆಯುವಂತೆ ಮಾಡಿದ್ದು ಇದೇ ಸಂಘದ ಸ್ವಯಂಸೇವಕರೇ.

ಕಳೆದ ವರ್ಷ ಕೊರೋನಾದಿಂದಾಗಿ ಅನಿರ್ಧಿಷ್ಟಾವಧಿಯ ಕಾಲ ಲಾಕ್ಡೌನ್ ಆದಾಗ ಕೂಲಿ ಕೆಲಸ ಮಾಡುತ್ತಿದ್ದ ಇಲ್ಲವೇ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದವರಿಗೆ ಕೆಲಸವೇ ಇಲ್ಲದೇ ಊಟಕ್ಕೂ ತೊಂದರೆಯಾದಾಗ ಅಂತಹವರಿಗೆ ದವಸ ಧಾನ್ಯಗಳ ಕಿಟ್ ವಿತರಿಸಲು ಆರಂಭಿಸಿದ್ದೇ ಸಂಘದ ಸ್ವಯಂಸೇವಕರು. ಊರೂರಿನಲ್ಲಿ ಅಗತ್ಯವಿದ್ದವರನ್ನು ಹುಡುಕಿ ಹುಡುಕಿ ಲಾಕ್ಡೌನ್ ಮುಗಿಯುವವರೆಗೂ ಸರ್ಕಾರದ ನೆರವಿಲ್ಲದೇ ದವಸ ಧಾನ್ಯಗಳನ್ನು ಸಂಗ್ರಹಿಸಿ ಹಂಚಿದ್ದನ್ನು ಇಂದಿಗೂ ಉಪಕೃತರು ಸ್ಮರಿಸುತ್ತಾರೆ.

rama_mandirಕಳೆದ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ರಾಮ ಮಂದಿರ ನಿಧಿ ಸಂಗ್ರಹಣಾ ಅಭಿಯಾನದಲ್ಲಿ ಮನೆ ಮನೆಗಳಿಗೂ ಹೋಗಿ ನಿಧಿ ಸಂಗ್ರಹಿಸುತ್ತಿದ್ದ ಸಂಧರ್ಭದಲ್ಲಿ, ಸುಮಾರು ಎಂಬ್ಬತ್ತು ವರ್ಷದ ಆಸುಪಾಸಿನ ಅಜ್ಜಿಯೊಬ್ಬರು ನಿಧಿ ಸಂಗ್ರಹಣಾ ಅಭಿಯಾನಕ್ಕೆ ಹೋಗಿದ್ದ ಮಾತೆಯ ಕೈಗಳಲ್ಲಿ ಒಂದು ಬೆಳ್ಳಿಯ ಬಟ್ಟಲೊಂದನ್ನು ಕೊಡುತ್ತಾರೆ. ಕುತೂಹಲದಿಂದ ಏನೆಂದು ನೋಡಿದರೆ, ಆ ಬೆಳ್ಳಿ ಬಟ್ಟಲಿನಲ್ಲಿ ಚಿನ್ನದ ಓಲೆಗಳು ಇರುತ್ತವೆ. ಈ ಬೆಳ್ಳಿ ಬಟ್ಟಲು ನನ್ನ ಮದುವೆ ಸಮಯದಲ್ಲಿ ನನ್ನ ತಾಯಿ ಮನೆಯಲ್ಲಿ ಕೊಟ್ಟದ್ದು. ಈ ಓಲೆಗಳನ್ನು ನಮ್ಮ ಮನೆಯವರು ಮಾಡಿಸಿದ್ದು. ದಯವಿಟ್ಟು ಇವೆರಡನ್ನು ಮಾರಿ ಅದರಿಂದ ಬಂದ ಹಣವನ್ನು ರಾಮಮಂದಿರಕ್ಕೆ ಉಪಯೋಗಿಸಿಕೊಳ್ಳಿ. ತಮ್ಮೂರಿನಲ್ಲಿ ತಮ್ಮ ಯಜಮಾನರೂ ಚಿಕ್ಕ ವಯಸ್ಸಿನಲ್ಲಿ ಸಂಘಕ್ಕೆ ಹೋಗುತ್ತಿದ್ದದ್ದನ್ನು ನೆನಪಿಸಿ ಈ ಮೂಲಕ ತಮ್ಮ ತವರು ಮನೆಯವರು ಮತ್ತು ತಮ್ಮ ಯಜಮಾನರ ಬೆವರಿನ ಹನಿಯೂ ರಾಮ ಮಂದಿರಕ್ಕೆ ಸಮರ್ಪಿತವಾಗಲಿ ಎಂದು ಈ ಇಳೀ ವಯಸ್ಸಿನಲ್ಲಿಯೂ ಬಯಸುವಂತಹ ಸಂಗತಿ ಬಹುಶಃ ಸಂಘದ ಮನೆಯಲ್ಲಿ ಬಿಟ್ಟರೆ ಬೇರೆಲ್ಲೂ ಕಾಣ ಸಿಗದು ಎಂದರೂ ತಪ್ಪಾಗಲಾರದು.

bloodನಮಗೆಲ್ಲರಿಗೂ ತಿಳಿದಿರುವಂತೆ ದೇಶಾದ್ಯಂತ ಕೋವಿಡ್ ಲಸಿಕೆಯ ಅಭಿಯಾನ ಶುರುವಾಗಿದೆ. ಇನ್ನು ಮೇ 1ರಿಂದ ದೇಶದಾದ್ಯಂತ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ದೊರೆತಾಗ ದೇಶದ ಬಹು ಭಾಗದ ಜನರಿಗೆ ಇದರಿಂದ ಅನುಕೂಲವಾದರೂ, ಲಸಿಕೆ ತೆಗೆದುಕೊಂಡವರು ಸುಮಾರು 60 ದಿನಗಳವರೆಗೆ ರಕ್ತದಾನ ಮಾಡ ಬಾರದಿರುವ ಕಾರಣ ಈ ಸಮಯದಲ್ಲಿ ಅಗತ್ಯವಿರುವ ರೋಗಿಗಳಿಗೆ ರಕ್ತದ ಕೊರತೆ ಬರಬಹುದು ಎಂಬ ದೂರಾಲೋಚನೆ ಮಾಡಿರುವ ಸಂಘದ ಸ್ವಯಂ ಸೇವಕರು ದೇಶಾದ್ಯಂತ ತ್ವರಿತವಾಗಿ ಸ್ವಪ್ರೇರಣೆಯಿಂದ ಲಸಿಕೆ ತೆಗೆದುಕೊಳ್ಳುವ ಮುಂಚೆಯೇ ರಕ್ತದಾನ ಮಾಡುವ ಸಂಕಲ್ಪ ಕೈಗೊಂಡು ಈಗಾಗಲೇ ಎಲ್ಲಾ ಕಡೆಯಲ್ಲಿಯೂ ರಕ್ತದಾನ ಶಿಬಿರಗಳನ್ನು ಏರ್ಪಡಿಸಿದ್ದಾರೆ. ಈ ಮೂಲಕ ಆರೋಗ್ಯವಂತ ತರುಣರು ರಕ್ತದಾನ ಮಾಡುವ ಮೂಲಕ ಕೊರೋನಾ ವಿರುದ್ಧ ಒಗ್ಗಟ್ಟಾಗಿ ಹೋರಾಟ ನಡೆಸುತ್ತಾ ದೇಶದ ಸ್ವಾಸ್ಥ್ಯವನ್ನು ಬಲಪಡಿಸುವತ್ತ ಮುನ್ನಡೆಯುತ್ತಿದ್ದಾರೆ.

ಗಾಂಧಿಯವರ ಹತ್ಯೆಯಾದಾಗ ಅದರ ಆರೋಪವನ್ನು ಸಂಘದ ಮೇಲೆ ಹೊರಿಸಿ ಸಂಘವನ್ನು ನಿಷೇಧಿಸಿ ನಂತರ ಅದರಲ್ಲಿ ಸಂಘದ ಪಾತ್ರವಿಲ್ಲ ಹಾಗಾಗಿ ನಿರ್ದೋಷಿ ಎಂದು ನ್ಯಾಯಾಲಯ ತೀರ್ಪಿತ್ತ ನಂತರ ಸಂಘ ತನ್ನ ಚಟುವಟಿಕೆಗಳನ್ನು ಮುಂದುವರೆಸಿ ಚೀನಾ ದೇಶದ ಯುದ್ಧದ ಸಮಯದಲ್ಲಿ ಸಂಘದ ನೆರವನ್ನು ಪ್ರಶಂಸಿಸಿ 1963ರ ದೆಹಲಿಯ Republic Day ಪೆರೇಡಿನಲ್ಲಿ ಸಂಘದ ಸ್ವಯಂಸೇವಕರಿಗೆ ಅವಕಾಶ ನೀಡಿದ್ದರು,

ಎಂಭತ್ತರ ದಶಕದಲ್ಲಿ BBC ಅವರು ಇಂದಿರಾ ಗಾಂಧಿಯವರೊಡನೆ ನಡೆಸಿದ ಸಂದರ್ಶನದಲ್ಲಿ ನಿಮ್ಮ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಆರೋಪವಿದೆ. ನಿಮ್ಮ ದೇಶದಲ್ಲಿ ಯಾವದೇ ಪ್ರಾಮಾಣಿಕ ಸಂಘ ಸಂಸ್ಥೆಗಳು ಇಲ್ಲವೇ? ಎಂದು ಕೇಳಿದ ಕೂಡಲೇ, ಏಕಿಲ್ಲಾ? ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪಿತವಾಗಿರುವ RSS ಎಂಬ ಸಂಸ್ಥೆ ಅತ್ಯಂತ ಪ್ರಾಮಾಣಿಕವಾದ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಯಾಗಿದೆ ಎಂದು ಹೊಗಳಿದ್ದಾರೆ.

ಹೀಗೆ ತಮ್ಮ ಬದ್ದ ವಿರೋಧಿಗಳಿಂದಲೂ ನಿಸ್ವಾರ್ಥ ಸೇವೆಗೆ ಮತ್ತು ಕಾರ್ಯತತ್ಪರತೆಗಳಿಗೆ ಹೊಗಳಿಸಿಕೊಳ್ಳುವ ಜಗತ್ತಿನ ಏಕೈಕ ಸ್ವಯಂಸೇವಾ ಸಂಸ್ಥೆ RSS ಎಂದರೆ ಅತಿಶಯೋಕ್ತಿಯಾಗಲಾರದು.

ವಿದ್ಯಾಕ್ಷೇತ್ರ, ರಾಜಕೀಯ, ಧಾರ್ಮಿಕ, ರೈತ ಸಂಘಟನೆ, ಕಾರ್ಮಿಕ ಸಂಘಟನೆ, ಸ್ವದೇಶೀ ಆಂದೋಲನ, ವನವಾಸಿ ಕಲ್ಯಾಣ ಹೀಗೆ ನೂರಾರು ಸಂಘಟನೆಗಳ ಮುಖಾಂತರ ದೇಶದ ವಿವಿಧ ಕ್ಷೇತ್ರಗಳಲ್ಲಿ ಸಂಘಪರಿವಾರದ ಕೋಟ್ಯಾಂತರ ಸ್ವಯಂಸೇವಕರು ದೇಶದ ರಕ್ಷಣೆಗೆ ಕಟಿ ಬದ್ಧರಾಗಿರುವ ವಿಷಯಗಳು ತಿಳಿದಿದ್ದರೂ, ಸಂಘ ಮತ್ತು ಸಂಘದ ಸ್ವಯಂಸೇವಕರನ್ನು ಯಾವುದೇ ರೀತಿಯಲ್ಲಿಯೂ ಸೋಲಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತೇ ಅವರ ಮೇಲೆ ಮೇಲಿಂದ ಮೇಲೆ ಆರೋಪ ಮಾಡುತ್ತಾ ನೂರು ಸುಳ್ಳುಗಳನ್ನು ಹೇಳಿ ಅದನ್ನೇ ಸತ್ಯ ಮಾಡುವ ಗೊಬೆಲ್ಸ್ ತಂತ್ರವನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

rss1ತಮಗಾಗಿ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎನ್ನುವ ಸಿದ್ಧಾಂತವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಉದಾತ್ತ ಜೀವನವನ್ನು ನಡೆಸುತ್ತಿರುವ ಸಂಘದ ಸ್ವಯಂಸೇವರನ್ನು ಗುರುತಿಸಿಯೇ ನಮ್ಮ ದೇಶದ ಪ್ರಜೆಗಳು ಇಂದು ದೇಶದ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಹತ್ತಾರು ರಾಜ್ಯಗಳ ಮುಖ್ಯಮಂತ್ರಿಗಳು, ನೂರಾರು ಸಾಂಸದರು, ಸಹಸ್ರಾರು ಶಾಸಕರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳನ್ನಾಗಿ ಸಂಘದ ಸ್ವಯಂಸೇವಕರನ್ನು ಆಯ್ಕೆಮಾಡಿರುವುದು ಸಂಘ ಮತ್ತು ಸಂಘದ ಸ್ವಯಂ ಸೇವಕರ ಘನತೆ ಮತ್ತು ಕೀರ್ತಿಗಳನ್ನು ಎತ್ತರಕ್ಕೇರಿಸಿದೆ. ಆನೆ ಅಂಬಾರಿಯ ಹೊತ್ತುಕೊಂಡಿರುವುದನ್ನು ನೋಡಿ ನಾಯಿ ಬೊಗಳಿದರೆ, ಜನಾ ನಾಯಿಯನ್ನ ಹಚ್ಚಾ ಎಂದು ಓಡಿಸಿ ಅಂಬಾರಿಗೆ ತಲೆಬಾಗುತ್ತಾರೆ ಅಲ್ಲವೇ?  ಆಡು ಮುಟ್ಟದ ಸೊಪ್ಪಿಲ್ಲಾ, ದೇಶದಲ್ಲಿ ಸಂಘದ ಸ್ವಯಂಸೇವಕರು ಮಾಡದ ಸೇವಾ ಚಟುವಟಿಕೆಗಳು ಇಲ್ಲಾ ಎನ್ನುವುದಂತೂ ಸತ್ಯ ಸತ್ಯ ಸತ್ಯ.

ಏನಂತೀರೀ?

ನಿಮ್ಮವನೇ ಉಮಾಸುತ

4 thoughts on “ಸಂಘ ಮತ್ತು ಸಂಘದ ಸ್ವಯಂಸೇವಕರು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s