ಬೆಂಗಳೂರಿನಲ್ಲಿ ಮೊಟ್ಟ ಮೊದಲ ಆಟೋರಿಕ್ಷಾ

ಹಿಂದೆಲ್ಲಾ, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗುವುದಕ್ಕೆ ನಡಿಗೆಯೇ ಮೂಲವಾಗಿದ್ದು ನಂತರದ ದಿನಗಳಲ್ಲಿ ಎತ್ತಿನ ಗಾಡಿಗಳು ಜನರನ್ನು ಮತ್ತು ವಸ್ತುಗಳನ್ನು ಸಾಗಿಸಲು ಬಳಸುತ್ತಿದ್ದರು. ಇನ್ನು ಕೆಲವರು ಸೈಕಲ್ ಮುಖಾಂತರ ಒಂದಿಬ್ಬರು ಪ್ರಯಾಣಿಸುತ್ತಿದ್ದಾಗ ಒಂದಕ್ಕಿಂತಲು ಹೆಚ್ಚಿನ ಜನರನ್ನು ಆರಾಮದಾಯಕವಾಗಿ ಪ್ರಯಾಣಿಸುವ ಸಲುವಾಗಿ ಕುದುರೇ ಗಾಡಿಗಳನ್ನು ಬಳಸಲು ಅರಂಭಿಸಿದರು ಇವು ಜಟಕಾಗಾಡಿಗಳು, ಟಾಂಗ, ಜಟ್ಕಾ (ಉರ್ದು ಭಾಷೆಯಿಂದ ಬಂದಿರುವ ಪದ) ಎಂದೇ ನಾಡಿನಾದ್ಯಂತ ಪ್ರಖ್ಯಾತವಾಯಿತು.

cylle_rikshwa

ಎತ್ತಿನಗಾಡಿ ಮತ್ತು ಕುದುರೇ ಗಾಡಿಗಳನ್ನು ಸಂಭಾಳಿಸುವುದು ಬಹಳ ತ್ರಾಸದಾಯಕ ಮತ್ತು ಪ್ರಾಣಿಗಳಿಗೇಕೆ ತೊಂದರೆ ಕೊಡುವುದು ಎಂದು ನಿರ್ಧರಿಸಿ ಮೋಟಾರು ವಾಹನಗಳ ಆವಿಷ್ಕಾರವಾಗಿ ಬಸ್, ಲಾರಿ, ಕಾರುಗಳು ದ್ವಿಚಕ್ರವಾಹನಗಳು ಯೂರೋಪಿನಲ್ಲಿ ಜನಪ್ರಿಯವಾಗ ತೊಡಗಿದಂತೆ ಭಾರತಕ್ಕೂ ಆಮದಾಯಿತು. ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯಾ ಎನ್ನುವಂತೆ ಇವೆಲ್ಲವೂ ಸಿರಿವಂತರ ಪಾಲಾಗಿ ಬಡವರಿಗೆ ಮರೀಚಿಕೆಯೇ ಆಗಿತ್ತು. ಹಾಗಾಗಿ ಜನ ಸಾಮಾನ್ಯರು ಸೈಕಲ್, ಸೈಕಲ್ ರಿಕ್ಷಾ, ಜಟಕಾಗಾಡಿಗಳು ಮತ್ತು ಅಲ್ಲೊಂದು ಇಲ್ಲೊಂದು ಬರುತ್ತಿದ್ದ ಸಾರ್ವಜನಿಕ ಬಸ್ ಗಳನ್ನೇ ಅವಲಂಭಿಸಿದ್ದರು. ದುರಾದೃಷ್ಟವಷಾತ್ ಉಳಿದ ನಗರಗಳಿಗೆ ಹೋಲಿಸಿದಲ್ಲಿ ಬೆಂಗಳೂರಿನ ರಸ್ತೆಗಳು ಬಹಳಷ್ಟು ಉಬ್ಬು ತಗ್ಗುಗಳು ಇದ್ದದ್ದರಿಂದ ಬೆಂಗಳೂರಿನಲ್ಲಿ ಸೈಕಲ್ ರಿಕ್ಷಾ ಬಳಸುವುದು ಸರಿಯಾದ ಮಾರ್ಗವಾಗಿರದೇ ಜಟಕಾ ಗಾಡಿಯೇ ಪ್ರಮುಖವಾದ ಸಾರ್ವಜನಿಕ ಪ್ರಯಾಣಿಕರ ವಾಹನವಾಗಿತ್ತು.

jatka

1949 ರಲ್ಲಿ ಬೆಂಗಳೂರಿನಲ್ಲಿದ್ದ ಹಳೆಯ ಅಷ್ಟೂ ಪೇಟೆಗಳ ಪುರಸಭೆಗಳು ಮತ್ತು ಕಂಟೋನ್ಮೆಂಟ್ ಎಲ್ಲವೂ ವಿಲೀನಗೊಂಡು ಬೆಂಗಳೂರು ಮಹಾನಗರವಾಗಿ, 1950ರ ನವೆಂಬರ್‌ನಲ್ಲಿ ನಡೆದ ಕಾರ್ಪೋರೇಷನ್ ಚುನಾವಣೆ ನಡೆದು ಬೆಂಗಳೂರಿನ ಮೊತ್ತ ಮೊದಲ ಚುನಾಯಿತ ಮೇಯರ್ ಆಗಿ ಶ್ರೀ ಎನ್. ಕೇಶವ ಅಯ್ಯಂಗಾರ್ ಅವರು ಆಯ್ಕೆಯಾದರು. ಆಗ ಮೇಯರ್ ಅವರು ಭಾರತದ ಉಳಿದ ನಗರಗಳಲ್ಲಿದ್ದ ಯಾಂತ್ರಿಕೃತ ತ್ರಿಚಕ್ರ ರಿಕ್ಷಾಗಳನ್ನು (ಆಟೋ) ಪರಿಚಯಿಸುವ ಪ್ರಸ್ತಾಪವನ್ನು ಮುಂದಿಟ್ಟಾಗ ಅದುವರೆವಿಗೂ ನಗರದಾದ್ಯಾಂತ ಅತ್ಯಂತ ಕಡಿಮೆ ಶುಲ್ಕದ ಜನಪ್ರಿಯ ಪರ್ಯಾಯ ಸಾರಿಗೆ ವಿಧಾನವಾಗಿದ್ದ ಅನೇಕ ಜಟಕಾ ಮಾಲಿಕರು ಈ ಪ್ರಸ್ತಾಪಕ್ಕೆ ತೀವ್ರವಾದ ಆಕ್ಷೇಪದ ಜೊತೆಗೆ ವಿರೋಧ ಮತ್ತು ಪ್ರತಿಭಟನೆಯನ್ನೂ ನಡೆಸಿದರು.

ಆಗ ಜಟಕಾ ಒಕ್ಕೂಟಗಳು ಮತ್ತು ವಕೀಲರನ್ನು ಒಟ್ಟುಗೂಡಿಸಿ ಸಂಧಾನದ ಮಾತುಕತೆಗಳನ್ನು ನಡೆಸಿದ್ದಲ್ಲದೇ, ಈ ವಿಷಯದ ಕುರಿತು ತಜ್ಞರ ಸಹಕಾರದೊಂದಿಗೆ ಅಧ್ಯಯನವನ್ನೂ ನಡೆಸಿ, ಮಧ್ಯಮ ವರ್ಗದವರ ಅನುಕೂಲವನ್ನು ಮನದಲ್ಲಿಟ್ಟುಕೊಂಡು ಪರೀಕ್ಷಾರ್ಥವಾಗಿ ಕೆಲವೇ ಕೆಲವು ಯಾಂತ್ರಿಕೃತ ವಾಹನಗಳ ಪರವಾಗಿ ತೀರ್ಪು ನೀಡಿದ್ದಲ್ಲದೇ, ಇಡೀ ನಗರಾದ್ಯಂತ 10 ಆಟೋರಿಕ್ಷಾಗಳಿಗೆ ಪರವಾನಗಿ ನೀಡುವಂತೆ ಅಂದಿನ ಕಾರ್ಪೊರೇಷನ್ ಆಯುಕ್ತರಿಗೆ ಆದೇಶ ನೀಡಿದರು, ಮೇಯರ್ ಅವರೇ ಖುದ್ದಾಗಿ ಅಸ್ಥೆವಹಿಸಿ ಆದೇಶ ಹೊರಡಿಸಿದ ಕಾರಣ, ಬೆಂಗಳೂರು ನಗರದಲ್ಲಿ ಪ್ರಪ್ರಥಮವಾಗಿ 1950ರ ಡಿಸೆಂಬರ್‌ನಲ್ಲಿ ಮೊದಲ ತ್ರಿಚಕ್ರ ವಾಹನಗಳು ನಗರದ ರಸ್ತೆಗಳಿಗೆ ಇಳಿಯುವ ಮೂಲಕ ಇತಿಹಾಸ ನಿರ್ಮಾಣವಾಯಿತು.

auto

ಭಾರತದ ಅಟೋಮೊಬೈಲ್ಸ್ ರಾಜಧಾನಿ ಪೂನಾದಲ್ಲಿ ತಯಾರಿಸಲಾಗಿದ್ದ, ಸ್ಕೂಟರಿನ ಹಿಂಭಾಗಕ್ಕೆ ಇಬ್ಬರು ಪ್ರಯಾಣಿಕರು ಸುಖಃಕರವಾಗಿ ಕೂರುವಂತೆ ವಿನ್ಯಾಸಗೊಳಿಸಲಾಗಿದ್ದ ಹಸಿರು ಮತ್ತು ಹಳದಿ ಬಣ್ಣದ ತ್ರಿಚಕ್ರದ ಹೊಸ ಆಟೋರಿಕ್ಷಾಗಳನ್ನು ಬೆಂಗಳೂರಿಗರು ಬಹಳ ಉತ್ಸಾಹದಿಂದಲೇ ಸ್ವಾಗತಿಸಿದರು. ಅಂದಿನ ಕಾರ್ಪೊರೇಷನ್ ಕಟ್ಟಡದಲ್ಲಿ ಶ್ರೀಯುತ ಕೇಶವ ಅಯ್ಯಂಗಾರ್ ಅವರೇ ಸ್ವತಃ ಆಟೋವೊಂದನ್ನು ಚಾಲನೆ ಮಾಡುವ ಮೂಲಕ ಉದ್ಘಾಟಿಸಿದರು. ಆಟೋವಿನ ಮೊದಲ ಪ್ರಯಾಣದಲ್ಲಿ ಇಟಲಿಯ ಹೆಣ್ಣುಮಗಳನ್ನು ಮದುವೆಯಾಗಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರನ್ನು ಅಯ್ಯಂಗರರೇ ಸ್ವಯಂಪ್ರೇರಿತವಾಗಿ ಕೂರಿಸಿಕೊಂಡು ಬಳೇಪೇಟೆಯಲ್ಲಿದ್ದ ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವರಿಗೆ ಸತ್ಕರಿಸಿ ಕಳುಹಿಸುವ ಮೂಲಕ ವಿದ್ಯುಕ್ತವಾಗಿ ಆಟೋರಿಕ್ಷಾವನ್ನು ಬೆಂಗಳೂರಿನಲ್ಲಿ ಉಧ್ಘಾಟನೆ ಮಾಡಿದ್ದರು. ನಂತರದ ದಿನಗಳಲ್ಲಿ ಪುನಃ ಸುಮಾರು 40 ಆಟೋಗಳಿಗೆ ಅನುಮತಿ ನೀಡಲಾಯಿತು. 1980ರವರೆಗೂ ಆಟೋವಿನಲ್ಲಿ ಕೇವಲ ಇಬ್ಬರು ಪ್ರಯಾಣಿಕರನ್ನು ಮಾತ್ರವೇ ಕೂರಿಸಿಕೊಂಡು ಹೋಗಲು ಅನುಮತಿ ನೀಡಲಾಗಿತ್ತು.

rikshaw3

ದಿನೇ ದಿನೇ ಆಟೋರಿಕ್ಷಾಗಳು ಸಾರ್ವಜನಿಕ ಬಸ್ಸಿನ ಹೊರತಾಗಿ ಪ್ರಯಾಣಿಕರ ಜನಪ್ರಿಯ ಸಾರಿಗೆ ವ್ಯವಸ್ಥೆಯಾಗಿ ಮಾರ್ಪಾಟಾಯಿತು. ಬ್ಯಾಂಕುಗಳು ಮತ್ತು ಸಹಕಾರ ಸಂಘಗಳೂ ಕಡಿಮೆ ಬಡ್ಡಿಯ ದರದಲ್ಲಿ ಆಟೋ ಕೊಳ್ಳಲು ಸಾಲ ಕೊಡಲು ಆರಂಭಿಸಿದ ಕಾರಣ, ಕುದುರೇ ಗಾಡಿಗಳ ನಿರ್ವಹಣೆ ಬಹಳ ತ್ರಾಸವಾಗುತ್ತಿದ್ದದ್ದನ್ನು ಗಮನಿಸಿದ ಜಟಕಾ ಓಡಿಸುತ್ತಿದ್ದ ಬಹುತೇಕರು ಆಟೋಗಳನ್ನು ಕೊಂಡು ತಮ್ಮ ಜೀವನ ನಡೆಸಲಾರಂಭಿಸಿದರು. ನಂತರದ ದಿನಗಳಲ್ಲಿ ಆಟೋ ಲಕ್ಷಾಂತರ ಜನರಿಗೆ ಪರ್ಯಾಯ ಸಾರಿಗೆ ವ್ಯವಸ್ಥೆಯಾಗಿ ಸಾವಿರಾರು ಕುಟುಂಬಗಳ ಆಧಾರಸ್ಥಂಭವಾಗಿದ್ದು ಈಗ ಇತಿಹಾಸ.

ಕೆಲ ವರ್ಷಗಳ ನಂತರ ಆಟೊಗಳ ಬಣ್ಣ ಕ್ರಮೇಣ ಹಳದಿ ಬಣ್ಣದ ಪಟ್ಟಿಯೊಂದಿಗೆ ಕಪ್ಪು ಬಣ್ಣಕ್ಕೆ ಬದಲಾಯಿತು. ಅರಂಭದ ದಿನಗಳಲ್ಲಿ ಇಂದಿನಿಂತೆ ಮೀಟರ್ ಗಳ ವ್ಯವಸ್ಥೆ ಇಲ್ಲದಿದ್ದ ಕಾರಣ ಎಲ್ಲವೂ ಬಾಯಿಮಾತಿನ ವ್ಯವಹಾರಕ್ಕೆ ಸೀಮಿತವಾಗಿದ್ದು 1972ರ ಹೊತ್ತಿಗೆ ಯೆಂಕೆ ಡ್ಯಾಶ್‌ಬೋರ್ಡ್‌ನ ಕೆಳಗೆ ಮತ್ತು ಬ್ರೇಕ್ ಪೆಡಲ್‌ಗಿಂತ ಮೇಲೆ ಆಟೋರಿಕ್ಷಾ ಮೀಟರ್ ಗಳನ್ನು ಅಳವಡಿಸಲಾಯಿತು. ಇದನ್ನು ಕಾಲು ಮೀಟರ್ ಎಂದು ಆಗ ಕರೆಯಲಾಗುತ್ತಿತ್ತು. 1980ರ ದಶಕದಲ್ಲಿ, ಫ್ಳಾಗ್ ಮೀಟರ್ ಅನ್ನು ಪರಿಚಯಿಸಲಾದರೂ ಅದರಲ್ಲಿ ಸುಲಭವಾಗಿ ಮೋಸ ಮಾಡಲು ಅವಕಾಶ ಇದ್ದ ಕಾರಣ, ಕೆಲವು ವರ್ಷಗಳ ಹಿಂದೆ ಡಿಜಿಟಲ್ ಮೀಟರ್ ಗಳಿಗೆ ಬದಲಾಯಿಸಲಾಗಿದೆ.

rikshaw2

1990 ರ ದಶಕದವರೆಗೆ ಆಟೋಗಳನ್ನು ಓಡಿಸಲು ಪೆಟ್ರೋಲ್ ಹೊರತಾಗಿ ಪರ್ಯಾಯ ಇಂಧನವಾಗಿ ಸೀಮೆಎಣ್ಣೆಯನ್ನು ಮತ್ತು ಅಡುಗೆ ಅನಿಲಗಳೊಂದಿಗೆ ಪ್ರಯತ್ನಿಸಲಾಯಿತು. ಕೆಲ ಆಟೋಚಾಲಕರ ದುರಾಲೋಚನೆಯಿಂದ ಪೆಟ್ರೋಲ್ ಜೊತೆ ಸೀಮೇಎಣ್ಣೆ ಕಲಬೆರಕೆ ಮಾಡಿ ಪರಿಸರವನ್ನು ಹಾಳು ಮಾಡುತ್ತಿದ್ದದ್ದನ್ನು ಗಮನಿಸಿ, ಪೋಲೀಸರು ಅಂತಹ ಚಾಲಕರ ಮೇಲೆ ಕಠಿಣ ಕ್ರಮ ಕೈಗೊಂಡ ಪರಿಣಾಮ ಅಂತಹ ದುಷ್ಕೃತ್ಯಗಳು ಬಹುತೇಕ ಕಡಿಮೆಯಾಗಿದೆ. 2000 ರ ನಂತರ ಅಧಿಕೃತವಾಗಿ ಪೆಟ್ರೋಲ್ ಆಟೋಗಳೊಂದಿಗೆ, ಡೀಸೆಲ್, ಎಲ್‌ಪಿಜಿ ಮತ್ತು ಸಿಎನ್‌ಜಿ ಆಧಾರಿತ, ಸುಧಾರಿತ ಆಟೋಗಳು ರಸ್ತೆಗಳಲ್ಲಿ ಕಾಣಿಸಿಕೊಂಡಿದ್ದಲ್ಲದೇ, ಆಟೋವಿನ ಬಣ್ಣವೂ ಹಳದಿ ಮತ್ತು ಹಸಿರು ಬಣ್ಣಕ್ಕೆ ಬದಲಾಗಿದೆ. ಕರೆದೆಡೆಗೆ ಬರಲಾರರು, ಮೀಟರ್ ಮೇಲೆ ಹೆಚ್ವಿನ ಹಣ‌ ಕೇಳುತ್ತಾರೆ ಎಂಬ ಆರೋಪಗಳಿದ್ದರೂ, ಬೆಂಗಳೂರು ನಗರದಲ್ಲಿ ಇಂದಿಗೂ ಸುಮಾರು 2 ಲಕ್ಷಕ್ಕೂ ಅಧಿಕ ಆಟೋಗಳು ರಸ್ತೆಗಳಲ್ಲಿ ಓಡಾಡುತ್ತಿವೆ ಎನ್ನುವುದು ಗಮನಾರ್ಹವಾಗಿದೆ.

ಇತ್ತೀಚಿನ ದಿನಗಳಲ್ಲಿ ಓಲಾ ಊಬರ್ ಗಳೂ ಸಹಾ ಸುಖಃಕರ ಪರ್ಯಾಯ ಸಾರಿಗೆ ವ್ಯವಸ್ಥೆಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದರೂ, ಮಧ್ಯಮ ವರ್ಗದವರಿಗೆ ಇನ್ನೂ ಕೈಗೆಟುಕುವ ಬೆಲೆಯಲ್ಲಿರುವ ಕಾರಣ ಇಂದಿಗೂ ಸಹಾ ಜನಸಾಮಾನ್ಯರಿಗೆ ಆಟೋ ಬಗ್ಗೆಯೇ ಹೆಚ್ಚಿನ ಒಲವಿದೆ. ಅದೂ ಅಲ್ಲದೇ, ಅನೇಕ ಕನ್ನಡ ಚಿತ್ರಗಳ ವಿವಿಧ ನಾಯಕರುಗಳು ಆಟೋ ಚಾಲಕರ ಪಾತ್ರಗಳಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ ಕಾರಣ ಇಂದಿಗೂ ಆಯಾಯಾ ನಟರುಗಳ ಅಭಿಮಾನಿಗಳಿಗೆ ಆಟೋವಿನಲ್ಲಿ ಪ್ರಯಾಣ ಮಾಡುವುದು, ತಮ್ಮ ನೆಚ್ಚಿನ ನಾಯಕನ ಗಾಡಿಯಲ್ಲೇ ಹೋಗುವಂತೆ ಭಾಸವಾಗುವಂತಾಗುವ ಕಾರಣ ಇನ್ನೂ ಆಟೋಗಳ ಕ್ರೇಜ್ ಹಾಗೆಯೇ ಇದೆ ಎಂದರೂ ತಪ್ಪಾಗದು. ಇನ್ನೂ ಆಟೋ ಹಿಂದೆ ಬರೆದಿರುವಂತಹ ಬರಹಗಳಂತೂ ಭಗ್ನ ಪ್ರೇಮಿಗಳಿಗೆ ಅದು ತಮ್ಮದೇ ಅನುಭವದ ಪಾಠವೇನೋ, ಎಂಬಂತಿರುವ ಕಾರಣ ಆಟೋಗಳು ಇನ್ನೂ ಪ್ರಸ್ತುತವೆನಿಸಿದೆ ಎಂದರೂ ತಪ್ಪಾಗಲಾರದು. ಇಂದಿಗೂ ಕನ್ನಡ ರಾಜ್ಯೋತ್ಸವ ಮತ್ತು ರಾಮನವಮಿ ಹಬ್ಬವನ್ನು ಸಾರ್ವಜನಿಕವಾಗಿ ಅದ್ದೂರಿಯಾಗಿ ಆಟೋ ಚಾಲಕರುಗಳು ಆಚರಿಸುವ ಮೂಲಕ ಒಂದು ರೀತಿಯ ಸಾಂಸ್ಕೃತಿಕ ರಾಯಭಾರಿಗಳಾಗಿದ್ದಾರೆ ಎಂದರೂ ಅತಿಶಯೋಕ್ತಿಯೇನಲ್ಲ. Old is always gold ಎನ್ನುವಂತೆ 70 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಆಟೋ ಅಂದು,‌ಇಂದೂ ಮುಂದೆಯೂ ಒಂದು ರೀತಿಯಲ್ಲಿ ಬಡವರ ರಾಜರಥ ಎಂದರೂ ಅತಿಶಯವಿಲ್ಲ.

ಏನಂತೀರೀ?

ನಿಮ್ಮವನೇ ಉಮಾಸುತ

2 thoughts on “ಬೆಂಗಳೂರಿನಲ್ಲಿ ಮೊಟ್ಟ ಮೊದಲ ಆಟೋರಿಕ್ಷಾ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s