ಅವಲಕ್ಕಿ ಪರೋಟ

parota2-removebg-preview

ಸಾಧಾರಣವಾಗಿ ಎಲ್ಲರ ಮನೆಗಳಲ್ಲಿಯೂ ಅವಲಕ್ಕಿ ಒಗ್ಗರಣೆ, ಹುಳಿಯವಲಕ್ಕಿ, ಇಲ್ಲವೇ ಖಾರದ ಅವಲಕ್ಕಿ ಬೆಳಿಗ್ಗೆ ತಿಂಡಿಗೇ ಮಾಡಿದ್ರೇ, ಮಧ್ಯಾಹ್ನದ ಊಟಕ್ಕೋ ಇಲ್ಲವೇ ರಾತ್ರಿಯ ಊಟಕ್ಕೆ ಗೋಧಿ ಚಪಾತಿ ಮತ್ತು ಪರೋಟ ಇದ್ದೇ ಇರುತ್ತದೆ. ಹಾಗಾಗಿ ಇವತ್ತು ಅವಲಕ್ಕಿ ಮತ್ತು ಗೋಧಿ ಹಿಟ್ಟು ಎರಡೂ ಸೇರಿಸಿ ಗರಿಗರಿಯಾದ ವಿಭಿನ್ನ ರುಚಿಯ ಅವಲಕ್ಕಿ ಪರೋಟ ತಯಾರಿಸುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.

ಸುಮಾರು 4-5 ಜನರು ಸವಿಯಬಹುದಾದಷ್ಟು ಅವಲಕ್ಕಿ ಪರೋಟ ತಯಾರಿಸಲು ಬೇಕಾಗುವ ಸಾಮಗ್ರಿಗಳು

  • ಅವಲಕ್ಕಿ – 150ಗ್ರಾಂ
  • ಗೋಧಿಹಿಟ್ಟು – 200ಗ್ರಾಂ
  • ಜೀರಿಗೆ – 1/2 ಚಮಚ
  • ದನಿಯಾ ಪುಡಿ – 1/2 ಚಮಚ
  • ಗರಂ ಮಸಾಲ ಪುಡಿ – 1/4 ‍ಚಮಚ
  • ಅರಿಶಿನ – ಒಂದು ಚಿಟಿಕೆ
  • ಮಧ್ಯಮ ಗಾತ್ರದ ಬೇಯಿಸಿದ ಆಲೂಗೆಡ್ಡೆ – 2
  • ಹಸಿಮೆಣಸಿನ ಕಾಯಿ – 6 (ಖಾರಕ್ಕೆ ತಕ್ಕಷ್ಟು)
  • ಶುಂಠಿ – 1 ಇಂಚು
  • ಬೆಳ್ಳುಳ್ಳಿ – 6 ಎಸಳುಗಳು
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಕರಿಬೇವು – ಸ್ವಲ್ಪ
  • ಉಪ್ಪು- ರುಚಿಗೆ ತಕ್ಕಷ್ಟು

ಅವಲಕ್ಕಿ ಪರೋಟ ತಯಾರಿಸುವ ವಿಧಾನ

  • ಎರಡು ಆಲೂಗೆಡ್ಡೆಗಳನ್ನು ಚೆನ್ನಾಗಿ ತೊಳೆದು ಬೇಯಿಸಿ ಆರಿದ ನಂತರ ಸಿಪ್ಪೆ ತೆಗೆದಿಟ್ಟು ಕೊಳ್ಳಿ
  • ಜೀರಿಗೆ, ಹಸೀ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಮತ್ತು ಕರಿಬೇವು ಸೊಪ್ಪನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ
  • ಅವಲಕ್ಕಿಯನ್ನು ಸ್ವಲ್ಪ ಜರಡಿಯಾಡಿಸಿ ಶುದ್ಧಿ ಮಾಡಿಕೊಂಡು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ ಕೊಳ್ಳಿ
  • ಒಂದು ಅಗಲವಾದ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಗೋಧಿಹಿಟ್ಟು, ಬೇಯಿಸಿದ
    ಆಲೂಗೆಡ್ಡೆ, ರುಬ್ಬಿಕೊಂಡ ಮಿಶ್ರಣದ ಜೊತೆ, ಪುಡಿ ಮಾಡಿಟ್ಟುಕೊಂಡ ಅವಲಕ್ಕಿ, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ, ಗರಂ ಮಸಾಲ ಮತ್ತು ದನಿಯಾಪುಡಿಯನ್ನು ಸೇರಿಸಿ ಗಟ್ಟಿಯಾಗಿ ಚಪಾತಿ ಹದಕ್ಕೆ ಕಲಸಿಕೊಂಡು ಸುಮಾರು 1/2ಗಂಟೆಗಳ ಕಾಲ ಒಂದು ತಟ್ಟೆಯನ್ನು ಮುಚ್ಚಿಡಿ.
  • ಕಲೆಸಿದ ಹಿಟ್ಟುಗಳನ್ನು ಸಣ್ಣ ಸಣ್ಣದಾದ ಉಂಡೆಗಳನ್ನಾಗಿ ಮಾಡಿಕೊಂಡು ಪರೋಟದ ಗಾತ್ರ ಮತ್ತು ನಿಮಗೆ ಇಷ್ಟ ಬಂದ ಆಕಾರಕ್ಕೆ ತಕ್ಕಂತೆ ಲಟ್ಟಿಸಿ ಬಿಸಿಯಾದ ಕಾವಲಿಯ ಮೇಲೆ ಎರಡೂ ಬದಿಯಲ್ಲೂ ಬೇಯಿಸಿದರೆ ರುಚಿ ರುಚಿಯಾದ ಬಿಸಿ ಬಿಸಿಯಾದ ಅವಲಕ್ಕಿ ಪರೋಟ ಸವಿಯಲು ಸಿದ್ಧ.

parota

ಈ ಪರೋಟವನ್ನು ಯಾವುದೇ ಉಪ್ಪಿನ ಕಾಯಿ, ಚೆಟ್ನೀಪುಡಿ, ಗೊಜ್ಜು, ತುಪ್ಪಾ, ಬೆಣ್ಣೆ ಮತ್ತು ಮೊಸರಿನೊಂದಿಗೆ ಸವಿಯಲು ಮಜವಾಗಿರುತ್ತದೆ.

ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.

ಏನಂತೀರೀ?
ನಿಮ್ಮವನೇ ಉಮಾಸುತ

ಮನದಾಳದ ಮಾತು : ಗೋಧಿ ಹಿಟ್ಟಿನೊಂದಿಗೆ ಅವಲಕ್ಕಿ ಬೆರೆಸುವುದರಿಂದ ಪರೋಟ ವಿಭಿನ್ನವಾದ ರುಚಿಯಾಗಿ ಮತ್ತು ಗರಿ ಗರಿಯಾಗಿರುತ್ತದೆ. ಆಲೂಗಡ್ಡೆಯ ಬದಲು ಪುದೀನಾ, ಪಾಲಕ್ ಇಲ್ಲವೇ ಮೆಂತ್ಯೇ ಸೊಪ್ಪು ಅಥವಾ ಬೇಯಿಸಿದ ಹೂಕೋಸು (ಗೋಬಿ) ಸಹಾ ಬಳಸ ಬಹುದಾಗಿದೆ.

ಈ ಪಾಕಶಾಸ್ತ್ರದ ವಿಧಾನವನ್ನು ತಿಳಿಸಿಕೊಟ್ಟ ಶ್ರೀ ಆನಂದ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು

Leave a comment