ಪಂಚರಾಜ್ಯಗಳ ಪಂಚನಾಮೆ

ಕಳೆದ ಎರಡು ತಿಂಗಳಲ್ಲಿ ಕೊರೋನಾದ ಜೊತೆಗೆ ಜೊತೆಗೆ ದೇಶಾದ್ಯಂತ ಎಲ್ಲರ ಗಮನ ಸೆಳೆಯುತ್ತಿದ್ದ ಪಂಚರಾಜ್ಯ ಚುನಾವಣೆಗೆ ಇಂದು ಅಂತ್ಯ ಕಂಡಿದ್ದು ಹಲವಾರು ಮಿಶ್ರ ಮತ್ತು ಅಚ್ಚರಿ ಫಲಿತಾಂಶಗಳು ಬಂದಿವೆ.

ಅಸ್ಸಾಂ, ಕೇರಳ, ಪಶ್ವಿಮಬಂಗಾಳ, ಪುದುಚೆರಿ ಮತ್ತು ತಮಿಳುನಾಡಿನಲ್ಲಿ ವಿಧಾನ ಸಭೆಗೆ ಚುನಾವಣೆಗಳು ನಡೆದರೆ, ಕರ್ನಾಟಕದಲ್ಲಿ ಒಂದು ಲೋಕಸಭೆ ಮತ್ತು ಎರಡು ವಿಧಾನ ಸಭೆಗೆ ಚುನಾವಣೆ ನಡೆದರೆ ದೇಶದ ಅನೇಕ ರಾಜ್ಯಗಳಲ್ಲಿ ಉಪಚುನಾವಣೆಗಳು ನಡೆದಿದ್ದರೂ, ಎಲ್ಲರ ಗಮನ ಈ ಐದು ರಾಜ್ಯಗಳತ್ತವೇ ಹರಿದಿತ್ತು ಚಿತ್ತ.

elec4

ಕಳೆದ ಲೋಕಸಭೆಯಲ್ಲಿ ಅನಿರೀಕ್ಷಿತವಾಗಿ ಪಶ್ಚಿಮ ಬಂಗಾಳದಲ್ಲಿ 18 ಸ್ಥಾನಗಳನ್ನು ಗಳಿಸಿದ ಕೂಡಲೇ ಮುಂದಿನ ಬಾರೀ ಪಶ್ಚಿಮ ಬಂಗಾಳದಲ್ಲಿ ಅಧಿಕಾರವನ್ನು ಹಿಡಿದೇ ತೀರುತ್ತೇವೆ ಎಂದು ಫಣ ತೊಟ್ಟ ಬಿಜೆಪಿಯ ಇಡೀ ತಂಡ ಪಶ್ಚಿಮ ಬಂಗಾಳದಲ್ಲಿ ಝಾಂಡ ಹೂಡಿದ್ದಲ್ಲದೇ ಒಂದು ರೀತಿಯ ಹಿಂದುತ್ವದ ವಾತಾವರಣವನ್ನು ಮೂಡಿಸುವುದರಲ್ಲಿ ಸ್ವಲ್ಪ ಸಫಲತೆಯನ್ನು ಕಂಡಿತ್ತು. ಇದಲ್ಲದೇ ಟಿಎಂಸಿ ಪಕ್ಷದ ಹತ್ತಾರು ಶಾಸಕರು ಮತ್ತು ಹಿರಿಯ ನಾಯಕರೂ ಸಹಾ ಬಿಜೆಪಿ ಗೆಲ್ಲಬಹುದು ಎಂದೇ ತಾಮುಂದು ನಾಮುಂದು ಎಂದು ಬಿಜೆಪಿಯನ್ನು ಸೇರಿಕೊಂಡಿದ್ದು, ಅಮಿತ್ ಶಾ. ನಡ್ಡಾ ಮತ್ತು ಮೋದಿಯವರ ಭಾಷಣಗಳಿಗೆ ಅಪಾರವಾದ ಜನಸ್ತೋಮ ಸೇರುತ್ತಿದ್ದದ್ದು ಬಿಜೆಪಿಗೆ ಅಧಿಕಾರಕ್ಕೆ ಮೂರೇ ಗೇಣು ಎನ್ನುವಂತೆ ಮಾಡಿತ್ತು.

ಬಿಜೆಪಿಯ ಅಬ್ಬರದ ಪ್ರಚಾರವಲ್ಲದೇ ತಮ್ಮದೇ ಪಕ್ಷದ ನಾಯಕರಗಳನ್ನು ಸೆಳೆದುಕೊಳ್ಳುವುದರಿಂದ ಆರಂಭದಲ್ಲಿ ಕಂಗಾಲಾದ ಮಮತ ನಂತರ ಪ್ರಾದೇಶಿಕ ಅಸ್ಮಿತೆಯನ್ನು ಸರಿಯಾಗಿ ಬಳಸಿಕೊಂಡಿದ್ದಲ್ಲದೇ, ಅಚಾನಕ್ಕಾಗಿ ಆಕೆಯ ಮೇಲಾದ ಧಾಳಿಯನ್ನು ಸಮರ್ಥವಾಗಿ ಇಡೀ ಚುನಾವಣೆಗೆ ದಾಳವಾಗಿ ಬಳಸಿಕೊಂಡಿದ್ದಲ್ಲದೇ ಇಡೀ ಚುನಾವಣೆಯನ್ನು ವೀಲ್ಹ್ ಚೇರ್ ಮೇಲೆಯೇ ಕುಳಿತುಕೊಂಡು ಜನರನ್ನು ಭಾವನಾತ್ಮಕವಾಗಿ ತನ್ನತ್ತ ಸೆಳೆಯಲು ಯಶಸ್ವಿಯಾದರು.

ತಮಿಳುನಾಡಿನಲ್ಲಿ ತಲೆ ತಲಾಂತರದಿಂದಲೂ ಪ್ರಾಭಲ್ಯವಿರುವುದೇ ಪ್ರಾದೇಶಿಕ ಪಕ್ಷಗಳ ಡಿಎಂಕೆ ಮತ್ತು ಎಐಡಿಎಂಕೆಗಳದ್ದು. ಹಾಗಾಗಿ ತಮಿಳುನಾಡಿನ ಜನರೂ ಸಹಾ ಒಮ್ಮೆ ಡಿಎಂಕೆಯ ಕರುಣಾನಿಧಿ ಮತ್ತೊಮ್ಮೆ ಎಐಡಿಎಂಕೆಯ ಜಯಲಲಿತಳನ್ನು ಆಡಳಿತಕ್ಕೆ ಒಂದು ರೀತಿ ಖೋ ಖೋ ಮಾದರಿಯಲ್ಲಿ ಆಡಳಿತಕ್ಕೆ ತರುವ ಸಂಪ್ರದಾಯವನ್ನೇ ರೂಢಿಸಿಕೊಂಡು ಬಂದಿರುವುದರಿಂದ ಈ ಬಾರಿ ಹೆಚ್ಚಿನ ಬದಲಾವಣೆ ಇಲ್ಲದೇ ನಿರೀಕ್ಷೆಯಂತೆಯೇ ಡಿಎಂಕೆ ಪಕ್ಷ ಆಡಳಿತಕ್ಕೆ ಬರುವುದು ನಿರೀಕ್ಷಿತವಾಗಿತ್ತು.

assam

CAA & NRC ಆರಂಭವಾದದ್ದೇ ಅಸ್ಸಾಂಮಿನಿಂದಲೇ. ಹಾಗಾಗಿ ಈ ಬಾರಿ ಅಲ್ಲಿನ ಚುನಾವಣೆಯಲ್ಲಿ CAA & NRCಯೇ ಪ್ರಮುಖಪಾತ್ರವಹಿಸಿತ್ತು. ಬಿಜೆಪಿ ಪುನಃ ಆಡಳಿತಕ್ಕೆ ಬಂದಲ್ಲಿ ಅದನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದರೆ, ಕಾಂಗ್ರೇಸ್ಸ್ ಅದನ್ನು ಬಲವಾಗಿ ತಿರಸ್ಕರಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು. ಈ ಚುನಾವಣೆಯಲ್ಲಿ ಅಸ್ಸಾಂ ಜನತೆ ಬಿಜೆಪಿಗೆ ಎರಡನೇ ಬಾರಿಗೆ ಸ್ಪಷ್ಟ ಬಹುಮತವನ್ನು ಕೊಡುವ ಮೂಲಕ CAA & NRC ಪರ ಜನಾದೇಶವನ್ನು ನೀಡಿದ್ದಾರೆ.

ಚುನಾವಣಾ ಪೂರ್ವದಲ್ಲಿನ ಸಮೀಕ್ಷೆಯಂತೆಯೇ ಆಷ್ಟೆಲ್ಲಾ ಹಗರಣಗಳ ನಡುವೆಯೂ ಪ್ರಪ್ರಥಮ ಬಾರಿಗೆ ಕೇರಳದಲ್ಲಿ ಸತತವಾಗಿ ಎರಡನೇ ಬಾರಿಗೆ LDF ಅಧಿಕಾರವನ್ನು ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಲೋಕಸಭಾ ಚುನಾವಣಾ ಸಮಯದಲ್ಲಿ ಇದೇ UDF, ಲೋಕಸಭಾ ಚುನಾವಣೆಯಲ್ಲಿ 20ಕ್ಕೆ 19ರಲ್ಲಿ ಗೆದ್ದಿದ್ದಾಗ, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿಯೂ ಇದೇ ರೀತಿಯ ಬಹುಮತ ಬರಬಹುದು ಎಂಬ ಭ್ರಮೆಯಲ್ಲಿಯೇ ತೇಲಾಡಿದರ ಪರಿಣಾಮ ಹೇಳ ಹೆಸರಿಲ್ಲದಂತಾಗಿರುವುದು ನಿಜಕ್ಕೂ ಶೋಚನೀಯವಾಗಿದೆ. ದೇಶದ ಪ್ರಧಾನ ಮಂತ್ರಿಯ ಅಭ್ಯರ್ಥಿ ಎಂದೇ ಹಲವಾರು ವರ್ಷಗಳಿಂದಲೂ ತನ್ನನ್ನೇ ತಾನು ಬಿಂಬಿಸಿಕೊಂಡು ಬಂದಿರುವ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಕೇರಳದಿಂದ ಸ್ಪರ್ಥಿಸಿದ್ದಕ್ಕಾಗಿ ಅಷ್ಟೊಂದು ಸಂಸದರನ್ನು ಗೆಲ್ಲಲು ಸಾಧ್ಯವಾಯಿತು ಎಂದು ರಾಹುಲನನ್ನು ಹೆಗಲಮೇಲೆ ಎತ್ತಿ ಮೆರೆಸಿದವರು ಇಂದು ಈ ಪರಿಯ ಸೋಲನ್ನು ಯಾರ ತಲೆ ಮೇಲೆ ಕಟ್ಟುತ್ತಾರೆ ಎಂದು ಕಾದು ನೋಡ ಬೇಕಿದೆ.

kerala

ಲೋಕಸಭಾ ಚುನಾವಣೆಯ ಸಮಯದಲ್ಲಿ LDF ಹೀನಾಯವಾಗಿ ಸೋಲಲು ಶಬರಿಮಲೈ ನಿರ್ಥಾರಗಳು ಕಾರಣ ಎಂದು ನಂಬಲಾಗಿದ್ದರೂ, ನಿಜವಾಗಿಯೂ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಬಂದರೆ ತಮಗೆ ಕುತ್ತು ಎಂದು ಭಾವಿಸಿದ ಕೆಲ ಪಟ್ಟ ಭಧ್ರಹಿತಾಸಕ್ತಿಗಳು ಕೇಂದ್ರದಲ್ಲಿ LDF ಪ್ರಭಾವ ವಿಲ್ಲದಿದ್ದ ಕಾರಣ ಅನಿವಾರ್ಯವಾಗಿ ರೊಟ್ಟಿ ಹಳಸಿತ್ತು. ನಾಯಿ ಹಸಿದಿತ್ತು ಎನ್ನುವಂತೆ ರಾಹುಲ್ ನೇತೃತ್ವದ UDF ಗೆಲ್ಲಿಸಿದ್ದದ್ದು ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಪ್ರಜಪ್ರಭುತ್ವವಾಗಿ ಚುನಾವಣೆ ನಡೆದರೂ, ಗವರ್ನರ್ ಆಳ್ವಿಯೇ ಪ್ರಧಾನವಾದ ಕೇಂದ್ರಾಡಳಿತ ಪ್ರದೇಶದಲ್ಲಿ ಮೊದಲ ಬಾರಿಗೆ ಪುದುಚರಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದಿರುವುದು ಕುತೂಹಲವನ್ನು ಕೆರಳಿಸಿದೆ.

elec3

ಇನ್ನು ರಾಜ್ಯದ ಎರಡು ಉಪಚುನಾವಣೆಯಲ್ಲಿ ಮಸ್ಕಿ ಅನಿರೀಕ್ಷಿತವಾಗಿ ಕಾಂಗ್ರೇಸ್ ಪಾಲಾದರೆ, ಬಸವಕಲ್ಯಾಣ ಬಿಜೆಪಿಗೆ ಸುಲಭದ ತ್ತುತಾಗಿದೆ. ಇನ್ನು ಬೆಳಗಾವಿ ಲೋಕಸಭಾ ಕ್ಷೇತ್ರ RCB T20 ಪಂದ್ಯದಂತೆ ಕ್ಷಣಕ್ಷಣಕ್ಕೂ ಬದಲಾಗುತ್ತಾ ಅಂತಿಮವಾಗಿ ಕೇವಲ ಮೂರು ಸಾವಿರ ಮತಗಳ ಅಂತರದಲ್ಲಿ ಬಿಜೆಪಿ ಪ್ರಯಾಸದ ಗೆಲವನ್ನು ಪಡೆಯುವುದರಲ್ಲಿ ಸಫಲವಾಗಿದೆ. ಕಳೆದ ಬಾರಿ ಲಕ್ಷಾಂತರ ಮತಗಳ ಅಂತರದಲ್ಲಿ ಗೆದ್ದಿದ ಬಿಜೆಪಿ ಅಭ್ಯರ್ಥಿಗೆ ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದ ಶಿವಸೇನಾ ಅಭ್ಯರ್ಥಿ ಮಗ್ಗುಲ ಮುಳ್ಳಾಗಿದ್ದಂತೂ ಸುಳ್ಳಲ್ಲ.

puducery

ಆಂತಿಮವಾಗಿ ಹೇಳಬೇಕೆಂದರೆ ಅಸ್ಸಾಮ್ ಮತ್ತು ಪುದುಚೆರಿ ಬಿಜೆಪಿಯ ಪಾಲಾದರೆ, ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಮತ್ತೊಮ್ಮೆ LDF ಮತ್ತುಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೇಸ್ ಮೂರನೇ ಬಾರಿಗೆ ನಿರೀಕ್ಷೆಗೂ ಮೀರಿದ ಭಾರೀ ಬಹುಮತ ಪಡೆಯುವುದರೊಂದಿಗೆ ಆಡಳಿತಕ್ಕೆ ಬಂದಿದೆ.

ಮೊದಲ ಬಾರಿಗೆ EVM ಕುರಿತಾಗಿ ಇದುವರೆಗೂ ಯಾವುದೇ ಆಕ್ಷೇಪಣೆ ಬಾರದಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ.

ಇಷ್ಟೆಲ್ಲಾ ಸೋಲು/ಗೆಲುವು ಸಾಧಿಸಿದ್ದರೂ ಈ ಚುನಾವಣೆಯ ಫಲಿತಾಂಶ ಎಲ್ಲಾ ಪಕ್ಷಕ್ಕೂ ಎಚ್ಚರಿಕೆಯ ಗಂಟೆಯನ್ನು ಬಾರಿಸಿರುವುದು ಸುಳ್ಳಲ್ಲ.

ಬಿಜೆಪಿ : ಈ ಚುನಾವಣೆಯಲ್ಲಿ ಅಸ್ಸಾಂ ಹೊರತಾಗಿ ಬೇರಾವ ರಾಜ್ಯದಲ್ಲಿಯೂ ಬಿಜೆಪಿ ಕಳೆದುಕೊಳ್ಳುವುದು ಏನೂ ಇರಲಿಲ್ಲ. ಉಳಿದೆಲ್ಲಾ ಕಡೆ ಗೆಲ್ಲುವ ಪ್ರತಿಯೊಂದು ಸ್ಥಾನವೂ ಅವರಿಗೆ ಬೋನಸ್ ಎನ್ನುವಂತಿತ್ತು. ಹಾಗಾಗಿ ಪಶ್ಚಿಮ ಬಂಗಾಳದಲ್ಲಿ ಕಳೆದ ವಿಧಾನ ಸಭೆಯಲ್ಲಿ ಕೇವಲ 3 ಶಾಸಕರಿದ್ದದ್ದು ಈಗ 80ರ ಆಸುಪಾಸಿಗೆ ಬಂದಿದ್ದೇವೆ ಎಂದು ಗೆದ್ದು ಬೀಗಿದರೂ, ಅಷ್ಟೆಲ್ಲಾ ಅಬ್ಬರದ ಪ್ರಚಾರದ ನಡುವೆಯೂ ಮಮತ ಬ್ಯಾನರ್ಜಿ ಗೆದ್ದದ್ದು ಕೇವಲ ತನ್ನ ಪ್ರಾದೇಶಿಕ ಅಸ್ಮಿತೆಯಿಂದಾಗಿ ಎನ್ನುವುದನ್ನು ಗಮನಿಸಬೇಕಾಗಿದೆ. ಚುನಾವಣೆಯಲ್ಲಿ ಗೆದ್ದರೆ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಸೂಚಿಸಿದಿದ್ದ ಪರಿಣಾಮ ಮಮತಾ ಬ್ಯಾನರ್ಜಿ ಸತತವಾಗಿ ಹೊರಗಿನವರಿಗೆ ಅಧಿಕಾರ ಕೊಡಬೇಡಿ ಎಂದು ಕೇಳಿಕೊಂಡಿದ್ದು ಸಫಲವಾಗಿದೆ ಎಂದೇ ಭಾವಿಸಬಹುದಾಗಿದೆ.

ತಮಿಳುನಾಡಿನಲ್ಲಿ 4 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಖಾತೆ ಆರಂಭಿದೆ. ಅದರಲ್ಲೂ ಕೊಯಂಬತ್ತೂರು ದಕ್ಷಿಣ ಕ್ಷೇತ್ರದಲ್ಲಿ ಚಿತ್ರನಟ ಕಮಲಹಾಸನ್ ಅವರಿಗೆ ಸೋಲು ಉಣಿಸಿದ್ದು ಹೆಮ್ಮೆಯಾದರೆ, ಬಾರೀ ನಿರೀಕ್ಷೆ ಮೂಡಿಸಿದ್ದ ಮಾಜೀ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸೋತಿರುವುದು ಬೇಸರ ತಂದಿದೆ

ಕೇರಳದಲ್ಲಿ ಹತ್ತು ಹಲವಾರು ಕ್ಷೇತ್ರಗಳಲ್ಲಿ ಕೂದಳತೆಯ ಅಂತರದಿಂದ ಸೋಲುಂಡಿದ್ದರೂ ಭಾರೀ ಪ್ರಮಾಣದಲ್ಲಿ ಮತಗಳನ್ನು ಹೆಚ್ಚಿಸಿಕೊಂಡಿರುವುದು ಉತ್ತಮವಾಗಿದೆ.

ಒಟ್ಟಿನಲ್ಲಿ ಈ ಚುನಾವಣೆಯಿಂದ ಸ್ಪಷ್ಟವಾಗಿ ಬಿಜೆಪಿಯವರು ಕಲಿಯ ಬೇಕಾದ್ದದ್ದು ಏನೆಂದರೆ, ಗ್ರಾಮ ಪಂಚಾಯಿತಿ, ಮಂಡಲ ಪಂಚಾಯಿತಿ, ನಗರ ಸಭೆ, ಪುರಸಭೆ, ವಿಧಾನಸಭೆ, ಲೋಕಸಭೆ ಹೀಗೆ ಎಲ್ಲಾ ಚುನಾವಣೆಗಳಲ್ಲಿಯೂ ಮೋದಿಯವರ ಹೆಸರನ್ನೇ ಹೇಳಿಕೊಂಡು ಹೋಗಲಾಗದ ಕಾರಣ ಆದಷ್ಟು ಬೇಗನೇ ಎಲ್ಲಾ ರಾಜ್ಯಗಳಲ್ಲಿಯೂ ಸ್ಥಳೀಯ ನಾಯಕರನ್ನು ಗುರುತಿಸಿ, ಅವರನ್ನು ಬೆಳಸಿ ಮತ್ತು ಬೆಂಬಲಿಸಲೇ ಬೇಕಾದ ಅನಿವಾರ್ಯವಾಗಿದೆ.

rahul

ಕಾಂಗ್ರೇಸ್ : ಕೇವಲ ಅಸ್ಸಾಂನಲ್ಲಿ ಅಲ್ಪ ಸ್ವಲ್ಪ ಹೋರಾಟ ತೋರಿದರೆ ಉಳಿದೆಲ್ಲಾ ಕಡೆ ದುರ್ಬೀನು ಹಾಕಿಕೊಂಡು ಹುಡುಕುವಂತಾಗಿದೆ. ಎದುರು ಮನೆಯಲ್ಲಿ ಮಗು ಹುಟ್ಟಿದರೆ ತಮ್ಮ ಮನೆಯಲ್ಲಿ ತೊಟ್ಟಿಲು ಕಟ್ಟಿದರಂತೆ ಎನ್ನುವ ಪರಿಸ್ಥಿತಿ ಇಂದು ಕಾಂಗ್ರೇಸ್ಸಿನದ್ದಾಗಿದೆ. ಶತ್ರುವಿನ ಶತ್ರು ನನ್ನ ಮಿತ್ರ ಎನ್ನುವಂತೆ ದೇಶಾದ್ಯಂತ ಈ ಚುನಾವಣೆಯಲ್ಲಿ ಮೂಲೆ ಗುಂಪಾಗಿದ್ದರೂ ಬಿಜೆಪಿಯನ್ನು ಸೋಲಿಸಿದ ಪಶ್ಚಿಮ ಬಂಗಾಳದ ಜನರಿಗೂ ಮತ್ತು ಟಿಎಂಸಿ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಅಭಿನಂದಿಸಿದ್ದು ಆ ಪಕ್ಷದ ಅವನತಿಯನ್ನು ಸ್ಪಷ್ಟವಾಗಿ ತೋರಿಸುತ್ತಿದೆ.

ದೇಶದ ಜನ ಕಾಂಗ್ರೇಸ್ಸಿಗರನ್ನು‌ ಮತ್ತವರ ನಾಯಕನನ್ನು ತಿರಸ್ಕರಿಸಿಯಾಗಿದೆ. ಹಾಗಾಗಿ ಇನ್ನೂ ದೇಶದ ರಾಜಕೀಯದಲ್ಲಿ ಉಳಿಯ ಬೇಕಾದಲ್ಲಿ, ಈ ನಕಲೀ ಗಾಂಧಿ ಕುಟುಂಬದ ಹೊರತಾದ ಸಮರ್ಥ ನಾಯಕತ್ವವನ್ನು ಆದಷ್ಟು ಬೇಗ ಹುಡುಕಿಕೊಳ್ಳಬೇಕೆಂಬ ಷರಾ ಬರೆದಂತಿದೆ.

ತೃಣಮೂಲ ಕಾಂಗ್ರೇಸ್ : Operation success but patient is dead ಎನ್ನುವಂತೆ ಇಡೀ ಕೇಂದ್ರ ಸರ್ಕಾರವೇ ತನ್ನ ಎದುರಾಗಿ ನಿಂತರೂ ಚಲ ಬಿಡದ ತ್ರಿವಿಕ್ರಮನಂತೆ ಒಬ್ಬಂಟಿಯಾಗಿ 200ಕ್ಕೂ ಹೆಚ್ಚಿನ ಶಾಸಕರನ್ನು ಗೆಲ್ಲಿಸಿಕೊಂಡು ಬರಲು ಸಫಲವಾಗಿದ್ದರೂ, ಒಬ್ಬ ಮುಖ್ಯ ಮಂತ್ರಿಯಾಗಿ ಒಂದು ಕಾಲದ ಅತ್ಯಾಪ್ತ ಶಿಷ್ಯ ಬಿಜೆಪಿಯ ಅಭ್ಯರ್ಥಿ ಸುವೆಂದು ಅಧಿಕಾರಿ ಎದುರು ಸ್ವತಃ ಸೋತಿರುವುದರಿಂದ ವಯಕ್ತಿಕವಾಗಿ ಆಕೆಯನ್ನು ಜನರು ತಿರಸ್ಕರಿಸಿದ್ದಾರೆ ಎಂಬುದು ಸ್ಲಷ್ಟವಾಗುತ್ತದೆ.

ಈಗ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿ ಮುಂದಿನ ಆರು ತಿಂಗಳೊಳಗೆ ವಿಧಾನಸಭೆಗೋ ಇಲ್ಲವೇ ವಿದಾನ ಪರಿಷತ್ತಿನ ಸದಸ್ಯೆಯಾಗಿ ಅಧಿಕಾರವನ್ನು ಉಳಿಸಿಕೊಂಡರೂ ಅದು ಹಿಂಬಾಗಿಲಿನಿಂದ ಜನಾದೇಶದ ವಿರುದ್ಧವಾಗಿದೆ. ಇನ್ನಾದರೂ ಅಲ್ಪ ಸಂಖ್ಯಾತರ ಅತೀಯಾದ ತುಷ್ಟೀಕರಣವನ್ನು ಸ್ವಲ್ಪ ಕಡಿಮೆ ಮಾಡಿ ಸಬ್ ಕಾ ಸಾತ್ ಸಬ್ಕಾ ವಿಕಾಸ್ ನತ್ತ ಗಮನ ಹರಿಸುವುದು ಉತ್ತಮವಾಗಿದೆ.

ಮಿಳು ನಾಡಿನಲ್ಲಿ ಅವರು ಬಿಟ್ಟು ಇವರು, ಇವರ ಬಿಟ್ಟು ಅವರು ಎಂಬ ರಾಜ ಕಾರಣದಿಂದ ತಮಿಳರು ಹೊರಬಾರದೇ ಇರುವುದು ಅಲ್ಲಿಯ ಜನರ ರಾಜಕೀಯ ಬೌಧ್ದಿಕ ದಿವಾಳಿತನ ಮತ್ತೊಮ್ಮೆ ಜಗಜ್ಜಾಹೀರಾತಾಗಿದೆ.

ಅಷ್ಟೆಲ್ಲಾ ಹಗರಣಗಳು ಬೆಳಕಿಗೆ ಬಂದು ತಮ್ಮ ವಯಕ್ತಿಯ ಕರಾಮತ್ತಿನಿಂದಾಗಿ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಂಡರೂ ಕೇರಳಿಗರು ಕಮ್ಮಿನಿಷ್ಟರನ್ನೇ ಆಡಳಿತಕ್ಕೆ ತಂದಿರುವುದಕ್ಕೆ ಮುಂದಿನ ದಿನಗಳಲ್ಲಿ ಭಾರೀ ಬೆಲೆಯನ್ನು ತೆರಬೇಕಾಗುವುದು.

ದೇಶದಲ್ಲಿ ಜನರು ಬಿಜೆಪಿಗೆ ಹೆಚ್ಚಿನ ಅಧಿಕಾರ, ಡಿಎಂಕೆ, ತೃಣಮೂಲ ಕಾಂಗ್ರೇಸ್ ಮತ್ತು ಕಮ್ಯೂನಿಷ್ಟರಿಗೆ ಮತ್ತೊಂದು ಆವಕಾಶವನ್ನು ನೀಡಿದರೆ, ಇಲ್ಲಿ ಸ್ಪಷ್ಟವಾಗಿ ಸೋತು ಸುಣ್ಣವಾಗಿರುವುದು ತಮ್ಮದು ಅತ್ಯಂತ ಹಳೆಯ ಪಕ್ಷ ಎಂದು ಕೊಚ್ಚಿಕೊಳ್ಳುವ ಕಾಂಗ್ರೆಸ್. ಈ ಚುನಾವಣೆಯಲ್ಲಿ ಕಾಂಗ್ರೇಸ್ಸನ್ನು ಮತ್ತೊಮ್ಮೆ ಧೂಳಿಪಟ ಮಾಡುವ ಮೂಲಕ ಆ ಪಕ್ಷವನ್ನು ಇತಿಹಾಸದ ಪುಟವನ್ನು ಸೇರುವಂತೆ ಮಾಡಿರುವುದಂತೂ ಸ್ಪಷ್ಟವಾಗಿದೆ.

vaccin

ಇನ್ನು ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದೆ. ಈ ಜನಾದೇಶಕ್ಕೆ ಅನುಗುಣವಾಗಿ ಈ ಎಲ್ಲಾ ಪಕ್ಷಗಳು ತಮ್ಮ ಹಮ್ಮು ಬಿಮ್ಮು ರಾಜಕೀಯವೆಲ್ಲವನ್ನೂ ಬದಿಗಿಟ್ಟು ಈ ದೇಶಕ್ಕೆ ಬಂದಿರುವ ಮಹಾಮಾರಿ ಕೊರೋನಾದ ವಿರುದ್ಧ ಈಗ ಗೆಲ್ಲಲೇ ಬೇಕಾಗಿದೆ. ತಮ್ಮ ಎಲ್ಲಾ ರಾಜ್ಯಗಳಲ್ಲಿಯೂ ಕೊರೋನಾ ಲಸಿಕಾ ಅಭಿಯಾನವನ್ನು ಆದಷ್ಟೂ ಚುರುಕುಗೊಳಿಸಿ ಜನರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಲ್ಲಿ ಹೋರಾಡ ಬೇಕಾಗಿದೆ.

elec2

ಮೋದಿ ಸರಿ ಇಲ್ಲಾ ಬಿಜೆಪಿ ಸರಿ ಇಲ್ಲಾ ಎಂದು ಬೊಬ್ಬಿರಿಯುವವರಲ್ಲಿ ಒಂದು ಮನವಿಯೇನೆಂದರೆ. ಮುಂದಿನ 2024ರಲ್ಲಿ ಮೋದಿಯವರ ವಿರುದ್ಧ ಹೋರಾಡುವ ಸಲುವಾಗಿಯಾದರೂ ದಯವಿಟ್ಟು ತಪ್ಪದೇ ಲಸಿಕೆ ಹಾಕಿಸಿಕೊಳ್ಳುವ ಮೂಲಕ ತಮ್ಮ ಅಮೂಲ್ಯವಾದ ಜೀವವನ್ನು ಉಳಿಸಿಕೊಳ್ಳಿ. ಜೀವ ಇದ್ದರೆ ಮಾತ್ರ ಜೀವನ. ಜೀವನ ಸರಿಯಾಗಿದ್ದಲ್ಲಿ ಮಾತ್ರವೇ ರಾಜಕೀಯ.

ಏನಂತೀರೀ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s