ಭಕ್ತಿ ಅಂದ ತಕ್ಷಣ ನಮ್ಮ ಮನಸ್ಸಿಗೆ ಥಟ್ ಅಂತಾ ನೆನಪಿಗೆ ಬರುವುದೇ ರಾಮನ ಭಕ್ತಾಗ್ರೇಸರ ಅಂಜನೀ ಪುತ್ರ ಪವನಸುತ ಹನುಮಾನ್ ಎಂದರೆ ಅತಿಶಯೋಕ್ತಿಯೇನಲ್ಲ. ಸೀತಾಮಾತೆಯ ಅನ್ವೇಷಣೆಯ ಸಂದರ್ಭದಲ್ಲಿ ಸಮುದ್ರೋಲಂಘನವನ್ನು ಮಾಡಿ ಲಂಕೆಗೆ ಹೋಗಿ ಸೀತಾಮಾತೆಯನ್ನು ಹುಡುಕಿಕೊಂಡ ಬಂದ ಭಜರಂಗಬಲಿ ಇವನು. ಮಹಾನ್ ಪರಾಕ್ರಮಿಯಾದ ಕಾರಣಕ್ಕಾಗಿಯೇ, ಪ್ರಪಂಚಾದ್ಯಂತ ಹನುಮಂತನ ಬೃಹತ್ತಾದ ಪ್ರತಿಮೆಗಳನ್ನು ಎಲ್ಲೆಡೆಯಲ್ಲಿಯೂ ಕಾಣಬಹುದಾಗಿದೆ. ಶಕ್ತಿ, ಭಕ್ತಿ ಮತ್ತು ಬುದ್ಧಿವಂತಿಕೆಯ ಪ್ರತೀಕವೆಂದೇ ಪರಿಗಣಿಸಲ್ಪಟ್ಟ ಆಂಜನೇಯನ ನಿಂತಿರುವ ಇಲ್ಲವೇ ಸಂಜೀವಿನ ಪರ್ವತವನ್ನು ಹೊತ್ತಿರುವ ವಿಗ್ರಹವನ್ನು ಬಹುತೇಕ ಎಲ್ಲಾ ದೇವಾಲಯಗಳಲ್ಲಿಯೂ ಮತ್ತು ಹಿಂದೂ ಧರ್ಮಗ್ರಂಥಗಳಲ್ಲಿ ಕಾಣಬಹುದಾಗಿದೆ.
ಆದರೆ ಇದಕ್ಕೆ ತದ್ವಿರುದ್ಧವಾಗಿ ನಮ್ಮ ದೇಶದ ಮಧ್ಯಪ್ರದೇಶದ ಇಂದೋರ್ ಜಿಲ್ಲೆಗೆ ಸೇರಿದ ಸ್ಯಾನ್ವೆರ್ ಪಟ್ಟಣದಲ್ಲಿ ತಲೆಕೆಳಕಾಗಿರುವ ಅರ್ಥಾತ್ ಶೀರ್ಷಾಸನದ ಭಂಗಿಯಲ್ಲಿರುವ ವಿಶಿಷ್ಟವಾದ ಉಲ್ಟೇ ಹನುಮಾನ್ ಮಂದಿರ್ ಎಂಬ ದೇವಾಲಯವೊಂದಿದೆ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆ ಅಲ್ಲವೇ?
ಹೌದು ನಿಜ. ಇಂದೋರ್‌ನಿ ಜಿಲ್ಲಾ ಪ್ರಧಾನ ಕಚೇರಿಯಿಂದ ಉತ್ತರಕ್ಕೆ 30 ಕಿ.ಮೀ ಮತ್ತು ಪುರಾಣ ಪ್ರಸಿದ್ಧ ಉಜ್ಜಯಿನಿಯಿಂದ ಸುಮಾರು 30 ಕಿ.ಮೀ ದೂರದಲ್ಲಿ ಇಂತಹದ್ದೊಂದು ವಿಭಿನ್ನವಾದ ಮತ್ತು ವಿಶಿಷ್ಟವಾದ ದೇವಾಲಯವಿದೆ. ಬಹುಶಃ ಈ ರೀತಿಯಾಗಿ ತಲೆ ಕೆಳಾಗಾಗಿರುವ ವಿಶ್ವದ ಏಕೈಕ ಹನುನಂತನ ಪ್ರತಿಮೆಯಾಗಿದೆ ಎಂದರೂ ತಪ್ಪಾಗಲಾರದೇನೋ? ಸ್ಥಳೀಯ ದಂತಕಥೆಯ ಪ್ರಕಾರ, ಈ ದೇವಾಲಯವು ರಾಮಾಯಣ ಕಾಲದಿಂದಲೂ ಇದೆೆ ಎಂಬ ನಂಬಿಕೆಯಿದೆ. ಈ ದೇವಾಲಯದಲ್ಲಿರುವ ಆಂಜನೇಯನ ವಿಗ್ರಹವನ್ನು ಸದಾಕಾಲವೂ ಸಿಂಧೂರದಿಂದ ಅಲಂಕರಿಸಲಾಗಿರುವುದು ಇನ್ನೂ ಗಮನಾರ್ಹವಾಗಿದೆ.
ತಲೆಕೆಳಗಾಗಿರುವುದರಿಂದಲೋ ಏನೋ? ಈ ದೇವಾಲಯ ದೇಶ ವಿದೇಶಗಳಿಂದ ಸಹಸ್ರಾರು ಸಂಖ್ಯೆಯ ಭಕ್ತಾದಿಗಳನ್ನು ತನ್ನತ್ತ ಗಮನ ಸೆಳೆಯುತ್ತಿದೆ. ಇಲ್ಲಿನ ಸ್ಥಳೀಯರ ಪ್ರಕಾರ ಮೂರು ಅಥವಾ ಐದು ಮಂಗಳವಾರಗಳು ಈ ಉಲ್ಟೇ ಹನುಮಂತನನ್ನು ಅಚಲ ಭಕ್ತಿಯಿಂದ ಪೂಜಿಸಿದರೆ ಅವರ ಇಷ್ಟಾರ್ಥಗಳು ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆಯೂ ಇರುವುದರಿಂದ ಪ್ರತೀ ಮಂಗಳವಾರವೂ ಇಲ್ಲಿ ಒಂದು ರೀತಿಯ ಜನಜಂಗುಳಿ ಸೇರಿ ಜಾತ್ರೆಯೇ ನಡೆಯುತ್ತದೆ. ಪ್ರತೀ ಮಂಗಳವಾರವೂ ಇಲ್ಲಿ ಭಕ್ತಾದಿಗಳು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ತಮ್ಮ ಶಕ್ತ್ಯಾನುಸಾರ ಹನುಮನ್ ಚಾಲಿಸವನ್ನು ಪಠಿಸಿ ತಮ್ಮ ಮನೋಕಾಮನೆಗಳನ್ನು ಪರಿಹರಿಸಿಕೊಳ್ಳುತ್ತಾರೆ.
ಎಲ್ಲಿ ಹನುಮನೋ ಅಲ್ಲಿ ರಾಮನು. ಎಲ್ಲಿ ರಾಮನೋ ಅಲ್ಲಿ ಹನುಮನೂ. ರಾಮನ ಉಸಿರೇ ಹನುಮಾ.. ಹನುಮನ ಪ್ರಾಣವೇ ರಾಮಾ.. ಎನ್ನುವಂತೆ ಈ ದೇವಾಲಯದಲ್ಲಿ ತಲೆಕೆಳಗಾದ ಹನುಮಂತನಲ್ಲದೇ, ಶ್ರೀರಾಮ, ಸೀತಾ ಮತ್ತು ಲಕ್ಷಣರ ಸುಂದರ ಮೂರ್ತಿಯಿದೆ. ಇದರ ಜೊತೆ ಬಹಳ ಹಳೆಯದಾದ ಎರಡು ಪಾರಿಜಾತದ ಮರಗಳೂ ಇವೆ. ಇಲ್ಲಿನ ಸ್ಥಳೀಯರ ಪ್ರಕಾರ, ರಾಮಾಯಣ ಕಾಲದಲ್ಲಿ, ರಾಮ ಮತ್ತು ರಾವಣನ ನಡುವೆ ಯುದ್ಧ ನಡೆಯುತ್ತಿದ್ದಾಗ, ಶ್ರೀರಾಮನ ಕೈ ಮೇಲಾಗುತ್ತಿದ್ದದ್ದನ್ನು ಗಮನಿದ ರಾವಣನು ತನ್ನ ತಮ್ಮ ಅಹಿರಾವಣನನ್ನು ಕರೆದು ಹೇಗಾದರು ಮಾಡಿ ರಾಮನನ್ನು ಸೋಲಿಸಲೇ ಬೇಕು ಎಂದಾಗ, ಅಣ್ಣನ ಆಜ್ಞಾಪಾಲಕನಾಗಿ ತನ್ನ ಮಾಯಾಜಾಲದಿಂದ ವಿಭೀಷಣನ ವೇಷಧಾರಿಯಾಗಿ ಅಹಿರಾವಣನು ಶ್ರೀರಾಮ ಲಕ್ಷಣರ ತಂಡವನ್ನು ಸೇರಿಕೊಂಡು ಅದೊಂದು ರಾತ್ರಿ ರಾಮ ಲಕ್ಷ್ಮಣರು ನಿದ್ರಿಸುತ್ತಿದ್ದಾಗ ಅವರಿಬ್ಬರನ್ನೂ ತನ್ನ ಮಾಯಾಶಕ್ತಿಯಿಂದ ಪಾತಾಳ ಲೋಕಕ್ಕೆ ಹೊತ್ತೊಯ್ಯುತ್ತಾನೆ.
ತಾನು ಪಾತಾಳಲೋಕಕ್ಕೆ ಹೋದಲ್ಲಿ ತನ್ನನ್ನು ಅಲ್ಲಿ ಯಾರೂ ಸೋಲಿಸಲಾರರು ಎಂಬ ನಂಬಿಕೆ ಅಹಿರಾವಣನಿಗೆರುತ್ತದೆ. ಬೆಳಿಗ್ಗೆ ರಾಮ ಲಕ್ಷ್ಮಣರನ್ನು ಕಾಣದೆ ಕಳವಳಗೊಂಡ ಕಪೀ ಸೇನೆ ಮತ್ತೆ ಅವರಿಬ್ಬರನ್ನೂ ಹುಡುಕಿ ಕರೆತರಲು ಆಂಜನೇಯನನ್ನು ಕೇಳಿಕೊಳ್ಳುತ್ತದೆ. ಎಲ್ಲರ ಇಚ್ಚೆಯಂತೆ ರಾಮ ಲಕ್ಷ್ಮಣನನ್ನು ಹುಡುಕುತ್ತಾ, ಹನುಮಂತನು ಪಾತಾಳವನ್ನು ತಲುಪಿ ಅಲ್ಲಿ ಅಹಿರಾವಣನೊಂದಿಗೆ ಘನಘೋರವಾದ ಯುದ್ಧವನ್ನು ಮಾಡಿ ಅವನನ್ನು ಸಂಹರಿಸಿ, ಶ್ರೀ ರಾಮ ಮತ್ತು ಲಕ್ಷ್ಮಣರನ್ನು ಭೂಲೋಕಕ್ಕೆ ಮತ್ತೆ ಹಿಂದಕ್ಕೆ ಕರೆತರುತ್ತಾನೆ.
ಇಲ್ಲಿನ ಜನರ ನಂಬಿಕೆಯ ಪ್ರಕಾರ ಹನುಮಂತನು ಇದೇ ದೇವಾಲಯದ ಮೂಲಕವೇ ಪಾತಾಳವನ್ನು ತಲುಪಿದ ಎನ್ನಲಾಗಿದೆ. ಪಾತಾಳ ಲೋಕಕ್ಕೆ ಹೋಗುವಾಗ, ನೀರಿನಲ್ಲಿ ಹನುಮಂತನ ತಲೆ ಕೆಳಗಾಗಿದ್ದು ಆತನ ಪಾದಗಳು ಆಕಾಶದ ಕಡೆಗೆ ಇದ್ದ ಕಾರಣ ಅದೇ ಭಂಗಿಯಲ್ಲಿಯೇ ಇರುವ ಹನುಮಂತನ ವಿಗ್ರಹವನ್ನು ಈ ದೇವಸ್ಥಾನದಲ್ಲಿ ಪೂಜಿಸಲಾಗುತ್ತದೆ.
ನಮ್ಮ ದೇಶದಲ್ಲಿ ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲೂ ಇಂತಹ ಅನೇಕ ವೈಶಿಷ್ಟ್ಯಗಳನ್ನು ಕಾಣಬಹುದಾದರೂ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವಂತಹ ಸುಂದರವಾದ ದೇಶ ನಮ್ಮದಾಗಿದೆ ಎನ್ನುವುದೇ ನಮ್ಮ ಹೆಮ್ಮೆ ಅಲ್ವೇ? ಎಲ್ಲೇ ಇರಲಿ ಹೇಗೇ ಇರಲಿ ಎಂದೆದೂ ನಮ್ಮ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಮಾತ್ರಾ ಮರೆಯದಿರೋಣ ಅಲ್ವೇ?.
ಏನಂತೀರೀ?
ನಿಮ್ಮವನೇ ಉಮಾಸುತ
ಈ ದೇವಾಲಯದ ಬಗ್ಗೆ ಮಾಹಿತಿ ತಿಳಿಸಿದ ನನ್ನ ತಮ್ಮ ಕುರುವಾಂಕ ಹರೀಶ್ ರಾಮಸ್ವಾಮಿಗೆ ಧನ್ಯವಾದಗಳು