ದಸರಾ ಎಂದು ನೆನಸಿಕೊಂಡಾಕ್ಷಣ ನಮ್ಮ ಕಣ್ಣ ಮುಂದೆ ಬರುವುದೇ ಆನೆಯ ಅಂಬಾರಿ. ಆನೆಗಳ ಹಿಂಡಿನ ಮಧ್ಯೆ ಬಲರಾಮನ ಮೇಲೆ ತಾಯಿ ಚಾಮುಂಡೇಶ್ವರಿ ತಾಯಿಯನ್ನು ಮೆರವಣಿಗೆ ಮಾಡುವುದನ್ನು ವೀಕ್ಷಿಸಲು ದೇಶ ವಿದೇಶಗಳಿಂದಳೂ ಲಕ್ಷಾಂತರ ಪ್ರವಾಸಿಗರು ಬರುವುದಲ್ಲದೇ ಆ ಹೆಮ್ಮೆಯ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳುತ್ತಾರೆ. ಇನ್ನು ಕೇರಳದ ಬಹುತೇಕ ಹಿಂದೂ ದೇವಾಲಯಗಳಲ್ಲಿಯೂ ಆನೆಗಳೇ ಪ್ರಮುಖ ಆಕರ್ಷಣೆ. ಅಲ್ಲಂತೂ ಹತ್ತಾರು ಆನೆಗಳನ್ನು ಚೆನ್ನಾಗಿ ಅಲಂಕರಿಸುವುದನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲವು. ದೇಶದಲ್ಲಿ ಎಲ್ಲಶ ಆಗಲೀ ಸ್ವಾಮೀ ಐಯ್ಯಪ್ಪನ ಮೆರವಣೆಗೆ ನಡೆಯುವುದೇ ಆನೆಯ ಮೇಲೆಯೆ.
ಇನ್ನು ನಾವು ಚಿಕ್ಕವರಿದ್ದಾಗ ನಮ್ಮ ಹಾಸನದ ಸುತ್ತಮುತ್ತಲಿನ ಊರುಗಳಿಗೆ ವರ್ಷಕ್ಕೊಮ್ಮೆ ಕುಂದೂರು ಮಠದವರು ಎತ್ತರೆತ್ತರದ ಡುಬ್ಬಗಳಿದ್ದ ಹತ್ತಾರು ಎತ್ತುಗಳು, ಕುದುರೆಗಳೊಂದಿಗೆ ಬಂದು ಕಪ್ಪವನ್ನು ಪಡೆದುಕೊಂಡು ಅವುಗಳ ಮೇಲೆ ಹೇರಿಕೊಂಡು ಹೊಗುತ್ತಿದ್ದದ್ದು ಇನ್ನೂ ಚೆನ್ನಾಗಿಯೇ ನೆನಪಿದೆ.
ಇನ್ನೂ ಅಮ್ಮನ ತವರೂರಾದ ಕೆಜಿಎಫ್ ನಲ್ಲಿದ್ದ ಬಹುತೇಕ ಸುಬ್ರಹ್ಮಣ್ಯನ ಮತ್ತು ಉದ್ದಂಡಮ್ಮನ ದೇವಸ್ಥಾನಗಳಲ್ಲಿ ಹತ್ತಾರು ನವಿಲುಗಳನ್ನು ಸಾಕುತ್ತಿದ್ದು ಚಿಕ್ಕ ಮಕ್ಕಳಾಗಿದ್ದ ನಮಗೆ ದೇವರ ಮೇಲಿನ ಭಕ್ತಿಗಿಂತಲೂ ಪ್ರಾಣಿ ಪಶು ಪಕ್ಷಿಗಳನ್ನು ನೋಡುವುದಕ್ಕೇ ಹೋಗುತ್ತಿದ್ದದ್ದು ಇನ್ನೂ ಹಚ್ಶ ಹಸಿರಾಗಿಯೇ ಇದೆ.
ಇನ್ನು ಧರ್ಮಸ್ಥಳ, ಉಡುಪಿ , ಕೊಲ್ಲೂರು, ಶೃಂಗೇರಿ ಮುಂತಾದ ಎಲ್ಲಾ ಧಾರ್ಮಿಕ ಕ್ಷೇತ್ರಗಳಲ್ಲಿಯೂ ಆನೆಗಳನ್ನು ಸಾಕುವ ಪದ್ದತಿ ಅದೆಷ್ಟೋ ಕಾಲದಿಂದ ಅನೂಚಾನಾಗಿ ನಡೆದುಕೊಂಡು ಬರುತ್ತಿದ್ದು. ಈ ಪ್ರಾಣಿಗಳನ್ನು ಯಾವುದೇ ವಾಣಿಜ್ಯ ಆದಾಯಕ್ಕೆ ಬಳಸಿಕೊಳ್ಳದೇ, ಅತ್ಯಂತ ಜತನದಿಂದ ಕೇವಲ ದೇವಸ್ಥಾನದ ದೇವರ ಕೈಂಕರ್ಯಕ್ಕೆ ಮಾತ್ರವೇ ಬಳಸಿಕೊಳ್ಳುತ್ತಿರುವುದು ನಮ್ಮೆಲ್ಲರಿಗೂ ತಿಳಿದಿರುವ ವಿಷಯವಷ್ಟೇ.
ಅದೇ ರೀತಿ ಬೆಂಗಳೂರಿನ ವಿದ್ಯಾರಣ್ಯಪುರದ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿಯೂ ಪೂಜಾ ಕಾರ್ಯಕ್ಕೆ ಬಳಸಲು ಸುಮಾರು 10-12 ವರ್ಷಗಳ ಹಿಂದೆ ಆನೆಯ ಸಣ್ಣ ಮರಿಯೊಂದನ್ನು ತಂದು ಅದನ್ನು ಅತ್ಯಂತ ಪ್ರೀತಿಯಿಂದ ಸಾಕಿ ಸಲಹಿ ಈಗ ದೊಡ್ದದಾಗಿರುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ದೇವಾಲಯದ ಸದ್ದು ಗದ್ದಲದಿಂದ ಆನೆಗೆ ತೊಂದರೆಯಾಗದಿರಲೆಂದೂ ದೇವಾಲಯದಿಂದ ಸ್ವಲ್ಪ ದೂರದಲ್ಲಿಯೇ ಅದಕ್ಕೊಂದು ಸುಂದರವಾದ ಲಾಯವನ್ನು ಭಕ್ತಾದಿಯೊಬ್ಬರು ಕಟ್ಟಿಸಿಕೊಂಡಿದ್ದು ದೇವಸ್ಥಾನದ ಪೂಜೆಗ ಅನುಗುಣವಾಗಿ ಆನೆಯನ್ನು ಅದರ ಮಾವುತ ಕರೆದುಕೊಂಡು ಬಂದು ಹೊಗುತ್ತಿದ್ದದ್ದನ್ನು ಅನೇಕ ವರ್ಷಗಳಿಂದಲೂ ನೋಡುತ್ತಲೇ ಇದ್ದೇವೆ.
ನಮ್ಮ ಹಿಂದೂಗಳ ಅತಿ ದೊಡ್ಡ ಸಮಸ್ಯೆ ಎಂದರೆ ಒಗ್ಗಟ್ಟಿನ ಕೊರತೆ. ಇದೇ ಕಾರಣದಿಂದಾಗಿಯೇ, ಮೊಘಲರು, ಬ್ರಿಟೀಷರು ನಮ್ಮ ಮೇಲೆ ಸಾವಿರಾರು ವರ್ಷಗಳ ಕಾಲ ಧಾಳಿ ನಡೆಸಿದರೂ ಇನ್ನೂ ಬುದ್ದಿ ಕಲಿತುಕೊಂಡಿಲ್ಲ. ಯಾರದ್ದೋ ಮೇಲಿನ ತಮ್ಮ ವಯಕ್ತಿಯ ದ್ವೇಷಕ್ಕಾಗಿ ವರ್ಷದ 365 ದಿನಗಳ ಕಾಲವೂ ಒಂದಲ್ಲಾ ಒಂದು ಧಾರ್ಮಿಕ ಚಟುವಟಿಕೆಗಳಿಂದ ವಿದ್ಯಾರಣ್ಯಪುರದ ಎಲ್ಲಾ ಆಸ್ತಿಕ ಭಕ್ತರಿಗೆ ಮತ್ತು ಸುತ್ತಮುತ್ತಲಿನ ಎಲ್ಲಾ ಸಣ್ಣ ಪುಟ್ಟ ದೇವಾಲಯಗಳಿಗೆ ಆಭಯದಾಯಕವಾಗಿದ್ದ ವಿದ್ಯಾರಣ್ಯಪುರದ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಮೇಲೆ ಇಲ್ಲ ಸಲ್ಲದ ದೂರನ್ನು ಸಲ್ಲಿಸಿ, ಕಡೆಗೆ ಹಣಕಾಸಿನ ದುರ್ಬಳಕೆಯ ನೆಪದಿಂದ ಭಕ್ತರ ಸಹಕಾರದೊಂದಿಗೆ ಖಾಸಗಿಯಾಗಿದ್ದ ದೇವಸ್ಥಾನವನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಮೂರ್ನಾಲ್ಕು ವರ್ಷಗಳ ಹಿಂದೆ ಸೇರುವಂತೆ ಮಾಡುವ ಮೂಲಕ ತಮ್ಮ ವಿಕೃತ ಮನೋಭಾವನೆಯಿಂದ ಮೆರೆದಿದ್ದರು. ದೇವಾಲಯ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದಾಗಿನಿಂದಲೂ ದೇವಸ್ಥಾನದ ಬಹುತೇಕ ಧಾರ್ಮಿಕ ಚಟುವಟಿಕೆಗಳು ನಿಂತು ಹೋಗಿ ಸರ್ಕಾರಕ್ಕೆ ಕೇವಲ ದೇವಸ್ಥಾನದ ಹುಂಡಿ ಹಣದ ಮೇಲೆ ಮಾತ್ರ ಕಣ್ಗಾವಲು ಹಾಕಿದ್ದು ವಿಪರ್ಯಾಸವಾಗಿತ್ತು
ಶತ್ರುವಿನ ಶತ್ರು ಮಿತ್ರ ಎನ್ನುವಂತೆ, ತಮ್ಮ ವಯಕ್ತಿಕ ದ್ವೇಷದಿಂದಾಗಿ ಕೆಲವು ಕಾಣದ ಕೈಗಳು ದುರ್ಗಾದೇವಿ ದೇವಸ್ಥಾನದ ಪೂಜಾಕೈಂಕರ್ಯಕ್ಕೆಂದು ಮುದ್ದಾಗಿ ಸಾಕಿಕೊಂಡಿದ್ದ ಆನೆಯ ಮೇಲೆ ತಗಾದೆಯನ್ನು ತೆಗೆದು ಅದು ನ್ಯಾಯಾಲದ ಅಂಗಳಕ್ಕೆ ಕಾಲಿಟ್ಟಿದ್ದು ಮುಖ್ಯ ನ್ಯಾ. ಎ.ಎಸ್.ಓಕ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ನೆನ್ನೆ ಗುರುವಾರ ವಿಚಾರಣೆಯ ಸಮಯದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಹೈಕೋರ್ಟಿನ ನ್ಯಾಯಾಧೀಶರು, ಆನೆಗಳು ಕಾಡಿನಲ್ಲಿ ಇರಬೇಕು ಹೊರತು ದೇವಸ್ಥಾನದಲ್ಲಿ ಅಲ್ಲ. ಪೂಜಾ ಕಾರ್ಯಕ್ರಮಕ್ಕೆ ಆನೆಗಳನ್ನು ಬಳಸಿಕೊಳ್ಳುವುದು ಕ್ರೌರ್ಯವೇ ಆಗುತ್ತದೆ ಎಂದು ತೀಕ್ಷ್ಣವಾಗಿ ಹೇಳಿರುವುದು ನಿಜಕ್ಕೂ ಅಚ್ಚರಿಯನ್ನು ಮೂಡಿಸಿದೆ.
ದೇವಾಲಯದ ಪರ ವಕೀಲರು ಈ ಮುಂಚೆ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನವು ಖಾಸಗಿ ದೇವಾಲಯವಾಗಿದ್ದು. ಅಲ್ಲಿನ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲು ಆನೆಯೊಂದನ್ನು ಬಹಳ ವರ್ಷಗಳ ಹಿಂದೆ ತಂದು ಪೋಷಿಸಲಾಗುತ್ತಿತ್ತು. ಇದೀಗ ದೇವಸ್ಥಾನವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಪಡೆದ ಕಾರಣ ಆನೆಯೂ ಸರ್ಕಾರದ ವಶದಲ್ಲಿದೆ. ಅದನ್ನು ಸ್ಥಳಾಂತರಿಸದೇ ದೇವಸ್ಥಾನದಲ್ಲಿಯೇ ಇರಿಸಲು ಮುಜರಾಯಿ ಇಲಾಖೆಗೆ ನಿರ್ದೇಶಿಸಬೇಕು ಎಂದು ಕೋರಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಆನೆಗಳು ಕಾಡಿನಲ್ಲಿರಬೇಕೇ ಹೊರತು ದೇಗುಲಗಳಲ್ಲಲ್ಲ ಎಂದಿದೆ.
ಇದಕ್ಕೆ ಪೂರಕವಾಗಿ ಸರ್ಕಾರಿ ವಕೀಲರಾಗಿರುವ ಶ್ರೀ ವಿಜಯ್ ಕುಮರ್ ಪಾಟೀಲ್, ಆನೆಗೆ ಆರೋಗ್ಯ ಸಮಸ್ಯೆಯಿದೆ. ಚಿಕಿತ್ಸೆ ನೀಡುವ ಅಗತ್ಯ ಇರುವುದರಿಂದ ಅದನ್ನು ಮಾಲೂರಿನ ಅರಣ್ಯ ಇಲಾಖೆಯ ಪುನರ್ವಸತಿ ಕೇಂದ್ರಕ್ಕೆ ರವಾನಿಸಿ ಅಗತ್ಯ ಚಿಕಿತ್ಸೆ ನೀಡಲಾಗುವುದು ಎಂದು ನ್ಯಾಯಪೀಠಕ್ಕೆ ವಿವರಿಸಿದ್ದನ್ನು ಪರಿಗಣಿಸಿದ ನ್ಯಾಯಪೀಠ, ಆನೆಗೆ ಸೂಕ್ತ ಚಿಕಿತ್ಸೆ ಕಲ್ಪಿಸಿ, ವೈದ್ಯಕೀಯ ವರದಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿ ಸೆ.13ಕ್ಕೆ ವಿಚಾರಣೆ ಮುಂದೂಡಿದೆ.
ಆನೆ, ಹಸು, ಎತ್ತು, ಕುದುರೆ ಒಂಟೆ ಹೀಗೆ ಅಯಾಯಾ ಪ್ರದೇಶದಲ್ಲಿರುವ ಪ್ರಾಣಿಗಳನ್ನು ದೇವಸ್ಥಾನದಲ್ಲಿ ಸಾಕುತ್ತಾ ಅದನ್ನು ದೇವರ ಪೂಜಾ ಕಾರ್ಯಕ್ರಮಕ್ಕೆ ಬಳಸಿಕೊಳ್ಳುವ ಪದ್ಧತಿ ಹಿಂದಿನಿಂದಲೂ ಜಾರಿಯಲ್ಲಿರುವುದನ್ನು ಈಗ ಏಕಾಏಕಿ ನಿಲ್ಲಿಸುವುದು ಮತ್ತು ಅದನ್ನು ಕ್ರೌರ್ಯ ಎನ್ನುವುದು ಎಷ್ಟು ಸರಿ?
ಹಾಗಾದರೆ, ಕಾಡುಗಳನ್ನು ಕಡಿದು ನಾಡಾಗಿ ಪರಿವರ್ತನೆ ಮಾಡಿರುವುದು, ಪ್ರಾಣಿಗಳನ್ನು ವಧೆ ಮಾಡಿ ಮಾಂಸಾಹಾರವನ್ನು ಸೇವಿಸುವುದೂ ಕ್ರೌರ್ಯವಲ್ಲವೇ? ಪ್ರಪಂಚಾದ್ಯಂತ ಇರುವ ಎಲ್ಲಾ ಮೃಗಾಲಯಗಳನ್ನು ಕ್ರೌರ್ಯ ಎಂದೇ ಮುಚ್ಚಿಸ ಬೇಕಲ್ಲವೇ? ಪ್ರಾಣಿ ವಧೆ ಮಾಡುವ ಕಸಾಯಿಖಾನೆ ಮತ್ತು ಮಾಂಸದ ಅಂಗಡಿಗಳಿಗೆ ಸರ್ಕರವೇ ಅನುಮತಿ ಕೊಟ್ಟಿಲ್ಲವೇ? ಮೊನ್ನೆ ತಾನೇ, ಕುರಿಗಳನ್ನು ಕಡಿದು ರಸ್ತೆ ರಸ್ತೆಗಳಲ್ಲಿ ರಕ್ತದ ಕೋಡಿ ಹರಿಸಿದ ಇತರೇ ಧರ್ಮಗಳ ಆಚರಣೆಗಳು ನ್ಯಾಯಾಲಯದ ಗಮನಕ್ಕೆ ಬರುವುದಿಲ್ಲವೇ? ಇದೇ ರೀತಿ ಕುಂಟು ನೆಪವೊಡ್ಡಿ ಒಂದೊಂದೇ ಆಚರಣೆಗಳನ್ನು ನಿಷೇಧಿಸುತ್ತಲೇ ಹೋದಲ್ಲಿ ನಮ್ಮ ಹಿಂದೂ ಸಂಪ್ರದಾಯ ಮತ್ತು ಸಂಸ್ಕಾರಗಳು ನಮ್ಮ ಮುಂದಿನ ಪೀಳಿಗೆಗೆ ತಿಳಿಯುವುದಾದರು ಹೇಗೇ? ನ್ಯಾಯಾಲಯದ ತೀರ್ಪು ನಿಕ್ಷಕ್ಷಪಾತ ಇರಬೇಕು ಎಂದು ತಕ್ಕಡಿ ಹಿಡಿದ ನ್ಯಾಯದೇವತೆಯ ಕಣ್ಣನ್ನು ಕಟ್ಟಲಾಗಿರುತ್ತದೆ ಆದರೆ ದುರಾದೃಷ್ಟವಾಷಾತ್ ನ್ಯಾಯಾಲಯದ ಇತ್ತೀಚಿನ ಬಹುತೇಕ ತೀರ್ಪುಗಳನ್ನು ಕೂಲಂಕುಶವಾಗಿ ಗಮನಿಸಿದಲ್ಲಿ, ಅದು ದೇಶದ ಬಹುಸಂಖ್ಯಾತರಾದ ಹಿಂದೂಗಳ ವಿರುದ್ಧವೇ ಅಗಿರುವುದು ನಿಜಕ್ಕೂ ದುಃಖಕರವೇ ಸರಿ.
ದಯವಿಟ್ಟು ಸಮಸ್ತ ಹಿಂದೂಗಳ ಪರವಾಗಿ ನಮ್ಮ ಘನವೆತ್ತ ನ್ಯಾಯಾಲಯದಲ್ಲಿ ನಮ್ಮ ಕೋರಿಕೆಯೆಂದರೆ ನಮ್ಮ ಪೂರ್ವಜರ ಜೀವನ ಶೈಲಿ, ಆಹಾರ, ಹಬ್ಬ ಹರಿದಿನಗಳು, ಆಚಾರ ವಿಚಾರಗಳ ಪದ್ದತಿಯ ಹಿಂದೆ ಖಂಡಿತವಾಗಿಯೂ ವೈಜ್ಞಾನಿಕವಾದ ಕಾರಣಗಳಿದ್ದು ಅವುಗಳಿಗೆ ಅನಗತ್ಯವಾಗಿ ನ್ಯಾಯಾಲಯದ ಮೂಲಕ ಕೊಕ್ಕೆ ಹಾಕದಿರಿ. ಈ ದೇವಾಲಯಗಳಲ್ಲಿ ಆ ಪ್ರಾಣಿಗಳನ್ನು ಹಿಂಸಿಸುತ್ತಿದ್ದಲ್ಲಿ ನಿಮ್ಮ ವಾದವನ್ನು ಒಪ್ಪಬಹುದು ಆದರೆ ಅಲ್ಲಿ ಅವುಗಳನ್ನು ಅತ್ಯಂತ ಪ್ರೀತಿಯಿಂದ ಸಾಕಿ ಸಲಹುತ್ತಾರೆ. ಇಂದಿಗೂ ಸಹಾ ಅದೆಷ್ಟೋ ದೇವಾಲಯಗಳಲ್ಲಿ ನಡೆಸುತ್ತಿರುವ ಗೋಶಾಲೆಗಳಿಂದಾಗಿಯೇ ಗೋವುಗಳ ಕಟುಕರ ಪಾಲಾಗದೇ ತಮ್ಮ ಕಡೆಯ ದಿನಗಳಲ್ಲಿ ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ. ಅದೇ ರೀತಿ ದೇಶಾದ್ಯಂತ ಇರುವ ಅದೆಷ್ಟೋ ದೇವಾಲಯಗಳ ದಾಸೋಹವೇ ಲಕ್ಷಾಂತರ ಜನರ ಪ್ರತಿನಿತ್ಯದ ಹಸಿವನ್ನು ನೀಗಿಸುತ್ತಿದೆ.
ಅದಕ್ಕೇ ಅಲ್ಲವೇ ಕೇಳಿದ್ದೂ ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು. ನಿಧಾನಿಸಿ ಯೋಚಿಸಿದಾಗ ನಿಜವು ಅರಿವುದು ಎಂಬ ಹಾವು ಮುಂಗುಸಿಯ ಜಾನಪದ ಕಥೆ ಸಾವಿರಾರು ವರ್ಷಗಳಿಂದಲೂ ಪ್ರಚಲಿತದಲ್ಲಿದೆ. ಕೇವಲ ವಕೀಲರು ನಡೆಸುವ ಪರ ವಿರೋಧದ ವಾದ ವಿವಾದಗಳಿಗೆ ಕಿವಿಗೊಟ್ಟು ನಿರ್ಧಾರವನ್ನು ತಳೆಯದೆ, ಸ್ವತಃ ನ್ಯಾಯಾಧೀಷರುಗಳೇ ಪ್ರತ್ಯಕ್ಷಿಸಿ ನೋಡಿದರು ಪ್ರಮಾಣಿಸಿ ನೋಡು ಎಂದು ದೇವಾಲಯಗಳಿಗೆ ಭೇಟಿ ಕೊಟ್ಟಾಗಲೇ ನಿಜಾಂಶ ತಿಳಿಯುವುದು.
ನಮಸ್ತ ಹಿಂದೂಗಳಲ್ಲಿ ಕೋರಿಕೆಯೇನೆಂದರೆ ದಯವಿಟ್ಟು ಹಿಂದೂ ಧಾರ್ಮಿಕ ವಿಷಯಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗೆ ಒಳಗಾಗುವಾಗ ಅದು ನನಗೆ ಸಂಬಂಧಿಸಿದ ವಿಷಯವಲ್ಲ ಎಂದು ಸುಮ್ಮನಾಗದೇ ದಯವಿಟ್ಟು ಅದರ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಮತ್ತು ತಪ್ಪು ಎಂದು ಕಂಡು ಬಂದಲ್ಲಿ ಅದನ್ನು ಎತ್ತಿ ಹಿಡಿಯುವ ಮನೋಭಾವನೆ ಬೆಳಸಿಕೊಳ್ಳೋಣ. ಹಿಂದೂ ಜಾಗೃತನಾದಲ್ಲಿ ಮಾತ್ರವೇ ಈ ದೇಶ, ಈ ದೇಶದ ಸಂಸ್ಕಾರ, ಸಂಪತ್ತು ಎಲ್ಲವೂ ಉಳಿದೀತು ಇಲ್ಲದಿದ್ದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ಧರ್ಮವೇ ಅಳಿದು ಹೋಗಿ ನಮ್ಮ ಹೆಣ್ಣು ಮಕ್ಕಳೂ ಮನೆಯಲ್ಲಿ ಮಸುಕು ಧರಿಸಿಕೊಂಡು ಕೂರಬೇಕಾದ ಪರಿಸ್ಥಿತಿ ಬಂದೊದಗುವುದರಲ್ಲಿ ಸಂದೇಹವೇ ಇಲ್ಲ.
ಧರ್ಮೋ ರಕ್ಷತಿ ರಕ್ಷಿತಃ. ಜಾಗೃತ ಹಿಂದು ದೇಶದ ನಿಜವಾದ ಬಂಧು.
ಏನಂತೀರೀ?
ನಿಮ್ಮವನೇ ಉಮಾಸುತ