ಪುರಿ ಜಗನ್ನಾಥ ರಥಯಾತ್ರೆ

ಪುರಿ ಒರಿಸ್ಸಾದಲ್ಲಿರುವ ಪ್ರಮುಖವಾದ ಧಾರ್ಮಿಕ ಕ್ಷೇತ್ರವಾಗಿದೆ. ಬಲಭದ್ರ, ಸುಭದ್ರ ಮತ್ತು ಜಗನ್ನಾಥ (ಇಲ್ಲಿ ಶ್ರೀಕೃಷ್ಣನನ್ನು ಜಗನ್ನಾಥ ಎಂದೇ ಸಂಭೋದಿಸುತ್ತಾರೆ) ಜೊತೆಗೆ ಇರುವ ಇಲ್ಲಿನ ದೇವಸ್ಥಾನ ಪುರಾಣ ಪ್ರಸಿದ್ಧವಾಗಿದೆ. ಇಲ್ಲಿ ನಡೆಯುವ ರಥಯಾತ್ರೆ ಸನಾತನ ಹಿಂದೂ ಧರ್ಮದ ಆಚರಣೆಗಳಲ್ಲಿ ಪ್ರಮುಖವಾಗಿದ್ದು ಈ ರಥೋತ್ಸವದ ಉಲ್ಲೇಖ ಬ್ರಹ್ಮಪುರಾಣ, ಪದ್ಮ ಪುರಾಣ, ಸ್ಕಂದ ಪುರಾಣ ಮತ್ತು ಕಪಿಲ ಸಂಹಿತೆಯಲ್ಲಿಯೂ ಕಾಣ ಸಿಗುತ್ತದೆ.

WhatsApp Image 2021-07-12 at 3.23.48 PMಸಾಧಾರಣವಾಗಿ ಎಲ್ಲೆಡೆಯಯಲ್ಲಿ ಬ್ರಹ್ಮ ರಥೋತ್ಸವ ಒಂದು ಅಥವಾ ಮೂರು ದಿನಗಳ ಕಾಲ ನಡೆದರೆ ಇಲ್ಲಿ ಮಾತ್ರ ಪ್ರತಿವರ್ಷದ ಆಷಾಢ ಶುಕ್ಲ ದ್ವಿತೀಯದಂದು ಆರಂಭವಾಗಿ ಅಲ್ಲಿಂದ ನಿರಂತರವಾಗಿ ಅತ್ಯಂತ ಸಡಗರ ಸಂಭ್ರಮಗಳಿಂದ ವೈಭೋವೋಪೇತವಾಗಿ 7 ದಿವಸಗಳ ಕಾಲ ನಡೆಯುತ್ತದೆ. ಈ ರಥಯಾತೆಯಲ್ಲಿ ಸಾಕ್ಷತ್ ಶ್ರೀ ಕೃಷ್ಣ ಜಗನ್ನಾಥನಾಗಿ, ಜೊತೆಗೆ ಬಲರಾಮ ಬಲಭದ್ರ ಮತ್ತು ತಂಗಿಯಾದ ಸುಭದ್ರೆಜೊತೆಗೆ ನಗರ ಸಂಚಾರಕ್ಕೆ ಬರುತ್ತಾರೆ ಎಂಬ ಪ್ರತೀತಿ ಇದ್ದು ಇದನ್ನು ಕಣ್ತುಂಬಿಸಿಕೊಳ್ಳಲು ದೇಶ ವಿದೇಶಗಳಿಂದ ಲಕ್ಷಾಂತರ ಜನರು ಇಲ್ಲಿಗೆ ಬರುತ್ತಾರೆ.

WhatsApp Image 2021-07-12 at 3.20.40 PMಸಾಮಾನ್ಯವಾಗಿ ಎಲ್ಲಾ ದೇವಸ್ಥಾನದ ರಥಕ್ಕೆ, 4 ಚಕ್ರಗಳಿದ್ದರೆ ಇಲ್ಲಿನ ಜಗನ್ನಾಥನ ರಥಕ್ಕೆ 16 ಚಕ್ರಗಳಿದ್ದು ಅದಕ್ಕೆ ನಂದಿಘೋಷ ರಥ ಎಂದು ಕರೆಯಲಾಗುತ್ತದೆ. ಬಲಭದ್ರನ ರಥಕ್ಕೆ 14 ಚಕ್ರಗಳಿದ್ದು ಅದಕ್ಕೆ ತಳಧ್ವಜ ರಥ ಎಂದು ಕರೆಯಲಾಗುತ್ತದೆ. ಇನ್ನು ಸುಭದ್ರೆಯ ರಥಕ್ಕೆ 12 ಚಕ್ರಗಳಿದ್ದು ಅದಕ್ಕೆ ದರ್ಪದಾಳನ ರಥ ಎಂದು ಕರೆಯುತ್ತಾರೆ.

WhatsApp Image 2021-07-12 at 3.24.00 PMಜಗತ್ಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆಯಾತ್ರೆಯು ಕೇವಲ ಒರಿಸ್ಸಾಕಷ್ಟೇ ಸೀಮಿತವಾಗಿರದೇ ಇದೊಂದು ರೀತಿಯ ರಾಷ್ಟ್ರೀಯ ಹಬ್ಬದ ರೂಪದಲ್ಲಿ ದೇಶಾದ್ಯಂತ ಆಚರಿಸಲ್ಪಡುತ್ತದೆ. .ಜಗನ್ನಾಥ, ಬಲಭದ್ರ, ಸುಭದ್ರ ಎಂಬ ತ್ರಿಮೂರ್ತಿಗಳನ್ನು ನಂದಿಘೋಷ, ತಳಧ್ವಜ ಹಾಗೂ ದೇವದಳನ ಎಂಬ ಮೂರು ದೈತ್ಯ ರಥಗಳಲ್ಲಿ ಕುಳ್ಳಿರಿಸಿ ಗುಂಡೀಚ ದೇವಿಯ ದೇವಾಲಯಕ್ಕೆ ವೈಭವದ ಘೋಷಾಯಾತ್ರೆಯ ಮೂಲಕ ಕರೆದುಕೊಂಡು ಹೋಗುವುದು ಇಲ್ಲಿನ ಸಂಪ್ರದಾಯವಾಗಿದೆ. ಸಾಮಾನ್ಯವಾಗಿ ದೇವರ ವಿಗ್ರಹಗಳನ್ನು ಕಲ್ಲಿನಲ್ಲಿಯೋ ಇಲ್ಲವೇ ಲೋಹದಲ್ಲಿ ಮಾಡಲ್ಪಟ್ಟರೇ, ಇಲ್ಲಿನ ಮೂರ್ತಿಗಳನ್ನು ಮರದಿಂದ ಮಾಡಲ್ಪಟ್ಟಿದ್ದು. ಪ್ರತೀ 12 ವರ್ಷಗಳಿಗೊಮ್ಮೆ ಈ ಮೂರ್ತಿಗಳನ್ನು ಶಾಸ್ತ್ರೋಕ್ತವಾಗಿ ಬದಲಾಯಿಸುವುದು ಇಲ್ಲಿ ತಲೆತಲಾಂತರ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.

ಹಿಂದಿನ ಕಾಲದಲ್ಲಿ ಪುರಿಯ ಜಗನ್ನಾಥನ ರಥ ಎಳೆಯುವ ಮುನ್ನ ರಾಜ ಮಹಾರಾಜರು ಚಿನ್ನದ ಪೊರಕೆಯಿಂದ ಆ ಪ್ರದೇಶವನ್ನು ಗುಡಿಸುತ್ತಿದ್ದರು. ಇಂದಿಗೂ ಅದೇ ಸಂಪ್ರದಾಯವನ್ನು ಅಲ್ಲಿನ ಮಹಾರಾಜ ಮನೆತನದವರು ಚಿನ್ನದ ಪೊರಕೆಯಿಂದ ಗುಡಿಸುವ ಮೂಲಕ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಒರಿಸ್ಸಾದ ಈ ಪುರಾಣ ಪ್ರಸಿದ್ಧ ವಿಷ್ಣು ದೇವಾಲಯಕ್ಕೆ ಮೋಕ್ಷಕ್ಕಾಗಿ ಕೊನೆಯುಸಿರೆಳೆಯುವ ಮುನ್ನ ಈ ಪವಿತ್ರ ದೇವಾಲಯಕ್ಕೆ ಹಲವುರು ಭೇಟಿ ನೀಡುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ. ಹಾಗಾಗಿಯೇ ಹಿಂದೆಲ್ಲಾ ಅನೇಕರು ಈ ರಥಯಾತ್ರೆಯ ಸಮಯದಲ್ಲಿ ರಥದಡಿಗೆ ಸಿಕ್ಕು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದ ಉದಾಹರಣೆಗಳು ಇದ್ದವು. ಇತ್ತೀಚಿನ ವರ್ಷಗಳಲ್ಲಿ ಇಂತಹ ಅವಘಢಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಶಂಕರಾಚಾರ್ಯರು ಸಹಾ ತಮ್ಮ ನಾಲ್ಕು ಶಕ್ತಿ ಪೀಠಗಳಲ್ಲಿ ಪವಿತ್ರಧಾಮವಾದ ಹಾಗೂ ವಿಷ್ಣುವಿನ ಸ್ಥಾನವಾಗಿ ಹೆಸರುವಾಸಿಯಾದ ಪುರಿ ಅರ್ಧಾತ್ ಜಗನ್ನಾಥ ಪುರಿಯಲ್ಲಿ ಗೋವರ್ಧನ ಮಠ ಅಥವಾ ಪುರಿ ಪೀಠವನ್ನು ಸ್ಥಾಪಿಸಿ, ಋಗ್ವೇದವನ್ನು ಪ್ರತಿನಿಧಿಸುವ ಗೋವರ್ಧನ ಪೀಠಕ್ಕೆ ಪೀಠಾಧಿಪತಿಯಾಗಿ ಶ್ರೀ ಪದ್ಮಪಾದರನ್ನು ನೇಮಿಸಿದ್ದರು.

WhatsApp Image 2021-07-12 at 3.14.15 PM (2)ಇಲ್ಲಿನ ದೇವಾಲಯ ಅನೇಕ ವಿಶೇಷಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿನ ಗೋಪುರ ಬಾವುಟ ಮತ್ತು ಸುದರ್ಶನ ಚಕ್ರದ ಕುರಿತಂತೆ ನಮ್ಮ ಪೂರ್ವಜರು ಮಾಡಿರುವ ವಾಸ್ತುಶಿಲ್ಪ ಇಂದಿಗೂ ಅಚ್ಚರಿಯನ್ನು ಮೂಡಿಸಿದೆ. ಸಾಮಾನ್ಯವಾಗಿ ವಿಜ್ಞಾನದ ಪ್ರಕಾರ ಗಾಳಿ ಬೀಸುವ ದಿಕ್ಕಿನಲ್ಲಿ ಧ್ವಜ ಹಾರಾಡುವುದು ಸಹಜ ಪ್ರಕ್ರಿಯೆಯಾದರೆ, ಈ ದೇವಾಲಯದ ಗೋಪುರದ ಮೇಲಿನ ಬಾವುಟ ಗಾಳಿಗೆ ವಿರುದ್ಧವಾಗಿ ಹಾರಾಡುವುದು ಅಚ್ಚರಿಯನ್ನುಂಟು ಮಾಡುತ್ತದೆ. ಈ ಪ್ರವಿತ್ರ ಕ್ಷೇತ್ರದಲ್ಲಿ ಯಾವುದೋ ದೈವಿಕ ಪ್ರಭಾವದಿಂದ ಇಂಥಹದ್ದೊಂದು ಪವಾಡ ನಡೆಯುತ್ತದೆ ಎನ್ನುವುದು ಇಲ್ಲಿನ ಸ್ಥಳೀಯರ ಅಭಿಪ್ರಾಯವಾಗಿದೆ.

ಇನ್ನು ಗೋಪುರದ ಮೇಲಿರುವ ಸುದರ್ಶನ ಚಕ್ರವು ಸುಮಾರು 20 ಅಡಿ ಎತ್ತರವಿದ್ದು, ಪುರಿಯ ಯಾವ ದಿಕ್ಕಿನಿಂದ ನೋಡಿದರೂ ಈ ಚಕ್ರ ನಮ್ಮೆ ಕಡೆಯೇ ಮುಖ ಮಾಡಿಕೊಂಡು ನೋಡುತ್ತಿರುವಂತೆ ಭಾಸವಾಗುತ್ತದೆ. ಈ ಮಂದಿರದ ಮೇಲೆ ಯಾವುದೇ ರೀತಿಯ ಹಾರಾಟವನ್ನು ನಿಷೇಧಿಸಿಲ್ಲವಾದರೂ, ಈ ಮಂದಿರದ ಮೇಲೆ ಯಾವುದೇ ಪಕ್ಷಿಯಾಗಲಿ, ವಿಮಾನವಾಗಲಿ ಹಾರುವುದಿಲ್ಲ. ಇದಕ್ಕೆ ಕಾರಣವೇನೆಂದು ಇನ್ನೂ ನಿಗೂಢವಾಗಿಯೇ ಇದ್ದು, ಯಾವುದೋ ದೈವೀ ಶಕ್ತಿಯಿಂದ ಇಂತಹ ಪವಾಡವೊಂದು ನಡೆಯುತ್ತದೆ ಎಂದೇ ಇಲ್ಲಿನವರು ಪ್ರಭಲವಾಗಿ ನಂಬುತ್ತಾರೆ. ಭಾರತದ ಇತರೇ ಯಾವುದೇ ಮಂದಿರದಲ್ಲಿಯೂ ಇಂತಹ ಪ್ರಭಾವ ಇಲ್ಲದಿರುವುದು ಗಮನಾರ್ಹವಾಗಿದೆ.

ಸಾಮಾನ್ಯವಾಗಿ ಸೂರ್ಯನು ನೆತ್ತಿಯ ಮೇಲೆ ಬಂದಾಗ ದೇವಾಸ್ಥಾನದ ನೆರಳು ಬೀಳುವುದು ಸಹಜ ಪ್ರಕ್ರಿಯೆಯಾಗಿದ್ದರೆ, ಇಲ್ಲಿ ಎಂತಹ ಪ್ರಖರವಾದ ಬಿಸಿಲಿದ್ದರೂ ಈ ದೇವಾಲಯದಲ್ಲಿ ಮತ್ತು ದೇವಾಲಯದ ಆವರಣದಲ್ಲಿ ಕೊಂಚವೂ ನೆರಳು ಬೀಳದಿರುವುದು ಅಂದಿನ ನಮ್ಮ ವಾಸ್ತುತಜ್ಣರ ಕಲಾ ನೈಪುಣ್ಯಕ್ಕೆ ಸಾಕ್ಶಿಯಾಗಿದೆ ಎಂದರೂ ಅತಿಶಯವಲ್ಲವಾದರೂ, ಇದೊಂದು ಸ್ಥಾನಿಕ ವಿಸ್ಮಯ ಇಲ್ಲವೇ ಪವಾಡವೆಂದೇ ಅಲ್ಲಿನ ಸ್ಥಳೀಯರು ನಂಬುತ್ತಾರೆ.

ಈ ದೇವಾಲಯವನ್ನು ಪ್ರವೇಶಿಸಲು ನಾಲ್ಕು ಪ್ರಮುಖ ದ್ವಾರಗಳಿದ್ದು, ಮುಖ್ಯ ದ್ವಾರವಾದ ಸಿಂಗದ್ವಾರಮ್ ಅನ್ನು ಮೊದಲ ಬಾರಿಗೆ ಪ್ರವೇಶಿಸುವಾಗ, ಒಂದು ರೀತಿಯ ಶಬ್ದ ತರಂಗಗಳು ಕೇಳಿಸುತ್ತದೆ. ಆದರೆ, ಪುನಃ ಮತ್ತೊಮ್ಮೆ ಅದೇ ದ್ವಾರದಲ್ಲಿ ಪ್ರವೇಶಿಸಿದರೆ ಅಂತಹ ಶಬ್ದ ಪುನಃ ಕೇಳಿಸುವುದಿಲ್ಲದಿರುವುದು ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತದೆ.

ಸಮುದ್ರಕ್ಕೆ ಹತ್ತಿರದಲ್ಲೇ ಇರುವ ಕಾರಣ, ದೇವಾಲಯ ಪ್ರವೇಶಿಸುವ ಮುನ್ನಾ ಸಮುದ್ರದ ಅಲೆಗಳ ಶಬ್ಧ ಕಿವಿಗಳಿಗೆ ಅಪ್ಪಳಿಸುತ್ತವಾದರೂ, ಒಮ್ಮೆ ದೇವಸ್ಥಾನದ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಸಮುದ್ರದ ಶಬ್ದ ಕಿಂಚಿತ್ತೂ ಕೇಳದಿರುವುದು ನಿಜಕ್ಕೂ ಸೋಜಿಗವೆನಿಸುತ್ತದೆ.

ಸಾಮಾನ್ಯವಾಗಿ ಸಮುದ್ರದ ತಟದಲ್ಲಿ ಪ್ರಕೃತಿಯ ಸಹಜ ಪ್ರಕ್ರಿಯೆಯ ಪ್ರಕಾರ ಬೆಳಗಿನ ಸಮಯದಲ್ಲಿ ಗಾಳಿ ಸಮುದ್ರದಿಂದ ಭೂಮಿಯೆಡೆಗೆ ಚಲಿಸುತ್ತದೆ. ಅದೇ ಸಂಜೆಯ ಸಮಯದಲ್ಲಿ ಗಾಳಿ ಭೂಮಿಯಿಂದ ಸಮುದ್ರದೆಡೆಗೆ ಸಂಚರಿಸುತ್ತದೆ. ಆದರೆ ಪುರಿಯಲ್ಲಿ ಮಾತ್ರಾ ಈ ಪ್ರಕ್ರಿಯೆ ಪ್ರಕೃತಿಯ ವಿರುದ್ಧವಾಗಿರುವುದು ಮತ್ತಷ್ಟು ವಿಸ್ಮಯಕಾರಿಯಾಗಿದೆ.

ಈ ದೇವಸ್ಥಾನದ ಗೋಪುರವು ಸುಮಾರು 1000 ಅಡಿ ಎತ್ತರವಿದ್ದು, ಕಳೆದ 1800 ವರ್ಷಗಳಿಗೂ ಅಧಿಕ ವರ್ಷಗಳಿಂದ ನಡೆಸಿಕೊಂಡು ಬಂದಿರುವ ಸಂಪ್ರದಾಯದಂತೆ ಪ್ರತಿದಿನವೂ ಇಲ್ಲಿನ ಅರ್ಚಕರು ಅಷ್ಟು ಎತ್ತರದ ಗೋಪುರವನ್ನು ಹತ್ತಿ ಬಾವುಟ ಬದಲಾಯಿಸುತ್ತಾರೆ. ಈ ಪ್ರಕ್ರಿಯೆ ಅಕಸ್ಮಾತ್ ಒಂದು ದಿನ ತಪ್ಪಿದರೆ, 18 ವರ್ಷಗಳ ಕಾಲ ದೇವಾಲಯ ತೆರೆಯುವಂತಿಲ್ಲ, ಎಂಬ ಪ್ರತೀತಿ ಇರುವ ಕಾರಣ ಈ ಪ್ರಕ್ರಿಯೆಯನ್ನು ಅತ್ಯಂತ ಶ್ರದ್ಧೆಯಿಂದ ಅಲ್ಲಿನ ಅರ್ಚಕರು ನಡೆಸಿಕೊಂಡು ಬರುತ್ತಿದ್ದಾರೆ. ಇದನ್ನು ನೋಡುವುದಕ್ಕೆ ನಿಜಕ್ಕೂ ಎದೆ ಘಲ್ ಎನಿಸಿವಷ್ಟು ರೋಚಕವಾಗಿರುತ್ತದೆ.

ವಿಶೇಷ ದಿನಗಳ ಹೊರತಾಗಿ ಈ ದೇವಸ್ಥಾನಕ್ಕೆ ಪ್ರತಿ ದಿನವೂ ಅಂದಾಜಿನಂತೆ 2 ಸಾವಿರದಿಂದ 10 ಸಾವಿರ ವರೆಗೆ ಭಕ್ತರು ಬರುತ್ತಾರೆ. ಎಷ್ಟೇ ಜನರು ಬಂದರೂ ಇಲ್ಲಿ ಮಾಡುವ ಪ್ರಸಾದದ ಪ್ರಮಾಣದಲ್ಲಿ ಮಾತ್ರ ಎಂದಿಗೂ ಹೆಚ್ಚು ಅಥವಾ ಕಡಿಮೆಯಾಗುವುದಿಲ್ಲ. ಅಷ್ಟು ನಿಖರವಾಗಿಯೇ ಪ್ರಸಾದವನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಪ್ರತೀ ದಿನವೂ ಒಂದೇ ಪ್ರಮಾಣದಲ್ಲಿಯೇ ಆಹಾರ ತಯಾರಿಸಿದರೂ ಒಂದು ಅಗುಳೂ ಹೆಚ್ಚು ಕಡಿಮೆಯಾಗದಂತೆ ಅಷ್ಟೂ ಜನಕ್ಕೆ ಸಾಕಾಗುವಷ್ಟು ಆಹಾರ ಅಕ್ಷಯವಾಗುವುದು ನಿಜಕ್ಕೂ ಆಶ್ಚರ್ಯಕರವಾದ ವಿಷಯವಾಗಿದೆ.

ಇನ್ನು ಇಲ್ಲಿ ಪ್ರಸಾದ ಮಾಡುವ ವಿಧಾನವೂ ಬಹಳ ವಿಶೇಷವಾಗಿದೆ, ಏಳು ಮಣ್ಣಿನ ಮಡಕೆಗಳನ್ನು ಒಂದರ ಮೇಲೆ ಮತ್ತೊಂದು ಮಡಿಕೆ ಇಟ್ಟು, ಪ್ರಸಾದವನ್ನು ಬೇಯಲು ಇಡುತ್ತಾರೆ. ಸಾಮನ್ಯವಾಗಿ ಕೆಳಗಿನ ಮಡಿಗೆಯ ಪ್ರಸಾದ ಮೊದಲು ಬೆಂದ ನಂತರ ಅದರ ಮೇಲಿನದ್ದು ಬೇಯುವುದು ಸಹಜ ಪ್ರಕ್ರಿಯೆಯಾದರೆ, ಇಲ್ಲಿ ಮಾತ್ರಾ ಅಚ್ಚರಿಯಂತೆ ಮೇಲಿನ ಮಡಿಕೆಯ ಪ್ರಸಾದ ಬೆಂದ ನಂತರವೇ ಕೆಳಗಿನ ಮಡಿಕೆಯ ಪ್ರಸಾದ ಬೇಯುವುದು ನಿಜಕ್ಕೂ ಕುತೂಹಲಕಾರಿಯಾಗಿದೆ.

ಈ ಕೋವಿಡ್ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಈ ರಥಯಾತ್ರೆಯನ್ನು ನಡೆಸಲು ಹಿಂದೂ ಮುಂದೂ ಯೋಚಿಸುತ್ತಿದ್ದಾಗ, ತಲತಲಾಂತರದಿಂದ ನಡೆಸಿಕೊಂಡು ಬಂದಿರುವ ಸಂಪ್ರದಾಯವನ್ನು ನಿಲ್ಲಿಸಬಾರದೆಂದು ನ್ಯಾಯಾಲಯಾದಲ್ಲಿ ವಿಶೇಷವಾದ ಅನುಮತಿಯನ್ನು ಪಡೆದು ಈ ಬಾರಿಯ ರಥಯಾತ್ರೆಯನ್ನು ನಡೆಸುತ್ತಿರುವುದು ವಿಶೇಷವಾಗಿದೆ.

WhatsApp Image 2021-07-12 at 3.23.00 PMಇಂತಹ ಪುರಾಣ ಪ್ರಸಿದ್ಧ ಪುರಿ ಜಗನ್ನಾಥ ದೇವಸ್ಥಾನದ ವಿಶೇಷತೆಗಳನ್ನು ಮತ್ತು ನಮ್ಮ ಹೆಮ್ಮೆಯ ಪ್ರತೀಕವಾದ ಜಗನ್ನಾಥನ ರಥಯಾತ್ರಾ ಇತಿಹಾಸವನ್ನು ಸದ್ಯದ ಪರಿಸ್ಥಿತಿಯಲ್ಲಿ ಅಷ್ಟು ದೂರ ಹೋಗಿ ನೋಡಲು ಸಾಧ್ಯವಿಲ್ಲದ ಕಾರಣ, ಟಿವಿಯಲ್ಲಾಗಲೀ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರದಲ್ಲಿ ಲಭ್ಯವಿರುವ ಕಾರಣ, ಅಲ್ಲಿಯೇ ದರ್ಶನ ಮಾಡುವ ಮುಖಾಂತರ ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗೋಣ ಅಲ್ವೇ?

ಪುರಿ ದೇವಾಲಯವನ್ನೂ ಮತ್ತು ರಥಯಾತ್ರೆಯನ್ನು ಕಣ್ತುಂಬ ಇಲ್ಲಿಯೇ ನೋಡೋಣ ಬನ್ನಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s