ನಮ್ಮವರಿಗೆ ವಾರಾಂತ್ಯದ ಹಿಂದೆಯೋ ಮುಂದೆಯೋ ಒಂದು ರಜಾ ಸಿಕ್ಕರೇ ಸಾಕು ಅದರ ಜೊತೆಗೆ ಮತ್ತೆರಡು ರಜಗಳನ್ನು ಹಾಕಿಕೊಂಡು ಊರು ಸುತ್ತಲು ಹೊರಟೇ ಬಿಡುತ್ತಾರೆ. ದುರದೃಷ್ಟವಷಾತ್ ಕಳೆದ ಒಂದೂವರೆ ವರ್ಷದಿಂದ ಕೊರೋನಾ ವಕ್ಕರಿಸಿಕೊಂಡು ಪ್ರಪಂಚವೇ ಲಾಕ್ ಡೌನ್ ಆಗಿರುವಾಗ ಎಲ್ಲರೂ ಮನೆಯಲ್ಲಿಯೇ ಕುಳಿತುಕೊಂಡು ಬೇಸರಗೊಂಡವರ ಮನವನ್ನು ಮುದಗೊಳಿಸುವ ಸಲುವಾಗಿ ಪಶ್ಚಿಮ ಘಟ್ಟದ ಭಾಗವಾದ ಕೊಡಗು ಜಿಲ್ಲೆಯ ಮಂದಲಪಟ್ಟಿ ಬೆಟ್ಟಗಳಲ್ಲಿ ಸ್ವರ್ಗವೇ ಧರೆಗೆ ಇಳಿದು ಬಂದಂತೆ ಪ್ರಕೃತಿಯೇ ತನ್ನ ಸೌಂದರ್ಯವನ್ನು ನೀಲಿಕುರಿಂಜಿ ಹೂವುಗಳನ್ನು ಅರಳಿಸಿಕೊಳ್ಳುವ ಮೂಲಕ ಕೇವಲ ಇಮ್ಮಡಿಯಲ್ಲಾ ನೂರ್ಮಡಿಯನ್ನಾಗಿಸಿಕೊಂಡು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಎಂದರೂ ತಪ್ಪಾಗಲಾರದು.
ಸಾಧಾರಣವಾಗಿ ಮಂದಲಪಟ್ಟಿ ಎಂದರೆ ಕನ್ನಡಿಗರಿಗೆ ಅರ್ಥವಾಗದೇ ಇರಬಹುದು ಅದೇ ಯೋಗರಾಜ ಭಟ್ಟರು, ಗೋಲ್ಡನ್ ಸ್ಟಾರ್ ಗಣೇಶ್, ದೂದ್ ಪೇಡಾ ದಿಗಂತ್ ಮತ್ತು ರಾಜೇಶ್ ಕೃಷ್ಣನ್ ಅಭಿನಯಿಸಿದ್ದ ಜನಪ್ರಿಯ ಸಿನಿಮಾ ಗಾಳಿಪಟದ ಮುಗಿಲು ಪೇಟೆ ಎಂದರೆ ಥಟ್ ಅಂತಾ ಎಲ್ಲರಿಗೂ ಅರ್ಥವಾಗುತ್ತದೆ. ಅದರಲ್ಲೂ ನದೀಂ ದೀಂ ತನಾ.. ಹಾಡು ಚಿತ್ರೀಕರಣದ ಸಮಯದಲ್ಲಿ ಹಚ್ಚ ಹಸುರಾಗಿ ಕಾಣಿಸುತ್ತಿದ್ದ ಆ ಬೆಟ್ಟ ಇಂದು ಸಂಪೂರ್ಣ ನೀಲಿಮಯವಾಗಿದೆ.
ಸ್ಟ್ರೋಬಿಲಾಂಥೆಸ್ ಕುಂತಿಯಾನ ಎಂಬ ವೈಜ್ಞಾನಿಕ ಹೆಸರುಳ್ಳ ಮತ್ತು ಸ್ಥಳೀಯವಾಗಿ ಕುರುಂಜಿ (ಹೂವು) ಮತ್ತು ಕಡು ನೇರಳೆ ಬಣ್ಣವಿರುವ ಕಾರಣ ನೀಲಿಕುರುಂಜಿ ಎಂದು ಕರೆಯಲ್ಪಡುವ 1,300 ರಿಂದ 2,400 ಮೀಟರ್ ಎತ್ತರದಲ್ಲಿ ಬೆಳೆಯುವ ಈ ಹೂವು ಸಾಧಾರಣವಾಗಿ 12 ವರ್ಷಗಳಿಗೊಮ್ಮೆ ಅರಳುತ್ತದೆ. ಮಡಿಕೇರಿ ಉಪ ಅರಣ್ಯ ಇಲಾಖೆಯ ಸಂರಕ್ಷಣಾಧಿಕಾರಿ (ಡಿಸಿಎಫ್) ಎ ಟಿ ಪೂವಯ್ಯ ಅವರು ಹೇಳುವಂತೆ ಈ ಮುಂಚೆ ಈ ಹೂವುಗಳು ಈ ಬೆಟ್ಟಗಳ ಬುಡದಲ್ಲಿ ಕೆಲವು ಭಾಗಗಳಲ್ಲಿ ಮಾತ್ರ ಅರಳುತ್ತಿದ್ದು ಈ ಬಾರಿ ಮಾತ್ರಾ ಮೊತ್ತ ಮೊದಲ ಬಾರಿಗೆ ಮಂದಲ ಪಟ್ಟಿ ಮತ್ತು ಕೋಟೆ ಬೆಟ್ಟದ ಎರಡೂ ಬೆಟ್ಟಗಳ ಮೇಲೆ ಸಂಪೂರ್ಣವಾಗಿ ಹರಡಿರುವುದು ಸ್ಥಳೀಯರಿಗೆ ಮತ್ತು ದೂರ ದೂರದ ಊರಿನಿಂದ ಬರುವ ಪ್ರವಾಸಿಗರಿಗೆ ಮುದ ನೀಡುತ್ತಿದೆ.
ಕರ್ನಾಟಕದಲ್ಲಿ ಸುಮಾರು 45 ಜಾತಿಯ ನೀಲಕುರಿಂಜಿಯ ಪ್ರಬೇಧಗಳಿದ್ದು ವಿವಿಧ ಪ್ರಬೇಧಗಳು ವಿವಿಧ ಎತ್ತರಗಳಲ್ಲಿ ಬೆಳೆಯುತ್ತದೆ ಮತ್ತು ಅವುಗಳು 6, 9, 11 ಅಥವಾ 12 ವರ್ಷಗಳ ಅಂತರದಲ್ಲಿ ಅರಳುತ್ತವೆ. ಈ ಮುನ್ನಾ 2006 ರಲ್ಲಿ ಮುನ್ನಾರ್‌ನಲ್ಲಿ ಕಾಣಿಸಿಕೊಂಡಿದ್ದ ಹೂವು ನಂತರ ಮತ್ತೊಮ್ಮೆ 2018ರಲ್ಲಿಯೂ ಅಲ್ಲಿ ನೀಲಿಕುರಿಂಜಿ ಹೂವುಗಳು ಕೊನೆಯದಾಗಿ ಅರಳಿದವು. ಅದೇ ರೀತಿ 2019 ರಲ್ಲಿ, ಚಿಕ್ಕಮಗಳೂರಿನ ಬಾಬಾಬುಡನಗಿರಿ ಬೆಟ್ಟಗಳಲ್ಲಿ ಇದೇ ನೀಲಿ ಕುರಿಂಜಿ ಹೂವುಗಳು ಅರಳಿದವಾದವೂ ಈ ಪರಿಯಾಗಿ ಬೆಟ್ಟದ ಪೂರ್ತಿ ಹರಡಿಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ.
ಪ್ರಕೃತಿ ನಮಗೆ ಸಾಕಷ್ಟು ವಿಸ್ಮಯಗಳನ್ನು ನೀಡುತ್ತಲೇ ಇರುತ್ತದೆ ಅಂತಹ ವಿಸ್ಮಯಗಳಲ್ಲಿ ಒಂದಾದ ಮುದ್ದು ಮುದ್ದಾಗಿ ಅರಳಿರುವ ಈ ನೀಲಿಕುರಿಂಜಿ ಹೂವುಗಳು ಸುಮಾರು 2 ತಿಂಗಳ ಕಾಲ ಗಿಡದಲ್ಲಿ ತನ್ನ ಸೌಂದರ್ಯವನ್ನು ಉಳಿಸಿಕೊಳ್ಳುವುದರಿಂದ ಇನ್ನೂ ಒಂದೂವರೆ ತಿಂಗಳಗಳ ಕಾಲ ಪ್ರವಾಸಿಗರು ದಂಡೇ ಇಲ್ಲಿಗೆ ಸಾಗರೋಪಾದಿಯಲ್ಲಿ ಹರಿಯಲಿದೆ ಎಂದರೂ ತಪ್ಪಾಗದು.
ಪದೇ ಪದೇ ಕೋವಿಡ್-19 ಲಾಕ್‌ಡೌನ್‌ಗಳಿಂದ ಮನೆಯನ್ನೇ ಬಿಟ್ಟು ಹೊರಗೆ ಹೋಗದಿದ್ದವರಿಗೆ ಈ ಸಿಹಿ ಸುದ್ದಿ ಆಗಸ್ಟ್ 20 ರ ನಂತರ ಮಾಧ್ಯಮಗಳ ಮೂಲಕ ತಿಳಿಯಲಾರಂಭಿಸಿದ ನಂತರ ತಾಮುಂದು ನಾಮುಂದು ಎಂದು ಹಿಂಡು ಹಿಂಡಿನಲ್ಲಿ ಬಂಧು ಮಿತ್ರರ ಆದಿಯೊಂದಿಗೆ ಸಕುಟುಂಬ ಸಮೇತರಾಗಿ ಮಂದಲ ಪಟ್ಟಿಗೆ ಭೇಟಿ ನೀಡುತ್ತಾ ಪ್ರಕೃತಿಯ ಸೌಂದರ್ಯವನ್ನು ಆಹ್ಲಾದಿಸುತ್ತಿದ್ದಾರೆ.
ಪ್ರವಾಸಿಗರಿಗೆ ಕೊಡಗು ಜಿಲ್ಲೆಯ ಈ ಅಪರೂಪದ ವಿದ್ಯಮಾನವನ್ನು ತೋರಿಸುವ ಸಲುವಾಗಿಯೇ ಬೆಂಗಳೂರು ಮೂಲದ ತುಂಬಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಹೆಲಿ-ಟ್ಯಾಕ್ಸಿ ಸಂಸ್ಥೆಯು ಮಂದಲ ಪಟ್ಟಿಯ ಈ ತಾಣದ ವೈಮಾನಿಕ ದೃಶ್ಯವನ್ನು ಕಣ್ತುಂಬಿಸಿಕೊಳ್ಳುವ ಅವಕಾಶವನ್ನು ರೂ 2,30,000 ವೆಚ್ಚದಲ್ಲಿ ಮಾಡಿಕೊಟ್ಟಿದ್ದು ಬೆಂಗಳೂರಿನ ಯಲಹಂಕ ವಾಯುನೆಲೆಯಿಂದ ಕೊಡಗು ಜಿಲ್ಲೆಗೆ ಒಂದು ದಿನದ ಪ್ರವಾಸವನ್ನು ಪ್ರವಾಸಿಗರ ಅನುಕೂಲಕ್ಕಾಗಿ ಏರ್ಪಡಿಸಿದ್ದಾರೆ.
ಹೇಳಿ ಕೇಳಿ ಇಡೀ ಕೊಡಗು ಜಿಲ್ಲೆ ಪ್ರಕೃತಿ ಸಹಜವಾಗಿಯೇ ಸುಂದರವಾಗಿದ್ದು, ಇನ್ನೂ ಈ ಹೂವುಗಳು ಅರಳಿದ ಮೇಲಂತೂ, ಮಂದಲ ಪಟ್ಟಿ ಮತ್ತಷ್ಟೂ ಸುಂದರವಾಗಿ ಕಾಣುತ್ತಿದೆ. ಇಷ್ಟೆಲ್ಲಾ ತಿಳಿದ ಮೇಲೆ ಇನ್ನೇಕೆ ತಡಾ, ಆ ಅಸಾಮಾನ್ಯ ದೃಶ್ಯವನ್ನು ಕಣ್ತುಂಬಿಸಿಕೊಳ್ಳುವ ಮತ್ತು ಆ ಪ್ರೀತಿಯ ಹೂವುಗಳನ್ನು ಚುಂಬಿಸುವ ಮತ್ತು ಆ ಸೌಂದರ್ಯಕ್ಕೆ ಸಾಕ್ಷಿಯಾಗಲು ಈ ವಾರಾಂತ್ಯದಲ್ಲಿ ಮಂದಲಪಟ್ಟಿಗೆ ಭೇಟಿ ನೀಡಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ತಾನೇ?
ಏನಂತೀರೀ?
ನಿಮ್ಮವನೇ ಉಮಾಸುತ