ಕಳೆದ ಭಾನುವಾರ ಸೆಪ್ಟಂಬರ್ -5 ರಂದು ಎಲ್ಲರೂ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟು ಹಬ್ಬವನ್ನು ಶಿಕ್ಷಕರ ದಿನಾಚರಣೆ ಎಂದು ಸಂಭ್ರದಿಂದ ಆಚರಿಸುತ್ತಿದ್ದರೆ, ದೂರದ ಕೇರಳದ ತಿರುವನಂತಪುರದಲ್ಲಿರುವ ಬಾಹ್ಯಾಕಾಶ ಸಂಶೋಧನಾ ಇಲಾಖೆ (IRRO)ದ ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್ನಲ್ಲಿ (VSSC) ಮಾತ್ರಾ ಅದೊಂದು ಘನಘೋರ ಘಟನೆಯೊಂದು ನಡೆಯುವ ಮೂಲಕ ವಿದ್ಯಾವಂತರ ನಾಡು ಎಂದು ಕರೆಸಿ ಕೊಳ್ಳುವ ಕೇರಳದ ಮರ್ಯಾದೆಯನ್ನು ಮೂರುಕಾಸಿಗೆ ಹಾರಾಜು ಹಾಕಿರುವುದು ನಿಜಕ್ಕೂ ಖಂಡನೀಯವಾಗಿದೆ.
ಭಾನುವಾರದ ಬೆಳಿಗ್ಗೆ ಸುಮಾರು 11 ಗಂಟೆಯ ಹೊತ್ತಿಗೆ ತಿರುವನಂತಪುರಂನ ತುಂಬಾದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗೆ ಸುಮಾರು 190 ಟನ್‌ಗಳಷ್ಟು ತೂಗುವ ಉಪಕರಣಗಳನ್ನು ಟ್ರಕ್ಕುಗಳಲ್ಲಿ ತಂದು ಅವನ್ನು ಇಸ್ರೋ ಆವರಣದಲ್ಲಿ ಇಳಿಸಲು ಪ್ರಯತ್ನಿಸುತ್ತಿರುವಾಗ, ಸ್ಥಳಿಯ ಮ್ಯಾನುಯಲ್ ಲೇಬರ್ ಯೂನಿಯನ್ ಅಲ್ಲಿಗೆ ತೆರಳಿ, ಬೃಹತ್ ಸಲಕರಣೆ ಸಾಗಿಸುವ ಟ್ರೇಲರನ್ನು ನಿಲ್ಲಿಸಿದ್ದಲ್ಲದೇ, ಟ್ರೇಲರ್‌ನಿಂದ ಉಪಕರಣಗಳನ್ನು ಇಳಿಸಲು 10 ಲಕ್ಷಗಳ ಕೂಲಿ ಕೊಡ ಬೇಕು ಎಂದು ದಿಢೀರ್ ಮುಷ್ಕರ ನಡೆಸಿದ್ದಾರೆ. ವಾಸ್ತವವೆಂದರೆ, ಖಂಡಿತವಾಗಿಯೂ ಅಷ್ಟು ಭಾರವಾದ ಉಪಕರಣಗಳನ್ನು ಕೈಗಳ ಸಹಾಯದಿಂದ ಇಳಿಸಲು ಆಸಾದ್ಯವಾದ ಕಾರಣ ದೊಡ್ಡ ದೊಡ್ಡ ಹೈಡ್ರಾಲಿಕ್ ಕ್ರೇನ್ಗಳನ್ನು ಬಳಸಿ ಇಳಿಸುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದರೂ ಅಲ್ಲಿನ ಕೂಲಿಗಳು, ತಮ್ಮಿಂದ ಕೆಲಸ ಮಾಡಿಸಿಕೊಳ್ಳದಿದ್ದರೂ ಪರವಾಗಿಲ್ಲ. ಆದರೆ ಇದು ತಮ್ಮ ಕಾರ್ಮಿಕ ಸಂಘಟನೆಯ ವ್ಯಾಪ್ತಿಯ ಸಹರದ್ದಿನಲ್ಲಿರುವ ಕಾರಣ ನಮಗೆ ನೋಕ್ಕು ಕೂಲಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಇತ್ತೀಚಿನ ದಿನಗಳ ವರೆಗೂ ಕೇರಳದಲ್ಲಿ ಯಾರೇ ಆಗಲಿ ತಮ್ಮ ಮನೆಗಳಿಗೆ ಬೇಕಾದ ಉಪಕರಣಗಳನ್ನು ತಾವೇ ಟ್ರಕ್ ಅಥವಾ ಇತರೇ ಯಾವುದೇ ವಾಹನಗಳ ಮುಖಾಂತರ ಸ್ವಯಂ ತಂದುಕೊಂಡರೂ ಅದನ್ನು ನೇರವಾಗಿ ತಮ್ಮ ಮನೆಯೊಳಗೆ ತರಲು ಸಾಧ್ಯವಿಲ್ಲ. ಅವರು ಮೊದಲು ಸ್ಥಳೀಯ ಕೂಲಿ ಕಾರ್ಮಿಕರಿಗೆ ಅಥವಾ ಅವರ ಸಂಘಟನೆಗೆ ಹಣ ಪಾವತಿಸಿದ ನಂತರವೇ ತಮ್ಮ ವಸ್ತುಗಳನ್ನು ಇಳಿಸಿಕೊಳ್ಳಬೇಕು. ಹಾಗೆ ಅವರಿಗೆ ಹಣ ಕೊಡದೇ ತಮ್ಮ ಪಾಡಿಗೆ ತಾವು ವಸ್ತುಗಳನ್ನು ಇಳಿಸುತ್ತಿರುವುದನ್ನೂ ನೋಡುತ್ತಲೇ ನಿಂತು ಕೊಳ್ಳುವ ಅಲ್ಲಿನ ಕೂಲೀ ಕಾರ್ಮಿಕರು ನಂತರ ಅಲ್ಲಿಯವರೆಗೂ ಕೆಲಸ ಮಾಡದೇ ಸುಮ್ಮನೇ ನೋಡಿಕೊಂಡು ನಿಂತಿದ್ದ ಕಾರಣಕ್ಕೆ ಒತ್ತಾಯಿಸುವ ಕೂಲಿಯೇ ನೂಕು ಕೂಲಿ. ಈ ರೀತಿಯಲ್ಲಿ ನೋಕು ಕೂಲಿ ಕೊಡಬೇಕು ಎಂದು ಒತ್ತಾಯಿಸುವುದಲ್ಲದೇ, ಕೊಡದೇ ಹೋದಲ್ಲಿ ಕೆಲವೇ ಕೆಲವು ನಿಮಿಷಗಳಲ್ಲಿ ಅಲ್ಲಿ ತಮ್ಮ ನಾಯಕರೊಂದಿಗೆ ಮುಷ್ಕರವನ್ನು ನಡೆಸುವುದಲ್ಲದೆ ಅದೆಷ್ಟೋ ಬಾರಿ ಹೊಡೆದಾಟ ಬಡಿದಾಟಗಳನ್ನು ಮಾಡಿದ ಉದಾಹರಣೆಯೂ ಇದೆ.
ಇಂತಹ ಅನಿಷ್ಟ ಪದ್ದತಿ ಕೇವಲ ಕಮ್ಯೂನಿಷ್ಟರ ಕಪಿಮುಷ್ಠಿಯಲ್ಲಿರುವ ಕೇರಳದ ಕಾರ್ಮಿಕ ಸಂಘಟನೆಗಳಲ್ಲಿದ್ದು ಅದರ ವಿರುದ್ಧ ಹಲವರು ಬಹಳ ವರ್ಷಗಳಿಂದ ನ್ಯಾಯಾಲಯದಲ್ಲಿ ಸಂಘಟಿತರಾಗಿ ಹೋರಾಡಿದ ಫಲವಾಗಿ ಇತ್ತೀಚೆಗಷ್ಟೇ, ಕೇರಳ ಹೈಕೋರ್ಟ್ ನೊಕು ಕೂಲಿ ಪದ್ಧತಿಯನ್ನು ತೊಡೆದುಹಾಕಲು ರಾಜ್ಯಕ್ಕೆ ನಿರ್ದೇಶಿಸಿತ್ತು. ಈ ರೀತಿಯ ಆದೇಶ ಬಂದ ನಂತರವೂ ಅಲ್ಲಿನ ಕಾರ್ಮಿಕ ಸಂಘನೆಗಳು ಈ ರೀತಿಯ ದಾಂದಲೆ ನಡೆಸಿರುವುದು ನಿಜಕ್ಕೂ ಅಮಾನುಷವಾಗಿದೆ.
ಈ ಘಟನೆಯ ಕುರಿತಾಗಿ ಪ್ರತಿಭಟನೆಕಾರರನ್ನು ವಿಚಾರಿಸಿದರೆ, ಇಸ್ರೋ ಸ್ಥಾಪಿಸುವ ಸಲುವಾಗಿ ಸ್ಥಳೀಯ ನಿವಾಸಿಗಳ ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗಲಿಂದಲೂ ಇಲ್ಲಿಗೆ ಸರಕುಗಳನ್ನು ಸಾಗಿಸುವಾಗಲೆಲ್ಲಾ ಈ ರೀತಿಯಾಗಿ ನೋಕು ಕೂಲಿಯನ್ನು ಪಾವತಿಸುವ ಪದ್ಧತಿ ಇತ್ತು ಹಾಗಾಗಿ ಈಗಲೂ ಸಹಾ ಅದನ್ನೇ ಮುಂದುವರೆಸಿ ಕೊಂಡು ಹೋಗಬೇಕೆನ್ನುವುದು ನಮ್ಮ ಆಗ್ರಹ ಎನ್ನುತ್ತಾರೆ. ಈ ನೋಕು ಕೂಲಿಯನ್ನು ಇತ್ತೀಚೆಗಷ್ಟೇ ಕೇರಳದ ಹೈಕೋರ್ಟ್ ನಿಷೇಧಿಸಿರುವ ಬಗ್ಗೆ ವಿಚಾರಿಸಿದಾಗ ಜಾಣ ಮೌನಕ್ಕೆ ಜಾರಿಕೊಂಡಿದ್ದು ವಿಪರ್ಯಾಸವೇ ಸರಿ. ಇಸ್ರೋ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ದೂರು ನೀಡಿದ ನಂತರ ಕೂಲಿ ಕಾರ್ಮಿಕ ಸಂಘಟನೆಯ ನಾಯಕರು, ಸರ್ಕಾರ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿಕೆಯ ನಂತರ ಈ ಪ್ರತಿಭಟನೆಕಾರರನ್ನು ಚದುರಿಸಿ ಕ್ರೇನುಗಳ ಮುಖಾಂತರ ಉಪಕರಣಗಳನ್ನು ಇಳಿಸಲು ಅನುಮಾಡಿ ಕೊಡಲಾಗಿದೆ.
ಈ ರೀತಿಯ ನೋಕು ಕೂಲಿಯ ಅಮಾನುಷ ಪದ್ದತಿ ಇತ್ತೀಚಿನದ್ದಾಗಿರದೇ ಹಲವಾರು ದಶಕಗಳಿಂದಲೂ ಕೇರಳದಲ್ಲಿ ರೂಢಿಯಲ್ಲಿತ್ತು ಎಂಬುದಕ್ಕೆ 80 ರ ದಶಕದಲ್ಲಿ ಬಿಇಎಲ್ ಉದ್ಯೋಗಿಗಳೊಂದಿಗೆ ಇದೇ ರೀತಿಯ ಘಟನೆ ಸಂಭವಿಸಿದ ಉದಾಹರಣೆಗೆ ನಮ್ಮ ತಂದೆಯವರೇ ಪ್ರತ್ಯಕ್ಷ ಸಾಕ್ಷಿಗಳಾಗಿದ್ದರು.
ಎಲ್ಲರಿಗೂ ಈಗಾಗಲೇ ತಿಳಿದಿರುವಂತೆ ಬಿಇಎಲ್ ಸಂಸ್ಥೆ ವಿದ್ಯುನ್ಮಾನ ಮತ ಯಂತ್ರ (EVM machine)ಗಳ ತಯಾರಿಕೆಯಲ್ಲಿ ಅಗ್ರಗಣ್ಯರು. ಸಾರ್ವತ್ರಿಕ ಚುನಾವಣೆಗಳಲ್ಲಿ ಈ ಮತ ಯಂತ್ರಗಳನ್ನು ಬಳಸುವ ಮೊದಲು ಅದನ್ನು ವಿವಿಧ ಸ್ಥಳಗಳಲ್ಲಿ, ವಿವಿಧ ರೀತಿಯಲ್ಲಿ ಪರೀಕ್ಷಿಸುವ ಸಲುವಾಗಿ ಸ್ಥಳೀಯ ಚುನಾವಣೆಯಲ್ಲಿ ಅದರ ಕಾರ್ಯಕ್ಷಮತೆಗಳನ್ನು ಪರೀಕ್ಷಿಸುವ ಸಲುವಾಗಿ ಕೇರಳದ ನಗರವೊಂದರಲ್ಲಿ ನಡೆಯುತ್ತಿದ್ದ ಸ್ಥಳೀಯ ಚುನಾವಣೆಗೆ ಮತಯಂತ್ರಗಳನ್ನು ತೆಗೆದುಕೊಂಡು ಹೋಗಿದ್ದರು.
ನಿಗಧಿತ ರೈಲ್ವೇ ನಿಲ್ದಾಣದಲ್ಲಿ ರೈಲಿನಿಂದ ಇಳಿದಾಗ ಅಲ್ಲಿಗೆ ಆಗಮಿಸಿದಾಗ ಸ್ಥಳೀಯ ಕೂಲಿಗಳು ಇವಿಎಂ ಮತ್ತು ಅವರ ಸಾಮಾನುಗಳನ್ನು ಹೊತ್ತುಕೊಳ್ಳಲೇ? ಎಂದು ಕೇಳುತ್ತಾರೆ. ರೈಲ್ವೇ ನಿಲ್ದಾಣದಿಂದ ಬಹಳ ಸಮೀಪವೇ ಅವರು ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದ ಹೋಟೆಲ್ ಇದ್ದ ಕಾರಣ, ಮತ್ತು ಕೂಲಿಗಳು ಕೇಳಿದ ಶುಲ್ಕಗಳು ತುಂಬಾ ದುಬಾರಿಯಾಗಿದ್ದ ಕಾರಣ ಎಲ್ಲರೂ ತಮ್ಮ ತಮ್ಮ ಚೀಲಗಳೊಂದಿಗೆ ಮತಯಂತ್ರಗಳನ್ನೂ ಎತ್ತಿಕೊಂಡು ಹೋಟೆಲ್ ತಲುಪುತ್ತಾರೆ.
ಹೀಗೆ ನಮ್ಮ ತಂದೆಯವರು ಮತ್ತವರ ಸಹೋದ್ಯೋಗಿಗಳು ಮತ ಯಂತ್ರವನ್ನು ಖುದ್ದಾಗಿಯೇ ಹೊತ್ತುಕೊಂಡು ಹೋಗುತ್ತಿದ್ದಾಗ ಅವರನ್ನು ಆ ಕೂಲಿಗಳು ಹಿಂಬಾಲಿಸಿ, ಅವರೆಲ್ಲರೂ ಹೋಟೆಲ್ ತಲುಪಿದ ನಂತರ ಕೂಲಿಗಾಗಿ ಬೇಡಿಕೆ ಇಡುತ್ತಾರೆ. ಈ ರೀತಿಯ ಘಟನೆಯಿಂದಾಗಿ ವಿಚಲಿತರಾದ ನಮ್ಮ ತಂದೆಯವರ ಸಹೋದ್ಯೋಗಿಗಳು ಅವರು ಕೇಳಿದ ಹಣವನ್ನು ಪಾವತಿಸಲು ನಿರಾಕರಿಸಿ ತಮ್ಮ ಪಾಡಿಗೆ ತಮ್ಮ ಕೋಣೆಗಳಿಗೆ ಹೋದ ಸ್ವಲ್ಪ ಹೊತ್ತಿನಲ್ಲಿಯೇ ಹೋಟೆಲ್ ಎದುರಿಗೆ ಘೋಷಣೆಗಳು ಮತ್ತು ಪ್ರತಿಭಟನೆಯ ಸದ್ದು ಕೇಳಿಸುತ್ತದೆ. ಕೆಲ ಸಮಯದಲ್ಲಿಯೇ ಹೋಟೆಲ್ಲಿನ ವ್ಯವಸ್ಥಾಪರು ಇವರ ಕೊಠಡಿಗೆ ಬಂದು ದಯವಿಟ್ಟು ಅವರ ಕೂಲಿಯನ್ನು ಕೊಟ್ಟು ಕಳಿಸಿ ಎಂದು ಮನವಿ ಮಾಡಿಕೊಳ್ಳುತ್ತಾರೆ.
ಈ ವಿಷಯ ಇಷ್ಟು ಗಂಭೀರಕ್ಕೆ ತಲುಪುತ್ತದೆ ಎಂದು ಅರಿಯದ ಬಿಇಎಲ್ ಉದ್ಯೋಗಿಗಳು ಹೋಟೆಲ್ಲಿನ ಮುಂಭಾಗಕ್ಕೆ ಬಂದು ನೋಡಿದರೆ, ಕೇವಲ 10-15 ನಿಮಿಷಗಳಲ್ಲಿ ಸ್ಥಳೀಯ ನೂರಾರು ಕೂಲಿಗಳು ತಮ್ಮ ಕಮ್ಯುನಿಸ್ಟ್ ಯೂನಿಯನ್ ನಾಯಕರುಗಳ ಜೊತೆ ಹೋಟೆಲ್ ಮುಂದೆ ಜಮಾಯಿಸಿ ಧರಣಿ ನಡೆಸುತ್ತಿದ್ದದ್ದನ್ನು ಕಂಡು ಬೆಚ್ಚಿ ಬಿದ್ದಿದ್ದರಂತೆ. ಅಲ್ಲಿಯೇ ನಿಂತಿದ್ದ ಪೋಲೀಸರ ಮುಂದೇಯೇ ಈ ಘಟನೆ ನಡೆಯುತಿದ್ದರೂ, ಸುಮ್ಮನೆ ಇದ್ದದ್ದೂ ಅವರಿಗೆ ಅಚ್ಚರಿ ತರಿಸಿತ್ತಂತೆ. ಕಡೆಗೆ ಎಲ್ಲರ ಒತ್ತಾಯಕ್ಕೆ ಮಣಿದು ಕೂಲಿಗಳೊಂದಿಗೆ ಮಾತುಕತೆ ನಡೆಸಿ ತಮ್ಮ ಸ್ವಂತ ಖರ್ಚಿನ ಹಣವನ್ನು ಕೊಟ್ಟು ಸಾಗಹಾಕಿ ನಿಟ್ಟುಸಿರು ಬಿಟ್ಟಿದ್ದ ಸಂಗತಿಯನ್ನು ನಮ್ಮ ತಂದೆಯವರು ಅದೆಷ್ಟೋ ಬಾರಿ ಹೇಳಿದ್ದಾಗ ನಕ್ಕು ಸುಮ್ಮನಾಗಿದ್ದ ನನಗೆ ಮೊನ್ನೆಯ ಪರಿಸ್ಥಿತಿ ನಿಜಕ್ಕೂ ಆಘಾತಕಾರಿ ಎನಿಸಿತು.
ಇಡೀ ವಿಶ್ವದಲ್ಲಿಯೇ ಕಮ್ಯೂನಿಷ್ಟ್ ತತ್ವ ಅಳಿದು ನಶಿಸಿ ಹೋಗಿರುವ ಕಾಲದಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಸ್ವಾವಲಂಭಿಗಳಾಗಿ ಸ್ವಾಭಿಮಾನಿಗಳಾಗಿ ದುಡಿದು ತಿನ್ನಿ ಎನ್ನುವ ಇಂದಿನ ಪ್ರಜಾಪ್ರಭುತ್ವದ ಯುಗದಲ್ಲಿ ಈ ರೀತಿಯಲ್ಲಿ ಮಾಡದ ಕೆಲಸಕ್ಕೆ ಕಂಡವರನ್ನು ಬಡಿದು ಮುಕ್ಕುವ ಪರಿ ಎಷ್ಟು ಸರಿ? ಮಾತಿಗೆ ಮುಂಚೆ ನ್ಯಾಯ, ನೀತಿ ಎಂಬು ಬೊಬ್ಬಿರುವ ನ್ಯಾಯಾಂಗದ ಆದೇಶಕ್ಕೆ ಕಮ್ಮಿ ನಿಷ್ಠೆಯನ್ನು ತೋರಿಸುತ್ತಿರುವುದು ತಪ್ಪಲ್ಲವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಹೀಗೂ ಉಂಟೆ ?
LikeLiked by 1 person