ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬಹುಮತ ಪಡೆದವರು ಆಡಳಿತ ನಡೆಸುವ ಅಥಿಕಾರ ಪಡೆದರೆ, . ಬಹುಮತ ಪಡೆಯದವರು ವಿರೋಧ ಪಕ್ಷವಾಗುತ್ತಾರೆ. ದೇಶದ ಹಿತದೃಷ್ಟಿಯಿಂದ ದೇಶದ ಆಗು ಹೋಗುಗಳ ಬಗ್ಗೆ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಲು ಆಡಳಿತ ಪಕ್ಷದಷ್ಟೇ ಜವಾಬ್ಧಾರಿ ವಿರೋಧಪಕ್ಷಕ್ಕೂ ಇರುತ್ತದೆ. ಹಾಗಾಗಿಯೇ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳನ್ನು ಕಾವಲು ನಾಯಿಗಳಿಗೆ ಹೋಲಿಸಲಾಗುತ್ತದೆ,
ವಿರೋಧ ಪಕ್ಷ ಎಂದ ಮಾತ್ರಕ್ಕೆ ಆಡಳಿತ ಪಕ್ಷ ಮಾಡುವ ಎಲ್ಲಾ ಕೆಲಸಗಳನ್ನೂ ವಿರೋಧಿಸಲೇ ಬೇಕೆಂಬ ನಿಯಮವೇನಿಲ್ಲ. ವಿರೋಧ ಪಕ್ಷವು ರಚನಾತ್ಮಕವಾಗಿ ಕಾರ್ಯನಿಭಾಯಿಸುವ ಮೂಲಕ ಆಡಳಿತ ಪಕ್ಷ ದೇಶವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡ್ಯೊಯ್ಯುವ ಗುರುತರ ಜವಾಬ್ಧಾರಿಯನ್ನು ಹೊಂದಿರುತ್ತದೆ. ದೇಶ ಸಂಕಷ್ಟದ ಪರಿಸ್ಥಿತಿಯಲ್ಲಿ ಇರುವಾಗ ಒಬ್ಬ ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕ ಹೇಗೆ ವರ್ತಿಸಬೇಕು? ಎಂಬುದಕ್ಕೆ ಸತ್ ಸಂಪ್ರದಾಯವನ್ನು ಹಾಕಿಕೊಟ್ಟ ಶ್ರೀ ಅಟಲ್ ಬಿಹಾರಿ ವಾಜಪೇಯಿ ಮತ್ತು ಶ್ರೀ ನರಸಿಂಹ ರಾಯರ ಈ ಸುಂದರ ಪ್ರಸಂಗವನ್ನು ಇಂದಿನ ವಿರೋಧ ಪಕ್ಷದವರು ಖಂಡಿತವಾಗಿಯೂ ಮನನ ಮಾಡಲೇ ಬೇಕಾಗಿದೆ.
ಅದು 90ರ ದಶಕದ ಆರಂಭ ಕಾಲ. ಚುನಾವಣಾ ಪ್ರಚಾರದ ಸಮಯದಲ್ಲಿಏ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕ ಮಾಜೀ ಪ್ರಧಾನ ಮಂತ್ರಿ ಶ್ರೀ ರಾಜೀವ್ ಗಾಂಧಿಯವರು ಮಾನವ ಬಾಂಬ್ ಸ್ಪೋಟದಲ್ಲಿ ಅಸುನೀಗಿ, ಕಾಂಗ್ರೇಸ್ ಮತ್ತು ಅದರ ಮಿತ್ರ ಪಕ್ಷಗಳು ಸರಳ ಬಹುಮತ ಪಡೆದು ಹಿರಿಯ ಮುತ್ಸದ್ದಿ ಶ್ರೀ ನರಸಿಂಗರಾವ್ ಅವರ ನೇತೃತ್ವದಲ್ಲಿ ಅಧಿಕಾರವನ್ನು ಗಳಿಸುತ್ತಾರೆ. ಆಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸುಮಾರು 120 ಸ್ಥಾನಗಳನ್ನು ಗಳಿಸಿ ವಿರೋಧಪಕ್ಷದ ಸ್ಥಾನ ಗಳಿಸುತ್ತದೆ. ದೇಶದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ರಿಸರ್ವ್ ಬ್ಯಾಂಕಿನ ಮಾಜೀ ಗವರ್ನರ್ ಅಗಿದ್ದ ರಾಜಕೀಯೇತರ ವ್ಯಕ್ತಿ ಶ್ರೀ ಮನಮೋಹನ್ ಸಿಂಗ್ ಅವರನ್ನು ಹಣಕಾಸು ಮಂತ್ರಿಗಳನ್ನಾಗಿ ಮಾಡುವ ಮುಖಾಂತರ ದೇಶದ ಜನರ ಹುಬ್ಬೇರುವಂತೆ ಮಾಡಿರುತ್ತಾರೆ ರಾಯರು.
ಹಣಕಾಸು ಸಚಿವರಾಗಿ ಅಧಿಕಾರವನ್ನು ವಹಿಸಿಕೊಂಡ ಮನಮೋಹನ್ ಸಿಂಗ್ ಅವರನ್ನು ಭೇಟಿಯಾದ ರಾಯರು, ನಮ್ಮ ದೇಶದ ಖಜಾನೆಯಲ್ಲಿ ಸದ್ಯಕ್ಕೆ ಎಷ್ಟು ಹಣವಿದೆ? ಎಂದು ಕೇಳುತ್ತಾರೆ. ಪ್ರಧಾನಿಗಳ ಪ್ರಶ್ನೆಗೆ ಅಷ್ಟೇ ಗಂಭೀರವಾಗಿ ಮನಮೋಹನ ಸಿಂಗರು ನಿಜ ಹೇಳಬೇಕೆಂದರೆ, ಸದ್ಯದ ಪರಿಸ್ಥಿತಿಯಲ್ಲಿ ದೇಶ ದಿವಾಳಿತನಕ್ಕೆ ಹೋಗುವ ಅಂಚಿನಲ್ಲಿದೆ. ಈಗ ಉಳಿದಿರುವ ಹಣದಲ್ಲಿ ಸುಮಾರು 09 ದಿನಗಳವರೆಗೆ ಮಾತ್ರ ದೇಶವನ್ನು ನಡೆಸಲು ನಮಗೆ ಸಾಧ್ಯವಾಗುವುದು ಎಂದು ಖಡಾಖಂಡಿತವಾಗಿ ಹೇಳುತ್ತಾರೆ.
ಈ ಉದ್ವಿಗ್ನ ಪರಿಸ್ಥಿತಿಯನ್ನು ಕೂಡಲೇ ಅರ್ಧೈಸಿಕೊಂಡ ರಾಯರು ಈ ಸಮಸ್ಯೆಯಿಂದ ಹೊರಬರಲು ನಿಮ್ಮಿಂದ ಏನಾದರೂ ಪರಿಹಾರವಿದೆಯೇ? ಎಂದು ಕೇಳುತ್ತಾರೆ. ದೇಶದ ರೂಪಾಯಿ ಮೌಲ್ಯವನ್ನು ಸುಮಾರು 20% ರಷ್ಟು ಇಳಿಕೆ ಮಾಡಿದಲ್ಲಿ ಬೀಸುವ ದೊಣ್ಣೆ ತಪ್ಪಿಸಿಕೊಳ್ಳಬಹುದು. ಆನಂತರ ಅಲೋಚಿಸಿ ದೀರ್ಘಕಾಲೀನ ನಿರ್ಧಾರಗಳನ್ನು ತೆಗೆದುಕೊಳಬಹುದು ಎಂದು ಮನಮೋಹನ್ ಸಿಂಗ್ ಸೂಚಿಸುತ್ತಾರೆ.
ಪರಿಸ್ಥಿತಿಯ ತೀವ್ರತೆಯನ್ನು ಅರಿತ ರಾಯರು ಒಮ್ಮೆ ಧೀರ್ಘವಾದ ನಿಟ್ಟುಸಿರು ಬಿಟ್ಟು ಸರಿ, ವಿಶೇಷ ಕ್ಯಾಬಿನೆಟ್ ಸಭೆಯನ್ನು ಕರೆಯಿರಿ. ಅಲ್ಲಿ ಇದನ್ನು ಪ್ರಸ್ತಾವನೆ ಮಾಡಿ ನಾನು ಅನುಮೋದನೆ ಪಡೆಯುತ್ತೇನೆ ಎನ್ನುತ್ತಾರೆ. ಸರ್, ಕ್ಯಾಬಿನೆಟ್ ಸಭೆಯಲ್ಲಿ ಇಂತಹ ಕಠಿಣ ಆರ್ಥಿಕ ನಿರ್ಧಾರಕ್ಕೆ ನಮ್ಮ ಮಿತ್ರಪಕ್ಷಗಳು ಒಪ್ಪಿಗೆ ನೀಡುವುದು ಅನುಮಾನ. ಅವರೆಲ್ಲರರೂ ಓಟ್ ಬ್ಯಾಂಕ್ ದೃಷ್ಟಿಯಿಂದ ಇದನ್ನು ಒಪ್ಪಲಾರರು. ಹಾಗಾಗಿ ಪ್ರಧಾನಮಂತ್ರಿಯಾಗಿ, ನೀವೇ ಒಂದು ಧೃಢವಾದ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎನ್ನುತ್ತಾರೆ ಸಿಂಗ್ ಅವರು.
ಒಂದೆರಡು ನಿಮಿಷಗಳ ಕಾಲ ಮೌನದಿಂದ ಏನನ್ನೋ ಯೋಚಿಸಿದ ರಾಯರು, ನೀವು ನಿಮ್ಮ ಕೆಲಸ ಮುಂದುವರಿಸಿ ನಾನು ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ ಎನ್ನುತ್ತಾರೆ. ಈ ಮಾತನ್ನು ಕೇಳಿದ ಮನಮೋಹನರು ತಮ್ಮ ಕಚೇರಿಗೆ ಹೋಗಿ ಇದೇ ಕುರಿತಾಗಿ ಕೆಲಸ ಮಾಡುತ್ತಿದ್ದ ಸುಮಾರು 20 ನಿಮಿಷಗಳಲ್ಲಿಯೇ ಪ್ರಧಾನ ಮಂತ್ರಿಗಳ ಕಾರ್ಯದರ್ಶಿ ಅವರ ಮುಖೇನ ಬಂದ ಪತ್ರವನ್ನು. ಕುತೂಹಲದಿಂದ ನೋಡಿದರೆ,, ನರಸಿಂಹ ರಾವ್ ಆವರು ತಮ್ಮ ಸ್ವಹಸ್ತಾಕ್ಷರದಲ್ಲಿ ಕೆಲಸ ಮುಗಿದಿದೆ ಎಂದಷ್ಟೇ ಬರೆದಿದ್ದಾರೆ!
ಕ್ಯಾಬಿನೆಟ್ ಸಭೆಯನ್ನೇ ಕರೆಯದೇ ಅದು ಹೇಗೆ ಇಷ್ಟು ಬೇಗ ಮುಗಿಯಿತು? ಎಂದು ಆಶ್ಚರ್ಯಗೊಂಡ ಸಿಂಗರು ಬಹುಶಃ ಕಾಂಗ್ರೆಸ್ಸಿನ ಅನೇಕ ಹಿರಿಯ ನಾಯಕರನ್ನು ಒಪ್ಪಿಸಿರಬಹುದು ಎಂದು ಯೋಚಿಸಿ ಕುತೂಹಲದಿಂದ ಮತ್ತೊಮ್ಮೆ ಪ್ರಧಾನ ಮಂತ್ರಿಗಳ ಕಛೇರಿಗೆ ಬಂದು ಇದು ಹೇಗೆ ಸಾಧ್ಯವಾಯಿತು? ಎಂದು ಪ್ರಶ್ನಿಸುತ್ತಾರೆ.
ಅದಕ್ಕೆ ಮಂದಹಾಸದಿಂದ ಉತ್ತರಿಸಿದ ನರಸಿಂಹರಾಯರು, ಇದು ತುಂಬಾ ಸುಲಭವಾಗಿ ಪರಿಹಾರವಾಯಿತು. ನೀವು ಹೋದ ಕೂಡಲೇ ನಾನು ವಿರೋಧ ಪಕ್ಷದ ನಾಯಕರಾದ ಅಟಲ್ ಬಿಹಾರಿ ಅವರೊಂದಿಗೆ ಮಾತನಾಡಿ ಸಮಸ್ಯೆಯ ಗಂಭೀರತೆಯನ್ನು ವಿವರಿಸಿದೆ. ದೇಶದ ಹಿತದೃಷ್ಟಿಯಿಂದ ನೀವು ತೆಗೆದುಕೊಳ್ಳಲಿರುವ ಈ ಕಠಿಣ ಆರ್ಥಿಕ ನಿರ್ಧಾರಕ್ಕೆ ವಿರೋಧಪಕ್ಷವಾಗಿ ನಮ್ಮ ಬೆಂಬಲವಿದೆ ಎಂದು ಸೂಚಿಸಿದ ಕಾರಣ, ನಾನು ನಿಮಗೆ ಎಲ್ಲವೂ ಮುಗಿದಿದೆ. ನಿಮ್ಮ ಕೆಲಸ ಮುಂದುವರೆಸಿ ಎಂಬ ಸಂದೇಶ ರವಾನಿಸಿದೆ ಎಂದು ಹರ್ಷದಿಂದ ಹೇಳುತ್ತಾರೆ.
ಅರೇ, ಇದೆಂತಹ ಆಶ್ಚರ್ಯ? ನೀವು ನಿಮ್ಮ ಸ್ವಂತ ಕ್ಯಾಬಿನೆಟ್ಗಿಗಿಂತ ಅಟಲ್ ಜೀ ಅವರನ್ನು ನಂಬುತ್ತೀರಾ? ಎಂಬ ಮನಮೋಹನ್ ರ ಪ್ರಶ್ನೆಗೆ, ರಾಯರು ನಗುತ್ತಾ, ಹೌದು. ದೇಶದ ಹಿತದೃಷ್ಟಿಯಿಂದ ನಾವು ತೆಗೆದುಕೊಂಡ ಧೃಢ ನಿರ್ಧಾರವನ್ನು ಒಪ್ಪಿಕೊಳ್ಳುವ ಏಕೈಕ ವ್ಯಕ್ತಿ ಎಂದರೆ ಅಟಲ್ ಜೀ ಎಂಬ ವಿಷಯ ನನಗೆ ತಿಳಿದಿದೆ ಎನ್ನುತ್ತಾರೆ.
ದೇಶ ದಿವಾಳಿಯಾಗುವುದನ್ನು ತಪ್ಪಿಸುವ ಸಲುವಾಗಿ ಮನಮೋಹನ್ ಸಿಂಗ್ ಜಾರಿಗೆ ತಂದ ಇಂತಹ ಕಠಿಣ ನಿರ್ಧಾಕ್ಕೆ ಅಟಲ್ ಜೀ ನೇತೃತ್ವದ ಪ್ರತಿಪಕ್ಷವು ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ. ಪ್ರತಿಭಟನಾ ಆಂದೋಲನವನ್ನು ಆಯೋಜಿಸಲಿಲ್ಲ. ಬದಲಾಗಿ ದೇಶದ ಆರ್ಥಿಕತೆಯನ್ನು ಮತ್ತೆ ಎತ್ತಿ ಹಿಡಿಯುವ ಸಲುವಾಗಿ ಸರ್ಕಾರಕ್ಕೆ ಸಂಪೂರ್ಣವಾದ ಬೆಂಬಲವನ್ನು ಸೂಚಿಸಿತ್ತು. ಇಂದು ಡಾಲರ್ ವಿರುದ್ಧ ನಮ್ಮ ದೇಶದ ಹಣ ಅಷ್ಟೇಕೆ ದುರ್ಬಲವಾಗಿದೆ? ಎಂದು ಪ್ರಶ್ನಿಸುವವರು ಈ ಪ್ರಸಂಗದ ಬಗ್ಗೆ ತಿಳಿವಳಿಗೆ ಹೊಂದಿರಬೇಕು.
ಆಂದಿನಂತೆ ಇಂದು ಆರ್ಥಿಕ ಪರಿಸ್ಥಿತಿ ಕೆಟ್ಟಿಲ್ಲದಿದ್ದರು ಕೊರೋನಾ ಮಹಾಮಾಯಿಂದಾಗಿ ದೇಶದ ಪರಿಸ್ಥಿತಿ ಇದಕ್ಕಿಂತಲೂ ವಿಭಿನ್ನವಾಗಿ ಇಲ್ಲ. ಇಂದು ಪ್ರಧಾನ ಮಂತ್ರಿಗಳ ಹಾಟ್ ಸೀಟಿನಲ್ಲಿ ಶ್ರೀ ನರೇಂದ್ರ ಮೋದಿಯವರಿದ್ದರೆ, ದುರಾದೃಷ್ಟವಶಾತ್ ಅಟಲ್ ಜೀ ಅವರಂತರ ಸಮರ್ಥ ವಿರೋಧ ಪಕ್ಷದ ನಾಯಕರೇ ಇಲ್ಲದಿರುವುದು ದೇಶದ ದೌರ್ಭಾಗ್ಯವಾಗಿದೆ. ಮೋದಿಯವರು ಅಧಿಕಾರಕ್ಕೆ ಬಂದ ಕಳೆದ ಏಳು ವರ್ಷಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆಯನ್ನು ಎತ್ತಿ ಹಿಡಿದಿರುವುದಲ್ಲದೇ, ಜಗತ್ತಿನೆಲ್ಲೆಡೆ ತಾವೊಬ್ಬ ಸಮರ್ಥ ನಾಯಕ ಎಂಬ ಜನಪ್ರಿಯತೆಯನ್ನು ಗಳಿಸಿದ್ದಾರೆ. ಪ್ರಪಂಚದ ಯಾವುದೇ ಮೂಲೆಯ ಸಮಸ್ಯೆಯಿದ್ದರೂ ಅದರ ಪರಿಹಾರಕ್ಕೆ ಭಾರತದತ್ತ ಚಿತ್ತ ಹರಿಸುವಂತೆ ಮಾಡಿರುವುದು ಪ್ರಸ್ತುತ ವಿರೋಧ ಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ.
ಅಧಿಕಾರಕ್ಕೆ ಏರುವಾಗ ನಾ ಖಾವುಂಗಾ, ನಾ ಖಾಣೇ ದೂಂಗಾ ಎಂಬ ಹೇಳಿಕೆಗೆ ಇಂದಿಗೂ ಬದ್ಧರಾಗಿ ಇದುವರೆವಿಗೂ ಹಗರಣ ಮುಕ್ತ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಅವರನ್ನು ವಿರೋಧಿಸಲು ಅಂಬಾನಿ, ಅದಾನಿ, ರಫೇಲ್ ಮುಂತಾದ ವಿಷಯಗಳಿಗೆ ಜನರು ಮನ್ನಣೆ ಹಾಕದೇ ಎರಡನೇ ಬಾರಿಗೂ ಅಭೂತಪೂರ್ವ ಬಹುಮತವನ್ನು ಜನರು ಕೊಟ್ಟಿರುವುದು ವಿರೋಧ ಪಕ್ಷಗಳು ಸಹಿಸಲಾರದೇ, ಈ ಕೊರೋನಾ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಮತ್ತು ಲಸಿಕೆಯನ್ನು ತಯಾರಿಸಿ ಪ್ರಪಂಚದ ಬಹುತೇಕ ರಾಷ್ಟ್ರಗಳಿಗೆ ಯಾವುದೇ ವ್ಯಾವಹಾರಿಕ ಲಾಭಾಂಶ ನೋಡದೇ, ಅತ್ಯಂತ ಕಡಿಮೆ ಬೆಲೆಯಲ್ಲಿ ಲಸಿಕೆಯನ್ನು ಹಂಚುವ ಮೂಲಕ ವಸುದೈವ ಕುಟುಂಬಕಂ ಎಂಬ ನಮ್ಮ ತತ್ವವನ್ನು ಎತ್ತಿ ಹಿಡಿದಿದ್ದನ್ನೇ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.
ಇಂದು ನಮ್ಮಲ್ಲಿ ಆಮ್ಲಜನಕ ಮತ್ತು ರೆಮ್ದಿಸಿವರ್ ಔಷಧಿಯ ಕೊರತೆ ಇದೆ ಎಂದು ತಿಳಿದ ಕೂಡಲೇ ಬಹುತೇಕ ರಾಷ್ಟ್ರಗಳು ಖುದ್ದಾಗಿ ಸ್ವಯಂ ಪ್ರೇರಣೆಯಿಂದ ಸಹಾಯ ಹಸ್ತವನ್ನು ಚಾಚಿರುವುದು ನಮ್ಮ ಪ್ರಧಾನ ಮಂತ್ರಿಗಳ ವಿದೇಶಗಳೊಂದಿಗೆ ಬೆಳಸಿಕೊಂಡಿರುವ ಸೌಹಾರ್ಧತೆಗೆ ಸಾಕ್ಷಿಎಂಬುದನ್ನು ಅರಿತಿದ್ದರೂ ಜಾಣ ಕುರುಡುತನವನ್ನು ವಿರೋಧಪಕ್ಷದವರು ತೋರುತ್ತಿದ್ದಾರೆ.
ಸದಾ ಕಾಲವೂ ತಮ್ಮ ಓಟ್ ಬ್ಯಾಂಕ್ ರಾಜಕಾರಣದಲ್ಲೇ ಮುಳುಗಿರುವ ನಮ್ಮ ವಿರೋಧ ಪಕ್ಷಗಳಿಗೆ ಪ್ರಧಾನಿಗಳ ಇಂತಹ ಜನಪ್ರಿಯತೆ ಸಹಿಸಲಾರದೇ ಅನಗತ್ಯವಾಗಿ, ಅಹಸ್ಯಕರ ರೀತಿಯಲ್ಲಿ ಅವಾಚ್ಯ ಶಭ್ಧಗಳಿಂದ ಸರ್ಕಾರವನ್ನು ಮತ್ತು ಪ್ರಧಾನ ಮಂತ್ರಿಗಳನ್ನು ಟೀಕಿಸುತ್ತಾ, ಲಸಿಕಾ ಆಭಿಯಾನದಲ್ಲಿ ಜನರು ಭಾಗಿಯಾಗುವುದನ್ನು ತಡೆ ಒಡ್ಟುತ್ತಾ, ಗಳಿಗೆ ಸಿದ್ದ ಒಳಗೊಳಗೇ ಮೆದ್ದ ಎನ್ನುವಂತೆ ಸದ್ದಿಲ್ಲದೇ ತಾವು ಮಾತ್ರಾ ಎರಡು ಬಾರಿ ಉಚಿತವಾಗಿ ಲಸಿಕೆಯನ್ನು ಹಾಕಿಸಿಕೊಂಡಿರುವುದು ಮಾತ್ರಾ ವಿಪರ್ಯಾಸವೇ ಸರಿ.
ಇಂತಹ ಸಂಕಷ್ಟ ಕಾಲದಲ್ಲಿ ವಿದೇಶಿಗರು ಮುಕ್ತವಾಗಿ ಸಹಾಯ ಹಸ್ತವನ್ನು ಚಾಚಿರುವುದನ್ನು ಮೋದಿಯವರ ವಿರುದ್ಧದ ತಮ್ಮ ವಯಕ್ತಿಕ ದ್ವೇಷ ಅಥವಾ ಅಸೂಯೆಯಿಂದಾಗಿ ಸಹಿಸದ ನಮ್ಮ ವಿರೋಧ ಪಕ್ಷಗಳು ಇದೇನೇ ಅಚ್ಚೇ ದಿನ್? ಇದೇನೇ ಆತ್ಮ ನಿರ್ಭರ್? ಎಂದು ಕುಹಕವಾಡುತ್ತಾ ವಿಕೃತಿಯಲ್ಲಿ ಮೆರೆಯುವ ಮುಖಾಂತರ ಮೋದಿಯವರನ್ನು ಸಂವಿಧಾನಾತ್ಮಕವಾಗಿ ಚುನಾವಣೆಯಲ್ಲಿ ಸೋಲಿಸಲು ಸಾಧ್ಯವಾಗದೇ ಈ ರೀತಿಯಾಗಿ ಅಪಪ್ರಚಾರ ಮಾಡುವ ಮುಖಾಂತರ ತಮ್ಮ ಬೇಳೆ ಬೇಯಿಸಿಕೊಳ್ಳಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ.
ದೇಶದ ಒಬ್ಬ ಜವಾಬ್ಧಾರಿ ನಾಗರೀಕರಾಗಿ ನಮಗೇ ದೇಶದ ಬಗ್ಗೆ ಈಪರಿಯ ಕಾಳಜಿ ಇರುವಾಗ ಇನ್ನು135 ಕೋಟಿ ಜನರ ಪ್ರತಿನಿಧಿಯಾಗಿರುವ ಪ್ರಧಾನ ಮಂತ್ರಿಗಳಿಗೆ ಇದರ ಅರಿವಿರುವುದಿಲ್ಲವೇ? ವಿರೋಧಿಗಳ ನಿರಂತರ ಅಸಹಕಾರದ ನಡುವೆಯೂ ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಕಾಯಾ ವಾಚಾ ಮನಸಾ ಸತತವಾಗಿ ವಿವಿಧ ಪ್ರಯತ್ನಗಳನ್ನು ಮಾಡುತ್ತಿರುವ ನಮ್ಮ ಪ್ರಧಾನಿಗಳ ಮೇಲೆ ವಿಶ್ವಾಸವನ್ನು ಇರಿಸೋಣ. ಕೋವಿಡ್ ಸಂಬಂಧಿತ ಎಲ್ಲಾ ಸುರಕ್ಷೆಗಳನ್ನೂ ಸ್ವಪ್ರೇರಣೆಯಿಂದ ಪಾಲಿಸಿ, ಲಸಿಕಾ ಆಭಿಯಾನದಲ್ಲಿ ಪಾಲ್ಗೊಂಡು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಲ್ಲದೇ ದೇಶ ವಿರೋಧಿ ಶಕ್ತಿಗಳನ್ನೂ ಬಗ್ಗು ಬಡಿಯುವಂತಹ ಶಕ್ತಿಯನ್ನು ಬೆಳಸಿಕೊಳ್ಖೋಣ.
ಪ್ರಧಾನ ಮಂತ್ರಿಗಳೇ ಹೇಳಿರುವಂತೆ, ಮೋದಿ ಬರ್ತಾನೇ, ಹೋಗ್ತಾನೆ. ಆದರೆ ಈ ಭಾರತ ದೇಶ ಇಲ್ಲೇ ಇರುತ್ತದೆ. ದಯವಿಟ್ಟು ತಮ್ಮ ರಾಜಕೀಯ ಅಸ್ಮಿತೆ ಮತ್ತು ಅಸ್ಥಿತ್ವಕ್ಕಾಗಿ ದೇಶವನ್ನು ದುರ್ಬಲಗೊಳಿಸುತ್ತಿರುವ ವಿರೋಧ ಪಕ್ಷಗಳ ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗದಿರೋಣ. ನಮಗೆ ವ್ಯಕ್ತಿಗಿಂತ ಅಭಿವ್ಯಕ್ತಿ ಮುಖ್ಯ. ಪಕ್ಷಕ್ಕಿಂತ ರಾಷ್ಟ್ರ ಮುಖ್ಯ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ