ಆಗಷ್ಟೇ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿತ್ತು. ಕೆ.ಜಿ.ಎಫ್ ನಲ್ಲಿದ್ದ ಅಂದಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ರಾಜಾರಾವ್ ಅವರ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಸತವಾಗಿ ಏಳು ಗಂಡು ಮಕ್ಕಳ (ಅರು ಮಕ್ಕಳು ಹುಟ್ಟಿದ ಕೆಲವೇ ತಿಂಗಳುಗಳಲ್ಲಿ ಅಳಿದು ಹೋಗಿದ್ದವು) ನಂತರ ಅವರ ಮನೆಯಲ್ಲಿ ಮೊತ್ತ ಮೊದಲಬಾರಿಗೆ ಮಹಾಲಕ್ಷ್ಮಿಯ ಜನನವಾಗಿತ್ತು. ರಾಯರ ಮನೆ ದೇವರು ಮೇಲುಕೋಟೆ ಯೋಗಾನರಸಿಂಹನಾಗಿದ್ದ ಕಾರಣ, ಅವರಿಗೆ ತಮ್ಮ ಮಗಳ ಹೆಸರು ಲಕ್ಷ್ಮಿಯ ಹೆಸರಿಡಬೇಕು ಎಂದಿತ್ತು. ಆದರೆ ಅವರ ಮಡದಿ ವಿಶಾಲಾಕ್ಷಿ ಅವರ ತಾಯಿಯವರು ತಮ್ಮ ಮನೆ ದೇವರು ವೀರಭದ್ರಸ್ವಾಮಿಗೆ ಹೊತ್ತ ಹರಕೆಯನ್ನು ತೀರಿಸುವ ಸಲುವಾಗಿ ಮಗುವಿಗೆ ಉಮಾ (ಮುಂದೆ ದೈವೇಚ್ಚೆಯೇ ಬೇರೆಯಾಗಿತ್ತು) ಎಂದು ಹೆಸರಿಟ್ಟಿದ್ದರು. ಆರಂಭದಲ್ಲಿ ಇದರ ಬಗ್ಗೆ ಸ್ವಲ್ಪ ಕಸಿವಿಸಿಯಾದರೂ ನಂತರ ಆ ಮಗುವಿನ ಸೌಂದರ್ಯ, ಆಟ ಪಾಟಗಳಿಂದಾಗಿ ಎಲ್ಲವೂ ಮರೆಯಾಗಿತ್ತು. ಅಂತಿಮವಾಗಿ ಮನೆಯಲ್ಲಿ ಉಮಾಮಣಿ ಎಲ್ಲರ ಪ್ರೀತಿಯ ಮಣಿ ಆದರೆ ಶಾಲೆಯಲ್ಲಿ ಅಪ್ಪನ ಆಸೆಯಂತೆ ಉಮಾವತಿ ಎಂದಾಗಿತ್ತು.
ತಮ್ಮ ಮನೆಯ ರಾಜಕುಮಾರಿ ನಡೆದರೆ ಕಾಲು ನೋಯುತ್ತದೆ ಎಂಬಂತೆ ಕೈ ಗೊಂದು ಆಳು ಕಾಲಿಕೊಂದು ಆಳು ಇಟ್ಟು ಕೊಂಡು ಸಾಕಿದ್ದರು. ಅಂದಿನ ಕಾಲದಲ್ಲಿ ಕೆಜಿಎಫ್ ನಲ್ಲಿ ಕನ್ನಡ ಶಾಲೆಗಳು ಅವರ ಮನೆಯಿಂದ ದೂರವಿದ್ದ ಕಾರಣ ಮನೆಯ ಹತ್ತಿರವೇ ಇದ್ದ ತಮಿಳು ಮಾಧ್ಯಮದ ಶಾಲೆಗೆ ಸೇರಿಸಿದ್ದರು. ಹಾಗಾಗಿ ಮನೆಯಲ್ಲಿ ಕನ್ನಡ ಅಕ್ಕ ಪಕ್ಕ ಮತ್ತು ಶಾಲೆಯಲ್ಲಿ ತಮಿಳು, ಇಂಗ್ಲೀಶ್ ಇನ್ನು ಮನೆಯ ಕೆಲಸದವರೊಂದಿಗೆ ತೆಲುಗು ಭಾಷೆಯಲ್ಲಿ ವ್ಯವಹಿರಿಸುತ್ತಿದ್ದ ಕಾರಣ, ಉಮಾಳಿಗೆ ಈ ಎಲ್ಲಾ ಭಾಷೆಗಳೂ ಸರಾಗ ಮತ್ತು ಸುಲಲಿತವಾಗಿಹೋಯಿತು. ನೋಡ ನೋಡುತ್ತಿದ್ದಂತೆಯೇ ಬೆಳೆದು ದೊಡ್ಡವಳಾಗಿ ಮದುವೆಯ ಪ್ರೌಢಾವಸ್ಥೆಗೆ ಬಂದಾಗ, ಬಹುಶಃ ಉಮಾ ಹುಟ್ಟಿದಾಗ ಮುಂದೊಮ್ಮೆ ಆಕೆ ಶಿವ ಎಂಬುವನೊಂದಿಗೆ ಮದುವೆಯಾಗುತ್ತದೆ ಎಂದು ಕನಸು ಕಂಡಿದ್ದರೋ ಏನೋ? ಹಾಗೆಯೇ ತಮ್ಮ ಅಂತಸ್ತಿಗೆ ತಕ್ಕ ಹಾಗೆ ಬಿಇಎಲ್ ಕಾರ್ಖಾನೆಯಲ್ಲಿ ಕೆಲಸ ಶಿವಮೂರ್ತಿ ಎಂಬವರೊಂದಿಗೆ ಮದುವೆ ಆಗಿ ಬೆಂಗಳೂರಿಗೆ ಬರುತ್ತಾರೆ.
ಅರೇ ಇದೇನು ಉಮಾ, ಶಿವಮೂರ್ತಿಯೊಂದಿಗೆ ಮದುವೆ ಮಾಡಿಕೊಂಡ್ರೇ ನಮಗೇನು ಅಂತೀರಾ ?ಅಲ್ಲೇ ಇರೋದು ನೋಡಿ ಗಮ್ಮತ್ತು. ಅದೇ ಉಮಾ ಶಿವಮೂರ್ತಿಗಳ ಸುಮಧುರ ದಾಂಪತ್ಯದ ಫಲವಾಗಿಯೇ ಎಪ್ಪತ್ತರ ದಶಕದಲ್ಲಿ ನನ್ನ ಜನನವಾಗುತ್ತದೆ. ಮತ್ತದೇ ಸಂಪ್ರದಾಯದ ರೀತಿಯಲ್ಲಿಯೇ ಮನೆ ದೇವರ ಹೆಸರಾಗಿ ಶ್ರೀಕಂಠ ಎಂದು ನಾಮಕರಣ ಮಾಡಿದರೂ ತಾಂತ್ರಿಕವಾಗಿ ಉಮಾ ಆವರ ಮಗನಾಗಿರುವ ಕಾರಣ ನಾನು ಉಮಾಸುತನಾಗಿರುವೆ.
ನಾನು ಶಿಶುವಿಹಾರಕ್ಕೆ ಸೇರಿದಾಗ ನನಗೆ ಹೇಳಿಕೊಡುವ ಸಲುವಾಗಿಯೇ ನಮ್ಮ ಅಮ್ಮಾ ನನ್ನ ಜೊತೆಯಲ್ಲಿಯೇ ಕನ್ನಡ ಓದು ಬರೆಯುವುದನ್ನು ಕಲಿತಿದ್ದಲ್ಲದೇ ನನಗೆ ಅಕ್ಷರಗಳು ಸುಲಭವಾಗಿ ಪರಿಚಯವಾಗಲಿ ಎಂದು ಕೋಡು ಬಳೆಯಲ್ಲಿ ಅ, ಆ, ಇ, ಈ…. ಕಲಿಸಿಕೊಟ್ಟವರು. ಐದನೇ ವಯಸ್ಸಿಗೆ ಮನೆಗೆ ಬರುತ್ತಿದ್ದ ಪ್ರಜಾವಾಣಿಯ ದಪ್ಪದಪ್ಪ ಅಕ್ಷರಗಳ ಶೀರ್ಷಿಕೆ ಓದುವುದಕ್ಕೆ ಪ್ರೋತಾಹಿಸಿದ್ದಲ್ಲದೇ, ಒಂದನೇ ತರಗತಿಗೆ ಬರುವಷ್ಟರಲ್ಲಿಯೇ ಕೈಗೆ ವೃತ್ತ ಪತ್ರಿಕೆ, ಸುಧಾ, ಪ್ರಜಾಮತ, ಮಯೂರವನ್ನು ಕೊಟ್ಟು ಕನ್ನಡವನ್ನು ಸರಾಗವಾಗಿ ಓದುವುದನ್ನು ಕಲಿಸಿದ್ದಲ್ಲದೇ, ಕೈಗೆ ಏನೇ ಸಿಕ್ಕರು ಅದನ್ನು ಓದಿ ಮುಗಿಸುವ ಗೀಳನ್ನು ಹಚ್ಚಿಸಿದ್ದವರು ನಮ್ಮಮ್ಮ.
ಅದೊಮ್ಮೆ ನಾನು ಅಯ್ಯೋ ನೀವು ಬರೀ ಎಸ್.ಎಸ್.ಎಲ್.ಸಿ ಅಷ್ಟೇನಾ ಓದಿರೋದು? ಎಂದು ಕೇಳಿದ್ದನ್ನೇ ಛಲವಾಗಿ ತೆಗೆದುಕೊಂಡು ನನ್ನ ಪೆನ್ಸಿಲ್ಲನ್ನೇ ತೆಗೆದುಕೊಂಡು ಹೋಗಿ ನೆಲಮಂಗಲದಿಂದ ಬೆಂಗಳೂರಿಗೆ ಬಂದು ಮೈ ಇನಿಸ್ಟಿಟ್ಯೂಟಿನಲ್ಲಿ ಟಿಸಿಹೆಚ್ ಮಾಡಿದ್ದಂತಹ ಛಲಗಾರ್ತಿ ನಮ್ಮಮ್ಮ.
ಇನ್ನು ಆಕೆಯ ಭಾಷಾ ಪಾಂಡಿತ್ಯಕ್ಕೆ ಸರಿ ಸಾಟಿ ಯಾರೂ ಇಲ್ಲವೇನೋ? ಮನೆಯ ಮುಂದೆ ನಿಂಬೇಹಣ್ಣು ಮಾರಿಕೊಂಡು ಬರುವ ತಮಿಳಿಗನೊಂದಿಗೆ ಎಂದ ಊರುಪಾ? ಎಂದು ಮಾತಿಗಾರಂಭಿಸಿ, ಓ ಅದಾ ಪಾತ್ತೇ ನಂಬ ಆಳಾಚ್ಚೇ.. ಎಂದು ಅವನ ಊರಿನ ಶೈಲಿಯಲ್ಲೇ ಮಾತನಾಡಿ ಮೋಡಿ ಮಾಡಿ ತನಗೆ ಬೇಕಾದಷ್ಟು ಚೌಕಾಸಿ ಮಾಡಿ ನಿಂಬೇ ಹಣ್ಣುಗಳನ್ನು ಕೊಂಡು ಕೊಳ್ಳುತ್ತಿದ್ದ ಚಾಲಾಕಿ ನಮ್ಮಮ್ಮ.
ಇನ್ನು ತರಕಾರಿ ಮಾರಿಕೊಂಡು ತೆಲುಗರವರು ಬಂದರೆ, ಎಂಪಾ, ಏ ಊರು ಮೀದೀ? ಓ ಮನವಾಡಾ.. ಎಂದು ಅವನನ್ನು ಅಲ್ಲಿಗೇ ಕಟ್ಟಿ ಹಾಕಿದರೆ ಇನ್ನು ಕರ್ನಾಟಕದ ಯಾವುದೇ ಶೈಲಿಯಲ್ಲಿ ಮಾತಾನಾಡಿದರೂ ಅವರಿಗೇ ನೀರು ಕುಡಿಸುವಷ್ಟು ಸರಾಗವಾಗಿ ಮೋಡಿ ಮಾಡುತ್ತಿದ್ದವರು ನಮ್ಮಮ್ಮ. ಹೀಗೆ ಕಲ್ಲನ್ನೂ ಮಾತನಾಡಿಸಿ ಕರಗಿಸುವುದನ್ನು ಕರಗತ ಮಾಡಿಕೊಂಡಿದ್ದವರು ನಮ್ಮಮ್ಮ.
ಶಿಸ್ತಿಗೆ ಮತ್ತೊಂದು ಹೆಸರೇ ಉಮಾ ಎಂದರೂ ತಪ್ಪಾಗಲಾರದು. ಸುಳ್ಳು ಮತ್ತು ಮೋಸ ಮಾಡುವುದು ನಮ್ಮಮ್ಮನಿಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿಯೇ ನಮ್ಮನ್ನೆಲ್ಲಾ ಬಹಳ ಶಿಸ್ತಿನಿಂದಲೇ ಬೆಳೆಸಿದ್ದರು. ನಮ್ಮ ಇಡೀ ವಂಶವೇ ಕಾಫೀ ಕುಡಿಯುತ್ತಿದ್ದರೆ ನಮ್ಮ ಅಮ್ಮಾ ನಮಗಾರಿಗೂ ಕಾಫೀ ಅಭ್ಯಾಸ ಮಾಡಿಸಲೇ ಇಲ್ಲ, ಇನ್ನು ಪ್ರತೀ ದಿನ ನಾವು ಕರಾಗ್ರೇ ವಸತೇ ಲಕ್ಷ್ಮೀ… ಎಂದು ಹೇಳಿಕೊಂಡೇ ಹಾಸಿಗೆಯಿಂದ ಎದ್ದು ಸೀದಾ ಬಚ್ಚಲು ಮನೆಗೆ ಹೋಗಿ ಗಂಗೇಚ ಯಮುನೇ ಚೈವ… ಹೇಳಿಕೊಂಡು ಸ್ನಾನ ಮುಸಿಗಿಸಿಕೊಂಡು ಹಣೆಗೆ ವಿಭೂತಿ/ಕುಂಕುಮ ಇಟ್ಟುಕೊಂಡು ದೇವರಿಗೆ ಬೆನಕ ಬೆನಕ ಏಕದಂತ… ಹೇಳಿ ನಮಸ್ಕಾರ ಮಾಡಿದ ನಂತರವಷ್ಟೇ ನಮಗೆ ಹಾಲು ಮತ್ತು ತಿಂಡಿ. ಇನ್ನು ಪ್ರತೀ ದಿನ ಶಾಲೆಗೆ ಹೋಗುವ ಮುನ್ನಾ ಖಡ್ಡಾಯವಾಗಿ ಅಮ್ಮನಿಗೆ ಮತ್ತು ಮನೆಯಲ್ಲಿದ್ದ ಹಿರಿಯರಿಗೆ ನಮಸ್ಕಾರ ಮಾಡೊಕೊಂಡು ಹೋಗುವುದನ್ನು ರೂಢಿ ಮಾಡಿಸಿದ್ದರು ನಮ್ಮಮ್ಮ. ಊಟ ಮಾಡುವುದಕ್ಕೆ ಮುನ್ನಾ ಅನ್ನಪೂರ್ಣೇ, ಸದಾಪೂರ್ಣೇ… ಸಹನಾವವರು ಹೇಳಿಕೊಟ್ಟಿದ್ದರೆ ರಾತ್ರಿ ಮಲಗುವಾಗ ರಾಮಸ್ಕಂದ ಹನೂಮಂತಂ.. ಹೇಳಿಯೇ ನಿದ್ದೆ ಮಾಡುವುದು ನಮಗೆ ರೂಢಿ ಮಾಡಿಸಿದ್ದರು.
ಅಪ್ಪಾ ಅಮ್ಮಾ ಅಪರೂಪಕ್ಕೆ ಸಿನಿಮಾಗೆ ಹೋದರೆ, ನಮ್ಮನ್ನು ಮನೆಯಲ್ಲಿಯೇ ಬಿಟ್ಟು ಸಿನಿಮಾದಿಂದ ಬಂದ ನಂತರ ಸಿನಿಮಾ ಟಿಕೇಟ್ ಹಣವನ್ನು ನಮಗೆ ಕೊಟ್ಟು ಅದನ್ನು ಡಬ್ಬಿ ಗಡಿಗೆಯಲ್ಲಿ ಹಾಕಿಸಿ ತಿಂಗಳಿಗೊಮ್ಮೆ ಕೆನರಾ ಬ್ಯಾಂಕಿಗೆ ಹೋಗಿ ನಮ್ಮ ಹೆಸರಿನಲ್ಲಿ ಉಳಿತಾಯ ಮಾಡಿಸುವುದನ್ನು ಚಿಕ್ಕವಯಸ್ಸಿನಲ್ಲಿಯೇ ಕಲಿಸಿದ್ದರು. ಹಾಗೆ ಕಲೆ ಹಾಕಿದ್ದ ದುಡ್ಡಿನಲ್ಲಿಯೇ ಕಾಶೀಗೆ ಹೋಗಿದ್ದಾಗ ಅಂದಿನ ಕಾಲಕ್ಕೆ 300 ರೂಪಾಯಿಗಳಿಗೆ ಅಮ್ಮನಿಗೆ ಬನಾರಸ್ ಸಿಲ್ಕ್ ಸೀರೆ ಕೊಡಿಸಿದ್ದೆ.
ನಾನು ಸಣ್ಣವನಿದ್ದಾಗ ಪ್ರತೀ ದಿನ ಸಂಜೆ RSS ಶಾಖೆಗೆ ಹೋಗಿ ಬಂದು ಕೈ ಕಾಲು ಮುಖ ತೊಳೆದುಕೊಂಡು ವೀಭೂತಿ ಇಟ್ಟುಕೊಂಡು ದೇವರಿಗೆ ನಮಸ್ಕರಿಸಿ ಖಡ್ಡಾಯವಾಗಿ ಬಾಯಿಪಾಠ ಹೇಳಲೇ ಬೇಕಿತ್ತು. ಬಾಯಿ ಪಾಠದಲ್ಲಿ ಹಲವು ಬಗೆಯ ಶ್ಲೋಕಗಳು, ವಾರಗಳು, ತಿಂಗಳುಗಳು, ನಕ್ಷತ್ರಗಳು, ರಾಶಿ, 1-20 ರ ವರೆಗಿನ ಮಗ್ಗಿ ಹೀಗೆ ಎಲ್ಲವನ್ನು ಮನನ ಮಾಡಿಸಿ ನಂತರ ಆ ದಿನದ ಮನೆಪಾಠವನ್ನು ಮುಗಿಸಿದ ನಂತರವಷ್ಟೇ ನಮಗೆ ರಾತ್ರಿಯ ಊಟ.
ನೀರಿನಲ್ಲಿ ಮೀನು ಹೇಗೆ ಸರಾಗವಾಗಿ ಈಜುತ್ತದೆಯೋ ಹಾಗೆಯೇ ನಮ್ಮ ವಂಶದಲ್ಲಿ ಇಸ್ಪೀಟ್ ಆಡುವುದನ್ನು ಮಕ್ಕಳಿಗೆ ಕಲಿಸಬೇಕಿರಲಿಲ್ಲ ಅದು ಸುಲಭವಾಗಿಯೇ ಬರುತ್ತಿತ್ತು.. ಇದಕ್ಕೆ ಮೊದಲು ಕಡಿವಾಣ ಹಾಕಿದ್ದೇ ನಮ್ಮಮ್ಮ. ನಮಗಾರಿಗೂ ಇಂದಿಗೂ ಇಸ್ಪೀಟ್ ಆಟ ಆಡುವುದು ಇರಲಿ ಅದನ್ನು ಹಿಡಿಯುವುದನ್ನು ಕಲಿಸಲಿಲ್ಲ. ಅದಕ್ಕೆ ನಮ್ಮ ದೊಡ್ಡಮ್ಮ ಎಷ್ಟೋ ಬಾರಿ ಹೇಳುತ್ತಿದ್ದರು, ಉಮಾ ನಮಗೆ ಮೂರು ಗಂಡು ಮಕ್ಕಳಿರುವುದೂ ಒಂದೇ ನಿನಗೆ ಒಬ್ಬ ಮಗನಿರುವುದು ಒಂದೇ ಎಂದು ಹೊಗಳುತ್ತಿದ್ದರು.
ಇನ್ನು ನೀವೆಲ್ಲಾ ನನ್ನ enantheeri.com ಬ್ಲಾಗಿನಲ್ಲಿ ನಳಪಾಕ ಮತ್ತು Enantheeri YouTube ಛಾನೆಲ್ಲಿನಲ್ಲಿ ಅನ್ನಪೂರ್ಣ ಮಾಲಿಕೆಯನ್ನು ನೋಡಿ ಬಹಳ ಸಂತೋಷ ಪಟ್ಟಿದ್ದೀರಿ ಮತ್ತು ಹಾರೈಸಿದ್ದೀರಿ. ನಿಜ ಹೇಳಬೇಕೆಂದರೆ ಇದರ ಸಂಪೂರ್ಣ ಶ್ರೇಯ ನಮ್ಮಮ್ಮನಿಗೇ ಸೇರಬೇಕು. ನಾವೆಲ್ಲಾ ಚಿಕ್ಕವರಿದ್ದಾಗ ಮೂರು ದಿನಗಳು ಅಮ್ಮಾ ಮೂಲೆಯಲ್ಲೇ ಕುಳಿತೇ ನಮ್ಮ ಕೈಯಲ್ಲಿ ಅನ್ನಾ, ಸಾರು, ಹುಳಿ ಮಾಡಿಸಿ ತಕ್ಕ ಮಟ್ಟಿಗಿನ ಅಡುಗೆ ಕಲಿಸಿದ್ದರಿಂದಲೇ ಈಗ ಏನೋ ಅಲ್ಪ ಸ್ವಲ್ಪ ಅಡುಗೆ ಮಾಡುವುದಲ್ಲದೇ ಹತ್ತಾರು ಜನರಿಗೆ ಮಾಡಿ ತೋರಿಸುವಷ್ಟು ಕಲಿತಿದ್ದೇವೆ.
ಚುರುಕು ಎನ್ನುವುದಕ್ಕೆ ಅನ್ವರ್ಥವೆಂದರೆ ನಮ್ಮಮ್ಮ ಎಂದರೂ ಅತಿಶಯೋಕ್ತಿಯೇನಲ್ಲ. ಯಾವುದೇ ಕೆಲಸವಿರಲಿ ಥಟ್ ಅಂತಾ ಮಾಡಿ ಮುಗಿಸುತ್ತಿದ್ದರು. ಅದು ಹೂವು ಕಟ್ಟುವುದೇ ಇರಲೀ, ದೇವರ ಪೂಜೆಯೇ ಇರಲಿ, ಅತಿಥಿ ಸತ್ಕಾರವೇ ಇರಲಿ, ಅಡುಗೆಯೇ ಇರಲಿ ಎಲ್ಲದ್ದರಲ್ಲಿಯೂ ಅಚ್ಚುಕಟ್ಟು. ಯಾವುದೇ ರೀತಿಯ ಹೂಗಳನ್ನು ಕೊಟ್ಟರೂ ಚಕ ಚಕಾ ಅಂತಾ ಚೆಂದನೆಯ ಹೂವಿನ ಮಾಲೆ ಕಟ್ಟಿಕೊಡುವುದರಲ್ಲಿ ನಮ್ಮನಿಗೆ ನಮ್ಮನೇ ಸೈ. ಇನ್ನು ದೇವರ ಪೂಜೆಗೆ ಕುಳಿತರೆಂದರೆ ಮಧ್ಯಾಹ್ನ ಒಂದು ಗಂಟೆಯಾದರೂ ಅದರ ಪರಿವೇ ಇರುತ್ತಿರಲಿಲ್ಲ. ಮನೆಗೆ ಬಂದವರೊಡನೆ ಮಾತನಾಡಿಸುತ್ತಲೇ ಅವರಿಗೆ ಗೊತ್ತಾಗದಂತೆಯೇ ಇರುವ ಪರಿಕರಗಳಲ್ಲಿಯೇ ಅತ್ಯಂತ ರುಚಿಯಾದ ಅಡುಗೆಯನ್ನು ಮಾಡಿಹಾಕುತ್ತಿದ್ದ ಅನ್ನಪೂರ್ಣೆ ನಮ್ಮಮ್ಮ.
ದೇಶ ಸುತ್ತಿ ನೋಡು, ಕೋಶ ಓದಿ ನೋಡಿದರೆ ಜ್ಞಾನ ವೃದ್ಧಿಯಾಗುತ್ತದೆ ಎಂಬ ಕಾರಣದಿಂದ ಪ್ರತೀ ಬೇಸಿಗೆಯಲೂ ಹುಡುಕೀ ಹುಡುಕೀ ಒಂದಾಲ್ಲಾ ಒಂದು ಊರಿನಲ್ಲಿ ವೇದ ಶಿಬಿರಕ್ಕೋ, ಸಂಘದ ಶಿಬಿರಗಳಿಗೋ ಇಲ್ಲವೇ ಮತ್ತಾವುದೋ ಕೆಲ ಕಾರ್ಯಗಳಲ್ಲಿ ನನ್ನನ್ನು ಜೋಡಿಸಿ ನನ್ನ ಜ್ಞಾನ ದಾಹವನ್ನು ಹೆಚ್ಚಿಸುತ್ತಿದ್ದಾಕೆ ನಮ್ಮಮ್ಮ.
ಹಾಗಂತ ನಮ್ಮಮ್ಮ ತುಂಬಾ ಸಾಧು ಅಂತೇನೂ ಇಲ್ಲಾ. ಕೋಪ ಬಂದರೆ ರಣಚಂಡಿಯೇ. ಕೈಗೆ ಸಿಕ್ಕದ್ದರಲ್ಲಿಯೇ ಬಾರಿಸುತ್ತಿದ್ದಾಕೆ. ಕೋಪದಲ್ಲಿ ಮೊಗಚೇ ಕೈನಿಂದ ತಂಗಿಯ ತಲೆಗೆ ಮೊಟಕಿ ಮೂರು ಹೊಲಿಗೆಯನ್ನು ಹಾಕಿಸಿದ ಉದಾಹರಣೆಯೂ ಉಂಟು. ಆದರೆ ಆ ಕೋಪ ತಾಪವೆಲ್ಲಾ ಬೆಣ್ಣೆ ಕರಗುವ ಮುನ್ನವೇ ನೆರೆ ಬಂತು ಪೆನ್ನಾರಿಗೆ ಎನ್ನುವಂತೆ ಕ್ಷಣ ಮಾತ್ರದಲ್ಲಿಯೇ ಕರಗಿ ಹೋಗುತ್ತಿತ್ತು. ಕೆಲವೇ ನಿಮಿಷಗಳ ಹಿಂದೇ ಇವರೇ ಏನು ರೌದ್ರಾವತಾರದಲ್ಲಿದ್ದು ಎನ್ನುವಷ್ಟರ ಮಟ್ಟಿಗೆ ಆಚ್ಚರಿಯನ್ನು ಮೂಡಿಸುತ್ತಿದ್ದರು.
ಮದುವೆಯಾದ ಹೊಸತರಲ್ಲಿ ಎಲ್ಲ ಅಮ್ಮಂದಿರಂತೆ, ಮಗ ನನ್ನಿಂದ ದೂರವಾಗುತ್ತಿದ್ದಾನೇನೋ ಎನ್ನುವ ಭಾವನೆ ಮೂಡಿ ಆಗಾಗಾ.. ಹೋಗೋ ಹೋಗೋ ಹೆಂಡ್ತೀ ಗುಲಾಮಾ.. ಹೆಂಡ್ತೀ ಸೆರಗು ಹಿಡ್ದುಕೊಂಡು ಓಲಾಡು ಎಂದು ಮೂದಲಿಸಿದರೆ, ಇತ್ತ ಹೆಂಡ್ತಿ.. ನಿಮ್ಮಂತಹವರಿಗೇಕೆ ಮದುವೆ ಮಕ್ಕಳು? ಸುಮ್ಮನೇ ಅಮ್ಮನ ಸೆರಗು ಹಿಡಿದುಕೊಂಡು ಓಡಾಡಿ ಎಂದು ಬೈಯುತ್ತಿದ್ದರು. ಒಟ್ಟಿನಲ್ಲಿ ಮದುವೆಯಾದ ಗಂಡು ಮಕ್ಕಳದ್ದು ಎರಡು ಅಲುಗಿನ ಕತ್ತಿಯ ಮೇಲೆ ನಡೆಯ ಬೇಕಾದ ಅನಿವಾರ್ಯವಾಗಿತ್ತು. ಇದೇ ವಿಷಯಕ್ಕೆ ನಾನು ಮತ್ತು ನಮ್ಮಮ್ಮ ಶರಂಪರ ಕಿತ್ತಾಡಿ ಕೆಲವೇ ನಿಮಿಷಗಳಲ್ಲಿ ಏನೂ ಆಗದಂತೆ ಅಮ್ಮನೊಂದಿಗೆ ಸಹಜವಾಗಿ ಬೆರೆಯುತ್ತಿದ್ದದ್ದು ನಮ್ಮಾಕಿಗೆ ಬಹಳ ಆಶ್ಚರ್ಯವನ್ನುಂಟು ಮಾಡುತ್ತಿತ್ತು. ಕಡೆಗೆ, ಈ ಅಮ್ಮಾ ಮಗನ ಜಗಳದ ಮಧ್ಯೆ ಮೂಗು ಏಕೆ ತೂರಿಸುವುದು ಎಂದು ತಟಸ್ಥವಾಗಿ ಅಲಿಪ್ತ ನೀತಿ ತಳೆದು ಬಿಡುತ್ತಿದ್ದಳು.
ನಮ್ಮ ಮನೆಯ ಮುಂದಿರುವ ಪಾರ್ಕಿಗೆ ಅಪ್ಪಾ- ಅಮ್ಮಾ ಪ್ರತೀದಿನ ಸಂಜೆ ತಪ್ಪದೇ ಹೋಗ್ತಾ ಇದ್ರೂ, ಅಪ್ಪಾ ಹೋಗೋದು walking ಮಾಡೋದಕ್ಕೆ ಆದ್ರೇ ಅಮ್ಮಾ ಮಾತ್ರಾ ಪರಿಶುಧ್ಧವಾಗಿ ಮನಬಿಚ್ಚಿ talking ಮಾಡುವುದಕ್ಕಾಗಿಯೇ ಎಂದರೂ ತಪ್ಪಾಗದು. ಅಪ್ಪನ ಜೊತೆ ಎರಡು ಮೂರು ಸುತ್ತು ಹಾಕುತ್ತಿದ್ದಂತೆಯೇ, ರೀ.. ನನಗೆ ಇನ್ನು ಮುಂದೆ ನಡೆಯಲು ಸಾಥ್ಯವಿಲ್ಲಾ ಎಂದು ಅಲ್ಲಿಯೇ ಹಾಸಿರುವ ನಿಗಧಿತ ಕಲ್ಲು ಬೆಂಚಿನ ಮೇಲೆ ಕುಳಿತುಕೊಳ್ಳುತ್ತಾರೆ ಎಂದರೆ ಅವರ ಅಂದಿನ ದರ್ಬಾರ್ ಶುರು ಎಂದೇ ಆರ್ಥ. ರೀ ಸೀತಾ ಲಕ್ಷಮ್ಮಾ ನಿಮ್ಮ ಎರಡನೇ ಮಗನಿಗೆ ಯಾವುದಾದ್ರೂ ಹೆಣ್ಣು ಗೊತ್ತಾಯ್ತಾ? ಅವರ ಪಾಡಿಗೆ ಆವರು walk ಮಾಡುತ್ತಿದ್ದವರನ್ನು ಮಾತಾಡಿಸಿ, ನೋಡಿ ಮಹಾಲಕ್ಷ್ಮೀ ಲೇಔಟಿನಲ್ಲಿ ಒಬ್ಬಳು ಹುಡುಗಿ ಇದ್ದಾಳೆ. ಒಳ್ಳೆ ಮನೆತನ ಮನೆಗೆ ಬನ್ನಿ ಜಾತಕ ಕೊಡ್ತೀನಿ. ಯಾರಿಗೆ ಯಾರ ಮನೆಯ ಋಣಾ ಇರುತ್ತದೋ? ಯಾರಿಗೆ ಗೊತ್ತು? ಎಂದು ಅಲ್ಲೇ ಕುಳಿತಲ್ಲಿಯೇ ಹೆಣ್ಣುಗಂಡು ಜೋಡಿಸಿಯೇ ಬಿಡುತ್ತಿದ್ದರು. ಈ ರೀತಿ ಅಮ್ಮಾ ಮಾಡಿಸಿದ ಮದುವೆ ಲೆಖ್ಕವೇ ಇಲ್ಲ, ಇಂದಿಗೂ ಅದು ಹೇಗೋ ನಮ್ಮ ಮನೆಯ ಫೋನ್ ನಂಬರ್ ಪತ್ತೇ ಮಾಡೀ ಉಮಾ ಅವರು ಇದ್ದಾರಾ? ಎಂದು ಕೇಳಿದಾಗ.. ಆವರು ಇಲ್ಲಾ.. ನೀವು ಯಾರು ಮಾತಾಡ್ತಾ ಇರೋದು? ಏನು ಸಮಾಚಾರ ಎಂದು ಕೇಳಿದ್ರೇ.. ಹೌದಾ… ಯಾವಾಗ ಬರ್ತಾರೇ? ಸ್ವಲ್ಥ ಹೊತ್ತಿನ ನಂತರ ನಾನೇ ಕರೆ ಮಾಡ್ತೇನೆ ಅಂದಾಗ, ಅಮ್ಮಾ ಹೋಗಿ ಸುಮಾರು ವರ್ಷ ಆಯ್ತು ಎನ್ನುವಾಗ ಗಂಟಲು ಗಟ್ಟಿಯಾಗುತ್ತದೆ. ಅಯ್ಯೋ ಪಾಪವೇ.. ದಯವಿಟ್ಟು ಕ್ಷಮಿಸಿ ನನಗೆ ಗೊತ್ತಿರಲಿಲ್ಲ ನನ್ನ ದೊಡ್ಡ ಮಗಳಿಗೆ ಅವರೇ ಗಂಡು ಹುಡುಕಿ ಕೊಟ್ಟಿದ್ದರು ಈಗ ನಮ್ಮ ಚಿಕ್ಕ ಮಗನಿಗೋ ಇಲ್ಲವೇ ಮಗಳಿಗೋ ಸಂಬಂಧ ಹುಡುಕ್ತಾ ಇದ್ದೀವಿ ಅದಕ್ಕೆ ಉಮಾ ಅವರನ್ನೊಮ್ಮೆ ವಿಚಾರಿಸಿ ಬಿಡೋಣ ಎಂದು ಕರೆ ಮಾಡಿದ್ದೇ ಎಂದು ಇಂದಿಗೂ ಕರೆಗಳು ಬರುತ್ತಲೇ ಇರುತ್ತದೆ ಎಂದರೆ ಅಮ್ಮನ ಪ್ರಭಾವ ಎಷ್ಟಿತ್ತು ಎಂಬುದರ ಅರಿವಾಗುತ್ತದೆ.
ಕೆಲ ವರ್ಷಗಳ ಹಿಂದೆ ರಾಜ್ಯ ರಾಜಕಾರಣದಲ್ಲಿ ಬಳ್ಳಾರಿಯ ಗಣಿ ಬ್ರದರ್ಸ್ ಗಳದ್ದೇ ಕಾರುಬಾರು ನಡೆಯುತ್ತಿದ್ದಾಗ, ಅಮ್ಮನ ತವರು ಕೆಜಿಎಫ್ ಆಗಿದ್ದ ಕಾರಣ ನಾನು ತಮಾಷೆಗೆಂದು ಭಯಾನಕ ಗಣಿ ಸಿಸ್ಟರ್ಸ್ ಎಂದು ನಮ್ಮ ಅಮ್ಮ ಮತ್ತು ಚಿಕ್ಕಮ್ಮಂದಿರನ್ನು ರೇಗಿಸುತ್ತಿದ್ದೆ.
ಅಮ್ಮನ ಬಗ್ಗೆ ಇಷ್ಟೆಲ್ಲಾ ಯಾಕೆ ಹೇಳ್ತಾ ಇದ್ದೀನಂದ್ರೇ, ಇವತ್ತು ವೈಶಾಖ ಬಹುಳ ತೃತಿಯಾ. 12 ವರ್ಷಗಳ ಹಿಂದೆ ಅಕಾಲಿಕವಾಗಿ ಅಮ್ಮಾ ನಮ್ಮನ್ನೆಲ್ಲಾ ಅಗಲಿದ ದಿನವಿದು. ಹಾಗಾಗಿ ನಮ್ಮನನ್ನು ಪರಿಚಯಿಸ ಬೇಕೆನಿಸಿತು.
ಕೊರೋನಾ ಮಾಹಾಮಾರಿಯಿಂದಾಗಿ ಕಳೆದೆರಡು ವರ್ಷ ಅಮ್ಮನ ಶ್ರಾಧ್ದವನ್ನು ಶಾಸ್ತ್ರೋಕ್ತವಾಗಿ ಮಾಡಲು ಸಾಧ್ಯವಾಗದೇ ಹೋಗಿದ್ದದ್ದಕ್ಕಾಗಿ ಬೇಸರವಿದೆ. ಶ್ರದ್ಧೆಯಿಂದ ಮಾಡುವುದೇ ಶ್ರಾಧ್ಧ ಎನ್ನುವಂತೆ, ಎರಡೂ ಬಾರಿಯೂ ಮನೆಯ ಹತ್ತಿರದ ಪುರೋಹಿತರನ್ನು ಕರೆಸಿ ಶ್ರದ್ಧಾ ಭಕ್ತಿಗಳಿಂದ ಅಮ್ಮಾ ಅಜ್ಜಿ ಮತ್ತು ಮುತ್ತಜ್ಜಿಯರಿಗೆ ತಿಲತರ್ಪಣವನ್ನು ನೀಡಿ ಅರ್ಚಕರಿಗೆ ಯಥಾ ಶಕ್ತಿ ಸ್ವಯಂಪಾಕವನ್ನು ಕೊಟ್ಟು ಮಗಳಿಗಿಂತ ಮುತ್ತೈದೆ ಇಲ್ಲಾ, ಅಳಿಯನಿಗಿಂತ ಬ್ರಾಹ್ಮಣನಿಲ್ಲ ಎನ್ನುವಂತೆ ಮನೆಯ ಹೆಣ್ಣುಮಕ್ಕಳು ಮತ್ತು ಅವರ ಕುಟುಂಬವನ್ನು ಕರೆಸಿ ಯಥಾ ಶಕ್ತಿ ಸತ್ಕರಿಸಿ ಅವರಿಗೇ ಮುತ್ತೈದೆ ಬಾಗಿಣವನ್ನು ಕೊಟ್ಟು ಮನಸ್ಸನ್ನು ಹಗುರ ಮಾಡಿಕೊಂಡಿದ್ದೆ. ಎಲ್ಲಾ ಅಮ್ಮಂದಿರಿಗೂ ತಮ್ಮ ಗಂಡು ಮಕ್ಕಳು ಮನೆಯ ಹೆಣ್ಣುಮಕ್ಕಳನ್ನು ಕರೆದು ಸತ್ಕರಿಸಿಬಿಟ್ಟರೆ ಖಂಡಿತವಾಗಿಯೂ ಎಲ್ಲಿದ್ದರೂ ಅಲ್ಲಿಂದಲೇ ನಮ್ಮನ್ನೆಲ್ಲಾ ಹಾರೈಸುತ್ತಾರೆ ಎನ್ನುವುದೇ ನನ್ನ ಭಾವನೆ. ಈ ಬಾರಿ ಕೊರೋನಾ ಹಾವಳಿ ಅಷ್ಟಾಗಿ ಇಲ್ಲದಿರುವ ಕಾರಣ ಶಾಸ್ತ್ರೋಕವಾಗಿ ಶ್ರಾದ್ಧ ಮಾಡುವ ಮೂಲಕ ಅಮ್ಮನಿಗೆ ಸದ್ಗತಿ ಕೊಡುವಂತೆ ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದೇನೆ.
ಇಂದಿಗೂ ನಾವು ಎಷ್ಟೇ ಆಸ್ತೆ ವಹಿಸಿ ಒತ್ತು ಶಾವಿಗೆ, ತಂಬುಳಿ, ಹುಣಸೇ ಗೊಚ್ಚು, ಬಜ್ಜಿ ಬೋಂಡ, ಹುಗ್ಗಿ, ಬೆಲ್ಲದನ್ನ ಮಾಡಿದರೂ ತಿನ್ನುವಾಗ ಛೇ.. ನಮ್ಮಮ್ಮ ಮಾಡುತ್ತಿದ್ದ ರುಚಿ ಬರಲಿಲ್ಲವಲ್ಲಾ ಎಂದು ಅಮ್ಮನ ನೆನಸಿಕೊಂಡೇ ತಿನ್ನುತ್ತೇವೆ. ಇಂಗು ತೆಂಗು ಕೊಟ್ಟರೆ ಮಂಗವೂ ಅಡುಗೆ ಮಾಡುತ್ತದೆ ಎನ್ನುವುದು ಗಾದೆ ಮಾತಾದರೂ, ಎಲ್ಲರಂತೆ ಅಮ್ಮ, ಕಾಯಿ ತುರಿಯನ್ನು ಸಾರಿಗೆ ಹಾಕದೇ, ಕಾಯಿಯನ್ನು ಚೆನ್ನಾಗಿ ರುಬ್ಬಿ ಅದರ ಹಾಲು ತೆಗೆದು ಹಾಕಿ ಹದವಾಗಿ ಇಂಗಿನ ಒಗ್ಗರಣೆ ಹಾಕಿ ಅಮ್ಮಾ ಮಾಡುತ್ತಿದ್ದ ಸಾರಿನ ರುಚಿ ವರ್ಣಿಸುವುದಕ್ಕಿಂತಲೂ ಅದನ್ನು ಸವಿದಿದ್ದವರಿಗೇ ಗೊತ್ತು. ಇನ್ನು ರುಬ್ಬಿದ ಕಾಯಿಯ ಚರಟವನ್ನು ಹಾಗೇ ಬೀಸಾಕದೇ ಯಾವುದಾದರೂ ತರಕಾರಿಯ ಪಲ್ಯ ಮಾಡಿ ಅದಕ್ಕೆ ಆ ಕಾಯಿ ಚರಟವನ್ನು ಹಾಕಿ ಕಸದಿಂದಲೂ ರಸವನ್ನು ತೆಗೆಯುತ್ತಿದ್ದ ಪುಣ್ಯಾತ್ಗಿತ್ತಿ. ಪುಣ್ಯಕ್ಕೆ ಅಮ್ಮನ ಜೊತೆಯಲ್ಲೇ ಪಳಗಿದ್ದ ನಮ್ಮಾಕೆಯೂ ಸಹಾ ಅದೇ ರೀತಿಯ ಸಾರನ್ನು ಮಾಡುವುದನ್ನು ಕಲಿತು ನಮ್ಮಮ್ಮನಿಂದಲೇ ನನಗಿಂತಲೂ ಚೆನ್ನಾಗಿ ಸಾರು ಮಾಡುತ್ತೀಯೇ, ಎಂಚು ಭೇಷ್ ಪಡೆದಿರುವ ಕಾರಣ, ಇನ್ನೂ ಸಹಾ ಅಮ್ಮನ ಸಾರಿನ ರುಚಿಯನ್ನು ಆಗಾಗ ಮನೆಯಲ್ಲಿ ಸವಿಯುತ್ತಿರುತ್ತೇವೆ.
ಅಮ್ಮನ ನೆನಪಿಸುವ ಅದೆಷ್ಟೋ ಕೆಲಸಗಳನ್ನು ನಾನು ಇಂದಿಗೂ ಮಾಡುವುದೇ ಇಲ್ಲ. ಅದಕ್ಕೆ ಉದಾಹರಣೆ ಎಂದರೆ, ಇಂದಿಗೂ ನಾನು ಯಶವಂತಪುರ ಸರ್ಕಲ್ ಕಡೆ ಹೋಗುವುದನ್ನು ತಪ್ಪಿಸುತ್ತೇನೆ. ಯಶವಂತಪುರ ಮಾರ್ಕೆಟ್ ಕಡೆ ಹೋದಾಗಲೆಲ್ಲಾ ಒಂದು ಕ್ಷಣ ನಿಲ್ಲಿಸಿ ಓಡೋಡಿ ಹೋಗಿ ಅಮ್ಮನಿಗಾಗಿ ಚಿಗುರು ವಿಳ್ಳೇದೆಲೆ ತರುತ್ತಿದ್ದದ್ದು ನೆನಪಿಗೆ ಬಂದು ಬಿಡುತ್ತದೆ. ಇಂದಿಗೂ ಬೀದಿಯಲ್ಲಿ ಬಿಡಿ ಹೂ ಮಾರಿಕೊಂಡು ಹೋಗುವುದನ್ನು ನೋಡಿದಾಗಲೆಲ್ಲಾ ಗೊತ್ತಿಲ್ಲದೇ ಕಣ್ಣಂಚಿನಲ್ಲಿ ನೀರೂರುತ್ತದೆ. ಅದರೆ ಭಿಕ್ಶುಕರನ್ನು ಕಂಡರೆ, ಇಲ್ಲವೇ ಸುಭ್ರಹ್ಮಣ್ಯನ ಕಾವಡಿ ಹೊತ್ತುಕೊಂಡು ಹೋಗುವವರನ್ನು ಎಲ್ಲಿಯೇ ನೋಡಿದರೂ, ಎಂತಹ ತುರ್ತು ಕೆಲಸದಲ್ಲಿ ಮಗ್ನನಾಗಿದ್ದರೂ ಒಂದು ಕ್ಷಣ ಬಿಡುವು ಮಾಡಿಕೊಂಡು ತಕ್ಷಣವೇ ಅವರ ಬಳಿ ಹೋಗಿ ಕೈಲಾದ ಮಟ್ಟಿಗಿನ ಕಾಣಿಕೆ ಹಾಕುವಾಗ ಅಮ್ಮನೇ ಚಿಕ್ಕ ವಯಸ್ಸಿನಲ್ಲಿ ಕೈ ಹಿಡಿದು ಹಾಕಿಸುತ್ತಿದ್ದದ್ದು ನೆನಪಾಗುವುರಿಂದ ಅಂತಹ ಸುವರ್ಣಾವಕಾಶವನ್ನು ತಪ್ಪಿಸಿಕೊಳ್ಳಲು ಎಂದಿಗೂ ಬಯಸುವುದಿಲ್ಲ.
ನಮ್ಮ ಅಮ್ಮಾ ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಮಾನಸಿಕವಾಗಿ ನಮ್ಮ ನಡೆ ನುಡಿ ಆಚಾರ ವಿಚಾರಗಳ ಮೂಲಕ ಸದಾಕಾಲವೂ ನಮ್ಮೊಂದಿಗೆ ಇದ್ದೇ ಇದ್ದಾರೆ. ಅಮ್ಮಾ ಹೇಳಿಕ್ಕೊಟ್ಟ ಪ್ರತಿಯೊಂದನ್ನೂ ಇಂದಿಗೂ ಚಾಚೂ ತಪ್ಪದೇ ಅಚರಿಸಿಕೊಂಡು ಹೋಗುವ ಮುಖಾಂತರ ಅಮ್ಮನ ವ್ಯಕ್ತಿತ್ವವನ್ನು ನಮ್ಮಲ್ಲಿ ಪ್ರತಿಫಲನಗೊಳಿಸುತ್ತಿದ್ದೇವೆ.
ಬಹುತೇಕರು ನನ್ನ ಬರಹವವನ್ನು ಓದಿಯೋ ಇಲ್ಲವೇ, ನನ್ನ ಮಾತುಗಳನ್ನು ಕೇಳಿಯೋ ಇಲ್ಲವೇ ಗಮಕ ವ್ಯಾಖ್ಯಾನ ಮಾಡುವಾಗ ಎಲ್ಲಾ ಥೇಟ್ ತಾತ ಮತ್ತು ಅಪ್ಪನ ಹಾಗೇ ರೂಡಿಸಿಕೊಂಡಿದ್ದೀಯೇ ಎಂದುಹೊಗಳುತ್ತಾರೆ. ಆದರೆ ನನಗೆ ನಿಜವಾಗಿಯೂ ಓದಿನ ಹುಚ್ಚನ್ನು ಹತ್ತಿಸಿದ ಅಮ್ಮನನ್ನು ಯಾರೂ ನೆನೆಯದ ಕಾರಣ, ನನ್ನ ಅಂಕಿತನಾಮವನ್ನು ಉಮಾಸುತ ಎಂದಿಟ್ಟು ಕೊಂಡು ಪ್ರತಿ ಬಾರಿಯೂ ಅವರೆಲ್ಲರೂ ನನ್ನ ಲೇಖನದ ಕೊನೆಯಲ್ಲಿ ನಮ್ಮಮ್ಮನನ್ನು ನೆನಪಿಸಿಕೊಳ್ಳುವಂತೆ ಮಾಡುವುದರಲ್ಲಿ ಖುಷಿ ಪಡುತ್ತೇನೆ. ತನ್ಮೂಲಕ ನನಗೆ ವಿದ್ಯೆ, ಬುದ್ಧಿ, ವಿವೇಕಗಳನ್ನು ಕಲಿಸಿದ ಅಮ್ಮನಿಗಾಗಿಯೇ ಕಿಂಚಿತ್ ಗೌರವನ್ನು ಕೊಡಲು ಪ್ರಯತ್ನಿಸುತ್ತಿದ್ದೇನೆ. ಆದರೆ ಹೆತ್ತ ತಾಯಿಯ ಋಣ ನೂರು ಜನ್ಮ ಎತ್ತಿಬಂದರೂ ತೀರಿಸಲಾಗದು ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
‘ಅಮ್ಮ’ ಮೊದಲ ಗುರು ♥️
LikeLiked by 1 person
ಸತ್ಯವಾದ ಮತ್ತು ಮುತ್ತಿನಂತಾ ಮಾತು
LikeLike
ನಿಮ್ಮ ಅಮ್ಮನ ಬಗ್ಗೆ ಓದುವಾಗ ನಮ್ಮ ಅಮ್ಮ ನಮ್ಮನ್ನು ಬೆಳಸಿದ ರೀತಿಗೂ ನಿಮ್ಮಮ್ಮ ಬೆಳೆಸಿದ ರೀತಿಗೂ 99% ಹಾಗೆಯೇ ಇದೆ ಅವರು ಭಾಷೆಗಳು ಮಾತನಾಡುವುದು ಬಾಲ ಸಂಸ್ಕಾರ ನಮಗೂ ನಮ್ಮ ಮನೆಯ ಸುತ್ತಲಿರುವ ಮನೆಗಳ ಮಕ್ಕಳಿಗೂ ಕಲಿಸುತ್ತಿದ್ದರು… ಸಂಸ್ಕೃತ ಸಂಭಾಷಣೆ ಶಿಬಿರಗಳನ್ನು ನಡೆಸುತ್ತಿದ್ದರು, ಎರಡು ಮೂರು ಬಾರಿ ಹರಿ ಕಥಾ ಶಿಬಿರಗಳಲ್ಲಿ ಭಾಗ ವಹಿಸುತ್ತಿದ್ದರು .. ಮನೆಗೆ ಬಂದವರಿಗೆ ಅತಿಥಿ ಸತ್ಕಾರ ಮಾಡುವುದನ್ನು ನಮಮ್ಮ ನಿಂದ ಕಲಿತವರು ಇದ್ದಾರೆ…. ಭಗವಂತ ಅವರ ಸೇವೆ ಮಾಡುವ ಸುಯೋಗ ಕೊಟ್ಟಿದ್ದು ನಮ್ಮ ಪುಣ್ಯ ನಮ್ಮ ತಂದೆ ಅವರ ಆರೈಕೆ ಮಾಡುವ ಸುಯೋಗ ಈಗ ದೊರಕಿರುವುದು ಒಂದು ಅದೃಷ್ಟ ! ತಂದೆ ತಾಯಿಯ ಆಶೀರ್ವಾದ ನಮ್ಮನ್ನು ನಮ್ಮ ಮುಂದಿನ ಪೀಳಿಗೆಯನ್ನು ಖಂಡಿತಾ ಕಾಪಾಡುವುದು ನಾವು ಮಾಡುವುದನ್ನು ಮಕ್ಕಳು ನೋಡುತ್ತಿರುತ್ತಾರೆ ಮಕ್ಕಳು ಹೇಳಿದಂತೆ ಮಾಡುವುದಿಲ್ಲ ನಾವು ಮಾಡಿದಂತೆ ಮಾಡುವರು ಇದು ಹಿರಿಯರ ಅನುಭವವು …
LikeLiked by 1 person
ಧನ್ಯೋಸ್ಮಿ🙏🙏
ಎಲ್ಲಾ ಅಮ್ಮಂದಿರೂ ಹಾಗೆ. ಪ್ರಪಂಚದಲ್ಲಿ ಕೆಟ್ಟ ತಾಯಿಯರು ಎನ್ನುವುದೇ ಇಲ್ಲ ಅಲ್ವೇ?
LikeLike
ಧನ್ಯೋಸ್ಮಿ
LikeLiked by 1 person
🙏🏻♥️🙏🏻
ನಿಮ್ಮ ಅಮ್ಮನಂದುಂಟಾದ ದಿನಚರಿಯನ್ನು ಓದುವಾಗ….ನನ್ನಮ್ಮನ ನೆನಪು ಬಂದಿತು ! ಅಂತಹುದೇ ವ್ಯಕ್ತತ್ವ ! ( ditto ditto same….but the only difference is she NEVER rised her hand in spite of any amount of pressure )
ಮಮತಾಮಯಿ , ಅಚ್ಚುಕಟ್ಟು , ಪೂಜೆ, ಜಪಾದಿಗಳನ್ನು ಬೆಳಗಿನ ಜಾವದಲ್ಲಿಯೇ ಎದ್ದು ಮುಗಿಸಿಕೊಂಡು……ಎಲ್ಲರೂ ಏಳುವ ಹೊತ್ತಿಗೆ ತಾನು ಗಂಡ – ಮಕ್ಕಳ ಸೇವೆಗೆ ಸಿದ್ಧ !
ಬಾಯಿಪಾಠ ಹೇಳಿಕೊಡೋದು , ಸಂಜೆ ಸೂರ್ಯಾಸ್ತದ ನಂತರ ಭಜನೆ……ರಾತ್ರಿ ” ರಾಮಂ ಸ್ಕಂದಂ…..” , ಹೇಳಿಸೋದು , ಬೆಳಿಗ್ಗೆ ಎಬ್ಬಿಸಲು ಒಂದು ಹಾಡು ಹೇಳೋದು……..ಇವರಿಗೆಲ್ಲ ಎಲ್ಲಿತ್ತೋ ಅಷ್ಟೊಂದು ಸಹನೆ , ಸಮಾಧಾನ, ತಾಳ್ಮೆ …..
ಇವೆಲ್ಲ ನೋಡಿ , ಕೇಳಿ , ಅನುಭವಿಸಿ , ಆಲಿಸಿದಾಗ……
” ಯದ್ಯದ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಂ ” , ಎಂಬ ಶ್ರೀ ಶಂಕರಾಚಾರ್ಯರ ಮಾರ್ಗದರ್ಶನವನ್ನು ಕಾಯಾ-ವಾಚಾ-ಮನಸಾ ನಿರಾಯಾಸವಾಗಿ ಪಾಲಿಸಿದ ಜೀವಿಗಳು !
ಅಂತಹ ಮಹಾಮಾತೆಯರ ಸಪ್ರೇಮಪೂರ್ವಕವಾದ ಆರೈಕೆಯಲ್ಲಿ ಬೆಳೆದ ನಾವೇ ಧನ್ಯರು !
ಎಂದಷ್ಟೇ ಹೇಳಬಲ್ಲೆ ………
🙏🏻♥️🙏🏻
ಪ್ರಿಯ ಸ್ನೇಹಿತರೇ , ಹಂಚಿಕೊಂಡಿದ್ದಕ್ಕೆ ಧನ್ಯವಾದ !
LikeLiked by 1 person
ಅಮ್ಮಾ ಅಂದರೆ ಏನೋ ಹರುಶವು ನಮ್ಮ ಬಾಳಿಗೆ ಅವಳೇ ದೈವವು
LikeLiked by 1 person
🙏🙏 ತುಂಬಾ ಹೃದಯಸ್ಪರ್ಶಿಯಾಗಿದೆ ಲೇಖನ. ನಿನ್ನ ತಾಯಿಯವರ ಶುದ್ಧ ಅಂತಃಕರಣ ವಾತ್ಸಲ್ಯ ಸಾಗರದಲ್ಲಿ ನಾನೂ ಮಿಂದಿದ್ದೇನೆ. ನನ್ನನ್ನು ಲಕ್ಷ್ಮಣ ಎಂದೇ ಕರೆಯುತ್ತಿದ್ದರು, ಬೆಲ್ಲದನ್ನ ಮಾಡಿದಾಗ ಮರೆಯದೆ ಕರೆಸಿ ತಿನ್ನಲು ಕೊಡುತ್ತಿದ್ದ ನೆನಪು ಇನ್ನೂ ಹಸಿರಾಗಿದೆ. ನನ್ನ ತಾಯಿಯ ಮೇಲೆ ವಿಶೇಷ ಅಕ್ಕರೆ ಹಾಗೂ ಕಾಳಜಿ ಹೊಂದಿದ್ದರು. ಅವರು ಬೇಸಿಗೆ ರಜೆಯಲ್ಲಿ ಎಲ್ಲಾ ಮಕ್ಕಳನ್ನು ತಮ್ಮ ಮನೆಯಲ್ಲಿ ಸೇರಿಸಿಕೊಂಡು ಸಹನೆಯಿಂದ ಅವರೊಲ್ಲಬ್ಬರಾಗಿ ನಲಿಯುತ್ತಿದ್ದ ಪರಿ ಇಂದಿನ ದಿನಗಳಲ್ಲಿ ಅಪರೂಪ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ನಿನ್ನ ತಾಯಿಯವರ ನೆನೆವುದರ ಜೊತೆಗೆ ನನ್ನ ಅಮ್ಮನ ನೆನಪು ಹೊಳಪು ಮೂಡಿಸಿದ್ದಕ್ಕೆ ಧನ್ಯವಾದಗಳು 🙏🙏
LikeLike