ಚಿತ್ರಸಾಲ್ ನವಗ್ರಹ ದೇವಸ್ಥಾನ

ಸಾಮಾನ್ಯವಾಗಿ ಪ್ರತಿಯೊಂದು ದೇವಾಲಯಗಳಲ್ಲಿಯೂ ಗರ್ಭಗುಡಿಯಿದ್ದು ಅಲ್ಲಿ ಪ್ರಮುಖ ದೇವರುಗಳು ಇರುತ್ತದೆ. ಆಸ್ತಿಕ ಮಹಾಶಯರು ದೇವರ ದರ್ಶನವನ್ನು ಪಡೆದು ಅಲ್ಲಿಂದ ಹೊರಗೆ ಬರುವಾಗ ಸಣ್ಣದಾದ ನವಗ್ರಹ ಗುಡಿಯಿದ್ದು ಅಲ್ಲಿ ನವಗ್ರಹಗಳ ವಿಗ್ರಹಗಳು ಇರುತ್ತದೆ. ಭಕ್ತಾದಿಗಳು ತಮ್ಮ ಶಕ್ತ್ಯಾನುಸಾರ ಒಂದು, ಮೂರು, ಹನ್ನೊಂದು ಪ್ರದಕ್ಷಿಣೆಯನ್ನು ಹಾಕಿ ಭಕ್ತಿಯನ್ನು ಸಲ್ಲಿಸುತ್ತಾರೆ. ಆದರೆ ಈಶಾನ್ಯ ರಾಜ್ಯಗಳಲ್ಲಿ ಅತಿದೊಡ್ಡ ರಾಜ್ಯಗಳಲ್ಲಿ ಒಂದಾದ ಅಸ್ಸಾಮಿನ ಗೌಹಾಟಿಯಲ್ಲಿ ನವಗ್ರಹಗಳದ್ದೇ ಒಂದು ದೇವಸ್ಥಾನವಿದ್ದು ಅದು ಎಲ್ಲಾ ನವಗ್ರಹ ದೇವಸ್ಥಾನದಂತೆ ಇರದೇ ಬಹಳ ವಿಶೇಷವಾಗಿದೆ. ಹಾಗಾದರೆ ಆ ದೇವಸ್ಥಾನದ ವೈಶಿಷ್ಟ್ಯವೇನು ಎಂಬುದನ್ನು ತಿಳಿಯೋಣ ಬನ್ನಿ.

ಅಸ್ಸಾಂ ಭಾರತದ ಪೂರ್ವಾಂಚಲದ ಅತ್ಯಂತ ದೊಡ್ಡದಾದ ಮತ್ತು ಅತ್ಯುತ್ತಮವಾದ ಹವಾಮಾನ, ಪ್ರಕೃತಿ ಸೌಂದರ್ಯಗಳಿಂದ ಕೂಡಿದ ರಾಜ್ಯವಾಗಿದ್ದು ಬ್ರಹ್ಮಪುತ್ರ ನದಿಯಿಂದ ಆವರಿಸಲ್ಪಟ್ಟಿದೆ. ಅಸ್ಸಾಂ ಚಹಾದ ಸುವಾಸನೆ ಅಂತರಾಷ್ಟ್ರೀಯ ಮನ್ನಣೆಯನ್ನೂ ಗಳಿಸಿದೆ. ಇದರ ಜೊತೆ ಸಾವಿರಾರು ವರ್ಷಗಳ ಹಳೆಯ ಸಂಸ್ಕೃತಿಗಳನ್ನು ಇಂದಿಗೂ ಅಲ್ಲಿನ ಜನರು ಉಳಿಸಿಕೊಂಡು ಹೋಗಿದ್ದಾರೆ. ಅದರ ಜೊತೆ ವಿಶ್ವದ ಕೆಲವು ಪುರಾತನ ದೇವಾಲಯಗಳು ದಂತಕಥೆಗಳು, ಇತಿಹಾಸ ಮತ್ತು ವಾಸ್ತುಶಿಲ್ಪಗಳಿಂದ ಸಮೃದ್ಧವಾಗಿದೆ.

chitra1ಇಂತಹ ಅಸ್ಸಾಮಿನ ಗುವಾಹಟಿ ನಗರದಲ್ಲಿರುವ ಚಿತ್ರಗ್ರಹ ಬೆಟ್ಟದ ತುದಿಯಲ್ಲಿ ನವಗ್ರಹ ದೇವಸ್ಥಾನವಿದೆ. ಆದರೆ ಈ ನವಗ್ರಹ ದೇವಸ್ಥಾನದಲ್ಲಿ ಉಳಿದ ದೇವಸ್ಥಾನಗಳಲ್ಲಿರುವಂತೆ ಪ್ರತೀ ನವಗ್ರಹದ ಮೂರ್ತಿಗಳ ಬದಲಾಗಿ, ಈ ದೇವಾಲಯದಲ್ಲಿ ಒಂಬತ್ತು ಶಿವಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದ್ದು ಅವುಗಳು ಒಂಬತ್ತು ಗ್ರಹಗಳನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದೂ ಶಿವಲಿಂಗವನ್ನೂ ಆಯಾಯಾ ಗ್ರಹದ ಅನುಗುಣವಾದ ಬಣ್ಣದ ಬಟ್ಟೆಯಿಂದ ಮುಚ್ಚಲ್ಪಟ್ಟಿದೆ. ವೃತ್ತಾಕಾರದಲ್ಲಿರುವ ಈ ಲಿಂಗಗಳ ಮಧ್ಯದಲ್ಲಿರುವ ಶಿವಲಿಂಗವು ಸೂರ್ಯನನ್ನು ಸಂಕೇತಿಸಿದರೆ ಅದರ ಸುತ್ತವೂ ಉಳಿದ ಎಂಟು ಗ್ರಹಗಳನ್ನು ಪ್ರತಿನಿಧಿಸುತ್ತದೆ. ಈ ನವಗ್ರಹ ದೇವಸ್ಥಾನವನ್ನು 18 ನೇ ಶತಮಾನದ ಉತ್ತರಾರ್ಧದಲ್ಲಿ ಅಹೋಮ್ ರಾಜ ರಾಜೇಶ್ವರ ಸಿಂಗ್ ನಿರ್ಮಿಸಿದ್ದು, 1923 ರಿಂದ 1945 ರ ಅವಧಿಯಲ್ಲಿ ನವೀಕರಿಸಲಾಗಿದೆ.

chitra2ಪ್ರಸ್ತುತ ಗುವಾಹಟಿಯಲ್ಲಿರುವ ನವಗ್ರಹಗಳ ದೇವಸ್ಥಾನವನ್ನು  ಅಂದಿನ ಕಾಲದಲ್ಲಿ ಸಂಭವಿಸಿದ ದೊಡ್ಡ ಭೂಕಂಪದಿಂದಾಗಿ ಈ ದೇವಾಲಯದ ಶಿಖರದ ಭಾಗ ನಾಶವಾದರೂ, ಇಟ್ಟಿಗೆಯಿಂದ ನಿರ್ಮಿಸಲಾಗಿದ್ದ ಗರ್ಭಗೃಹ ಮಾತ್ರ ಸುಸ್ಥಿತಿಯಲ್ಲಿದ್ದ ಕಾರಣ, ಆ ದೇವಸ್ಥಾನವನ್ನು ಸುಕ್ಕುಗಟ್ಟಿದ ಕಬ್ಬಿಣದ ಹಾಳೆಯಿಂದ ಪುನರ್ನಿರ್ಮಿಸಲಾಯಿತು.

chitra3

  • ಈ ನವಗ್ರಹದ ಒಂಬತ್ತು ಗ್ರಹಗಳಲ್ಲಿ ಮೊದಲನೆಯದಾಗಿ ಸೂರ್ಯನು ಮಹಾ ರಥದ ಮೇಲೇ ಆಸೀನರಾಗಿದ್ದು ಏಳು ಕುದುರೆಗಳನ್ನು ಹಿಡಿದಿರುವಂತೆ ಚಿತ್ರಿಸಲ್ಪಟ್ಟಿದೆ, ಉದ್ದವಾದ ಕೂದಲುಗಳನ್ನು ಹರಡಿಕೊಂಡು ಕೈಯಲ್ಲಿ ಕಮಲದ ಹೂವನ್ನು ಹಿಡಿದಿರುವುದಲ್ಲದೇ, ರಕ್ಷಾಕವಚವನ್ನು ಧರಿಸಿಕೊಂಡು ತನ್ನ ರಕ್ಷಣೆಗಾಗಿ ಎದೆಯ ಮುಂದೆ ಗುರಾಣಿಯನ್ನು ಹಿಡಿದಿರುವಂತಿದ್ದು ಆ ಗುರಾಣಿಯ ಸುತ್ತಲೂ ಪ್ರಭಾವಳಿಯ ಬೆಳಕು ಸ್ಪಷ್ಟವಾಗಿ ಕಾಣುವಂತಿದೆ.
  • ಎರಡನೆಯದಾಗಿ ಚಂದ್ರ ಬಿಳಿ ಬಣ್ಣದ ಬಟ್ಟೆಯಲ್ಲಿ ಕಂಗೊಳಿಸುತ್ತಿದ್ದು ಆವನ ಸುತ್ತಲೂ ಪ್ರಭಾವಳಿಯಯ ಜೊತೆಗೆ ಸಕಲ ರೀತಿಯ ಹೂವುಗಳ ಆಭರಣಗಳು ಮತ್ತು ಹಾರಗಳಿಂದ ಅಲಂಕರಿಸಲ್ಪಟ್ಟಿದೆ.
  • ಮೂರನೆಯದಾಗಿ, ಬೆಂಕಿಯಂತಹ ಕೆಂಪು ಬಣ್ಣದ ವಸ್ತ್ರವನ್ನು ಮಂಗಳ ಗ್ರಹಕ್ಕೆ ತೊಡಿಸಿದ್ದು, ಸಿಂಹಾಸನದ ಮೇಲೆ ಕುಳಿತು, ತನ್ನ ಮೂರು ತೋಳುಗಳಲ್ಲಿ ಗಧೆ, ಶೂಲ ಮತ್ತು ಶಕ್ತಿ ಆಯುಧಗಳನ್ನು ಹಿಡಿದಿರುವಂತಿದೆ.
  • ನಾಲ್ಕನೆಯದಾಗಿ ಬುದ್ಧನನ್ನು ಹಳದಿ ಬಣ್ಣದ ವಸ್ತ್ರದಲ್ಲಿ ಅಲಂಕರಿಸಿದ್ದು, ತನ್ನ ಮೂರು ಕೈಗಳಲ್ಲಿ ಖಡ್ಗ, ಖೇತಕ ಮತ್ತು ಗಧೆಯನ್ನು ಹಿಡಿದಿರುವ ವರದ ಭಂಗಿಯಲ್ಲಿ ಚಿತ್ರಿಸಲಾಗಿದೆ.
  • ಐದನೇ ಸ್ಥಾನದಲ್ಲಿ ಬೃಹಸ್ಪತಿಯನ್ನು ಚಿನ್ನದ ಹಳದಿ ಉಡುಪುಗಳಲ್ಲಿ ಅಲಂಕರಿಸಿ ಆತನ ಮೂರು ತೋಳುಗಳಲ್ಲಿ ಕಮಂಡಲ, ಅಕ್ಷಮಾಲಾ ಮತ್ತು ದಂಡವನ್ನು ಹಿಡಿದ ವರದ ಭಂಗಿಯಲ್ಲಿದೆ.
  • ಆರನೇ ಗ್ರಹವಾದ ಶುಕ್ರನನ್ನು ಬಿಳಿ ಉಡುಪುಗಳೊಂದಿಗೆ ಅಲಂಕರಿಸಿದ್ದು ಆತನ ನಾಲ್ಕು ತೋಳುಗಳಲ್ಲಿ ಬೃಹಸ್ಪತಿಯಂತೆಯೇ ಆಯುಧಗಳನ್ನು ಹೊಂದಿದ್ದಾನೆ.
  • ಏಳನೇ ಗ್ರಹವಾದ ಶನಿದೇವನನ್ನು ಕಪ್ಪು ಬಣ್ಣದ ಉಡುಪುನಲ್ಲಿ ಅಲಂಕರಿಸಿದ್ದು, ಉಳಿದೆಲ್ಲಾ ಗ್ರಹಗಳಿಗಿಂತ ಸಣ್ಣಗಿದ್ದು, ಒಂದು ಕಾಲು ಸ್ವಲ್ಪ ಕುಂಟುವಂತಿದ್ದು, ಆತನ ಎರಡು ಕೈಗಳಲ್ಲಿ ದಂಡ ಮತ್ತು ಅಕ್ಷಮಾಲಾ ಹಿಡಿದಿರುವ ಭಂಗಿಯಲ್ಲಿದೆ.
  • ಎಂಟನೆಯದಾದ ರಾಹುಗ್ರಹವನ್ನು ಸಿಂಹಾಸನ ಅಥವಾ ಎಂಟು ಕುದುರೆಗಳಿಂದ ಚಿತ್ರಿಸಿದ ಬೆಳ್ಳಿ ರಥದ ಮೇಲೆ ಕೂರಿಸಲಾಗಿದ್ದು ಅದರ ನಾಲ್ಕು ತೋಳುಗಳಲ್ಲಿ ಖಡ್ಗ, ಖೇತಕ ಮತ್ತು ಗಧೆಯನ್ನು ಹಿಡಿದಿದ್ದು ನಾಲ್ಕನೇ ಕೈಯಲ್ಲಿ ಪುಸ್ತವನ್ನು ಹಿಡಿದಿರುವ ವರದ ಭಂಗಿಯಲ್ಲಿದೆ.
  • ಒಂಬತ್ತನೇ ಗ್ರಹವಾದ ಕೇತುವನ್ನು ಗಾಢವಾದ ಕಪ್ಪು ಬಣ್ಣದ ವಸ್ತ್ರದಲ್ಲಿ ಅಲಂಕರಿಸಿದ್ದು, ಆತನ ಎರಡು ತೋಳುಗಳಲ್ಲಿ ಗದ ಮತ್ತು ಶೂಲವನ್ನು ಹಿಡಿದಿರುವಂತಿದೆ.

ದೇವಾಲಯದಿಂದ ಸ್ವಲ್ಪ ದೂರದಲ್ಲಿಯೇ ಸಿಲ್ಪುಖುರಿ ಎಂದು ಕರೆಯಲ್ಪಡುವ ಒಂದು ಕೊಳವಿದ್ದು ದೇವರಿಗೆ ಅಭಿಷೇಕ ಮಾಡಲು ಮತ್ತು ದೇವಾಲಯಕ್ಕೆ ಬರುವ ಭಕ್ತಾದಿಗಳ ನೀರಿನ ಅಗತ್ಯತೆಗಾಗಿ ಕಟ್ಟಲಾಗಿದೆ. ಸದಾಕಾಲವೂ ನೀರಿನಿಂದ ತುಂಬಿ ತುಳುಕುವ ಈ ಕೊಳ ಇದುವರೆವಿಗೂ ಬತ್ತಿಯೇ ಇಲ್ಲ ಎನ್ನುವುದು ಗಮನಾರ್ಹವಾಗಿದೆ.

ಈ ದೇವಾಲಯ ಗುವಹಾಟಿ ನಗರದ ಎತ್ತರದ ಗುಡ್ಡದ ಮೇಲೆ ಇರುವ ಕಾರಣ ಗುವಹಾಟಿ ನಗರದ ಯಾವುದೇ ಭಾಗದಿಂದ ನೋಡಿದರೂ ಕಾಣಬಹುದಾಗಿದೆ. ಅದೇ ರೀತೀ ಆ ಬೆಟ್ಟದ ಮೇಲಿಂದ ಇಡೀ ಗುವಹಾಟಿ ನಗರದ ವಿಹಂಗಮ ದೃಶ್ಯವನ್ನು ಸವಿಯಬಹುದಾಗಿದೆ.

chitra4ಪ್ರತಿದಿನವೂ ಈ ದೇವಾಲಯವು ಬೆಳಿಗ್ಗೆ 4:00 ಗಂಟೆಯಿಂದ ರಾತ್ರಿ 9:00 ಗಂಟೆಯ ವರೆಗೂ ಭಕ್ತಾದಿಗಳಿಗೆ ದರ್ಶನಕ್ಕೆ ತೆರೆದಿರುತ್ತದೆ. ಈ ಅವಧಿಯಲ್ಲಿ ನಾನಾವಿಧದ ಶಿವನ ಆರಾಧನೆಗಳು, ಅರ್ಚನೆ, ಅಭಿಷೇಕ ಮತ್ತು ಮಹಾಮಂಗಳಾರತಿ ನಡೆಯುತ್ತದೆ. ಶಿವ ಚತುರ್ದಶಿ ಮತ್ತು ಮಹಾ ಶಿವರಾತ್ರಿಯಂದು ಈ ದೇವಾಲಯದಲ್ಲಿ ನಡೆಯುವ ವಿಶೇಷವಾದ ಪೂಜೆಗಳು ವೀಕ್ಷಿಸಲು ಮತ್ತು ಲಿಂಗರೂಪಿಯಾದ ನವಗ್ರಹಗಳ ದಿವ್ಯ ಆಶೀರ್ವಾದ ಪಡೆಯಲು ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡಿ ಭಗವಂತನ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ.

chitra5ದೇಶದ ಯಾವುದೇ ಭಾಗದಿಂದ ರಸ್ತೆಯ ಮೂಲಕ ಅಸ್ಸಾಮಿನ ಗುವಹಾಟಿ ನಗರಕ್ಕೆ ತಲುಪಿ ಅಲ್ಲಿಂದ ಸ್ಥಳೀಯವಾಗಿ ದೊರಕುವ ಆಟೋ ಇಲ್ಲವೇ ಟ್ಯಾಕ್ಸಿ ಮುಖಾಂತರ ಈ ನವಗ್ರಹ ದೇವಸ್ಥಾನವನ್ನು ಸುಲಭವಾಗಿ ತಲುಪಬಹುದಾಗಿದೆ.

ಇನ್ನು ದೇವಾಯಲದ ಸುತ್ತಮುತ್ತಲೂ ಕೋತಿಗಳ ಹಿಂಡು ಇದ್ದು ಅದು ಭಕ್ತಾದಿಗಳ ಚೀಲಗಳಿಂದ ಪ್ರಸಾದ ಮತ್ತು ಹಣ್ಣುಗಳನ್ನು ತೆಗೆದುಕೊಳ್ಳುವ ಸಲುವಾಗಿ ಛಂಗನೇ ಮೈ ಮೇಲೆ ಎರಗಿ ಭಕ್ತಾದಿಗಳ ಮೈ ಕೈ ತರೆಚಿರುವ ಕಾರಣ ಭಕ್ತಾದಿಗಳು ಬಹಳ ಎಚ್ಚರಿಕೆಯಿಂದ ತಮ್ಮ ಕೈಚೀಲಗಳನ್ನು ನೋಡಿಕೊಳ್ಳಬೇಕಾಗಿದೆ.

ಇನ್ನು ರೈಲಿನ ಮೂಲಕವೂ ಗುಹವಾಟಿ ಯನ್ನು ತಲುಪಿ ಅಲ್ಲಿಂದ ಕೇವಲ 3.3 ಕಿಮೀ ದೂರವಿರುವ ಈ ದೇವಸ್ಥಾನಕ್ಕೆ ಖಾಸಗೀ ವಾಹನಗಳ ಮೂಲಕ ತಲುಪಬಹುದಾಗಿದೆ.

ಇನ್ನು ವಿಮಾನದ ಮೂಲಕವೂ ಗುವಾಹಟಿ ವಿಮಾನ ನಿಲ್ದಾಣಕ್ಕೆ ಬಂದಿಳಿದು ಅಲ್ಲಿಂದ ಸುಮಾರು 24 ಕಿಮೀ ದೂರ ಇರುವ ದೇವಸ್ಥಾನವನ್ನು ಟ್ಯಾಕ್ಸಿ ಇಲ್ಲವೇ ಖಾಸಗೀ ವಾಹನದ ಮೂಲಕ ತಲುಪಬಹುದಾಗಿದೆ.

ಅಸ್ಸಾಮಿನ ಹವಾಮಾನ ವರ್ಷವಿಡೀ ಆಹ್ಲಾದಕರವಾಗಿರುವ ಕಾರಣ ವರ್ಷದ ಯಾವುದೇ ಸಮಯದಲ್ಲಿ ತಮ್ಮ ತಮ್ಮ ಅನುಕೂಲಕ್ಕನುಗುಣವಾಗಿ ಈ ದೇವಾಲಯಕ್ಕೆ ಬರಬಹುದಾಗಿದೆ.

ಇಷ್ಟೆಲ್ಲಾ ವಿವರಗಳನ್ನು ತಿಳಿದ ಕೊಂಡ ಮೇಲೆ ಇನ್ನೇಕೆ ತಡಾ. ಸಮಯ ಮಾಡಿಕೊಂಡು ಗುಹವಾಟಿಯ ಚಿತ್ರಸಾಲ್ ಬೆಟ್ಟಕ್ಕೆ ಭೇಟಿ ನೀಡಿ ಲಿಂಗರೂಪಿ ನವಗ್ರಹಗಳ ದರ್ಶನ ಮಾಡಿ, ನಿಮ್ಮ ಅನುಭವವಗಳನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ತಾನೇ?

ಏನಂತೀರೀ?
ನಿಮ್ಮವನೇ ಉಮಾಸುತ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s