ಎಲ್ಲಾ ಪೋಲೀಸರೂ ಕೆಟ್ಟವರಲ್ಲಾ

ನಾವೆಲ್ಲಾ ಚಿಕ್ಕವರಿದ್ದಾಗ ನಾವೇನಾದರೂ ತಪ್ಪು ಮಾಡಿದಲ್ಲಿ ಅಥವಾ ಹಠ ಮಾಡಿದಲ್ಲಿ ಪೋಲೀಸರಿಗೆ ಹಿಡಿದು ಕೊಡ್ತೀವಿ ಎಂದು ಭಯ ಪಡಿಸುತ್ತಿದ್ದದ್ದು ಸಹಜವಾಗಿತ್ತು. ಇತ್ತೀಚೆಗೆ ಸಣ್ ವಯಸ್ಸಿನ ಮಗುವೊಂದು ದಾರಿಯಲ್ಲಿ ಹಠ ಮಾಡುತ್ತಿದ್ದಾಗ ಅಲ್ಲೇ ಹೋಗುತ್ತಿದ್ದ ಪೋಲೀಸರನ್ನು ತೋರಿಸಿ ಇದೇ ರೀತಿ ಗಲಾಟೆ ಮಾಡುತ್ತಿದ್ದರೆ, ಆ ಪೋಲೀಸರಿಗೆ ಹಿಡಿದು ಕೊಡುತ್ತೇನೇ ಎಂಬುದನ್ನು ಕೇಳಿಸಿಕೊಂಡ ಆ ಪೋಲಿಸರು ಅಮ್ಮಾ, ಸುಖಾ ಸುಮ್ಮನೇ ಮಕ್ಕಳಿಗೆ ಪೋಲೀಸರನ್ನು ಕಂಡರೆ ಭಯ ಹುಟ್ಟಿಸ ಬೇಡಿ. ನಾವೂ ಸಹಾ ಸಹಜವಾದ ಮನುಷ್ಯರೇ ಎಂದು ಹೇಳಿದ್ದಲ್ಲದೇ ತಮ್ಮ ಜೋಬಿನಲ್ಲಿದ್ದ ಚಾಕಲೇಟ್ ಒಂದನ್ನು ಮಗುವಿನ ಕೈಗಿತ್ತು, ಮಗೂ ನಾನು ಪೋಲಿಸ್ ಮಾಮ ಹೇಳ್ತಾ ಇದ್ದೀನಿ. ಹೀಗೆಲ್ಲಾ ಗಲಾಟೆ ಮಾಡಿ ಅಮ್ಮನಿಗೆ ತೊಂದರೆ ಕೊಡಬಾರದು ಎಂದು ಹೇಳಿ ಮಗುವನ್ನು ಆ ಕೂಡಲೇ ಸಮಾಧಾನ ಪಡಿಸಿದ್ದರು. ಪೋಲೀಸರ ಬಗ್ಗೆ ಪೂರ್ವಾಗ್ರಹ ಪೀಡಿತನಾಗಿಯೇ ಇರುವ ನಾನು ಇದನ್ನು ನೋಡಿ ಪೋಲಿಸರಲ್ಲಿಯೂ ಇಂತಹ ಒಳ್ಳೆಯವರು ಇರುತ್ತಾರೆಯೇ ಎಂದು ಮೂಗಿನ ಮೇಲೆ ಬೆರಳಿಟ್ಟಿದ್ದೆ.

po6

ನೀರಿನ ಮೇಲಿನ ಗುಳ್ಳೆ ನಿಜವಲ್ಲ ಎನ್ನುವಂತೆ ಮೊನ್ನೆ ಅಚಾನಕ್ಕಾಗಿ ಚಾನೆಲ್ ಚೇಂಚ್ ಮಾಡುವಾಗ ಯಾವುದೋ ನ್ಯೂಸ್ ಛಾನೆಲ್ ಒಂದರಲ್ಲಿ ಪೋಲಿಸ್ ಅಧಿಕಾರಿಯೊಬ್ಬ ರಸ್ತೆಯ ಬದಿಯಲ್ಲಿ ಸೊಪ್ಪನ್ನು ಮಾರುತ್ತಿದ್ದ ವಯಸ್ಸಾದ ಹೆಂಗಸೊಬ್ಬರ ಮೇಲೆ ತನ್ನ ದರ್ಪವನ್ನು ತೋರಿಸುತ್ತಿದ್ದದ್ದನ್ನು ನೋಡಿ ಒಂದು ಕ್ಷಣ ಅವಾಕ್ಕಾದೆ. ಕೂಲಂಕುಶವಾಗಿ ಆ ಸುದ್ದಿಯನ್ನು ಗಮನಿಸಿದಾಗ ರಾಯಚೂರಿನ ಚಂದ್ರಮೌಳೇಶ್ವರ ವೃತ್ತದ ಬಳಿ ಕಳಿದ ಭಾನುವಾರ ಏಕಾಏಕಿ ಬಂದು ಬೀದಿಯ ಬದಿಯಲ್ಲಿ ತರಕಾರಿ, ಸೊಪ್ಪು ಮಾರುತ್ತಿದ್ದ ವಯಸ್ಸಾದ ಹೆಂಗಸೊಬ್ಬರ

po7

ಸೊಪ್ಪು ಮತ್ತು ತರಕಾರಿಗಳ ಮೇಲೇ ಏಕಾಏಕಿ ಧಾಳಿ ಮಾಡಿದ ಸಮವಸ್ತ್ರಧಾರಿ ಪೋಲೀಸರೊಬ್ಬರು, ಕಾಲಿನಿಂದ ತಿನ್ನುವ ತರಕಾರಿ ಮತ್ತು ಸೊಪ್ಪನ್ನು ಒದ್ದು ದರ್ಪ ಮೆರೆದಿದ್ದದ್ದನ್ನು ಬಾರಿ ಬಾರಿ ತೋರಿಸುತ್ತಿದ್ದದ್ದನ್ನು ನೋಡಿ ನಿಜಕ್ಕೂ ಮನಸ್ಸಿಗೆ ಖೇದವಾಯಿತು.

po6

ಹಾಗೆಂದು ರಸ್ತೆ ಬದಿಯಲ್ಲಿ ತರಕಾರಿ ಮಾರುವುದು ಸರಿ ಎಂದು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಕಡು ಬಡವಿಯಂತೆ ಕಾಣುವ ಆಕೆ ಅಂಗಡಿಗೆ ಬಾಡಿಗೆ ಕೊಡಲಾಗದೇ ಸ್ವಾಭಿಮಾನಿಯಾಗಿ ರಸ್ತೆ ಬದಿಯೊಂದರಲ್ಲಿ ನ್ಯಾಯಯುತವಾಗಿ ಕಾಯಿ ಪಲ್ಲೆಗಳನ್ನು ಮಾರಿ ಆಷ್ಟೋ ಇಷ್ಟೋ ಸಂಪಾದನೆ ಮಾಡಿ ತನ್ನ ಕುಟುಂಬದ ಹೊರೆಯುತ್ತಿದ್ದವರ ಮೇಲೆ ಧಾಳಿ ಮಾಡಿದ್ದು ಸರಿಕಾಣಲಿಲ್ಲ. ಇಂದಿಗೂ ಸಹಾ ರಾಜ್ಯದ ಅನೇಕ ನಗರದ ವಿವಿದೆಡೆಯಲ್ಲಿ ರಸ್ತೆ ಬದಿಯಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಮಾರುವವರ ಹತ್ತಿರ ಹತ್ತೊ ಇಪ್ಪತ್ತೋ ಹಫ್ತಾ ವಸೂಲು ಮಾಡಿಕೊಂಡು ಹೋಗುವ ಪೋಲೀಸರಿಗೇನೂ ಕಡಿಮೆ ಇಲ್ಲ. ಸಂಜೆ ಮನೆಗೆ ಹೋಗುವಾಗ ಬ್ಯಾಗ್ ಹಿಡಿದುಕೊಂಡು ಅದೇ ತರಕಾರಿ ಹಣ್ಣುಗಳನ್ನು ಮಾರುವವರ ಮುಂದೆ ಹಲ್ಲು ಗಿಂಜಿಯೋ ಇಲ್ಲವೇ ಮತ್ತದೇ ದರ್ಪವನ್ನು ತೋರಿಸಿ ಪುಗಸಟ್ಟೆ ಕಾಯಿ ಪಲ್ಲೇ ತೆಗೆದುಕೊಂಡು ಹೋಗುವ ಪೋಲೀಸರನ್ನು ಪ್ರತಿ ದಿನವೂ ಕಾಣಬಹುದಾಗಿದೆ. ಇನ್ನು ರಾತ್ರಿ ಹೊತ್ತಿನಲ್ಲಿ ಗಸ್ತು ತಿರುಗುವ ಪೋಲೀಸರಂತೂ ರಸ್ತೆಬದಿಯಲ್ಲಿ ಪಾನೀ ಪೂರಿ, ಇಡ್ಲಿ, ಚಿತ್ರಾನ್ನ ಮಾರುವವರ ಬಳಿ ಗಡದ್ದಾಗಿ ತಿಂದು ದುಡ್ಡು ಕೊಡದೇ ಡರ್ ಎಂದು ತೇಗಿ ಹೋಗುವ ಪೋಲೀಸರನ್ನೂ ಕಂಡಿದ್ದೇವೆ.

po5

ಸೊಪ್ಪನ್ನು ಕಾಲಿನಿಂದ ಒದ್ದಿದ್ದ ರಾಯಚೂರಿನ ಸದರ್ ಬಜಾರ್ ಠಾಣೆಯ ಪಿಎಸ್‌ಐ ಆಜಂ ಖಾನ್ ಅವರ ವಿಡಿಯೋ ಮಾಧ್ಯಮಗಳಲ್ಲಿ ದಿನವಿಡೀ ಪ್ರಸಾರವಾಗಿದ್ದಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡಿದ್ದನ್ನು ಗಮನಿಸಿದ ಇಲಾಖೆಯವರು ಕೂಡಲೇ ಆ ಪೇದೆಯನ್ನು ಸಸ್ಪೆಂಡ್ ಮಾಡಿರುವುದು ತುಸು ನೆಮ್ಮದಿ ತಂದರೂ ಖಾಕೀ ಸಮವಸ್ತ್ರ ಧರಿಸಿ ಬೂಟ್ ಹಾಕಿದ ಕೂಡಲೇ ಅದೇನೋ ಮೈಮೇಲೆ ದೆವ್ವ ಬಂದಂತೆ ದೊಡ್ಡವರು ಚಿಕ್ಕವರು ಎನ್ನದೇ ಏಕವಚನದಲ್ಲಿ ಮಾತನಾಡಿಸುವುದು, ಅನಾವಶ್ಯಕವಾಗಿ ಅವಾಚ್ಯ ವಾಕ್ಯಗಳನ್ನು ಆಡುವುದು, ರಸ್ತೆ ಬದಿಯಲ್ಲಿ ಕಳ್ಳರಂತೆ ನಿಂತು ಗಬ್ಬಕ್ಕನೇ ದ್ವಿಚಕ್ರ ವಾಹನದವರನ್ನು ಏಕಾ ಏಖಿ ತಡೆದು ಗಾಡಿಯ ಕೀ ಕಸಿದುಕೊಂಡು ಲಂಚಕ್ಕಾಗಿ ಕೈ ಒಡ್ಡುವ ಮನೋಭಾವನೆ ನಿಜಕ್ಕೂ ಅಸಹ್ಯ ಹುಟ್ಟಿಸುತ್ತದೆ.

ಈ ಘಟನೆಗೆ ತದ್ವಿರುದ್ಧವಾಗಿ ಮೊನ್ನೆ ಮತ್ತೊಂದು ಪ್ರದೇಶದಲ್ಲಿ ಕಾಯಿ ಪಲ್ಲೆ ಮಾರಿ ಜೀವನ ನಡೆಸುತ್ತಿದ್ದ ವಯಸ್ಸಾದ ಅಜ್ಜಿಯೊಬ್ಬರು ಲಾಕ್ ಡೌನ್ ನಿಂದಾಗಿ ತಂದಿದ್ದ ತರಕಾರಿಗಳು ಖರ್ಚಾಗದೇ ತಲೆ ಮೇಲೆ ಕೈ ಹೊತ್ತಿದ್ದನ್ನು ಕಂಡ ಪೋಲಿಸರು, ಪ್ರತಿದಿನವೂ ಖರ್ಚೆಲ್ಲವೂ ಕಳೆದು ಆಕೆ ಗಳಿಸುತ್ತಿದ್ದ 200 ರೂಪಾಯಿಗಳನ್ನು ತಮ್ಮ ಜೋಬಿನಿಂದ ಕೊಡಲು ಒಪ್ಪಿ ಲಾಕ್ಡೌನ್ ಮುಗಿಯುವವರೆಗೂ ಸರದಿಯಂತೆ ಸ್ಥಳೀಯ ಠಾಣೆಯ ಪ್ರತಿಯೊಬ್ಬ ಪೋಲಿಸರೂ ಆಕೆಗೆ 200 ರೂ ಕೊಡುತ್ತಿದ ಹೃದಯಸ್ಪರ್ಶಿ ಕತೆಯನ್ನೂ ಓದಿ ಮನಸ್ಸಿಗೆ ಮುದ ನೀಡಿತ್ತು.

ಇಂದಿನ ದಿನಪತ್ರಿಕೆಯಲ್ಲಿ ದೊಡ್ಡಬಳ್ಳಾಪುರದ ಪೋಲಿಸರು ಎರಡನೇ ಲಾಕ್ಡೌನ್ ಸಮಯದಲ್ಲಿ ಸುಮಾರು ಎರಡು ತಿಂಗಳುಗಳ ಕಾಲ ಹಸಿದವರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಿದ್ದಲ್ಲದೇ, ಅಗತ್ಯವಿರುವವರಿಗೆ ಆಹಾರದ ಕಿಟ್ ವಿತರಿಸಿರುವುದು ಅಭಿನಂದನಾರ್ಹವಾಗಿದೆ.

ಒಬ್ಬ ನಿವೃತ್ತ ಪೋಲೀಸ್ ಅಧಿಕಾರಿಯ ಅಳಿಯನಾಗಿ ಖುದ್ಧಾಗಿ ನಾನು ಕಂಡು ಕೊಂಡಿರುವ ಸತ್ಯವೇನೆಂದರೆ ಎಲ್ಲಾ ಪೋಲಿಸರೂ ಕೆಟ್ಟವರೇನಲ್ಲ. ಹಬ್ಬ ಹರಿದಿನಗಳು ಎನ್ನದೇ, ಮಳೆ ಚಳಿ, ಗಾಳಿ ಎನ್ನದೇ ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದರಲ್ಲಿ ಪೋಲೀಸರ ಪಾತ್ರ ನಿಜಕ್ಕೂ ಅನನ್ಯವಾಗಿದೆ. ಸಣ್ಣ ಪುಟ್ಟ ಕೌಟುಂಬಿಕ ಸಮಸ್ಯೆಗಳನ್ನು, ಪ್ರೀತಿ ಪ್ರೇಮ ಪ್ರಣಯದ ‌ಸಂಗತಿಗಳನ್ನು ಠಾಣೆಗಳಲ್ಲೇ ಸೌಹಾರ್ದಯುವಾಗಿ ಪರಿಹರಿಸಿದ ಅನೇಕ‌ ಉದಾಹರಣೆಗಳು ನಮ್ಮ ಕಣ್ಣ‌ ಮುಂದಿದೆ.

ಪೋಲೀಸ್ ಇಲಾಖೆಯಲ್ಲೂ ಅನೇಕ ದಕ್ಷ ಅಧಿಕಾರಿಗಳು, ಹೃದಯವಂತರು, ಕವಿ ಮನಸ್ಸಿನವರು, ಹಾಡುಗಾರರು, ಕ್ರೀಡಾಪಟುಗಳು, ನಟರುಗಳನ್ನು ಕಾಣ ಬಹುದಾಗಿದೆ. ಹಣ್ಣುಗಳ ಬುಟ್ಟಿಯಲ್ಲಿ ಒಂದೆರಡು ಕೊಳೆತ ಹಣ್ಣುಗಳು ಇಡೀ ಬುಟ್ಟಿಯಲ್ಲಿನ ಹಣ್ಣುಗಳನ್ನು ಕೆಡಿಸುವುದಲ್ಲದೇ, ಕೊಳೆತು ನಾರುವ ಮೂಲಕ ಇಡೀ ವಾತಾವರಣವನ್ನೇ ಕೆಡಿಸುವಂತೆ, ಎಲ್ಲೋ ನೂರರಲ್ಲಿ ನಾಲ್ಕೈದು ಆ ರೀತಿಯ ಕೆಟ್ಟ ಪೋಲಿಸರಿಂದಾಗಿ ಇಡೀ ಪೋಲೀಸರನ್ನೇ ಕೆಟ್ಟದಾಗಿ ಬಿಂಬಿಸುವಂತೆ ಮಾಡುತ್ತಿರುವುದು ನಿಜಕ್ಕೂ ಛೇದಕರವಾಗಿದೆ.

ಪೋಲಿಸರೂ ಸಹಾ ಮನುಷ್ಯರೇ ಎಂದು ಭಾವಿಸಿ, ಅಣ್ಣ ಬಸವಣ್ಣನವರು ಹೇಳಿರುವಂತೆ ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಂಡು ಪೋಲೀಸರೊಂದಿಗೆ ಸೌಮ್ಯದಿಂದ ವರ್ತಿಸಿದಲ್ಲಿ ಎಲ್ಲವೂ ಸುಗಮವಾಗಿ ಸಾಗಿ ಸಮಾಜದ ಸ್ವಾಸ್ಥ್ಯವೂ ಸುಗಮವಾಗಿರುತ್ತದೆ ಅಲ್ವೇ?

ಏನಂತೀರೀ?

ನಿಮ್ಮವನೇ ಪೋಲಿಸ್ ಅಳಿಯ, ಉಮಾಸುತ

One thought on “ಎಲ್ಲಾ ಪೋಲೀಸರೂ ಕೆಟ್ಟವರಲ್ಲಾ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s