ಇತ್ತೀಚೆಗೆ ಟಿವಿಯಲ್ಲಿ ಪೌರಾಣಿಕ ಚಿತ್ರವೊಂದು ಪ್ರಸಾರವಾಗುತ್ತಿತ್ತು. ಪೌರಾಣಿಕ ಚಿತ್ರ ಎಂಬ ಕುತೂಹಲದಿಂದ ನೋಡಲು ಕುಳಿತುಕೊಂಡು ಕೊಂಡ ಅರ್ಧಗಂಟೆಗಳಲ್ಲಿಯೇ ಮನಸ್ಸಿಗೆ ನೋವಾಗಿ ನೋಡಲು ಅಸಹನೀಯವಾಯಿತು. ಅಕಾರ ಮತ್ತು ಹಕಾರದ ನಡುವಿನ ವ್ಯತ್ಯಾಸ ಅರಿಯದ, ಅವರ ಸಂಭಾಷಣೆಗೂ ಅವರ ಆಂಗಿಕ ಅಭಿನಯಕ್ಕೂ ಸಂಬಂಧವೇ ಇರದ, ಕನ್ನಡ ಭಾಷೆಯ ಮೇಲೆ ಸ್ವಲ್ಪವೂ ಹಿಡಿತವಿರದ ಅಪಾತ್ರರನ್ನೆಲ್ಲಾ ಪೌರಾಣಿಕ ಪಾತ್ರದಲ್ಲಿ ನೋಡುತ್ತಿದ್ದಾಗ, ಕನ್ನಡ ಕಸ್ತೂರಿ ಎನ್ನುವಂತಹ ಸೊಗಡಿರುವ ಭಾಷೆಯನ್ನು ಇಷ್ಟು ಕೆಟ್ಟದಾಗಿ ಕೊಲೆ ಮಾಡುತ್ತಿದ್ದಾರಲ್ಲಾ? ಎಂದೆನಿಸಿ ಕೂಡಲೇ ಅಭಿನಯ ಮತ್ತು ಭಾಷ ಶುದ್ಧತೆಯಲ್ಲಿ ಪರಿಪಕ್ವವಾಗಿದ್ದ ಪೌರಾಣಿಕ ಚಿತ್ರಗಲ್ಲಿ ತಮ್ಭ ಹಾವ ಭಾವ ಮತ್ತು ಕಂಚಿನ ಕಂಠದಿಂದ ಕನ್ನಡಿಗರ ಹೃನಮನಗಳನ್ನು ಗೆದ್ದಿದ್ದ ದಿ.ವಜ್ರಮುನಿಯವರ ಕುರಿತಾದ ಲೇಖನವೊಂದು ಬರೆದಿದ್ದೆ. ಇಂತಹ ಕಲಾವಿದನ ಸ್ಥಾನವನ್ನು ತುಂಬ ಬಲ್ಲ ಮತ್ತೊಬ್ಬ ಕಲಾವಿದ ಇನ್ನೂ ನಮ್ಮ ಕನ್ನಡ ಚಿತ್ರರಂಗಕ್ಕೆ ಸಿಗದಿರುವುದರ ಕುರಿತು ವಿಷಾಧ ವ್ಯಕ್ತಪಡಿಸಿದ್ದೆ.
ಧರ್ಮಾಧಾರಿತವಾಗಿ ದೇಶವನ್ನು ವಿಭಜಿಸಿ, ದೇಶದಲ್ಲಿ ಸಮಾನತೆಯನ್ನು ತರಲೆಂದೇ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿತವಾಗಿದ್ದ ಸಂವಿಧಾನವನ್ನು ಮತ್ತೊಮ್ಮೆ ತಿದ್ದುಪಡಿ ಮಾಡಿಸಿ ನಮ್ಮದು ಜಾತ್ಯಾತೀತ ರಾಷ್ಟ್ರ ಎಂದು ಹೇಳಿಕೊಂಡರೂ ಇಲ್ಲಿ ಪ್ರತಿಯೊಂದಕ್ಕೂ ಜಾತಿಯೇ ಪ್ರಮುಖವಾಗಿರುವುದು ನಿಜಕ್ಕೂ ದುಃಖಕರವೇ ಸರಿ. ಮಗುವೊಂದು ಹುಟ್ಟಿದಾರಿಂದಲೂ ಸಾಯುವವರೆಗೂ ಗುರುತಿಸುವುದೇ ಜಾತಿಯಿಂದಲೇ ಎನ್ನುವುದು ವಿಪರ್ಯಾಸವಾಗಿದೆ. ವಜ್ರಮುನಿಯವರ ಆಭಿನಯ ಮತ್ತು ಭಾಷಾ ಪ್ರೌಢಿಮೆಯ ಅಭಿಮಾನದಿಂದ ಆ ಲೇಖನ ಬರೆದಿದ್ದನೇ ಹೊರತು ಆವರ ಜಾತಿ ಆವರ ರಾಜಕೀಯ ಸಿದ್ಧಾಂತಗಳು ನನಗೆ ಗೌಣವಾಗಿದ್ದವು. ದುರಾದೃಷ್ಟವಶಾತ್ ಕೆಲವು ವಿಕೃತ ಮನಸ್ಸಿನವರು ಅದರಲ್ಲೂ ಜಾತಿಯನ್ನು ಹಿಡಿದು ಜರಿಯತೊಡಗಿದ್ದು ನಿಜಕ್ಕೂ ಬೇಸರ ತಂದಿತ್ತು.
ಕನ್ನಡ ಭಾಷೆ ಕೇವಲ ಭಾಷೆಯಾಗಿಯೋ ಇಲ್ಲವೇ ಯಾವುದೋ ಒಂದು ಧರ್ಮ ಅಥವಾ ಜಾತಿಗೆ ಮೀಸಲಾಗಿಲ್ಲ ಅದು ಸಮಸ್ತ ಕನ್ನಡಿಗರ ಆಸ್ತಿ ಮತ್ತು ಅಸ್ಮಿತೆಯಾಗಿದೆ. ಇತ್ತೀಚೆಗೆ ಖನ್ನಢ ಖನ್ನಢ ಎಂದು ಓರಾಟ ಮಾಡುತ್ತಾ ತಮ್ಮ ಒಟ್ಟೆಯನ್ನು ಒರೆದುಕೊಳ್ಳುತ್ತಿರುವ ಉಟ್ಟು ಓಲಾಟಗಾರರೊಬ್ಬರೊಂದಿಗೆ ಮಾತನಾಡುತ್ತಾ, ಅಲ್ಲಾ ಸರ್, ನೀವು ಅಷ್ಟು ದೊಡ್ಡ ಕನ್ನಡಪರ ಹೋರಾಟಗಾರರೆನ್ನುತ್ತೀರಿ ಆದರೆ ನಿಮಗೆ ಸರಿಯಾಗಿ ಕನ್ನಡ ಬರೆಯುವುದು ಇರಲಿ, ಶುದ್ಧವಾಗಿ ವ್ಯಾಕರಣಬದ್ಧವಾಗಿ ಅ-ಕಾರ ಹ-ಕಾರಗಳ ಅಪಭ್ರಂಷವಿಲ್ಲದೇ ಮಾತನಾಡಲು ಬರುವುದಿಲ್ಲವಲ್ಲಾ? ನೀವೇ ಹೀಗೆ ಇದ್ದ ಮೇಲೆ ಯಥಾ ರಾಜಾ ತಥಾ ಪ್ರಜಾ ಎನ್ನುವಂತೆ ನಿಮ್ಮನ್ನು ಹಿಂಬಾಲಿಸುವ ನಿಮ್ಮ ಅನುಯಾಯಿಗಳು ಅದನ್ನೇ ಅನುಕರಿಸುತ್ತಾರಲ್ಲವೇ? ಎಂದು ಪ್ರಶ್ನಿಸಿದ್ದಕ್ಕೆ ಇದ್ದಕ್ಕಿಂದ್ದಂತೆಯೇ ಕೋಪಗೊಂಡು, ಹೌದು ರೀ ನಾವು ಶೂದ್ರರು. ಶೂದ್ರರು ಅಂಗೇ ಮಾತನಾಡುವುದು ಎನ್ನಬೇಕೇ? ನೀವು ನಮ್ಮ ತರಹ ಬೀದಿಗೆ ಬಂದು ಹೋರಾಡಿ ಅಗ ಗೊತ್ತಾಗುತ್ತದೆ ಕನ್ನಡದ ಹೋರಾಟ ಅಂದ್ರೆ ಏನು ಅಂತಾ ಎಂದು ಬುಸು ಬುಸು ಗುಟ್ಟಿದರು.
ಅರೇ ಸರ್, ಇಲ್ಲಿ ಶೂದ್ರ, ಸವರ್ಣೀಯ ಎಂಬ ಜಾತಿಯ ಮಾತೇಕೆ? ಭಾಷಾ ಶುದ್ಧಿಗೂ ಜಾತಿಗೂ ಎಲ್ಲಿಯ ಸಂಬಂಧ? ಕನ್ನಡದ ರಸಋಷಿ ಎಂದೇ ಖ್ಯಾತರಾಗಿದ್ದ ಕುವೆಂಪು, ದೇಜಗೌ, ಚಂಪಾ ಪ್ರೊ.ಸಿದ್ದಲಿಂಗಯ್ಯ, ಇವೆರೆಲ್ಲರು ಶುದ್ಧವಾದ ಕನ್ನಡವನ್ನು ಮಾತನಾಡುತ್ತಿದ್ದರಲ್ಲವೇ? ದೊಡ್ಡರಂಗೇ ಗೌಡ, ಪ್ರೋ.ಕೃಷ್ಣೇ ಗೌಡರ ಕನ್ನಡ ಕೇಳುವುದಕ್ಕೇ ಕರ್ಣಾನಂದ. ಎಸ್. ಕೆ ಕರೀಂ ಖಾನ್ ಮತ್ತು ನಿಸಾರ್ ಅಹಮದ್ ಅವರ ಭಾಷಾ ಪಾಂಡಿತ್ಯ ನೋಡಿ ಅವರನ್ನು ಕನ್ನಡಿಗರಲ್ಲ ಎನ್ನಲಾಗುತ್ತದೆಯೇ? ಎಲ್ಲಿಂದಲೋ ಬಂದು ಕನ್ನಡ ಕಲಿತು ಕನ್ನಡಕ್ಕೆ ನಿಘಂಟನ್ನು ಬರೆದು ಕೊಟ್ಟ ರೆವರೆಂಡ್ ಕಿಟ್ಟಲ್ ಮತ್ತು ಐ.ಎ.ಎಸ್ ಅಧಿಕಾರಿಗಳಾಗಿ ಬಂದ ಚಿರಂಜೀವಿಸಿಂಗ್ ಕನ್ನಡ ಭಾಷೆಯ ಸೊಗಡಿಗೆ ಸೋತು ಹೋಗಿ ಕನ್ನಡವನ್ನು ಕಲಿತು ಹಳಗನ್ನಡದ ಛಂದಸ್ಸಿನಲ್ಲಿ ಕಾವ್ಯ ಬರೆಯುವಷ್ಟು ಪಾಂಡಿತ್ಯ ಗಳಿಸಿಲ್ಲವೇ? ಇವರೆಲ್ಲರಿಗೂ ಸಾಧ್ಯವಾದದ್ದು ಕನ್ನಡ ನಾಡಿನಲ್ಲಿಯೇ ಹುಟ್ಟಿ ಬೆಳೆದವರಿಗೇಕೆ ಶುದ್ಧವಾದ ಕನ್ನಡ ಭಾಷೆಯನ್ನು ಮಾತನಾಡಲು ಸಾಧ್ಯವಿಲ್ಲ? ಶುದ್ಧ ಭಾಷೆಯನ್ನು ಮಾತನಾಡಿ ಎಂದು ಕೇಳಿದರೆ ಅದರಲ್ಲೂ ಜಾತೀಯತೆಯೇ? ಬೀದಿಯಲ್ಲಿ ಹೋರಾಟ ಮಾಡುವುದಕ್ಕೂ ಶುದ್ಧವಾಗಿ ಕನ್ನಡ ಮಾತನಾಡುವುದಕ್ಕೂ ಯಾವ ಬಾದರಾಯಣ ಸಂಬಂಧ? ಎಂದದಕ್ಕೆ ನನ್ನನ್ನೇ ಸುಟ್ಟು ಭಸ್ಮಮಾಡುವ ಭಸ್ಮಾಸುರರಂತೆ ದುರು ದುರುಗುಟ್ಟು ನೋಡಿದರು, ಅಕ್ಕ ಪಕ್ಕದಲ್ಲಿದ್ದ ನನ್ನ ಹಿತೈಷಿಗಳು ಅಲ್ಪರ ಸಂಗ ಅಭಿಮಾನ ಭಂಗ ಎನ್ನುವಂತೆ ಸುಮ್ಮನೇ ನೀನೇಕೆ ಅವರ ವಿರೋಧ ಕಟ್ಟಿಕೊಳ್ಳುತ್ತೀಯೇ? ಎಂದು ನನ್ನನ್ನೇ ಸಮಾಧಾನ ಪಡಿಸಿದ್ದು ನಿಜಕ್ಕೂ ವಿಪರ್ಯಾಸ ಎನಿಸಿತು.
ಕನ್ನಡಪರ ಹೋರಾಟಗಾರು ಮತ್ತು ನಟ ನಟಿಯರನ್ನು ಬಿಡಿ, ಕನ್ನಡದ ಸಾರಥಿಗಳಾಗಿ ಇರುವ ಮಾಧ್ಯಮದವರಿಗೇ ಶುದ್ಧವಾಗಿ ಕನ್ನಡ ಬರೆಯಲು ಮಾತನಾಡಲು ಬಾರದಿರುವುದು ನಿಜಕ್ಕೂ ವಿಪರ್ಯಾಸವಾಗಿದೆ, ಇತ್ತೀಚಿಗೆ ಕನ್ನಡದ ಹೆಸರಾಂತ ಪತ್ರಿಕೆಯ ಶೀರ್ಷಿಕೆ ಹೀಗಿತ್ತು
ಶೀಘ್ರವಾಗಿ ಆಮ್ಲಜನಕವನ್ನು ಒದಗಿಸಬೇಕೆಂದು ಸರ್ಕಾರಕ್ಕೆ ಉಚ್ಚನ್ಯಾಯಾಲಯದಿಂದ ತಾಕಿತು .
ತಾಕಿತು ಎಂದರೆ ಮುಟ್ಟಿತು ಇಲ್ಲವೇ ತಗುಲಿತು ಎಂಬ ಅರ್ಥ ಬರುತ್ತದೆ. ನಿಜವಾಗಿಯೂ ಆ ಶೀರ್ಷಿಕೆಯಲ್ಲಿ ತಾಕೀತು ಎಂಬ ಪದ ಬಳಸ ಬೇಕಿತ್ತು, ತಾಕೀತು ಎಂದರೆ, ಆದೇಶ ಅಥವಾ ಆಜ್ಞೆ ಎಂದರ್ಥ ಬರುತ್ತದೆ.
ಇನ್ನು ಕನ್ನಡದ ಖಾಸಗೀ ಟಿವಿ ವಾಹಿನಿಗಳು ಮತ್ತು ಎಫ್.ಎಂ ರೇಡಿಯೋ ಜಾಕಿಗಳು ಮತ್ತು ಕೆಲವೊಂದು ನಿರೂಪಕರ ಭಾಷೆಯ ಪದ ಪ್ರಯೋಗವೋ ಆ ಭಗವಂತನಿಗೇ ಮೆಚ್ಚಿಗೆಯಾಗಬೇಕು. ಹಿಂದೊಮ್ಮೆ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ಸಭೆಯೊಂದು ಏರ್ಪಾಟಾಗಿ ಅ ಸಭೆಗೆ ಮುಖ್ಯಮಂತ್ರಿಗಳು ಮತ್ತು ಹಿರಿಯ ಮಂತ್ರಿಗಳಾದಿಯಾಗಿ ರಾಜ್ಯದ ಬಹುತೇಕ ಗಣ್ಯರು ಅಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದ ನಿರೂಪಕಿ ಕಾರ್ಯಕ್ರಮ ರಾಷ್ಟ್ರಗೀತೆಯೊಂದಿಗೆ ಆರಂಭವಾಗುತ್ತದೆ ಎಂದು ಉದ್ಘೋಷಿಸಿದರು. ಕೂಡಲೇ ವೇದಿಗೆ ಬಂದ ಸರಳಾಯ ಸಹೋದರಿಯರು, ಜನಗಣಮನ ಹಾಡಿಯೇ ಬಿಟ್ಟರು. ವೇದಿಕೆ ಮೇಲೆ ತಮ್ಮ ಪಾಡಿಗೆ ಹರಟುತ್ತಿದ್ದವರಿಗೂ ಮತ್ತು ಸಭಿಕರೆಲ್ಲರೂ ಕಕ್ಕಾ ಬಿಕ್ಕಿಯಾಗಿ ಕಡೆಗೆ ಎಲ್ಲರೂ ದಡಬಡ ಎಂದು ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ್ದರು. ಕಾರ್ಯಕ್ರಮ ನಾಡಗೀತೆಯೊಂದಿಗೆ ಆರಂಭವಾಗಬೇಕಿತ್ತು, ನಾಡಗೀತೆ ಮತ್ತು ರಾಷ್ಟ್ರಗೀತೆಯ ನಡುವಿನ ವ್ಯತ್ಯಾಸ ಅರಿಯದಿದ್ದ ನಿರೂಪಕಿ ನಾಡಗೀತೆ ಎಂದು ಹೇಳಬೇಕಾದ ಜಾಗದಲ್ಲಿ ರಾಷ್ಟ್ರಗೀತೆ ಎಂದು ಹೇಳಿದ್ದೇ ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಗಿತ್ತು.
ಇನ್ನೂ ಎಷ್ಟೋ ನಿರೂಪಕರು ಇಲ್ಲವೇ ಸ್ವಾಗತ ಭಾಷಣ ಮಾಡುವವರು, ಕಿಕ್ಕಿರಿದ ಸಭೆಯಲ್ಲಿ ಎಲ್ಲರಿಗೂ ಹಾದರದ ಸುಸ್ವಾಗತ ಎನ್ನುವ ಮೂಲಕ ಆದರನ್ನು ಹಾದರ ಮಾಡಿ ಬಿಡುತ್ತಾರೆ. ಇನ್ನು ಭಾಷಣ ಮಾಡುವವರೋ ಮಾತನಾಡುವ ಭರದಲ್ಲಿ ನಮ್ಮ ಯತ್ತ ತಾಯಿಯ ಮೇಲೆ ಹಾಣೆ ಮಾಡಿ ಏಳುತ್ತೇನೆ, ನಿಮ್ಮೆಲ್ಲರ ಒಟ್ಟೆಗೆ ಹಕ್ಕಿ ಕೊಡಿಸುವವರೆಗೂ ನನಗೆ ನೆಮ್ಮದಿಯಿಲ್ಲ ಎಂದು ಓತ ಪ್ರೋತವಾಗಿ ಮಾತನಾಡುವುದನ್ನು ಕೇಳಿದಾಗ ಮನಸ್ಸಿಗೆ ಸಂಕಟವಾಗುತ್ತದೆ.
ಕಳೆದ ಮೂರ್ನಾಲ್ಕು ದಶಕಗಳಿಂದ ನಮ್ಮ ಮಕ್ಕಳಿಗೆ ಶಾಲೆಯಲ್ಲಿ ಸರಿಯಾಗಿ ಕನ್ನಡವನ್ನು ಹೇಳಿಕೊಡದೇ ಇರುವುದೇ ಇಷ್ಟಕ್ಕೆಲ್ಲಾ ಮೂಲ ಕಾರಣ ಎಂದರೂ ತಪ್ಪಾಗದು. ಗಿಡವಾಗಿ ಬಗ್ಗದು ಮರವಾಗಿ ಬಗ್ಗೀತೆ ಎನ್ನುವಂತೆ ಚಿಕ್ಕವಯಸ್ಸಿನಲ್ಲಿ ಸರಿಯಾಗಿ ಕಲಿತಿದ್ದರೆ ಎಷ್ಟೇ ವಯಸ್ಸಾದರೂ ಮರೆಯುವುದಿಲ್ಲ, ದುರಾದೃಷ್ಟವಶಾತ್ ಕನ್ನಡ ಭಾಷೆಯಲ್ಲಿ ಕಲಿಯುವುದೇ ಕೀಳರಿಮೆ ಎಂಬ ಭಾವನೆಯನ್ನು ಬಿತ್ತಿ ಕನ್ನಡ ಮಾಧ್ಯಮಗಳ ಶಾಲೆಗಳನ್ನು ಮುಚ್ಚಿ ಆಲ್ಲೆಲ್ಲಾ ಆಂಗ್ಲ ಮಾಧ್ಯಮವನ್ನು ಆರಂಭಿಸಿದ್ದು ಮೂಲಕಾರಣವಾದರೆ, ಎಲ್ಲಾ ಮಕ್ಕಳೂ ಡಾಕ್ಟರ್ ಮತ್ತು ಇಂಜೀನಿಯರ್ ಗಳಾಗ ಬೇಕು. ಎಲ್ಲರೂ ವಿದೇಶಗಳಿಗೆ ಹೋಗಿ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸಬೇಕು ಎಂಬ ಹಪಾಹಪಿ ಬಿದ್ದಾಗ ಕನ್ನಡವನ್ನು ಕೇವಲ ಒಂದು ಐಚ್ಚಿಕ ವಿಷಯವಾಗಿ ಅದೂ ಕಾಟಾಚಾರಕ್ಕಾಗಿ ಕಲಿಯುತ್ತಿದ್ದಾರೆಯೇ ಹೊರತು ನಿಜವಾಗಿಯೂ ಕನ್ನಡದ ಬಗ್ಗೆ ಯಾರಿಗೂ ಆಸಕ್ತಿಯೇ ಇಲ್ಲ. ಹತ್ತನೇ ತರಗತಿಯಲ್ಲಿಯೂ ಕನ್ನಡ ಮಾಧ್ಯಮದ ಐದನೇ ತರಗತಿಯ ಮಕ್ಕಳು ಓದುವ ಪಠ್ಯವನ್ನಿಟ್ಟರೆ ಆ ಮಕ್ಕಳು ಕನ್ನಡವನ್ನು ಹೇಗೆ ಕಲಿಯುತ್ತಾರೆ?
ಹಿಂದೆಲ್ಲಾ ಸಂಜೆಯಾಯಿತೆಂದರೆ, ಮಕ್ಕಳಿಗೆ ಕೈ ಕಾಲು ಮುಖ ತೊಳೆಸಿ ಹಣೆಗೆ ಭಸ್ಮವನ್ನೋ ಕುಂಕುಮವನ್ನೋ ಧಾರಣೆ ಮಾಡಿಸಿ ದೇವರ ಮುಂದೆ ಭಕ್ತಿಯಿಂದ ಬಾಯಿ ಪಾಠ ಎನ್ನುವ ನೆಪದಲ್ಲಿ ಬಾಲ ಶ್ಲೋಕಗಳು, ತಿಥಿ, ವಾರ, ನಕ್ಢತ್ರ, ರಾಶಿ ಇವೆಲ್ಲದರ ಜೊತೆ 1-20ರ ವರೆಗೆ ಮಗ್ಗಿ ಹೇಳಿಸಿ ಕಾಪೀ ಪುಸ್ತಕವನ್ನು ಬರೆಸುತ್ತಿದ್ದರು. ಶುದ್ಧವಾದ ವ್ಯಾಕರಣವನ್ನು ಹೇಳಿಕೊಡುತ್ತಿದ್ದದ್ದಲ್ಲದೇ, ದೇವರ ನಾಮ ಮತ್ತು ಭಜನೆಗಳನ್ನು ಹೇಳಿಕೊಡುವ ಮೂಲಕ ಭಾಷೆಯ ಉಚ್ಚಾರ ಶುದ್ಧತೆ ಮತ್ತು ಸಂಗೀತದ ಅಭ್ಯಾಸವನ್ನು ಮಾಡಿಸುತ್ತಿದ್ದರು. ಬೆಳಿಗ್ಗೆ ವೃತ್ತಪತ್ರಿಕೆಗಳ ಶೀರ್ಷಿಕೆಯನ್ನು ಓದುವುದು ದೊಡ್ಡ ದೊಡ್ಡ ವಾರ್ತೆಗಳನ್ನು ಕಡ್ಡಾಯವಾಗಿ ಓದಲೇ ಬೇಕಿತ್ತು. ಬೇಕೋ ಬೇಡವೂ ಮನೆಯಲ್ಲಿರುತ್ತಿದ್ದ ರೇಡಿಯೋಗಳಲ್ಲಿ ಸುಮಧುರವಾದ ಕನ್ನಡ ಚಿತ್ರಗೀತೆಗಳು ಆ ಮಕ್ಕಳ ಕಿವಿಯ ಮೇಲೆ ಬೀಳುತ್ತಿದ್ದವು. ತನ್ಮೂಲಕ ಮಕ್ಕಳಿಗೇ ಅರಿವಿಲ್ಲದಂತೆ ಶುದ್ಧವಾದ ಕನ್ನಡ ಹಾಡುಗಳು, ಕನ್ನಡ ಪದಗಳು ಮತ್ತು ಆಕಾಶವಾಣೀ ಉದ್ಘೋಷಕರ ಸ್ವಚ್ಚ ಕನ್ನಡ ಅವರ ಕಿವಿಗಳಿಗೆ ಬೀಳುತ್ತಿತ್ತು, ಅದನ್ನೇ ಅನುಕರಣೆ ಮತ್ತು ಅನುಸರಣೆ ಮಾಡುವ ಮೂಲಕ ಸಹಜವಾಗಿ ಶುದ್ಧ ಕನ್ನಡ ಮಕ್ಕಳಿಗೆ ಅಚ್ಚೊತ್ತುತ್ತಿತ್ತು.
ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಮನೆಯಲ್ಲಿ ಎಲ್ಲರೂ ಶುದ್ಧವಾದ ಕನ್ನಡದಲ್ಲೇ ಸಂಭಾಷಣೆ ನಡೆಸುತ್ತಿದ್ದದ್ದು ಗಮನರ್ಹವಾಗಿತ್ತು. ಆದರೆ ಇಂದು ಮಗು ಹುಟ್ಟುತ್ತಲೇ ಅದರೊಂದಿಗೆ ಟಸ್ ಪುಸ್ ಎಂದು ಇಂಗ್ಲೀಷಿನಲ್ಲೇ ಮಾತನಾಡಿಸುವಾಗ ಮುಂದೆ ಅದೇ ಮಗು ಶುದ್ಧವಾದ ಕನ್ನಡ ಮಾತನಾಡಬೇಕು ಎಂದು ಬಯಸುವುದು ಶುದ್ಧ ಮೂರ್ಖತನವಾಗುತ್ತದೆ. ಇನ್ನು ಟಿವಿ ಮತ್ತು ಮೊಬೈಲ್ ಬಂದ ಮೇಲಂತೂ ಎಲ್ಲರೂ(ವೂ) ಹಾಳಾಗಿ ಹೋಗಿದ್ದಾರೆ.
ನಾನು ಪ್ರೌಢಶಾಲೆಯಲ್ಲಿದ್ದಾಗ ಆಕಾಶವಾಣಿಯ ಕಾರ್ಯಕ್ರಮವೊಂದರಲ್ಲಿ ನಮ್ಮ ಗುರುಗಳು ಪಕ್ಷಿಕಾಶಿ ಎಂಬ ಜಾಗದಲ್ಲಿ ಪಚ್ಚಿಕಾಶಿ ಎಂದ ಕೂಡಲೇ, ಮುದ್ರಣ ಮಾಡಿಕೊಳ್ಳುತ್ತಿದ್ದಾಕೆ ಸರ್, ತಪ್ಪಾಗಿ ಉಚ್ಚಾರ ಮಾಡುತ್ತಿದ್ದೀರಿ ಸರಿಯಾಗಿ ಪಕ್ಷಿಕಾಶಿ ಎಂದು ಉಚ್ಚರಿಸಿ ಎಂದು ಮೂರ್ನಾಲ್ಕು ಬಾರಿ ಅವರ ಬಾಯಲ್ಲಿ ಸರಿಯಾದ ಪದವನ್ನು ಹೇಳಿಸಿದ ನಂತರವೇ ಮುದ್ರಣವನ್ನು ಮುಂದುವರೆಸಿದ್ದರು. ದುರಾದೃಷ್ಟವಶಾತ್ ಅಂತಹ ಭಾಷಾ ಪ್ರಾವೀಣ್ಯತೆಯನ್ನು ಪಡೆದವರು ಇಂದು ಇಲ್ಲವೇ ಇಲ್ಲ ಅಥವಾ ಇದ್ದರೂ ಎಲ್ಲೋ ಬೆರಳೆಣಿಕೆಯಷ್ಟು ಮಂದಿ ಇದ್ದಾರೆ ಹಾಗಾಗಿಯೇ ಹೃದಯದ ಮಾತು ಕೇಳೀ… ಎನ್ನುವ ಜಾಗದಲ್ಲಿ ರುದಯದ ಮಾತು ಕೇಳೀ.. ಎಂದು ಹಾಡಿರುವುದನ್ನೇ ಮುದ್ರಿಸಿದ ಸಂಗೀತ ನಿರ್ದೇಶಕರನ್ನು ನೆನೆದರೆ, ಹೃದಯ ಕಿತ್ತು ಬರುತ್ತದೆ, ಹೇಗೆ ಬರೆದರೂ ನಡೆಯುತ್ತದೆ ಎನ್ನುವ ಗೀತ ರಚನೆಕಾರ ಮತ್ತು ಸಂಭಾಷಣೆಕಾರ, ಇನ್ನು ಕನ್ನಡವೇ ಬಾರದ ಸಂಗೀತ ನಿರ್ದೇಶಕರು ಮತ್ತು ಚಿತ್ರ ನಿರ್ದೇಶಕರು, ಇಂಗ್ಲೀಷ್ ಮೀಡಿಯಂ ನಲ್ಲಿ ಓದಿದ ನಟ ನಟಿಯರು ಆಡಿದ್ದೇ ಆಡು ಏಳಿದ್ದೇ ಸಂಭಾಷಣೆ. ಒಟ್ಟಿನಲ್ಲಿ ಎಲ್ಲರೂ ಸೇರಿ ಒಟ್ಟಾಗಿ ಕನ್ನಡದ ಕಗ್ಗೊಲೆ ಮಾಡುತ್ತಿರುವುದಂತೂ ಸತ್ಯ.
ಪ್ರೌಢಶಾಲೆಯವರೆಗೂ ಕನ್ನಡ ಮಾಧ್ಯಮದಲ್ಲಿ ಓದಿ ನಂತರ ಡಿಪ್ಲೊಮಾ ಮಾಡಿ ಕೆಲಸಕ್ಕೆ ಸೇರಿದ ಹೊಸದರಲ್ಲಿ ಸರಾಗವಾಗಿ ಆಂಗ್ಲ ಭಾಷೆಯಲ್ಲಿ ಮಾತನಾಡಲು ಸ್ವಲ್ಪ ಪರದಾಡುತ್ತಿದ್ದೆ. ನನ್ನ ಎಲ್ಲಾ ಆಲೋಚನೆಗಳು ಕನ್ನಡದಲ್ಲಿದ್ದು ಅದನ್ನು ಸಂಭಾಷಣೆ ರೂಪದಲ್ಲಿ ಆಂಗ್ಲ ಭಾಷೆಗೆ ಮನಸ್ಸಿನಲ್ಲೇ ತರ್ಜುಮೆ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದದ್ದನ್ನು ನನ್ನ ಸಹೋದ್ಯೋಗಿಯೊಬ್ಬ ಆಡಿಕೊಳ್ಳುತ್ತಿದ್ದದ್ದನ್ನು ಗಮನಿಸಿದ ನಮ್ಮ ಕಛೇರಿಯ ಮುಖ್ಯಸ್ಥರು ನಮ್ಮಿಬ್ಬರನ್ನೂ ಅವರ ಕೊಠಡಿಗೆ ಕರೆಸಿಕೊಂಡು ಶ್ರೀಕಂಠ ಅವನ ಮಾತೃ ಭಾಷೆಯನ್ನು ಚೆನ್ನಾಗಿ ಮಾತನಾಡುತ್ತಾನಾ? ಎಂದು ನನ್ನ ಗೆಳೆಯನನ್ನು ಪ್ರಶ್ನಿಸಿದರು. ಅದಕ್ಕವನು ಹೌದು ಕನ್ನಡದಲ್ಲಿ ಅವನು ಬಹಳ ಸುಂದರವಾಗಿ, ಸ್ಪಷ್ಟವಾಗಿ ಮತ್ತು ಸುಲಲಿತವಾಗಿ ಮಾತನಾಡುತ್ತಾನೆ ಎಂದ ಕೂಡಲೇ, ಹಾಗಿದ್ದರೆ ಇಂಗ್ಲೀಷ್ ಕೂಡಾ ಒಂದು ಭಾಷೆ ಅಷ್ಟೇ. ಅವನು ಇನ್ನು ಕೆಲವೇ ದಿನಗಳಲ್ಲಿ ಸರಾಗವಾಗಿ ಇಂಗ್ಲೀಷ್ ಮಾತನಾಡುತ್ತಾನೆ ಎನ್ನುವ ನಂಬಿಕೆ ನನಗಿದೆ. ಯಾರಿಗೆ ತಮ್ಮ ಮಾತೃಭಾಷೆಯ ಮೇಲೆ ಸ್ಪಷ್ಟತೆ ಇರುತ್ತದೆಯೋ ಅವರು ಇತರೇ ಭಾಷೆಗಳನ್ನು ಸುಲಭವಾಗಿ ಕಲಿಯುತ್ತಾರೆ. ಹಾಗಾಗಿ ಅವನಿಗೆ ನಾವು ಪ್ರೋತ್ಸಾಹಿಸಬೇಕೇ ಹೊರತು ಆಡಿಕೊಳ್ಳಬಾರದು ಎಂಬ ಕಿವಿ ಮಾತನ್ನು ಹೇಳಿ ಕಳುಹಿಸಿದ್ದರು. ಅದಾದ ಕೆಲವೇ ತಿಂಗಳಲ್ಲಿ ವ್ಯಾವಹಾರಿಕವಾಗಿ ನನ್ನ ಇಂಗ್ಲಿಷ್ ಬಹಳಷ್ಟು ಸುಧಾರಿಸಿದ್ದಲ್ಲದೇ ಕಳೆದ 30 ವರ್ಷಗಳಲ್ಲಿ ಮಾಹಿತಿ ತಂತ್ರಜ್ಞಾನದ ಅನೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸಿರುವುದಲ್ಲದೇ, ವ್ಯಾವಹಾರಿಕವಾಗಿ ಹತ್ತಾರು ವಿದೇಶಗಳಿಗೂ ಹೋಗಿ ಬಂದಿದ್ದೇನೆ.
ಕನ್ನಡ ಎನ್ನುವುದು ಯಾರೊಬ್ಬರ ಸ್ವತ್ತಲ್ಲ ಅದಕ್ಕೆ ಖಂಡಿತವಾಗಿಯೂ ಸಾವಿಲ್ಲ. ಅದನ್ನು ಉಳಿಸಿ ಬೆಳಸ ಬೇಕಾದ ಅನಿವಾರ್ಯತೆಯೂ ಕನ್ನಡಕ್ಕೆ ಇಲ್ಲ. ಕನ್ನಡದ ಹೋರಾಟ ಎಂದರೆ ಬೀದಿಗೆ ಬಂದು ಕನ್ನಡೇತರರ ವಿರುದ್ದ ಪ್ರತಿಭಟನೆ ಮಾಡಬೇಕು ಎಂದೇನಿಲ್ಲ. ಯಾರಿಗೆ ಅನಿವಾರ್ಯತೆ ಇದೆಯೋ ಅಂತಹವರು ಮಾತ್ರ ಕನ್ನಡ ಹೆಸರಿನಲ್ಲಿ ಕುರಿ ಮೇಕೆ ಆಡುಗಳನ್ನು ಪ್ರದರ್ಶನ ಮಾಡುತ್ತಾ, ತಮ್ಮ ಗಂಜಿ ಕಂಡುಕೊಳ್ತಾ ಇರೋದು ಈ ನಾಡಿನ ದುರಾದೃಷ್ಟಕರ.
ಸಮಸ್ತ ಕನ್ನಡಿಗರು ಯಾವುದೇ ಧರ್ಮ, ಜಾತಿ ಮತ್ತು ಯಾವುದೇ ಪೋತಪ್ಪ ನಾಯಕರುಗಳ ಹಂಗಿಲ್ಲದೇ ಶುದ್ಧ ಕನ್ನಡದಲ್ಲಿ ತಮ್ಮ ತಮ್ಮ ಗ್ರಾಮೀಣ ಸೊಗಡಿನಲ್ಲಿಯೇ ವ್ಯಾಕರಣ ಬದ್ಧವಾಗಿ ಕನ್ನಡ ಮಾತನಾಡುತ್ತಾ ಅದನ್ನೇ ತಮ್ಮಮಕ್ಕಳಿಗೂ ಕಲಿಸಿದರೆ ಸಾಕು. ಕನ್ನಡ ಇನ್ನೂ ಸಾವಿರಾರು ವರ್ಷಗಳ ಕಾಲ ಇರುತ್ತದೆ.
ಕನ್ನಡವೇ ಸತ್ಯ. ಕನ್ನಡವೇ ನಿತ್ಯ.
ಏನಂತೀರೀ?
ನಿಮ್ಮವನೇ ಉಮಾಸುತ