ಮಾತೃ ಸ್ವರೂಪೀ ಅಪ್ಪಾ

gard3ಅದೊಂದು ಐಶಾರಾಮೀ ಅಂತರಾಷ್ಟ್ರೀಯ ಶಾಲೆಯ ಉದ್ಯಾನವನದಲ್ಲಿ  ಗಂಗಣ್ಣ ಗಿಡಗಳಿಗೆ ನೀರನ್ನು ಹಾಕಿ ಪೋಷಿಸುತ್ತಿದ್ದರು. ಸಂಜೆ ಬಿಸಿಲು ತೀವ್ರವಾಗಿ ಅತನನ್ನು ಬಸವಳಿಸುತ್ತಿತ್ತಾದರೂ ಅದನ್ನು ಲೆಕ್ಕಿಸದೆ ತನ್ನ ಕರ್ತವ್ಯದಲ್ಲಿ ನಿರತನಾಗಿದ್ದ ಮಾಲಿ ಗಂಗಣ್ಣನ ಅವರ ಬಳಿ ಬಂದ ಸಹೋದ್ಯೋಗಿಯೊಬ್ಬರು, ಪ್ರಿನ್ಸಿಪಾಲ್ ಮೇಡಂ ನಿಮ್ಮನ್ನು ಕರೆಯುತ್ತಿದ್ದಾರೆ. ಈ ಕೂಡಲೇ ಅವರನ್ನು ಭೇಟಿಯಾಗಬೇಕೆಂತೇ ಎಂದು ಹೇಳಿದರು.

gard1ಅರೇ! ಏನಪ್ಪಾ ಆಯ್ತು? ಪ್ರಿನ್ಸಿಪಾಲ್ ಮೇಡಂ ಕರೆಯುವಷ್ಟು ತಪ್ಪನ್ನು ನಾನೇನು ಮಾಡಿದೆ? ಎಂದು ಯೋಚಿಸುತ್ತಲೇ, ಭಯ ಭಯದಿಂದ ಬೆವರು ಸುರಿಯುತ್ತಿದ್ದ ಮುಖ ಮತ್ತು ಕೈಕಾಲುಗಳನ್ನು ತೊಳೆದುಕೊಂಡು ದಡಾ ಬಡಾ ಎಂದು ಓಡುತ್ತಾ ಪ್ರಿನ್ಸಿಪಾಲ್ ಕೊಠಡಿಯತ್ತ ಧಾವಿಸಿ ಹೋಗುತ್ತಿದ್ದಂತೆಯೆ ಹೃದಯದ ಬಡಿತ ಹೆಚ್ಚಾಗುತ್ತಲೇ ಇತ್ತು. ಆತ ಎಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರೂ ಏಕಾ ಏಕಿ ಪ್ರಾಂಶುಪಾಲರು ಬರಹೇಳಿದ್ದು ಆತನಿಗೆ ಆತಂಕವನ್ನು ಮೂಡಿಸುತ್ತು. ಧಾವಂತದಿಂದಲೇ, ದ್ವಾರದ ಬಳಿ ಬಂದು ಟಕ್ ಟಕ್ ಎಂದು ಪ್ರಿನ್ಸಿಪಾಲ್ ಕೊಠಡಿಯ ಬಾಗಿಲನ್ನು ಬಡಿದರು ಗಂಗಣ್ಣ.

ಎಸ್.. ಕಮ್ ಇನ್! ಎಂಬ ವಾಕ್ಯ ಕೇಳಿ ಒಳಗೆ ಹೋದ ಗಂಗಣ್ಣ ವಿನಮ್ರವಾಗಿ ಕೈ ಮುಗಿದು, ಮೇಡಂ ಏನೋ ಬರ ಹೇಳಿದಿರಂತೇ? ಎನ್ನುವಾಗ ಆತನ ಧ್ವನಿಯಲ್ಲಿ ಅದ್ರತೆ ಇತ್ತು.

ನೀಟಾಗಿ ಸೀರೆಯುಟ್ಟ ಮಧ್ಯಮ ವಯಸ್ಸಿನ ಅಲ್ಲಲ್ಲಿ ನೆರೆತ ಕೂದಲಿನ ದಿಟ್ಟತನದ ದಕ್ಷತನದ ಮಹಿಳೆಯಾಗಿದ್ದ ಪ್ರಾಂಶುಪಾಲರು ತಮ್ಮ ಮೂಗಿನ ಮೇಲೆ ಬಂದಿದ್ದ ಕನ್ನಡಕವನ್ನು ಸರಿಮಾಡಿಕೊಂಡು ತಗೋ, ಇದನ್ನು ಓದು ಎಂದು ತಮ್ಮ ಮುಂದಿದ್ದ ಒಂದು ಕಾಗದದ ಹಾಳೆಯನ್ನು ಕೊಟ್ಟರು.

ಅರೇ.. ಇದೇನು ಮೇಡಂ? ನನಗೆಲ್ಲಿ ಓದಲು ಬರುತ್ತದೆ? ನಾನು ಅನಕ್ಷರಸ್ಥ. ದಯವಿಟ್ಟು ನಾನೇನಾದರೂ ಗೊತ್ತಿಲ್ಲದೇ ತಪ್ಪು ಮಾಡಿದ್ದರೆ ಹೊಟ್ಟೆಗೆ ಹಾಕಿಕೊಂಡು ಕ್ಷಮಿಸಿ ನನಗೆ ಮತ್ತೊಂದು ಅವಕಾಶ ಕೊಡಿ ಮೇಡಂ. ನನ್ನ ಮಗಳಿಗೆ ಈ ಶಾಲೆಯಲ್ಲಿ ಉಚಿತವಾಗಿ ಅಧ್ಯಯನ ಮಾಡಲು ಅವಕಾಶ ನೀಡಿದ್ದಕ್ಕಾಗಿ ನಾನು ನಿಮಗೆ ಚಿರಋಣಿಯಾಗಿದ್ದೇನೆ. ಅವಳ ಜೀವನದ ಹೊರತಾಗಿ ನನಗೆ ಬೇರಾವುದೇ ಚಿಂತೆ ಇಲ್ಲಾ ಎಂದು ನಡುಗುತ್ತಲೇ ಹೇಳಿದರು ಗಂಗಣ್ಣ.

ನಿಮ್ಮ ಮಗಳು ಬರೆದಿರುವ ಈ ಪತ್ರವನ್ನು ನೀನು ಓದಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿೆ ಶಾಲೆಯಲ್ಲಿದ್ದ ಎಲ್ಲಾ ಶಿಕ್ಷಕ/ಶಿಕ್ಷಕಿಯರನ್ನು ಅಲ್ಲಿಗೆ ಕರೆಸಿ ಅವರಲ್ಲೊಬ್ಬರಿಗೆ ಆ ಪತ್ರವನ್ನು ಓದಲು ಹೇಳಲಾಯಿತು.

ಆ ಪತ್ರದ ಸಾಲುಗಳು ಹೀಗಿತ್ತು

ವಿಶ್ವ ಅಮ್ಮಂದಿರ ದಿನಕ್ಕಾಗಿ ತಾಯಿಯ ಬಗ್ಗೆ ಪ್ರಬಂಧವನ್ನು ಬರೆಯಲು ನಮ್ಮ ಶಿಕ್ಷಕಿಯವರು ತಿಳಿಸಿದ್ದಾರೆ.

father1ನಮ್ಮದು ಹಾಸನದ ಬಳಿಯ ಒಂದು ಸಣ್ಣ ಹಳ್ಳಿ. ವೈದ್ಯಕೀಯ ಮತ್ತು ಶಿಕ್ಷಣವು ಇನ್ನೂ ದೂರದ ಕನಸಿನಂತೆಯೇ ಇರುವ ಕುಗ್ರಾಮ ಎಂದರು ತಪ್ಪಾಗದು. ಅಂತಹ ಸಣ್ಣ ಹಳ್ಳಿಯಲ್ಲಿ ಸಣ್ಣ ಪ್ರಾಯದ ನಮ್ಮಮ್ಮ ನನಗೆ ಜನ್ಮ ನೀಡುವಾಗಲೇ ಅಸುನೀಗುತ್ತಾಳೆ. ಹಾಗಾಗಿ ನಾನು ತಂದೆಯ ಮಡಿಲಲ್ಲಿ ಸೇರಿಕೊಳ್ಳುತ್ತೇನೆ. ಎಲ್ಲರೂ ಹುಟ್ಟುತ್ತಲೇ ತಾಯಿಯನ್ನು ತಿಂದು ಕೊಂಡವಳು ಎಂದು ಮೂದಲಿಸಲಾರಂಭಿಸುತ್ತಾರೆ.

ನಮ್ಮ ತಂದೆಗೂ ಇನ್ನೂ ಸಣ್ಣ ವಯಸ್ಸಾದರಿಂದ ಎಲ್ಲರೂ ಅವರಿಗೆ ಮತ್ತೊಂದು ಮದುವೆಯನ್ನು ಮಾಡಿಕೊಳ್ಳಲು ಎಲ್ಲರೂ ಒತ್ತಾಯ ಮಾಡತೊಡಗಿದರಾದರೂ ಅಪ್ಪಾ ಅದನ್ನು ನಿರಾಕರಿಸುತ್ತಾರೆ. ತಾತ ಮತ್ತು ಅಜ್ಜಿಯರೂ ಸಹಾ ಇನ್ನೂ ಚಿಕ್ಕ ವಯಸ್ಸು, ಮಗಳನ್ನೂ ಬೇರೆ ನೋಡಿಕೊಳ್ಳಬೇಕು. ವಂಶೋದ್ಧಾರಕನೂ ಬೇಕು ಎಂಬ ಎಲ್ಲಾ ರೀತಿಯಲ್ಲೂ ಭಾವನಾತ್ಮಕ ಅಂಶಗಳ ಮೂಲಕ ಅಪ್ಪನನ್ನು ಒಪ್ಪಿಸಲು ಪ್ರಯತ್ನಿಸಿದರಾದರೂ ಅಪ್ಪಾ ಯಾವುದಕ್ಕೂ ಜಗ್ಗಲಿಲ್ಲ.

ಆಲ್ಲೇ ಇದ್ದರೆ ಎಲ್ಲರೂ ಹೀಗೆಯೇ ಪೀಡಿಸುತ್ತಲೇ ಇರುತ್ತಾರೆ ಎಂದು ತಿಳಿದ ಅಪ್ಪ, ತನ್ನ ಆಸ್ತಿ, ಮನೆ. ಮಠ ದನಕರುಗಳನ್ನೆಲ್ಲವನ್ನೂ ಬಿಟ್ಟು ಪಟ್ಟಣಕ್ಕೆ ನನ್ನನ್ನು ಹೊತ್ತುಕೊಂಡು ಬರುತ್ತಾರೆ. ಇಷ್ಟು ದೊಡ್ಡ ನಗರದಲ್ಲಿ ಅಪ್ಪನಿಗೆ ತಿಳಿದವರು ಯಾರೂ ಇರಲಿಲ್ಲ, ಕೈಯ್ಯಲ್ಲಿಯೂ ಬಿಡಿಗಾಸೂ ಇರಲಿಲ್ಲ. ಅವನ ತೋಳಿನಲ್ಲಿ ಕೇವಲ ನಾನಿದ್ದೆ. ಜೀವನವೂ ಬಹಳ ಕಠಿಣವಾಗಿತ್ತು. ಹಗಲು ರಾತ್ರಿ ಎನ್ನದೇ ಸಿಕ್ಕ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಲೇ ನನ್ನನ್ನು ಚೆನ್ನಾಗಿ ಬೆಳಸತೊಡಗಿದರು.

father2ತನಗೆ ತಿನ್ನಲು ಇದೆಯೋ ಇಲ್ಲವೋ ಎಂದು ಯೋಚಿಸದೇ ಸದಾಕಾಲದಲ್ಲೂ ನನಗೆ ಹೊಟ್ಟೆಯ ತುಂಬಾ ತಿನ್ನಿಸುತ್ತಿದ್ದರು. ತಮ್ಮ ಶಕ್ತಿ ಸಾಮರ್ಥ್ಯವನ್ನು ಮೀರಿ ನನಗೆ ಸಾಧ್ಯವಾದಷ್ಟು ಉತ್ತಮವಾದ ಸೌಕರ್ಯಗಳನ್ನು ಒದಗಿಸಿದರು. ಸ್ವಲ್ಪ ವರ್ಷಗಳಲ್ಲಿ ಈ ಪ್ರತಿಷ್ಠಿತ ಶಾಲೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತಲ್ಲದೇ, ನನಗೆ ಇಲ್ಲಿಯೇ ಉಚಿತವಾಗಿ ಓದುವ ಅವಕಾಶ ಕೊಡಲಾಯಿತು. ಅಂದಿನಿಂದ ನನಗೆ ತಂದೆಯೇ ತಾಯಿಯಾಗಿ ಹೋದರು. ತಾಯಿಯ ಪ್ರೀತಿ ವಿಶ್ವಾಸ ಹೇಗಿರುತ್ತದೆ ಎಂದು ಯಾರಾದರೂ ನನ್ನನ್ನು ಕೇಳಿದರೆ ಎಲ್ಲದ್ದಕ್ಕೂ ನಾನು ತಂದೆಯನ್ನೇ ತೋರಿಸುವಷ್ಟರ ಮಟ್ಟಿಗೆ ಬೆಳೆದಿದೆ ನಮ್ಮಿಬ್ಬರ ಅವಿನಾಭಾವ ಸಂಬಂಧ.

gard2ನನ್ನ ತಾಯಿ ಒಂಭತ್ತು ತಿಂಗಳು ತನ್ನ ಗರ್ಭದಲ್ಲಿ ಹೊತ್ತು ಹೆತ್ತಿರಬಹುದು. ಆದರೆ ಕಳೆದ ಒಂಬತ್ತು ವರ್ಷಗಳು ನನ್ನ ತಂದೆಯೇ ಭೂಮಿಯ ನಂತರದ ಅತ್ಯುತ್ತಮ ತಾಯಿಯಾಗಿದ್ದಾರೆ. ಈ ವಿಶ್ವ ತಾಯಿಯ ದಿನದಂದು, ನನ್ನ ತಂದೆಯೇ ನನಗೆ ಭೂಮಿಯ ಮೇಲಿನ ಅತ್ಯುತ್ತಮ ತಾಯಿ ಆಗಿದ್ದಾರೆ ಎಂದು ಹೇಳಬಯಸುತ್ತೇನೆ ಮತ್ತು ನಾನು ಅವರಿಗೆ ಹೃದಯಪೂರ್ವಕ ನಮಸ್ಕರಿಸುತ್ತೇನೆ. ಈ ಶಾಲೆಯಲ್ಲಿ ಕಷ್ಟಪಟ್ಟು ಕೆಲಸ ಮಾಡುವ ಮಾಲಿಯೇ ನನ್ನ ತಂದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.

ಅಮ್ಮಂದಿರ ಬಗ್ಗೆ ಬರೆಯಲು ಹೇಳಿದ ಪ್ರಬಂಧದಲ್ಲಿ ನಾನು ಅಪ್ಪನ ಬಗ್ಗೆ ಬರೆದಿರುವ ಕಾರಣ ನನ್ನ ಶಿಕ್ಷಕಿ ನನಗೆ ಕಡಿಮೆ ಅಂಕ ಕೊಡಬಹುದು ಇಲ್ಲವೇ ಕರೆದು ಬೈಯ್ಯುವುದಾಗಲೀ ಇಲ್ಲವೇ ಶಿಕ್ಷೆಯನ್ನಾದರೂ ಕೊಡಬಹುದು. ಆದರೆ ನನಗೆ ಅದರ ಕುರಿತಂತೆ ಯಾವುದೇ ಬೇಸರವಿಲ್ಲ, ಏಕೆಂದರೆ ಅವೆಲ್ಲವೂ ನನ್ನ ತಂದೆಯ ನಿಸ್ವಾರ್ಥ ತ್ಯಾಗ ಮತ್ತು ಪ್ರೇಮಕ್ಕೆ ನನ್ನ ಕಡೆಯಿಂದ ಕೊಡಬಹುದಾದ ಒಂದು ಸಣ್ಣ ಬೆಲೆಯಷ್ಟೇ ಎಂದು ನಾನು ನಂಬುತ್ತೇನೆ.

ಆ ಶಿಕ್ಷಕಿ  ಪತ್ರವನ್ನು ಓದುತ್ತಿರುವಾಗ ಇಡೀ ಪ್ರಾಂಶುಪಾಲರ ಕೊಠಡಿ ನಿಶ್ಯಭ್ಧವಾಗಿತ್ತು. ಎಲ್ಲರ ಕಣ್ಣುಗಳಲ್ಲಿಯೂ ನೀರು ಜಿನುಗುತ್ತಿತ್ತು. ಅಷ್ಟೊಂದು ಪ್ರಖರವಾದ ಸೂರ್ಯನ ಕಿರಣಗಳಲ್ಲಿ ಕೆಲಸ ಮಾಡಿದಾಗಲೂ ಬೆವರಿನಿಂದ ಒದ್ದೆ ಯಾಗದ ಗಂಗಣ್ಣನ ಬಟ್ಟೆಗಳು, ತನ್ನ ಬಗ್ಗೆ ವಾತ್ಸಲ್ಯ ಪೂರ್ವಕವಾಗಿ ಮಗಳು ಬರೆದಿದ್ದ ಪತ್ರವನ್ನು ಕೇಳಿ ಆತನ ಎದೆಯನ್ನು ಕಣ್ಣೀರಿನಿಂದ ನೆನೆಸಿತ್ತು. ಗಂಗಣ್ಣ ಎರಡೂ ಕೈಗಳನ್ನು ಮಡಚಿಕೊಂಡು ಆನಂದಭಾಷ್ಪಸುರಿಸುತ್ತಾ ನೆನದು ತೊಪ್ಪೆಯಾಗಿ ನಿಂತಿದ್ದರು.

ಕೂಡಲೇ, ಆ ಕಾಗದವನ್ನು ಶಿಕ್ಷಕಿಯ ಕೈಗಳಿಂದ ತೆಗೆದುಕೊಂಡು, ಅದನ್ನು ತನ್ನ ಹೃದಯಕ್ಕೆ ಅವಚಿಕೊಂಡು ಹಿಡಿದಿಕೊಂಡು ಮತ್ತೊಮ್ಮೆ ಗಳಗಳ ಅಳುವ ಮೂಲಕ ತನ್ನ ಮನಸ್ಸನ್ನು ಹಗುರ ಮಾಡಿಕೊಂಡರು.

ಇದನ್ನೆಲ್ಲಾ ಗಮನಿಸುತ್ತಿದ್ದ ಪ್ರಾಂಶುಪಾಲರು ಕೂಡಲೇ ತಮ್ಮ ಆಸನದಿಂದ ಎದ್ದು, ಗಂಗಣ್ಣನಿಗೆ ಕುಳಿತುಕೊಳ್ಳಲು ಆಸನವನ್ನು ನೀಡಿ, ಕುಡಿಯಲು ನೀರು ಕೊಟ್ಟು ಸಮಾಧಾನ ಪಟ್ಟುಕೊಳ್ಳಲು ಹೇಳಿದರು. ಆನಂತರ ಅವರು ಏನು ಹೇಳುತ್ತಿದ್ದರು ಎಂದು ಗಂಗಣ್ಣನಿಗೆ ಕೇಳಿಸುತ್ತಲೇ ಇರಲಿಲ್ಲ. ಇದನ್ನು ಗಮನಿಸಿದ ಪ್ರಾಂಶುಪಾಲರು ಕೆಲ ಸಮಯ ಮೌನ ವಹಿಸಿದ ನಂತರ ಗಂಗಣ್ಣಾ, ನಿಮ್ಮ ಮಗಳ ಈ ಪ್ರಬಂಧಕ್ಕೆ ನಾವು 10/10 ಅಂಕಗಳನ್ನು ಕೊಡುತ್ತಿದ್ದೇವೆ. ಈ ಶಾಲೆಯ ಇತಿಹಾಸದಲ್ಲಿ ತಾಯಿಯ ದಿನದ ಬಗ್ಗೆ ಬರೆದ ಅತ್ಯುತ್ತಮ ಪ್ರಬಂಧ ಇದಾಗಿದೆ ಎಂದು ಹೇಳಲು ನಾನು ಹೆಮ್ಮೆ ಪಡುತ್ತೇನೆ. ನಾಳೆ ನಮ್ಮ ಶಾಲೆಯಲ್ಲಿ ನಡೆಯಲಿರುವ ವಿಶ್ವ ತಾಯಂದಿರ ದಿನದ ಕಾರ್ಯಕ್ರಮದಲ್ಲಿ ಈ ಪತ್ರವನ್ನು ಇಡೀ ಶಾಲೆಗೆ ತೋರಿಸಲಾಗುತ್ತದೆ ಮತ್ತು ಆ ಕಾರ್ಯಕ್ರಮಕ್ಕೆ ನಿಮ್ಮನ್ನೇ ಮುಖ್ಯ ಅತಿಥಿಯಾಗಿ ಆಹ್ವಾನಿಸಲು ನಿರ್ಧರಿಸಿದ್ದೇವೆ ಎಂದರು…

ಒಂದು ಮಗುವನ್ನು ಪ್ರೀತಿ ಮತ್ತು ಆದರಗಳಿಂದ ಬೆಳೆಸಲು ಆಕೆ ಮಹಿಳೆಯೇ ಆಗಬೇಕು ಎಂದೇನಿಲ್ಲ. ಮುಖ್ಯವಾಗಿ ಆ ಮಗುವಿನಲ್ಲಿ ಧೃಢವಾದ ನಂಬಿಕೆಯನ್ನು ಬಲಪಡಿಸುವುದು, ಪ್ರಶಂಶಿಸುವುದು, ಅಂಗೀಕರಿಸುವುದು ಮತ್ತು ಅವರ ಎಲ್ಲಾ ಸಾಹಸಕಾರ್ಯಗಳಿಗೂ ತಾನು ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂಬ ಭರವಸೆಯನ್ನು ಆ ಮಗುವಿನಲ್ಲಿ ಮೂಡಿಸಿ ಆದು ಹೆಮ್ಮೆಯ ಸಾಧನೆಗಳನ್ನು ಮಾಡುವಂತೆ ಪ್ರೇರೇಪಿಸುವುದೇ ಉತ್ತಮ ತಾಯಿಯ ಲಕ್ಷಣ. ಅಂತಹ ಸಂಪೂರ್ಣ ಜವಾಬ್ಧಾರಿಯನ್ನು ನೀವು ಒಬ್ಬ ತಂದೆಯಾಗಿಯೇ ತಾಯಿಯ ಸಂಪೂರ್ಣ ಜವಾಬ್ಧಾರಿಗಳನ್ನು ನಿಭಾಯಿಸಿರುವುದಕ್ಕಾಗಿ ಅಭಿನಂದನೆ ಸಲ್ಲಿಸಲು ನಾವು ಇಚ್ಚಿಸುತ್ತೇವೆ.

gard4ತೋಟಗಾರನೆಂದರೆ ಕೇವಲ ತಮ್ಮ ತೋಟದಲ್ಲಿ ಬೆಳೆದಿರುವ ಹೂವು ಹಣ್ಣುಗಳನ್ನು ಬೆಳಸುವುದು ಮಾತ್ರವಲ್ಲ. ಬದಲಿಗೆ ನಮ್ಮ ಜೀವನದ ಅತ್ಯಮೂಲ್ಯವಾದ ಹೂವುಗಳಾದ ಮಕ್ಕಳನ್ನೂ ಸಹಾ ಅತ್ಯಂತ ಜೋಪಾನವಾಗಿ ಮುತುವರ್ಜಿಯಿಂದ ಸುಂದರವಾಗಿ ಪೋಷಿಸುವ ಜವಾಬ್ಧಾರಿ ಇರುತ್ತದೆ. ಅಂತಹ ಮಹತ್ಕಾರ್ಯವನ್ನು ನೀವು ಅತ್ಯಂತ ಯಶಸ್ವಿಯಾಗಿ ಮಾಡಿರುವ ಕಾರಣ, ನಾಳಿನ ಕಾರ್ಯಕ್ರಮಕ್ಕೆ ನೀವೇ ನಮ್ಮ ಮುಖ್ಯ ಅತಿಥಿಗಳು ಎಂದಾಗಾ, ಅಲ್ಲಿ ನೆರೆದಿದ್ದವರೆಲ್ಲರೂ ಜೋರಾಗಿ ಕರತಾಡಣ ಮಾಡುತ್ತಿದ್ದರೆ ಗಂಗಣ್ಣನಿಗೆ ಇದು ಕನಸೋ ನನಸೋ ಎಂದು ಅರಿಯದೆ ಪೆಚ್ಚು ಪೆಚ್ಚಾಗಿ ದೇಶಾವರಿ ನಗೆ ಬೀರುತ್ತಾ ನಿಂತಿದ್ದರು.

ಇದಕ್ಕೇ ಹೇಳೋದು ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆಯೊಬ್ಬಳು ಇರುತ್ತಾಳೆ ಎನ್ನುವಂತೆ ಪ್ರತಿಯೊಬ್ಬ ಯಶಸ್ವೀ ತಾಯಿಯ ಹಿಂದೆ ಆತನ ಗಂಡನ ನಿಸ್ವಾರ್ಥ ಪರಿಶ್ರಮವೂ ಇರುತ್ತದೆ ಅಲ್ಲವೇ?

ಇಂದು ಮೇ 21. ನಮ್ಮ ಮುದ್ದಿನ ಮಗಳ ಹುಟ್ಟಿದ ದಿನ. ಅವಳನ್ನು ಪ್ರೀತಿಸುವ ಅಪ್ಪನಾಗಿ ಈ ಲೇಖನವನ್ನು ಅವಳಿಗಾಗಿ ಅರ್ಪಿಸುತ್ತಿದ್ದೇನೆ. ನಿಮ್ಮೆಲ್ಲರ ಶುಭಹಾರೈಕೆಗಳು ನಮ್ಮ ಮುದ್ದಿನ ಮಗಳ ಮೇಲಿರಲಿ ಎಂದು ಆಶಿಸುತ್ತೇವೆ.

ಏನಂತೀರೀ?
ನಿಮ್ಮವನೇ ಉಮಾಸುತ

ಸಾಮಾಜಿಕ ಜಾಲತಾಣದಲ್ಲಿ ಓದಿದ ಸುಂದರ ಲೇಖನದ ಭಾವಾನುವಾದ. ಇಂತಹ ಸುಂದರ ಪ್ರಸಂಗವನ್ನು ಬರೆದಿರುವ ಆ ಅನಾಮಿಕ ಲೇಖಕರಿಗೆ ಹೃದಯಪೂರ್ವಕ ನಮಸ್ಕಾರಗಳು

2 thoughts on “ಮಾತೃ ಸ್ವರೂಪೀ ಅಪ್ಪಾ

  1. ಪಿ್ರಯ, ಶೀ್ರ.ಶೀ್ರಕಂಠ ಬಾಳಕಂಚಿ ಸರ್, ತಮ್ಮ ಈ ಸುಂದರವಾದ ಲೇಖನ ಓದಿದ ಈ ಸುಂದರ ಲೇಖನದ ಭಾವಾನುವಾದ ಇಂತಹ ಲೇಖನ ಬರೆದಿರುವ ನಿಮಗೆ ನನ್ನ ಹೃದಯ ಪೂರ್ವಕ ನಮಸ್ಕಾರಗಳು
    ಇಂತಹ ಮತ್ತಷ್ಟು ಲೇಖನ ಬರೆಯಲು ಪರಮಾತ್ಮನು ತಮಗೆ ಆಯುರಾರೋಗ್ಯ ಐಶ್ವವರ್ಯವನ್ನು ಕರುಣಿಸಲಿ ಎಂದು ಪರಮಾತ್ಮ ನಲ್ಲಿ ಬೇಡಿಕೊಳ್ಳುತ್ತೇನೆ ಅಧ್ಬುತವಾದ ಲೇಖನ ಎಂತಹವರ ಹೃದಯಕ್ಕೆ ಸಹ ಸಂತೋಷವನ್ನು ಉಂಟು ಮಾಡುವ ಲೇಖನ ಇದು
    ನಿಮ್ಮವನೆ ಆದ
    ರಾಮಚಂದ್ರ.ಜಿ.ಹೆಚ್,

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s