ತಂಗಳನ್ನ

ಸಾಮನ್ಯವಾಗಿ ಪ್ರತಿಯೊಬ್ಬರ ಮನೆಗಳಲ್ಲಿಯೂ ಬೆಳಗ್ಗೆ ಶುಚಿರುಚಿಯಾಗಿ ಅವರ ಕುಟುಂಬಕ್ಕೆ ಅವಶ್ಯಕತೆ ಇದ್ದಷ್ಟು ಅಡುಗೆಗಳನ್ನು ಮಾಡಿಕೊಂಡು ಬಿಸಿ ಬಿಸಿಯಾಗಿ ತಿನ್ನಲು ಬಯಸುತ್ತಾರೆ. ಎಷ್ಟೇ ಕಟ್ಟೆಚ್ಚೆರ ವಹಿಸಿದರೂ ಬಹುತೇಕ ಎಲ್ಲರ ಮನೆಗಳಲ್ಲಿಯೂ ಮಾಡಿದ ಆಹಾರ ಮಿಕ್ಕಿಬಿಡುತ್ತದೆ. ಹಾಗೆ ಮಿಕ್ಕಿ ಹೋದ ಆಹಾರವನ್ನು ತಂಗಳು ಆಹಾರ ಎಂದು ಅದನ್ನು ಮಾರನೆಯ ದಿನ ಉಪಯೋಗಿಸಿದೇ ಅದನ್ನು ಹೊರಗೆ ಚೆಲ್ಲುವ ಇಲ್ಲವೇ ಮನೆಯ ಸಾಕುಪ್ರಾಣಿಗಳಿಗೆ ಹಾಕುವ ಪದ್ದತಿಯು ಎಲ್ಲ ಕಡೆಯಲ್ಲಿಯೂ ರೂಢಿಯಲ್ಲಿದೆ. ಇನ್ನೂ ಕೆಲವರು ಆ ರೀತಿಯಾಗಿ ಚೆಲ್ಲಲು ಮನಸ್ಸು ಬಾರದೇ ಮಾರನೆಯ ದಿನ ಆ ಅನ್ನಕ್ಕೆ ಒಗ್ಗರಣೆ ಹಾಕಿ ಚಿತ್ರಾನ ಮಾಡಿ ಸೇವಿಸುವುದೂ ಉಂಟು.

ಸುಮಾರು ವರ್ಷಗಳ ಹಿಂದೇ, ಅಮ್ಮಾ ತಾಯೀ.. ಕವಳ ಇದ್ರೇ ಕೊಡ್ರವ್ವಾ.. ಎಂದು ಮನೆ ಮನೆಗಳ ಮುಂದೆ ಪಾತ್ರೆಗಳನ್ನು ಹಿಡಿದುಕೊಂಡು ಬಂದು ಕೂಗಿ ಭಿಕ್ಷೇ ಬೇಡುತ್ತಿದ್ದದ್ದನ್ನು ನೋಡಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಆಹಾರದ ಹಾಹಾಕಾರವು ಕಡಿಮೆಯಾಗಿ ಅಂದಿನಂತೆ ಯಾರೂ ಸಹಾ ತಂಗಳನ್ನವನ್ನು ತಿನ್ನಲು ಬಯಸದ ಕಾರಣ ಅವುಗಳನ್ನು ತೆಗೆದುಕೊಳ್ಳುವುದಿಲ್ಲ. ಬದಲಾಗಿ ಹತ್ತುರೂಪಾಯಿ ಕೊಟ್ಟು ಬಿಡಿ ಹೋಟೆಲ್ನಲ್ಲಿ ಬಿಸಿ ಬಿಸಿ ಆಹಾರವನ್ನೇ ಸೇವಿಸುತ್ತೇವೆ ಎನ್ನುವವರೇ ಹೆಚ್ಚು.

ಇನ್ನು ಇತ್ತೀಚಿನ ದಿನಗಳಲ್ಲಿ ಆಹಾರ ಧಾನ್ಯಗಳ ಬೆಲೆಯು ಅಧಿಕವಾಗಿರುವ ಕಾರಣ, ಬಹುತೇಕರ ಮನೆಗಳಲ್ಲಿ ಆಹಾರವನ್ನು ಚೆಲ್ಲಲು ಬಯಸುವುದಿಲ್ಲ. ಆಹಾರ ಹೆಚ್ಚಾಗಿ ಉಳಿದುಬಿಟ್ಟರೆ,ಅದನ್ನು ಫ್ರಿಜ್ ನಲ್ಲಿ ಇರಿಸಿ ಅಗತ್ಯಕ್ಕೆ ತಕ್ಕಂತೆ ಆ ಆಹಾರಗಳನ್ಮು ಪುನಃ ಬಿಸಿ ಮಾಡಿ ತಿನ್ನುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಆಯುರ್ವೇದದ ಪ್ರಕಾರ ಈ ರೀತಿಯಾಗಿ ತಂಗಳು ಪದಾರ್ಥಗಳನ್ನು ಬಿಸಿ ಮಾಡಿಕೊಂಡು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಅದರಿಂದ ನಾನಾರೀತಿಯ ಖಾಯಿಲೆಗಳಿಗೆ ತುತ್ತಾಗಬಹುದು ಎಂಬುದಾಗಿಯೂ ಹೇಳುತ್ತಾರೆ. ಅದರೇ ಅದೇ ತಂಗಳನ್ನವನ್ನು ಸೂಕ್ತವಾದ ರೀತಿಯಲ್ಲಿ ಸಂಗ್ರಹಿಸಿಟ್ಟು ಸೇವಿಸಿದಲ್ಲಿ ನಮ್ಮ ದೇಹಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ ಎಂದರೆ ಎಲ್ಲರಿಗೂ ಆಶ್ಚರ್ಯವಾಗಬಹುದು. ತಂಗಳನ್ನದ ಅಚ್ಚರಿಯ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ನಿಜ ಆಹಾರವನ್ನು ಹಾಗೆಯೇ ಇಟ್ಟಲ್ಲಿ ಅಥವಾ ಫ್ರಿಜ್ ನಲ್ಲಿ ಇಟ್ಟು ಪದೇ ಪದೇ ಬಿಸಿ ಮಾಡಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರವಾದರೂ ಅದೇ ಅನ್ನವನ್ನು ಒಂದು ಮಣ್ಣಿನ ಮಡಕೆಯಲ್ಲಿ ನೀರಿನೊಂದಿಗೆ ರಾತ್ರಿಯಿಡೀ ನೆನೆಸಿಟ್ಟು ಮರುದಿನ ನೀರನ್ನು ಬಸೆದು ಆ ಅನ್ನವನ್ನು ಬೆಳಿಗಿನ ಉಪಹಾರವಾಗಿ ಸೇವಿಸಿದಲ್ಲಿ ಆರೋಗ್ಯಕ್ಕೆ ಬಹಳಷ್ಟು ಉಪಯೋಗವಿದೆ. ಹಾಗಾಗಿಯೇ ನೂರಾರು ವರ್ಷಗಳಿಂದಲೂ ತಮಿಳುನಾಡಿನ ಅನೇಕ ಹಳ್ಳಿಗಳಲ್ಲಿ ಕೂಳು ಎಂಬ ಹೆಸರಿನಲ್ಲಿ ಈ ಪದ್ದತಿಯು ರೂಢಿಯಲ್ಲಿದೆ.

ಈ ರೀತಿಯ ಅನ್ನವನ್ನು ಕಡೆದ ಮಜ್ಜಿಗೆಯೊಂದಿಗೆ ಕಲಸಿಕೊಂಡು ಅದರ ಜೊತೆಗೆ ಸ್ವಲ್ಪ ಉಪ್ಪನ್ನು ಬೆರಸಿ, ಹಸೀಮೆಣಸಿನಕಾಯಿ ಈರುಳ್ಳಿ ಜೊತೆಗೆ ಸೇವಿಸಿದರೆ ಇನ್ನೂ ಕೆಲವರು, ರುಚಿಕರ ಉಪ್ಪಿನ ಕಾಯಿಯೊಂಡಿಗೆ ಸೇವಿಸಿ ನಂತರ ತಮ್ಮ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ರೀತಿ ಸೇವಿಸುವುದರಿಂದ ದೇಹ ತಂಪಾಗಿದ್ದು ಇಡೀ ದಿನ ಚುರುಕಾಗಿ ಕೆಲಸವನ್ನು ಮಾಡಬಹುದಾಗಿದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ. ತಂಗಳನ್ನ ನೈಸರ್ಗಿಕವಾಗಿ ಶೀತವಾಗಿದೆ. ಅದನ್ನು ನೀರಿನಲ್ಲಿ ನೆನೆಸಿಟ್ಟು ಪ್ರತಿದಿನ ತಂಗಳನ್ನ ಸೇವಿಸುವುದರಿಂದ ಅದು ನಮ್ಮ ದೇಹದ ಶಾಖವನ್ನು ತಗ್ಗಿಸುವುದಲ್ಲದೇ, ಏರುತ್ತಿರುವ ಉಷ್ಣಾಂಶ ಮತ್ತು ಬಿಸಿಲಿನ ಬೇಗೆಯಿಂದ ನಮ್ಮ ದೇಹವನ್ನು ಸಂರಕ್ಷಿಸುತ್ತದೆ ಎಂದೂ ಹೇಳುತ್ತಾರೆ.

ಭಾರತೀಯರ ಈ ರೀತಿಯ ಆಹಾರ ಪದ್ದತಿಯ ಕುರಿತಾಗಿ ಸಂಶೋಧನೆ ನಡೆಸಿರುವ ಇಂಗ್ಲೆಂಡ್‌ನ ಕ್ವೀನ್ಸ್ ವಿಶ್ವವಿದ್ಯಾಲಯದ ಬೆಲ್‌ಫಾಸ್ಟ್‌ನ ಸಂಶೋಧಕರ ಪ್ರಕಾರ, ರೈತರು ತಮ್ಮ ಬೆಳೆಗಳಿಗೆ ರಾಸಾಯಿನಿಕ ಕೀಟನಾಶಕಗಳನ್ನು ಉಪಯೋಗಿಸುವ ಕಾರಣ, ಮಣ್ಣು ಸಹಾ ತನ್ನ ಸತ್ವವನ್ನು ಕಳೆದುಕೊಂಡು ಅದರಲ್ಲಿರುವ ಆರ್ಸೆನಿಕ್ ಅಕ್ಕಿಯನ್ನು ಕಲುಷಿತಗೊಳಿಸುತ್ತದೆ, ಇದರಿಂದಾಗಿ ಆ ರೀತಿಯ ಅನ್ನವನ್ನು ಸೇವಿಸುವುದರಿಮ್ದ ಹೆಚ್ಚಿನವರ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ. ಅದೇ ಅನ್ನವನ್ನು ರಾತ್ರಿಯಿಡೀ ನೆನೆಸಿಡುವ ಮೂಲಕ ಜೀವಾಣು ಮಟ್ಟವನ್ನು ಶೇಕಡಾ 80 ರಷ್ಟು ಕಡಿಮೆ ಮಾಡಬಹುದಾಗಿದೆ ಎನ್ನುತ್ತಾರೆ. ಹಾಗೆಯೇ ಈ ರೀತಿ ಅನ್ನವನ್ನು ನೆನಸಿಡುವುದರಿಂದ ಆ ಅನ್ನದಲ್ಲಿ ಪೊಟ್ಯಾಸಿಯಂ ಮತ್ತು ಕ್ಯಾಲ್ಸಿಯಂ ನಂತಹ ಪೋಷಕಾಂಶಗಳು ಸೇರಿಕೊಂಡು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ ಎಂದೂ ಸಹಾ ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾವು ಅಕ್ಕಿಯಲ್ಲಿನ ಪೌಷ್ಟಿಕಾಂಶ-ವಿರೋಧಿ ಅಂಶಗಳನ್ನು ಒಡೆಯುತ್ತದೆ, ಇದರ ಪರಿಣಾಮವಾಗಿ ಸೂಕ್ಷ್ಮ ಪೋಷಕಾಂಶಗಳು ಮತ್ತು ಖನಿಜಗಳಾದ ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನ ಜೈವಿಕ ಲಭ್ಯತೆಯು ದೇಹಕ್ಕೆ ಒದಗಿ ಆರೋಗ್ಯ ಸುಧಾರಿಸುತ್ತದೆ. ಇದನ್ನೇ ಅಂಕಿ ಅಂಶಗಳ ಪ್ರಕಾರ ಹೇಳಬೇಕೆಂದರೆ, 100 ಗ್ರಾಂ ಅನ್ನವನ್ನು ರಾತ್ರಿ ಇಡೀ ಸುಮಾರು 12 ಗಂಟೆಗಳ ನೆನೆಸಿಟ್ಟರೆ, ಸಾಧಾರಣ ಅನ್ನದಲ್ಲಿ ಇರಬಹುದಾದ ಕಬ್ಬಿಣದ ಅಂಶದ ಲಭ್ಯತೆಯು 3.4 ಮಿಗ್ರಾಂನಿಂದ 73.91 ಮಿಗ್ರಾಂಗೆ ಅಂದರೆ ಸುಮಾರು 2073% ಹೆಚ್ಚಳವಾಗಿರುವುದನ್ನು ಸಂಶೋಧನೆಯಲ್ಲಿ ಕಂಡು ಕೊಳ್ಳಲಾಗಿದೆ.

ಈ ರೀತಿಯಾಗಿ ಪ್ರತಿದಿನವೂ ನಿಯಮಿತವಾಗಿ ಒಂದು ಬಟ್ಟಲು ತಂಗಳನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳು ಈ ರೀತಿಯಾಗಿವೆ

  • ಇದು ದೇಹಕ್ಕೆ ಶಕ್ತಿಯನ್ನು ಕೊಡುವುದಲ್ಲದೇ ಸದಾ ಕಾಲವೂ ತಾಜಾತನದಿಂದ ಇರಿಸಲು ಸಹಾಯ ಮಾಡುತ್ತದೆ
  • ಈ ರೀತಿಯಾದ ತಂಗಳನ್ನ ಅಪರೂಪದ ಬಿ 6 ಬಿ 12 ಜೀವಸತ್ವಗಳನ್ನು ಹೊಂದಿದೆ.
  • ಮಲಬದ್ಧತೆಯಿಂದ ನರಳುತ್ತಿರುವವರಿಗೆ ಈ ಅನ್ನದಲ್ಲಿರುವ ಅಧಿಕ ನಾರಿನಂಶವು ರಾಮಬಾಣವಾಗಿ ಮಲಬದ್ಧತೆಯನ್ನು ನಿವಾರಿಸುತ್ತದೆ.
  • ಅಲ್ಸರ್ ನಿಂದ ಬಳಲುತ್ತಿರುವವರು, ವಾರದಲ್ಲಿ ಮೂರು ದಿನ ಬೆಳಿಗ್ಗೆ ತಂಗಳನ್ನ ತಿನ್ನುವುದರಿಂದ ಅಲ್ಸರ್ ರೋಗವು ಬಹುಬೇಗ ಕಡಿಮೆಯಾಗುತ್ತದೆ.
  • ಈ ರೀತಿಯಾದ ತಂಗಳನ್ನ ಜೀರ್ಣಕ್ರಿಯೆಗೆ ಸಹಾಯ ಮಾಡುವ ಟ್ರಿಲಿಯನ್ಗಟ್ಟಲೆ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳನ್ನು ಉತ್ಪಾದಿಸುವುದರಿಂದ ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.
  • ವಯಸ್ಸಾದವರಲ್ಲಿ ಕಾಣ ಸಿಗುವ ಮೂಳೆ ಸಂಬಂಧಿತ ಕಾಯಿಲೆಗಳು ಮತ್ತು ಸ್ನಾಯು ನೋವುಗಳನ್ನು ಇದು ನಿವಾರಿಸುತ್ತದೆ.
  • ಪಾಲೀಷ್ ಮಾಡದ ಬ್ರೌನ್ ರೈಸ್ ಅನ್ನದಲ್ಲಿ ಹೆಚ್ಚಿನ ಪೋಷಕಾಂಶಗಳು ಹಾಗೇ ಉಳಿದಿರುವ ಕಾರಣ ಕೆಂಪಕ್ಕಿಯ ತಂಗಳನ್ನ ಹೆಚ್ಚಿನ ಪ್ರಯೋಜನಕಾರಿಯಾಗಿದೆ.
  • ಅಧಿಕ ರಕ್ತದೊತ್ತಡವೂ ಸಹಾ ಕಡಿಮೆಯಾಗುತ್ತದೆ.
  • ಇದು ಅಲರ್ಜಿ ಸಂಬಂಧಿತ ಸಮಸ್ಯೆಗಳನ್ನು ಮತ್ತು ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸುತ್ತದೆ.
  • ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್ ಹೆಚ್ಚಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
  • ಪ್ರತಿದಿನ ಬೆಳಿಗ್ಗೆ ತಂಗಳನ್ನ ತಿನ್ನುವುದರಿಂದ ನೀವು ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸದಿಂದ ತಪ್ಪಿಸಿಕೊಳ್ಳಬಹುದು.

ತಂಗಳನ್ನು ತಿನ್ನುವುದು ಬಡತನದ ಪ್ರತೀಕ ಎಂದೇ ಭಾವಿಸಿದ್ದವರಿಗೆ ನಮ್ಮ ಪೂರ್ವಜರು ಎಂದೋ ಕಂಡು ಹಿಡಿದುಕೊಂಡಿದ್ದ ಅಪೂರ್ವವಾದ ಸತ್ಯ ಈಗ ಸಂಶೋಧನೆಯ ಮೂಲಕ ಮತ್ತೊಮ್ಮೆ ಬೆಳಕಿಗೆ ಬಂದಿದೆ.

ಇಂದಿನ ಕರಾಳ ಪರಿಸ್ಥಿತಿಯಲ್ಲಿ ಪ್ರಪಂಚಾದ್ಯಂತ ಲಕ್ಷಾಂತರ ಜನರು ಸರಿಯಾದ ಆಹಾರವಿಲ್ಲದೇ ಹಸಿವಿನಿಂದ ಸಾಯುತ್ತಿರುವಾಗ ಖಂಡಿತವಾಗಿಯೂ ಎಲ್ಲರು ಅಗತ್ಯವಿದ್ದಷ್ಟೇ ಆಹಾರವನ್ನು ತಯಾರಿಸಿಕೊಂಡು, ಒಂದು ಅಗಳನ್ನೂ ಚೆಲ್ಲದೇ ಸದ್ವಿನಿಯೋಗ ಮಾಡಿಕೊಳ್ಳಬೇಕಾದ್ದದ್ದು ಪ್ರತಿಯೊಬ್ಬರ ಕರ್ತವ್ಯವೇ ಆಗಿದೆ.

ಅದೇ ರೀತೀ ಆರೋಗ್ಯದ ದೃಷ್ಟಿಯಿಂದ ಈ ರೀತಿಯಾಗಿ ತಂಗಳನ್ನವನ್ನು ನೀರಿನಲ್ಲಿ ನೆನೆಸಿಟ್ಟು ಅದರ ಪ್ರಯೋಜನವನ್ನು ಪಡೆದುಕೊಂಡು ಆರೋಗ್ಯದಿಂದ ಇರುವುದು ಉತ್ತಮವಾದ ಅಭ್ಯಾಸವಾಗಿದೆ.

ಏನಂತೀರಿ?
ನಿಮ್ಮವನೇ ಉಮಾಸುತ

One thought on “ತಂಗಳನ್ನ

  1. ತಂಗಳು ಅನ್ನ ಹೇಗೆ ಉಪಯೋಗಿಸ ಬೇಕು ಹಾಗೂ ಮಣ್ಣಿನ ಪಾತ್ರೆಯ ವಿಶೇಷತೆಯ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟಿರುವ ನಿಮಗೆ ಧನ್ಯವಾದಗಳು ಸರ್ 🙏🙏

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s