ಹೇಳಿ ಕೇಳಿ ಮನುಷ್ಯ ಸಂಘ ಜೀವಿ. ಹಾಗಾಗಿಯೇ ತಾನೊಬ್ಬನೇ ಒಂಟಿಯಾಗಿ ಇರಲು ಸಾಧ್ಯವಿರದೇ ಅನೇಕರ ಜೊತೆಗೆ ಗುಂಪು ಗುಂಪಾಗಿ ಒಟ್ಟೊಟ್ಟಿಗೆ ಒಂದು ಕಡೆ ವಾಸಿಸಲು ಆರಂಭಿಸಿದ ಕಾರಣದಿಂದಲೇ ಊರು ಮತ್ತು ಕೇರಿಗಳು ಆರಂಭವಾಯಿತು. ಕೇವಲ ಮನುಷ್ಯರೇ ತನ್ನೊಂದಿಗೆ ಇದ್ದರೆ ಸಾಲದು ತನ್ನ ಜೊತೆ ಪಶು ಪ್ರಾಣಿ ಪಕ್ಷಿಗಳೂ ಇದ್ದರೆ ಚೆನ್ನಾ ಎಂದೆನಿಸಿದಾಗ ಆತ ಕಾಡಿನಿಂದ ಸಾಧು ಪ್ರಾಣಿಗಳನ್ನು ಹಿಡಿದು ತಂದು ಅವುಗಳನ್ನು ಪಳಗಿಸಿ ತನ್ನ ಸಾಕು ಪ್ರಾಣಿಗಳನ್ನಾಗಿ ಮಾಡಿಕೊಂಡಿದ್ದಲ್ಲದೇ, ಅವುಗಳನ್ನು ತನ್ನ ದಿನನಿತ್ಯದ ಜೀವನ ಪದ್ದತಿಗಳಲ್ಲಿ ಭಾಗವಾಗುವಂತೆ ನೋಡಿಕೊಂಡ. ಒಂದೇ ರೀತಿಯ ಬದುಕಿನಿಂದ ಬೇಸತ್ತ ಮನುಷ್ಯ ಮನೋರಂಜನೆಗಾಗಿ ಹಾಡು ಹಸೆ, ನೃತ್ಯ ನಾಟಕಗಳನ್ನು ಅಭ್ಯಾಸ ಮಾಡಿಕೊಂಡಿದ್ದಲ್ಲದೇ ಅವುಗಳಿಗೆ ಒಂದು ಸೂಕ್ತವಾದ ವೇದಿಕೆ ನೀಡಲು ಹಬ್ಬ ಹರಿದಿನಗಳು ಆರಂಭವಾಯಿತು. ಈ ಹಬ್ಬ ಹರಿದಿನಗಳಲ್ಲಿ ಕಾಲ ಕಾಲಕ್ಕೆ ಅನುಗುಣವಾಗಿ ಸಿಗುವ ಪದಾರ್ಥಗಳಿಂದ ತನಗಿಷ್ಟ ಬಂದ ಭಕ್ಷ ಭೋಜನಗಳನ್ನು ತಯಾರಿಸಿ ತಿಂದು ಸಂಭ್ರಮಿಸಿದ.
ಹಬ್ಬ ಹರಿದಿನಗಳಲ್ಲಿ ಕೇವಲ ತಾನೊಬ್ಬನೇ ಸಂಭ್ರಮಿಸಿದರೆ ಸಾಲದು ತನ್ನ ಸಂಭ್ರದ ಜೊತೆಗೆ ಪ್ರಕೃತಿ, ಸಾಕು ಪ್ರಾಣಿಗಳು ಮತ್ತು ಆಯುಧಗಳು ಇದ್ದರೆ ಚೆನ್ನಾ ಎನಿಸಿದಾಗಲೇ ಸಂಕ್ರಾಂತಿ, ಯುಗಾದಿ, ಆಯುಧಪೂಜೆಗಳ ಸಂದರ್ಭದಲ್ಲಿ ಸಾಕುಪ್ರಾಣಿಗಳು ಮತ್ತು ತನ್ನ ದಿನ ನಿತ್ಯದ ಚಟುವಟಿಕೆಗಳಲ್ಲಿ ಬಳಸುವ ಸಲಕರಣೆಗಳನ್ನು ಪೂಜಿಸತೊಡಗಿದ. ರೈತರು ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ರೈತಾಪಿ ಜನರು ಮಳೆಗಾಲದ ಮುಂಚೆ ಸಡಗರ ಸಂಭ್ರಮಗಳಿಂದ ತಮ್ಮ ದನ ಕರುಗಳೊಂದಿಗೆ ಆಚರಿಸುವ ಕಾರಹುಣ್ಣಿಮೆಯ ಬಗ್ಗೆ ಸವಿರವಾಗಿ ತಿಳಿಸಿಕೊಳ್ಳೋಣ.
ಜೇಷ್ಥ ಮಾಸದ ಹುಣ್ಣಿಮೆ ಬಂತೆಂದರೆ ಉತ್ತರ ಕರ್ನಾಟಕದ ಮಂದಿಗೆ ಅದೇನೋ ಸಂಭ್ರಮ. ಒಂದೆರಡು ಹದದ ಮಳೆ ಬಿದ್ದು ಆಗತಾನೆ ಕೃಷಿ ಚಟುವಟಿಕೆಗಳು ಆರಂಭವಾಗಿ ಭರ್ಜರಿಯ ಮುಂಗಾರು ಮತ್ತು ಹಿಂಗಾರಿನ ಮಳೆಯ ನಿರೀಕ್ಷೆಯಲ್ಲಿ ಇರುತ್ತಾರೆ. ಹಬ್ಬಕ್ಕೊಂದೆರಡು ದಿನಗಳ ಮುಂಚೆಯೇ ಅಂಗಡಿಗಳಿಗೆ ಹೋಗಿ, ಬಣ್ಣ ಬಣ್ಣದ ರಂಗು(ಗುಲಾಲ್) ಟೇಪುಗಳನ್ನೆಲ್ಲಾ ತಂದು ಸಿದ್ಧ ಪಡಿಸಿಕೊಂಡು ಹುಣ್ಣಿಮೆ ಹಬ್ಬದ ದಿನ ತಮ್ಮ ರಾಸುಗಳು ಅದರಲ್ಲೂ ವಿಶೇಷವಾಗಿ ಹೋರಿಗಳನ್ನು ಕೆರೆ ಕಟ್ಟೆಗಳ ಬಳಿಗೆ ಕರೆದುಕೊಂಡು ಹೋಗಿ ಚೆನ್ನಾಗಿ ತಿಕ್ಕಿ ಅವುಗಳ ಮೈ ತೊಳೆದು ಅವುಗಳ ಕೋಡುಗಳನ್ನು ಕತ್ತಿಯಿಂದ ಸವರಿ ಅವುಗಳಿಗೆ ವಿವಿಧ ಬಣ್ಣಗಳನ್ನು ಬಳಿದೋ ಇಲ್ಲವೇ ತೇಪುಗಳನ್ನು ಕಟ್ಟಿ ಅದರ ಜೊತೆಗೆ ಬಣ್ಣ ಬಣ್ಣದ ಉಸಿರುಬುಡ್ಡೆ (ಬೆಲೂನು)ಗಳನ್ನು ಕಟ್ಟಿ ಅವುಗಳ ದೇಹಕ್ಕೆ ವಿವಿಧ ಬಣ್ಣದ ಗುಲಾಲುಗಳಿಂದ ಚಿತ್ತಾರ ಬಿಡಿಸಿ ಕೊರಳಿಗೆ ಮತ್ತು ಕಾಲ್ಗಳಿಗೆ ಚಂದನೆಯ ಗೆಜ್ಜೆಗಳನ್ನು ಕಟ್ಟಿ ನೋಡುವುದಕ್ಕೆ ಚೆಂದಗೆ ಕಾಣುವ ಹಾಗೆ ಮಾಡುತ್ತಾರೆ. ಕೇವಲ ಹಸುಗಳಿಗಷ್ಟೇ ಅಲ್ಲದೇ ಮನೆ ಮಂದಿಯೆಲ್ಲಾ ಹೂಸ ಬಟ್ಟೆಗಳನ್ನು ತೊಟ್ಟು ಇಡೀ ದಿನ ತಮ್ಮೆಲ್ಲಾ ಕೃಷಿ ಚಟುವಟಿಕೆಗಳಿಂದ ತಾವೂ ಮತ್ತು ತಮ್ಮ ರಾಸುಗಳು ಮುಕ್ತವಾಗಿದ್ದು ಹೋಳಿಗೆ, ಕಡುಬು ಮತ್ತು ವಿವಿಧ ಬಗೆಯ ಭಕ್ಷ್ಯ ಭೋಜನಗಳನ್ನು ಸಿದ್ದ ಪಡಿಸಿ ಮೊದಲು ದೇವರಿಗೆ ನೈವೇದ್ಯ ಮಾಡಿ ನಂತರ ತಮ್ಮ ದನ ಕರುಗಳಿಗೆ ಅವುಗಳನ್ನು ಒಳ್ಳೆಯ ಮೇವುಗಳ ಜೊತೆ ತಮ್ಮ ದನಕರುಗಳಿಗೆ ಉಣ ಬಡಿಸಿ ನಂತರ ಮನೆಯವರೆಲ್ಲರೂ ಒಟ್ಟಿಗೆ ಸಂತೋಷದಿಂದ ಊಟ ಮಾಡಿ ಸಂಭ್ರಮಿಸುತ್ತಾರೆ.
ಸೂರ್ಯನ ಬಿಸಿಲು ಸಂಜೆಯ ಹೊತ್ತಿಗೆ ಕಡಿಮೆ ಆಗುತ್ತಿದ್ದಂತೆಯೇ, ಸಿಂಗರಿಸಿದ ರಾಸುಗಳನ್ನು ಎಲ್ಲರೂ ಮೆರವಣಿಗೆಯ ಮುಖಾಂತರ ಊರ ಮುಂದಿನ ಅರಳೀ ಕಟ್ಟೆಯ ಬಳಿಗೆ ಕರೆ ತರುತ್ತಾರೆ, ಉಳ್ಳವರು ಭಾಜಾಭಂಜಂತ್ರಿಯ ಸಮೇತ ತಮ್ಮ ದನಕರುಗಳನ್ನು ಮೆರವಣಿಗೆ ಕರೆತರುವುದನ್ನು ನೋಡಲು ಇಡೀ ಊರಿನ ಮಂದಿಯೆಲ್ಲಾ ಅಲ್ಲಿ ನೆರೆದಿದ್ದು ಇದು ಚೆನ್ನಾಗಿದೇ, ಇಲ್ಲಾ ಇದು ಚೆನ್ನಾಗಿದೆ ಎಂದು ತಮ್ಮ ತಮ್ಮಲೇ ಫಲಿತಾಂಶಗಳನ್ನು ನೀಡುವ ಮಂದಿಗೇನೂ ಕಡಿಮೆ ಇರುವುದಿಲ್ಲ.
ಕಾರ ಹಬ್ಬದ ವಿಶೇಷತೆಯಲ್ಲಿ ಕರಿ ಹರಿಯುವ (ಎತ್ತುಗಳನ್ನು ಪೂಜಿಸಿ ಓಡಲು ಬಿಡುವುದು) ಕಾರ್ಯಕ್ರಮವೇ ಒಂದು ವೈಶಿಷ್ಟ್ಯ. ಊರ ಮುಂಭಾಗದಲ್ಲಿ ಬೇವಿನ ತೋರಣದ ನಡುವೆ ಕೊಬ್ಬರಿಯನ್ನು ಕಟ್ಟಲಾಗಿರುತ್ತದೆ. ಈ ಕರಿಯನ್ನು ಹರಿಯಲು ಬಿಳಿ, ಹಾಗೂ ಕಂದು ಬಣ್ಣದ ಎತ್ತುಗಳಿಗೆ ಮಾತ್ರ ಅವಕಾಶವಿದ್ದು ಜೋರಾಗಿ ಭಾಜ ಭಜಂತ್ರಿ ಡೋಲು ಮತ್ತು ತಮಟೆಯ ಸದ್ದಾಗುತ್ತಿದ್ದಂತೆಯೇ, ಸಿಂಗರಿಸಿದ್ದ ತಮ್ಮ ರಾಸುಗಳೊಂದಿಗೆ ರೈತರು ತಾಮುಂದು ನಾಮುಂದು ಎಂದು ಆ ಕರಿಯನ್ನು ಹರಿಯುವತ್ತ ದೌಡಾಯಿಸುತ್ತಾರೆ. ಕರಿಯುವ ಓಟದಲ್ಲಿ ಎತ್ತುಗಳನ್ನು ಹಿಡಿದ ರೈತರು ಎದ್ದೆನೋ ಬಿದ್ದೇನೋ ಎಂದು ಓಡುತ್ತಿದ್ದರೆ, ಅದನ್ನು ನೋಡಲು ಬಂದಿರುವ ಪಡ್ಡೇ ಹುಡುಗರು ಮತ್ತು ಉಳಿದ ರೈತರುಗಳು ಸಿಳ್ಳೇ ಹೊಡೆಯುತ್ತಾ, ಜೋರಾಗಿ ಕೇಕೆ ಹಾಕುತ್ತಾ ಉತ್ಸಾಹ ತುಂಬುತ್ತಾರೆ. ಯಾವ ಬಣ್ಣದ ಎತ್ತು ಮೊದಲು ಕರಿಹರಿಯುತ್ತೋ ಆ ಬಣ್ಣದ ಬೆಳೆ ಆ ಬಾರಿ ಚೆನ್ನಾಗಿ ಬರುತ್ತದೆ ಎನ್ನುವ ನಂಬಿಕೆ ಆ ಎಲ್ಲಾ ರೈತರದ್ದಾಗಿರುತ್ತದೆ.
ಬಿಳಿ ಎತ್ತು ಮೊದಲು ಕರಿ ಹರಿದರೆ ಬಿಳಿಜೋಳ, ಅಂದರೆ ಹಿಂಗಾರು ಮಳೆ-ಬೆಳೆ ಚೆನ್ನಾಗಿ ಆಗುತ್ತದೆ ಎನ್ನುವ ನಂಬಿಕೆ ಇದ್ದು, ಇನ್ನು ಕಂದು ಬಣ್ಣದ ಎತ್ತು ಕರಿ ಹರಿದರೆ ಮುಂಗಾರು ಮಳೆಯ ಬೆಳೆಗಳು ಚೆನ್ನಾಗಿ ಆಗುತ್ತೆ ಎನ್ನುವ ನಂಬಿಕೆಯು ಅಲ್ಲಿನ ರೈತರದ್ದಾಗಿದ್ದು, ಮೊದಲು ಕರಿ ಹರಿದ ಎತ್ತಿಗೆ ರೈತರೆಲ್ಲರೂ ಸೇರಿ ಮೆರವಣಿಗೆ ಮಾಡುವುದಲ್ಲದೇ ಅದರೆ ಮಾಲಿಕನಿಗೆ ಬಹುಮಾನ ಕೊಡುವುದೂ ಕೆಲವು ಕಡೆ ರೂಢಿಯಲ್ಲಿದೆ. ಈ ಕರಿ ಹರಿದ ಬಳಿಕ ಗಂಡಸರ ಪೌರುಷದ ಪಂದ್ಯಾವಳಿಗಳು ಇದ್ದು, ಅದರಲ್ಲೂ ವಿಶೇಷವಾಗಿ ಗುಂಡು ಎತ್ತುವ ಇಲ್ಲವೇ ಮೂಟೆಗಳನ್ನು ಎತ್ತುವ ಸ್ಪರ್ಧೆ ಏರ್ಪಡಿಸಲಾಗಿರುತ್ತದೆ. ವರ್ಷವಿಡೀ ಕೃಷಿ ಚಟುವಟಿಕೆಯಲ್ಲಿ ತೊಡಗಿ ದೇಹವನ್ನು ಹುರಿಗೊಳಿಸಿಕೊಂಡ ರೈತರಿಗೆ ಇಂದೊದು ರೀತಿಯ ದೈಹಿಕ ಕಸರತ್ತಿನ ಚಟುವಟಿಕೆಗಳು ನಡೆಡು ಅಲ್ಲಿ ಗೆದ್ದವರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ಹಂಚಿದ ನಂತರ ಎಲ್ಲರು ತಮ್ಮ ಗ್ರಾಮ ದೇವತೆಯ ದೇವಾಲಯಕ್ಕೆ ಹೋಗಿ ಭಕ್ತಿಯಿಂದ ಈ ಬಾರಿ ಮಳೆ ಚೆನ್ನಾಗಿ ಆಗಿ ಬೆಳೆ ಸುಭಿಕ್ಷವಾಗುವಂತಾಗಲಿ ಎಂದು ಬೇಡಿಕೊಳ್ಳುತ್ತಾರೆ.
ಈ ಕಾರ ಹುಣ್ಣಿಮೆ ಮುಗಿದ ನಂತರವೇ ಮಳೆಗಾಲ ಆರಂಭವಾಗುವುದನ್ನು ನಮ್ಮ ವರ ಕವಿ ಬೇಂದ್ರೆಯವರೂ ಸಹಾ ತಮ್ಮ ಮೇಘದೂತ ಕವನದಲ್ಲಿ ಈ ರೀತಿಯಾಗಿ ಹೇಳಿದ್ದಾರೆ.
ಆಗಲಿ ಇದ್ದರೂ ಆಸೆಗೊಂಡಿರಲು ಗಿರಿಯೊಳಂತೂ ಇತ್ತು ಕೆಲವೇ ತಿಂಗಳಲ್ಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು ಕಾರಹುಣ್ಣಿಮೆಯ ಮಾರನೆಯ ದಿನವೇ ಮೋಡ ಕೋಡನಪ್ಪಿ ಕಂಡಿತೊಡ್ಡಿ ನೋಡ ಢಿಕ್ಕಿ ಯಾಡುವಾ ಆನೆ ಬೇಡಗನೊಪ್ಪಿ
ರೈತರ ಹೆಗಲಿಗೆ ತಮ್ಮ ಹೆಗಲು ಕೊಟ್ಟು ರೈತನ ಜೀವನಕ್ಕಾಗಿ ತಮ್ಮ ಜೀವ ತೇಯುವ ಮೂಕ ಪ್ರಾಣಿಗಳಾದ ಎತ್ತುಗಳು ದೇವರು ಇದ್ದ ಹಾಗೆ. ಹಾಗಾಗಿ ಅವುಗಳನ್ನು ಕಾರ ಹುಣ್ಣಿಮೆಯ ದಿನದಂದು ಅವುಗಳನ್ನು ಸಿಂಗರಿಸಿ, ಪೂಜೆ ಮಾಡಿ ಸಂಭ್ರಮಿಸುವ ಒಂದು ರೀತಿಯ ಜನಪದ ಸೊಗಡಿನ ಹಬ್ಬವೇ ಕಾರ ಹುಣ್ಣಿಮೆ ಎಂದರೂ ತಪ್ಪಾಗಲಾರದು. ಹಳೇಮೈಸೂರಿನ ಕಡೆ ಸಂಕ್ರಾತಿಯ ದಿನ ಇದೇ ರೀತಿ ದನಗಳಿಗೆ ಸಿಂಗರಿಸಿ ಕಿಚ್ಚು ಹಾಯಿಸುವುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಆಚರಣೆಗಳು ಬೇರೆ ಬೇರೆ ದಿನಗಳಾದರೂ ಸಡಗರ ಸಂಭ್ರಮ ಮತ್ತು ಧ್ಯೇಯ ಒಂದೇ ಆಗಿ ಈ ರೀತಿಯ ಹಬ್ಬಗಳು ವಿವಿಧತೆಯಲ್ಲಿ ಏಕತೆಯನ್ನು ಮೂಡಿಸಿ ಗ್ರಾಮ ಗ್ರಾಮಗಳಲ್ಲಿ ಸೌಹಾರ್ಧತೆಯನ್ನು ಮೂಡಿಸುವುದರಲ್ಲಿ ಸಹಕಾರಿಯಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಎತ್ತುಗಳ ಬದಲಾಗಿ ಟ್ರಾಕ್ಟರ್ಗಳು ಎಲ್ಲೆಡೆಯಲ್ಲಿಯೂ ಹೇರಳವಾಗಿರುವುದರಿಂದ ಎತ್ತುಗಳೇ ಇಲ್ಲದೇ, ಈ ಕಾರಹುಣ್ಣಿಮೆಯನ್ನು ಹೇಗೆ ಆಚರಿಸುತ್ತಾರೆ ಎಂಬ ಜಿಜ್ಞಾಸೆ ಮೂಡಿದರೆ, ನಮ್ಮ ಹಿರಿಯರೂ ಇಂತಹ ಪರಿಸ್ಥಿತಿಯನ್ನು ಅಂದೇ ಊಹಿಸಿ ಅದಕ್ಕೂ ಒಂದು ಪರಿಹಾರವನ್ನು ಸೂಚಿಸಿದ್ದಾರೆ. ಕಾರ ಹುಣ್ಣಿಮೆಗೂ ಮುಂಚೆ ಊರಿನ ಕುಂಬಾರರು ಊರ ಕೆರೆಯಿಂದ ಸಾಕಷ್ಟು ಜೇಡಿ ಮಣ್ಣನ್ನು ತಂದು ಅದನ್ನು ಹಸನು ಮಾಡಿ ಅದರಿಂದ ಮುದ್ದಾದ ಎತ್ತುಗಳನ್ನು ಮಾಡಿ ಅವುಗಳನ್ನು ಚೆನ್ನಾಗಿ ಒಣಗಿಸಿಡುತ್ತಾರೆ. ಕೆಲವಡೆ ಅದಕ್ಕೆ ಬಣ್ಣಗಳಿಂದ ಸಿಂಗರಿಸಿವುದೂ ಉಂಟು.
ಹಬ್ಬದ ಹಿಂದಿನ ದಿನ ಊರಿನ ಮನೆಗಳಿಗೆ ಹೋಗಿ ಯಾರ ಮನೆಯಗಳಲ್ಲಿ ಎತ್ತುಗಳು ಇರುವುದಿಲ್ಲವೂ ಅವರೆಲ್ಲರಿಗೂ ಮಣ್ಣೆತ್ತುಗಳ ಜೋಡಿಯನ್ನು ಕೊಡುವ ಸಂಪ್ರದಾಯವಿದೆ. ಈ ರೀತಿಯಾಗಿ ಪಡೆದ ಜೋಡೆತ್ತುಗಳಿಗೆ, ಮುಂಗಾರು ಮತ್ತು ಹಿಂಗಾರು ಎಂದು ಹೆಸರಿಟ್ಟು ಅವುಗಳನ್ನು ಭಕ್ತಿಯಿಂದ ಪೂಜೆ ಮಾಡಿ ಮಾರನೆಯ ದಿನ ನೀರಿನಲ್ಲಿ ವಿಸರ್ಜಿಸುತ್ತಾರೆ. ಮಣ್ಣೆತ್ತುಗಳನ್ನು ಮಾಡಿಕೊಟ್ಟ ಕುಂಬಾರರಿಗೆ ಹಿಂದೆಲ್ಲಾ ಯಥಾ ಶಕ್ತಿ ಧನ ಧಾನ್ಯಗಳನ್ನು ನೀಡುವ ಪದ್ದತಿ ಇದ್ದು ಈಗೆಲ್ಲಾ ಹಣವನ್ನೇ ನೀಡುತ್ತಾರೆ. ಈ ರೀತಿಯಾಗಿ ಗುಡಿ ಕೈಗಾರಿಕೆಗೂ ಒತ್ತು ನೀಡುವುದನ್ನು ನಮ್ಮ ಹಿಂದಿನವರು ಹಬ್ಬಗಳ ಮೂಲಕ ರೂಢಿಗೆ ತಂದಿರುವುದು ಗಮನಾರ್ಹವಾಗಿದೆ.
ಕಾರಹುಣ್ಣಿಮೆ ಮತ್ತು ನಾಗಪಂಚಮಿ ಹಬ್ಬಗಳಿಗೆ ಮಣ್ಣಿನ ಎತ್ತುಗಳು ಮತ್ತು ಮಣ್ಣಿನ ನಾಗಪ್ಪಗಳನ್ನು ಮಾಡುತ್ತಿದ್ದ ಕುಂಬಾರರಿಗೆ ಇತ್ತೀಚಿಗೆ ಬಂದಿರುವ ಪ್ಲಾಸ್ಟಿಕ್ ಬೊಂಬೆಗಳು ಬಹಳವಾಗಿ ತೊಂದರೆ ಕೊಡುತ್ತಿದೆಯಾದರೂ ಬಹಳಷ್ಟು ಹಿರಿಯರು ಇಂದಿಗೂ ಪ್ಲಾಸ್ಟಿಕ್ ಬೊಂಬೆಗಳನ್ನು ಬಳಸದೇ ಮಣ್ಣಿನ ಗೊಂಬೆಗಳಿಗೆ ಒತ್ತು ನೀಡುತ್ತಿರುವುದು ಶ್ಲಾಘನೀಯವಾಗಿದೆ.
ಬೇಸಿಗೆ ಕಳೆದು ಮುಂಗಾರು ಬರುವ ಮುನ್ನವೇ ಬರುವ ವೈಶಿಷ್ಟ್ಯ ಪೂರ್ಣ ಕಾರ ಹುಣ್ಣಿಮೆಯ ಹಾರ್ಧಿಕ ಶುಭಾಷಯಗಳು. ಮುಂಗಾರಿಗೆ ಮುನ್ನ ಬಿದ್ದ ಒಂದೆರಡು ಹದವಾದ ಮಳೆಯಲ್ಲಿ ಇದೇ ಎತ್ತುಗಳೊಂದಿಗೆ ಹೊಲವನ್ನು ಉತ್ತಿ ಹದ ಮಾಡಿ ಬಿತ್ತಿದ ನಂತರ ತಮ್ಮೊಂದಿಗೆ ದುಡಿದ ಮೂಕ ಜೀವಿಗಳಿಗೆ ಕೃತಜ್ಞತಾಪೂರ್ವಕವಾಗಿ ಈ ರೀತಿಯ ಹಬ್ಬವನ್ನು ಆಚರಿಸಿ ಅನಂತರದ ದಿನಗಳಲ್ಲಿ ಕೆಲಕಾಲ ಅವುಗಳಿಗೆ ವಿಶ್ರಾಂತಿ ನೀಡಲಾಗುತ್ತದೆ. ಈ ಸುಂದರ ಹಬ್ಬಗಳ ಮೂಲಕ ಮನುಷ್ಯ ಮತ್ತು ಪಶು ಪಕ್ಷಿಗಳ ಅನ್ಯೋನ್ಯ ಅವಿನಾಭಾವ ಸಂಬಂಧವನ್ನು ಕಲ್ಪಿಸಿಕೊಟ್ಟ ನಮ್ಮ ಹಿರಿಯರಿಗೆ ಎಷ್ಟು ನಮಿಸಿದರೂ ಸಾಲದು. ಇಂದು ಎತ್ತುಗಳ ಜಾಗದಲ್ಲಿ ಟ್ರಾಕ್ಟರ್ ಬಂದು ಕೆಲಸವನ್ನು ಸುಗಮಗೊಳಿಸಿದ್ದರೂ ಅದರಿಂದ ಆಗುವ ಪರಿಣಾಮಕ್ಕಿಂತ ಹಾನಿಕಾರಕವೇ ಹೆಚ್ಚು. ಟ್ರಾಕ್ಟರ್ ಸಗಣಿ ಹಾಕೋದಿಲ್ಲ. ಎತ್ತು ಹೊಗೆ ಉಗುಳುವುದಿಲ್ಲ ಎನ್ನುವುದು ನಮ್ಮ ಇಂದಿನ ಕೃಷಿ ಚಟುವಟಿಕೆಗಳಿಗೆ ಎಷ್ಟು ಮಾರ್ಮಿಕವಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ