ಎಂಭತ್ತರ ದಶಕ ಹದಿಹರೆಯದ ವಯಸ್ಸು. ಆಗ ತಾನೆ ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಸೇರಿಕೊಂಡಿದ್ದೆ. ಕಾಲೇಜಿಗೆ ಶಾಲೆಯ ತರಹ ಒಂದು ಮಣಭಾರದ ಪುಸ್ತಕಗಳನ್ನು ಹೊತ್ತುಕೊಂಡು ಹೊಗಬೇಕಿರಲಿಲ್ಲ. ಕೇವಲ ನಾಲ್ಕಾರು ಪುಸ್ತಕಗಳನ್ನು ಒಂದು ಚೆಂದನೆಯ ಚೀಲದಲ್ಲಿ ಹಾಕಿಕೊಂಡು ಬಣ್ಣ ಬಣ್ಣದ ಪ್ಯಾಂಟ್ ಶರ್ಟು ಹಾಕಿಕೊಂಡು ಕಾಲೇಜಿಗೆ ಹೋಗುವುದೆಂದರೆ ಎನೋ ಒಂದು ತರಹ ಹಿತಾನುಭವ.
ನಾವು ಇದ್ದಿದ್ದು ಬಿಇಎಲ್ ಬಳಿ ಕಾಲೇಜ್ ಇದ್ದದ್ದು ಆರ್. ಟಿ ನಗರ. ನಮ್ಮ ಕಡೆಯಿಂದ ನೇರ ಬಸ್ ಸಂಪರ್ಕ ಇಲ್ಲದಿದ್ದ ಕಾರಣ ಕನಿಷ್ಠ ಪಕ್ಷ ಎರಡು ಮೂರು ಬಸ್ಸುಗಳನ್ನಾದರೂ ಬದಲಿಸಿಕೊಂಡು ಕಾಲೇಜಿಗೆ ಹೋಗಿ ಬಂದು ಮಾಡಬೇಕಿತ್ತು. ಹೋಗುವಾಗ ಬಿಇಎಲ್ ಬಸ್ಸಿನಲ್ಲಿ ಮುನಿರೆಡ್ಡಿ ಪಾಳ್ಯದ ಟಿವಿ ಟವರ್ ವರೆಗೂ ಹೋಗಿ ಅಲ್ಲಿಂದ ಮತ್ತೊಂದು ಬಸ್ಸನ್ನು ಬದಲಿಸಿದರೆ, ಬರುವಾಗ ಟಿವಿ ಟವರ್ ವರೆಗೂ ಒಂದು ಬಸ್ ಅಲ್ಲಿಂದ ಟಾಟಾ ಇನಿಸ್ಟಿಟ್ಯೂಟ್ ವರೆಗೂ ಮತ್ತೊಂದು ಬಸ್ಸು. ಅಲ್ಲಿಂದ ಅಗೊಂದು ಈಗೊಂದು ಜನಭರಿತವಾಗಿಯೇ ಬರುತ್ತಿದ್ದ 276 ಬಸ್ ಹತ್ತಬೇಕಿತ್ತು. ಇಲ್ಲದಿದ್ದಲ್ಲಿ ಬಿಇಎಲ್ ಸರ್ಕಲ್ ವರೆಗೂ ಬೇರೆ ಯಾವುದಾದರೊಂದು ಬಸ್ಸಿನಲ್ಲಿ ಬಂದು ಅಲ್ಲಿಂದ ಮನೆಗೆ ನಡೆದುಕೊಂಡು ಬರುವಷ್ಟರಲ್ಲಿ ಸಾಕು ಸಾಕಾಗಿ ಹೋಗುತ್ತಿತ್ತು.
ಹೇಳಿಕೊಳ್ಳುವುದಕ್ಕೆ ಕಾಲೇಜ್ ಹುಡುಗನಾಗಿದ್ದೂ ಆಗಿನ್ನೂ ನನ್ನ ಬೆಳವಣಿಗೆ ಹೈಸ್ಕೂಲ್ ಮಕ್ಕಳಂತೆಯೇ ಇದ್ದದ್ದರಿಂದ ಬಸ್ಸಿನೊಳಗೆ ಹಾಗೂ ಹೀಗೂ ನುಸುಳಿಕೊಂಡು ಕಂಬವೊಂದಕ್ಕೋ ಇಲ್ಲವೇ ಯಾವುದಾದರೊಂದು ಸೀಟಿಗೆ ಒರಗಿಕೊಂಡು ನಿಂತು ಬಿಡುತ್ತಿದ್ದೆ. ಹಾಗೂ ಹೀಗೂ ಎರಡು ವರ್ಷಗಳು ಕಳೆದು ಮೂರನೇ ವರ್ಷಕ್ಕೆ ಬರುವಷ್ಟರಲ್ಲಿ ಚಿಗುರು ಮೀಸೆ ಮೂಡಿತ್ತು. ದೊಡ್ಡವನಾಗಿ ಹೋದೆ ಎಂಬ ಹಮ್ಮು ಬಿಮ್ಮು ಬೆಳೆದಿತ್ತು. ಹಾಗಾಗಿ ಎಲ್ಲರ ಹುಡುಗರಂತೆ ನಾನೂ ಸಹಾ ಬಸ್ ಇಳಿಯಲು ಒಂದು ಸ್ಟಾಪ್ ಮುಂಚೆಯೇ ಹಿಂಬಾಗಿಲಿನ ಫುಟ್ ಬೋರ್ಡಿನಲ್ಲಿ ನಿಂತು ಫುಟ್ ಬೋರ್ಡ್ ಅನುಭವ ಪಡೆಯತೊಡಗಿದೆ.
ವಿಪರೀತ ಜನಜಂಗುಳಿಯ ಬಸ್ಸಿನಲ್ಲಿ ಉಸಿರಾಡುವುದೂ ಕಷ್ಟವಾಗುತ್ತಿದ್ದಾಗ ಫುಟ್ ಬೋರ್ಡಿನ ಮೇಲೆ ನಿಂತಾಗ ಬರುತ್ತಿದ್ದ ಚೆಂದನೆಯ ಗಾಳಿಯ ಹಿತಾನುಭವಕ್ಕೆ ಬಲು ಬೇಗನೇ ಒಗ್ಗಿಕೊಂಡೆ. ಹಾಗಾಗಿ ಬಸ್ಸಿನೊಳಗೆ ಸೀಟ್ ಖಾಲಿ ಇಲ್ಲಾ ಅಂದ್ರೇ ಫುಟ್ ಬೋರ್ಡ್ ಮೇಲೇ ನಿಂತುಕೊಂಡು ಹೋಗುವುದನ್ನೇ ರೂಢಿ ಮಾಡಿಕೊಂಡೆ. ಒಳ್ಳೆಯ ಕೆಲಸಕ್ಕೆ ಜೊತೆಗಿಲ್ಲದಿದ್ದರೂ ಕೆಟ್ಟ ಕೆಲಸಗಳಿಗೆ ಮಾತ್ರ ಗೆಳೆಯರು ಜೊತೆಗಿರ್ತಾರೆ ಎನ್ನುವುದನ್ನು ದೃಢೀಕರಿಸುವಂತೆ ನನ್ನ ಅಕ್ಕ ಪಕ್ಕದಲ್ಲಿ ಗೆಳೆಯರೂ ಸಾತ್ ಕೊಡುತ್ತಿದ್ದರಿಂದ ಫುಟ್ ಬೋರ್ಡ್ ಪ್ರಯಾಣ ಮಜವೆನಿಸುತ್ತಿತ್ತು.
ಫುಟ್ ಬೋರ್ಡ್ ಪ್ರಯಾಣ ಅಪಾಯಕರ ಮತ್ತು ದಂಡ ವಿಧಿಸಲಾಗುತ್ತದೆ ಎಂಬ ಫಲಕವನ್ನು ನೋಡಿದರೂ ಅದು ನಮಗೆಲ್ಲಾ ಎನ್ನುವ ಧೋರಣೆ ಅಂದಿನ ಕಾಲದಲ್ಲಿ ನಮ್ಮದಾಗಿತ್ತು. ನಮ್ಮಂತಹ ಪುಂಡರನ್ನು ಹಿಡಿದು ಶಿಕ್ಷಿಸಲೆಂದೇ ಪೋಲೀಸರೂ ಹರ ಸಾಹಸ ಪಡುತ್ತಿದ್ದದ್ದೂ ನಮಗೆ ಮೋಜನ್ನು ತರಿಸುತ್ತಿತ್ತು. ಒಂದಿಬ್ಬರು ಬುದ್ಧಿವಂತ ಪೋಲೀಸರು ಬಸ್ ಸ್ಟಾಂಡ್ ಬಳಿ ಮಫ್ತಿಯಲ್ಲಿದ್ದು ಕೈಯಲ್ಲಿ ಇಂಕ್ ಪೆನ್ನನ್ನು ಹಿಡಿದುಕೊಂಡು ಬಸ್ಸು ಇನ್ನೇನು ಹೋರಡುತ್ತದೆ ಎನ್ನುವಾಗ ಪುಟ್ ಬೋರ್ಡಿನಲ್ಲಿ ನಿಂತವರತ್ತ ಪೆನ್ನಿನಿಂದ ಇಂಕ್ ಹಾಕುತ್ತಿದ್ದದ್ದು ಫುಟ್ ಬೋರ್ಡಿನಲ್ಲಿ ಇದ್ದವರಿಗೆ ಗೊತ್ತೇ ಆಗುತ್ತಿರಲಿಲ್ಲ. ಮುಂದಿನ ಸ್ಟಾಪ್ ಬಂದಾಗ ಅಲ್ಲೂ ಮಫ್ತಿಯಲ್ಲಿ ಇರುತ್ತಿದ್ದ ಪೋಲೀಸರು ಶರ್ಟಿಗೆ ಇಂಕ್ ಇದ್ದವರನ್ನೆಲ್ಲಾ ಹಿಡಿದು ಫೈನ್ ಹಾಕುತ್ತಿದ್ದರು. ಪೋಲಿಸರು ಚಾಪೇ ಕೆಳಗೆ ತೂರಿದರೆ ಹುಡುಗರು ರಂಗೋಲಿ ಕೆಳಗೆ ತೂರುತ್ತಾರೆ ಎನ್ನುವ ಹಾಗೆ ಫುಟ್ ಬೋರ್ಡಿನ ಮೇಲೆ ನಿಂತು ಕೊಳ್ಳುತ್ತಿದ್ದ ಹುಡುಗರು ಶರ್ಟಿನ ಮೇಲೆ ಜಾಕೆಟ್ ಹಾಕಿಕೊಂಡು ಅಕಸ್ಮಾತ್ ಬಟ್ಟೆಗೆ ಇಂಕ್ ಬಿದ್ದಿದೆ ಅಂತಾ ಗೊತ್ತಾಗಿದ್ದೇ ತಡಾ ಜಾಕೆಟ್ ಬಿಚ್ಚಿ ಕುಳಿತಿದ್ದವರ ಕೈಗೆ ಕೊಟ್ಟು ಅಮಾಯಕರಂತೆ ನಿಂತು ಪೋಲಿಸರಿಗೆ ಚಳ್ಳೇ ಹಣ್ಣು ತಿನ್ನಿಸುತ್ತಿದ್ದದ್ದು ಇನ್ನೂ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಉಳಿದಿದೆ.
ಅದೊಂದು ಸಂಜೆ ಕಾಲೇಜ್ ಬಿಡುವುದು ತಡವಾಗಿ ಯಥಾ ಪ್ರಕಾರ ಟಿವಿ ಟವರ್ ವರೆಗೂ ಒಂದು ಬಸ್ಸಿನಲ್ಲಿ ಬಂದು ಅಲ್ಲಿಂದ ಮತ್ತೊಂದು ಬಸ್ ಹಿಡಿದು ಟಾಟಾ ಇನಿಸ್ಟಿಟ್ಯೂಟ್ ಸ್ಟಾಪಿನಲ್ಲಿ (ಅಗಿನ್ನೂ ಅಂಡರ್ ಪಾಸ್ ಆಗಿರಲಿಲ್ಲ) ಇಳಿದು ಬಿಹೆಇಎಲ್ ಮುಂದೆ 276 ಬಸ್ಸಿಗೆ ಸುಸ್ತಾಗಿ ಕಾದು ನಿಂತಿದ್ದೆ. ಅರ್ಧ ಮುಕ್ಕಾಲು ಗಂಟೆಗೆ ತುಂಬಿದ ಬಸುರಿಯಂತೆ ಭರಪೂರಿ ಜನರನ್ನು ಹೊತ್ತು ಬಂದ 276 ಬಸ್ ಅಲ್ಲಿ ನಿಲ್ಲಿಸದಿದ್ದರೂ, ತಿರುಗಿಸಿಕೊಳ್ಳಲು ಸ್ವಲ್ಪ ನಿಧಾನ ಮಾಡಿದ್ದೇ ತಡಾ ಛಕ್ ಅಂತಾ ಫುಟ್ ಬೋರ್ಡಿಗೆ ಕಾಲ್ ಹಾಕಿ ಮುಂದಿನ ಕಿಟಕಿಯನ್ನು ಹಿಡಿದು ಹಾಗೂ ಹೀಗೂ ಬಸ್ಸಿಗೆ ತಗುಲು ಹಾಕಿಕೊಂಡೆ.
ಆ ಬಸ್ಸಿನ ಡ್ರೈವರ್ ಅದ್ಯಾರ ಜೊತೆ ಜಗಳ ಮಾಡಿಕೊಂಡು ಬಂದಿದ್ದರೋ ಇಲ್ಲವೇ ಜನಜಂಗುಳಿ ನೋಡಿ ಬೇಸತ್ತಿದ್ದರೋ ಕಾಣೆ ಅಂದೇಕೋ ಯರ್ರಾ ಬಿರ್ರಿ ಅತ್ತಿಂದ್ದಿತ್ತ ಓಲಾಡಿಸುತ್ತಾ ಓಡಿಸುತ್ತಿದ್ದರು. ಬಸ್ಸಿನಲ್ಲಿ ನಾನು ಇದ್ದೆ ಅನ್ನುವುದಕ್ಕಿಂತಲೂ ಬಸ್ಸಿಗೆ ನಾನು ತಗಲಾಕಿಕೊಂಡಿದ್ದೇ ಇಲ್ಲವೇ ಅಂಟಿಕೊಂಡಿದ್ದೇ ಎನ್ನುವ ಪರಿಸ್ಥಿತಿಯಲ್ಲಿದ್ದ ನನಗೆ ಪ್ರತೀಬಾರಿಯೂ ಅತ್ತಿಂದ್ದಿತ ಬಸ್ ಅಲ್ಲಾಡುತ್ತಿದ್ದರೆ ನನ್ನ ಕೈ ಕೂಡಾ ಜಾರುತ್ತಿತ್ತು. ನಾನೂ ಸಹಾ ಗಟ್ಟಿಯಾಗಿ ಹಿಡಿದುಕೊಳ್ಳಲು ಹರ ಸಾಹಸ ಪಡುತ್ತಿದ್ದೆ. ಮುಂದೆ ಸದಾಶಿವ ನಗರದ ಪೋಲೀಸ್ ಸ್ಟೇಷನ್ ಸ್ಟಾಪಿನಲ್ಲಿಯೂ ಭಯಂಕರವಾಗಿ ತಿರುಗಿಸಿಕೊಂಡು ನಿಲ್ಲಿಸದೇ ಭರ್ ಎಂದು ಹೋದಾಗಲಂತೂ ಹೃದಯ ಬಾಯಿಗೆ ಬಂದಾಗಿತ್ತು. ಅಲ್ಲಿಂದ ಸೀದ ತನಗಾಗಿ ಯಾರೋ ಕಾಯುತ್ತಿದ್ದಾರೆ ಇನ್ನೈದು ನಿಮಿಷ ಅಲ್ಲಿಗೆ ಹೋಗದಿದ್ದರೆ ಇಡೀ ಪ್ರಪಂಚವೇ ಬಿದ್ದು ಹೋಗುತ್ತದೆ ಎನ್ನುವಂತೆ ಜರ್ ಭರ್ ಎನ್ನುವಂತೆ ಅತ್ತಿಂದಿತ್ತ ಬಸ್ ಓಲಾಡಿಸುತ್ತಿದ್ದರೆ ಕೈಗಳು ಜಾರುತ್ತಿದೆ. ಕಾಲುಗಳನ್ನು ಸಹಾ ನಡುಗುತ್ತಿದೆ. ನನ್ನ ಕತೆ ಇವತ್ತಿಗೆ ಮುಗಿದು ಹೋಯ್ತು. ಇನ್ನೊಂದು ನಿಮಿಷದಲ್ಲಿ ಕೈ ಜಾರಿ ಬಿದ್ದು ಹೊಗ್ತೀನಿ, ನಾಳೆ ಫುಟ್ ಬೋರ್ಡ್ ನಿಂದ ಜಾರಿಬಿದ್ದ ಯುವಕನ ಸಾವು ಎಂದು ಪೇಪರಿನ ಮೂರನೇ ಪೇಜಿನಲ್ಲಿ ಬಂದು ಬಿಡುತ್ತದೆ ಎಂದೆಲ್ಲಾ ಮನಸ್ಸು ಯೋಚಿಸ ತೊಡಗಿತು. ಹಾಗೂ ಹೀಗೂ ಅದಷ್ಟು ಕಷ್ಟ ಪಟ್ಟು ಗಟ್ಟಿಯಾಗಿ ಹಿಡಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಕಾಲನ್ನೂ ಅದಷ್ಟೂ ಒಳಗಡೆ ತೂರಿಸಲು ಪ್ರಯತ್ನಿಸುತ್ತಿದ್ದೇನೆ. ಒಂದು ಸೊಳ್ಳೆಯೂ ಹೋಗಲು ಜಾಗವಿರದ ಬಸ್ಸಿನಲ್ಲಿ ನನ್ನೆಲ್ಲಾ ಹರಸಾಹಸಗಳು ಫಲಿಸುತ್ತಲೇ ಇಲ್ಲಾ. ಅಷ್ಟರಲ್ಲಿ ರಪ್ ಎಂದು ಬಸ್ಸಿಗೆ ಬ್ರೇಕ್ ಹಾಕಿದ್ದು ಗೊತ್ತಾಯಿತು. ಇದ್ದಕ್ಕಿಂದ್ದಂತೆಯೇ ಬಸ್ ನಿಲ್ಲುತ್ತಿದ್ದಂತೆಯೇ ಫುಟ್ ಬೋರ್ಡಿನಲ್ಲಿದ್ದ ನಾನು ಹತ್ತಾರು ಹೆಚ್ಚೆಗಳಷ್ಟೂ ದೂರ ಹಾರಿ ಹೋಗಿ ತಟ್ಟಾಡಿಕೊಂಡು ಸಾವರಿಸಿಕೊಂಡು ಬೀಳದೆ ನಿಂತೆ.
ಅದು ಎಂ.ಎಸ್.ರಾಮಯ್ಯ ಬಸ್ ಸ್ಟಾಪ್ ಆಗಿದ್ದರಿಂದ ಸುಮಾರು ಜನರು ದಡಾ ದಡಾ ಅಂತ ಬಸ್ಸಿನಿಂದ ಇಳಿದಿದ್ದೇ ತಡಾ ನಾನೂ ಹಾಗೂ ಹೀಗೂ ಮಾಡಿ ಬಸ್ಸಿನೊಳಗೆ ನುಗ್ಗಿ ಸತ್ತೆನೋ ಬದುಕಿದೆನೋ ಎಂದು ಕಂಬವೊಂದನ್ನು ಒರಗಿಕೊಂಡು ನಿಟ್ಟುಸಿರು ಬಿಟ್ಟೆ. ಅದೇ ಕಡೇ ಮುಂದೆ ನಾನೆಂದೂ ಫುಟ್ ಬೋರ್ಡಿನಲ್ಲಿ ಪ್ರಯಾಣ ಮಾಡುವ ಸಾಹಸ ಮಾಡಲೇ ಇಲ್ಲ. ಸಾಹಸ ಮಾಡಲಿಲ್ಲ ಎನ್ನುವುದಕ್ಕಿಂತಲೂ ಬಸ್ಸಿನಲ್ಲಿ ಕಾಲೇಜಿಗೆ ಹೋಗುವುದನ್ನೇ ನಿಲ್ಲಿಸಿಯೇ ಬಟ್ಟೆ ಕಷ್ಟಾನೋ ಸುಖಾನೋ ಸೈಕಲ್ಲಿನಲ್ಲಿಯೇ ಕಾಲೇಜಿಗೆ ಕೆಲ ತಿಂಗಳು ಹೋಗಿಬಂದು ಡಿಪ್ಲಮೋ ಮುಗಿಸಿ ಬುಕ್ ಬೈಂಡಿಗ್, ಸ್ಕ್ರೀನ್ ಪಿಂಟ್ ಮಾಡಿ ಸಂಪಾದಿಸಿದ್ದ ಹಣದೊಂದಿಗೆ ನನ್ನ ಗುರುಗಳ ಹತ್ತಿರ ಸ್ವಲ್ಪ ಹಣವನ್ನು ಸಾಲ ಮಾಡಿ ಹೀರೋ ಪುಕ್ ಕೊಂಡು ಜರ್ ಎಂದು ಓಡಾಡತೊಡಗಿದೆ. ಇನ್ನೊಮ್ಮೆ ಯಾವಾಗಲಾದರೂ ಹೀರೋ ಪುಕ್ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಈಗ ಬಿಡಿ ಅಂದಿನ ಹಾಗೆ ಪುಟ್ ಬೋರ್ಡಿನ ಅನುಭವ ಆಗುವುದೇ ಇಲ್ಲ. ಏಕೆಂದರೆ ಎಲ್ಲಾ ಬಿಎಂಟಿಸಿ ಬಸ್ಸುಗಳಿಗೂ ಹೈಡ್ರಾಲಿಕ್ ಡೋರ್ಗಳನ್ನು ಹಾಕಿಸಿ ಬಿಟ್ಟಿರುವುದಲ್ಲದೇ ಪ್ರತೀ ಸ್ಟಾಪಿನಲ್ಲಿಯೂ ಪ್ರಯಾಣಿಕರು ಬಸ್ ಇಳಿದು ಹತ್ತಿದ ನಂತರ ಡೋರ್ ಹಾಕಿಕೊಂಡ ನಂತರವೇ ಬಸ್ ಪ್ರಯಾಣ ಮುಂದುವರೆಸುವ ಕಾರಣ ಪುಟ್ ಬೋರ್ಡ್ ನಿಂದಾ ಆಗುತ್ತಿದ್ದ ಆಪಘಾತಗಳೆಲ್ಲವೂ ಸಂಪೂರ್ಣವಾಗಿ ನಿಂತು ಹೋಗಿರುವುದು ಅಭಿನಂದನಾರ್ಹವಾಗಿದೆ. ಅದೂ ಅಲ್ಲದೇ ಈಗೆಲ್ಲಾ ಸಾಕಷ್ಟು ಬಸ್ಸುಗಳು ಇರುವುದರಿಂದ ಅಂದಿನ ಜನಜಂಗುಳಿಯೂ ಇಲ್ಲವಾಗಿದೆ ಮತ್ತು ಎಲ್ಲಕ್ಕಿಂತಲೂ ಹೆಚ್ಚಿನವರು ತಮ್ಮದೇ ಸ್ವಂತ ವಾಹನದಲ್ಲಿ ಓಡಾಡುವಷ್ಟರ ಮಟ್ಟಿಗೆ ಸ್ಥಿತಿವಂತರಾಗಿರುವ ಓಡಾಡುವಷ್ಟರ ಮಟ್ಟಿಗೆ ಸ್ಥಿತಿವಂತರಾಗಿರುವ ಕಾರಣ ಅಂದಿನ ರಸಾನುಭವ ಇಂದಿನವರಿಗೆ ಇಲ್ಲವಾಗಿದೆ. ಅದರೂ ಆಗೊಮ್ಮೇ ಈಗೊಮ್ಮೆ ಜನಜಂಗುಳಿ ಬಸ್ ನೋಡಿದಾಗ ನನ್ನ ಪುಟ್ ಬೋರ್ಡ್ ಪ್ರಯಾಣದ ನೆನಪಾಗಿ ಮನಸ್ಸಿನಲ್ಲಿಯೇ ಮಂಡಿಗೆ ತಿಂದಂತಹ ಹಿತಾನುಭವ ಆಗುತ್ತದೆ. ಖಂಡಿತವಾಗಿಯೂ ನಿಮಗೂ ಸಹಾ ಈ ರೀತಿಯ ಅನುಭವ ಆಗಿರುತ್ತದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಒಂದು ಸಿನೆಮಾ ನೋಡಿದ ಅನುಭವ ಆಯಿತು 🤩
LikeLike
ನನ್ನ ಶಾಲಾ ದಿನಗಳಲ್ಲಿ ಕಡಿಮೆ ಬಸ್ ಇದ್ದ ಕಾರಣ, ನಾನು ಸಹ ಕೆಲವಾರು ಸಲ ಪುಟ್ ಬೋರ್ಡ್ ಪ್ರಯಾಣ ಮಾಡಿದ್ದೇನೆ.
ಫ್ಲಾಷ್ ಬ್ಯಾಕ್ ನೋಡಿದ ಅನುಭವ ಆಯಿತು 😍
LikeLiked by 1 person