ಪ್ರಯಾಗ ಭಾರತದ ಅತ್ಯಂತ ಪ್ರಾಚೀನ ನಗರದಲ್ಲಿ ಒಂದಾಗಿದೆ. ಉತ್ತರ ಪ್ರದೇಶದ ಬಹುದೊಡ್ಡ ನಗರದಲ್ಲಿ ಇದೂ ಸಹಾ ಒಂದಾಗಿದ್ದು ಪೌರಾಣಿಕವಾಗಿಯೂ ಮತ್ತು ಐತಿಹಾಸಿಕವಾಗಿಯೂ ಪ್ರಸಿದ್ಧ ನಗರವಾಗಿದೆ. ವೇದ ಪುರಾಣಗಳಲ್ಲಿಯೂ ಈ ನಗರದ ಬಗ್ಗೆ ಉಲ್ಲೇಖವಿದ್ದು ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದ ನಂತರ ಬ್ರಹ್ಮದೇವ ಪ್ರಥಮವಾಗಿ ಇದೇ ನಗರದಲ್ಲಿಯೇ ಯಜ್ಞಮಾಡಿದ ಎಂಬ ಪ್ರತೀತಿ ಇದೆ. ಆದ್ದಾರಿಂದಲೇ ಈ ನಗರಕ್ಕೆ ಪ್ರಯಾಗ ಎಂಬ ಹೆಸರು ಬಂದಿತೆಂದು ನಂಬಲಾಗಿದೆ. ಇದು ಮೂರು ನದಿಗಳು ಸೇರುವ ತ್ರಿವೇಣಿ ಸಂಗಮವೂ ಹೌದು. ಗಂಗ ಯಮುನಾ ಮತ್ತು ವೇದಗಳಲ್ಲಿ ಉಲ್ಲೇಖವಾಗಿರುವ ಮತ್ತು ಸದ್ಯಕ್ಕೆ ಗುಪ್ತಗಾಮಿನಿಯಾಗಿ ಹರಿಯುವ ಸರಸ್ವತಿ ನದಿಗಳ ಸಂಗಮವಾಗಿದೆ. ಈ ತ್ರಿವೇಣಿ ಸಂಗಮದಲ್ಲಿ ಪ್ರತೀ ಹನ್ನೆರಡು ವರ್ಷಗಳಿಗೊಮ್ಮೆ ಕುಂಬಮೇಳ ಮತ್ತು ಪ್ರತೀ ಆರು ವರ್ಶಗಳಿಗೊಮ್ಮೆ ಅರ್ಧ ಕುಂಬಮೇಳ ಇಲ್ಲಿ ನಡೆಯುತ್ತದೆ. ಈ ಮೇಳಗಳಿಗೆ ದೇಶ ವಿದೇಶಗಳಿಂದ ಕೋಟ್ಯಾಂತರ ಜನರು ಇಲ್ಲಿಗೆ ಬಂದು ತ್ರಿವೇಣಿ ಸಂಗಮದಲ್ಲಿ ಮಿಂದು ಪರಮ ಪುನೀರತಾಗುತ್ತಾರೆ. ಈ ಕುಂಭಮೇಳದ ಆರತಿಯನ್ನು ನೋಡಲು ನಾಗಾ ಸಾಧುಗಳು ಅಘೋರಿಗಳು ಋಷಿ ಮುನಿಗಳು ಮತ್ತು ಸಾಧು ಸಂತರು ಇಲ್ಲಿಗೆ ಆಗಮಿಸಿ ಭಕ್ತಿ ಭಾವದಿಂದ ಇಲ್ಲಿ ಪೂಜೆಯನ್ನು ಸಲ್ಲಿಸುತ್ತಾರೆ. ದೇಶದ ಎಲ್ಲಾ ತೀರ್ಥಕ್ಷೇತ್ರಗಳಲ್ಲಿ ಇದು ಅತ್ಯಂತ ಮಹತ್ವಪೂರ್ಣ ಮತ್ತು ವಿಶೇಷವಾದದ್ದು ಎನಿಸಿದ್ದರಿಂದ ಇದನ್ನು ತೀರ್ಥರಾಜ್ ಎಂದೂ ಕರೆಯಲಾಗುತ್ತದೆ.
ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲಿ ದೇವರುಗಳು ನಿಂತಿರುವ ಇಲ್ಲವೇ ಕುಳಿತಿರುವ ಭಂಗಿಯಲ್ಲಿರುತ್ತದೆ. ಕೇವಲ ರಂಗನಾಥ ಸ್ವಾಮಿ ಮಾತ್ರವೇ ಹೊರತಾಗಿದೆ. ಇಂತಹ ಪ್ರವಿತ್ರ ಸಂಗಮ ಕ್ಷೇತ್ರದಲ್ಲಿ ನೆಲೆಗೊಂಡಿರುವ ಆಂಜನೇಯಸ್ವಾಮಿ ಅದರಲ್ಲೂ ವಿಶೇಷವಾಗಿ ಮಲಗಿಕೊಂಡಿರುವ ಆಂಜನೇಯಸ್ವಾಮಿ ಅರ್ಥತ್ ಶ್ರೀ ಬಡೆ ಹನುಮಾನ್ ಜೀ ದೇವಸ್ಥಾನವು ಸಂಗಮದಕ್ಕೆ ಅಂಟಿಕೊಂಡಿರುವಂತಿದೆ. ಬಹುಶಃ ಈರೀತಿಯಾಗಿ ಮಲಗಿಕೊಂಡಿರುವ ಈ ಹನುಮಾನ್ ದೇವಾಲಯವು ವಿಶ್ವದ ಏಕೈಕ ದೇವಾಲಯವಾಗಿದೆ ಇಲ್ಲಿನ ವಿಶೇಷವೇನೆಂದರೆ ಇಲ್ಲಿನ ವಿಗ್ರಹವು ಬಹಳ ಭವ್ಯವಾದ ಮತ್ತು ಬಹುಕಾಂತೀಯವಾಗಿದೆ. ಈ ವಿಗ್ರಹವು ವೀರ ಮುದ್ರೆಯಲ್ಲಿದ್ದು ಅಗಲವಾದ ಹಣೆಯ, ದೊಡ್ಡ ತೋಳುಗಳು, ಅಗಲವಾದ ಸೊಂಟವಿರುವ ವಿಗ್ರಹವಾಗಿದ್ದು ಸಹಜವಾಗಿ ನೋಡುಗರ ಮನಸ್ಸಿನಲ್ಲಿ ಶೌರ್ಯದ ಭಾವನೆಗಳನ್ನು ಹುಟ್ಟುಹಾಕುತ್ತದೆ. ಹೀಗಾಗಿ ವೀರರಸ ತುಂಬಿದ ಈ ಸ್ವಾಮಿಯನ್ನು ನೋಡಲು ದೇಶದ ವಿವಿದೆಡಿಯಿಂದ ಸಹಸ್ರಾರು ಭಕ್ತರು ಇಲ್ಲಿಗೆ ಆಗಮಿಸಿ ಬಹಳ ಶ್ರದ್ಧಾ ಭಕ್ತಿಯಿಂದ ಈ ಹನುಮಂತನನ್ನು ಆರಾಧಿಸುತ್ತಾರೆ. ಶ್ರೀ ಬಡೆ ಹನುಮಾನ್ ಜಿ ವಿಗ್ರಹವಿರುವ ಈ ಸ್ಥಳದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮದ ನೀರು ಗುಪ್ತಗಾಮಿನಿಯಂತೆ ಹರಿಯುತ್ತದೆ ಎಂದು ನಂಬಲಾಗಿದೆ.
ಶ್ರೀ ಬಡೇ ಹನುಮಾನ್ ವಿಗ್ರಹದ ಸ್ಥಳವು ಅತ್ಯಂತ ವೈಭವವಾಗಿದ್ದು ಶ್ರೀ ಬಡೇ ಹನುಮಾನ್ ವಿಗ್ರಹದ ವಿಗ್ರಹದ ಬಲ ಪಾದದ ಕೆಳಗೆ ಅಹಿರಾವಾಣ ಪ್ರತಿಮೆ ಇದ್ದು, ಹನುಮಂತ ಅಹಿರಾವಣನ ಕೆಟ್ಟ ಭಾವನೆಗಳು ಮತ್ತು ಕೆಟ್ಟ-ಕ್ರಿಯೆಗಳನ್ನು ಮೆಟ್ಟಿರುವ ಪ್ರತೀಕವಾಗಿದೆ. ಅದೇ ರೀತಿಯ ವಿಗ್ರಹದ ಎಡ ಪಾದದ ಕೆಳಗೆ ಅಹಿರಾವಣನ ಆರಾದ್ಯ ದೇವಿ ಮತ್ತು ಇಚ್ಛಾಶಕ್ತಿಯ ದೇವತೆ ಎಂದು ಪರಿಗಣಿಸಲಾದ ಕಾಮದಾ ದೇವಿಯ ಪ್ರತಿಮೆ ಇದೆ. ಹನುಮಂತನ ಮತ್ತೊಂದು ಭಾಗದಲ್ಲಿ ಶ್ರೀರಾಮ ಮತ್ತು ಲಕ್ಷ್ಮಣರ ವಿಗ್ರಹಗಳು ಇದ್ದು ಅದಕ್ಕೂ ಸಹಾ ನಿತ್ಯ ಸಾಂಗೋಪಾಂಗವಾಗಿ ಪೂಜೆ ಮಾಡಲಾಗುತ್ತದೆ.
ದೇವಾಲಯ ಇಲ್ಲಿ ಸ್ಥಾಪನೆಯಾದ ಹಿಂದೆಯೂ ಒಂದು ಅದ್ಭುತ ಪವಾಡದ ಕಥೆಯಿದೆ. ಅದೊಮ್ಮೆ ಹನುಮನ್ ಭಕ್ತಿ ವ್ಯಾಪಾರಿಯೊಬ್ಬರು ತಮ್ಮೂರಿನಲ್ಲಿ ಈ ಹನುಮಾನ್ ವಿಗ್ರಹವನ್ನು ಸ್ಥಾಪಿಸುವ ಸಲುವಾಗಿ ಒಂದು ದೊಡ್ಡ ದೊಣಿಯಲ್ಲಿ ಈ ಭವ್ಯವಾದ ಹನುಮಂತನ ಪ್ರತಿಮೆಯನ್ನು ಸಾಗಿಸುತ್ತಿದ್ದರೆಂತೆ. ಆ ದೋಣಿ ಪ್ರಯಾಗದ ಬಳಿ ತಲುಪಿದಾಗ ಇದ್ದಕ್ಕಿದ್ದಂತೆಯೇ ಆ ಪ್ರತಿಮೆ ಭಾರವಾದಂತಾಗಿ ನೋಡ ನೋಡುತ್ತಿದ್ದಂತೆಯೇ ದೋಣಿ ಗಂಗಾ ಯಮುನಾ ಸಂಗಮದ ಬಳಿ ಮುಳುಗಿಹೋಯಿತು. ಕೆಲ ಸಮಯದ ನಂತರ, ಗಂಗಾ ನದಿಯ ನೀರಿನ ಹರಿವು ಕಡಿಮೆಯಾದಾಗ ನೀರಿನಲ್ಲಿ ಮಲಗಿದಂತಹ ಮುಳುಗಿದ್ದ ವಿಗ್ರಹವು ಕಾಣಿಸಿತಂತೆ. ಮತ್ತೆ ಅಲ್ಲಿಂದ ವಿಗ್ರಹವನ್ನು ತೆಗೆಯಲು ಬಹಳ ಪ್ರಯತ್ನ ಪಟ್ಟರೂ ಕಿಂಚಿತ್ತೂ ಅಲಗಾಡಿಸಲು ಸಾಧ್ಯವಾಗದ ಕಾರಣ, ಅಲ್ಲಿಯೇ ಅದೇ ಭಂಗಿಯಲ್ಲಿಯೇ ಹನುಮಂತನ ದೇವಾಲಯವನ್ನು ಅದೇ ಸ್ಥಳದಲ್ಲಿ ಸ್ಥಾಪಿಸಲಾಯಿತು. ಸಾಧಾರಣವಾಗಿ ಎಲ್ಲಾ ದೇವಸ್ಥಾನಗಳೂ ಎತ್ತರದ ಪ್ರದೇಶದಲ್ಲಿ ಇದ್ದು ಮೆಟ್ಟಿಲು ಹತ್ತಿ ಹೋಗಬೇಕಾಗಿದ್ದರೆ, ಈ ದೇವಾಲಯ ಮಾತ್ರ ಭೂಮಿಯಿಂದ ಹತ್ತು ಹದಿನೈದು ಮೆಟ್ಟಿಲುಗಳನ್ನು ಕೆಳಗೆ ಇಳಿದು ದೇವರ ದರ್ಶನ ಮಾಡಬೇಕಿದೆ. ಈ ಹನುಮಂತ ಇಡೀ ಪ್ರಯಾಗವನ್ನು ಕಾಯುತ್ತಾನೆ ಎಂಬ ನಂಬಿಕೆ ಇರುವ ಕಾರಣ ಈ ದೇವರನ್ನು ಪ್ರಯಾಗಿನ ಕೊತ್ವಾಲ್ ಹನುಮಾನ್ ಜೀ ಎಂದೂ ಕರೆಯಲಾಗುತ್ತದೆ.
ವರ್ಷಕ್ಕೆ ಒಂದೆರಡು ಬಾರಿ ಗಂಗಮಾತೆ, ಈ ದೇವಾಲಯಕ್ಕೆ ನುಗ್ಗಿ ಇಡೀ ಹನುಮಂತನನ್ನು ಕೆಲ ಕಾಲ ಆವರಿಸಿ ನಂತರ ನೀರಿನ ಹರಿವು ಕಡಿಮೆಯಾಗುತ್ತದೆ. ದೇವಸ್ಥಾನ ಜಲಾವೃತವಾಗುವುದರಿಮ್ದ ಲೋಕ ಕಲ್ಯಾಣವಾಗುತ್ತದೆ ಎಂಬ ನಂಬಿಕೆ ಇಲ್ಲಿನವರಿಗೆ ಇರುವ ಕಾರಣ ಈ ಸುಂದರ ದೃಷ್ಯವನ್ನು ನೋಡಲು ಸಾವಿರಾರು ಭಕ್ತಾದಿಗಳು ದೇವಸ್ಥಾನಕ್ಕೆ ದಾಂಗುಡಿ ಇಡುವುದು ಇಲ್ಲಿನ ರೂಢಿಯಾಗಿದೆ. ಹನುಮಂತನನ್ನು ಗಂಗಾಮಾತೆ ಆವರಿಸಿರುವಾಗ ದೇವಾಲಯದ ಮೊದಲನೇ ಅಂತಸ್ತಿನಲ್ಲಿ ಹನುಮಂತನ ಉತ್ಸವಮೂರ್ತಿಯನ್ನು ಇಟ್ಟು ಆದಕ್ಕೆ ಪೂಜಿಸಲಾಗುತ್ತದೆ.
ಶ್ರೀ ಬಡೇ ಹನುಮಂತನ ಪೂಜೆ ಮತ್ತು ಅರ್ಚನೆಗೆ ಯಾವುದೇ ಕಟ್ಟುಪಾಡಿಲ್ಲದಿರುವ ಕಾರಣ, ಬಡವ ಬಲ್ಲಿದ, ಜಾತಿ ಮತ್ತು ಧರ್ಮದ ಹಂಗಿಲ್ಲದೇ ಎಲ್ಲಾ ಆಸ್ತಿಕ ಬಂಧುಗಳು ಇಲ್ಲಿ ಸರಿ ಸಮಾನರಾಗಿ ತಮ್ಮ ಶಕ್ತಿಗೆ ಅನುಗುಣವಾಗಿ ಭಗವಂತನನ್ನು ಆರಾಧಿಸುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದಾಗಿದೆ.
ದೇಶದ ಎಲ್ಲಾ ಭಾಗಗಳಿಂದಲೂ ಪ್ರಯಾಗಕ್ಕೆ ಸುಲಭವಾಗಿ ರಸ್ತೆ, ರೈಲು ಮತ್ತು ವಿಮಾನಗಳ ಮೂಲಕ ತಲುಪಬಹುದಾಗಿದೆ. ಅಲಹಾಬಾದ್ ರೈಲ್ವೇ ಜಂಕ್ಷನ್ನಿನಿಂದ ಕೇವಲ 6.4 ಕಿಲೋಮೀಟರ್ ದೂರದಲ್ಲಿದೆ. ಬಮ್ರೌಲಿ ವಿಮಾನ ನಿಲ್ದಾಣದಿಂದ ಈ ದೇವಾಲಯ ಸುಮಾರು 16.9 ಕಿಲೋಮೀಟರ್ ದೂರದಲ್ಲಿದೆ. ಹವಾಮಾನದವನ್ನು ಪರಿಗಣಿಸಿದಲ್ಲಿ ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಇಲ್ಲಿಗೆ ಭೇಟಿ ನೀಡುವುದು ಉತ್ತಮವಾಗಿದೆ.
ಸ್ನೇಹಿತರೆ, ಪ್ರಯಾಗದ ಬಡೇ ಹನುಮಾನ್ ದೇವಾಲಯದ ಬಗ್ಗೆ ಇಷ್ಟೆಲ್ಲಾ ವಿಷಯ ತಿಳಿದ ನಂತರ ಇನ್ನೇಕೆ ತಡಾ, ಈಗಿರುವ ಕೊರಾನಾ ಮಹಾಮಾರಿಯ ಎಲ್ಲಾ ಸಮಸ್ಯೆಗಳೂ ಬಗೆ ಹರಿದ ಕೂಡಲೇ, ಪ್ರಯಾಗಕ್ಕೆ ಪ್ರವಾಸ ಮಾಡಿ ಭಕ್ತಿಯಿಂದ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಬಡೇ ಹನುಮಂತನ ದರ್ಶನ ಮಾಡಿ ಆತನ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತೀರೀ ತಾನೇ?
ಏನಂತೀರೀ?
ನಿಮ್ಮವನೇ ಉಮಾಸುತ