ಜಟೋಲಿ ಶಿವ ಮಂದಿರ

ನಮ್ಮ ಭಾರತ ದೇಶ ದೇವಾಲಯಗಳ ಬೀಡು. ಪೂರ್ವದ ಅಟಕ್ ನಿಂದ ಪಶ್ಚಿಮದ ಕಟಕ್ ವರೆಗೂ ಮತ್ತು ದಕ್ಷಿಣದ ಕನ್ಯಾಕುಮಾರಿಯಿಂದ ಹಿಡಿದು ಉತ್ತರದ ಕಾಶ್ಮೀರದ ವರೆಗೂ ಎಲ್ಲೇ ಯಾವುದೇ ಹಳ್ಳಿಗಳಿಗೆ ಭೇಟಿ ನೀಡಿದರೂ ಅಲ್ಲೊಂದು ದೇವಾಲಯಗಳನ್ನು ಕಾಣಬಹುದಾಗಿದೆ. ಬಹುತೇಕ ದೇಲಯಗಳು ಸಹಸ್ರಾರು ವರ್ಷಗಳಿಂದಲೂ ಅಲ್ಲಿದ್ದು ಅನೇಕ ವೈಶಿಷ್ಟ್ಯತೆ ಮತ್ತು ನಿಗೂಢತೆಗಳಿಂದ ಕೂಡಿರುತ್ತದೆ ಇಂದೂ ಸಹಾ ಅಂತಹದೇ ಐತಿಹ್ಯವಿರುವ ನಿಗೂಢವೆಂದೇ ಪರಿಗಣಿಸಲಾದ ಶಿವನ ದೇವಾಲಯದ ದರ್ಶನ ಮಾಡುವುದರ ಜೊತೆಗೆ ಆ ದೇವಾಲಯದ ಐತಿಹ್ಯ, ಅಲ್ಲಿನ ಸ್ಥಳ ಪುರಾಣ ಮತ್ತು ವಿಶೇಷತೆಗಳನ್ನು ತಿಳಿಯೋಣ ಬನ್ನಿ.

sim3ದೇವರು ಬಹಳ ಸಮಯ ತೆಗೆದುಕೊಂಡು ಸ್ವರ್ಗವನ್ನೇ ಧರೆಗೆ ಇಳಿದಂತೆ ಇರುವ ಹಿಮಾಚಲ ಪ್ರದೇಶದ ಸೋಲನ್ ಎಂಬ ಪ್ರದೇಶದಲ್ಲಿ ಜಟೋಲಿ ಎಂಬ ಹಳ್ಳಿಯಲ್ಲಿದೆ. ಸೋಲನ್‌ನಿಂದ ಜಟೋಲಿ ದೇವಸ್ಥಾನಕ್ಕೆ ಸುಮಾರು 7.3 ಕಿಲೋಮೀಟರ್ ದೂರವಿದ್ದು ಈ ದೂರವನ್ನು ಸುಮಾರು 20 ನಿಮಿಷಗಳಲ್ಲಿ ಕ್ರಮಿಸಿದಲ್ಲಿ ಅತ್ಯಂತ ಸುಂದರವಾದ ದೇವಾಲಯವು ನೆಲೆಗೊಂಡಿದ್ದು ಇದನ್ನು ಜಟೋಲಿ ಶಿವ ದೇವಾಲಯ ಎಂದು ಕರೆಯಲಾಗುತ್ತದೆ. ಇದನ್ನು ದೇವಭೂಮಿ ಎಂದೇ ಕರೆಯಲಾಗುತ್ತದೆ. ದಕ್ಷಿಣ-ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿರುವ ಈ ದೇವಾಲಯದ ಎತ್ತರವು ಸುಮಾರು 111 ಅಡಿಗಳು ಇದ್ದು, ಈ ದೇವಾಲಯದ ಕಟ್ಟಡವು ಒಂದು ವಿಶಿಷ್ಟವಾದ ನಿರ್ಮಾಣ ಕಲೆಯಾಗಿದ್ದು, ಹೊಸ ರೀತಿಯ ದೃಷ್ಟಿಕೋನದಿಂದ ಕಟ್ಟಲಾಗಿದೆ.

jot1ಪ್ರವಾಸಿಗರು ಬೆಟ್ಟದ ತುದಿಯಲ್ಲಿರುವ ಭವ್ಯವಾದ ಮತ್ತು ಅದ್ಭುತವಾದ ದೇವಾಲಯವನ್ನು ನೋಡಲು ಬಯಸಿದರೆ ಕೆಳಗಿನಿಂದ 100 ಮೆಟ್ಟಿಲುಗಳನ್ನು ಹತ್ತಿಕೊಂಡು ಬರಬೇಕಾಗಿದೆ. ಅಷ್ಟು ಮೆಟ್ಟಿಲುಗಳನ್ನು ಹತ್ತಿ ಮಟ್ಟಿಲು ಹತ್ತಿ ಬೆಟ್ಟದ ತುದಿಯಲ್ಲಿರುವ ಜಟೋಲಿ ಶಿವನ ದೇವಾಲಯವನ್ನು ನೋಡಿದಾಕ್ಷಣ ಹತ್ತುವಾಗ ಆಗುವ ಎಲ್ಲಾ ಆಯಾಸಗಳೂ ತಕ್ಷಣವೇ ಪರಿಹಾರವಾಗಿ ಬಿಡುತ್ತದೆ.

ajot4ಈ ದೇವಾಲಯಕ್ಕೆ ಸಂಬಂಧಿಸಿದ ಅನೇಕ ಕಥೆಗಳಿದ್ದು ಅವುಗಳಲ್ಲಿ ಪ್ರಸಿದ್ಧವಾದ ಒಂದು ಕಥೆಯ ಪ್ರಕಾರ ಶಿವ ಭೂಲೋಕದ ಪ್ರದಕ್ಷಿಣೆ ಹಾಕುತ್ತಿದ್ದ ಸಂದರ್ಭದಲ್ಲಿ ಇಲ್ಲಿಯ ಪ್ರಕೃತಿದತ್ತ ರಮಣೀಯಕ್ಕೆ ಮನಸೋತು ಈ ಸ್ಥಳದಲ್ಲಿ ಒಂದು ರಾತ್ರಿ ತಂಗಿದ್ದನಂತೆ. ಹಾಗಾಗಿ ಈ ಬೆಟ್ಟದ ತುದಿಯಲ್ಲಿ ಸುಂದರವಾದ ಭೋಲೇನಾಥ ಮಂದಿರವನ್ನು ಕಟ್ಟಲಾಗಿದ್ದು ಇಂದಿಗೂ ಶಿವ ಅಲ್ಲಿಯೇ ವಾಸಿಸುತ್ತಾನೆ ಎಂಬುದು ಸ್ಥಳೀಯರ ನಂಬಿಕೆಯಾಗಿದೆ. ಪರಮಶಿವನು ಜಟಾಧಾರಿಯಾಗಿ ಉದ್ದುದ್ದ ಕೂದಲುಗಳನ್ನು ಹೊಂದಿರುವ ಕಾರಣ ಈ ದೇವಾಲಯವನ್ನು ಜಟೋಲಿ ದೇವಾಲಯ ಎಂದು ಕರೆಯಲಾಗುತ್ತದೆ. ಇದು ಏಷ್ಯಾದ ಅತ್ಯುನ್ನತ ಹಳೆಯ ಶಿವ ದೇವಾಲಯಗಳಲ್ಲಿ ಒಂದು ಪರಿಗಣಿಸಲಾಗಿದೆ. ಇಲ್ಲಿನ ಸ್ಪಟಿಕಲಿಂಗ ಅತ್ಯಂತ ಪ್ರಾಚೀನ ಕಾಲದ್ದು ಎನ್ನಲಾಗುತ್ತದೆ.

krish51950ರ ವರೆಗೂ ಎಲ್ಲಾ ಹಳೆಯ ದೇವಾಲಯದಂತೆಯೇ ಇದ್ದ ಈ ದೇವಾಲಯಕ್ಕೆ ಸ್ವಾಮಿ ಕೃಷ್ಣಾನಂದ ಪರಮಹಂಸ ಎಂಬ ಸ್ವಾಮೀಜಿಯೊಬ್ಬರು ಅಲ್ಲಿಗೆ ಭೇಟಿ ನೀಡಿ ಈ ದೇವಾಲಯದ ಇತಿಹಾಸ ಸ್ಥಳ ಪುರಾಣ ಮತ್ತು ಪರಮ ಪಾವಿತ್ರತೆಯನ್ನು ತಿಳಿದುಕೊಂಡು ಅಲ್ಲೊಂದು ಭವ್ಯವಾದ ದೇವಾಲಯವನ್ನು ತಮ್ಮ ಸಾರಥ್ಯದಲ್ಲಿ ನಿರ್ಮಾಣ ಮಾಡಲು ನಿರ್ಧರಿಸಿ, ಸ್ಥಳೀಯರು ಮತ್ತು ಪ್ರಪಂಚಾದ್ಯಂತ ಇರುವ ತಮ್ಮ ಅನುಯಾಯಿಗಳು ಮತ್ತು ಶಿವಭಕ್ತರ ತನು ಮನ ಧನಗಳ ಸಹಾಯದಿಂದ ಸ್ಪಟಿಕ ಸ್ವರೂಪಿ ಶಿವಲಿಂಗ ದೇವಸ್ಥಾನದ ನಿರ್ಮಾಣ ಕಾರ್ಯ ಆರಂಭಿಸಲು 1974ರಲ್ಲಿ ಅವರು ಈ ದೇವಸ್ಥಾನದ ಶಂಕುಸ್ಥಾಪನೆ ನೆರವೇರಿಸಿದ್ದರು. ಬಳಿಕ 1983 ಸ್ವಾಮೀಜಿ ಅವರು ಸಮಾಧಿ ಸ್ವೀಕರಿಸಿದರು. ಆದರೆ, ಈ ದೇವಸ್ಥಾನದ ಕಾರ್ಯ 39 ವರ್ಷಗಳ ನಂತರ ಪೂರ್ಣಗೊಂಡಿತು.

jot1ಈ ವಿಶಾಲಾಕೃತಿಯ ದೇವಸ್ಥಾನದ ನಾಲ್ಕು ಕಡೆಗಳಲ್ಲಿ ದೇವಿ-ದೇವರ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಈ ದೇವಸ್ಥಾನದ ಒಳಗೆ ಸ್ಫಟಿಕ ಮಣಿ ಶಿವಲಿಂಗ ವಿರಾಜಮಾನವಾಗಿದೆ. ಇದಲ್ಲದೆ ಈ ದೇವಸ್ಥಾನದಲ್ಲಿ ಮಾತೆ ಪಾರ್ವತಿಯ ಮೂರ್ತಿಯನ್ನು ಕೂಡ ಪ್ರತಿಷ್ಠಾಪಿಸಲಾಗಿದೆ. ಈ ದೇವಸ್ಥಾನದ ವಿಶೇಷತೆ ಎಂದರೆ, ಈ ದೇವಸ್ಥಾನದ ಮೇಲ್ಭಾಗದಲ್ಲಿ 11 ಅಡಿ ಎತ್ತರದ ಒಂದು ವಿಶಾಲ ಚಿನ್ನದ ಕಳಸ ಸ್ಥಾಪಿಸಲಾಗಿದೆ.

ನಾವೆಲ್ಲಾ ಹಂಪೆಯಲ್ಲಿನ ಕಂಬಗಳನ್ನು ತಟ್ಟಿದರೆ ಸರಿಗಮಪ ಸ್ವರಗಳನ್ನು ನುಡಿಯುವುದನ್ನು ಕೇಳಿದ್ದೇವೆ ಮತ್ತು ಕಂಡಿದ್ದೇವೆ. ಇಲ್ಲಿನ ದೇವಸ್ಥಾನದ ಕಥೆಯು ಅಷ್ಟೇ ಆಸಕ್ತಿದಾಯಕವಾಗಿದೆ. ಈ ದೇವಾಲಯದ ಕಲ್ಲುಗಳನ್ನು ಮುಟ್ಟಿದರೆ ಸಾಕು ಅವುಗಳಿಂದ ಡಮರುಗದ ಶಬ್ದ ಕೇಳಿಸುವುದರಿಂದ ಇಲ್ಲಿ ಶಿವನ ಉಪಸ್ಥಿತಿ ಸದಾಕಾಲವೂ ಇರುವುದರಿಂದ ಈ ಪವಾಡ ಸಂಭವಿಸುತ್ತದೆೆ ಎಂದು ಸ್ಥಳೀಯರು ಪರಿಗಣಿಸುತ್ತಾರೆ.

ಇದೂ ಅಲ್ಲದೇ, ಈ ಭೋಲೆನಾಥ್ ದೇವಸ್ಥಾನಕ್ಕೆ ಬರುವವರು ಯಾರೂ ಸಹ ಬರಿಗೈಯಲ್ಲಿ ಹಿಂತಿರುಗುವುದಿಲ್ಲ. ಅವರ ಎಲ್ಲಾ ಆಸೆಗಳನ್ನು ಶಿವ ಈಡೇರಿಸುತ್ತಾನೆ ಎಂದೇ ಸ್ಥಳೀಯರ ನಂಬಿಕೆಯಾಗಿದೆ. ಈ ದೇವಾಲಯದ ಪ್ರದೇಶವನ್ನು ದೇವ್ ಭೂಮಿ ಎಂದು ಕರೆಯಲಾಗುತ್ತದೆ.

ಬಹಳ ವರ್ಷಗಳ ಹಿಂದೆ ಈ ಜಟೋಲಿ ದೇವಸ್ಥಾನದಲ್ಲಿ ನೀರಿಗೆ ಸಾಕಷ್ಟು ಸಮಸ್ಯೆ ಇದ್ದು, ಜನರು ಬಹಳ ದೂರದಿಂದ ನೀರನ್ನು ತರಬೇಕಾಗಿತ್ತು. ಭಗವಾನ್ ಸ್ವಾಮಿ ಕೃಷ್ಣಾನಂದ ಪರಮಹಂರು ಆ ಪರಶಿವನನ್ನು ಭಕ್ತಿಯಿಂದ ಪ್ರಾರ್ಥಿಸಿ ತಮ್ಮ ಬಳಿ ಇದ್ದ ತ್ರಿಶೂಲವನ್ನು ಒಮ್ಮೆ ಜೋರಾಗಿ ಗುದ್ದಿದ ಸ್ಥಳದಲ್ಲಿ ನೀರು ನೆಲದಿಂದ ಚಿಮ್ಮತೊಡಗಿತು. ಅದೇ ಪ್ರದೇಶದಲ್ಲಿ ಒಂದು ಸುಂದರವಾದ ಕೊಳವನ್ನು ಕಟ್ಟಲಾಗಿದ್ದು ಇದನ್ನು ಸ್ಥಳೀಯರು ಜಲ್ ಕುಂಡ್ ಎಂದು ಕರೆಯುತ್ತಾರೆ. ಈ ಕೊಳದ ನಿರ್ಮಾಣವಾದ ನಂತರ ಜಟೋಲಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದ್ದು, ಜನರು ಈ ನೀರನ್ನು ಪವಾಡದ ನೀರು ಎಂದು ಪರಿಗಣಿಸುತ್ತಾರೆ. ಈ ನೀರನ್ನು ಕುಡಿಯುವುದರಿಂದ ಸರ್ವ ರೋಗವೂ ಅದರಲ್ಲೂ ಎಲ್ಲಾ ರೀತಿಯ ಚರ್ಮರೋಗಗಳು ನಿವಾರಣೆಯಾಗುತ್ತದೆ ಎನ್ನುವುದು ಇಲ್ಲಿನ ಸ್ಥಳೀಯರ ನಂಬಿಕೆಯಾಗಿದೆ.

ಮಹಾ ಶಿವರಾತ್ರಿಯ ಹಬ್ಬದಂದು ಫೆಬ್ರವರಿ ತಿಂಗಳಲ್ಲಿ, ಇಲ್ಲಿ ದೊಡ್ಡದಾದ ಜಾತ್ರೆ ನಡೆದು ರಾತ್ರಿಯಿಡೀ ವಿವಿಧ ರೀತಿಯ ಪೂಜೆಗಳು ಇಲ್ಲಿ ನಡೆಯುತ್ತದೆ. ಈ ವಿಶೇಷ ಪೂಜೆಯನ್ನು ನೋಡಲು ದೇಶ ವಿದೇಶದಿಂದ ಲಕ್ಷಾಂತರ ಸಂಖ್ಯೆಯಲ್ಲಿ ಇಲ್ಲಿಗೆ ಭಕ್ತರು ಬಂದು ಶಿವನ ಕರುಣೆಗೆ ಪಾತ್ರರಾಗುತ್ತಾರೆ. ಅಂದಿನ ದಿನ ಎಲ್ಲಾ ಭಕ್ತರಿಗೆ ಹಾಲು ಮತ್ತು ಸಕ್ಕರೆಯ ಮಿಶ್ರಣದ ಘೋಟಾ ಎಂಬ ಪಾನೀಯವನ್ನು ತೀರ್ಥರೂಪದಲ್ಲಿ ನೀಡಲಾಗುತ್ತದೆ. ಇಲ್ಲಿ ಪ್ರತೀ ಭಾನುವಾರವೂ ಅನ್ನ ದಾಸೋಹ ದೇವಾಲಯದ ಕಡೆಯಿಂದ ನಡೆಸಲಾಗುತ್ತದೆ.

ಜಟೋಲಿ ಶಿವ ದೇವಾಲಯದೊಳಗೆ ಒಂದು ಗುಹೆ ಇದ್ದು ಪ್ರವಾಸಿಗರು ಅಲ್ಲಿರುವ ಮಾತೆಯ ಪ್ರತಿಮೆಯನ್ನು ದರ್ಶನ ಪಡೆದು ಭಗವಂತನ ಆಶೀರ್ವಾದ ಪಡೆಯಲು ಅವಕಾಶವಿದೆ. ಹಿಂದೆ ಶಿವ ನೆಲೆಸಿದ ಸ್ಥಳ ಇದಾಗಿದೆ ಎಂದು ಸ್ಥಳೀಯರು ನಂಬುತ್ತಾರೆ.

nandi1ದೇವಾಲಯದ ಕೆಲವು ಮೀಟರ್ ದೂರದಲ್ಲಿಯೇ ಕಪ್ಪು ಬಣ್ಣದ ಶಿವಲಿಂಗವಿದ್ದು ಆ ಶಿವಲಿಂಗದ ಪಕ್ಕದಲ್ಲಿಯೇ ಶಿವನ ವಾಹನವಾದ ನಂದಿಯ ಪ್ರತಿಮೆಯೂ ಶಿವನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸಲು ಈ ನಂದಿಯನ್ನು ಬಳಸುತ್ತಾನೆ ಎಂದು ನಂಬಲಾಗಿದೆ.

ಇನ್ನೇಕೆ ತಡಾ ಮುಂದಿನ ಬಾರಿ ನೀವು ಶಿಮ್ಲಾಕ್ಕೆ ಹೋಗುವಾಗ, ದಾರಿಯಲ್ಲಿಯೇ ಮೋಡಿ ಮಾಡುವ ಈ ಜಟೋಲಿ ದೇವಸ್ಥಾನಕ್ಕೂ ಭೇಟಿ ನೀಡಿ ಭೋಲೇನಾಥನ ಕೃಪಾಶೀವಾದಕ್ಕೂ ಪಾತ್ರರಾಗುವುದಲ್ಲದೇ, ಈ ಧಾರ್ಮಿಕ ಸ್ಥಳದ ಪ್ರಶಾಂತತೆಯನ್ನು ಅನುಭವಿಸುತ್ತೀರೀ ಅಲ್ವೇ?

ಈ ದೇವಾಲಯದ ಸುಂದರ ರಮಣೀಯ ದೃಶ್ಯಗಳನ್ನು ಕಣ್ತುಂಬಿಸಿ ಕೊಳ್ಳೋಣ ಬನ್ನಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s