ಸಿಂಹಾಚಲಂನ ಸಿಂಹಾದ್ರಿ

ಸಿಂಹಾಚಲಂ ಅಥವಾ ಸಿಂಹಾದ್ರಿ ಆಂಧ್ರ ಪ್ರದೇಶದ ವಿಶಾಖಪಟ್ಟಣದ ಹೊರವಲಯದಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ಊರಾಗಿದೆ. ನರಸಿಂಹ ಸ್ವಾಮಿಯ ಪ್ರಸಿದ್ಧ 18 ಕ್ಷೇತ್ರಗಳಲ್ಲಿ ಸಿಂಹಾದ್ರಿಯೂ ಒಂದಾಗಿದೆ. ಈ ದೇವಾಲಯದಲ್ಲಿ ವಿಷ್ಣುವಿನ ದಶಾವತಾರದಲ್ಲಿ ನಾಲ್ಕನೇ ಅವತಾರವಾದ ನರಸಿಂಹ ಸ್ವಾಮಿಯ ವಿಶಿಷ್ಟವಾದ ವಿಗ್ರಹವಿದೆ. ಈ ವಿಗ್ರಹದ ದೇಹವು ಸದೃಢವಾದ ಮಾನವ ಶರೀರದಂತಿದ್ದರೆ ತಲೆಯ ಭಾಗವು ಸಿಂಹದ ಮುಖ ಹೊಂದಿದೆ ಬೆಟ್ಟದ ಮೇಲೆ ವರಹಾ ನರಸಿಂಹ ಸ್ವಾಮಿಯ ವಾಸಸ್ಥಾನವೆಂದು ಹೇಳಲಾಗುವ ಪ್ರಸಿದ್ಧ ದೇವಾಲಯವಾಗಿದ್ದು ಪ್ರತೀ ವರ್ಷವೂ ಇಲ್ಲಿಗೆ ಲಕ್ಷಾಂತರ ಭಕ್ತರು ಭೇಟಿ ನೀಡಿ ಪಾವನರಾಗುತ್ತಾರೆ.

sim4

ಈ ದೇವಾಲಯವು 11 ನೇ ಶತಮಾನದಲ್ಲಿ ನಿರ್ಮಿಸಿರಬಹುದು ಎಂದು ನಂಬಲಾಗಿದೆ. ಮೂರು ಹೊರ ಮುಖಮಂಟಪಗಳು ಮತ್ತು ಐದು ದ್ವಾರಗಳನ್ನು ಹೊಂದಿರುವ ಈ ದೇವಾಲಯದ ವಾಸ್ತುಶಿಲ್ಪವು ಒಡಿಯಾ, ಚಾಲುಕ್ಯ ಮತ್ತು ಚೋಳ ವಾಸ್ತುಶಿಲ್ಪ ಶೈಲಿಯ ಸಮ್ಮಿಳನವಾಗಿದ್ದು ಮೇಲಿನಿಂದ ನೋಡಿದಲ್ಲಿ ಇಡೀ ದೇವಾಲಯವು ರಥದ ರಚನೆಯನ್ನು ಹೊಂದಿರುವುದು ವೈಶಿಷ್ಟ್ಯವಾಗಿದೆ. ಚೋಳ ರಾಜ ಕುಲೋತುಂಗನ ಕ್ರಿ.ಶ 1098 ರ ಹಿಂದಿನ ಒಂದು ಶಾಸನವು ಇದರ ಪ್ರಾಚೀನತೆಯ ಬಗ್ಗೆ ಕೆಲವು ಸುಳಿವುಗಳನ್ನು ನೀಡಿದರೆ, ಮತ್ತೊಂದು ಶಾಸನದ ಪ್ರಕಾರ ಈ ದೇವಸ್ಥಾನವನ್ನು ಪ್ರಾಚೀನ ಒರಿಸ್ಸಾಗೆ ಸೇರಿದ್ದ ಕಾಳಿಂಗದ ಗಂಗಾ ರಾಣಿ (ಕ್ರಿ.ಶ. 1137-56) ಈ ದೇವಾಲಯಕ್ಕೆ ಅನೇಕ ಚಿನ್ನದ ಆಭರಣಗಳನ್ನು ನೀಡಿದ್ದಾಳೆ ಎಂದು ತಿಳಿಸುತ್ತದೆ. ಇನ್ನು ಮೂರನೆಯ ಶಾಸನವು ಒರಿಸ್ಸಾದ ಪೂರ್ವ ಗಂಗಾ ರಾಜ ನರಸಿಂಹ ದೇವ ಕ್ರಿ.ಶ 1267 ರಲ್ಲಿ ಈ ದೇವಸ್ಥಾನದ ಮುಖ್ಯ ಭಾಗವನ್ನು ನಿರ್ಮಿಸಿದ ಎಂದು ಹೇಳುತ್ತದೆ. ಒಟ್ಟಿನಲ್ಲಿ ದೇವಾಲಯದ ಕುರಿತಂತೆ ಒರಿಯಾ ಮತ್ತು ತೆಲುಗು ಭಾಷೆಯಲ್ಲಿ ಸುಮಾರು 252 ಶಾಸನಗಳಿದ್ದು ಇವೆಲ್ಲವೂ ಐತಿಹಾಸಿಕವಾಗಿ ಮಹತ್ವದ ಸ್ಮಾರಕವಾಗಿದೆ.

ಒರಿಸ್ಸಾದ ಗಜಪತಿ ಆಡಳಿತಗಾರನನ್ನು ಸೋಲಿಸಿದ ನಂತರ ಶ್ರೀ ಕೃಷ್ಣದೇವ ರಾಯ ಕ್ರಿ.ಶ. 1516 ಮತ್ತು ಕ್ರಿ.ಶ 1519 ರಲ್ಲಿ ಎರಡು ಬಾರಿ ದೇವಲಯಕ್ಕೆ ಭೇಟಿ ನೀಡಿ, ಈ ದೇವಸ್ಥಾನದ ನಿತ್ಯಪೂಜೆ ಮತ್ತು ನಿರ್ವಹಣೆಗಾಗಿ ಹಲವಾರು ಗ್ರಾಮಗಳನ್ನು ದೇವಸ್ಥಾನಕ್ಕೆ ದತ್ತು ಕೊಟ್ಟಿದ್ದಲ್ಲದೇ, ಪಚ್ಚೆ ಹಾರವೂ ಸೇರಿದಂತೆ ಅನೇಕ ಅಮೂಲ್ಯವಾದ ಆಭರಣಗಳನ್ನು ಈ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಹಾಗಾಗಿಯೇ ಅನೇಕ ಶತಮಾನಗಳಿಂದ ವಿಜಯನಗರದ ಸಾಮ್ರಾಜ್ಯದ ಕುಟುಂಬಸ್ಥರೇ ಇಲ್ಲಿನ ಪುಜಾಪತಿ ಗಜಪತಿ ದೇವಾಲಯದ ಟ್ರಸ್ಟಿಗಳಾಗಿರುವುದು ವಿಶೇಷವಾಗಿದೆ.

ವಾಸ್ತು ಶಿಲ್ಪೀಯವಾಗಿ ಈ ದೇವಾಲಯವು ಅತ್ಯಂತ ಪ್ರಶಂಸೆಗೆ ಅರ್ಹವಾಗಿದೆ. ಈ ದೇವಾಲಯದಲ್ಲಿ 96 ಸ್ತಂಭಗಳ ಸುಂದರವಾದ ಕಲ್ಯಾಣ ಮಂಟಪವಿದೆ. ದೇವಾಲಯದ ಗರ್ಭಗುಡಿ ಚೌಕಾಕಾರವಿದ್ದು ಅದರ ಮೇಲೆ ಪಿರಮಿಡ್ ಆಕಾರದ ಮೇಲ್ಛಾವಣಿಯನ್ನು ಹೊಂದಿದೆ. ಇದೇ ಗರ್ಭಗುಡಿಯ ಮುಂದೆ ಪಿರಮಿಡ್ ಆಕಾರದ ಮೇಲ್ಛಾವಣಿಯನ್ನು ಹೊಂದಿರುವ ವಿಶಾಲವಾದ ಹಜಾರವಿದ್ದು ಅದರ ಮುಂದೆ ಹದಿನಾರು ಸ್ತಂಭಗಳ ಮುಖಮಂಟಪವಿದೆ. ಇವೆಲ್ಲವೂ ಕಡುಕಪ್ಪಾದ ನುಣುಪಾದ ಕಲ್ಲಿನಿಂದ ಬಹಳ ಸಮೃದ್ಧವಾಗಿ ಮತ್ತು ಸೂಕ್ಷ್ಮವಾಗಿ ಸಾಂಪ್ರದಾಯಿಕ ಮತ್ತು ಹೂವಿನ ಆಭರಣ ಮತ್ತು ವೈಷ್ಣವ ಪುರಾಣಗಳ ದೃಶ್ಯಗಳ ಹಲವು ಕೆತ್ತನೆಗಳನ್ನು ಇಲ್ಲಿ ಕಾಣಬಹುದಾಗಿದೆ. ದುರಾದೃಷ್ಟವಶಾತ್ ಅವುಗಳಲ್ಲಿ ಕೆಲವು ಕೆತ್ತನೆಗಳನ್ನು ವಿರೂಪಗೊಂಡಿವೆ.

ಈ ದೇವಾಲಯದಲ್ಲಿ ಇರುವ ಅಗಲವಾದ ಕಪ್ಪಾ ಸ್ಥಂಭ ಅಥವಾ ಗೌರವ ಸ್ತಂಭ ಎಂದು ಕರೆಯುವ ಸ್ಥಂಭವಿದ್ದು, ನಿರ್ಮಲ ಮನಸ್ಸಿನಿಂದ ತನ್ನ ಎರಡೂ ತೋಳುಗಳಿಂದ ಈ ಸ್ತಂಭವನ್ನು ತಬ್ಬಿಕೊಂಡು ಭಗವಂತನಲ್ಲಿ ತಮ್ಮ ಅಭಿಪ್ಸೆಗಳನ್ನು ಕೋರಿಕೊಂಡಲ್ಲಿ ಅದು ಈಡೇರುತ್ತದೆ ಎನ್ನುವುದು ಇಲ್ಲಿನವರ ನಂಬಿಕೆಯಾಗಿದೆ. ಅದೇ ರೀತಿಯಲ್ಲಿ ಕಲ್ಲಿನ ಚಕ್ರಗಳು ಮತ್ತು ಕಲ್ಲಿನ ಕುದುರೆಗಳನ್ನು ಹೊಂದಿರುವ ಕಲ್ಲಿನ ರಥವನ್ನೂ ಇಲ್ಲಿ ಕಾಣಬಹುದಾಗಿದೆ. ಈ ದೇವಾಲಯದ ಗೋಡೆಗಳ ಮೇಲೆ ನರಸಿಂಹಸ್ವಾಮಿಯ ಹಲವು ಸುಂದರ ಕೆತ್ತನೆಗಳನ್ನು ಮಾಡಲಾಗಿದೆ.

ಗುಡ್ಡದ ಮೇಲಿರುವ ಈ ದೇವಾಲಯದ ಸಂಕೀರ್ಣದ ಸಮೀಪದಲ್ಲಿಯೇ ನೈಸರ್ಗಿಕವಾದ ಬುಗ್ಗೆಯ ನೀರಿನ ಮೂಲವಿದ್ದು ಇದನ್ನು ಗಂಗಾಧರ್ ಎಂದು ಕರೆಯಲಾಗುತ್ತದೆ. ಶ್ರದ್ಧಾ ಭಕ್ತಿಯಿಂದ ಈ ಕಲ್ಯಾಣಿಯಲ್ಲಿ ಸ್ನಾನ ಮಾಡಿದರೆ ಅವರ ಎಲ್ಲಾ ಪಾಪಗಳು ತೊಳೆಯಲ್ಪಟ್ಟು ಆವರ ಅಸೆಗಳು ಈಡೇರುತ್ತವೆ ಎಂಬ ನಂಬಿಕೆ ಇಲ್ಲಿಯವರಿಗಿದೆ. ದೇವಾಲಯದ ಆವರಣದಲ್ಲಿಯೇ ವರಹಾ ಪುಷ್ಕರಣಿ ಎಂಬ ಕೊಳವೂ ಇದೆ.

ಇಲ್ಲಿ ನರಸಿಂಹಸ್ವಾಮಿಯು ನೆಲೆಸಲು ಮತ್ತು ಈ ಪ್ರದೇಶಕ್ಕೆ ಸಿಂಹಾಚಲಂ ಎಂಬ ಹೆಸರು ಬರಲು ರೋಚಕವಾದ ಪೌರಾಣಿಕ ಕಥೆಯೂ ಇದೆ. ಹಿಂದೆ ಹಿರಣ್ಯಕಶಿಪು ಎಂಬ ರಾಜನು ಘೋರ ತಪಸ್ಸನ್ನು ಮಾಡಿ ಆಕಾಶದಲ್ಲಿಯೂ , ಭೂಮಿ ಮೇಲೆಯೂ ಸಾಯಬಾರದು, ಹಗಲಲ್ಲಿಯೂ , ಇರುಳಲ್ಲಿಯೂ ಸಾಯಬಾರದು. ಮನುಷ್ಯರಿಂದಾಗಲೀ ಪ್ರಾಣಿಗಳಿಂದಾಗಲೀ ಅಥವಾ ಯಾವುದೇ ಆಯುಧಗಳಿಂದಾಗಲೀ, ಮನೆಯ ಒಳಗಾಗಲೀ ಹೊರಗಾಗಲೀ ಸಾಯಬಾರದು ಎಂಬ ವರವನ್ನು ಪಡೆದು ತನಗೆ ಸಾವೇ ಇಲ್ಲಾ! ಎಂದು ಪ್ರಜೆಗಳನ್ನು ತನ್ನ ರಾಕ್ಷಸೀಯ ಗುಣಗಳಿಂದ ಪೀಡಿಸುತ್ತಿರುತ್ತಾನೆ. ಅದೂ ಅಲ್ಲದೇ ಹರಿಯ ಪರಮ ವೈರಿಯಾಗಿದ್ದು ತಾನೇ ದೇವರು ತನ್ನನ್ನೇ ಎಲ್ಲರೂ ಪೂಜಿಸಬೇಕೆಂದು ಅಪ್ಪಣೆ ಹೊರಡಿಸಿರುತ್ತಾನೆ.

sim3

ಅಂತಹ ಕ್ರೂರಿ ರಾಜನಿಗೆ ಪ್ರಹ್ಲಾದ ಎಂಬ ಹರಿಯ ಪರಮ ಭಕ್ತನಾಗಿದ್ದು ಸದಾಕಾಲವು ಹರಿನಾಮಸ್ಮರಣೆ ಮಾಡುತ್ತಿದ್ದದ್ದು ಹಿರಣ್ಯಕಶಿಪುವಿಗೆ ಕೋಪ ತರಿಸಿ ತನ್ನ ಮಗನನ್ನು ಸಾಯಿಸಲು ಪರಿಪರಿಯಾಗಿ ಪ್ರಯತ್ನಿಸಿ ವಿಫಲನಾಗಿ ಕಡೆಗೆ ನಿನ್ನ ಹರಿ ಎಲ್ಲಿದ್ದಾನೆ? ಆವನ್ನು ತೋರಿಸುವೆಯಾ? ಎಂದು ಮಗನಿಗೆ ಸವಾಲು ಎಸೆದು ಈ ಕಂಬದಲ್ಲಿ ಇರುವನೇ? ಈ ಕಂಬದಲ್ಲಿ ಇರುವನೇ? ಎಂದು ಕಡೆಗೆ ಒಂದು ಕಂಬವನ್ನು ತನ್ನ ಗಧೆಯಿಂದ ಒಡೆದಾಗ, ಅ ಕಂಬವನ್ನು ಸೀಳಿಕೊಂಡು ನರನ ದೇಹ ಸಿಂಹದ ಹೀಗೆ ನರಸಿಂಹನ ಅವತಾರದಲ್ಲಿ ಬಂದು ಸಂಜೆಯ ಹೊತ್ತಿನಲ್ಲಿ, ಅರಮನೆಯ ಹೊಸ್ತಿಲಲ್ಲಿ, ಹಿರಣ್ಯಕಶಿಪುವಿನನ್ನು ತನ್ನ ತೊಡೆಯ ಮೇಲೆರಿಸಿಕೊಂಡು ತನ್ನ ಕೈಗಳ ಚೂಪಾದ ಉಗುರುಗಳಿಂದ ಅವನ ಹೊಟ್ಟೆ ಬಗೆದು ಸಂಹರಿಸಿದ. ಹೀಗೆ ವಿಷ್ಣು ನರಸಿಂಹನಾಗಿ ಪ್ರತ್ಯಕ್ಷನಾದ ಸ್ಥಳವೇ ಸಿಂಹಾಚಲಂ ಎಂದು ಹೇಳಲಾಗುತ್ತದೆ.

sim1

ಶಿವಲಿಂಗದ ಅಕೃತಿಯಲ್ಲಿರುವ ಇಲ್ಲಿನ ಶ್ರೀ ಲಕ್ಷ್ಮೀನರಸಿಂಹನಿಗೆ ವರ್ಷದ 364 ದಿನಗಳೂ ಚಂದನದ(ಗಂಧದ) ಲೇಪವನ್ನು ಮಾಡಲಾಗಿರುತ್ತದೆ. ತ್ರಿಭಂಗ ಭಂಗಿಯಲ್ಲಿರುವ ದೇವತೆಯ ಮೂಲ ಆಕಾರವು ಮಾನವನ ಮುಂಡದ ಮೇಲೆ ಸಿಂಹದ ತಲೆಯೊಂದಿಗೆ ಎರಡು ಕೈಗಳನ್ನು ಹೊಂದಿದೆ. ವರ್ಷಕ್ಕೊಮ್ಮೆ ಅಕ್ಷಯ ತದಿಗೆಯ ದಿನದಂದು (ವೈಶಾಖ ಮಾಸದ 3ನೇ ದಿನ) ಚಂದನಯಾತ್ರ (ಚಂದನೋತ್ಸವಂ) ಎಂಬ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿ ಅಂದು ಆ ವಿಗ್ರಹದ ಮೇಲಿರುವ ಚಂದನದ ಲೇಪವನ್ನು ತೆಗೆದು ಭಕ್ತರಿಗೆ ಸ್ವಾಮಿಯ ನಿಜ ರೂಪದ ದರ್ಶನವನ್ನು ಮಾಡಿಸಲಾಗುತ್ತದೆ. ಇಂತಹ ಸುಂದರ ಅಪೂರ್ವ ದೃಶ್ಯವನ್ನು ಕಣ್ತುಂಬಿಸಿಕೊಳ್ಳಲು ದೇಶ ವಿದೇಶಗಳಿಂದ ಲಕ್ಷಾಂತರ ಜನರು ಇಲ್ಲಿಗೆ ಆಗಮಿಸುತ್ತಾರೆ.

sim2

ಈ ದೇವಾಲಯದಲ್ಲಿರುವ ಭೈರವದ್ವಾರ, ಮತ್ತು ಗಂಗಾಧರ ಎಂಬ ಹೆಸರಿರುವ ಕಲ್ಯಾಣಿ ಮತ್ತು ಶಿವನ ದೇವಾಲಯಗಳಲ್ಲಿ ಸಾಮಾನ್ಯವಾಗಿ ಪ್ರತಿವರ್ಷವೂ ಕಾಮದಹನದ ಹಬ್ಬವನ್ನು ಇಲ್ಲಿ ಆಚರಿಸುವ ರೂಡಿಯಲ್ಲಿದ್ದ ಕಾರಣ ಮತ್ತು ಇಲ್ಲಿನ ವಿಗ್ರಹ ಶಿವಲಿಂಗ ರೂಪದಲ್ಲಿರುವ ಕಾರಣ ಇದು ಶಿವನ ದೇವಸ್ಥಾನ ಎಂದೇ ನಂಬಲಾಗಿತ್ತು. 11ನೇ ಶತಮಾನದಲ್ಲಿ ತೀರ್ಥಕ್ಷೇತ್ರಗಳ ಪರ್ಯಟನೆಗಾಗಿ ಇಲ್ಲಿಗೆ ಬಂದ ಶ್ರೀ ರಾಮಾನುಜಾಚಾರ್ಯರು, ಇದು ವರಾಹ ನರಸಿಂಹನ ವಿಗ್ರಹವಾಗಿದ್ದು ಪಂಚರಾತ್ರ ಅಗಮ ನಿಯಮಗಳಿಗೆ ಅನುಸಾರವಾಗಿ ಭಂಗಿಯಲ್ಲಿದೆ ಎಂದು ರಾಮಾನುಜ ವಾದಿಸಿ, ಸಿಂಹಾಚಲಂದಲ್ಲಿದ್ದ ವಿದ್ವಾಂಸರನ್ನು ಸೋಲಿಸಿ ಈ ದೇವಾಲಯವನ್ನು ವೈಷ್ಣವ ದೇವಾಲಯವನ್ನಾಗಿ ಪರಿವರ್ತಿಸಿದರು.

sim5

ಸದಾಕಾಲವೂ ಚಂದನದಿಂದ ಲೇಪಿತವಾಗಿದ್ದ ವರಾಹ ನರಸಿಂಹನ ಈ ವಿಗ್ರಹದ ಶ್ರೀಗಂಧವನ್ನು ತೆಗೆಯಲು ಅಲ್ಲಿನ ಅರ್ಚಕರಿಗೆ ಆದೇಶಿಸಿದರು. ಶ್ರೀ ರಾಮಾನುಜರ ಅಜ್ಞೆಯಂತೆ ಪುರೋಹಿತರು ಚಂದನವನ್ನು ತೆಗೆಯುತ್ತಿದ್ದ ಸಂಧರ್ಭದಲ್ಲಿ ವಿಗ್ರಹದಿಂದ ರಕ್ತಸ್ರಾವವಾಗ ತೊಡಗಿತು. ಇಲ್ಲಿನ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಭಗವಂತ ಕೋಪಗೊಂಡಿರಬಹುದು ಎಂದು ನಿರ್ಧರಿಸಿ ಮತ್ತೆ ಶ್ರೀಗಂಧವನ್ನು ಲೇಪಿಸಿದಾಗ ರಕ್ತದ ಹರಿವು ನಿಂತಿತು. ಅಂದಿನಿಂದ ಅಕ್ಷಯ ತದಿಗೆಯಂದು ಹೊರತು ಪಡಿಸಿ ಉಳಿದೆಲ್ಲಾ ದಿನಗಳೂ ಸ್ವಾಮಿಯನ್ನು ಚಂದನದಿಂದ ಆವೃತಗೊಳಿಸಿ ಶಿವಲಿಂಗ ಸ್ವರೂಪದಲ್ಲಿ ದರ್ಶನಕ್ಕೆ ಅವಕಾಶವಿದೆ.

ಈ ದೇವರ ಶಕ್ತಿ ಮತ್ತು ಮಹಿಮೆಯ ಬಗ್ಗೆ ಮತ್ತೊಂದು ದಂತಕಥೆ ಪ್ರಚಲಿತದಲ್ಲಿದೆ. ಅದೊಮ್ಮೆ ಮುಸ್ಲಿಂ ದಾಳಿಕೋರರು ಈ ಪ್ರದೇಶಕ್ಕೆ ಆಕ್ರಮಣ ಮಾಡಿದ ಸಂದರ್ಭದಲ್ಲಿ ಈ ದೇವಾಲಯವನ್ನು ಮತ್ತು ಇಲ್ಲಿನ ಹಿಂದೂಗಳನ್ನು ದಾಳಿಕೋರರಿಂದ ರಕ್ಷಿಸಲು ಕುಮಾರನಾಥ ಎಂಬ ಕವಿಯು ಅತ್ಯಂತ ಭಕ್ತಿಯಿಂದ ಶ್ರೀ ನರಸಿಂಹಸ್ವಾಮಿಯನ್ನು ಬೇಡಿಕೊಂಡರಂತೆ. ಅವರ ಭಕ್ತಿಗೆ ಕರಗಿದ ಶ್ರೀ ನರಸಿಂಹಸ್ವಾಮಿಯು ಧಾಳಿಕೋರರನ್ನು ಹೊಡೆದಟ್ಟುವ ಸಲುವಾಗಿ ದೊಡ್ಡ ದೊಡ್ಡ ಗಾತ್ರದ ಕೆಂಪು ಕಣಜಗಳ ಭಾರೀ ಹಿಂಡನ್ನು ಕಳುಹಿಸಿದರಂತೆ. ಆ ಕಣಜದ ಹುಳುಗಳು ದಾಳಿಕೋರರನ್ನು ಅಟ್ಟಾಡಿಸಿಕೊಂಡು ಕಡಿದು ಆವರನ್ನು ದಿಕ್ಕಾಪಾಲಾಗಿ ಓಡಿಸಿ ನಂತರ ಒಂದು ಬೆಟ್ಟದ ಹಿಂದೆ ಹೋಗಿ ಇಡೀ ಕಣಜದ ಹಿಂಡು ಮಾಯವಾಯಿತಂತೆ. ಈ ಬೆಟ್ಟವನ್ನು ಇಲ್ಲಿನವರು ತುಮ್ಮೇಲದಲ ಬೆಟ್ಟ ಎಂದೂ ಕರೆಯುತ್ತಾರೆ. ತೆಲುಗಿನಲ್ಲಿ ತುಮ್ಮೆದ ಎಂದರೆ ದುಂಬಿ (ಕಣಜಕ್ಕೆ ಹತ್ತಿರದ ಜಾತಿ) ಎಂಬ ಅರ್ಥವಿದೆ.

ನಮ್ಮ ದೇಶದಲ್ಲಿರುವ ಪ್ರತಿಯೊಂದು ದೇವಾಲಯಗಳಿಗೂ ಇಂತಹ ನೂರಾರು ದಂತಕಥೆಗಳಿದ್ದು ಹೆಚ್ಚಿನ ಆಚರಣೆಗಳು ವೈಜ್ಞಾನಿಕವಾಗಿಯೂ ಮತ್ತು ಐತಿಹಾಸಿಕವಾಗಿಯೂ ಧೃಢಪಟ್ಟಿರುವ ಕಾರಣ ನಮ್ಮ ಧಾರ್ಮಿಕ ನಂಬಿಕೆಗಳನ್ನು ಮತಷ್ಟು ಹೆಚ್ಚಿಸುತ್ತವೆ..

ಸದ್ಯದ ವಿಷಮ ಪರಿಸ್ಥಿತಿಯಲ್ಲಿ, ನಂಬಿಕೆ, ವಿಶ್ವಾಸ ಮತ್ತು ಭರವಸೆಗಳೇ ನಮಗೆ ಶಕ್ತಿಯನ್ನು ತುಂಬಬಲ್ಲದು. ಎಲ್ಲವೂ ಇದ್ದು ಜೀವನದಲ್ಲಿ ಭರವಸೆ‌‌ ಕಳೆದು ಕೊಂಡಲ್ಲಿ ಏನನ್ನೂ ಸಾಧಿಸಲಾಗದು.

ಅವರವರ ಭಾವಕ್ಕೆ ಅವರವರ ಭಕುತಿ ಎನ್ನುವಂತೆ ಆ ಭಗವಂತನನ್ನು ಅಚಲ ಭಕ್ತಿ ಮತ್ತು ಶ್ರಧ್ಧೆಯಿಂದ ನಂಬೋಣ. ಫಲಾಫಲಗಳನ್ನು ಅವನ ಮೇಲೇ ಬಿಡೋಣ.

ಏನಂತೀರೀ?
ನಿಮ್ಮವನೇ ಉಮಾಸುತ

3 thoughts on “ಸಿಂಹಾಚಲಂನ ಸಿಂಹಾದ್ರಿ

 1. ಆತ್ಮೀಯ ಶ್ರೀಕಂಠರೇ,

  ಲೇಖನದಲ್ಲಿ ಸಿಂಹಾಚಲ ದೇವಾಲಯದ ಪೌರಾಣಿಕ, ಐತಿಹಾಸಿಕ, ಪ್ರಾಗೈತಿಹಾಸಿಕ, ವಾಸ್ತುಶಾಸ್ತ್ರ ಹಾಗೂ ಧಾರ್ಮಿಕ ವಿವರಗಳನ್ನು ಸಮಗ್ರವಾಗಿ ಕಟ್ಟಿಕೊಟ್ಟಿದ್ದೀರಿ. ಅಭಿನಂದನೆಗಳು.

  ಆಕ್ರಮಣಕಾರರನ್ನು ಕಣಜಗಳು ಮಣಿಸಿದ ವಿವರ ರೋಮಾಂಚನಕಾರಿ. ಅವು ಮರೆಯಾದ ಬೆಟ್ಟ ತುಮ್ಮೆದಲ ಬೆಟ್ಟ ಆಗಿರುವುದು ತಾರ್ಕಿಕವಾಗಿದೆ. ತೆಲುಗಿನಲ್ಲಿ ತುಮ್ಮೆದ ಎಂದರೆ ದುಂಬಿ (ಕಣಜಕ್ಕೆ ಹತ್ತಿರದ ಜಾತಿ) ಎಂಬ ಅರ್ಥವಿದೆ..

  ಶುಭವಾಗಲಿ. ನಿರಂತರ ಲೇಖನ ಪ್ರವಹಿಸಲಿ.

  ನಿಮ್ಮವ
  ಜಯಸಿಂಹ

  Liked by 1 person

 2. ಶಿವಾಯ ವಿಷ್ಣು ರೂಪಾಯ, ಶಿವ ರೂಪಾಯ ವಿಷ್ಣುವೇ,
  ಶಿವಸ್ಯ ಹೃದಯಂ ವಿಷ್ಣುಃ, ವಿಷ್ಣೋಶ್ಚ ಹೃದಯಂ ಶಿವಃ,
  ಯಥಾಶಿವಮಯಂ ವಿಷ್ಣುಃ, ಏವಂ ವಿಷ್ಣು ಮಯಃ ಶಿವಃ,
  ಯಥಾಂತರಂ ನ ಪಶ್ಯಾಮಿ, ತಥಾ ಮೇ ಸ್ವಸ್ತಿ ರಾಯುಶಿ .

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s