ಮೊನ್ನೆ ದಿನಪತ್ರಿಕೆಯನ್ನು ಓದುತ್ತಿರುವಾಗ ಕೇಂದ್ರದ ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳಲ್ಲಿ ಅಮೂಲಾಗ್ರವಾದ ಬದಲಾವಣೆ ತರಲು ಮುಂದಾಗಿದ್ದು ಅದಕ್ಕೆ ಪೂರಕವಾಗಿ ದೇಶವಾಸಿಗಳಿಂದ ಸೂಚನೆ ಮತ್ತು ಸಲಹೆಗಳನ್ನು ಕೇಳಿರುವ ಸುದ್ದಿ ಓದಿ ಮೈ ರೋಮಾಂಚನವಾಯಿತು. ಸ್ವಾತ್ರಂತ್ಯ ಬಂದು ೭೦+ ವರ್ಷಗಳ ನಂತರವೂ ಅದೇ ಅಕ್ಬರ್ ದಿ ಗ್ರೇಟ್, ಅಲೆಕ್ಶಾಂಡರ್ ದಿ ಗ್ರೇಟ್, ಆರ್ಯರು ಭಾರತಕ್ಕೆ ಬಂದರು ಎನ್ನುವ ಆಂಗ್ಲರ ಸುಳ್ಳು ಸುಳ್ಳು ಇತಿಹಾಸವನ್ನೇ ಓದಿ ಬೆಳೆದಿದ್ದ ನಾವು ಇನ್ನು ಮುಂದೆಯಾದರೂ ನಮ್ಮ ನಿಜವಾದ ರಾಜ ಮಹಾರಾಜರು ಮತ್ತು ಸ್ವಾತ್ರಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ನಮ್ಮ ಮಕ್ಕಳಿಗೆ ತಿಳಿಸಬಹುದು ಎಂಬ ಆಸೆ ಮೊಳಕೆಯೊಡೆಯಿತು. ಹಾಗೆ ಯೋಚಿಸುತ್ತಿರುವಾಗಲೇ ಕಣ್ಣ ಮುಂದೆ ಬಂದು ಹೋದದ್ದೇ ಶಹೀದ್ ಉಧಮ್ ಸಿಂಗ್ ಅವರ ಚರಿತ್ರೆ.
26 ಡಿಸೆಂಬರ್ 1899 ರಲ್ಲಿ ಸಂಗ್ರೂರ್ ಜಿಲ್ಲೆಯ ಸುನಮ್ ಎಂಬ ಗ್ರಾಮದಲ್ಲಿ ಉಧಮ್ ಸಿಂಗ್ ಜನಿಸಿದರು. ಚಿಕ್ಕವಯಸ್ಸಿನಲ್ಲಿಯೇ ಪೋಷಕರನ್ನು ಕಳೆದುಕೊಂಡಿದ್ದರಿಂದ ಅಮೃತ್ ಸರದ ಅನಾಥಾಶ್ರಮವೊಂದರಲ್ಲಿ ಆಶ್ರಯ ಪಡೆದು ತಮ್ಮ ಮೆಟ್ರಿಕ್ಯುಲೇಶನ್ ಮುಗಿಸಿದ್ದರು. 1919 ರಲ್ಲಿ ಬೈಸಾಖಿ ಹಬ್ಬದಂದು ಅಮೃತಸರದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ನಡೆದಾಗ ಅಲ್ಲಿ ನೆರೆದಿದ್ದ 20,000 ಜನರಿಗೆ ನೀರು ಬಡಿಸುತ್ತಿದ್ದ ಸ್ವಯಂಸೇವಕರಲ್ಲಿ 19ರ ಪ್ರಾಯದ ಉಧಮ್ ಸಿಂಗ್ ಕೂಡಾ ಒಬ್ಬನಾಗಿದ್ದು ಆತ ಜನರಲ್ ಡ್ವೈರ್ ಅತ್ಯಂತ ಕ್ರೂರವಾಗಿ 1526 ನಿರಾಯುಧ ಶಾಂತಿಯುತ ಅಮಾಯಕ ಜನರ ಹತ್ಯೆ ಮಾಡಿದ್ದನ್ನು ಕಣ್ಣಾರೆ ಕಂಡಿದ್ದ.
ಅಂತಹ ಅಮಾನವೀಯ ಘಟನೆಯನ್ನು ಕೇಳಿಯೋ ಇಲ್ಲವೇ ಓದಿಯೋ ನಮ್ಮ ನರನಾಡಿಗಳು ಉಬ್ಬಿ ರಕ್ತ ಕುದಿಯುತ್ತದೆಯೆಂದರೆ ಇನ್ನು ಆ ಪ್ರಕರಣಕ್ಕೆ ಜ್ವಲಂತ ಸಾಕ್ಷಿಯಾಗಿದ್ದ ಉಧಮ್ ಸಿಂಗ್ ಜೀವ ಇನ್ನಾ ಪರಿ ನೊಂದಿರಬೇಕು? ತನ್ನ ಕಣ್ಣ ಮುಂದೆಯೇ ತನ್ನ ಬಂಧು ಮಿತ್ರರು ಬ್ರಿಟೀಶರ ಗುಂಟೇಟಿಗೋ ಇಲ್ಲವೇ ಕಾಲ್ತುಳಿತಕ್ಕೋ ಇಲ್ಲವೇ ಭಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದು ಆತನ ಮನಸ್ಸಿನ ಮೇಲೆ ತೀವ್ರತರವಾಗಿ ಘಾಸಿಯನ್ನುಂಟು ಮಾಡಿತ್ತು ಈ ಅಮಾನವೀಯ ಕೃತ್ಯಕ್ಕಾಗಿ ಬ್ರಿಟಿಷರ ವಿರುದ್ಧ ಸೇಡನ್ನು ತೀರಿಸಿ ಹುತಾತ್ಮರಿಗೆ ನ್ಯಾಯವನ್ನು ಕೊಡಿಸಲು ಅಂದೇ ಆತ ಧೃಢ ನಿರ್ಧಾರ ಮಾಡಿದ.
ಈ ಘಟನೆಯ ವಿರುದ್ಧ ಸ್ವಾತ್ರಂತ್ರ ಹೋರಾಟದ ಮುಂಚೂಣಿಯಲ್ಲಿದ್ದ ಕಾಂಗ್ರೇಸ್ ಕೂಡ ತೀವ್ರತರನಾದ ಹೋರಾಟ ನಡೆಸಲಿಲ್ಲ. ಕಾಟಾಚಾರಕ್ಕೆ ಅಲ್ಲೊಂದು ಇಲ್ಲೊಂದು ಪ್ರತಿಭಟನೆ ನಡೆಸಿ ಸುಮ್ಮನಾಗಿತ್ತು. ಸಾವಿರಾರು ಜನರ ಮಾರಣ ಹೋಮ ನಡೆಸಿದ ಡಯರ್ ವಿರುದ್ಧ ಅಂದಿನ ಬ್ರಿಟಿಷ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಆತ ಕೆಲ ಕಾಲ ಭಾರತದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಬ್ರಿಟನ್ನಿನಲ್ಲಿ ಅತ್ಯಂತ ಶ್ರೀಮಂತಿಕೆಯಿಂದ ತನ್ನ ವಿಶ್ರಾಂತ ಜೀವನ ನಡೆಸ ತೊಡಗಿದ.
ಕಾಂಗ್ರೇಸ್ಸಿನ ಈ ಇಬ್ಬಂಧಿತನದಿಂದ ಬೇಸತ್ತ ಉಧಮ್ ಸಿಂಗ್ 1924ರಲ್ಲಿ ಗಧರ್ ಪಕ್ಷದೊಂದಿಗೆ ಜೊಡಿಸಿ ಕೊಂಡರು. ಬ್ರಿಟೀಷರ ವಸಾಹತುಶಾಹಿ ಆಡಳಿತವನ್ನು ಉರುಳಿಸಲು ವಿದೇಶದಲ್ಲಿ ಭಾರತೀಯರನ್ನು ಸಂಘಟಿಸ ತೊಡಗಿದರು. 1927 ರಲ್ಲಿ, ಭಗತ್ ಸಿಂಗ್ ಅವರ ಆದೇಶದ ಮೇರೆಗೆ ಭಾರತಕ್ಕೆ 25 ಸಹವರ್ತಿಗಳೊಂದಿಗೆ ರಿವಾಲ್ವರ್ ಮತ್ತು ಮದ್ದುಗುಂಡುಗಳೊಂದಿಗೆ ಮರಳಿದರು. ಇದಾದ ನಂತರ, ಪರವಾನಗಿ ಪಡೆಯದೆ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಆವರನ್ನು ಬಂಧಿಸಿದ ಕಾರಣ 5 ವರ್ಷಗಳ ಕಾಲ ಸೆರೆಮನೆಯನ್ನೂ ಅನುಭವಿಸಬೇಕಾಯಿತು. ಇದೇ ಸಮಯದಲ್ಲಿ ಭಗತ್ ಸಿಂಗ್ ಅವರ ಸಾವು ಮತ್ತು ಅವರ ಹುತಾತ್ಮತೆಯಿಂದ ಸ್ಫೂರ್ತಿ ಪಡೆದು ಡಯರ್ ವಿರುದ್ಧ ಪ್ರತೀಕಾರವನ್ನು ತೆಗೆದುಕೊಳ್ಳಲು ಬಯಸಿ, ಸೆರೆಮನೆಯಿಂದ ಬಿಡುಗಡೆ ಹೊಂದಿದ ನಂತರ, ಕಾಶ್ಮೀರದ ಮಾರ್ಗವಾಗಿ ಭಾರತದಿಂದ ತಪ್ಪಿಸಿಕೊಂಡು ಜರ್ಮನಿ ತಲುಪಿ ಅಲ್ಲಿಂದ ನೇರವಾಗಿ ಲಂಡನ್ನಿಗೆ ಹೋಗಿ ಅಲ್ಲಿ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಲ್ಲದೇ ಸುಮಾರು 6 ವರ್ಷಗಳ ಕಾಲ ಡಯರ್ ಅವರ ಚಲನವಲನಗಳನ್ನು ಗಮನಿಸತೊಡಗಿದರು. ಈ ಮಧ್ಯೆ ಬಂದೂಕನ್ನು ಕೊಂಡು ಕೊಂಡಿದ್ದಲ್ಲದೇ, ಅದನ್ನು ಬಳಸುವ ಕಲೆಯನ್ನು ಕರಗತ ಮಾಡಿಕೊಂಡರು.
ಮಾರ್ಚ್ 13, 1940 ರಂದು ಡ್ವೈರ್ ಲಂಡನ್‌ನ ಕ್ಯಾಕ್ಸ್ಟನ್ ಹಾಲ್‌ನಲ್ಲಿ ಮಾತನಾಡಲು ಬರುತ್ತಿರುವುದನ್ನು ತಿಳಿದುಕೊಂಡ ಉಧಮ್ ಸಿಂಗ್ ಪುಸ್ತಕವೊಂದರ ಒಳಗೆ ಬಂದೂಕಿನ ಆಕಾರದಲ್ಲಿ ಕೊರೆದು ಅದರೊಳಗೆ ಬಂದೂಕನ್ನು ಅಡಗಿಸಿಟ್ಟುಕೊಂದು ಆಲ್ಲಿಗೆ ಹೋಗಿ ಮುಂದಿನ ಸಾಲಿನಲ್ಲಿಯೇ ಕುಳಿತುಕೊಂಡರು. ಭಾಷಣವೆಲ್ಲವೂ ಮುಗಿದು ಇನ್ನೇನೂ ಅತಿಥಿಗಳೆಲ್ಲರೂ ಹೊರಡಬೇಕು ಎನ್ನುವಷ್ಟರಲ್ಲಿ ಉಧಮ್ ಸಿಂಗ್ ತಮ್ಮ ಬಂದೂಕಿನಿಂದ ಹಾರಿಸಿದ ಎರಡು ಗುಂಡು ನೇರವಾಗಿ ಡ್ವೈಯರ್‌ನ ಹೃದಯ ಮತ್ತು ಶ್ವಾಸಕೋಶಕ್ಕೆ ತಗುಲಿ ಡ್ವಯರಿನ ಪ್ರಾಣ ಪಕ್ಷಿ ಅಲ್ಲಿಯೇ ಹಾರಿ ಹೋಗುವ ಮುಖಾಂತರ ಜಲಿಯನ್ ವಾಲಾ ಬಾಗ್ ನಲ್ಲಿ ಮರಣ ಹೊಂದಿದ್ದ ಅಮಾಯಕರ ಆತ್ಮಗಳಿಗೆ ಶಾಂತಿ ದೊರಕುವಂತೆ ಮಾಡಿದ್ದರು ಉಧಮ್ ಸಿಂಗ್.
ಎಲ್ಲಾ ಆಪರಾಧಿಗಳಂತೆ ಉಧಮ್ ಸಿಂಗ್ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸದೇ, ಬಹಳ ಧೈರ್ಯದಿಂದ ಬ್ರಿಟೀಷರ ಬಂಧನಕ್ಕೆ ಒಳಗಾಗಿ ಅಲ್ಲಿ ನಡೆದ ಕಾಟಾಚಾರದ ವಿಚಾರಣೆಯಲ್ಲಿ ನಮ್ಮ ಅಮಾಯಕ ಜನರನ್ನು ಹತ್ಯೆ ಮಾಡಿದ್ದ ಕಾರಣ ಅವರ ವಿರುದ್ಧ ನನಗೆ ದ್ವೇಷವಿತ್ತು ಹಾಗಾಗಿ ನಾನು ಅವರನ್ನು ಹತ್ಯೆ ಮಾಡಿದೆ. ಆವರು ನಿಜವಾದ ಅಪರಾಧಿಯಾಗಿದ್ದ ಕಾರಣ ಈ ಹತ್ಯೆಗೆ ಅವರು ಅರ್ಹರಾಗಿದ್ದರು. 21 ವರ್ಷಗಳಿಂದ ಹುದಿಗಿಟ್ಟುಕೊಂಡಿದ್ದ ಪ್ರತೀಕಾರವನ್ನು ನಾನಿಂದು ಪೂರ್ಣಗೊಳಿಸಿದ ಸಂತೃಪ್ತಿ ಇದೆ. ನಾನು ಸಾವಿಗೆ ಹೆದರುವುದಿಲ್ಲ. ದೇಶಕ್ಕಾಗಿ ಒಳ್ಳೆಯ ಕೆಲಸ ಮಾಡಿ ಸಾಯುತ್ತಿರುವುದಕ್ಕೆ ನನಗೆ ಖುಷಿಯಿದೆ. ಬ್ರಿಟೀಷರ ದಬ್ಬಾಳಿಕೆಗೆ ತುತ್ತಾಗಿ ಭಾರತದಲ್ಲಿ ಲಕ್ಷಾಂತರ ಜನರು ಸಾಯುತ್ತಿರುವುದು ನನಗೆ ಬೇಸರ ತರಿಸುತ್ತಿದೆ. ಹಾಗಾಗಿ ನನ್ನ ತಾಯಿನಾಡಿನ ಸಲುವಾಗಿ ಮರಣಕ್ಕಿಂತ ಹೆಚ್ಚಿನ ಗೌರವವವನ್ನೇನು ಬಯಸುವುದಿಲ್ಲ. ಅದು ನನ್ನ ಕರ್ತವ್ಯವೇ ಹೌದು ಎಂದು ದಿಟ್ಟವಾಗಿ ನುಡಿದು ನ್ಯಾಯಾಧೀಶರನ್ನೇ ಬೆಚ್ಚುವಂತೆ ಮಾಡಿದ್ದ ಧೀರ ಉಧಮ್ ಸಿಂಗ್.
ನಿರೀಕ್ಷೆಯಂತೆಯೇ ಉಧಮ್ ಸಿಂಗ್ ಅವರಿಗೆ ಅಲ್ಲಿನ ನ್ಯಾಯಾಲಯ ಮರಣದಂಡನೆ ವಿಧಿಸಿತು. ಗಾಂದಿಯವರು ಭಾರತದಲ್ಲಿ 21 ದಿವಸಗಳು ಮಾಡಿದ ಉಪವಾಸವನ್ನೇ ಕೊಂಡಾಡುವರಿಗೆ ಉಧಮ್ ಸಿಂಗ್ ಲಂಡನ್ನಿನ ಜೈಲಿನಲ್ಲಿ 42 ದಿನಗಳ ಕಾಲ ಉಪವಾಸ ಮಾಡಿದ ವಿಷಯದ ಅರಿವೇ ಇಲ್ಲದಿರುವುದು ಈ ದೇಶದ ದೌರ್ಭ್ಯಾಗ್ಯ. ಅಂತಿಮವಾಗಿ ಉಧಮ್ ಸಿಂಗ್ ಅವರನ್ನು 1940 ರ ಜುಲೈ 31 ರಂದು ಅತ್ಯಂತ ಕ್ರೂರವಾಗಿ ಹಿಂಸಿಸಿ ಗಲ್ಲಿಗೇರಿಸಲಾಯಿತು.
ಯಥಾ ಪ್ರಕಾರ ಭಾರತದಲ್ಲಿ ಕಾಂಗ್ರೆಸ್ ಡಯರ್ ಅವರ ಹತ್ಯೆಯನ್ನು ಖಂಡಿಸಿತು. ಬ್ರಿಟಿಷರು ಕೋಪಗೊಂಡಿದ್ದಕ್ಕಾಗಿ ಗಾಂಧಿ ಮತ್ತು ನೆಹರೂ ಉಧಮ್ ಸಿಂಗ್ ಅವರನ್ನು ವಾಚಾಮಗೋಚರವಾಗಿ ನಿಂದಿಸಿದರು.
ಅವನೊಬ್ಬ ಹುಚ್ಚು ಮನುಷ್ಯ ಎಂದು ಗಾಂಧಿಯವರು ಹೇಳಿದರೇ,
ಅವನ ಕಾರ್ಯವು ಪ್ರಜ್ಞಾಶೂನ್ಯ ಕಾರ್ಯವಾಗಿತ್ತು ಎಂದು ನೆಹರು ಆಣಿ ಮುತ್ತನ್ನು ಉದುರಿಸಿದ್ದಲ್ಲದೇ,
ನಾವು ಉಧಮ್ ಸಿಂಗ್ ಅವರ ಭಯೋತ್ಪಾದಕ ಕೃತ್ಯವನ್ನು ಖಂಡಿಸುತ್ತೇವೆ ಮತ್ತು ಕ್ಷಮೆಯಾಚಿಸುತ್ತೇವೆ. ಅದಕ್ಕಾಗಿ ನಮಗೆ ಶಿಕ್ಷೆಯಾಗುವುದಿಲ್ಲ ಎಂದು ಭಾವಿಸುತ್ತೇವೆ ಎಂದು ಅಂದಿನ ಕಾಂಗ್ರೆಸ್ ನಿರ್ಣಯವನ್ನು ಅಂಗೀಕರಿಸಿತ್ತು.
ಬ್ರಿಟಿಷರಿಗೂ ಎರಡನೇ ಮಹಾಯುದ್ಧಕ್ಕೆ ಪಂಜಾಬ್ ರೆಜೆಮೆಂಟ್ ಸೈನಿಕರ ಅವಶ್ಯಕತೆ ಇದ್ದ ಕಾರಣ, ಈ ಪ್ರಕರಣವನ್ನು ಹೆಚ್ಚಿನದಾಗಿಸಲು ಪ್ರಯತ್ನಿಸದೇ ಆ ವಿಷಯವನ್ನು ತಣ್ಣಗಾಗಿಸಿತು. ಉಧಮ್ ಸಿಂಗ್ ಅವರನ್ನು ಲಂಡನ್‌ನಲ್ಲಿ ಸಮಾಧಿ ಮಾಡುವ ಮುಖಾಂತರ ಇತರೇ ಸ್ವಾತಂತ್ರ್ಯ ಹೋರಾಟಗಾರರಂತೆ ಅವರನ್ನು ಸಹಾ ಭಾರತದಲ್ಲಿ ಸಂಪೂರ್ಣವಾಗಿ ಮರೆತು ಬಿಡಲಾಯಿತು. ಈ ಕುರಿತಂತೆ ಯಾವುದೇ ಪಠ್ಯಪುಸ್ತಕಗಳಲ್ಲಿಯೂ ನಮ್ಮ ಮಕ್ಕಳಿಗೆ ತಿಳಿಸುವುದಿಲ್ಲ.
ಸ್ವಾತ್ರಂತ್ಯಾನಂತರ 1974 ರಲ್ಲಿ ಅವರ ಅವಶೇಷಗಳನ್ನು ಹೊರತೆಗೆದು ಭಾರತಕ್ಕೆ ತಂದು ಇಲ್ಲಿ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನಡೆಸಿದ್ದಲ್ಲದೇ, ಅವರ ಚಿತಾಭಸ್ಮವನ್ನು ಜಲಿಯನ್ ವಾಲಾ ಬಾಗ್‌ನಲ್ಲಿ ಇರಿಸಲಾಯಿತು. ಪಂಜಾಬ್ ಸರ್ಕಾರ ಉದಮ್ ಸಿಂಗ್ ಅವರನ್ನು ಭಾರತೀಯ ಸ್ವಾತಂತ್ರ್ಯ ಚಳವಳಿಯ ಪ್ರಸಿದ್ಧ ವ್ಯಕ್ತಿ ಎಂದು ಗುರುತಿಸಿದ್ದಲ್ಲದೇ, ಅವರನ್ನು ಶಹೀದ್-ಇ-ಅಜಮ್ ಸರ್ದಾರ್ ಉದಮ್ ಸಿಂಗ್ ಎಂದೂ ಕರೆದರು. (ಶಾಹೀದ್-ಇ-ಅಜಮ್,ಅಂದರೆ ಮಹಾನ್ ಹುತಾತ್ಮ) 1995 ಅಕ್ಟೋಬರ್ ತಿಂಗಳಲ್ಲಿ ಉತ್ತರಪ್ರದೇಶದ ಅಂದಿನ ಮಾಯಾವತಿ ಸರ್ಕಾರವು ಉತ್ತರಾಖಂಡದ ಒಂದು ಜಿಲ್ಲೆಯೊಂದಕ್ಕೆ ಉಧಮ್ ಸಿಂಗ್ ಹೆಸರನ್ನು ಇಡುವ ಮೂಲಕ ಉಧಮ್ ಸಿಂಗ್ ಅವರಿಗೆ ಗೌರವವನ್ನು ಸಲ್ಲಿಸಿದೆ.
ಕಾಕತಾಳೀಯದಂತೆ ಕೆಲವರ್ಷಗಳ ಹಿಂದೆ ಗಾಂಧಿ ಜಯಂತಿಯಂದೇ ಉಧಮ್ ಸಿಂಗ್ ಅವರ ಕುರಿತಾದ ಹಿಂದಿ ಸಿನಿಮಾ ಕೂಡಾ ಬಿಡುಗಡೆಯಾಗಿ ಅವರ ತ್ಯಾಗ, ಬಲಿದಾನದ ಸ್ಪೂರ್ತಿದಾಯಕವಾದ ಕಥೆ ಎಲ್ಲರ ಹೃನ್ಮನಗಳನ್ನು ಗೆದ್ದಿತ್ತು.
ಸದ್ಯಕ್ಕೆ ಈ ಸಂದೇಶವನ್ನು ಹೆಚ್ಚಿನ ಜನರಿಗೆ ತಲುಪಿಸುವ ಮೂಲಕ ನಮ್ಮ ದೇಶಕ್ಕೆ ಸ್ವಾತ್ರಂತ್ಯ ಬಂದಿದ್ದು ಕೆಲ ಒಣ ಜನರ ಶಾಂತಿಯುತ ಸತ್ಯಾಗ್ರಹದಿಂದಲ್ಲ. ಬದಲಾಗಿ ಇಂತಹ ಲಕ್ಷಾಂತರ ಕ್ಷಾತ್ರತೇಜ ಕ್ರಾಂತಿಕಾರರ ತ್ಯಾಗ ಮತ್ತು ಬಲಿದಾನಗಳಿಂದ ಎಂದು ನಮ್ಮ ನಿಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ತಿಳಿಯಲಿ. ಅದರ ಜೊತೆಯಲ್ಲಿಯೇ ಪಠ್ಯಕ್ರಮದಲ್ಲಿಯೂ ಅಮೂಲಾಗ್ರವಾಗಿ ಬದಲಾಗಿ ನಮ್ಮ ದೇಶದ ವೀರಪುರುಷರ ಕತೆಗಳು ನಮ್ಮ ಮಕ್ಕಳಿಗೆ ಸ್ಪೂರ್ತಿ ತುಂಬುವಂತಾಗಲಿ.
ಏನಂತೀರೀ?
ನಿಮ್ಮವನೇ ಉಮಾಸುತ