ಕೆಲ ವರ್ಷಗಳ ಹಿಂದೆ ನಮ್ಮ ಅಜ್ಜಿಯವರು ಇನ್ನೂ ಬದುಕಿದ್ದರು. ಅದಾಗಲೇ ಅವರಿಗೆ 90+ ವರ್ಷಗಳಷ್ಟು ವಯಸ್ಸಾಗಿತ್ತು. ಸುಮಾರು 80+ ವರ್ಷಗಳ ಕಾಲ ಬಹಳ ಸ್ವಾಭಿಮಾನಿಯಾಗಿ ತನ್ನೆಲ್ಲಾ ಕೆಲಸವನ್ನು ಮಾಡಿಕೊಳ್ಳುತ್ತಾ ನಮ್ಮೂರಿನಲ್ಲಿಯೇ ಇದ್ದವರನ್ನು ವಯೋಸಹಜ ಕಾರಣಗಳಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದೆವು. ಮೂರು ಗಂಡು ಮಕ್ಕಳು ಇಬ್ಬರು ಹೆಣ್ಣುಮಕ್ಕಳ ಹೆಮ್ಮೆಯ ತಾಯಿ. ಬೆಂಗಳೂರಿನಲ್ಲಿ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳಿದ್ದರೆ ಮೈಸೂರಿನಲ್ಲಿ ಒಬ್ಬ ಮಗ ಮತ್ತು ಶಿವಮೊಗ್ಗದಲ್ಲಿ ಮತ್ತೊಬ್ಬ ಮಗಳಿದ್ದ ಕಾರಣ, ಅಂತಹ ಇಳೀ ವಯಸ್ಸಿನಲ್ಲಿಯೂ ಸ್ವತಃ ಅವರೇ ಅಗ್ಗಾಗ್ಗೇ ಕೆಲ ದಿನಗಳ ಮಟ್ಟಿಗೆ ಒಬ್ಬೊಬ್ಬರ ಮನೆಗಳಲ್ಲಿ ಅವರಿಗೆ ಇಷ್ಟ ಬಂದಷ್ಟು ದಿನಗಳು (ಇಷ್ಟ ಅನ್ನುವುದಕ್ಕಿಂತ ಕಷ್ಟ ಎನಿಸುವಷ್ಟು) ಇದ್ದು ಮತ್ತೊಬ್ಬರ ಮನೆಗೆ ಹೋಗುತ್ತಿದ್ದರು.
ಅಜ್ಜಿಯ ಮಕ್ಕಳು ಒಮ್ಮೆ ಕಾಶೀ ಯಾತ್ರೇ, ಎರಡು ಬಾರಿ ರಾಮೇಶ್ವರದ ಯಾತ್ರೆ, ಮೊಮ್ಮಗಳ ಮನೆಗೆಂದು ಮುಂಬೈಯ್ಯಿಗಲ್ಲದೇ, ನಾಡಿನ ಎಲ್ಲಾ ತೀರ್ಥಕ್ಷೇತ್ರಗಳಿಗೂ ಅದೆಷ್ಟೋ ಬಾರಿ ಕರೆದುಕೊಂಡು ಹೋಗಿದ್ದರು. ಅಜ್ಜಿ ಬರ್ತೇನೇ ಅಂದರೆ ಸಾಕು. ಕಾರಿನಲ್ಲಿ ಹೋಗಿ ಅಜ್ಜಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೊಗುವ ಮೊಮ್ಮಕ್ಕಳಿದ್ದರು. ಒಟ್ಟಿನಲ್ಲಿ ಜೀವನವಿಡೀ ಕಷ್ಟದಲ್ಲೇ ಬೆಂದಿದ್ದ ನಮ್ಮಜ್ಜಿಗೆ ಕಡೆಯ ದಿನಗಳಲ್ಲಿ ಎಲ್ಲಾ ರೀತಿಯ ಐಶಾರಾಮೀ ಸೌಲಭ್ಯಗಳೂ ಕೈಗೆಟುಕಿತ್ತು. ಇಷ್ಟೆಲ್ಲಾ ಇದ್ದರೂ ನಮ್ಮಜ್ಜಿಗೆ ಅದೋಕೋ ಏನೋ ಅಸಮಧಾನ. ತಾನು ಇನ್ನೂ ಏನನ್ನೂ ನೋಡಿಲ್ಲವಲ್ಲಾ, ತಾನೂ ಇನ್ನೂ ಏನನ್ನು ಅನುಭವಿಸಿಲ್ಲ ಎಂಬ ಕೊರತೆ.
ಅದೊಮ್ಮೆ ನಮ್ಮ ಮನೆಗೆ ಬಂದವರೊಬ್ಬರು ಲೋಕಾರೂಢಿಯಾಗಿ, ಅಜ್ಜೀ, ಮೊನ್ನೆ ನಮ್ಮೂರಿಗೆ ಹೋಗಿದ್ದಾಗ ಅಲ್ಲೇ ಹತ್ತಿರದ ತೀರ್ಥಕ್ಷೇತ್ರಕ್ಕೆ ಹೋಗಿದ್ದೆವು. ಆ ಪುಣ್ಯಕ್ಷೇತ್ರ ಏನು ಚೆನ್ನಾಗಿದೇ ಅಂತೀರೀ? ಅಲ್ಲಿಯ ದೇವರನ್ನು ನೋಡಲು ಎರಡು ಕಣ್ಣುಗಳು ಸಾಲದು ಎಂದ ತಕ್ಷಣವೇ, ನಮ್ಮಜ್ಜಿಯ ಎಂದಿನ ಡೈಲಾಗ್ ನೆನಪಾಗಿ ,ಅಯ್ಯೋ ನಮಗೆಲ್ಲಿ ಬರಬೇಕು ಅಂತಹ ಪುಣ್ಯ. ನಾನೂ ಇದ್ದೀನಿ ಭೂಮಿಗೆ ಭಾರ ಊಟಕ್ಕೆ ದಂಡ ಅಂತಾ ಹೇಳ್ಬಿಡೋದೇ? ಅರೇ ಇಷ್ಟು ಚೆನ್ನಾಗಿ ನೋಡಿ ಕೊಂಡರೂ ಬಂದವರ ಮುಂದೆ ಈ ರೀತಿಯ ಅಕ್ಷೇಪಣೆ ಮಾತುಗಳನ್ನು ಆಡಿ ನಮ್ಮಲ್ಲರನ್ನು ಮುಜುಗರಕ್ಕೆ ಈಡು ಮಾಡುತ್ತಾರಲ್ಲಾ? ಎಂದು ನಮ್ಮಮ್ಮ ಸಿಡಿಮಿಡಿಗೊಂಡಿದ್ದರು.
ತಮ್ಮ ಅಮ್ಮನ ಗುಣವನ್ನರಿತಿದ್ದ ನಮ್ಮ ತಂದೆಯವರು ಈ ರೀತಿಯ ಸಿಡಿಮಿಡಿಗಳಿಗೆ ತಲೆಯನ್ನೇ ಕೆಡಿಸಿಕೊಳ್ಳುತ್ತಿರಲಿಲ್ಲ. ಅವರೇನೋ ಅವರಮ್ಮನ್ನನ್ನು ಸಹಿಸಿಕೊಳ್ಳುತ್ತಿದ್ದರು ಆದರೆ ನನಗೆ ನಮ್ಮಮ್ಮನ ಸಂಕಟವನ್ನು ಸಹಿಸಲಾಗದೇ ಇದಕ್ಕೆಲ್ಲಾ ಒಂದು ಪರಿಹಾರವನ್ನು ಕಂಡು ಹಿಡಿಯಲೇ ಬೇಕೆಂದು ಮುಂದಿನ ಬಾರಿ ಮತ್ತೊಬ್ಬರೊಂದಿಗೆ ಇದೇ ರೀತಿಯ ಸಂಭಾಷಣೆ ನಡೆಯುತ್ತಿದ್ದಾಗ ಆವರ ಮಾತಿನ ಮಧ್ಯೆಯಲ್ಲಿ ಮೂಗು ತೂರಿಸಿ, ಬಂದವನ್ನು ನೀವು ಕಾಶೀಗೆ ಹೋಗಿದ್ದೀರಾ? ರಾಮೇಶ್ವರ ಎಷ್ಟು ಬಾರಿ ನೋಡಿದ್ದೀರಿ? ಶೃಂಗೇರಿ ಜಗದ್ಗುರುಗಳ ಆಶೀರ್ವಾದ ನಿಮಗೆ ಎಷ್ಟು ಬಾರೀ ಆಗಿದೇ? ಕಂಚಿ ಮಹಾ ಗುರುಗಳನ್ನು ಪೇಜಾವರ ಶ್ರೀಗಳನ್ನು ಎಂದಿಗಾದರು ನಿಮ್ಮ ಮನೆಗೆ ಕರೆಸಿದ್ದೀರಾ? ಎಂದು ಕೇಳಿದಾಗ, ಅವರು ಅಯ್ಯೋ ನಮ್ಮ ಯಜಮಾನರ ಸಂಬಳದಲ್ಲಿ ಸಂಸಾರ ನಡೆಸೋದೇ ಕಷ್ಟ ಆಗಿತ್ತು. ಈಗ ಮಕ್ಕಳು ಈಗ ಕೆಲಸಕ್ಕೆ ಸೇರಿಕೊಂಡ ಮೇಲೆ ಸ್ವಲ್ಪ ಸುಧಾರಿಸಿ ಎಷ್ಟೋ ವರ್ಷಗಳ ನಂತರ ನಮ್ಮೂರಿಗೆ ಹೊಗಿ ಬಂದ್ವೀ, ಹಾಗೇ ಪಕ್ಕದ ಊರಿಗೂ ಹೊಗಿದ್ವೀ ಅಷ್ಟೇ ಎಂದಾಗಾ, ನಾನು ನಮ್ಮಜ್ಜಿಯ ಕಡೆ ನೋಡಿ, ಸುಮ್ಮನೇ ಮಾತನಾಡದೇ, ಏನಜ್ಜೀ? ಏನಂತೀರೀ? ಎಂದು ಹುಬ್ಬೇರಿಸಿದಾಗ, ನಮ್ಮಜ್ಜಿ ಏನೂ ಆಗೇ ಇಲ್ವೇನೋ ಎಂಬಂತೆ ಮೂತಿ ತಿರುಗಿಸಿದ್ದು ಇನ್ನೂ ಹಚ್ಚ ಹಸಿರಾಗಿಯೇ ಇದೆ.
ನಮ್ಮ ದೇಶದ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ದೇಶವಾಸಿಗಳ ಮನಸ್ಥಿತಿ ಇದಕ್ಕಿಂತಲೂ ಭಿನ್ನವಾಗಿ ಏನೂ ಇಲ್ಲಾ. ಧರ್ಮಾಧಾರಿತವಾಗಿ ದೇಶ ವಿಭಜನೆ ಆದರೂ, ಯಾರದ್ದೋ ತೆವಲಿಗೆ ಜಾತ್ಯಾತೀತ ರಾಷ್ಟ್ರವಾಗಿಯೇ ಉಳಿದು ಹೋದ ಈ ದೇಶದಲ್ಲಿಯೇ ಹುಟ್ಟಿ ಇಲ್ಲಿನ ಎಲ್ಲಾ ಸೌಲಭ್ಯಗಳನ್ನು ಪಡೆದು ಕೊಂಡು ಪ್ರತಿ ದಿನವೂ, ಈ ದೇಶವನ್ನೇ ಬೈದ್ಯಾಡಿಕೊಂಡು ಅಡ್ಡಾಡುತ್ತಾ, ತಮ್ಮ ಗಂಜಿಯನ್ನು ಬೇಯಿಸಿಕೊಳ್ಳುತ್ತಿರುವ ಮಂದಿಯನ್ನು ನೋಡುವಾಗ ಸಾಮಾಜಿಕ ಜಾಲತಾಣದಲ್ಲಿ ಓದಿದ ಈ ಪ್ರಸಂಗ ನೆನಪಿಗೆ ಬರುತ್ತದೆ.
ವ್ಯಕ್ತಿಯೊಬ್ಬ ಪಕ್ಕದೂರಿಗೆ ಹೋಗುವ ಸಲುವಾಗಿ ನದಿಯನ್ನು ದಾಟಲು ತನ್ನ ನಾಯಿಯೊಂದಿಗೆ ದೋಣಿಯನ್ನು ಏರಿದ. ಆ ನಾಯಿಗೆ ದೋಣಿಯ ಪ್ರಯಾಣ ಮೊದಲ ಬಾರಿಯಾಗಿದ್ದ ಪರಿಣಾಮ ಇದ್ದಕ್ಕಿದ್ದಂತೆಯೇ ಚಡಪಡಿಕೆಯುಂಟಾಗಿ ಅತ್ತಿಂದಿತ್ತ, ಇತ್ತಿಂದಿತ್ತ ಓಡಾಡುತ್ತಾ ಎಲ್ಲರಿಗೂ ತೊಂದರೆ ಕೊಡುತ್ತಿದ್ದದ್ದಲ್ಲದೇ, ದೋಣಿಯನ್ನೂ ಡೋಲಾಯಮಾನ ಸ್ಥಿತಿಗೆ ತಳ್ಳಿತ್ತು.
ದೋಣಿಯನ್ನು ನಡೆಸುತಿದ್ದವರು ದಯವಿಟ್ಟು ನಾಯಿಯನ್ನು ಒಂದು ಕಡೆ ಹಿಡಿದಿಟ್ಟುಕೊಳ್ಳದೇ ಹೋದಲ್ಲಿ ದೋಣಿಯೇ ಮುಳುಗಿ ಎಲ್ಲರಿಗೂ ತೊಂದರೆ ಆಗಬಹುದು ಎಂದು ಎಚ್ಚರಿಸಿದಾಗ ಆ ನಾಯಿಯನ್ನು ಕಟ್ಟಿ ಹಾಕಲು ಪ್ರಯತ್ನಿಸಿದಾಗ, ಅದು ಭಯದಿಂದಲೋ ಇಲ್ಲವೇ ತನ್ನ ಬುದ್ದಿಯ ಅನುಗುಣವಾಗಿ ಸುಖಾ ಸುಮ್ಮನೇ ಬೊಗಳತೊಡಗಿದಾಗ ಎಲ್ಲರಿಗೂ ಅದರಿಂದ ತೊಂದರೆಯಾಗ ತೊಡಗಿತು. ನಾಯಿಯನ್ನು ಸುಮ್ಮನಾಗಿಸಲು ಅದರ ಮಾಲಿಕ ಮಾಡುತ್ತಿದ್ದ ಎಲ್ಲಾ ಪ್ರಯತ್ನಗಳೂ ವಿಫಲವಾಗುತ್ತಿತ್ತು.
ಇದೆಲ್ಲವನ್ನು ಗಮನಿಸುತ್ತಿದ್ದ ಹಿರಿಯರೊಬ್ಬರು, ನೀವು ಅನುಮತಿಸಿದರೆ, ನಾನು ಈ ನಾಯಿಯನ್ನು ನಿಮ್ಮ ಮನೆಯಲ್ಲಿದ್ದಂತೆಯೇ ಶಾಂತವಾಗಿರಿಸಬಲ್ಲೇ ಎಂದಾಗ ಮಾಲಿಕನಿಗೆ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತಾಗಿ ಕೂಡಲೇ ಒಪ್ಪಿಕೊಂಡರು. ಮಾಲಿಕರರು ಒಪ್ಪಿಕೊಂಡ ಕೂಡಲೇ ಆ ಹಿರಿಯರು ನಾಯಿಯನ್ನು ಎತ್ತಿ ನದಿಗೆ ಎಸೆದು ಬಿಟ್ಟರು. ಅಚಾನಕ್ಕಾಗಿ ಈ ರೀತಿ ನೀರಿಗೆ ಬಿದ್ದ ನಾಯಿ ತನ್ನ ಜೀವವನ್ನು ಉಳಿಸಿಕೊಳ್ಳುವ ಸಲುವಾಗಿ ಈಜಲಾರಂಭಿಸಿತು, ಸ್ವಲ್ಪ ಹೊತ್ತು ಈಜಿದ ನಂತರ ನಾಯಿಯ ಶಕ್ತಿಯೆಲ್ಲವೂ ಕ್ಷೀಣಿಸತೊಡಗಿದಾಗ ಹತಾಶೆಯಿಂದ ತಾನು ನೀರಿನಲ್ಲಿ ಮುಳುಗಿ ಸಾಯುತ್ತಿದ್ದೇನೆ ಎಂಬ ಅನುಭವ ಆಗ ತೊಡಗಿದಾಗ ಜೀವ ಉಳಿಸಿಕೊಳ್ಳುವುದಕ್ಕಾಗಿ ಹೆಣಗಾಡುತ್ತಿದ್ದನ್ನು ಗಮನಿಸಿದ ಆ ಹಿರಿಯರು ನಾಯಿಯತ್ತ ತಾವು ಹೊದ್ದಿಕೊಂಡಿದ್ದ ಶಲ್ಯವನ್ನು ಎಸೆದರು. ಬದುಕಿದೆಯಾ ಬಡ ಜೀವ ಎಂದು ಆ ಶಲ್ಯವನ್ನು ನಾಯಿ ಹಿಡಿದುಕೊಂಡಾಗ ನಿಧಾನವಾಗಿ ತಮ್ಮ ಶಲ್ಯವನ್ನು ಎಳೆದುಕೊಂಡು ನಾಯಿಯನ್ನು ಮತ್ತೆ ದೋಣಿಯೊಳಗೆ ಎಳೆದು ಕೊಂಡರು ಆ ಹಿರಿಯರು. ನೀರಿನಿಂದ ದೋಣಿಗೆ ಬಂದ ಕೂಡಲೇ ತನ್ನನ್ನು ಬದುಕಿಸಿದ ಆ ಹಿರಿಯರಿಗೆ ಪ್ರೀತಿಯಿಂದ ಅವರ ಪಾದಗಳನ್ನು ನೆಕ್ಕಿ ನೆಮ್ಮದಿಯಿಂದ ತನ್ನ ಮಾಲಿಕನ ಬಳಿ ಬಂದು ತೆಪ್ಪಗೆ ಬಂದು ಕುಳಿತಿದ್ದಲ್ಲದೇ, ಇಡೀ ಪ್ರಯಾಣದ ಪೂರ್ತಿ ಕಮಿಕ್ ಕಿಮಿಕ್ ಎನ್ನಲಿಲ್ಲ.
ನಾಯಿಯ ಬದಲಾದ ನಡವಳಿಕೆಯನ್ನು ಕಂಡ ಮಾಲಿಕರು ಮತ್ತು ಇತರೇ ಪ್ರಯಾಣಿಕರು ಆಶ್ಚರ್ಯಚರಾಗಿ, ದೋಣಿ ಹತ್ತಿದಾಗ ಅಷ್ಟೆಲ್ಲಾ ಹಾರಾಡುತ್ತಿದ್ದ ನಾಯಿ, ನೀರಿನಿಂದ ಹೊರಬಂದ ಕೂಡಲೇ ಶಾಂತವಾಗಿ ಹೇಗಾಯಿತು? ಎಂದು ಕೇಳಿದಾಗ, ಆ ಹಿರಿಯರು ಸಣ್ಣಗೆ ನಕ್ಕು ನಾನು ಆ ನಾಯಿಗೆ ದೋಣಿಯ ನಿಜವಾದ ಶಕ್ತಿಯ ಪರಿಚಯವನ್ನು ಮಾಡಿ ಕೊಟ್ಟೆನಷ್ಟೇ. ದೋಣಿಯಲ್ಲಿದ್ದಾಗ ಅದರ ಅವಶ್ಯಕತೆಯನ್ನು ಅರಿಯದೇ ಸುಮ್ಮನೆ ಹಾರಾಡುವ ಮೂಲಕ ಉಳಿದೆವರೆಲ್ಲರ ಜೀವಕ್ಕೆ ಕುತ್ತು ತರುತ್ತಿದ್ದೇನೆ ಎಂಬ ಅರಿವು ಆ ನಾಯಿಗೆ ಇರಲಿಲ್ಲ. ಯಾವಾಗಾ ನಾನು ಅದನ್ನು ನೀರಿಗೆ ಎಸೆದೆನೋ, ಅಗ ಅದಕ್ಕೆ ತನ್ನ ಜೀವದ ಬಗ್ಗೆ ಅರಿವಾಗಿದ್ದಲ್ಲದೇ, ಅದಕ್ಕೆ ನೀರಿನ ಶಕ್ತಿ ಮತ್ತು ದೋಣಿಯ ಉಪಯುಕ್ತತೆಯ ಅರ್ಥವಾಗಿ ಜೀವ ಉಳಿಸಿಕೊಂಡರೆ ಸಾಕು ಎನ್ನುವಂತಾದಾಗ ಅದನ್ನು ನೀರಿನಿಂದ ಎಳೆದು ದೋಣಿಗೆ ತಂದೆ ಹಾಗಾಗಿ ಅದು ಸುಮ್ಮನಾಯಿತು ಎಂದರು.
ಮೊದಲನೆಯ ಪ್ರಸಂಗದಲ್ಲಿನ ನಮ್ಮ ಅಜ್ಜಿಯವರನ್ನು ಖಂಡಿತವಾಗಿಯೂ ಎರಡನೇ ಪ್ರಸಂಗದಲ್ಲಿನ ನಾಯಿಗೆ ಹೋಲಿಸುತ್ತಿಲ್ಲವಾದರೂ, ಇಬ್ಬರ ಮನೋಭಾವನೆಯೂ ಸದ್ಯದ ಕೆಲವು ಭಾರತೀಯರ ಮನೋಭಾವನೆಗಳು ಒಂದೇ ಎಂದು ತೋರಿಸುವ ಸಲುವಾಗಿ ಈ ಎರಡೂ ಉದಾಹರಣೆಗಳನ್ನು ಹೇಳಬೇಕಾಯಿತು. ನಿಜ ಹೇಳಬೇಕೆಂದರೆ ಅವರೆಲ್ಲರಿಗೂ ತಮ್ಮ ದೇಶ/ಕುಟುಂಬ ಮತ್ತು ತಾವು ಅನುಭವಿಸುತ್ತಿರುವ ಸೌಲಭ್ಯಗಳ ಅರಿವಿರದೇ ಸದಾ ಕಾಲವೂ ಅಕ್ಕ ಪಕ್ಕದ ಮನೆಯ ಮತ್ತು ದೇಶಗಳಲ್ಲಿ ನೆಮ್ಮದಿಯಾಗಿದ್ದಾರೆ ಎಂದೇ ಭಾವಿಸಿರುತ್ತಾರೆ. ಅವರಾರಿಗೂ ಅಕ್ಕ ಪಕ್ಕದ ಕುಟುಂಬ, ರಾಜ್ಯ, ದೇಶಗಳ ಅರಿವೇ ಇರುವುದಿಲ್ಲ. ಎಲ್ಲವನ್ನೂ ಯಾರಿಂದಲೂ ಕೇಳಿಯೋ ಇಲ್ಲವೇ ಪೂರ್ವಾಗ್ರಹ ಪೀಡಿತ ಮಾಧ್ಯಮಗಳಲ್ಲಿ ಪ್ರಸಾರವಾಗುವ ತುಣುಕುಗಳನ್ನು ನೋಡಿಯೋ ಇಲ್ಲವೇ ವೃತ್ತಪತ್ರಿಕೆಗಳ ಮೂಲಕ ಅರ್ಧಂಬರ್ಧ ಕೇಳಿ, ನೋಡೀ ಓದಿ ನಮ್ಮ ಕುಟುಂಬ/ರಾಜ್ಯ/ದೇಶ ಸರಿ ಇಲ್ಲ, ಇಲ್ಲ ಬದುಕುವುದಕ್ಕೇ ಅಸಾಧ್ಯ ಎಂದು ಬೊಬ್ಬಿರಿಯುತ್ತಿರುತ್ತಾರೆ. ಹೀಗೆಯೇ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿದ ಖ್ಯಾ(ಕುಖ್ಯಾ)ತ ನಟನ ಮಡದಿಯೊಬ್ಬಳು ಈಗ ಅತನಿಂದಲೇ ವಿಚ್ಚೇದನ ಪಡೆದು ಇದೇ ದೇಶದಲ್ಲೇ ವಾಸಿಸಬೇಕಾದ ಅನಿವಾರ್ಯ ಪರಿಸ್ಥಿತಿಯೂ ನಮ್ಮ ಕಣ್ಣಮುಂದಿದೆ.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರು, ಇಲ್ಲಿಯ ಭಾಷೇ, ಇಲ್ಲಿಯ ಸಂಸ್ಕಾರ ಮತ್ತು ಸಂಸೃತಿ ತಮ್ಮದ್ದಲ್ಲಾ ಎಂದು ಹೇಳುವವರನ್ನು ಎರಡನೆಯ ಪ್ರಸಂಗದಲ್ಲಿ ನೀರಿಗೆ ಎಸೆದಂತೆ, ನೆರೆಯ ಪಾಪೀಸ್ಥಾನ, ಬಾಂಗ್ಲಾದೇಶ, ಆಫ್ಗಾನೀಸ್ಥಾನ, ಅಷ್ಟೇ ಏಕೆ ಬರ್ಮಾ ಇಲ್ಲವೇ ಶ್ರೀಲಂಕ ಅದೂ ಬೇಡವೆಂದರೆ, ಉತ್ತರ ಕೊರಿಯಾ, ಸೊಮಾಲಿಯಾ, ದಕ್ಷಿಣ ಸುಡಾನ್, ಸಿರಿಯಾ, ಇರಾಕ್ ದೇಶಗಳಿಗೆ 6 ತಿಂಗಳ ಕಾಲ ಕಳಿಸಿಬಿಟ್ಟರೆ ಸಾಕು.
ಅವರಿಗೆ ಭಾರತ ದೇಶದಲ್ಲಿರುವ ನಿಜವಾದ ಸ್ವಾತಂತ್ರ್ಯ, ಸಹಿಷ್ಣುತೆ ಮತ್ತು ಸಮಾನತೆಯ ಬಗ್ಗೆಯ ಅರಿವಾಗಿ ಮುಂದೆಂದೂ ಕಮಿಕ್ ಕಿಮಿಕ್ ಎನ್ನಲಾರರು. ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವಂತಹ ರಾಷ್ಟ್ರ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಎಲ್ಲರಿಗೂ ಇಲ್ಲಿ ಎಲ್ಲರಿಗೂ ನೆಮ್ಮದಿಯಾಗಿ ಸರ್ವ ಸ್ವತ್ರಂತ್ರ್ಯವಾಗಿ ಬದುಕುವ ಸಮಾನ ಹಕ್ಕಿದೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಇಲ್ಲಿ ಎಲ್ಲಾ ಧರ್ಮ, ಜಾತಿ ಮತ್ತು ಭಾಷೆಗಳ ಜನರಿಗೂ ಬದುಕಲು ಅವಕಾಶವಿದೆ. ಆದರೆ ಅವರವರ ಧರ್ಮ, ಜಾತಿ ಎಲ್ಲವೂ ಅವರ ಮನೆಯ ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿದ್ದು ಮನೆಯಿಂದ ಹೊರೆಗೆ ಬಂದಾಗ, ಎಲ್ಲರಿಗೂ ದೇಶವೇ ಪ್ರಧಾನವಾಗ ಬೇಕು.
ಈ ದೇಶದಲ್ಲಿ ಹುಟ್ಟಿ ಇಲ್ಲಿನ ಸಕಲ ಸೌಲಭ್ಯಗಳನ್ನು ಪಡೆದು ಬೆಳೆದು ದೊಡ್ಡವರಾಗಿ ವಿದ್ಯಾವಂತರಾದ ಮೇಲೆ ಈ ದೇಶದ ಕಾನೂನಿನ ಅನುಗುಣವಾಗಿ ನಡೆಯಬೇಕಾದದ್ದು ಅವರೆಲ್ಲರ ಕರ್ತವ್ಯವೇ ಹೌದು. ದೇಶದ ಏಕತೆ ಮತ್ತು ಅಖಂಡತೆ ಅವರೆಲ್ಲರೂ ಕಟಿಬದ್ದರಾಗಿರಬೇಕು. ದುರಾದೃಷ್ಟವಶಾತ್ ಮತಾಂಧತೆಯಿಂದಲೋ, ಭಾಷಾ ಧುರಾಭಿಮಾನದಿಂದಲೋ, ಅಥವಾ ತಮ್ಮ ಸಿದ್ದಾಂತದ ಅಮಲಿನಿಂದಲೋ ಪ್ರತಿ ದಿನವೂ ದೇಶವನ್ನು ತುಂಡರಿಸುವ ಮಾತುಗಳನ್ನಾಡುವ ಮಂದಿಯೇ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಹೋಗಿರುವುದು ಈ ದೇಶದ ವಿಪರ್ಯಾಸವೇ ಸರಿ.
ಕೋಟ್ಯಾಂತರ ಹೋರಾಟಗಾರ ತ್ಯಾಗ ಬಲಿದಾನಗಳಿಂದ ಸ್ವಾತ್ರಂತ್ಯ್ರಗೊಂಡ ದೇಶಕ್ಕಿಂತಲೂ ಅವರೆಲ್ಲರಿಗೂ ಅವರವರ ಧರ್ಮ, ಜಾತೀ, ಭಾಷೆ, ಮತ್ತು ಸಿದ್ಧಾಂತವೇ ಹೆಚ್ಚು ತಾವು ಈ ದೇಶದ ಕಾನೂನು, ಸಂಸ್ಕಾರ, ಸಂಸ್ಕೃತಿಗೆ ತಲೆಬಾಗುವುದಿಲ್ಲ ಎಂದು ದಿನ ಬೆಳಗಾದರೇ ದೇಶ ನಿಂದನೆ ಮಾಡುತ್ತಾ, ಜನರನ್ನು ಎತ್ತಿಕಟ್ಟಿ ಅಸಹಕಾರ ಚಳುವಳಿಗಳನ್ನು ಮಾಡುವ ಮೂಲಕ ದೇಶದಲ್ಲಿ ದೊಂಬಿ ಎಬ್ಬಿಸುತ್ತಾ, ವಿದೇಶಿಗರ ಮುಂದೇ ದೇಶದ ಮಾನವನ್ನು ಹರಾಜು ಹಾಕುವವರನ್ನು ಮುಲಾಜಿಲ್ಲದೇ ಅವರಿಗಿಷ್ಟ ಬಂದ ದೇಶಕ್ಕೆ ಈ ಕೂಡಲೇ ಗಡಿಪಾರು ಮಾಡಿದಾಗಲೇ ದೇಶ ಮತ್ತು ಸಮಾಜದ ಸ್ವಾಸ್ಥ್ಯ ನೆಮ್ಮೆದಿಯಾಗಿರುತ್ತದೆ ಮತ್ತು ದೇಶ ಅಭಿವೃದ್ಧಿಯ ಪಥಕ್ಕೆ ಮರಳುತ್ತದೆ. ಇಲ್ಲದೇ ಹೋದಲ್ಲಿ ಪ್ರತೀ ದಿನ ಇಂತಹ ಕ್ಷುಲ್ಲಕ ಸಮಸ್ಯೆಗಳನ್ನು ಪರಿಹರಿಸುವುದಕ್ಕೇ ನಮ್ಮೆಲ್ಲರ ಸಂಪನ್ಮೂಲಗಳು ವ್ಯರ್ಥವಾಗಿ ದೇಶ ಅಧೋಗತಿಗೆ ಜಾರುತ್ತದೆ.
ಏನಂತೀರೀ?
ನಿಮ್ಮವನೇ ಉಮಾಸುತ.
ತುಂಬಾ ಅರ್ಥಪೂರ್ಣವಾಗಿದೆ ಸರ್. ನಾಯಿಯ ಕಥೆಯ ಉದಾಹರಣೆ ಚನ್ನಾಗಿದೆ ಸರ್
LikeLiked by 1 person
ನಾಯಿಯ ಕಲ್ಪನೆ ಅನಾಮಿಕ ಲೇಖಕರಾಗಿರುವ ಕಾರಣ, ನಿಮ್ಮೆಲ್ಲಾ ಶ್ರೇಯ ಅವರಿಗೇ ಸಲ್ಲಬೇಕು.
LikeLike
ನಿಮ್ಮ ಮಾತು 100ಕ್ಕೆ 100ರಷ್ಟು ಸತ್ಯ. ಪ್ರತಿಯೊಬ್ಬರ ಮನದ ಮಾತೂ ಇದೇ ಆದರೆಷ್ಟು ಚೆಂದ.
LikeLiked by 1 person