ಕವಲೇ ದುರ್ಗ

kv1

ಶಿವಮೊಗ್ಗ ಹೇಳಿ ಕೇಳಿ ಮಲೆನಾಡಿನ ಪ್ರದೇಶ ವರ್ಷದ 365 ದಿನಗಳು ಹಚ್ಚ ಹಸಿರಾಗಿರುವಂತಹ ಸುಂದರ ಪ್ರಕೃತಿಯ ತಾಣ. ಶಿವಮೊಗ್ಗದಿಂದ ಸುಮಾರು 80 ಕಿಮೀ ಮತ್ತು ತೀರ್ಥಹಳ್ಳಿಯಿ೦ದ ಸುಮಾರು 18 ಕಿ.ಮಿ ದೂರದಲ್ಲಿರುವ ಸುಂದರ ಪ್ರಕೃತಿ ತಾಣ ಮತ್ತು ಐತಿಹಾಸಿಕ ಪ್ರದೇಶವೇ ಕವಲೇ ದುರ್ಗ. ತೀರ್ಥಹಳ್ಳಿಯಿಂದ ಆಗುಂಬೆಯತ್ತ ಹೋಗುವ ಹಾದಿಯಲ್ಲಿ ಸುಮಾರು ಆರು ಕಿ.ಮೀ ದಲ್ಲಿ ಸಿಗುವ ಬಿಳ್ ಕೊಪ್ಪ ಎನ್ನುವ ಸ್ಥಳದಿಂದ ಬಲಕ್ಕೆ ತಿರುಗಿ ಸುಮಾರು 10 ಕಿ.ಮೀ ಕಚ್ಚಾ ರಸ್ತೆಯಲ್ಲಿ ಕ್ರಮಿಸಿದರೆ ಕವಲೇ ದುರ್ಗದ ಬುಡವನ್ನು ತಲುಪಬಹುದಾಗಿದೆ. ಇಲ್ಲಿಯೇ ವಾಹನಗಳನ್ನು ನಿಲ್ಲಿಸಿ ಅಲ್ಲಿಂದ ಸರಿ ಸುಮಾರು 2-3 ಕಿಮೀ ದೂರ ಕಾಲ್ನಡಿಗೆಯಲ್ಲಿ ಗದ್ದೆಗಳ ಬದುವಿನ ಮೇಲೆ ನಡೆದುಕೊಂಡು ಹೋದಲ್ಲಿ ಕವಲೇ ದುರ್ಗದ ಕೋಟೆಯ ವಿಹಂಗಮ ನೋಟವನ್ನು ಕಾಣಬಹುದಾಗಿದೆ.

kv5

ಸಹ್ಯಾದ್ರಿ ಬೆಟ್ಟಗಳ ಮಡಿಲಲ್ಲಿ 9ನೇ ಶತಮಾನದ ಹಿಂದೆ ವಿಜಯ ನಗರದ ಸಾಮಂತರಾಗಿದ್ದ ಕೆಳದಿಯ ಸಂಸ್ಥಾನದ ಅರಸು ವೆಂಕಟಪ್ಪ ನಾಯಕ (ಕ್ರಿ.ಶ. 1582-1679) ತನ್ನ ಆಡಳಿತಾವಧಿಯಲ್ಲಿ ಕಟ್ಟಿದರು ಎನ್ನಲಾದ ಸುಂದರವಾದ ಕವಲೇ ದುರ್ಗ ಕೋಟೆ ಕಾಣಸಿಗುತ್ತದೆ. ಇದು ಕೆಳದಿ ಸಂಸ್ಥಾನದ ನಾಲ್ಕನೆಯ ಹಾಗೂ ಕೊನೆಯ ರಾಜಧಾನಿಯಾಗಿತ್ತು ಎಂದು ಹೇಳಲಾಗುತ್ತದೆ. ಅಂದಿನ ಕಾಲದಲ್ಲಿ ಇದನ್ನು ಭುವನ ಗಿರಿ ದುರ್ಗ ಹಾಗೂ ಕೌಲೆ ದುರ್ಗ ಎ೦ದೂ ಕರೆಯಲ್ಪಡುತ್ತಿತ್ತು. ಸಾಂಸ್ಕೃತಿಕವಾಗಿ ಹೇಳಬೇಕೆಂದರೆ ಕವಲೇದುರ್ಗ ಎನ್ನುವುದು ಕಾವಲು ದುರ್ಗ ಎಂಬ ಹೆಸರಿನ ಅಪಭ್ರಂಶವಾಗಿದೆ ಎನ್ನಲಾಗುತ್ತದೆ. ಕರ್ನಾಟಕದ ಇತಿಹಾಸದಲ್ಲಿ ನಾಗರಖಂಡ ಬನವಾಸಿ ನಾಡೆಂದು ಖ್ಯಾತಿಗೊಂಡಿದ್ದ ಮಲೆನಾಡು ಪ್ರದೇಶದ ಕವಲೇದುರ್ಗ ಒಂದು ಐತಿಹಾಸಿಕ ತಾಣವಾಗಿದೆ. ಮೊದಲು ಮಲ್ಲವ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಕವಲೇದುರ್ಗ ನಂತರ ಭುವನಗಿರಿ ದುರ್ಗ ಸಂಸ್ಥಾನವಾಗಿ ಮಾರ್ಪಟ್ಟಿದ್ದಕ್ಕೆ ಒಂದು ಭಯಂಕರ ಯುದ್ಧದ ಹಿನ್ನಲೆಯಿದೆ.

ಮಲ್ಲವರು ಮೊದಲು ಸಾಗರದ ಸಮೀಪ ಇರುವ ಕೆಳದಿ ಎಂಬಲ್ಲಿ ರಾಜ್ಯ ಸ್ಥಾಪಿಸಿ ಇಕ್ಕೇರಿ, ಬಿದನೂರಿನಲ್ಲಿ(ನಗರ) ಕೋಟೆ ಕೊತ್ತಲ ನಿರ್ಮಿಸಿ ರಾಜ್ಯಭಾರವನ್ನು ನಡೆಸುತ್ತಿದ್ದ ಸಮಯದಲ್ಲಿ ಈ ಕವಲೇದುರ್ಗದ ಗಿರಿ ಪ್ರದೇಶ ತೊಲೆತಮ್ಮ ಮತ್ತು ಮುಂಡಿಗೆತಮ್ಮ ಎಂಬ ಸಹೋದರರ ಪಾಳೇಗಾರಿಯಲ್ಲಿರುತ್ತದೆ. ಈ ಸಹೋದರರನ್ನು ಸೋಲಿಸಿದ ಮಲ್ಲವರು ಕವಲೇದುರ್ಗ ಕೋಟೆಯನ್ನು ವಶಕ್ಕೆ ಪಡೆದು ಅದಕ್ಕೆ ಭುವನಗಿರಿ ದುರ್ಗ ಎಂದು ಹೆಸರಿಟ್ಟು ಆಳ್ವಿಕೆ ನಡೆಸಿದರು ಎಂದು ಇತಿಹಾಸದಲ್ಲಿ ದಾಖಾಲಾಗಿದೆ. ಈ ಮಲ್ಲವ ವಂಶದಲ್ಲಿ ಶಿವಪ್ಪ ನಾಯಕ ಮತ್ತು ರಾಣಿ ಚೆನ್ನಮ್ಮಾಜಿಯವರು ಪ್ರಖ್ಯಾತರಾಗಿದ್ದರು. ಅದರಲ್ಲೂ ರಾಣಿ ವೀರಮ್ಮಾಜಿಯವರು ಛತ್ರಪತಿ ಶಿವಾಜಿ ಮಹಾಹಾರಾಜರ ಮಗನಾದ ರಾಜಾರಾಮನಿಗೆ ಆಶ್ರಯ ನೀಡಿರುವುದು ಗಮನಾರ್ಹವಾದ ಅಂಶಯವಾಗಿದೆ. ಇದೇ ವಿಷಯವಾಗಿಯೇ ಮೊಘಲ್ ದೊರೆ ಔರಂಗಜೇಬನನ್ನು ಎದುರು ಹಾಕಿಕೊಂಡು ಅವನೊಂದಿಗೆ ಯುದ್ಧದಲ್ಲಿ ಜಯಿಸಿದ ಕೀರ್ತಿಯೂ ರಾಣಿ ಚೆನ್ನಮ್ಮಾಜಿಯವರದ್ದಾಗಿದೆ. 18ನೇ ಶತಮಾನದಲ್ಲಿ ಮೈಸೂರು ರಾಜ್ಯವನ್ನು ಆಕ್ರಮಿಸಿಕೊಂಡಿದ್ದ ಹೈದರಾಲಿ ಮತ್ತು ಅವನ ಮಗ ಟಿಪ್ಪೂ ಸುಲ್ತಾನ್ ಈ ಕವಲೇ ದುರ್ಗದ ಮೇಲೆ ಧಾಳಿ ನಡೆಸಿ ಸಾಕಷ್ಟು ಹಾನಿಮಾಡುವುದರಲ್ಲಿ ಯಶಸ್ವಿಯಾಗಿದ್ದದ್ದು ದುರದೃಷ್ಟಕರವಾಗಿದೆ.

9ನೇ ಶತಮಾನದಲ್ಲಿ ಈ ಕೋಟೆಯನ್ನು ನಿರ್ಮಿಸಲಾಯಿತಾದರೂ, 14 ನೇ ಶತಮಾನದಲ್ಲಿ ಚೆಲುವರಂಗಪ್ಪನಿಂದ ನವೀಕರಿಸಲ್ಪಟ್ಟು ಹೆಚ್ಚಿನ ಮೆರಗನ್ನು ಪಡೆದಿತ್ತು. ಆದಾದ ನಂತರ ವಿಜಯಯನಗರ ಅರಸರ ಸಾಮಂತರಾಗಿದ್ದು, ವಿಜಯನಗರದ ಪತನಗೊಂಡ ನಂತರ ಸ್ವತಂತ್ರರಾದ ಕೆಳದಿಯ ನಾಯಕರ ಭದ್ರಕೋಟೆಯಾಗಿ ವೆಂಕಟಪ್ಪ ನಾಯಕನು ಇಲ್ಲಿ ಸುಂದರವಾದ ಅರಮನೆಯೊಂದನ್ನು ಕಟ್ಟಿಸಿದ್ದಲ್ಲದೇ ಈ ಪ್ರದೇಶವನ್ನುಅಗ್ರಹಾರವನ್ನಾಗಿಸಿದರು. ಇಲ್ಲಿ ಮತ್ತಿನ ಮಠ ಎಂಬ ಶೃಂಗೇರಿ ಮಠದ ಉಪಮಠ, ಒಂದು ಸುಭದ್ರವಾದ ಖಜಾನೆ, ಒಂದು ಬೃಹತ್ತಾದ ಕಣಜ, ಆನೆಗಳಿಗಾಗಿ ಗಜಶಾಲೆ, ಕುದುರೆಗಳಿಗಾಗಿ ಅಶ್ವಶಾಲೆ ಮತ್ತು ಹತ್ತಾರು ಸುಂದರವಾದ ಕೊಳಗಳನ್ನು ನಿರ್ಮಿಸಿದರು. ಕೆಳದಿ ಸಂಸ್ಥಾನದ ಈ ಐತಿಹ್ಯ ಹಾಗೂ ಅಂದಿನ ವಾಸ್ತುಶಿಲ್ಪ, ಕಲೆ ಮತ್ತು ಸಂಸ್ಕೃತಿಗಳಿಗೆ ಈ ಕೋಟೆ ಇಂದಿಗೂ ಸಾಕ್ಷಿಯಾಗಿ ನಮ್ಮ ಕಣ್ಣ ಮುಂದಿದೆ.

ಬಹಳಷ್ಟು ಜನರಿಗೆ ತಿಳಿದಿಲ್ಲದ ಒಂದು ಸಂಗತಿ ಎಂದರೆ ಇಕ್ಕೇರಿಯ ವೆಂಕಟಪ್ಪ ನಾಯಕರು ತಾವು ಸಣ್ಣವರಿದ್ದಾಗ ಓದಿ ನಲಿದು ಕುಪ್ಪಳಿಸಿದ ವಿಜಯನಗರದ ರಾಜಧಾನಿ ಹಂಪಿಯ ಒಂದು ಪ್ರತಿರೂಪ ಮಾಡಲು ಆರಿಸಿಕೊಂಡ ಸ್ಥಳವೇ ಭುವನಗಿರಿದುರ್ಗ ಅಂದರೆ ಕವಲೇದುರ್ಗಾ ಕೋಟೆ.

kv14

ಚಿತ್ರದುರ್ಗದಲ್ಲಿ ಏಳು ಸುತ್ತಿನ ಕೋಟೆ ಹೇಗೆ ಇದೆಯೋ ಹಾಗೆ ಇದು ಮೂರು ಸುತ್ತಿನ ಕೋಟೆಯಾಗಿದ್ದು, ಚಿತ್ರದುರ್ಗದ ರೀತಿಯಲ್ಲಿಯೇ ಬೆಟ್ಟದ ದಿಣ್ಣೆಗಳ ನೈಸರ್ಗಿಕ ಬಾಹ್ಯ ರೇಖೆಗಳನ್ನು ಅನುಸರಿಸಿ ಬೃಹತ್ ಗಾತ್ರದ ಪೆಡಸುಕಲ್ಲುಗಳನ್ನೇ ಇಟ್ಟಿಗೆಗಳ ರೀತಿಯಲ್ಲಿ ಬಳಸಿಕೊಂಡು ನಿರ್ಮಿಸಲಾಗಿದೆ. ಪ್ರತಿ ಸುತ್ತಿನಲ್ಲೂ ಒಂದು ಮಹಾದ್ವಾರವಿದ್ದು ಅದರ ಎರಡೂ ಬದಿಯಲ್ಲಿಯೂ ಸೈನಿಕರ ರಕ್ಷಣಾ ಕೊಠಡಿಗಳನ್ನು ಕಾಣಬಹುದಾಗಿದೆ. ಕೋಟೆಯ ಮದ್ಯದಲ್ಲಿ ದೇವಾಲಯಗಳು, ಮತ್ತು ಒಂದು ಪಾಳುಬಿದ್ದ ಅರಮನೆಯ ಪಳಿಯುಳಿಕೆಯನ್ನು ಕಾಣಬಹುದಾಗಿದೆ.

kv2ಈ ದುರ್ಗದ ತುತ್ತ ತುದಿಯಲ್ಲಿ ಅರಬ್ಬಿ ಸಮುದ್ರಕ್ಕೆ ಅಭಿಮುಖವಾಗಿರುವ

ಈ ದುರ್ಗದ ತುತ್ತ ತುದಿಯಲ್ಲಿ ಅರಬ್ಬಿ ಸಮುದ್ರಕ್ಕೆ ಅಭಿಮುಖವಾಗಿರುವ ಈ ದುರ್ಗದ ತುತ್ತ ತುದಿಯಲ್ಲಿ ಅರಬ್ಬಿ ಸಮುದ್ರಕ್ಕೆ ಅಭಿಮುಖವಾಗಿರುವ ಈ ದುರ್ಗದ ತುತ್ತ ತುದಿಯಲ್ಲಿ ಅರಬ್ಬಿ ಸಮುದ್ರಕ್ಕೆ ಅಭಿಮುಖವಾಗಿರುವ ಶಿಖರೇಶ್ವರ ಅಥವಾ ಶ್ರೀಕಂಠೇಶ್ವರ ಎಂಬ ಸಣ್ಣ ದೇವಾಲಯವಿದೆ. ಈ ದೇವಸ್ಥಾನದ ಗರ್ಭಗೃಹದೊಳಗೆ ಕಾಶಿಯಿಂದ ತಂದ ಅಮೃತಶಿಲೆಯ ವಿಶ್ವನಾಥೇಶ್ವರನ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆಯಂತೆ. ಇದರ ಎದುರಿಗೆ ಒಂದು ನಂದಿಮಂಟಪ ಮತ್ತು ಮುಖಮಂಟಪವಿದೆ. ಈ ದೇವಾಲಯದ ಹೊರಭಾಗದಲ್ಲಿ ಅನೇಕ ಕಲಾಕೃತಿಗಳನ್ನು ಕಾಣಬಹುದಾಗಿದೆ. ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳ ಮುಂದೆ ಒಂದು ಧ್ವಜಸ್ತಂಭವನ್ನು ಕಾಣಬಹುದಾದರೆ, ಇಲ್ಲಿ ಮಾತ್ರ ಎರಡು ಧ್ವಜಸ್ತಂಭವಿರುವುದು ಕವಲೇದುರ್ಗದ ವಿಶೇಷವಾಗಿದೆ. ದೇವಸ್ಥಾನದ ಸಮೀಪವೇ, ಅರಸರ ಕಾಲದಲ್ಲಿ ತುಪ್ಪ ಹಾಗೂ ಎಣ್ಣೆಯನ್ನು ಶೇಖರಿಸಲು ಉಪಯೋಗಿಸುತ್ತಿದ್ದ ಬಾವಿಯನ್ನು ಈ ದುರ್ಗದಲ್ಲಿ ಕಾಣಬಹುದಾಗಿದ್ದು ಇದನ್ನು ಎಣ್ಣೆ ಹಾಗೂ ತುಪ್ಪದ ಬಾವಿಯೆಂದೇ ಇಂದಿಗೂ ಕರೆಯಲಾಗುತ್ತದೆ.

kv10

ಈ ದೇವಾಲಯದಿಂದ ಸ್ವಲ್ಪ ದೂರ ಬಂದರೆ, ಈ ಕೋಟೆಯಲ್ಲಿ ಇದ್ದಿದ್ದ ಅರಮನೆಯ ಕುರುಹಾಗಿ ವಿಶಾಲವಾದ ಅಡಿಪಾಯವನ್ನು ಕಾಣಬಹುದಾಗಿದೆ. ಪುರಾತತ್ವ ಇಲಾಖೆಯವರು ನಡೆಸಿದ ಇತ್ತೀಚಿನ ಉತ್ಖನನದಿಂದ, ಇಲ್ಲಿ ಪರಸ್ಪರ ಹೊಂದಿಕೊಂಡಿರುವ ಕೊಠಡಿಗಳು, ವಿಶಾಲವಾದ ಕಂಬದ ಜಗುಲಿ, ಪೂಜಾಗೃಹ, ಅಡಿಗೆ ಕೋಣೆ ಮತ್ತು ಅಂದಿನ ಕಾಲದಲ್ಲಿಯೇ ಕಲ್ಲಿನ ಐದು ಕಡೆ ಜ್ವಾಲೆಗಳನ್ನು ಹೊರಸೂಸಿ ಉರಿಯುವ ಒಲೆ, ಉತ್ತಮವಾದ ನೀರು ಸರಬರಾಜು ವ್ಯವಸ್ಥೆಯನ್ನು ಹೊಂದಿದ್ದ ಕಲ್ಲಿನ ಸ್ನಾನದ ಕೋಣೆ, ಅದಲ್ಲದೇ ಒಂದು ವಿಶಾಲವಾದ ಒಳ ಪ್ರಾಂಗಣ ನಂತರ ಮೆಟ್ಟಿಲಿನಿಂದ ಕೂಡಿದ ಒಂದು ಕೊಳ ಇವುಗಳಿಂದ ಕೂಡಿದ ಅರಮನೆಯ ವಾಸ್ತುಶಿಲ್ಪದ ಒಳನೋಟವನ್ನು ಇಲ್ಲಿ ಕಾಣಬಹುದಾಗಿದೆ. . ಸುಮಾರು ಅರ್ಧ ಎಕರೆ ಪ್ರದೇಶದಲ್ಲಿರುವ ಈ ಅರಮನೆ ಕಲ್ಲು ಕಂಬಗಳ ಆಸರೆ ಹೊಂದಿದೆ. ಬಹುತೇಕವಾಗಿ ಪಾಳುಬಿದ್ದಿರುವ ಈ ಅರಮನೆಯ ಸೂರೆಲ್ಲಾ ಕುಸಿದು ಹೋಗಿದ್ದು, ಆಕಾಶವೇ ಛಾವಣಿಯಾಗಿದೆ. ಇಲ್ಲಿನ ಪಾಳು ಬಿದ್ದಿರುವ ಅನೇಕ ಕಂಬಗಳು ಮತ್ತು ಮಣ್ಣಿನ ಗೋಡೆಗಳು ಮಾತ್ರ ಉಳಿದಿವೆ. ಸೂರ್ಯಾಸ್ತದ ಸಮಯದಲ್ಲಿ ಪಶ್ಚಿಮದಲ್ಲಿ ಮುಳುಗುವ ಸೂರ್ಯನ ಸುಂದರ ನೋಟವನ್ನು ಇಲ್ಲಿಂದ ನೋಡುವುದನ್ನು ವರ್ಣಿಸುವುದಕ್ಕಿಂತಲೂ ಅನುಭವಿಸಿದರೇ ಹೆಚ್ಚು ಆಪ್ಯಾಯಮಾನವೆನಿಸುತ್ತದೆ.

kv17

ಕವಲೇದುರ್ಗದಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ, ಇಲ್ಲಿರುವ ಏಳು ಕೆರೆಗಳು. ಬಹುಶಃ ಕೆಳದಿಯ ಅರಸರು ಆರಾಧಿಸುತ್ತಿದ್ದ ಏಳು ಹೆಡೆಯ ನಾಗದೇವರಿಂದಲೋ ಏನೂ ಅವರಿಗೆ ಏಳರ ಮೇಲೆ ವಿಶೇಷ ಮಮಕಾರದಿಂದಲೇ ಇಲ್ಲಿ ಏಳು ಕೆರೆಗಳನ್ನು ಕಟ್ಟಿಸಿದ್ದಾರೆ. ಈ ಎಲ್ಲಾ ಕೆರೆಗಳಲ್ಲಿ ಅತ್ಯಂತ ಹಿತಾನುಭವ ನೀಡುವುದು ತಿಮ್ಮಣ್ಣನಾಯಕರ ಕೆರೆ ಎಂದರೆ ತಪ್ಪಾಗಲಾರದು. ಸುಮಾರು ಹದಿನೆಂಟು ಎಕರೆ ವಿಸ್ತೀರ್ಣದ ಈ ಕೆರೆ, ಹಕ್ಕಿಗಳ ಚಿಲಿಪಿಲಿ ಕಲರವದಿಂದ, ಮೀನುಗಳ ಮುಳುಗಾಟದಿಂದ, ಆ ಮೀನುಗಳನ್ನು ಹಿಡಿಯಲು ಬರುವ ಕೊಕ್ಕರೆಗಳ ಹಿಂಡಿನಿಂದ ಎಲ್ಲರ ಗಮನವನ್ನು ಸೆಳೆಯುತ್ತದೆ. ಕೆರೆಯ ಏರಿಯ ಮೇಲೆ ನಡೆದಾಡುವಾಗ ಕೆರೆಯಿಂದ ಬೀಸುವ ತಣ್ಣನೆಯ ಗಾಳಿ ಮತ್ತು ನೀರಿನಲ್ಲಿರುವ ಜಲಚರಗಳ ಧನಿ ಮೈ ಮನಗಳಿಗೆ ಮುದವನ್ನು ನೀಡುತ್ತದೆ.

kv8

ಅತ್ಯಂತ ನೈಸರ್ಗಿಕವಾಗಿ ತಗ್ಗುಪ್ರದೇಶಗಳಲ್ಲಿ ಈ ಕೆರೆಗಳನ್ನು ನಿರ್ಮಿಸಿರುವುದಲ್ಲದೇ, ಎತ್ತರದ ಪ್ರದೇಶಗಳಿಂದ ಮಳೆಯ ನೀರು ಸುಲಭವಾಗಿ ಈ ಕೆರೆಗೆ ಹರಿಯುವಂತೆ ಅಂದಿನ ಕಾಲದಲ್ಲಿಯೇ ಮಳೆ ನೀರು ಕೋಯ್ಲು ಪದ್ದತಿಯನ್ನು ಇಲ್ಲಿ ಅಳವಡಿಸಿಕೊಂಡಿರುವುದು ವಿಶೇಷವಾಗಿದೆಯಲ್ಲದೇ, ಎತ್ತರದ ಪ್ರದೇಶಗಳಲ್ಲಿ ನೀರಿನ ಇಂಗು ಗುಂಡಿಗಳನ್ನು ತೋಡಿರುವ ಮೂಲಕ ಅಲ್ಲಿ ಬಿದ್ದ ಮಳೆಯ ನೀರು ಅಲ್ಲಿಯೇ ಭೂಮಿಯೊಳಗೆ ಹೋಗುವ ಕಾರಣ ವರ್ಷವಿಡೀ ಇಲ್ಲಿನ ಕೆರೆಗಳ ನೀರು ಬತ್ತದಿರುವುದು ಗಮನಾರ್ಹವಾಗಿದೆ.

kv11

ಇದೇ ಕೋಟೆಯಲ್ಲಿ ಶೃಂಗೇರಿಯ ಶಾಖಾಮಠವಲ್ಲದೇ, ಕೆಳದಿ ಅರಸರೇ ನಿರ್ಮಿಸಿದ ವೀರಶೈವ ಮಠವೂ ಇಲ್ಲಿದೆ. ಮಠದಿಂದ ಸುಮಾರು ಒಂದು ಕಿ.ಮೀ. ಮುಂದೆ ಎತ್ತರವಾಗಿ ಏರಿದರೆ ಕೋಟೆಯ ಮುಖ್ಯದ್ವಾರ ಸಿಗುತ್ತದೆ. ಮಹಾದ್ವಾರ ಪ್ರವೇಶಿಸುತ್ತಿದ್ದಂತೆಯೇ ಚಿತ್ರದುರ್ಗದ ಮಾದರಿಯಲ್ಲಿಯೇ ಸುಮಾರು 50-60 ಅಡಿ ಎತ್ತರದ ಗೋಡೆಗಳನ್ನು ನೋಡಬಹುದು. ಈ ಗೋಡೆಯ ಮೇಲೆ ಅಂದಿನ ಕಾಲದ ಚಿತ್ರಕಲೆಯನ್ನು ಕಾಣಬಹುದಾಗಿದೆ. ಹಿಂದಿನ ದ್ವಾರದಲ್ಲಿದ್ದಂತೆಯೇ ಇಲ್ಲಿಯೂ ಸಹಾ ಕಾವಲುಗಾರರು ಉಳಿದುಕೊಳ್ಳಲು ಚೌಕಾಕಾರದ ಕಾವಲುಗಾರ ಕೊಠಡಿ ಹಾಗೂ ಒಳಭಾಗದಲ್ಲಿ ಮುಖ ಮಂಟಪವನ್ನು ಈ ಎರಡನೇ ಮಹಾದ್ವಾರದಲ್ಲೂ ಕಾಣಬಹುದಾಗಿದೆ. ಮಂಟಪದ ಎಡಭಾಗದಲ್ಲಿ ನಾಗತೀರ್ಥ ಎಂಬ ಕೊಳ ಮತ್ತು ಅದಕ್ಕೆ ಅಂಟಿಕೊಂಡೇ ಇರುವ ಸುಮಾರು 6 ಅಡಿ ಎತ್ತರದ ಏಳು ಹೆಡೆಯ ಏಕಶಿಲಾ ನಾಗರ ಶಿಲ್ಪವನ್ನು ಇಲ್ಲಿ ಕಾಣಬಹುದಾಗಿದೆ.

kv16

ಮೂರನೇ ಮಹಾದ್ವಾರದ ಬಲಭಾಗದಲ್ಲಿ ನಗಾರಿ ಕಟ್ಟೆಯಿದೆ. ಇಲ್ಲೊಂದು ದೊಡ್ಡದಾದ ಸುರಂಗ ಮಾರ್ಗವಿದ್ದು ಶತ್ರುಗಳ ಆಕ್ರಮಣ ಅಥವಾ ಯಾವುದೇ ವಿಪತ್ತಿನ ಪರಿಸ್ಥಿತಿಯಲ್ಲಿ ಇಲ್ಲಿಂದ ಸುಮಾರು ನಾಲ್ಕೈದು ಕಿಮೀ ದೂರದ ಸುರಕ್ಷಿತ ಪ್ರದೇಶಕ್ಕೆ ತಪ್ಪಿಸಿಕೊಂಡು ಹೋಗಬಹುದಾದ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿತ್ತು ಎನ್ನಲಾಗಿದೆ. ಆದರೆ ಈಗ ಆ ಸುರಂಗದೊಳಗೆ ದೊಡ್ಡ ದೊಡ್ಡ ಬಾವಲಿಗಳು ತುಂಬಿಕೊಂಡಿರುವ ಕಾರಣ ಅಪಾಯಕಾರಿಯಾಗಿದ್ದು ಅದರೊಳಗೆ ಹೋಗುವುದನ್ನು ನಿಷೇಥಿಸಲಾಗಿದೆ.

ಈ ದಟ್ಟ ಅರಣ್ಯದ ನಡುವೆ ನಿರ್ಮಿಸಲಾಗಿದ್ದ ಆನೆಯ ಲಾಯದ ಕುರುಹು. ಬಹುಶಃ ಆನೆಗಳಿಗೆ ನೀರುಣಿಸಲು ಬೋಗುಣಿಯ ರೂಪದಲ್ಲಿರುವ ದೊಡ್ಡ ದೊಡ್ಡದಾದ ನೀರಿನ ತೊಟ್ಟಿಗಳು ನೋಡಲು ನಯನ ಮನೋಹರವಾಗಿದೆ. ಕವಲೇದುರ್ಗಕ್ಕೆ ಭೇಟಿ ನೀಡುವ ಪ್ರವಾಸಿಗರು ಇದನ್ನು ಕಸದ ತೊಟ್ಟಿಯ ರೂಪದಲ್ಲಿ ಕಸಗಳನ್ನು ಹಾಕಿ ಹಾಳುಮಾಡುತ್ತಿರುವುದು ನಿಜಕ್ಕೂ ಶೋಚನೀಯವೆನಿಸುತ್ತದೆ.

kv6

ಸಂಪೂರ್ಣ ಹಸಿರಿನಿಂದ ಆವೃತವಾಗಿರುವ ಈ ಕವಲೆದುರ್ಗದ ಕೋಟೆ ಎಷ್ಟು ಪ್ರಶಾಂತವಾಗಿರುತ್ತದೆಂದರೆ, ಹೆಜ್ಜೆ ಮೇಲೆ ಹೆಜ್ಜೆಯಿಟ್ಟರೂ ಅದರ ಸದ್ದು ಪ್ರತಿಧ್ವನಿಸುವಷ್ಟು ಪ್ರಶಾಂತ ಹಾಗೂ ಮೌನದ ಪರಿಸರ ಇಲ್ಲಿಯದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿನ ವಿಹಂಗಮ ನೋಟವನ್ನು ಸವಿಯಲು ಬರುವವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವ ಕಾರಣ ಇಲ್ಲಿನ ಪ್ರಶಾಂತತೆಗೆ ಭಂಗವುಂಟಾಗಿದೆಯಲ್ಲದೇ, ಪ್ರವಾಸಿಗರು ತರುವ ಊಟ, ತಿಂಡಿ ಮತ್ತು ನೀರಿನ ಬಾಟೆಲಿ ಮತ್ತು ಮದ್ಯದ ಬಾಟಲುಗಳ ತ್ರಾಜ್ಯಗಳು ಎಲ್ಲೆಂದರಲ್ಲಿ ಬಿಸಾಡಿರುವ ಕಾರಣ ಪರಿಸರವೆಲ್ಲಾ ಹಾಳಾಗುತ್ತಿದ್ದು, ಇಲ್ಲಿನ ಸ್ವಚ್ಚತೆಯತ್ತ ಸ್ಥಳೀಯ ಆಡಳಿತ ಮಂಡಳಿ ಸ್ವಲ್ಪ ಗಮನ ಹರಿಸಬೇಕಾಗಿದೆ.

ವರ್ಷವಿಡೀ ಇಲ್ಲಿ ಒಂದಲ್ಲಾ ಒಂದು ಸಿನಿಮಾದ ಚಿತ್ರೀಕರಣ ಇಲ್ಲಿ ನಡೆಯುತ್ತಿರುತ್ತಲೇ ಇರುತ್ತದೆ. ನಾವೆಲ್ಲಾ ಬಾಲ್ಯದಲ್ಲಿ ನೋಡಿದ ಅರ್ಜುನ್ ಸರ್ಜಾ ಅಭಿನಯಯದ ಮಕ್ಕಳ ಚಿತ್ರ ಸಿಂಹದಮರಿ ಸೈನ್ಯ ಚಿತ್ರೀಕರಣ ನಡೆದದ್ದೂ ಇದೇ ಕವಲೆದುರ್ಗದಲ್ಲಿಯೇ.

ಇವೆಲ್ಲವನ್ನೂ ಬದಿಗಿಟ್ಟು ಸುಂದರ ಪ್ರಕೃತಿಯತಾಣವನ್ನು ಸವಿಯಲು ಬಯಸುವವರು ಮತ್ತು ದೇಹದಲ್ಲಿ ಬೆಟ್ಟ ಗುಡ್ಡಗಳನ್ನು ಹತ್ತಿ ಇಳಿಯಲು ಕಸುವಿದ್ದವರು ನಿಜಕ್ಕೂ ಐತಿಹಾಸಿಕವಾಗಿಯೂ ಮತ್ತು ಪ್ರಕೃತಿಯ ರಮ್ಯತಾಣವನ್ನು ಆಹ್ವಾದಿಸಲು ಹೇಳಿ ಮಾಡಿದಂತಹ ಈ ಪ್ರದೇಶಕ್ಕೆ ಭೇಟಿ ನೀಡಬಹುದಾಗಿದೆ. ಇಡೀ ಕವಲೇದುರ್ಗವನ್ನು ಸುತ್ತಾಡಲು ಸುಮಾರು ಏಳೆಂಟು ಗಂಟೆಗಳು ಬೇಕಾಗುವ ಕಾರಣ ಬೆಳ್ಳಂಬೆಳಿಗ್ಗೆಯೇ, ಬಿಸಿಲು ಏರುವುದಕ್ಕೆ ಮುಂಚೆಯೇ ಇಲ್ಲಿಗೆ ತಿಂಡಿ ತಿನಿಸು ಮತ್ತು ಕುಡಿಯುವ ನೀರಿನೊಂದಿಗೆ ಬರುವುದು ಉತ್ತಮವಾಗಿದೆ.

ಇನ್ನೇಕ ತಡಾ ಸಮಯ ಮಾಡಿಕೊಂಡು ಈ ಕವಲೇ ದುರ್ಗಕ್ಕೆ ಭೇಟಿ ನೀಡಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿ ಕೊಳ್ತೀರಲ್ವಾ?

ಏನಂತೀರೀ?

ನಿಮ್ಮವನೇ ಉಮಾಸುತ

ಈ ಲೇಖನಕ್ಕೆ ಸುಂದರವಾದ ಚಿತ್ರಗಳನ್ನು ಒದಗಿಸಿದ ಆತ್ಮೀಯರಾದ ಶ್ರೀಯುತ ಜಯಸಿಂಹ ಅವರಿಗೆ ಹೃತ್ಪೂರ್ವಕ ವಂದನೆಗಳು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s