ಪ್ರಾರ್ಥನೆ ಎಂದರೆ ಏನು? ಎಂದು ಪ್ರಂಪಚದ ಯಾವುದೇ ಮೂಲೆಗೆ ಹೋಗಿ ಯಾವುದೇ ಧರ್ಮದ ಸಣ್ಣ ಮಗುವನ್ನೂ ಕೇಳಿದರೂ ಥಟ್ ಅಂತಾ ಹೇಳುವುದೇ, ಭಕ್ತಿಯಿಂದ ಎರಡೂ ಕಣ್ಗಳನ್ನು ಮುಚ್ಚಿಕೊಂಡು ಎರಡೂ ಕೈಗಳನ್ನು ನಮಸ್ಕಾರ ಸ್ಥಿತಿಯಲ್ಲಿಯೋ ಇಲ್ಲವೇ ಬೇಡುವ ಸ್ಥಿತಿಯಲ್ಲಿಯೋ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆ ಭಗವಂತನಲ್ಲಿ ಕೇಳಿಕೊಳ್ಳುವುದು ಎನ್ನುತ್ತಾರೆ.
ಹೌದು ನಿಜ. ಆ ಮಕ್ಕಳು ಹೇಳಿದ್ದರಲ್ಲಿ ಸತ್ಯವಿದೆಯಾದರು ಅದೇ ಸಂಪೂರ್ಣ ಸತ್ಯವಲ್ಲ. ಪ್ರಾರ್ಥನೆ ಎನ್ನುವುದು ಕೇವಲ ಸ್ವಹಿತಾಸಕ್ತಿಗಾಗಿಯೋ ಇಲ್ಲವೇ ಮತ್ತೊಬ್ಬರ ಹಿತಾಸ್ತಕ್ತಿಗಾಗಿಯೋ ಭಗವಂತನಲ್ಲಿ ಬೇಡಿಕೊಳ್ಳುವುದರ ಹೊರತಾಗಿಯೂ ಇದೆ. ಹಾಗಾಗಿ ಅಂತಹ ವಿಷಯಗಳ ಬಗ್ಗೆ ಸ್ವಲ್ಪ ಗಮನ ಹರಿಸೋಣ.
ಮೇಲೆ ಹೇಳಿದ ಪ್ರಕ್ರಿಯೆಯಲ್ಲಿ, ದೇವರಿಗೆ ಸಂಪೂರ್ಣವಾಗಿ ಶರಣಾಗಿ ತನಗೆ ಬೇಕಾದದ್ದನ್ನು ಕೋರಿ ಕೊಂಡಾಗ, ಆತನ ಚಿಂತೆಯು ಕಡಿಮೆಯಾಗಿ, ಮನಸ್ಸು ಹಗುರವಾಗಿ, ಆತನಿಗೆ ಶಕ್ತಿ ಮತ್ತು ಚೈತನ್ಯಗಳು ಲಭಿಸಿ ತನ್ನ ಕೆಲಸವನ್ನು ಮತ್ತಷ್ಟೂ ಶ್ರಧ್ಧೆಯಿಂದ ಸಂಪೂರ್ಣಗೊಳಿಸಲು ಸಹಾಯವಾಗುತ್ತದೆ. ತನ್ನಿಂದ ಅಸಾಧ್ಯವೆನಿಸಿದ ಕೆಲಸವು ದೇವರಲ್ಲಿ ಪ್ರಾರ್ಥನೆ ಮಾಡಿದ್ದರಿಂದಲೇ ಸುಲಭವಾಗಿ ನಿರ್ವಿಘ್ನವಾಗಿ ನಡೆಯಿತು ಎನ್ನುವ ಭಾವನೆ ಆತನಲ್ಲಿ ಮೂಡುವುದರಿಂದ ದೇವರ ಮೇಲಿನ ಆತನ ನಂಬಿಕೆ ಮತ್ತು ಶ್ರದ್ಧೆಯು ಮತ್ತಷ್ಟು ಹೆಚ್ಚಾಗುತ್ತದೆ.
ಹಾಗಾದರೇ ಪ್ರಾರ್ಥನೆ ಎಂದರೆ, ದೇವರ ಮುಂದೆ ಕೈಗಳನ್ನು ಮುಗಿದೋ, ಇಲ್ಲವೇ ಮಂಡಿಯೂರಿಯೋ ಇಲ್ಲವೇ ದೀರ್ಘದಂಡ ನಮಸ್ಕಾರಗಳನ್ನು ಹಾಕಿ ಬಿಟ್ಟಲ್ಲಿ ತಾನು ಇಚ್ಚೆಪಟ್ಟ ಎಲ್ಲಾ ಕೆಲಸಗಳು ಆಗಿ ಬಿಡುತ್ತದೆಯೋ ಎಂದು ಕೇಳಿದರೆ, ಇಲ್ಲಾ ಹಾಗೆ ಆಗುವುದಿಲ್ಲ ಎನ್ನುವುದೇ ಉತ್ತರವಾಗಿದೆ.
ಪ್ರಾರ್ಥನೆ ಎನ್ನುವುದು ನಮ್ಮ ಮನಸ್ಸನ್ನು ಏಕಾಗ್ರತೆಯತ್ತ ಕೇಂದ್ರೀಕರಿಸುವ ಸನ್ಮಾರ್ಗವಾಗಿದೆ. ಆದ್ದರಿಂದಲೇ ಯಾವುದೇ ಕೆಲಸಗಳನ್ನು ಮಾಡುವಾಗ ಮುಂದೆ ದಿಟ್ಟವಾದ ಗುರಿ ಇರಬೇಕು ಮತ್ತು ಹಿಂದೆ ಸ್ಪಷ್ಟವಾದ ನಿಲುವು ಹೊಂದಿರುವ ಗುರು ಇರಬೇಕು ಎನ್ನಲಾಗುತ್ತದೆ. ಯಾವುದೇ ಒಂದು ಕೆಲದ ಸಣ್ಣದಿರಲೀ ಅಥವಾ ದೊಡ್ಡದಾಗಿರಲೀ ಪ್ರತಿಯೊಂದು ಕೆಲಸವನ್ನು ಮಾಡುವಾಗಲೂ ಅದಕ್ಕೊಂದು ಪೂರ್ವ ಸಿದ್ಧತೆ ಮಾಡ ಬೇಕಾಗುತ್ತದೆ, ಮಾಡಬೇಕಾದ ಕೆಲಸದ ಸಂಪೂರ್ಣ ವಿವರಗಳನ್ನು ತಿಳಿದುಕೊಂಡು ಅದರ ಸಾಧಕ ಬಾಧಕಗಳನ್ನು ವಿವರವಾಗಿ ಚರ್ಚಿಸಿ ನಂತರ ಯೋಜನೆಯನ್ನು ರೂಪಿಸಿ ಆ ಯೋಜನೆಗಳನ್ನು ಕಾರ್ಯಸಾಧು ಮಾಡಬಲ್ಲ ಸಾಮರ್ಥ್ಯ ಹೊಂದಿರುವವರನ್ನು ಗುರುತಿಸಿ ಅವರ ಸಹಾಯದಿಂದ ಕೆಲಸವನ್ನು ಸುಲಭವಾಗಿ ಮಾಡಬಹುದಾಗಿದೆ.
ಇದನ್ನು ಸರಳವಾಗಿ ಹೇಳ ಬೇಕೆಂದರೆ, ಶಿಕ್ಷಣ ಪಡೆದ ನಂತರ ತಾವು ಎಷ್ಟು ಕಲಿತಿದ್ದೇವೆ ಎಂಬುದನ್ನು ಅರಿತುಕೊಳ್ಳುವ ಸಲುವಾಗಿ ಅಂತಿಮವಾಗಿ ಪರೀಕ್ಷೆ ನಡೆಸಲಾಗುತ್ತದೆ, ಅದಕ್ಕೆ100 ಅಂಕಗಳನ್ನು ನಿಗಧಿ ಪಡಿಸಿ 3 ಗಂಟೆಗಳ ಕಾಲಾವಕಾಶ ಕೊಟ್ಟು ಉತ್ತರವನ್ನು ಬರೆಯಲು ತಿಳಿಸಲಾಗುತ್ತದೆ. ಇಲ್ಲಿ ಪರೀಕ್ಷೆಯ ಸಮಯ ಕೇವಲ 3 ಗಂಟೆಗಳು ಇದ್ದರೂ ಅದಕ್ಕೆ ಪೂರ್ವ ಸಿದ್ಧತೆಯಾಗಿ ಹಲವಾರು ಗಂಟೆಗಳ ಕಾಲ ನಿರಂತರವಾಗಿ ಕಠಿಣತರವಾದ ಅಥ್ಯಯನ ಮತ್ತು ಅಭ್ಯಾಸ ಮಾಡಲಾಗಿರುತ್ತದೆ. ಹಾಗೆ ಪೂರ್ವ ತಯಾರಿ ಮಾಡಿಕೊಂಡಿದ್ದರೆ ಪರೀಕ್ಷೆಯನ್ನು ಬರೆಯಲು ಸುಲಭವಾಗುತ್ತದೆ. ಪ್ರಶ್ನೆ ಪತ್ರಿಕೆ ಕೈಗೆ ಬಂದ ತಕ್ಷಣವೇ ಉತ್ತರಗಳನ್ನು ಬರೆಯಲು ಆರಂಭಿಸಬಹುದಾದರೂ, ಪ್ರಶ್ನೆಪತ್ರಿಕೆ ಕೈಗೆ ಬಂದ ಕೂಡಲೇ ಒಂದು 5-10 ನಿಮಿಷಗಳ ಕಾಲ ಇಡೀ ಪ್ರಶ್ನೆ ಪತ್ರಿಕೆಯನ್ನು ಸಂಪೂರ್ಣವಾಗಿ ಓದಿ ಅದರಲ್ಲಿ ಯಾವ ಪ್ರಶ್ನೆಗೆ ಯಾವ ರೀತಿಯಾಗಿ ಉತ್ತರ ಬರೆಯಬೇಕು? ಎಷ್ಟು ಬರೆದರೆ ಸಂಪೂರ್ಣ ಅಂಕಗಳನ್ನು ಗಳಿಸಬಹುದು? ಪ್ರತೀ ಪ್ರಶ್ನೆಗಳನ್ನು ಎಷ್ಟು ಸಮಯದಲ್ಲಿ ಮುಗಿಸಬೇಕು? ಎಂಬೆಲ್ಲಾ ವಿಷಯಗಳನ್ನೂ ಮನಸ್ಸಿನಲ್ಲಿಯೇ ತೀರ್ಮಾನಿಸಿ ನಂತರ ಉತ್ತರಗಳನ್ನು ಬರೆಯಲು ಆರಂಭಿಸಿದಲ್ಲಿ ಎಲ್ಲವೂ ಸುಗಮವಾಗಿ ಮುಗಿದು ಉತ್ತಮ ಅಂಕಗಳನ್ನು ಗಳಿಸಬಹುದಾಗಿದೆ. ಈ ರೀತಿಯಾಗಿ ಕೆಲಸವನ್ನು ಆರಂಭಿಸುವ ಮೊದಲು ಮನಸ್ಸನ್ನು ಕೇಂದ್ರೀಕರಿಸುವ ಪ್ರಕ್ರಿಯೆಯನ್ನೇ ಪ್ರಾರ್ಥನೆ ಎನ್ನಬಹುದಾಗಿದೆ. .
ಈ ರೀತಿಯ ಪ್ರಾರ್ಥನೆ ಮಾಡದೇ, ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕ ಕೂಡಲೇ, ಏಕಾ ಏಕೀ ಉತ್ತರಗಳನ್ನು ಬರೆಯಲು ಹೋದಲ್ಲಿ ಎಲ್ಲವೂ ಅಯೋಮಯವಾಗಿ ಸಮಯ ವ್ಯರ್ಥವಾಗಿ ಸಂಪೂರ್ಣವಾದ ಪ್ರಶ್ನೆಗಳಿಗೆ ಉತ್ತರಿಸಲಾಗದೇ, ಅಂತಿಮವಾಗಿ ಪರಿತಪಿಸುವಂತಹ ಸಂದರ್ಭ ಒದಗಿ ಬರುತ್ತದೆ.
ಹಾಗಾದರೇ ಪ್ರಾರ್ಥನೆಯನ್ನು ಎಲ್ಲಿ? ಹೇಗೆ ಮತ್ತು ಯಾವಾಗ ಮಾಡಬೇಕು? ಎನ್ನುವ ಜಿಜ್ಣಾಸೆ ಎಲ್ಲರಲ್ಲೂ ಮೂಡುವುದು ಸಹಜ. ನಿಜ ಹೇಳಬೇಕೆಂದರೆ ಪ್ರಾರ್ಥನೆ ಮಾಡಲು ನಿರ್ಥಿಷ್ಟವಾದ ಸ್ಥಳ, ಸಮಯ ಮತ್ತು ನಿಯಮಗಳೇಣು ಇಲ್ಲ. ಅವರವರ ಭಾವಕ್ಕೆ ಅವರವರ ಭಕುತಿ ಎನ್ನುವಂತೆ ತಮಗೆ ಅನುಕೂಲಕರವಾದ ಸಮಯಯದಲ್ಲಿ ಅನುಕೂಲಕರವಾದ ಸ್ಥಳದಲ್ಲಿ ತಮ್ಮ ತಿಳಿದಂತೆ ಪ್ರಾರ್ಥಿಸಬಹುದಾಗಿದೆ. ಇದಕ್ಕೆ ಪೂರಕವಾದ ಒಂದು ಸುಂದರವಾದ ದೃಷ್ಟಾಂತವನ್ನು ಗಮನಿಸೋಣ.
ನಮಗೆಲ್ಲರಿಗೂ ತಿಳಿದಿರುವಂತೆ ಹನುಮಂತ ಪ್ರಭು ಶ್ರೀರಾಮನ ಪರಮಭಕ್ತ. ಎಲ್ಲಿ ರಾಮನೋ ಅಲ್ಲಿ ಹನುಮನು. ಎಲ್ಲಿ ಹನುಮನೋ ಅಲ್ಲಿ ರಾಮನೂ.. ರಾಮನ ಉಸಿರೇ ಹನುಮ. ಹನುಮನ ಪ್ರಾಣವೇ ರಾಮಾ,, ಎಂಬ ಗೀತೆಯನ್ನೂ ನಾವೆಲ್ಲರೂ ಕೇಳಿಯೇ ಇರುತ್ತೇವೆ. ಹನುಮನ ಎದೆಯನ್ನು ಸೀಳಿದರೆ ಅಲ್ಲಿ ಸೀತಾ ಮಾತೆ ಮತ್ತು ಲಕ್ಷ್ಮಣರಾದಿಯಾಗಿ ಪ್ರಭು ಶ್ರೀರಾಮಚಂದ್ರರನ್ನೇ ಕಾಣುವ ಚಿತ್ರವನ್ನು ನಾವೆಲ್ಲಾ ನೋಡಿಯೇ ಇರುತ್ತೇವೆ. ಅಂತಹ ಹನುಮಂತ ಅದೊಮ್ಮೆ ರಾಮಚಂದ್ರನನ್ನು ಕಾಣಲು ಹೋದಾಗ, ರಾಮನ ಹಣೆಯಲ್ಲಿ ಗಾಯವಾಗಿ ರಕ್ತ ಸೋರುತ್ತಿರುವುದನ್ನು ಗಮನಿಸಿ, ಆಂಜನೇಯನ ರಕ್ತ ಕುದ್ದು ಹೋಗುತ್ತದೆ. ಅರೇ ಇದೇನಿದು ಗಾಯ? ಹೇಗಾಯಿತು ಈ ಗಾಯ? ಯಾರು ಮಾಡಿದ್ದು ಈ ಗಾಯ? ಈ ಗಾಯ ಮಾಡಿದವರನ್ನು ನಾನು ಸುಮ್ಮನೇ ಬಿಡುವುದಿಲ್ಲ ಅವನ ಹುಟ್ಟು ಅಡಗಿಸಿ ಬಿಡುತ್ತೇನೆ ಎಂದು ಆಂಜನೇಯ ಅಬ್ಬರಿಸಿದಾಗ, ನಗುನಗುತ್ತಲೇ ಸಮಾಧಾನ ಪಡಿಸಿದ ರಾಮ, ಈ ಕುಕೃತ್ಯ ಮಾಡಿದ್ದು ನೀನು. ನೀನು ನನ್ನ ತಲೆಯ ಮೇಲೆ ನೀನು ಬಲವಾಗಿ ಗುದ್ದಿದ ಕಾರಣದಿಂದಾಗಿಯೇ ಈ ಪರಿಯಾಗಿ ಪೆಟ್ಟಾಗಿದೆ.ಎಂದು ಹೇಳಿದಾಗ ಹನುಮಂತನಿಗೆ ತನ್ನಿಂದ ಇಂತಹ ಅಪಚಾರ ಆಗಲು ಹೇಗೆ ತಾನೇ ಸಾಧ್ಯ? ಎಂದು ತಲೆ ಕೆಡಸಿ ಕೊಳ್ಳುತ್ತಾನೆ
ಸ್ವಲ್ಪ ಹೊತ್ತು ಯೋಚಿಸಿದ ನಂತರ ಆತನ ಅರಿವಿಗೆ ಬಂದ ಸಂಗತಿಯೇನೆಂದರೆ, ರಾಮನ ಭಕ್ತನೊಬ್ಬ ಬೆಳಗಿನ ಹೊತ್ತು ಊರಿನ ಹೊಲದ ಬದಿಯಲ್ಲಿ ಬಹಿರ್ದಶೆಗೆ ಹೋಗುತ್ತಿದ್ದಾಗ ಸುಮ್ಮನೆ ಕಾಲಹರಣ ಮಾಡುವುದು ಏಕೆಂದು ಯೋಚಿಸಿ ರಾಮ ರಾಮ ಜಯ ಜಯ ರಾಮ. ರಾಮ ರಾಮ ಸೀತಾ ರಾಮ ಎಂದು ರಾಮ ಧ್ಯಾನದಲ್ಲಿ ಮುಳುಗಿರುತ್ತಾನೆ. ಅದೇ ಮಾರ್ಗದಲ್ಲಿ ಅದಾವುದೋ ಕೆಲಸಕ್ಕೆಂದು ಹೋಗುತ್ತಿದ್ದ ಹನುಮಂತ, ರಾಮ ನಾಮ ಜಪವನ್ನು ಕೇಳಿ ಸಂತೋಷಗೊಂಡು, ರಾಮ ನಾಮ ಸ್ಮರಿಸುತ್ತಿರುವವರನ್ನು ಕಾಣಲು ಅಲ್ಲಿಗೆ ಬಂದು ಆತ ಬಹಿರ್ದಶೆಗೆ ಹೋಗುತ್ತಿರುವ ಸಂಧರ್ಭದಲ್ಲಿ ರಾಮ ನಾಮ ಜಪಿಸುತ್ತಿರುವುದನ್ನು ಗಮನಿಸಿ ಕೋಪಗೊಂಡು ಆತನ ತಲೆಗೆ ಬಲವಾಗಿ ಗುದ್ದಿರುತ್ತಾನೆ. ಭಕ್ತರ ನೋವು ನಲಿವು ಎಲ್ಲವೂ ಭಗವಂತನದ್ದೇ ಆಗಿರುವ ಕಾರಣ, ಆತನಿಗೆ ಬಿದ್ದ ಪೆಟ್ಟು ರಾಮನಿಗೆ ತಾಗಿರುತ್ತದೆ.
ಹಾಗಾಗಿ ಪ್ರಾರ್ಥನೆ ಮಾಡಲು ಯಾವುದೇ ಸಮಯ, ಸ್ಥಳ, ಉಡುಗೆ ತೊಡಿಗೆ, ಯಾವುದೇ ರೀತಿ ರಿವಾಜುಗಳು ಇಲ್ಲದಿದ್ದರೂ, ಏಕಾಗ್ರತೆ ಬರಲು ಮತ್ತು ಮನಸ್ಸು ಬೇರೆ ಕಡೆ ಹರಿಯದಿರಲೆಂದು, ದೇವಾಲಯ ಅಥವಾ ಪ್ರಾರ್ಥನಾ ಮಂದಿರಗಳಲ್ಲಿ ಪ್ರಾರ್ಥಿಸುವುದು ಸೂಕ್ತವಾಗಿದೆ. ಅದೇ ರೀತಿ ಬೆಳಿಗ್ಗೆ ಎದ್ದ ತಕ್ಷಣ ದೇಹ ಮತ್ತು ಮನಸ್ಸು ಎರಡೂ ಸಹಾ ಹಗುರವಾಗಿರುವ ಕಾರಣ ಮುಂಜಾನೆ ಸೂರ್ಯೋದಯದ ಸಮಯದಲ್ಲಿ ಪ್ರಾರ್ಥನೆ ಮಾಡುವುದು ಉಚಿತವಾಗಿದೆ. ಅದೇ ರೀತಿ ದಿನವಿಡಿ ದುಡಿದು ದಣಿವಾಗಿರುವಾಗ ದಣಿದ ದೇಹವನ್ನು ಅನಾಯಾಸವಾಗಿ ನಿವಾರಿಸಿಕೊಳ್ಳಲು ದೇವರ ಪ್ರಾರ್ಥನೆ ಉತ್ತಮವಾದ ಪ್ರಕ್ರಿಯೆಯಾಗಿದೆ.
ಹಾಗಾದರೇ ಪ್ರಾರ್ಥನೆ ಎನ್ನುವುದು ಕೇವಲ ಸ್ವಾರ್ಥಕ್ಕೆ ಸೀಮಿತವೇ? ಎಂದರೆ, ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಲೋಕಾನಿ ಸನ್ಮಂಗಳಾನಿ ಭವಂತು ಎನ್ನುವಂತೆ ಈ ಪ್ರಾರ್ಥನೆ ಕೇವಲ ಸ್ವಾರ್ಥಕ್ಕಾಗಿ ಮೀಸಲಿಡದೇ ಪರೋಪಕಾರಾಯ ಇದಂ ಶರೀರಂ ಎನ್ನುವಂತೆ ನಮ್ಮೆಲ್ಲಾ ಬೇಡಿಕೆಗಳೂ ಲೋಕ ಕಲ್ಯಾಣಕ್ಕಾಗಿಯೇ ಮೀಸಲಿಡುವುದು ಉತ್ತಮವಾಗಿದೆ. ಭಗವಂತನ ಅನುಗ್ರಹದಿಂದ ಲೋಕಕಲ್ಯಾಣವಾದರೇ, ಅದೇ ಲೋಕದಲ್ಲಿಯೇ ಇರುವ ನಮಗೂ ಪರೋಕ್ಷವಾಗಿ ಕಲ್ಯಾಣವಾಗುತ್ತದೆಯಲ್ಲವೇ?
ಪ್ರಾರ್ಥನೆಯನ್ನು ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ ಮಾಡಬಹುದು ಎಂದು ಸಾರ್ವಜನಿಕ ಸ್ಥಳಗಳಲ್ಲಿ,ರಸ್ತೆಗಳಲ್ಲಿ, ಮತ್ತೊಬ್ಬರಿಗೆ ತೊಂದರೆ ಕೊಡುವಂತೆ ಅಬ್ಬರವಾಗಿ ಅರುಚಾಡುವುದು ಪ್ರಾರ್ಥನೆ ಎನಿಸಿಕೊಳ್ಳುದೇ ಗದ್ದಲ ಎನಿಸಿಕೊಳ್ಳುತ್ತದೆ. ಎನ್ನುವ ಪರಿಜ್ಞಾನವೂ ಇರಬೇಕು. ಭಗವಂತ ಸರ್ವಾಂತರ್ಯಾಮಿ ಆಗಿರುವ ಕಾರಣ ಭಕ್ತಿಯಿಂದ ಮನಸ್ಸಿನಲ್ಲಿಯೇ ಪಿಸುಗುಟ್ಟುವ ಹಾಗೆ ಪ್ರಾರ್ಥಿಸಿದರೂ ಭಗವಂತನಿಗೆ ತಲುಪಿ ನಮ್ಮ ಮುಂದೆ ಪ್ರತ್ಯಕ್ಷ ಆಗುತ್ತಾನೆ ಎನ್ನುವುದಕ್ಕೆ ಭಕ್ತ ಪ್ರಹ್ಲಾದ, ಶಬರಿ, ರಾಮಕೃಷ್ಣ ಪರಮಹಂಸರ ಉದಾಹರಣೆಗಳೇ ಸಾಕು.
ಹಾಗಾಗಿ ಯಾವುದೇ ಕೆಲಸವನ್ನು ಮಾಡುವಾಗ ಮನಸ್ಸನ್ನು ಕೇಂದ್ರೀಕರಿಸಿ, ಸಕಾರಾತ್ಮಕವಾಗಿ ಯೋಚಿಸುತ್ತಾ, ದೇವರೇ ಎಲ್ಲರಿಗೂ ಒಳ್ಳೆಯದನ್ನೇ ಮಾಡು ಎಂದು ಕೇಳಿಕೊಳ್ಳುವುದೇ ಪ್ರಾರ್ಥನೆಯಾಗಿದೆ ಎಂದರೂ ತಪ್ಪಾಗಲಾರದು. ನಮಗೇ ಅರಿವಿಲ್ಲದಂತೆಯೇ ನಮ್ಮ ಸಂಸ್ಕಾರ ಮತ್ತು ಸಂಪ್ರದಾಯದಲ್ಲಿ ಪ್ರಾರ್ಥನೆ ಎನ್ನುವುದು ಹಾಸು ಹೊಕ್ಕಾಗಿ ಹೋಗಿದೆ.
ಬೆಳಿಗ್ಗೆ ಬಲಗಡೆ ತಿರುಗಿ ಎದ್ದು ಕೈಗಳನ್ನು ಉಜ್ಜಿ ಕಣ್ಣುಗಳಿಗೆ ಶಾಖ ಕೊಟ್ಟು ಕೊಂಡು ಕರಾಗ್ರೇ ವಸತೇ ಲಕ್ಷ್ಮೀ.. ಶ್ಲೋಕವನ್ನು ಹೇಳಿಕೊಂಡು ಕರಗಳನ್ನು ನೋಡಿಕೊಂಡು ದೇವರ ಪಟಗನ್ನೋ ಇಲ್ಲವೇ ಮನೆಯ ಹಿರಿಯರನ್ನೋ ನೋಡುವುದು.
- ಸ್ನಾನ ಮಾಡುವಾಗ ಗಂಗೇಚ ಯಮುನೇ ಚೈವಾ… ಹೇಳಿಕೊಂಡು ಸ್ನಾನ ಮಾಡುವುದು
ಸ್ನಾನಾ ನಂತರ ಶುಭ್ರವೇಷ ಧರಿಸಿ ಹಣೆಗೆ ತಿಲಕವನ್ನು ಇಟ್ಟು ಕೊಂಡು ದೇವರೇ ಈ ದಿನ ಎಲ್ಲರನ್ನೂ ಕಾಪಾಡಪ್ಪಾ ಎಂದು ಭಕ್ತಿಯಿಂದ ಧ್ಯಾನಿಸುವುದು. - ತಿಂಡಿ ಊಟ ಮಾಡುವಾಗ ಅನ್ನಪೂರ್ಣೇ ಸದಾ ಪೂರ್ಣೇ.. ಹೇಳಿಕೊಳ್ಳುವುದು
ತಪ್ಪಾದಾಗ ಇಲ್ಲವೇ ಕಷ್ಟಗಳಲ್ಲಿ ಸಿಲುಕಿದಾಗ, ಓ ದೇವ್ರೇ… ಕಾಪಾಡಪ್ಪಾ ಎಂದು ಕೊಳ್ಳುವುದು - ತಂದೆ ತಾಯಿಯರು ಮತ್ತು ಹಿರಿಯರು ಎದುರಾದಾಗ ಅವರಿಗೆ ಭಕ್ತಿ ಪೂರ್ವಕವಾಗಿ ಪ್ರಣಾಮಗಳನ್ನು ಸಲ್ಲಿಸುವುದು.
- ಬಂಧು-ಮಿತ್ರರು ಹಾಗೂ ಆಪ್ತರು ಸಿಕ್ಕಾಗ ಹೃದಯಪೂರ್ವಕವಾಗಿ ಅವರನ್ನು ಆಲಂಗಿಸಿಕೊಳ್ಳುವುದು
ಅವರೊಂದಿಗೆ ಆಹಾರವನ್ನು ಹಂಚಿಕೊಂಡು ತಿನ್ನುವುದು - ಬಂಧು-ಮಿತ್ರರ ಸುಖಃ ದಃಖಗಳಲ್ಲಿ ಆವರೊಂದಿಗೆ ಸಮಾನವಾಗಿ ಭಾಗಿಯಾಗುವುದು
- ಅವರನ್ನು ಬೀಳ್ಕೊಡುವಾಗ ಸುರಕ್ಷಿತವಾಗಿ ತಲುಪಿ, ತಲುಪಿದ ನಂತರ ಕರೆ ಮಾಡಿ ಎಂದು ವಿನಂತಿಸಿಕೊಳ್ಳುವುದು
- ಸಮಾಜಕ್ಕಾಗಿ ತಮ್ಮ ಸಮಯ ಮತ್ತು ಶಕ್ತಿಯನ್ನು ಮೀಸಲಿಟ್ಟು ಅಗತ್ಯವಿರುವವರಿಗೆ ಕೈಲಾದ ಮಟ್ಟಿಗೆ ಸಹಾಯ ಮಾಡುವುದೂ ಒಂದು ರೀತಿಯ ಪ್ರಾರ್ಥನೆಯೇ ಹೌದು.
ನನ್ನ ಪೋಷಕರಿಂದ ನನಗೆ ದೊರೆತ ಸಂಸ್ಕಾರ ರೀತಿಯಲ್ಲಿ ಪ್ರಾರ್ಥಿಸುವುದನ್ನು ತಿಳಿಸಿದ್ದೇನೆ. ಎಲ್ಲಾ ಧರ್ಮ ಮತ್ತು ಜಾತಿಗಳಲ್ಲಿಯೂ ಪ್ರಾರ್ಥನೆ ಎನ್ನುವುದು ಸಹಜ ಪ್ರಕ್ರಿಯೆಯಾಗಿದ್ದು. ಅದೊಂದು ಸಕಾರತ್ಮಕವಾದ ಸಂಬಂಧಗಳನ್ನು ಬೆಸೆಯುವ ಕೊಂಡಿಯಾಗಿದೆ. ಹಾಗಾಗಿ ಎಲ್ಲರೂ ಸಮಯ ಮಾಡಿಕೊಂಡು ಕೈಲಾದ ಮಟ್ಟಿಗೆ ಪ್ರಾರ್ಥನೆ ಮಾಡುವ ಮೂಲಕ ಮಾನಸಿಕ ಸ್ಥಿಮಿತೆಯನ್ನು ಕಂಡುಕೊಳ್ಳುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಗುರುತರ ಜವಾಬ್ಧಾರಿ ನಮ್ಮೆಲ್ಲರದ್ದಾಗಿದೆ.
ಏನಂತೀರೀ?
ನಿಮ್ಮವನೇ ಉಮಾಸುತ