ದುರಂತ – 1 : ಗಂಡ ಹೆಂಡತಿ ಮತ್ತು ವಯಸ್ಸಿಗೆ ಬಂದಂತಹ ಇದ್ದ ಸಣ್ಣ ಮಧ್ಯಮ ವರ್ಗದ ಕುಟುಂಬ. ಅದು ಹೇಗೋ ಗಂಡ ಮತ್ತು ಹೆಂಡತಿ ಇಬ್ಬರಿಗೂ ಕೊರೋನಾ ಮಹಾಮಾರಿ ವಕ್ಕರಿಸಿಕೊಂಡು ಇಬ್ಬರು ಅಸ್ಲತ್ರೆಗೆ ದಾಖಲಾಗುತ್ತಾರೆ ಈ ವಿಷಯ ತಿಳಿದ ಮಗ ಪಟ್ಟಣದಿಂದ ಓಡೋಡಿ ಬರುತ್ತಾನೆ. ಆ ಔಷಧಿ ನಮ್ಮಲ್ಲಿ ಸ್ಟಾಕ್ ಇಲ್ಲಾ.. ಆಮ್ಕಜನಕದ ಕೊರತೆ ಇದೆ. ಇಂತಹವರ ಹತ್ತಿರ ಕೆಲವೇ ಸ್ಟಾಕ್ ಔಷಧಿ ಇದೆಯಂತೆ ಪ್ರಯತ್ನಿಸಿ ನೋಡಿ ನಂಬರ್ ಕೊಡ್ತಾರೆ. ಅವರಿಗೆ ಕರೆ ಮಾಡಿದರೆ ಒಂದಕ್ಕೆ ನಾಲ್ಕು ಪಟ್ಟು ಹಣ ಕೊಟ್ಟರೆ ಕೊಡ್ತೀವೀ ಎನ್ನುತ್ತಾರೆ. ಅಪ್ಪಾ ಅಮ್ಮನ ಜೀವಕ್ಕೆ ಬೆಲೆ ಕಟ್ಟುವುದೇ ಎಂದು ಒಂದು ಕ್ಷಣವೂ ಯೋಚಿಸದೇ, ಅವರು ಕೇಳಿದಷ್ಟು ಹಣ ನೀಡಿ ಔಷಧಿ ತಂದು ಕೊಡುತ್ತಾನೆ. ಯಾರದ್ದೋ ಕೈ ಕಾಲು ಹಿಡಿದು ನೀರಿನಂತೆ ಹಣ ಖರ್ಚು ಮಾಡಿ ಅಮ್ಲಜನಕದ ವ್ಯವಸ್ಥೆ ಮಾಡಿ ಉಸ್ಸಪ್ಪಾ ಎಂದು ಆಸ್ಲತ್ರೆಯ ಮೂಲೆಯೊಂದರಲ್ಲಿ ಕುಳಿತುಕೊಂಡಿರುತ್ತಾನೆ. ಆ ಮಧ್ಯರಾತ್ರಿ ತಂದೆಯ ಪ್ರಾಣ ಹೋಗುತ್ತದೆ. ತನ್ನೆಲ್ಲಾ ಶಿಫಾರಸ್ಸನ್ನು ಬಳಸಿ ನೀರಿನಂತೆ ಹಣವನ್ನು ಚೆಲ್ಲಿ ಅಪ್ಪನ ಹೆಣವನ್ನು ಪಡೆದು ಮಾರನೆಯ ದಿನ ಸದ್ದಿಲ್ಲದೇ ಅಮ್ಮನಿಗೂ ತಿಳಿಸದೇ ಸ್ಮಶಾನದಲ್ಲಿಯೂ ಸಾವಿರಾರು ಗಟ್ಟಲೆ ಹಣ ಖರ್ಚು ಮಾಡಿ ಅಪ್ಪನ ಅಂತಿಮ ಸಂಸ್ಕಾರ ಮುಗಿಸಿ, ಸಂಜೆಯ ಹೊತ್ತಿಗೆ ಮನೆಗೆ ಬರುವಷ್ಟರಲ್ಲಿಯೇ, ಅವರ ತಾಯಿಯವರಿಗೆ ಉಸಿರಾಟದ ತೊಂದರೆ ಹೆಚ್ಚಾಗಿದೆ ಎಂದು ಮತ್ತದೇ ಆಸ್ಪತ್ರೆಯಿಂದ ಕರೆ ಬಂದು ಒಂದು ಕ್ಷಣವೂ ವಿರಮಿಸದೇ ಆಸ್ಪತ್ರೆಗೆ ಓಡಿದರೆ, ಸಾರಿ.. ನಮ್ಮ ಪ್ರಯತ್ನವೆಲ್ಲಾ ನಾವು ಮಾಡಿದೆರೂ ನಿಮ್ಮ ತಾಯಿಯನ್ನು ಉಳಿಸಿಕೊಳ್ಳಲಾಗಲಿಲ್ಲ ಕ್ಷಮಿಸಿ ಎನ್ನುತ್ತಾರೆ ವೈದ್ಯರು. ಮತ್ತದೇ ಹಣ ಖರ್ಚು ಮಾಡಿ ಅಮ್ಮನ ಅಂತಿಮ ವಿದಿವಿಧಾನವನ್ನು ಮುಗಿಸಿದ್ದಾನೆ ಮಗ
ದುರಂತ – 2 : ಗಂಡ ಹೆಂಡತಿ ಇಬ್ಬರು ಗಂಡು ಮಕ್ಕಳು ಇದ್ದ ಕುಟುಂಬವದು ಹಿರಿಯ ಮಗ ಅಮೇರಿಕಾದಲ್ಲಿ ಕೈ ತುಂಬ ಸಂಬಳ ಪಡೆಯುತ್ತಿದ್ದರೆ, ಕಿರಿಯ ಮಗ ತಂದೆ ತಾಯಿರೊಡನೆ ಇಲ್ಲೇ ಇದ್ದಾನೆ. ಅದು ಹೇಗೋ ಮನೆಯಲ್ಲಿದ್ದ ಮೂವರಿಗೂ ಕೋವಿಡ್ ವಕ್ಕರಿಸಿ ಆಸ್ಪತ್ರೆ ಸೇರುತ್ತಾರೆ. ಗಂಡ ಹೆಂಡತಿ ಕೇವಲ ಎರಡು ದಿನಗಳ ಅಂತರದಲ್ಲಿ ಮರಣ ಹೊಂದಿದರೆ, ಹಿರಿಯ ಮಗ ಅಮೇರಿಕಾದಿಂದ ತಕ್ಷಣ ಬರಲಗುತ್ತಿಲ್ಲಾ. ಇನ್ನು ಕಿರಿಯ ಮಗ ಆಸ್ಪತ್ರೆಯಲ್ಲೇ ಜೀವನ್ಮರಣ ಹೋರಾಡುತ್ತಿದ್ದದ್ದರಿಂದ ವಂಶೋದ್ಧಾರಕರೆಂದು ಇಬ್ಬರು ಮಕ್ಕಳಿದ್ದರೂ ತಂದೆತಾಯಿಕರ ಅಂತ್ಯಕ್ರಿಯೆಯನ್ನು ಮಾಡಲಾಗದ ಅಸಹಾಯಕ ಪರಿಸ್ಥಿತಿಯಲ್ಲಿ ಸಂಭಂಧೀಕರೇ ಮಾಡಿದ ಉದಾಹರಣೆ ನಮ್ಮ ಕಣ್ಣಮುಂದಿದೆ,
ಈ ರೀತಿ ದುರಂತಗಳನ್ನು ಪಟ್ಟಿ ಮಾಡುತ್ತಾ ಹೋದರೆ ಪುಟಗಟ್ಟಲೇ ಬರೆಯಬಹುದೇನೋ? ಹಿಂದೆ ನಾವೆಲ್ಲಾ ಚಿಕ್ಕವರಿದ್ದಾಗ ನಮ್ಮ ಅಜ್ಜ ಅಜ್ಜಿಯರು ಕಥೆ ಹೇಳುತ್ತಿದ್ದಾಗ ನಾವೆಲ್ಲಾ ಬೇರೊಂದು ಊರಿನಲ್ಲಿ ವಾಸ ಮಾಡುತ್ತಿದ್ದೆವು. ಆಗ ಪ್ಲೇಗ್ ಎಂಬ ಮಹಾಮಾರಿ ಬಂದು ಇಡೀ ಊರಿಗೆ ಊರಿನ ಜನರನ್ನೇ ಬಲಿ ತೆಗೆದುಕೊಳ್ಳುತ್ತಿದ್ದಾಗ ಅಳುದುಳಿದ ಜನರು ಮನೆ, ಮಠ, ಹೊಲ ಗದ್ದೆ ಆಸ್ತಿ ಪಾಸ್ತಿಗಳನ್ನೆಲ್ಲಾ ಬಿಟ್ಟು ಜೀವ ಉಳಿಸಿಕೊಂಡರೆ ಸಾಕು ಎಂದು ಊರು ಬಿಟ್ಟು ಈ ಊರಿಗೆ ಬಂದು ಹೊಸಾ ಬದುಕನ್ನು ಕಟ್ಟಿಕೊಂಡೆವು ಎಂದು ಹೇಳುತ್ತಿದ್ದದ್ದನ್ನು ಕೇಳಿ ಅಚ್ಚರಿ ಪಡುತ್ತಿದ್ದೆವು.
ದುರಾದೃಷ್ಟವಷಾತ್, ನಾವೀಗ ನಮ್ಮ ಕಣ್ಣ ಮುಂದೆಯೇ, ದೀಪದ ಹುಳುಗಳು ದೀಪದ ಮುಂದೆ ಸಾಯುವಂತೆ ನಮ್ಮ ಆತ್ಮೀಯರು, ಬಂಧು ಮಿತ್ರರಗಳು ಪುತ ಪುತನೇ ಸಾಯುವುದನ್ನು ನೋಡುತ್ತಿದ್ದೇವೆ. ದುರಂತವೆಂದರೆ, ಈ ಕೊರೋನಾ ಮಹಾಮಾರಿ ಇಡೀ ಪ್ರಪಂಚಕ್ಕೇ ವಕ್ಕರಿಸಿರುವ ಕಾರಣ, ಅಂದಿನಂತೆ ನಾವು ಬೇರೆಲ್ಲೋ ಹೋಗಿ ಜೀವಿಸಲು ಸಾಧ್ಯವಾಗದೇ ಮನೆಯಲ್ಲಿಯೇ ಇರಬೇಕಾದಂತಹ ಅನಿವಾರ್ಯ ಪರಿಸ್ಥಿತಿಗೆ ಬಂದು ತಲುಪಿದ್ದೇವೆ.
ನಾವೆಲ್ಲಾ ಚಿಕ್ಕವರಿರುವಾಗ ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ | ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮಿದಮ್ ಶರೀರಮ್ ll ಎಂಬ ಶ್ಲೋಕವನ್ನು ಹೇಳಿಕೊಡುತ್ತಾ ನಾವು ನಮ್ಮ ಕೈಲಾದಷ್ಟು ಮತ್ತೊಬ್ಬರಿಗೆ, ಅಸಹಾಯಕರಿಗೆ ಸಹಾಯ ಮಾಡಬೇಕು ಎಂದು ಹೇಳಿಕೊಡುತ್ತಿದ್ದರು ಮತ್ತು ನಮ್ಮ ಪೋಷಕರು ನೆರೆಹೊರೆಯವರೊಂದಿಗೆ ಅದೇ ರೀತಿ ನಡೆದುಕೊಂಡು ನಮೆಗೆಲ್ಲಾ ಅದರ್ಶ ಪ್ರಾಯರಾಗಿದ್ದರು. ಆಗೆಲ್ಲಾ ಕೈಯ್ಯಲ್ಲಿ ಹಣವಿಲ್ಲದಿದ್ದರೂ ಯಾರೂ ಸಹಾ ಹಸಿವಿನಿಂದ ಸಾಯಬೇಕಿರಲಿಲ್ಲ. ಭವತೀ ಭಿಕ್ಷಾಂದೇಹಿ ಎಂದು ಕೇಳಿದರೆ ಯಾರಾದರೂ ಊಟವನ್ನು ಹಾಕುತ್ತಿದ್ದರು. ದೇವಾಲಯಗಳು, ಅನ್ನ ಛತ್ರಗಳು, ಅರವಟ್ಟಿಕೆಗಳು ಅವಶ್ಯವಿದ್ದವರಿಗೆ ಸದಾಕಾಲವು ತೆರದೇ ಇರುತ್ತಿತ್ತು.
ಇನ್ನು ಮನೆಗಳೆಲ್ಲವೂ ಅವಿಭಕ್ತ ಕುಟುಂಬವಾಗಿದ್ದು ಅಜ್ಜಿ, ತಾತ, ದೊಡ್ಡಪ್ಪ, ಚಿಕ್ಕಪ್ಪ, ಅತ್ತೆ ಮಾವ ಹೀಗೆ ತುಂಬು ಸಂಸಾರದಿಂದ ಎಲ್ಲರೂ ಒಗ್ಗಟ್ಟಾಗಿ ದುಡಿಯುತ್ತಿದ್ದರು ಸುಖಃದಿಂದ ಜೀವಿಸುತ್ತಿದ್ದರು. ಯಾರಿಗೂ ಸ್ವಾರ್ಥವಿರಲಿಲ್ಲ. ಅನಾವಶ್ಯಕ ಹಣ ಗಳಿಸಬೇಕೆಂಬ ದುರಾಸೆ ಇರಲಿಲ್ಲ. ತಮಗೆ ಬಂದದ್ದರಲ್ಲಿ ಸ್ವಲ್ಪವನ್ನು ದಾನ ಧರ್ಮಕಾರ್ಯಗಳಿಗೆ ಮೀಸಲಿಡುತ್ತಿದ್ದರು.
ದಿನಕಳಂದತೆ ಸ್ವಾರ್ಧ ಹೆಚ್ಚಾದಂತೆಲ್ಲಾ ದುರಾಸೆ ಹೆಚ್ಚಾಯಿತು. ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ನಾನು ನನ್ನದು ಎಂಬ ವ್ಯಾಮೋಹಕ್ಕೆ ಸಿಲುಕಿ ದಾನ ಧರ್ಮವೆಲ್ಲವೂ ಮರೆಯಾಗಿ ಹೋಯಿತು. ಹಣವಿದ್ದರೆ ಏನು ಬೇಕಾದರೂ ಕೊಂಡು ಕೊಳ್ಳಬಹುದು ಎಂಬ ಮನೋಭಾವ ಬೆಳದದ್ದೇ ತಡಾ, ಹಣಗಳಿಸಲು ಎಲ್ಲರೂ ಯಾವುದೇ ಕೆಲಸವನ್ನಾಗಲೀ ಮಾಡಲು ಸಿದ್ಧರಾದರು. ಇಲ್ಲಿ ದಯೆ ಧರ್ಮ ಎನ್ನುವುದೆಲ್ಲವೂ ಮಾಯವಾಗಿದ್ದೇ ತಡಾ ಮೋಸ ಕಪಟ ವಂಚನೆಗಳೆಲ್ಲವೂ ಸರ್ವೇ ಸಾಮಾನ್ಯವೆನಿಸಗೊಡಗಿದವು.
ಮನೆಯೇ ಇರಲಿ ಮಠವೇ ಇರಲಿ, ಇಲ್ಲವೇ ಊರು, ರಾಜ್ಯ ದೇಶವೇ ಇರಲಿ, ಎಲ್ಲ ಕಡೆಯಲ್ಲಿಯೂ ಅಧಿಕಾರದ ಅಮಲು ತಲೆಗೇರಿದ್ದೇ ತಡಾ ತನ್ನಲ್ಲಿಯೇ ಎಲ್ಲಾ ಅಧಿಕಾರ ಸೂತ್ರವಿರಬೇಕು. ತಾನು ಹೇಳಿದ ಹಾಗೆಯೇ ಉಳಿದೆಲ್ಲರೂ ಕೇಳಬೇಕು ಎಂಬ ಸರ್ವಾಧಿಕಾರಿ ಧೋರಣೆ ತಲೆಗೆ ಏರಿದ್ದರಿಂದಲೇ ಇಂದು ಇಡೀ ಪ್ರಪಂಚಾದ್ಯಂತ ದಯೆ ದಾಕ್ಷಿಣ್ಯಗಳೇ ಇಲ್ಲವಾಗಿ ಹೋಗಿ ಧರ್ಮ, ಭಾಷೆ, ಜಾತಿ, ಉಪಜಾತಿಯ ಆಧಾರಿತವಾಗಿ ಹೋರಾಟ ಮಾಡುತ್ತಿರುವ ಪರಿಣಾಮವಾಗಿಯೇ ಈ ರೀತಿಯ ಜೈವಿಕ ಯುದ್ಧಗಳು ಆರಂಭವಾಗಿವೆ ಎಂದರೂ ತಪ್ಪಾಗದು.
ಇಂತಹ ಸಂಧರ್ಭದಲ್ಲಿ ಇಡೀ ದೇಶವಾಸಿಗಳು ನಮ್ಮೆಲ್ಲಾ ಧರ್ಮ, ಜಾತಿ, ಭಾಷೆ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ಈ ಮಹಾಮಾರಿಯನ್ನು ಎದುರಿಸಬೇಕಿತ್ತು. ಅದೇಕೋ ಏನೂ? ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ ನನ್ನ ವಿರೋಧಿಯ ಎರಡೂ ಕಣ್ಣುಗಳು ಹೋಗಲಿ ಎನ್ನುವ ಮನೋಭಾವನೆ. ಆಡಳಿತ ಪಕ್ಷ ಹೇಳಿದ್ದಕ್ಕೆಲ್ಲಾ ವಿರೋಧ ಪಕ್ಷಗಳು ಅಸಹಕಾರ ವ್ಯಕ್ತ ಪಡಿಸುತ್ತಿರುವುದು ಛೇಧಕರವಾಗಿದೆ.
ಇಂತಹ ಸಮಯದಲ್ಲಿ ಅವಶ್ಯಕತೆ ಇರುವವರಿಗೆ ತನು ಮನ ಧನ ಸಹಾಯ ಮಾಡಬೇಕಿದ್ದವರೇ ಎಲ್ಲವನ್ನೂ ಬದಿಗಿಟ್ಟು ಹಣದಾಹಿಗಳಾಗಿ ಪರಿಹಾರ ಕಾರ್ಯಗಳಲ್ಲಿಯೂ ಹಣ ಮಾಡುವ ಹೀನ ಕೃತ್ಯಕ್ಕೆ ಕೈ ಹಾಕಿರುವುದು ನಿಜಕ್ಕೂ ಹೇಸಿಗೆ ತರಿಸುತ್ತಿದೆ. ಅದರಲ್ಲೂ ವೈದ್ಯಕೀಯ ಸಿಬ್ಬಂಧಿಗಳು ಮಾನವೀಯತೆಯನ್ನು ಮರೆತು ಸಾಮಾನ್ಯ ಚಿಕಿತ್ಸೆಗೂ ದುಪ್ಪಟ್ಟು ಹಣ ಕೇಳುತ್ತಿದ್ದರೆ, ಜೀವರಕ್ಷಕ ಔಷಧಿಗಳನ್ನು ಮಾರುವವರು, ಲಸಿಕೆಗಳನ್ನು ಕಳ್ಳತನ ಮಾಡಿಕೊಂಡು ಹೊರಗೆ ಅನಧಿಕೃತವಾಗಿ ಹಣಕ್ಕಾಗಿ ಮಾರಾಟ ಮಾಡುವುದು. ಔಷಧಿ ವ್ಯಾಪಾರಿಗಳು ಕಾಳಸಂತೆಯಲ್ಲಿ ನಾಲ್ಕು ಐದು ಪಟ್ಟು ಹಣ ಕೇಳುತ್ತಿರುವುದು, ಆಂಬ್ಯುಲೆನ್ಸ್ ಅವರು ಕಡೆಗೆ ಸ್ಮಶಾನದಲ್ಲಿ ಹೆಣ ಸುಡುವವರೂ ಧುಃಖಿತರನ್ನು ಸಿಕ್ಕಾ ಪಟ್ಟೆ ದೋಚುತ್ತಿರುವುದು ಅತ್ಯಂತ ಅಸಹನೀಯವಾಗಿದೆ.
ಇಂದಿನ ದಿನ ಪತ್ರಿಕೆಯಲ್ಲಿ ಓದಿದ ಎರಡು ವಿಭಿನ್ನ ಸಂಗತಿಗಳು ನಿಜಕ್ಕೂ ಬೇಸರವನ್ನು ತರಿಸುತ್ತಿದೆ. ತಾಯಿ ಮಗಳು ಇಬ್ಬರೂ ಕೋವಿಡ್ ಮಹಾಮಾರಿಗೆ ತುತ್ತಾಗಿ ಮಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾದರೇ ತಾಯಿಯ ಪರಿಸ್ಥಿತಿ ಘೋರವಾಗಿ ಆಸ್ಪತ್ರೆಯಲ್ಲಿ ಮರಣ ಹೊಂದುತ್ತಾರೆ. ಅಸ್ಪತ್ರೆಯ ಸಿಬ್ಬಂಧಿಯವರು ಆಕೆಯ ಸಂಬಂಧ ಪಟ್ಟ ಎಲ್ಲಾ ವಸ್ತುಗಳನ್ನು ಹಿಂದಿರುಗಿಸುವಾಗ ಯಾರೋ ಕಿಡಿಗೇಡಿಗಳು ಆಕೆಯ ಮೊಬೈಲ್ ಎಗರಿಸಿಬಿಟ್ಟಿರುವುದು ಆ ಪುಟ್ಟ ಮಗಳ ಅರಿವಿಗೆ ಬಂದು ದಯವಿಟ್ಟು ನಮ್ಮ ಅಮ್ಮನ ಪೋಟೋಗಳಿದ್ದ ಮೊಬೈಲ್ ಹಿಂದಿರುಗಿಸಲು ಅಂಗಲಾಚಿದ್ದು ನಿಜಕ್ಕೂ ಕರುಳ್ ಚುರುಕ್ ಎಂದಿತು.
ಅದೇ ಲೇಖನದಲ್ಲಿ ಮೈಸೂರಿನವರೊಬ್ಬರು ಕೋವಿಡ್ ನಿಂದಾಗಿ ಮೃತಪಟ್ಘಾಗ ಆವರ ಸ್ವಂತ ಮಗನೇ ತಂದೆಯವರ ಶವವನ್ನು ನೋಡಲು ಬಾರದೇ, ಅವರ ಅಂತಿಮ ಸಂಸ್ಕಾರವನ್ನು ಮಾಡಲು ಸಹಾ ನಿರಾಕರಿಸಿ, ಅದನ್ನು ಅನಾಥ ಶವವೆಂದು ಸರ್ಕಾರಿ ವತಿಯಿಂದಲೇ ವಿಧಿ ವಿಧಾನ ಮಾಡಲಿ ಎಂದು ಒತ್ತಾಯಿಸಿದ್ದಲ್ಲದೇ, ತಮ್ಮ ತಂದೆಯವರಿಗೆ ಸೇರಿದ್ದ ಮೊಬೈಲ್, ಹಣ ಮತ್ತು ದಾಖಲೆಗಳನ್ನು ಮಾತ್ರ ತಾನು ಇರುವ ಜಾಗಕ್ಕೇ ತಂದು ಕೊಡಬೇಕೆಂದು ಸ್ಥಳೀಯ ಕಾರ್ಪೊರೇಟರ್ ಅವರೊಂದಿಗೆ ನಡೆಸಿದ ವೀಡೀಯೋ ನೋಡಿದಾಗ ಇದೇ ಏನು ನಮ್ಮ ಸಂಸ್ಕಾರ? ಇದೇ ಏನು ನಮ್ಮ ಕರುಳ ಸಂಬಂಧ? ಇದಕ್ಕಗಿಯೇ ಏನು ನಮ್ಮ ವಂಶೋದ್ಧಾರಕ ಬೇಕು ಎಂದು ಹತ್ತು ಹಲವಾರು ದೇವರುಗಳನ್ನು ಬೇಡಿ ಹೊತ್ತು ಹೆತ್ತು ಸಲಹಿ ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ಸಾಕಿದರೇ? ಎಂದೆನಿಸಿತು.
ನಿಜ. ಜಾತಸ್ಯ ಮರಣಂ ಧೃವಂ. ಅಂದರೆ ಹುಟ್ಟಿದವರೆಲ್ಲಾ ಸಾಯಲೇ ಬೇಕು ಎಂಬುದೇ ಈ ಜಗದ ನಿಯಮ. ಅದರೆ ಇಂದೆಲ್ಲಾ ಆಗುತ್ತಿರುವುದನ್ನು ನೋಡಿದರೆ ಈಗ ಸಾಯುತ್ತಿರುವವರು ನಮ್ಮ ಅಪ್ಪಾ, ಅಮ್ಮ, ಬಂಧು ಬಾಂಧವರಲ್ಲಾ. ಈಗ ಸತ್ತು ಹೋಗಿರುವುದು ಮಾನವೀಯತೆ. ಈಗ ಹರಿದು ಹೋಗಿರುವುದು ಕರುಳ ಬಳ್ಳಿಯ ಸಂಬಂಧ. ಕೊರೋನದಂತಹ ನೂರಾರು ಮಹಾಮಾರಿಗಳನ್ನು ಬಂದರೂ ಎದುರಿಸಬಹುದು ಆದರೆ, ಸಂಸ್ಕಾರ ಮತ್ತು ಸಂಸ್ಕೃತಿಯೇ ಸತ್ತು ಹೋಗಿ ಮನುಷ್ಯತ್ವ ಮತ್ತು ಮಾನವೀಯತೆಯೇ ಇಲ್ಲವಾದರೆ ಖಂಡಿತವಾಗಿಯೂ ಮನುಷ್ಯ ಇದ್ದರೂ ಸತ್ತಂತೆಯೇ ಸರಿ.
ಇಂತಹ ಘನ ಘೋರಪರಿಸ್ಥಿತಿ ಮುಂದೊಮ್ಮೆ ಬರುತ್ತದೆ ಎಂದು ಯೋಚಿಸಿಯೋ ಏನೋ ಕವಿಗಳಾದ ಶ್ರೀ ಕೆ.ಎಸ್. ನರಸಿಂಹಸ್ವಾಮಿಯವರು ತಮ್ಮ ಮೈಸೂರು ಮಲ್ಲಿಗೆ ಕೃತಿಯಲ್ಲಿ
ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು
ಕಡಲು ನಿನ್ನದೆ, ಹಡಗು ನಿನ್ನದೆ, ಮುಳುಗದಿರಲಿ ಬದುಕು
ಬೆಟ್ಟವು ನಿನ್ನದೆ, ಬಯಲು ನಿನ್ನದೆ, ಹಬ್ಬಿ ನಗಲಿ ಪ್ರೀತಿ
ನೆರಳು, ಬಿಸಿಲು ಎಲ್ಲವೂ ನಿನ್ನವೆ ಇರಲಿ ಏಕರೀತಿ
ಎಂದು ಹೇಳಿದ್ದಾರೆ ಎಂದೆನಿಸುತ್ತಿದೆ. ದಯವಿಟ್ಟು ಮಾನವೀಯತೆ ಮತ್ತು ಮನುಷ್ಯತ್ವಕ್ಕೆ ಬೆಲೆ ಕೊಡುವುದನ್ನು ಇಂತಹ ಪರಿಸ್ಥಿತಿಯಲ್ಲಿ ರೂಢಿಸಿಕೊಳ್ಳೊಣ. ಜೀವ ಇದ್ದಲ್ಲಿ ಖಂಡಿತವಾಗಿಯೂ ಯಾರೂ ಸಹಾ ಯಾರ ಋಣವನ್ನು ಇಟ್ಟು ಕೊಳ್ಳಲು ಬಯಸುವುದಿಲ್ಲ.
ಏನಂತೀರೀ
ನಿಮ್ಮವನೇ ಉಮಾಸುತ