ಅವನೊಬ್ಬ ಅಸಾಧಾರಣ ಹುಡುಗನಾಗಿದ್ದ. ಓದಿನಲ್ಲಂತೂ ಸದಾಕಾಲವೂ ಚುರುಕು. ಗಣಿತ ಮತ್ತು ವಿಜ್ಞಾನದಲ್ಲಂತೂ ಸದಾಕಾಲವೂ 100% ಅಂಕಗಳನ್ನು ಗಳಿಸುತ್ತಿದ್ದ ಕಾರಣ ಸಹಜವಾಗಿ ಐಐಟಿ ಮದ್ರಾಸ್‌ಗೆ ಆಯ್ಕೆಯಾಗಿದ್ದಲ್ಲದೇ ಅಲ್ಲೂ ಸಹಾ ಅತ್ಯುತ್ತಮ ಅಂಕಗಳನ್ನು ಗಳಿಸಿ ಉನ್ನತ ವಿದ್ಯಾಭ್ಯಾಸಕ್ಕೆಂದು ಅಮೇರಿಕಾದ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯ ಒಂದರಲ್ಲಿ ಎಂಬಿಎ ಪದವಿಯ ನಂತರ ಆರಂಕಿಯ ಸಂಬಳದ ಉದ್ಯೋಗವನ್ನು ಗಿಟ್ಟಿಸಿ ಅಲ್ಲಿಯೇ ನೆಲೆಸಿದ.
ಕೆಲವು ವರ್ಷಗಳ ನಂತರ ಕರ್ನಾಟಕ್ಕೆ ಬಂದು, ಮನೆಯವರು ನೋಡಿದ ಕನ್ನಡತಿಯನ್ನೇ ವಿವಾಹವಾಗಿ ಅಮೇರಿಕಾದಲ್ಲಿ 5 ಕೊಠಡಿಗಳು ಇರುವಂತಹ ದೊಡ್ಡದಾದ ಮನೆ ಮತ್ತು ಐಷಾರಾಮಿ ಕಾರುಗಳನ್ನು ಕಂತಿಯನಲ್ಲಿ ಖರೀದಿಸಿದ್ದ. ಅವರಿಬ್ಬರ ಸುಖ ದಾಂಪತ್ಯದ ಕುರುಹಾಗಿ ಆರತಿಗೊಬ್ಬಳು ಮಗಳು ಮತ್ತು ಕೀರ್ತಿಗೊಬ್ಬ ಮಗನೊಂದಿಗೆ ಅತ್ಯಂತ ಆರಾಮಾಗಿ ಜೀವಿಸತೊಡಗಿದ. ತಮ್ಮ ಮಗ ಅಮೇರಿಕಾದಲ್ಲಿ ಇದ್ದಾನೆಂದು ಆವರ ಪೋಷಕರು ಎಲ್ಲರ ಮುಂದೇ ಮಗನ ಬುದ್ಧಿ ಮತ್ತೆಯ ಬಗ್ಗೆ ಕೊಂಡಾಡಿಕೊಂಡಿದ್ದರೇ, ಉಳಿದವರು ತಮ್ಮ ಮಕ್ಕಳೂ ಅದೇ ರೀತಿ ಆಗಬೇಕೆಂದು ಇಚ್ಚೆ ಪಟ್ಟಿದ್ದರು.
ಆದರೆ ಇತ್ತೀಚೆಗೆ ಕೋವಿಡ್ ನಿಂದಾಗಿ ಇಡೀ ವಿಶ್ವವೇ ಲಾಕ್ಡೌನ್ ಆದಾಗ ಇದ್ದಕ್ಕಿದ್ದಂತೆಯೇ, ಅದೊಂದು ದಿನ ತನ್ನ ಹೆಂಡತಿ ಮತ್ತು ಮಕ್ಕಳನ್ನು ಗುಂಡಿಕ್ಕಿ ಕೊಂದಿದ್ದಲ್ಲದೇ ತಾನೂ ಸಹಾ ಆತ್ಮಹತ್ಯೆ ಮಾಡಿಕೊಂಡಿದ್ದು ಎಲ್ಲರಿಗೂ ಆಶ್ಚರ್ಯವನ್ನು ತರಿಸಿತ್ತು. ಅಂತಹ ಸುಂದರವಾದ ಕುಟುಂಬಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವಂತಹದ್ದೇನಾಗಿತ್ತು ಎಂದು ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಕ್ಲಿನಿಕಲ್ ಸೈಕಾಲಜಿ ಅವರ ಪ್ರಕರಣವನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಿದಾಗ ಅದು ಎಲ್ಲರಿಗೂ ಅಚ್ಚರಿಯನ್ನು ತರಿಸಿತ್ತು.
ಸಂಶೋಧಕರು ಆ ಯುವಕನ ಸ್ನೇಹಿತರು ಮತ್ತು ಕುಟುಂಬವನ್ನು ಭೇಟಿಯಾಗಿ ಆತನ ಆತ್ಮಹತ್ಯೆ ಹಿಂದಿರಬಹುದಾದ ಕಾರಣವನ್ನು ವಿಚಾರಿಸಿದಾಗ ತಿಳಿದ ಬಂದ ವಿಷಯವೇನೆಂದರೆ, ಕೋವಿಡ್ನಿಂದಾಗಿ ಅಮೆರಿಕದ ಕೆಲವು ಸಾಫ್ಟ್ ವೇರ್ ಕಂಪನಿಗಳು ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿ ಆತನನ್ನು ಕೆಲಸದಿಂದ ತೆಗೆದು ಹಾಕಿತ್ತು. ಬಹುತೇಕ ಕಂಪನಿಯ ಪರಿಸ್ಥಿತಿಯೂ ಇದಕ್ಕಿಂತಲೂ ಭಿನ್ನವಾಗಿರದ ಕಾರಣ ಸುಮಾರು ತಿಂಗಳುಗಳ ಕಾಲ ಆತನಿಗೆ ಕೆಲಸ ಸಿಗದೇ ಹೋದಾಗ, ಕೈಯಲ್ಲಿರುವ ಹಣವೆಲ್ಲಾ ಖರ್ಚಾಗಿ ಹೋಗಿ ಮನೆ, ಕಾರ್ ಮತ್ತು ಕ್ರೆಡಿಟ್ ಕಾರ್ಡ್ ಸಾಲ ಕಟ್ಟಲು ಕಷ್ಟವಾಗುತ್ತಿತ್ತು. ಆರಂಭದಲ್ಲಿ ಒಂದೆರಡು ಕೆಲಸದ ಅವಕಾಶಗಳು ದೊರೆತರೂ, ಆ ಕಂಪನಿಗಳು ಆತನಿಗೆ ಹಿಂದಿನಷ್ಟು ಸಂಬಳ ಕೊಡಲು ಸಾಧ್ಯವಿಲ್ಲ ಎಂದಾಗ ಅಂತಹ ಕೆಲಸಗಳಿಗೆ ಆತ ಸೇರಿಕೊಂಡಿರಲಿಲ್ಲ. ನಂತರ ಆತ ಎಂತಹ ಕೆಲಸವೇ ಆಗಲಿ ಎಷ್ಟೇ ಸಂಬಳವೇ ಆಗಲೀ ಕೆಲಸ ಸಿಕ್ಕರೆ ಸಾಕು ಎನ್ನುವ ಮನಸ್ಥಿತಿಗೆ ಬಂದಾಗ ಆತನಿಗೆ ಕೆಲಸವೇ ಸಿಗದೇ ಹೋದಾಗ ಮಾನಸಿಕ ಖಿನ್ನತೆಗೆ ಓಳಗಾಗಿ ಹೋದ. ಇದೇ ಸಮಯ್ದಲ್ಲಿ ಕಾರ್ ಮತ್ತು ಮನೆಯ ಕಂತನ್ನು ಕಟ್ಟಿಲ್ಲದ ಕಾರಣ ಎರಡನ್ನೂ ಮುಟ್ಟುಗೋಲು ಹಾಕಿಕೊಂಡಾಗ ಆಕಾಶವೇ ಕಳಚಿ ಬಿತ್ತು ಎಂದು ಕೊಂಡು ಆತ್ಮಹತ್ಯೆಯೇ ಅಂತಿಮ ಪರಿಹಾರ ಎಂದು ನಿರ್ಧರಿಸಿ, ಮೊದಲು ತನ್ನ ಹೆಂಡತಿ ನಂತರ ಮುದ್ದಾದ ಅಮಾಯಕ ಮಕ್ಕಳನ್ನು ಗುಂಡಿಕ್ಕಿ ಕೊಂದು ನಂತರ ಸ್ವತಃ ಗುಂಡನ್ನು ಹಾರಿಸಿಕೊಂಡು ಮೃತಪಟ್ಟಿದ್ದ.
ಆತ ಶೈಕ್ಷಣಿಕವಾಗಿ ನಿಜಕ್ಕೂ ಅಪ್ರತಿಮನಿದ್ದರೂ, ಪರಿಸ್ಥಿತಿಯ ವೈಫಲ್ಯಗಳನ್ನು ನಿಭಾಯಿಸಲು ಅವನಿಗೆ ತಿಳಿದಿರಲಿಲ್ಲ. ಶಿಕ್ಷಣ ಪದ್ದತಿಯಲ್ಲಿಯೂ ಸಹಾ ಆತನಿಗೆ ಜೀವನದ ಕಲೆಯ ಬಗ್ಗೆ ಯಾವುದೇ ತರಬೇತಿ ನೀಡಲಾಗಿರಲಿಲ್ಲ. ಕೇವಲ ಹೇಳಿಕೊಟ್ಟಿದ್ದನ್ನು ಉರು ಹೊಡೆದದ್ದನ್ನು ಪರೀಕ್ಶೆಯಲ್ಲಿ ಕಕ್ಕಿ ಅದರಿಂದ ಉತ್ತಮ ಅಂಕಗಳನ್ನು ಗಳಿಸಿ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಐದಾರಂಕಿಯ ಸಂಬಳದ ಕೆಲವನ್ನು ಗಿಟ್ಟಿಸಿಕೊಂಡು ಕಂತಿನಲ್ಲಿ ಕಾರು ಬಂಗಲೆಗಳನ್ನು ಕೊಂಡು ಕೊಂಡು ವಾರಾಂತ್ಯದಲ್ಲಿ ಮೋಜು ಮಸ್ತಿ ಮಾಡುವುದೇ ಜೀವನ ಎಂದು ಕೊಂಡಿದ್ದ ಕಾರಣ ಒಂದು ಸುಂದರವಾದ ಕುಟುಂಬ ನಾಶವಾಗಬೇಕಾಯಿತು.
ಹಾಗಾದರೇ ಇಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದಾಗಿತ್ತು ಎಂದು ಯೋಚಿಸಿದಾಗ ತಿಳಿದು ಬಂದ ಅಂಶಗಳೆಂದರೆ,
- ಪ್ರತಿದಿನ ಮುಂಜಾನೆ ಉದಯಿಸುವ ಸೂರ್ಯ, ಮಧ್ಯಾಹ್ನದ ವೇಳೆ ಅತ್ಯಂತ ಪ್ರಕಾಶಮಾನವಾಗಿ ಪ್ರಜ್ವಲಿಸಿ, ಸಂಜೆಯ ಹೊತ್ತಿಗೆ ನಿಧಾನವಾಗಿ ಮುಳುಗುವಂತೆಯೇ ನಮ್ಮ ಜೀವನ ಎಂಬುದರ ಪರಿವೆ ಎಲ್ಲರಿಗೂ ಇರಬೇಕು. ಜೀವನದಲ್ಲಿ ಎಷ್ಟು ಕ್ಷಿಪ್ರಗತಿಯಲ್ಲಿ ಗಳಿಸುತ್ತೇವೆಯೋ, ಅದೇ ವೇಗದಲ್ಲಿಯೇ ಅಥವಾ ಅದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಕಳೆದುಕೊಳ್ಳುತ್ತೇವೆ ಎಂಬ ಪರಿಜ್ಞಾನ ನಮಗಿರಬೇಕು. ಜಗತ್ತಿನ ಆರ್ಥಿಕ ಪರಿಸ್ಥಿತಿ ಯಾವಾಗಲೂ ಒಂದೇ ರೀತಿಯಾಗಿರದೇ ಅದು ಏಳು ಬೀಳುಗಳನ್ನುಕಾಣುತ್ತಲೇ ಇರುತ್ತದೆ ಅದನ್ನು ಎದುರಿಸುವಂತಹ ಮಾನಸಿಕ ಧೈರ್ಯವನ್ನು ಹೊಂದಿರುವುದು ಅತ್ಯಾವಶ್ಯಕ.
- ಯಶಸ್ಸನ್ನು ಅನುಭವಿಸಲು ಹೇಗೆ ಸಿದ್ಧರಿರುತ್ತೇವೆಯೋ ಹಾಗೆಯೇ, ವೈಫಲ್ಯಗಳನ್ನು ನಿಭಾಯಿಸಲು ಸೂಕ್ತವಾದ ರೀತಿಯಲ್ಲಿ ತಯಾರಾಗಿರುವುದೋ ಇಲ್ಲವೇ ತರಬೇತಿ ಪಡೆದಿರುವುದು ಉತ್ತಮ ಯಶಸ್ಸಿನ ಭಾಗವಾಗಿದೆ.
- ಸಾಲ ಮಾಡಿಯಾದರೂ ತುಪ್ಪಾ ತಿನ್ನು ಎನ್ನುವ ನಮ್ಮ ಹಿಂದಿನ ನಾಣ್ಣುಡಿ ಉಪಯೋಗಕ್ಕೆ ಬಾರದೇ ಕೇವಲ ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವ ಮಾತು ವಾಸ್ತವಕ್ಕೆ ಹತ್ತಿರವಾಗಿದೆ.
ಹಾಗಾಗಿ ಪ್ರತೀ ಪೋಷಕರೂ ತಮ್ಮ ಮಕ್ಕಳಿಗೆ ಉರು ಹೊಡೆದು ಅಂಕಗಳಿಸುವುದೇ ಜೀವನದ ಧ್ಯೇಯ ಎನ್ನುವುದನ್ನು ಕಲಿಸದೇ, ಇಂತಹ ಸಂಧರ್ಭಗಳಲ್ಲಿ ಬದುಕಿನ ವೈಫಲ್ಯಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನೂ ತಮ್ಮ ಮಕ್ಕಳಿಗೆ ಕಲಿಸಿದಾಗಲೇ ಜೀವನದ ಮೌಲ್ಯಗಳು ಹೆಚ್ಚುತ್ತವೆ. - ಉನ್ನತ ಮಟ್ಟದ ವಿಜ್ಞಾನ ಮತ್ತು ಗಣಿತವನ್ನು ಕಲಿಯುವಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಸಹಾಯಕಾರಿಯಾದರೂ, ಅದರ ಜೊತೆಗೆ ಸಾಮಾಜಿಕ ಪರಿಜ್ಞಾನ ಮತ್ತು ಇತಿಹಾಸವನ್ನು ಅಭ್ಯಾಸ ಮಾಡುವುದರಿಂದ ಪ್ರತಿ ಸಮಸ್ಯೆಗಳನ್ನು ಹೇಗೆ ನಿಭಾಯಿಸಬಹುದು ಮತ್ತು ನಮ್ಮ ಹಿಂದಿನವರು ಅದನ್ನು ಹೇಗೆ ನಿಭಾಯಿಸಿದ್ದರು ಎಂಬುದು ತಿಳಿಯುತ್ತದೆ.
- ಕೇವಲ ಹಣಕ್ಕಾಗಿ ಕೆಲಸ ಮಾಡುವುದನ್ನು ಕಲಿಸುವ ಬದಲು ಹಣದ ಮೌಲ್ಯ ಮತ್ತು ಕಡಿಮೆ ಹಣವಿದ್ದಾಗಲೂ ಹೇಗೆ ಜೀವನವನ್ನು ನಿಭಾಯಿಸಬಹುದು ಎಂಬುದನ್ನು ಕಲಿಸುವುದು ಇಂದಿನ್ಗ ಪರಿಸ್ಥಿತಿಗೆ ಅತ್ಯುತ್ತಮವಾಗಿದೆ.
ಇದನ್ನೇ ನಮ್ಮ ಹಿಂದಿನವರು ಪಂಚತಂತ್ರ ಕಥೆಗಳು ಮತ್ತು ಪುರಾಣ ಪುರುಷರ ಜೀವನ ಚರಿತ್ರೆಯ ಮೂಲಕ ಸೂಕ್ಷ್ಮವಾಗಿ ತಿಳಿಸಿಕೊಟ್ಟಿದ್ದರು.
- ನಮ್ಮ ಮನೆಯಲ್ಲಿ ಅಮ್ಮಂದಿರು ತಮಗೆ ಸಿಕ್ಕ ಹಣದಲ್ಲಿ ಅಷ್ಟೋ ಇಷ್ಟು ಹಣವನ್ನು ಸಾಸಿವೇ, ಜೀರಿಗೆ ಡಭ್ಬದಲ್ಲಿ ಜತನದಿಂದ ಎತ್ತಿಟ್ಟು ಅವಶ್ಯಕತೆ ಬಂದಾಗ ಉಪಯೋಗಿಸಿಕೊಳ್ಳುತ್ತಿದ್ದರು.
- ಕೈಯ್ಯಲ್ಲಿ ಹಣವಿದ್ದಾಗ ಮಜಾ ಉಡಾಯಿಸದೇ, ಭೂಮಿ, ಬೆಳ್ಖಿ , ಬಂಗಾರಗಳಂತಹ ಸ್ಥಿರಾಸ್ತಿಗಳ ಮೇಲೆ ವಿನಿಯೋಗಿಸಿ ಅವಶ್ಯಕತೆ ಇದ್ದಾಗ ಅದನ್ನು ಮಾರಿಯಾದರೂ ಜೀವಿಸಬಹುದು ಎನ್ನುವುದನ್ನು ತೋರಿಸಿ ಕೊಟ್ಟಿದ್ದರು.
ದುರಾದೃಷ್ಟವಷಾತ್ ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಇಂದಿನ ಯುವಜನಾಂಗಕ್ಕೆ ನಮ್ಮ ಹಿರಿಯರ ಹಾಕಿಕೊಟ್ಟ ಜೀವನ ಶೈಲಿಯು ಒಗ್ಗಿ ಬರದೇ, ಪಾಶ್ಚಿಮಾತ್ಯದ ದಿಢೀರ್ ಜೀವನಕ್ಕೆ ಮಾರು ಹೋಗಿರುವ ಕಾರಣದಿಂದಾಗಿಯೇ ಈ ರೀತಿಯ ಅವಘಡಗಳು ಸಂಭವಿಸುತ್ತಿವೆ ಎಂದರೂ ತಪ್ಪಾಗಲಾರದು.
ಹಿಂದೆಲ್ಲಾ 8 ವರ್ಷಗಳ ವರೆವಿಗೂ ಅಮ್ಮನ ಸೆರಗಿನಂಚಿನಲ್ಲಿಯೇ ಹಾಲು ಕುಡಿಯುತ್ತಿದ ಮಗು ನಂತರ 16 ವರ್ಷಗಳ ಕಾಲ ವಿಧ್ಯಾಭ್ಯಾಸ ಪಡೆದು ಉದ್ಯೋಗವನ್ನು ಗಿಟ್ಟಿಸಿ ಒಂದೆರಡು ವರ್ಷಗಳ ನಂತರ ಮದುವೆಯಾಗಿ ಮಕ್ಕಳಾಗಿ ಮಕ್ಕಳ ವಿದ್ಯಾಭ್ಯಾಸದ ಜೊತೆ ಜೊತೆಯಲ್ಲಿಯೇ ಮನೆ ಮಠವನ್ನು ಕಟ್ಟಿಸಿಕೊಂಡು 50-60ರ ಆಸುಪಾಸಿನಲ್ಲಿ ಮಕ್ಕಳ ಮದುವೆ ಮಾಡಿ ನಿವೃತ್ತರಾಗ್ಗಿ ನೆಮ್ಮಯಿಂದ ಮೊಮ್ಮಕ್ಕಳೊಂದಿಗೆ ರಾಮಾ ಕೃಷ್ಣಾ ಗೋವಿಂದಾ ಎಂದು ಜೀವನ ನಡೆಸುತ್ತಿದ್ದರು.
ಆದರೆ ಇಂದು ಎಲ್ಲವೂ ದಿಢೀರ್ ಪ್ರಪಂಚ. ಇವತ್ತು ಹಾಕಿದ ಬೀಜ ಮಾರನೇ ದಿನವೇ ಮೊಳಕೆಯೊಡೆದು ಒಂದು ವಾರದೊಳಗೇ ಫಲ ನೀಡಬೇಕೆಂದು ಬಯಸುತ್ತಿರುವುದೇ ಅಚ್ಚರಿ ಮೂಡಿಸುತ್ತದೆ ಇಂದು 25-30 ವರ್ಷಗಳಿಗೇ ಉನ್ನತ ಮಟ್ಟದ ಹುದ್ದೆಯನ್ನು ಪಡೆದು ಲಕ್ಷಾಂತರ ಹಣವನ್ನು ಸಂಪಾದಿಸಿ ಕೆಲಸದ ಒತ್ತಡಗಳನ್ನು ನಿಭಾಯಿಸಲಗದೇ30ಕ್ಕೆಲ್ಲಾ ತಲೆಯ ಕೂದಲೆಲ್ಲಾ ಉದುರಿಕೊಂಡು ಅಧಿಕ ರಕ್ತದೊತ್ತಡ, ಮದುಮೇಹ ಮತ್ತು ಹೃದಯಸಂಬಂಧಿತ ಖಾಯಿಲೆಗಳಿಗೆ ತುತ್ತಾಗಿ ೪೦ಕ್ಕೆಲ್ಲಾ ಇಹಲೋಕ ತ್ಯಜಿಸುವಷ್ಟರ ಮಟ್ಟಿಗೆ ಬಂದಿರುವುದು ಇಜಕ್ಕೂ ದುಃಖಕರವಾಗಿದೆ.
ಯಶಸ್ಸು ನಮಗೆ ಕ್ಷಣಿಕ ಸುಖಃವನ್ನು ಕೊಡುತ್ತದಾದರೂ, ವೈಫಲ್ಯವು ಬದುಕಿನ ಪಾಠವನ್ನು ಕಲಿಸುತ್ತದೆ. ಹಾಗಾಗಿ ಯಶಸ್ಸು ಗಳಿಸಿದಾಗ ಹಿಗ್ಗದೇ, ವೈಫಲ್ಯ ಬಂದಾಗ ಕುಗ್ಗದ ರೀತಿಯಲ್ಲಿ ಸಮಚಿತ್ತದಲ್ಲಿ ಜೀವನ ನಡೆಸುವತ್ತ ಹರಿಸೋಣ ನಮ್ಮ ಚಿತ್ತ
ಏನಂತೀರೀ?
ನಿಮ್ಮವನೇ ಉಮಾಸುತ
ಸಾಮಾಜಿಕ ಜಾಲತಾಣದಲ್ಲಿ ಓದಿದ ಆಂಗ್ಲ ಸಂದೇಶವೊಂದರ ಭಾವಾನುವಾದ
Thanks for an educative and inspiring post. Thoughtful. Facts are true.
LikeLiked by 1 person
ಧನ್ಯೋಸ್ಮಿ
LikeLike