ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಮನೆಯಲ್ಲಿ ಎಲ್ಲರೂ ಇಷ್ಟ ಪಡುವ ಮತ್ತು ಅದೇ ಕುರಿತಾಗಿ ಆಗಾಗ ವಿವಾದವೂ ಏರ್ಪಡುವ ವಿಷಯವೆಂದರೆ ಕ್ರಿಕೆಟ್. ಅಗಲಿದ ಅಪ್ಪ ಅಮ್ಮಾ ನಿಂದ ಹಿಡಿದು ನಾನು ನಮ್ಮಾಕಿ, ಮುದ್ದಿನ ಮಗಳು ಮತ್ತು ನಮ್ಮ ಮನೆಯ ಸ್ವಘೋಷಿತ ಕ್ರಿಕೆಟ್ ಎಕ್ಸಪರ್ಟ್ ಮಗ ಎಲ್ಲರೂ ಕ್ರಿಕೆಟ್ ಪ್ರಿಯರೇ. ಆದರೆ ಬೆಂಬಲಿಸುವ ಆಟಗಾರರು ಮತ್ತು ತಂಡಗಳು ಮಾತ್ರಾ ವಿಭಿನ್ನ.
ವಿಶ್ವ ಟೆಸ್ಟ್ ಕ್ರಿಕೆಟ್ ಛಾಂಪಿಯನ್ ಶಿಪ್ಪಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲುವಿನ ಹಾದಿಯಲ್ಲಿದ್ದು ಕಡೆಯಲ್ಲಿ ಆದ ಕೆಲವು ಅನಿರೀಕ್ಷಿತ ಘಟನೆಗಳಿಂದ ಸೋತು ಹೊಗಿದ್ದು ನಿಜಕ್ಕೂ ಬೇಸರವನ್ನು ತರಿಸಿತ್ತು. ಕಳೆದು ಹೊದುದ್ದರ ಬಗ್ಗೆ ಚಿಂತಿಸಿ ಫಲವಿಲ್ಲ. ಇಂಗ್ಲೇಂಡ್ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮವಾಗಿ ಆಡಲಿದ್ದಾರೆ ಎಂಬ ಭರವಸೆಯನ್ನು ಇಟ್ಟುಕೊಂಡಿದ್ದೆವು. ಅದೇ ರೀತಿ ಮೊದಲ ಪಂದ್ಯ ಇನ್ನೇನು ಭಾರತ ತಂಡ ಮೊದಲ ಗೆಲುವಿನೊಂದಿಗೆ ಶುಭಾರಂಭ ಮಾಡುತ್ತದೆ ಎಂದು ಎಣಿಸಿದ್ದಕ್ಕೆ ಸರಿಯಾಗಿ ನಾಲ್ಕನೇಯ ದಿನದ ಅಂತ್ಯದಲ್ಲಿ ಇನ್ನೇನು ಭಾರತ ಸುಲಭವಾಗಿ ಗೆಲ್ಲಬಹುದು ಎಂದೆಣಿಸಿದ್ದವರಿಗೆ ಮಳೆರಾಯ ಅಡ್ಡಿ ಬಂದು ಪಂದ್ಯ ಡ್ರಾನಲ್ಲಿ ಮುಕ್ತಾಯವಾಗಿದ್ದು ತುಸು ಬೇಸರವನ್ನು ತರಿಸಿತ್ತಾದರೂ, ಪ್ರತಿಭಾನ್ವಿತ ಕನ್ನಡಿಗ ರಾಹುಲ್ ಅಚಾನಕ್ಕಾಗಿ ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಸದುಪಯೋಗ ಪಡಿಸಿಕೊಂಡಿದ್ದು, ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತಾಗಿತ್ತು.
ಎರಡನೆಯ ಪಂದ್ಯ. ಅದರಲ್ಲೂ ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಎಂದಾಗ ಇನ್ನೂ ಕುತೂಹಲ ಹೆಚ್ಚಾಗಿತ್ತು. ಸಾಧಾರಣವಾಗಿ ಭಾರತೀಯರಿಗೆ ಲಾರ್ಡ್ಸ್ ಮೈದಾನ ತುಸು ಅದೃಷ್ಟಕರ ಎಂದೇ ಹೇಳಬಹುದು. ಒಂದೋ ಭಾರತೀಯರು ಪಂದ್ಯವನ್ನು ಗೆಲ್ಲುತ್ತಾರೆ ಇಲ್ಲವೇ ಭಾರತದ ಆಟಗಾರರು ವಯಕ್ತಿಕವಾಗಿ ಅಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ. 1983 ರ ವಿಶ್ವಕಪ್ ಗೆದ್ದದ್ದು ಅಲ್ಲಿಯೇ, ಲಾರ್ಡ್ಸ್ ನಲ್ಲಿ ಸತತವಾಗಿ ಆಡಿದ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ವಿಶ್ವದ ಏಕೈಕ ಆಟಗಾರ ಎಂಬ ಕೀರ್ತಿ ಇನ್ನೂ ದಿಲೀಪ್ ವೆಂಗ್ಸರ್ಕಾರ್ ಅವರ ಹೆಸರಿನಲ್ಲಿಯೇ ಇದೆ. ಟೆಸ್ಟ್ ಪಾದಾರ್ಪಣೆ ಮಾಡಿದ ಪಂದ್ಯದಲ್ಲಿಯೇ ಶತಕ ಗಳಿಸಿದ ಗಂಗೂಲಿ ಮತ್ತು ಕೇವಲ 5 ರನ್ನುಗಳಿಂದ ರಾಹುಲ್ ಶತಕವಂಚಿತರಾಗಿದ್ದೂ ಇದೇ ಲಾರ್ಡ್ಸ್ ನಲ್ಲಿಯೇ. ಇನ್ನು ನ್ಯಾಟ್ವೆಸ್ಟ್ ಟ್ರೋಫಿಯ ಅಂತಿಮ ಪಂದ್ಯದಲ್ಲಿ ಯುವರಾಜ್ ಮತ್ತು ಕೈಫ್ ಅಸಂಭವವಾದ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದಾಗ ಗಂಗೂಲಿ ತನ್ನ ಅಂಗಿಯನ್ನು ಬಿಚ್ಚಿ ತಿರುಗಿಸಿದ್ದೂ ಇದೇ ಲಾರ್ಡ್ಸ್ ಬಾಲ್ಕನಿಯಲ್ಲಿಯೇ. 2014 ರಲ್ಲಿ ದೋನಿ ನಾಯಕತ್ವದಲ್ಲಿ ಜಯಗಳಿಸಿದ್ದೂ ಇದೇ ಮೈದಾನದಲ್ಲಿಯೇ ಹೀಗೆ ಲಾರ್ಡ್ಸ್ ಮೈದಾನ ಭಾರತೀಯರಿಗೆ ಒಂದು ರೀತಿಯ ಅದೃಷ್ಟದ ಮೈದಾನವಾಗಿದ್ದ ಕಾರಣ ಈ ಪಂದ್ಯ ಬಹಳ ಕುತೂಹಲಕಾರಿಯಾಗಿತ್ತು.
ಟಾಸ್ ಗೆದ್ದ ಇಂಗ್ಲೇಂಡ್ ತಂಡ ಭಾರತಕ್ಕೆ ಮೊದಲು ಬ್ಯಾಟ್ ಮಾಡಲು ಕರೆ ಇತ್ತಾಗ, ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅತ್ಯಂತ ಎಚ್ಚರಿಕೆಯ ಶತಕದ ಜೊತೆಯಾಟವನ್ನಾಡಿ 83 ರನ್ನುಗಳಿಗೆ ರೋಹಿತ್ ಔಟಾದರೇ, ಅಂತಹ ಕಠಿಣ ಬ್ಯಾಟಿಂಗ್ ಪರಿಸ್ಥಿತಿಯಲ್ಲಿ ರಾಹುಲ್ ಅದ್ಭುತವಾಗಿ ಶತಕ ಗಳಿಸಿದ ಪರಿಣಾಮ ಭಾರತ ತಂಡ ಸ್ಪರ್ಧಾತ್ಮಕ ಮೊತ್ತವಾದ 364ರನ್ನುಗಲನ್ನು ಗಳಿಸಿತು. ಇದಕ್ಕೆ ಉತ್ತರವಾಗಿ ಇಂಗ್ಲೇಂಡ್ ತಂಡದ ನಾಯನ ಭರ್ಜರಿ 180 ರನ್ನುಗಳ ಸಹಾಯದಿಂದ ಮೂರನೇ ದಿನದಂತ್ಯಕ್ಕೆ ಅತ್ಯಲ್ಪ ಮುನ್ನಡೆಯೊಂದಿಗೆ 391ರನ್ನುಗಳಿಗೆ ಆಲೌಟ್ ಆದಾಗ ಉಳಿದ ಇನ್ನೆರಡು ದಿನಗಳಲ್ಲಿ ಹೆಚ್ಚೆನದ್ದೇನು ಸಂಭವಿಸದೇ ಡ್ರಾದಲ್ಲಿ ಮುಕ್ತಾಯವಾಗುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು.
ಮೂರನೇಯ ದಿನ ಪಂದ್ಯ ಆರಂಭವಾಗುವ ಮೊದಲು ಲಾರ್ಡ್ಸ್ ಮೈದಾನದಲ್ಲಿ ಸೇರಿದ್ದ ಸಾವಿರಾರು ಬ್ರೀಟೀಷರ ಸಮ್ಮುಖದಲ್ಲಿಯೇ ಭಾರತೀಯರು ನಮ್ಮ 75ನೇ ಸ್ವಾತ್ರಂತ್ರ್ಯೋತ್ಸವದ ಅಂಗವಾಗಿ ತ್ರಿವರ್ಣ ಧ್ವಜವನ್ನು ಹಾರಿಸಿ ನಮ್ಮ ರಾಷ್ಟ್ರಗೀತೆಯನ್ನು ಮುಗಿಲು ಮುಟ್ಟುವಂತೆ ಹಾಡಿದ್ದು ನಿಜಕ್ಕೂ ವರ್ಣಿಸಲದಳವಾಗಿತ್ತು.
ತಾನೊಂದು ಬಗೆದರೆ ದೈವವೊಂದು ಬಗೆದಿತು ಎನ್ನುವಂತೆ ಕೇವಲ 27 ರನ್ನುಗಳಷ್ಟರಲ್ಲಿ ಆರಂಭಿಕ ಆಟಗಾರನ್ನು ಕಳೆದುಕೊಂಡು ತಾಂತ್ರಿಕವಾಗಿ ಹೇಳಬೇಕೆಂದರೆ 0-2 ವಿಕೆಟ್ ಕಳೆದುಕೊಂಡಾಗ ಅಕ್ರಮಣಕಾರಿ ಆಟಕ್ಕಿಳಿದ ನಾಯಕ ಕೊಹ್ಲಿ ಇಂಗ್ಲೇಂಡ್ ತಂಡದ ಮೇಲೆ ಒತ್ತಡವನ್ನು ಹೇರಿದರೂ ಅವರೂ ಸಹಾ ಹೆಚ್ಚಿನ ಹೊತ್ತು ನಿಲ್ಲದೇ ಔಟಾದಾಗ, ಸತತ ವೈಫಲ್ಯಗಳಿಂದ ನಲುಗುತ್ತಿರುವ ಪೂಜಾರ ಮತ್ತು ರಹಾನೆ ಅವರ ಮೇಲೆ ಪಂದ್ಯದ ಅಳಿವು ಉಳಿವು ನಿಂತಿತು. ತಮ್ಮ ಅಪಾರವಾದ ಅನುಭವದ ಮೂಲಕ ಟೆಸ್ಟ್ ಪಂದ್ಯಾವಳಿಗೆಂದೇ ಹೇಳಿ ಮಾಡಿಸಿರುವ ಈ ಇಬ್ಬರೂ ಆಟಗಾರರು, ಅಂತಹ ಒತ್ತಡದ ನಡುವೆಯೂ ಗುಣಮಟ್ಟದ ರಕ್ಷಣಾತ್ಮಕವಾದ ಆಟವನ್ನು ಆಡಿದ್ದಲ್ಲದೇ, ಅದ್ಭುತವಾಗಿ 100 ರನ್ ಗಳ ಜೊತೆಯಾಟವಾಡಿದ್ದಲ್ಲದೇ ಇಂಗ್ಲೇಂಡ್ ತಂಡದ ಬೋಲರ್ಗಳಿಗೆ ನೀರಿಳಿಸುವಂತೆ ಮಾಡಿದರೂ ಅಂತಿಮವಾಗಿ ಅವರಿಬ್ಬರ ಜೊತೆಗೆ ಮತ್ತೊಬ್ಬ ಆಪಧ್ಭಾಂಧವ ಜಡೇಜಾ ದಿನದಂತ್ಯಕ್ಕೆ ಔಟಾಗುವ ಮೂಲಕ ಭಾರತ ತಂಡ 4ನೇ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿ, 154 ರನ್ಗಳ ಮುನ್ನಡೆಯಲ್ಲಿದ್ದಾಗ ಬಹುತೇಕ ಭಾರತ ತಂಡ ಪಂದ್ಯ ಸೋಲುತ್ತದೆ ಎಂದು ಭಾವಿಸಿ ವರುಣ ದೇವನೇ ದಯವಿಟ್ಟು ಐದನೇಯ ದಿನ ಮಳೆಯನ್ನು ಸುರಿಸಿ ಭಾರತ ತಂಡವನ್ನು ಸೋಲಿನಿಂದ ಪಾರು ಮಾಡು ಎಂದು ಪ್ರಾರ್ಥಿಸಿದ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೇನು ಕಡಿಮೆ ಇರಲಿಲ್ಲ.
ಐದನೆಯ ದಿನ 14 ರನ್ ಗಳಿಸಿದ್ದ ರಿಷಭ್ ಪಂತ್ ಮತ್ತು4 ರನ್ ಗಳಿಸಿದ್ದ ಇಶಾಂತ್ ಶರ್ಮಾ ಅವರು ಮೈದಾನಕ್ಕೆ ಇಳಿದರು ಎಲ್ಲರ ಚಿತ್ತ ರಿಷಭ್ ಗಳಿಸುವ ರನ್ನುಗಳ ಮೇಲಿತ್ತು, ಬಾಲಗೊಂಚಿಗಳ ಮೇಲೆ ಯಾವುದೇ ಭರವಸೆ ಇರಲಿಲ್ಲ. ದುರಾದೃಷ್ಟವಶಾತ್, 209 ರನ್ನುಗಳಿಗೆ 8 ವಿಕೆಟ್ ಕಳೆದುಕೊಂಡಾಗ ಭಾರತದ ಸೋಲು ಕಟ್ಟಿಟ್ಟ ಬುತ್ತಿ ಎಂದೇ ಎಲ್ಲರೂ ಭಾವಿಸಿದ್ದರೆ, ಇಂಗ್ಲೇಡ್ ಆಟಗಾರರ ಮುಖದಲ್ಲಿ ಪಂದ್ಯ ಗೆದ್ದ ಮಂದಹಾಸ ಮೂಡಿತ್ತು. ಶಮಿ ಮತ್ತು ಭುಮ್ರಾ ಅವರ ಮೇಲೆ ಯಾವುದೇ ರೀತಿಯ ಒತ್ತಡವಿಲ್ಲದೇ ಅವರು ಗಳಿಸಿದ ರನ್ನುಗಳೆಲ್ಲವೂ ಬೋನಸ್ ಎಂದೇ ಭಾವಿಸಿದ್ದರು. ಹಿಂದಿನ ಪಂದ್ಯದಲ್ಲಿಯೂ ಭೂಮ್ರಾ ತನ್ನ ಬ್ಯಾಟ್ ಬೀಸಿ ಸ್ವಲ್ಪ ರನ್ನುಗಳನ್ನು ಗಳಿಸಿದ್ದು ಮತ್ತು ಶಮಿ ಕೂಡಾ ಭರ್ಜರಿ ಹೊಡೆತಗಳಿಗೆ ಖ್ಯಾತರಾಗಿರುವುದು ಭರವಸೆಯ ಕಿರಣವನ್ನು ಮೂಡಿಸುತ್ತಿದ್ದಾದರೂ ನಂಬಿಕೆ ಇರಲಿಲ್ಲ. ಆದರೆ ಈ ಎಲ್ಲ ಅಪನಂಬಿಕೆಗಳನ್ನೂ ಹುಸಿ ಮಾಡಿದ ಶಮಿ ಮತ್ತು ಭ್ರೂಮ್ರಾ ಎಲ್ಲರನ್ನು ಅದರಲ್ಲೂ ಇಂಗ್ಲೇಂಡ್ ಆಟಗಾರನ್ನೂ ಹೈರಾಣು ಮಾಡಿ ಅಜೇಯ 89 ರನ್ನುಗಳ ಜೊತೆಯಾಟ, ಭಾರತವನ್ನು ಗೆಲ್ಲುವುದಿರಲಿ ಕನಿಷ್ಟ ಪಕ್ಷ ಸೋಲುವುದನ್ನು ತಪ್ಪಿಸಿದರೆಂದೇ ಎಲ್ಲರೂ ಸಮಾಧಾನ ಪಟ್ಟುಕೊಳ್ಳುತ್ತಿದ್ದಾಗ, ಛಲಗಾರ ವಿರಾಟ್ ಕೊಹ್ಲಿ ತಂಡದ ಮೊತ್ತ 298-8 ಶಮಿ ಅಜೇಯ 56, ಭೂಮ್ರಾ ಅಜೇಯ 34 ರನ್ನುಗಳನ್ನು ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡು ಇಂಗ್ಲೆಂಡ್ ತಂಡಕ್ಕೆ 60 ಓವರುಗಳಲ್ಲಿ 271 ರನ್ ಗಳ ಗುರಿಯನ್ನು ಕೊಟ್ಟಾಗ, ಪಂದ್ಯ ಬಹುತೇಕ ಡ್ರಾ ಎಂದೇೆ ಎಲ್ಲರೂ ನಂಬಿದ್ದರು.
ಗೆಲ್ಲುವ ಪಂದ್ಯ ಕೈ ಜಾರಿದ್ದ ಇಂಗ್ಲೇಂಡಿಗೆ ಕನಿಷ್ಟ ಪಕ್ಷ ರಕ್ಷಣಾತ್ಮಕವಾಗಿ ಆಡಿ ಸೋಲುವುದನ್ನು ತಪ್ಪಿಸಿಕೊಳ್ಳುವ ಇಂಗಿತದಿಂದಲೇ ಪಂದ್ಯವನ್ನು ಆರಂಭಿಸಿ ಮೊದಲ ಎರಡು ಓವರ್ಗಲಲ್ಲಿಯೇ 1-1, 1-2 ವಿಕೆಟ್ ಕಳೆದುಕೊಂಡಾಗ ಭಾರತಕ್ಕೆ ಗೆಲುವಿನ ಮುನ್ಸೂಚನೆ ಬಡಿಯಿತಾದರು ಸರಣಿಯಲ್ಲಿ ಅತ್ಯುತ್ತಮವಾಗಿ ಆಡುತ್ತಿರುವ ನಾಯಕ ಜೋರೂಟ್ ಇರುವ ವರೆಗೂ ಏನನ್ನೂ ಹೇಳುವ ಹಾಗಿರಲಿಲ್ಲ. ಆರಂಭಿಕ ಬೌಲರ್ಗಳನ್ನು ಬದಲಿಸಿ ಇಶಾಂತ್ ಮತ್ತು ಸಿರಾಜ್ ಅವರನ್ನು ಧಾಳಿ ಗಿಳಿಸುತ್ತಿದ್ದಂತೆಯೇ ನಾಯಕನ ಭರವಸೆಯನ್ನು ಹುಸಿ ಮಾಡದೇ ಒಂದಾದ ಮೇಲೊಂದು ವಿಕೆಟ್ಗಳನ್ನು ಕಬಳಿಸುವ ಮೂಲಕ ಜೋ ರೂಟ್ ಅವರನ್ನೂ ಔಟ್ ಮಾಡಿದಾಗ ಇಂಗ್ಲೇಂಡ್ ತಂಡದ ಮೊತ್ತ 90-5. ಭಯಂಕರ ಆಟಗಾರ ಮೋಯಿನ್ ಅಲಿ ಮತ್ತು ಭರವಸೆಯ ಆಟಗಾರ ಸ್ಯಾಮ್ ಕರೆನ್ ಅವರ ಸತತ ವಿಕೆಟ್ ಗಳನ್ನು ಸಿರಾಜ್ ಕಿತ್ತಾಗ 90-7 ಆದಾಗಲಂತೂ ಡ್ರಾ ಆಗುತ್ತದೆ ಎಂದು ನಿದ್ದೆಮಾಡಲು ಹೋಗುತ್ತಿದ್ದವರೆಲ್ಲರೂ ಎಚ್ಚೆತ್ತು ಕೊಂಡು ಪಂದ್ಯದ ರೋಚಕತೆಯನ್ನು ಸವಿಯಲಾರಂಭಿಸಿದರು. ಇಂಗ್ಲೇಂಡ್ ತಂಡಕ್ಕೆ 10 ಓವರುಗಳನ್ನು ಸುರಕ್ಶಿತವಾಗಿ ಆಡಿಕೊಂಡರೆ ಪಂದ್ಯ ಉಳಿಸಿಕೊಳ್ಲಬಹುದು, ಭಾರತ 3 ವಿಕೆಟ್ ಗಳಿಸಿದರೆ ಪಂದ್ಯ ಗೆಲ್ಲಬಹುದು ಎಂಬ ಡೋಲಾಯಮಾನ ಸ್ಥಿತಿ. ಇಂಗ್ಲೇಂಡ್ ತಂಡದ ಮೊತ್ತ 120 ಇದ್ದಾಗ ಭೂಮ್ರಾ ಬೋಲಿಂಗಿನಲ್ಲಿ ರಾಬಿನ್ಸನ್ ಔಟಾಗಿ ಅದರ ನಂತರದ ಓವರಿನಲ್ಲಿ ಸಿರಾಜ್ ಸತತ ಎರಡು ಬಾಲಿನಲ್ಲಿ ಬಟ್ಲರ್ ಮತ್ತು ಜೇಮ್ಸ್ ಆಂಡರ್ಸನ್ ವಿಕೆಟ್ ಹಾರಿಸುವ ಮೂಲಕ ಇಂಗ್ಲೇಂಡ್ 120 ರನ್ನುಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನೂ ಕಳೆದು ಕೊಂಡಾಗ ಭಾರತ 151 ರನ್ನುಗಳ ಭರ್ಜರಿ ಜಯವನ್ನು ಪಡೆಯಿತು.
50 ಮತ್ತು 20 ಓವರುಗಳಷ್ಟು ರೋಚಕತೆ ಟೆಸ್ಟ್ ಪಂದ್ಯಗಳಲ್ಲಿಿ ಇರುವುದಿಲ್ಲ ಎಂದು ಹೇಳುವವರಿಗೆ ಮುಟ್ಟಿ ನೋಡಿಕೊಳ್ಳುವಂತೆ ರೋಚಕವಾಗಿದ್ದ ಈ ಪಂದ್ಯದಿಂದ ಎರಡೂ ತಂಡಗಳು ಕಲಿಯಬೇಕಾದ ಪಾಠಗಳು ಬಹಳಷ್ಟಿವೆ.
ಕ್ರಿಕೆಟ್ ತಂಡ ಆಟವಾಗಿದ್ದು ಸಾಂಘೀಕವಾಗಿ ಎಲ್ಲರೂ ಒಬ್ಬರ ಮೇಲೆ ಒಬ್ಬರು ಭರವಸೆಯನ್ನು ಇಟ್ಟು ಆಡಿದಲ್ಲಿ ಫಲಿತಾಂಶವನ್ನು ಹೇಗೆ ಬದಲಿಸ ಬಹುದು ಎನ್ನುವುದಕ್ಕೆ ಈ ಪಂದ್ಯ ಉದಾಹರಣೆಯಾಗಿದೆ.
ಯಾವುದೇ ಒತ್ತಡಡವಿಲ್ಲದೇ ಆಟವಾಡಿದ ಭೂಮ್ರಾ ಮತ್ತು ಶಮಿ ಅವರಿಂದ ಪೂಜಾರ ಮತ್ತು ರೆಹಾನೆಯವರು ಒತ್ತಡವನ್ನು ನಿಭಾಯಿಸುವ ಕಲೆಯನ್ನು ಕಲಿಯ ಬೇಕಾಗಿದೆ.
ಐದನೆಯ ದಿನ ಪಂದ್ಯ ಇನ್ನೇನು ಗೆದ್ದೇ ತೀರುತ್ತೇವೆ ಎಂದು ವಿಪರೀತ ಆತ್ಮ ವಿಶ್ವಾಸದಿಂದ ಸ್ಲೆಡ್ಜಿಂಗ್ ಮಾಡುತ್ತಾ ಭಯಂಕರ ಬೌನ್ಸರ್ಗಳನ್ನು ಹಾಕುತ್ತಾ ಭಾರತೀಯ ಆಟಗಾರರ ಮೇಲೆ ದೈಹಿಕ ಧಾಳಿ ಮಾಡಿದ ಇಂಗ್ಲೇಂಡ್ ತಂಡಕ್ಕೆ ತಕ್ಕ ಶಾಸ್ತಿಯಾಗಿದೆ.
ಪಂದ್ಯದ ಪರಿಸ್ಥಿತಿಗೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಆಡಿಸದೇ ನಾಲ್ಕು ವೇಗಿಗಳನ್ನು ಆಡಿಸಿದ್ದ ಬಗ್ಗೆ ಕೊಂಕು ಎತ್ತಿದ್ದವರಿಗೆ ಪಂದ್ಯ ಗೆಲ್ಲುವುದು ಮುಖ್ಯವೇ ಹೊರತು ವಯಕ್ತಿಯ ಆಟಗಾರರಲ್ಲ ಎಂಬುದನ್ನು ಅದ್ಭುತವಾಗಿ ತೋರಿಸಲಾಗಿದೆ.
ಎಂತಹ ಸಂಧರ್ಭದಲ್ಲಿಯೂ ತನ್ನ ತಂಡದ ಎಲ್ಲಾ ಆಟಗಾರರ ಮೇಲೆ ಭರವಸೆ ಇಟ್ಟು ಸಕಾರಾತ್ಮಕವಾಗಿ ತಂಡವನ್ನು ಹುರಿದುಂಬಿಸಿದಲ್ಲಿ ಕೈಜಾರುತ್ತಿದ್ದ ಪಂದ್ಯವನ್ನು ಹೇಗೆ ಗೆಲ್ಲಬಹುದು ಎಂಬುದನ್ನು ವಿರಾಟ್ ಕೋಹ್ಲಿ ಎಲ್ಲರಿಗೂ ತೋರಿಸಿಕೊಟ್ಟಿದ್ದಲ್ಲದೇ ತನ್ನ ನಾಯಕತ್ವದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಒಟ್ಟಿನಲ್ಲಿ ಇಡೀ ತಂಡದ ಸಾಂಘಿಕ ಕೊಡುಗೆಯಿಂದಾಗ ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಪಂದ್ಯವನ್ನು ಗೆದ್ದ ಬಗ್ಗೆ ನಮಗೆ ಹೆಮ್ಮೆ ಇದೆ ಮತ್ತು ಇದೇ ಪ್ರಯತ್ನವನ್ನು ಉಳಿದ ಪಂದ್ಯಗಳಲ್ಲಿಯೂ ಮುಂದುವರೆಸಿಕೊಂಡು ಸರಣಿಯನ್ನು ವಶಪಡಿಸಿಕೊಳ್ಳಲೀ ಎಂದೇ ಸಕಲ ಕ್ರಿಕೆಟ್ ಪ್ರಿಯರ ಆಶೆಯಾಗಿದೆ. ಇನ್ನು ವಯಕ್ತಿಕವಾಗಿ ಪರಮ ಕ್ರಿಕೆಟ್ ಅಭಿಮಾನಿ ಮತ್ತು ದೇಶಾಭಿಮಾನಿಯಾಗಿದ್ದ ಭಾರತ ತಂಡ ಪ್ರತೀ ಪಂದ್ಯವನ್ಜು ಗೆದ್ದಾಗ ಪುಟ್ಟಮಗುವಿನಂತೆ ಸಂಭ್ರಮಿಸುತ್ತಿದ್ದ ನಮ್ಮ ತಂದೆಯವರು ಇರಬಾರದಿತ್ತೇ ಎಂಬ ನೋವು ಸಹಾ ಕಾಡುತ್ತದಾದರೂ, ಅವರು ಸಾಯುವ ಹಿಂದಿನ ದಿನ ನ್ಯೂಜಿಲೆಂಡ್ ವಿರುದ್ಧ 3-2ರ ಅಂತರದಲ್ಲಿ ಸರಣಿಯನ್ನು ಗೆದ್ದದ್ದನ್ನು ನೋಡಿದ್ದರಲ್ಲಾ ಎಂದು ಸಮಾಧಾನ ಪಟ್ಟುಕೊಳ್ಳಬೇಕಿದೆ.
ಕ್ರಿಕೆಟ್ ಜನಕರ ನಾಡಿನಲ್ಲಿಯೇ ಆಂಗ್ಲರನ್ನು ಈ ಪರಿಯಾಗಿ ರೋಚಕವಾಗಿ ಬಗ್ಗು ಬಡಿಯುವ ಮೂಲಕ ಭಾರತದ 75ನೇ ಸ್ವಾತಂತ್ರ್ಯೋತ್ಸವದ ಕೊಡುಗೆಯಾಗಿ ನೀಡಿದ ಭಾರತೀಯ ಕ್ರಿಕೆಟ್ ತಂಡವನ್ನು ಹೃತ್ಪೂರ್ವಕವಾಗಿ ಅಭಿನಂದಿಸೋಣ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ