ಅರ್ಜುನ ಸರ್ಜಾ ಅವರ ಯೋಗಾಂಜನೇಯ ಸ್ವಾಮಿ ದೇವಸ್ಥಾನ

shakthi_prasad

ಕನ್ನಡ ಚಲನಚಿತ್ರರಂಗದಲ್ಲಿ ಬಾಲ ಕಲಾವಿದನಾಗಿ ಪ್ರವೇಶಿಸಿ ಈಗ ಬಹುಭಾಷಾ ನಾಯಕ ನಟನಾಗಿರುವ ಖ್ಯಾತ ಖಳನಟ ಶಕ್ತಿ ಪ್ರಸಾದ್ ಅವರ ಮಗ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಇಡೀ ಕುಟುಂಬವೇ ಆಂಜನೇಯ ಸ್ವಾಮಿಯ ಭಕ್ತರು ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಸಿನಿಮಾಗಳಲ್ಲಿ ಮಾತ್ರವಲ್ಲದೆ ರಿಯಲ್ ಲೈಫ್ನಲ್ಲಿಯೂ ಪವನಪುತ್ರ ಹನುಮಂತನ ಬಗ್ಗೆ ಅಪಾರವಾದ ಭಕ್ತಿ ಹೊಂದಿದೆ ಈ ಕುಟುಂಬ. ಈಗಾಗಲೇ ತುಮಕೂರಿನ ಬಳಿಯಿರುವ ತಮ್ಮ ಹುಟ್ಟೂರಿನಲ್ಲಿ ದೇವಸ್ಥಾನವನ್ನು ಕಟ್ಟಿಸಿದ್ದ ಅರ್ಜುನ್ ಸರ್ಜಾ ಸದ್ಯದಲ್ಲಿ ಚೆನ್ನೈನಲ್ಲಿ ವಾಸವಾಗಿದ್ದಾರೆ. ಚೆನ್ನೈನ ವಿಮಾನ ನಿಲ್ದಾಣದ ಬಳಿ ಗೆರುಗಂಬಾಕಮ್ ನಲ್ಲಿ ಇರುವ ತಮ್ಮ ಫಾರ್ಮ್ ಹೌಸಿನಲ್ಲಿ ಅದ್ಭುತವಾದ ಬೃಹತ್ತಾದ ಆಂಜನೇಯ ಸ್ವಾಮಿ ದೇವಾಲಯವನ್ನು ನಿರ್ಮಾಣ ಮಾಡಲು ಬಹಳ ದಿನಗಳಿಂದಲೂ ಕನಸನ್ನು ಕಂಡಿದ್ದಲ್ಲದೇ ಅದನ್ನು ಸಾಕರ ಮಾಡಲು ಬಹಳಷ್ಟು ಕಡೆ ಯತಿವರೇಣ್ಯರರನ್ನು ಭೇಟಿ ಮಾಡಿದ್ದರು.

pejavara_shree

ಹದಿನಾರು ವರ್ಷಗಳ ಹಿಂದೆ ತಮ್ಮ ಕನಸಿನ ಪ್ರಾಣದೇವರ ಸುಂದರ ಮೂರ್ತಿಯನ್ನು ನಿರ್ಮಿಸಲು ಸಂಕಲ್ಪಿಸಿ, ವಿಶ್ವಸಂತ ಪೇಜಾವರ ಮಠದ ಶ್ರೀಗಳಾದ ಶ್ರೀ ವಿಶ್ವೇಶ ತೀರ್ಥರ ದಿವ್ಯ ಸಾನಿಧ್ಯದಲ್ಲಿ ಆ ದೇವಸ್ಥಾನದ ಭೂಮಿಪೂಜೆ ನೆರವೇರಿಸಿ ಅದಕ್ಕಾಗಿ ಏಕಶಿಲೆಯನ್ನು ಎಲ್ಲಾಕಡೆಯಲ್ಲಿಯೂ ಹುಡುಕಾಡತೊಡಗಿದರು. ಅಂತಿಮವಾಗಿ ಅವರಿಗೆ ಬೇಕಾಗಿದ್ದ ಕಲ್ಲು ದೇವನಹಳ್ಳಿಯ ಬಳಿ ದೊರಕಿ, ಅವಿಭಜಿತ ದಕ್ಷಿಣ ಕನ್ನಡದ ಶಿಲ್ಪಿ ಶ್ರೀ ಅಶೋಕ್ ಗುಡಿಗಾರ್ ನೇತೃತ್ವದಲ್ಲಿ ಈ ಏಕಶಿಲಾ ಮೂರ್ತಿಯ ಕೆತ್ತನೆ ಕಾರ್ಯ ಆರಂಭಿಸಲಾಯಿತು. ಧ್ಯಾನದ ಭಂಗಿಯಲ್ಲಿರುವ ಯೋಗಾಂಜನೇಯ ಸ್ವಾಮಿಯ 35 ಅಡಿ ಎತ್ತರದ ಸುಮಾರು 180 ಟನ್ ತೂಕವಿರುವ ಸುಂದರ ಮೂರ್ತಿ ಸಿದ್ದವಾಗುತ್ತಿದ್ದಂತೆಯೇ ಆ ಬೃಹದಾಕರದ ವಿಗ್ರಹವನ್ನು ದೇವನಹಳ್ಳಿಯಿಂದ ಚೆನ್ನೈನಲ್ಲಿರುವ ಅರ್ಜುನ್ ಸರ್ಜಾ ಅವರ ಫಾರ್ಮ್ ಹೌಸಿಗೆ ಹರಸಾಹಸ ಮಾಡಿ ತೆಗೆದುಕೊಂಡು ಹೋಗಲಾಯಿತು.

arjun7

ನಟ ಅರ್ಜುನ್ ಸರ್ಜಾ ಹನುಮಂತನ ದೇವಸ್ಥಾನ ನಿರ್ಮಿಸುವ ಮುನ್ನ ಕರ್ನಾಟಕ ಮತ್ತು ಕೇರಳದ ಕರಾವಳಿಯ ಅಷ್ಟೂ ದೇವಸ್ಥಾನಗಳಿಗೆ ಭೇಟಿ ನೀಡಿ ದೇವಸ್ಥಾನದ ಅದ್ಭುತ ವಾಸ್ತುಶಿಲ್ಪದ ಮಾಹಿತಿ ಪಡೆದುಕೊಂಡಿದ್ದರು. ಅಂತಿಮವಾಗಿ ಕರಾವಳಿ ಮತ್ತು ಕೇರಳ ದೇವಸ್ಥಾನಗಳ ಮಾದರಿಯಲ್ಲೇ ತನ್ನ ಆರಾಧ್ಯದೈವ ಹನುಮಂತನ ದೇವಸ್ಥಾನವನ್ನು ನಿರ್ಮಿಸಲು ಯೋಜನೆ ಹಾಕಿಕೊಂಡರು. ಅರ್ಜುನ್ ಸರ್ಜಾ ಆವರ ಆಂಜನೇಯ ಸ್ವಾಮಿಯ ಬೃಹತ್ತಾದ ದೇವಾಲಯ ನಿರ್ಮಾಣ ಮಾಡಬೇಕೆಂಬ ಸಂಕಲ್ಪವನ್ನು ನನಸು ಮಾಡಲು ಮಂಗಳೂರಿನ ಎಂಜಿನಿಯರ್ ಬೋಳಾರ ಸಂತೋಷ್ ಕುಮಾರ್ ಶೆಟ್ಟಿ ಯವರು ಕೈಜೋಡಿಸಿ ಇಡೀ ದೇವಸ್ಥಾನದ ಸುಂದರ ಪರಿಕಲ್ಪನೆಯ ನೀಲಿನಕ್ಷೆಯನ್ನು ಸಿದ್ಧ ಪಡಿಸಿದರು.

Ashok gudigar

ತಮ್ಮ ಕನಸಿನ ದೇವಾಲಯಕ್ಕೆ ಕರಾವಳಿಯ ದೇವಸ್ಥಾನಗಳ ರಚನೆಗೆ ಬಳಸುವ ಕೆಂಪು ಕಲ್ಲುಗಳನ್ನೇ ಬಳಸಬೇಕೆಂದು ಇಚ್ಚಿಸಿದ ಅರ್ಜುನ್ ಸರ್ಜಾ, ಮಂಗಳೂರಿನಿಂದಲೇ ಕೆಂಪು ಕಲ್ಲುಗಳನ್ನು ಚೆನೈಗೆ ರೈಲಿನ ಮೂಲಕ‌ ಸುಮಾರು 60 ಲಕ್ಷ ಮೌಲ್ಯದ ಒಂದು ಲಕ್ಷ ಕೆಂಪು ಕಲ್ಲುಗಳನ್ನು ತರಿಸಿಕೊಂಡರು. ಸುಮಾರು 27 ಟನ್‌ ಕಬ್ಬಿಣವನ್ನು ಬಳಸಿಕೊಂಡು ಮಂಗಳೂರಿನ ಬೋಳಾರ ಹಳೆಕೋಟೆ ಮಾರಿಯಮ್ಮ, ಕುಡುಪು ಅನಂತಪದ್ಮನಾಭ ದೇವಸ್ಥಾನ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ,ಕದ್ರಿಯ ಮಹತೋಭಾರ ಮಂಜುನಾಥೇಶ್ವರ ದೇವಸ್ಥಾನದ ವಾಸ್ತು ಶಿಲ್ಪದ ವಿನ್ಯಾಸದ ರೀತಿಯಲ್ಲಿಯೇ ಇಲ್ಲಿನ ದೇವಸ್ಥಾನವನ್ನು ನಿರ್ಮಿಸಿರುವುದು ಗಮನಾರ್ಹವಾಗಿದೆ. ಈ ದೇವಾಲಯಕ್ಕಾಗಿ ಕೋಟಿ ಕೋಟಿಗಟ್ಟಲೆ ನೀರಿನಂತೆ ಹಣವನ್ನು ಖರ್ಚು ಮಾಡಿ, ಅಂತಿಮವಾಗಿ ದೇವಾಲಯ ತಮ್ಮ ಅಭೀಪ್ಸೆಯಂತೆ ನಿರ್ಮಾಣಗೊಂಡಾಗ ತಾವು ಮಾಡಿದ ಖರ್ಚುವೆಲ್ಲವೂ ಸಾರ್ಥವಾಗಿತೆಂದು ಇಡೀ ಸರ್ಜಾ ಕುಟುಂಬವೇ ಸಂತಸ ಪಟ್ಟಿದ್ದರು.

ತಮ್ಮ ಬಹುದಿನಗಳ ಆಸೆಯಂತೆ, ಸಂಪೂರ್ಣಗೊಂಡ ಈ ದೇವಸ್ಥಾನದ ಕುಂಭಾಭಿಷೇಕವನ್ನು ಸ್ನೇಹಿತರು, ಬಂಧುಗಳು ಹಾಗೂ ಭಕ್ತಾಧಿಗಳ ಜೊತೆ ಅತ್ಯಂತ ಅದ್ದೂರಿಯಾಗಿ ನಡೆಸಬೇಕೆಂದು ಇಚ್ಚಿಸಿದ್ದರೂ, ಸದ್ಯದ ಕೊರೊನಾ ಪರಿಸ್ಥಿತಿ ಮತ್ತು ಜನರ ಹಿತವನ್ನು ಮನದಲ್ಲಿ ಇಟ್ಟುಕೊಂಡು ಹೆಚ್ಚು ಜನರನ್ನು ಆಹ್ವಾನಿಸದೇ ಕೇವಲ ತಮ್ಮ ಕುಟುಂಬದವರೊಂದಿಗ್ಗೆ ಇದೇ ಜುಲೈ 1 ಮತ್ತು 2ರಂದು ಪೇಜಾವರ ಮಠದ ಪ್ರಸ್ತುತ ಶ್ರೀಗಳಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರ ಸಾರಥ್ಯದಲ್ಲಿ ಉಡುಪಿಯಿಂದ ಕರೆದುಕೊಂಡು ಹೋಗಿದ್ದ ಹತ್ತಾರು ಋತ್ವಿಕರ ಸಹಾಯದಿಂದ ಧ್ಯಾನದ ಭಂಗಿಯಲ್ಲಿರುವ ಯೋಗಾಂಜನೇಯ ದೇವಸ್ಥಾನವನ್ನು ಲೋಕಾರ್ಪಣೆ ಮಾಡಲಾಯಿತು.

arjun3

ಸಮಸ್ತ ಆಸ್ತಿಕ ಬಂಧುಗಳು ಈ ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿಸಲು ಸಾಧ್ಯವಾಗದ್ದದ್ದಕ್ಕೆ ಬಹಳವಾಗಿ ಬೇಸರಗೊಂಡ ಅರ್ಜುನ್ ಸರ್ಜಾ. ಈ ಸಮಾರಂಭವನ್ನು ಎಲ್ಲರೂ ಕಣ್ತುಂಬಿಸಿಕೊಳ್ಳಲು ಅನುವಾಗುವಂತೆ ಯೂಟ್ಯೂಬ್ ಮೂಲಕ ಜ.1 ಮತ್ತು 2ರಂದು ಲೈವ್ ಪ್ರಸಾರ ಮಾಡಿದ್ದಲ್ಲದೇ, ಈ ಕೊರೊನಾ ಸಂಕಷ್ಟ ಮುಗಿದ ನಂತರ ಸಕುಟುಂಬ ಸಮೇತರಾಗಿ ಎಲ್ಲರೂ ದೇವಾಲಯಕ್ಕೆ ಬಂದು ಸ್ವಾಮಿಯ ದರ್ಶನ ಪಡೆದು, ಆಂಜನೇಯನ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದು ಅಭಿನಂದನಾರ್ಹವಾಗಿತ್ತು.
ಎರಡು ದಿನಗಳ ಕಾಲ ದೇವಸ್ಥಾನದ ಮಹಾಕುಂಭಾಭಿಷೇಕ ಸರಳವಾಗಿಯಾದರೂ ಸಕಲ ಶಾಸ್ತ್ರೋಕ್ತವಾಗಿ ಕೋವಿಡ್ ನಿಯಮಗಳಂತೆಯೇ ಅರ್ಜುನ ಸರ್ಜಾ ಮತ್ತು ಅವರ ತಾರಾಪತ್ನಿ ಆಶಾರಾಣಿ ಜೊತೆ ಅವರ ಮಕ್ಕಳು, ಧ್ರುವ ಸರ್ಜಾ ದಂಪತಿ ಸೇರಿದಂತೆ ಸರ್ಜಾ ಕುಟುಂಬದ ಸದಸ್ಯರು ಮತ್ತು ಆಪ್ತರು ಕಾರ್ಯಕ್ರಮದಲ್ಲಿ ಭಾಗಿಗಳಾಗುವ ಮೂಲಕ ಮೂರ್ತಿ ಪ್ರತಿಷ್ಟಾಪನಾ ಮಹೋತ್ಸವ ನಿರ್ವಿಘ್ನವಾಗಿ ನೆರವೇರಿದೆ.ದೇವಸ್ಥಾನದ ಅಂಗಳದಲ್ಲಿ ಗಣೇಶ, ರಾಮ, ಸೀತಾ, ಲಕ್ಷ್ಮಣರ ಗುಡಿಗಳನ್ನೂ ಸಹಾ ನಿರ್ಮಿಸಿರುವುದು ಗಮನಾರ್ಹವಾಗಿದೆ. ಇಷ್ಟೆಲ್ಲಾ ಸಂಭ್ರಮದ ನಡುವೆಯೂ ಕಳೆದ ವರ್ಷ ಅಕಾಲಿಕವಾಗಿ ಅಗಲಿದ ಚಿರಂಜೀವಿ ಸರ್ಜಾ ಅವರ ನೆನಪೂ ಸಹಾ ಆ ಕುಟುಂಬವನ್ನು ಕಾಡಿದ್ದು ಅತ್ಯಂತ ಬೇಸರದ ಸಂಗತಿಯಾಗಿತ್ತು.

vinay

ಈ ಸರಳ ಸುಂದರ ಸಮಾರಂಭಕ್ಕೆ ಚಿಕ್ಕಮಗಳೂರಿನ ಗೌರೀಗದ್ದೆಯ ಅವಧೂತರೆಂದೇ ಖ್ಯಾತರಾಗಿರುವ ಶ್ರೀ ವಿನಯ್ ಗುರೂಜಿಯವರು ಸಂತೋಷದಿಂದ ಪಾಲ್ಗೊಂಡು ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಿದ್ದಲ್ಲದೇ, ಆಂಜನೇಯನ ಸುಂದರವಾದ ಪೋಟೋವೊಂದನ್ನು ಅರ್ಜುನ್ ಸಜ್ಯಾವರಿಗೆ ಆಶೀರ್ವಾದ ಪೂರ್ವಕವಾಗಿ ಕೊಟ್ಟರು.

ಇನ್ನೇಕೆ ತಡಾ ಕೋವೀಡ್ ಮಹಾಮಾರಿ ಮುಗಿಯುತ್ತಿದ್ದಂತೆಯೇ ಸಮಯ ಮಾಡಿಕೊಂಡು ಚನ್ನೈಯಲ್ಲಿರುವ ಈ ಯೋಗಾಂಜನೇಯ ಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿ ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತೀರೀ ತಾನೇ?

ದೇವಸ್ಥಾನದ ಕುಂಭಾಭಿಷೇಕವನ್ನು ಕಣ್ತುಂಬಿಸಿಕೊಂಡು ಆ ಆಂಜನೇಯನ ಆಶೀರ್ವಾದಕ್ಕೆ ಪಾತ್ರರಾಗೋಣ ಬನ್ನಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s